ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಿ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆದು ಮತ್ತೆ ಮಂಡಿಸಿದೆ. ಮತಧರ್ಮನಿರಪೇಕ್ಷ ಸಂವಿಧಾನವನ್ನು ಒಪ್ಪಿರುವ ನಾವು ಗೋಹತ್ಯೆಯಂಥ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯವನ್ನು ವೈಚಾರಿಕ ನಿಕಷಕ್ಕೆ ಒಡ್ಡಬೇಕು. ಈ ನಿಟ್ಟಿನಲ್ಲಿ ಹಿಂದೂರಾಷ್ಟ್ರ ಪ್ರತಿಪಾದಕರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರ ಗೋವಿನ ಕುರಿತ ವಿಚಾರಗಳು ಗಮನಾರ್ಹ (`ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’ ಮಹಾರಾಷ್ಟ್ರ ಶಾರದಾ, ಏಪ್ರಿಲ್ ೧೯೩೫):
“…ಹಸು ಎತ್ತುಗಳನ್ನು ಪೂಜಿಸುವುದು ಹಿಂದೂ ಧರ್ಮಕ್ಕೇ ವಿಶಿಷ್ಟವಾದ ಸಂಗತಿಯಲ್ಲ. ಪ್ರಪಂಚದ ವಿವಿಧ ಕಡೆ ಜೀವಸೃಷ್ಟಿಗೆ ಕಾರಣವಾದ ಪುರುಷ ಮತ್ತು ಸ್ತ್ರೀ ಅವಯವಗಳ ಪ್ರತೀಕಗಳಾಗಿ ವೃಷಭ ಮತ್ತು ಗೋವಿನ ಪೂಜೆ ನಡೆಯುತ್ತಿತ್ತು.
“…ನಾನು ಕಂಡ ಹಲವು ಪ್ರಾಮಾಣಿಕ, ಶ್ರೇಷ್ಠ, ಸಭ್ಯ ಗೋಭಕ್ತರು ಗೋಮಾತೆಯ ಗಂಜಲ ಮತ್ತು ಸಗಣಿಗಳಿಗೆ ಬ್ರಹ್ಮವಾದದ ಆಧಾರ ನೀಡಿ ಪಂಚಗವ್ಯ ಸೇವಿಸುತ್ತಾರೆ. ಗಂಜಲವನ್ನು ದೇವಾಲಯದಲ್ಲಿ ಸಿಂಪಡಿಸುತ್ತಾರೆ. ಆದರೆ ಅವರಿಗಿಂತಲೂ ಪ್ರಜ್ಞಾವಂತರಾದ ಡಾ ಅಂಬೇಡ್ಕರರಂಥ ಶುದ್ಧ ಮತ್ತು ಪೂರ್ವಾಸ್ಪೃಶ್ಯರ ಕೈಯಿಂದ ನಿರ್ಮಲ ಗಂಗೋದಕ ಕುಡಿಯುವುದಿಲ್ಲ! ಅದು ಮೈಗೆ ಸಿಂಪಡಿಸಿದರೂ ಮೈಲಿಗೆಯಾಯಿತೆಂದು ಸ್ನಾನ ಮಾಡುತ್ತಾರೆ.
“ಹಸು ದೇವತೆ ಎಂದೂ ಹಾಗೆಯೇ ವರಾಹಾವತಾರಿಯಾದ ದೇವರೂ ಹಂದಿ ಎಂದು ಪುರಾಣ ಹೇಳುತ್ತದೆ. ಹೀಗಿರುವಾಗ ಗೋರಕ್ಷಣೆಯೇ ಏಕೆ ಬೇಕು? ಹಂದಿ ರಕ್ಷಣೆ ಸಂಘವನ್ನು ಸ್ಥಾಪಿಸಿ ಹಂದಿಪೂಜೆಯನ್ನೇಕೆ ಬಳಕೆಗೆ ತರಬಾರದು? ಮನುಷ್ಯನು ಎಲ್ಲ ರೀತಿಯಿಂದ ತನಗಿಂತ ಹೀನಗುಣವಿರುವ ಪಶುವನ್ನು ದೇವರೆಂದು ಒಪ್ಪುವುದರಿಂದ ಮನುಷ್ಯನನ್ನೇ ಪಶುವಿಗಿಂತಲೂ ಕೀಳೆಂದು ಒಪ್ಪಿ ಮಾನವೀಯತೆಯನ್ನು ಗೌಣಗೊಳಿಸಿದಂತಾಗುತ್ತದೆ.
“ಮನುಷ್ಯ ಎಲ್ಲ ದೃಷ್ಟಿಯಿಂದ ತನಗಿಂತಲೂ ಸರ್ವಶ್ರೇಷ್ಠವಾದ ಪ್ರತೀಕವನ್ನು ಮಾತ್ರ ದೇವರೆಂದು ಸ್ವೀಕರಿಸಬೇಕು. ಕತ್ತೆ ಬೇಕಾದರೆ ಗೋವನ್ನು ತನಗಿಂತ ಶ್ರೇಷ್ಠ ಎಂದು ಸ್ವೀಕರಿಸಲಿ. ಆದರೆ ಮನುಷ್ಯ ಹಾಗೆ ಮಾಡುವುದು ಮೂರ್ಖತನ.
“ಇಂದಿನ ಪರಿಸ್ಥಿತಿಯಲ್ಲಿ ಅರ್ವಾಚೀನ ಮತ್ತು ಪ್ರಯೋಗಸಿದ್ಧ ವಿಜ್ಞಾನವೇ ನಮ್ಮ ರಾಷ್ಟ್ರದ ವೇದವಾಗಬೇಕು. ಈ ಪ್ರವೃತ್ತಿಗೆ ಗೋಪೂಜೆ ಹೊಂದಿಕೆಯಾಗದಿದ್ದರೆ ಅದನ್ನು ಬಿಡಬೇಕು. ಇಂಥ ಮೂರ್ಖತನಕ್ಕೆ `ಧರ್ಮ’ ಎಂದು ಪುರಾಣಗಳು ಹೇಳಿರುವುದಕ್ಕೆ ತಲೆದೂಗಿದರೆ ರಾಷ್ಟ್ರದ ಸರ್ವನಾಶ ಖಂಡಿತ. ಗೋಪೂಜೆಯಿಂದ ಆಗುವ ಲಾಭಕ್ಕಿಂತ ಹಾನಿ ಅತ್ಯಂತ ಘಾತುಕ. ಒಂದು ವೇಳೆ ಗೋಹತ್ಯೆ ನಡೆದರೂ ಅಡ್ಡಿಯಿಲ್ಲ. ರಾಷ್ಟ್ರದ ಬುದ್ಧಿಹತ್ಯೆ ಮಾತ್ರ ಆಗಬಾರದು. ಹಸು ಮತ್ತು ಎತ್ತು ನಮ್ಮ ಕೃಷಿಪ್ರಧಾನ ರಾಷ್ಟ್ರಕ್ಕೆ ಉಪಯುಕ್ತ ಪ್ರಾಣಿಗಳು ಎಂದು ಆ ಪ್ರಾಣಿಗಳನ್ನು ಎಷ್ಟು ಬೇಕೊ ಅಷ್ಟು ಬಳಸಿದರೆ ಸಾಕು. ಅದರ ಬದಲು ಅದು ದೇವತೆ, ಪುರಾಣದಲ್ಲಿ ಅದನ್ನು ಪೂಜಿಸುವುದನ್ನು ಧರ್ಮ ಎಂದು ಹೇಳಿದೆ ಎಂದು ಬೊಗಳೆ ಬಿಟ್ಟರೆ ರಾಷ್ಟ್ರಕ್ಕೆ ನೂರುಪಟ್ಟು ಹಾನಿಯಾಗುತ್ತದೆ. ಅಲ್ಪ ಲಾಭಕ್ಕಾಗಿ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ.
“ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ ೩೩ ಕೋಟಿ ದೇವತೆಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ ವಿಸರ್ಜನೆಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಭಕ್ತರಂತೆ ಹೇಡಿಯೇ? ಕಟುಕನೇ ೩೩ ಕೋಟಿ ದೇವತೆಗಳಿಗಿಂತ ಪರಾಕ್ರಮಿಯೆ?
“`ಹಸು ಮಹಾಮಾತೆಯಾಗಿರುವವನೇ ಹಿಂದೂ’ ಎನ್ನುವುದು ಹಿಂದುತ್ವಕ್ಕೆ ಮಾಡಿದ ಅಪಮಾನ. ಹಸು ಕರುವಿಗೆ ಮಾತ್ರ ತಾಯಿ, ಹಿಂದೂಗಳಿಗಲ್ಲ. `ಗೋರಕ್ಷಣೆಯೇ ಧರ್ಮ’, `ಸ್ವಧರ್ಮೇ ನಿಧನಂ ಶ್ರೇಯಃ’ ಎಂದಾಗ ವಿವೇಕ, ಬುದ್ಧಿ ಸಂಪೂರ್ಣ ಕುರುಡಾಗಿ ಪ್ರಜ್ಞೆ ತಪ್ಪಿದ ಅನುಭವವಾಗುತ್ತದೆ.
“ಇಂಥ ಅನಾಗರಿಕ ಮತ್ತು ಮೂರ್ಖ ಸಂಸ್ಕಾರಕ್ಕೆ ತಿಲಾಂಜಲಿ ನೀಡುವುದೇ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಶೋಭಿಸುವ ಮಾರ್ಗ. ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದೃಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪ ಬಿಟ್ಟು ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ಹಸು ಎತ್ತುಗಳನ್ನು ದೇವರೆಂದು ತೋರಿಸುತ್ತ ತಿರುಗುವ ಗೋಭಕ್ತನನ್ನು ತಡೆದು ಎತ್ತನ್ನು ನೊಗಕ್ಕೆ ಹೂಡಬೇಕು; ಅವನನ್ನು ದೇಶಸೇವೆಗೆ ದುಡಿಸಬೇಕು” (ಸಾವರಕರ: ಒಂದು ಅಭಿನವ ದರ್ಶನ, ಅನುವಾದ: ಚಂದ್ರಕಾಂತ ಪೋಕಳೆ ಬೆಳಗಾವಿ ೨೦೦೯ ಪು.೨೭-೩೭).
ಸಾವರಕರ್, ಗೋರಕ್ಷಣೆಯ ಹುಚ್ಚುತನದಂತೆ ಧಾರ್ಮಿಕ ನಂಬಿಕೆಯ ಗೋಭಕ್ಷಣೆಯ ಕ್ರೌರ್ಯವನ್ನೂ ಖಂಡಿಸಿದ್ದಾರೆ. ಆದ್ದರಿಂದ ಸರಕಾರ ಗೋರಕ್ಷಣೆಯ ಮಸೂದೆಯನ್ನು ಹಿಂದಕ್ಕೆ ಪಡೆದು ಅದರ ಬಗ್ಗೆ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಗೌರವಕ್ಕೆ ಸಲ್ಲುವಂತೆ ವ್ಯಾಪಕವಾದ ವೈಚಾರಿಕ, ವೈಜ್ಞಾನಿಕ ಸಾರ್ವಜನಿಕ ಚರ್ಚೆ ನಡೆಸುವುದು ಅಗತ್ಯ.
೧೬ಮಾರ್ಚಿ೨೦೧೦
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು ೫೭೦೦೦೬
ಟಿಪ್ಪಣಿಗಳು
ಪ್ರಿಯರೇ
ನಿಮ್ಮ ಬರಹಕ್ಕೆ ಪೂರಕವಾಗಿ ಸುಮಾರು ನಾಲ್ಕು ವರ್ಷಗಳ ಹಿಂದೆಯೇ ನಾನು ಪ್ರಕಟಿಸಿದ ಪತ್ರವೊಂದರ ಯಥಾಪ್ರತಿ ಲಗತ್ತು:
ಗೋಮಹಿಮೆಯನ್ನು ಮತಾಚಾರಗಳ ಪ್ರಕಾರ ಒಂದು ವರ್ಗ ಪ್ರಚಾರ ಮಾಡುತ್ತಿರುವುದು ಸರಿಯೇ ಇರಬಹುದು. ನೆಲಕ್ಕೆ ಸಹಜ ಬೆಳೆಯಂತೆ (ಸಾವಯವ) ಸಾಕುಪ್ರಾಣಿಗಳಲ್ಲೂ ಪರಿಸರಕ್ಕೆ ಒಗ್ಗುವವನ್ನು ಪುನಃ ಸ್ಥಾಪಿಸುವುದು, ಅಭಿವೃದ್ದಿಪಡಿಸುವುದೂ ಆಗಬೇಕಾದದ್ದೇ ಸರಿ. ಆದರೆ ಈ ಆಂದೋಲನ ವಾಸ್ತವವನ್ನು ಮರೆತು ಸಾಗುತ್ತಿದೆ ಎನ್ನುವುದು ನನ್ನ ಭಯ. ಇಲ್ಲವಾದರೆ ಗೋ ಸಂಪತ್ತಿನಂತೆ ಇಲ್ಲೇ ಕ್ಷೀರೋತ್ಪಾದನೆಗೆ ಪ್ರಸಿದ್ಧವೇ ಇರುವ ಎಮ್ಮೆ, ಆಡುಗಳಿಗ್ಯಾಕೆ ಈ ಪ್ರಾಶಸ್ತ್ಯವಿಲ್ಲ? ಜೀವ ವೈವಿಧ್ಯ, ಆಹಾರ ಸರಪಳಿ ಮುಂತಾದ ನುಡಿಗಟ್ಟುಗಳಿಗೆ ಸಿಕ್ಕುವ ಮನ್ನಣೆ ಗೋ ಸಂಪತ್ತಿಗಾಗುವಾಗ ಪಕ್ಷಪಾತಿಯಾಗುವುದು ಸರಿಯೇ? ವಿಸ್ತೃತ ಸಾಮಾಜಿಕ ನೆಲೆಗೆ ಪಸರಿಸುವ ಗೋಸಂರಕ್ಷಣೆಗೆ ವೈದಿಕ ಶಾಸ್ತ್ರಾಧಾರವೊಂದೇ ಸಾಲದು. ವೈಜ್ಞಾನಿಕ ಸಮರ್ಥನೆ ಅಥವಾ ಪ್ರಾಯೋಗಿಕ ಸಮಸ್ಯೆಗಳ ಪರಿಹಾರದ ಜವಾಬ್ದಾರಿ ಇರಲೇಬೇಕು. ‘ವೈಜ್ಞಾನಿಕ’ವೆನ್ನುವುದು ಪ್ರತಿಪಕ್ಷ ಅಲ್ಲ; ನಿಜ ಜೀವನಕಲೆಯ ಆಧುನಿಕ ವ್ಯಾಖ್ಯಾನ. (ನೋಡಿ: ಜಿ.ಟಿ.ನಾರಾಯಣ ರಾಯರ ಪುಸ್ತಕ ವೈಜ್ಞಾನಿಕ ಮನೋಧರ್ಮ)
ಹಿಂದೊಂದು ಕಾಲದಲ್ಲಿ ಭಾರತ ನೆಲದ ನೂರರಲ್ಲಿ ಅರುವತ್ತಕ್ಕೂ ಮಿಕ್ಕು ಭಾಗ ವನ್ಯವಿತ್ತು. ಆದರೆ ಇಂದು ಸಹಜ ವನ್ಯ ವಿಸ್ತೀರ್ಣ ಶೇಕಡಾ ಎರಡಕ್ಕೆ ಇಳಿದಿದೆ. ಅದೂ ಅಭಯಾರಣ್ಯದಂತಹ ಬಲವತ್ಬಂಧನದಿಂದ ಉಳಿದಿದೆ. ಅಂಥ ನೆಲೆಗಳಾದ ಬಂಡಿಪುರ, ನಾಗರಹೊಳೆ ಯಾಕೆ ನಮ್ಮ ಪಶ್ಚಿಮಘಟ್ಟಗಳಲ್ಲೂ ಇಂದು ಜೀವವೈವಿಧ್ಯದ ರಕ್ಷಣೆಗೆ ಬಲುದೊಡ್ಡ ಕುತ್ತು ದನ ಸಂಖ್ಯೆ! ಭಾರತದಲ್ಲಿ ಜನಸಂಖ್ಯೆಯನ್ನೂ ಮೀರಿ ಜಾನುವಾರು ಸಂಖ್ಯೆ ಇದೆ. ವನ್ಯ ವಿಸ್ತೀರ್ಣಕ್ಕೆ ತಕ್ಕಂತೆ ವನ್ಯ ಜೀವಿಗಳ ಸಂಖ್ಯಾ ಸಂತುಲನ ಪ್ರಕೃತಿ ನಿಭಾಯಿಸುತ್ತದೆ. (ನೋಡಿ: ಡಾ| ಕೆ. ಉಲ್ಲಾಸ ಕಾರಂತರ ಪುಸ್ತಕ ಕಾಡುಪ್ರಾಣಿಗಳ ಜಾಡಿನಲ್ಲಿ) ಆದರೆ ಅಲ್ಲೂ ಜನಪ್ರತಿನಿಧಿಗಳಾಗುವ ಈ ಜಾನುವಾರು (ಮುಖ್ಯವಾಗಿ ಗೋಸಂಪತ್ತು) ಮೇವು ಮುಗಿಸುತ್ತವೆ, ಕಾಯಿಲೆ (ಕಾಲು ಬಾಯಿ ರೋಗ) ಪ್ರಸರಿಸುತ್ತವೆ. ಇಂದಿನ ಸಾಮಾಜಿಕ ಪರಿಸರದಲ್ಲಿ ವೈವಿಧ್ಯ ಊಡುವ ಗೋಚರಾವಿನ ಭೂಮಿ, ನಿರ್ಮಲ ಜಲ ಇಲ್ಲವೇ ಇಲ್ಲ ಎಂದಾದ ಮೇಲೆ ಅಮಿತ ಗೋ-ವೃದ್ಧಿ (ಜನನ ಮಿತಿಯಿಲ್ಲ ಮತ್ತು ಸಹಜ ಮರಣದವರೆಗೆ ಪೂರ್ಣ ರಕ್ಷಣೆ ಉಂಟು) ಈ ನೆಲ ತಾಳಬಲ್ಲುದೇ?
ಗೋಸಂಪತ್ತಿನ ಬಹುಮುಖ ಉಪಯುಕ್ತತೆಯನ್ನು ಪ್ರಚುರಿಸುವ ಭರವೂ ಅತಿರೇಕದಲ್ಲಿದೆ. ಗೋಮೂತ್ರದ ತಯಾರಿಯಾದ ಅರ್ಕ ಗುಣಪಡಿಸದ ಕಾಯಿಲೆಯಿಲ್ಲ (ಸರ್ವರುಜಾಪಹಾರಿ!) ಎಂಬ ಭ್ರಮೆ ವ್ಯಾಪಿಸುತ್ತಿದೆ. ಅದರ ಗುಣಾವಗುಣಗಳ ಬಗ್ಗೆ ವಿಮರ್ಶಿಸುವುದಕ್ಕೆ ನಾನು ಅಧಿಕಾರಿಯಲ್ಲ. ಆದರೆ ಅನ್ಯ ಅಂಗೀಕೃತ ಚಿಕಿತ್ಸಾಕ್ರಮಗಳಲ್ಲಿ ತೊಡಗಿಕೊಂಡಿದ್ದವರು ಇದಕ್ಕೆ ಶರಣಾಗಿ ಜೀವಹಾನಿಯೋ ಖಾಯಂ ನ್ಯೂನತೆಯೋ ಉಂಟಾದರೆ (ಯಾರಿಗೂ ಹಾಗಾಗದಿರಲಿ) ಕಾನೂನುಕ್ರಮದಿಂದ, ಅದಕ್ಕೂ ಮಿಗಿಲಾಗಿ ನೈತಿಕ ಸ್ತರದಲ್ಲಿ ಉತ್ತರಿಸುವವರು ಯಾರು? ಎಷ್ಟೊಂದು ಪರ್ಯಾಯ ಚಿಕಿತ್ಸಾ ಅಲೆಗಳು ಎತ್ತೆತ್ತರಕ್ಕೆ ಬಂದು ಮರೆವಿಗೆ ಸಂದಿವೆ ಗೊತ್ತೇ? ಸ್ವಮೂತ್ರ, ಆಯಿಲ್ ಪುಲ್ಲಿಂಗ್, ನೇತಿ, ರೇಕಿ, ಪ್ರಾಣಿಕ್ ಹೀಲಿಂಗ್, ಅಯಸ್ಕಾಂತ, ಯೋಗ, ಪ್ರಾಣಾಯಾಮ, ಆಕ್ಯುಪ್ರೆಶರ್, ಕಲರ್, ಅರೋಮ, ಸೊಪ್ಪು ಹುಲ್ಲುಗಳ ರಸ, ಜಲ, ಹರಳು, ಸಂಗೀತ, ಸೂರ್ಯ, ಸುಜೋಕ್ ಒಂದೇ ಎರಡೇ! ಇನ್ನು ಪವಾಡಗಳ ಲೋಕಕ್ಕೆ ಹೋದರಂತೂ ಬೂದಿ, ಮಣ್ಣು, ನೀರು, ಎಣ್ಣೆ, ಮೊಂಡುಚೂರಿ, ಬರಿಗೈಗಳಲ್ಲೂ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವವರು ಹುಟ್ಟುತ್ತಲೇ ಇರುತ್ತಾರೆ! ವಿಜ್ಞಾನ ಅಂದಂದು ನಿಲುಕಿದ ಸತ್ಯವನ್ನು ಸವಿನಯ ಪ್ರಸ್ತುತಪಡಿಸುತ್ತದೆ. ಪರ್ಯಯ ಚಿಕಿತ್ಸಾಕ್ರಮಗಳು (ಸೀಮಿತ ಪ್ರಯೋಜನವನ್ನು ನಾನು ಅಲ್ಲಗಳೆಯುವುದಿಲ್ಲ) ನಿರ್ಲಜ್ಜವಾಗಿ ಪರಮ ಮತ್ತು ಸಾರ್ವಕಾಲಿಕ ಸತ್ಯವೇ ತಾವೆಂಬಂತೆ ಮೆರೆಯುತ್ತವೆ. ವಿಜ್ಞಾನ ಸೋತಲ್ಲಿ ತಾನು ಎಂಬ ಇವರ ನಿಲುವೇ ಹೀನಾಯ. ಪ್ರಾಜ್ಞರು ಮೂಕರಾದಲ್ಲಿ ಮೂಢರು ಮೆರೆಯುತ್ತಾರೆ ಎಂಬುದು ಗಾದೆಯ ಮಾತು.
ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಯಾಂತ್ರಿಕ ಕಸಾಯಿಖಾನೆ ಬರುತ್ತದೆ ಎಂದಾಗ ಮುಖ್ಯವಾಗಿ ಗೋಮಾತಾ ಭಕ್ತರು ಪತ್ರಿಕೆಗಳಲ್ಲಿ ಗುಲ್ಲೆಬ್ಬಿಸಿದರು. ನಾನು ಪಕ್ಕಾ ಸಸ್ಯಾಹಾರಿಯೇ ಆದರೂ ಕಸಾಯಿಖಾನೆಯನ್ನು ಪತ್ರಿಕೆಗಳ ಮೂಲಕ ಬೆಂಬಲಿಸಿದೆ. ಸಾಮಾಜಿಕ ದ್ರೋಹವಾಗದಂತೆ ರೂಢಿಸಿರುವ ಇನ್ನೊಬ್ಬರ ಆಹಾರ ಸ್ವಾತಂತ್ರ್ಯವನ್ನು ಅವಹೇಳನ ಮಾಡಲು ನಾವು ಯಾರು? ಮುದಿ, ಗೊಡ್ಡು, ಕಾಯಿಲಸ್ಥ, ಅಗತ್ಯಕ್ಕಿಂತ ಹೆಚ್ಚಿನ ಗಂಡು ಕರು ಮುಂತಾದವನ್ನು ಅರಿವಿದ್ದೂ ಆಹಾರಕ್ಕೋ ಚರ್ಮೋದ್ಯಮಕ್ಕೋ ಜಾತಿ ಮತಬೇಧವಿಲ್ಲದೆ ಎಲ್ಲರೂ ಸಾಗಹಾಕುತ್ತಿದ್ದರು. ಕೊಳ್ಳುವವರಾದರೋ (ಸಂಗ್ರಹಿಸುವವರು) ಗೋಮಾಂಸ ಮತ್ತು ಉಪಉತ್ಪನ್ನಗಳು ಅತ್ಯಂತ ಕಡಿಮೆಬೆಲೆಯಲ್ಲಿ ಲಭ್ಯವೆಂದು ಗಣಿಸುತ್ತಿದ್ದರೇ ವಿನಾ ಅನ್ಯ ಮತ ಅವಹೇಳನದ ಕೆಟ್ಟಯೋಚನೆಯಿಂದಲ್ಲ (ಪುಡಾರಿಗಳ ಅಪಪ್ರಚಾರ ಬಿಡಿ). ಅನ್ಯ ಮತಾಚಾರಗಳು ಅವುಗಳ ಮೂಲ ನೆಲದ ನಂಬಿಕೆಯಲ್ಲಿ ಹಾಲು ಕೊಡುವ ಜಾನುವಾರನ್ನು ಸ್ವಂತ ತಾಯಿಯಂತೋ ಆರಾಧನೀಯವಾಗಿಯೋ ಕಾಣಬೇಕಾಗಿಯೂ ಇಲ್ಲ. ಉದಾಹರಣೆಗೆ ಅರಬರಲ್ಲಿ ಒಂಟೆ, ಟಿಬೆಟನ್ನರಲ್ಲಿ ಯಾಕ್ ಹಾಲಿಗೆ ಮುಖ್ಯವಾಗಿ ಒದಗಿದರೂ ಅವುಗಳ ಮಾಂಸ ಅವರಿಗೆ ಅ-ಖಾದ್ಯವಲ್ಲ. ಮತ್ತೆ ಎಲ್ಲಾ ಮಾಂಸಾಹಾರಿಗಳು ಸಸ್ಯಾಹಾರಿಗಳೇ ಆದರೆ ಅಕ್ಷರಶಃ ಬೇರು ಬೊಗಟೆಯನ್ನೂ (ಗೆಡ್ಡೆ, ದಂಟಲ್ಲ) ತಿನ್ನಬೇಕಾದೀತು! ಒಮ್ಮೆಗೆ ಪ್ರಚಾರಸತ್ರದ ಬಿಸಿಯಲ್ಲಿ ಗೋವಧೆಯ ಕೆಲವಂಶ ತಡೆದಂತೆ ಕಂಡರೂ ಇದು ದೀರ್ಘಕಾಲೀನ ಸತ್ಯವಾಗುವುದು ಅಸಾಧ್ಯ.
ಕರ್ನಾಟಕದಲ್ಲಿ ಕಸಾಯಿಖಾನೆಯ ವಿವಾದ ಇನ್ನೂ ಬಿಸಿಯಿರುವ ಸುಮಾರಿಗೆ ಜಾಗತಿಕವಾಗಿ ವನ್ಯ ವಿಭಾಗದಲ್ಲಿ ಹುಲಿಗಳು ಬಲುದೊಡ್ಡ ಬಿಕ್ಕಟ್ಟು ಎದುರಿಸುತ್ತಿದ್ದವು. ಇದರ ಕುರಿತು ಅಂತಾರಾಷ್ಟ್ರೀಯ ಸಂಸ್ಥೆಯೊಂದು (ನ್ಯಾಷನಲ್ ಜಿಯಾಗ್ರಫಿಕ್) ತಯಾರಿಸಿದ್ದ ಟೈಗರ್ ಕ್ರೈಸಿಸ್ ಎಂಬ ಕಿರುಚಿತ್ರವನ್ನು ಹಿಡಿದು ನಾನು ಮತ್ತು ಗೆಳೆಯ – ಡಾ| ಕೃಷ್ಣಮೋಹನ ಪ್ರಭು, ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಸಣ್ಣ ಸಣ್ಣ ಗುಂಪುಗಳಿಗೆ ಚಿತ್ರ ಪ್ರದರ್ಶಿಸಿ, ವಿಚಾರವಿನಿಮಯ ನಡೆಸಿದ್ದೆವು. ಆಗ ಸ್ವಂತ ಮಠದಲ್ಲೇ ಚಾತುರ್ಮಾಸ್ಯದಲ್ಲಿದ್ದ ಸುಬ್ರಹ್ಮಣ್ಯ ಮಠಾಧೀಶರು (ಇಂದಿನ ವಿದ್ಯಾಭೂಷಣರು) ಮತ್ತು ಜೊತೆಗೊಟ್ಟಿದ್ದ (ಬಹುಶಃ) ಬಾಳಿಗಾರು ಮಠಾಧೀಶರು ನಮ್ಮನ್ನು ಕರೆಸಿಕೊಂಡರು. ನಾವು ಎಲ್ಲೆಡೆಗಳಂತೆ ವಸ್ತು ನಿಷ್ಠವಾಗಿಯೇ ಮಾತು ಬೆಳೆಸಿದೆವು. ಕೊನೆಯಲ್ಲಿ ಸ್ವಾಮಿಗಳು ಹೇಳಿದ ಮಾತು “ಪೂಜ್ಯತೆಯ ಆವರಣದಲ್ಲಿ ನಮ್ಮನ್ನು ತಲಪಲು ಸಾಧ್ಯವೇ ಇರದ ಹಲವು ಸತ್ಯಗಳನ್ನು ತಿಳಿಸಿದ್ದಕ್ಕೆ ಅಭಾರಿ”. ಗೋಮಹಿಮೆಯ ಪುಡಾರೀಕರಣ ನಿರಾಕರಿಸಿ ನನ್ನ ಮಾತುಗಳು ಕೆಲವರಿಗಾದರೂ ಚಿಂತನಯೋಗ್ಯವಾಗಿ ಕಾಣಿಸಿದರೆ ನಾ ಧನ್ಯ.
ಜಿ.ಎನ್.ಅಶೋಕ ವರ್ಧನ, ಮಂಗಳೂರು
ಪಂದಿತಾರಾಧ್ಯರ ಲೇಖನ ಮತ್ತು ಅದಕ್ಕೆ ಅಶೋಕವರ್ಧನ ಅವರ ವೈಜ್ಞಾನಿಕ ಹಾಗೂ ಸಕಲ ಸಮರ್ಪಕ ವಿವರಗಳ ಪ್ರತಿಕ್ರಿಯೆ ತುಂಬಾ ಮುಖ್ಯವಾದ ಸಂಗತಿಗಳನ್ನು ಬಹಿರಂಗಪಡಿಸಿದೆ.ವೈಯಕ್ತಿಕ ಬದುಕಿನಲ್ಲಿ ಪೂರ್ಣ ಸಸ್ಯಾಹಾರಿಗಳಾದ ಈ ಇಬ್ಬರು ಚಿಂತಕರು ತಮ್ಮ ಅನುಭವ ಮತ್ತು ವಿಷಯದ ಎಲ್ಲ ಮಗ್ಗುಲುಗಳ ತಿಳುವಳಿಕೆಯಿಂದ ಹೊಸ ನೋಟಗಳನ್ನು ಬೀರಿದ್ದಾರೆ.ಮತ್ತೆ ನಮ್ಮ ಪೂರ್ವಗ್ರಹದ ಕನ್ನಡಕಗಳನ್ನು ಕಳಚಿ ನೋಡಲು ಈ ಎರಡು ಬರಹಗಳು ಅವಕಾಶ ಕಲ್ಪಿಸಿವೆ.
ವಿವೇಕ ರೈ
ಸರ್,
ನೀವು ತೆಗೆದುಕೊಂಡ ಸಮಸ್ಯೆಯ ವ್ಯಾಪ್ತಿ ತುಂಬಾ ದೊಡ್ಡದಾಯಿತು.
ಇಂಥ ಸಮಸ್ಯೆಗಳನ್ನು ತೆಗೆದುಕೊಂಡರೆ, ಚರ್ಚೆ ಮುಗಿಯುವುದೇ ಇಲ್ಲ.
ನಮ್ಮ ಶ್ರಮ ವ್ಯರ್ಥ.
ಜನರೊಳಗೆ ಜಗಳ ಹುಟ್ಟು ಹಾಕುವುದು ಕೆಲವರ ಹೊಟ್ಟೆಪಾಡು.
ಅಂಥವರ ಹತ್ತಿರ ಪರಿಹಾರವೇ ಇಲ್ಲದ ಕೆಲವು ಸಮಸ್ಯೆಗಳಿರುತ್ತವೆ.
ಆ ಸಮಸ್ಯೆಗಳನ್ನು ಚರ್ಚೆಯಿಂದ ಪರಿಹರಿಸುವುದು ಸಾಧ್ಯವಿಲ್ಲ.
ಗೋಹತ್ಯಾನಿಷೇಧವೂ ಅಂಥದ್ದೇ. ಬೇಕಾಗಿರುವುದು ಜಗಳ,
ಸಮಸ್ಯೆಗೆ ಪರಿಹಾರವಲ್ಲ ಎಂದಾದರೆ ಚರ್ಚೆಯಿಂದೇನು ಫಲ?
ಇದು ಪರಿಹರಿಸಲೇ ಬೇಕಾದ ತುರ್ತು ಸಮಸ್ಯೆ ಏನೂ ಅಲ್ಲವಾದ್ದರಿಂದ
ಸದ್ಯಕ್ಕೆ ಸಮಸ್ಯೆಯನ್ನು ಅದರಷ್ಟಕ್ಕೆ ಬಿಟ್ಟು, ನಮ್ಮೆದುರಿಗಿರುವ
ಪರಿಹರಿಸಬಹುದಾದ ಹಲವು ಸಮಸ್ಯೆಗಳ ಕಡೆಗೆ ಗಮನ ಹರಿಸೋಣ.
ಅದರ ಬೆಳಕಿನಲ್ಲಿ ಗೋಹತ್ಯೆಯ ಸಮಸ್ಯೆಯನ್ನು
ಕಾಲಕ್ರಮೇಣ ಪರಿಹರಿಸಿಕೊಳ್ಳುವುದು ಸಾಧ್ಯವಾಗಬಹುದು.
ಹಿರಿಯರಾದ ಪಂಡಿತಾರಾಧ್ಯ ಮತ್ತು ಅಶೋಕವರ್ಧನರಿಬ್ಬರಿಗೂ ಆಬಿನಂದನೆಗಳು ಹಾಗೂ ಧನ್ಯವಾದಗಳು. ನಾನೂ ಈ ವಿಷಯವಾಗಿ ಓದಿ ಬರೆದು ಮಾಡುತ್ತಿದ್ದೇನೆ. ಪೂರಕವಾಗಿ ಹಲವಾರು ವಿಷಯಗಳನ್ನು ನಿಮ್ಮ ಬರಹ ನನಗೊದಗಿಸಿದೆ. ಗೋರಕ್ಷವಾದಿಗಳು ಅತಿರೇಕದಲ್ಲಿ ಕೇವಲ ಗೋಮಾಂಸ ಭಕ್ಷಣೆ ಮಾಡುವವನಿಗೆ ತೊಂದರೆಯಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇವ್ಯಾವುದರ ಪರಿವೆಯೂ ಇಲ್ಲದೆ ಹಳ್ಳಿಯ ಮೂಲೆಯೊಂದರಲ್ಲಿ ತನಗೆ ಬೇಕಾಧ ರಾಸುಗಳನ್ನು ಸಾಕಿಕೊಂಡು, ತನಗೆ ಬೇಕಾಧ್ಷ್ಟನ್ನು ಬಳಸಿಕೊಂಡು, ತನಗೆ ಅಗತ್ಯಬಿದ್ದಾಗ ಅವನ್ನು ಮಾರಾಟ ಮಾಡಿಕೊಂಡು ಬದುಕುತ್ತಿರುವ ರೈತನು ಮಾತ್ರ ತೊಂದರೆಗೆ ಒಳಗಾಗಲೇ ಬೇಕಾದಂತಹ ಪರಿಸ್ಥಿರಿ ನಿರ್ಮಾಣ ಆಗಿದೆ ಎನ್ನಬಹುದು.
ಅಮೇರಿಕಾದಲ್ಲಿ ಹಸುಗಳನ್ನು ತಿನ್ನುತ್ತಾರೆ.
ನಾಯಿ, ಬೆಕ್ಕುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ.
ಆದರೆ, ಕೊರಿಯಾ, ಚೈನಾಗಳಲ್ಲಿ ನಾಯಿ ಬೆಕ್ಕುಗಳನ್ನು ತಿನ್ನುತ್ತಾರೆ.
ಭಾರತದಲ್ಲಿ ಹಸುಗಳನ್ನು ತಿನ್ನುವವರು ಇದ್ದಾರೆ.
ಆದರೆ ಬಹುಸಂಖ್ಯಾತ ಹಿಂದುಗಳು ದೇವರೆಂದು ಪೂಜಿಸುತ್ತಾರೆ.
ಹೀಗೆ ಪ್ರಪಂಚದ ಒಂದೊಂದು ಕಡೆ ಒಂದೊಂದು ಆಚಾರ ಇದೆ.
ಅವರವರಿಗೆ ಅವರವರ ಅಚಾರ ಸರಿಯೆನಿಸುತ್ತದೆ.
ಯಾರು ಸರಿ ಯಾರು ತಪ್ಪು ಅಂತ ಹೇಳುವುದು ಹೇಗೆ?
ಪ್ರಪಂಚದ ಆಯಾ ಭಾಗಗಳ ಆಚಾರ ವಿಚಾರಗಳನ್ನು
ಅಲ್ಲಿರುವ ಬಹುಸಂಖ್ಯಾತರಿಗೆ ಬಿಡುವುದು ಸರಿಯಲ್ಲವಾ? ತಿಳಿಸಿ.
ಅವರವರಿಗೆ ಅವರವರ ಅಚಾರ ಸರಿಯೆನಿಸುತ್ತದೆ.
ಯಾರು ಸರಿ ಯಾರು ತಪ್ಪು ಅಂತ ಹೇಳುವುದು ಹೇಗೆ? ಎನ್ನುವುದು ಸರಿ.
ಆಹಾರ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ.
ಅದನ್ನು ಬಹುಸಂಖ್ಯೆ ಯ ಬೇರೆಯವರು ನಿರ್ಧರಿಸುವುದು ಸರಿಯಲ್ಲ ಅಲ್ಲವೆ?