ಆಂಗ್ಲ ಮಾಧ್ಯಮ – ಗುಡುಗುವವರಿಲ್ಲ ; ಗೊಣಗುವವರೇ ಎಲ್ಲ

ಎಚ್. ಶಾಂತರಾಜ ಐತಾಳ

ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೇ ಪ್ರೆಸಿಡೆನ್ಸಿಗಳೆಲ್ಲ ಮಾಯವಾದ ಮೇಲೆ ಭಾಷಾವಾರು ರಾಜ್ಯಗಳ ಉದಯವಾಗಿ ಅರ್ಧ ಶತಮಾನವೇ ಕಳೆದಿದೆ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲೇ ತಮ್ಮ ಮಾತೃಭಾಷೆ ಎನ್ನುವುದು ಎಳೆಯ ಕಂದಮ್ಮಗಳಿಗೆ ಕೈಗೆಟುಕದ ಕಜ್ಜಾಯವಾಗಿ ಬಿಟ್ಟಿದೆ. ಕನ್ನಡ ಮಾಧ್ಯಮ ಶಾಲೆಗಳೆಂದರೆ ತಾತ್ಸಾರ, ಆಂಗ್ಲ ಮಾಧ್ಯಮಕ್ಕೆ ಪುರಸ್ಕಾರ. ಇದು ಎಲ್ಲೆಡೆ ಕಂಡು ಬರುವ ದೃಶ್ಯ. ಹೀಗೆ ಆರಂಭದಲ್ಲೇ ಮಾತೃಭಾಷೆಯಿಂದ ವಂಚಿತರಾಗುವ ಮಕ್ಕಳು ಮುಂದೆ ಪ್ರತಿ ಹಂತದಲ್ಲೂ ತಡವರಿಸುತ್ತಾರೆ.

ಇದು ಮುಖ್ಯವಾಗಿ ಕನ್ನಡದ ಮಕ್ಕಳ ಮನತಟ್ಟುವ ಮೊರೆ. ವಿಚಿತ್ರವೆಂದರೆ ದೇಶದೆಲ್ಲೆಡೆಯ ಒಂದನೆಯ ತರಗತಿಯ ಎಳೆಯರಿಗೆ ಆಂಗ್ಲ ಮಾಧ್ಯಮವೆನ್ನುವುದು ಒಂದು ಹೊರೆ. ಗುಜರಾತ್ ರಾಜ್ಯದ ಒಂದು ಸರಕಾರೇತರ ಸಂಸ್ಥೆ ‘ಪ್ರಥಮ್” ಕೈಗೊಂಡ ಅಧ್ಯಯನದ ಅನ್ವಯ ಆ ರಾಜ್ಯದಲ್ಲಿ ಗುಜರಾತಿ ಭಾಷೆಯನ್ನು ಗುಜರಿ ಮಾಡಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಭಾಷೆಗೆ ಮನ್ನಣೆ ನೀಡಿದ್ದರಿಂದ, ಚಿಕ್ಕ ಮಕ್ಕಳ ಮೇಲೆ ಗಂಬಿರ ಪರಿಣಾಮ ಉಂಟಾಗಿದೆ. ಅಲ್ಲಿಯ ಆಂಗ್ಲ ಮಾಧ್ಯಮದ ಒಂದನೇ ಕ್ಲಾಸಿನ ಶೇ. ೨೫ ಮಕ್ಕಳು ಮಾತ್ರ ಆಂಗ್ಲ ಭಾಷೆಯ ದೊಡ್ಡಕ್ಷರಗಳನ್ನು (ಕ್ಯಾಪಿಟಲ್ ಲೆಟರ್ಸ್) ಗುರುತಿಸಬಲ್ಲರು ಹಾಗೂ ಕೇವಲ ೮ ಶೇ. ಮಕ್ಕಳು ಮಾತ್ರ ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲರು.

ಕೇರಳದ ಕೊಟ್ಟಾಯಂನಿಂದ ಮಕ್ಕಳಿಗಾಗಿಯೇ ಪ್ರಕಟವಾಗುವ ನಿಯತಕಾಲಿಕ (ಮಾಜಿಕ್ ಪೊಟ್)ದ ಸಂಪಾದಕೀಯದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗಿದೆ. ‘ದೇಶದಲ್ಲಿ ಆಂಗ್ಲ ಭಾಷಾ ಮಾಧ್ಯಮವನ್ನು ಒಂದನೇ ಕ್ಲಾಸಿನಿಂದಲೇ ಹೇರುತ್ತಾ ಬಂದಿರುವುದರಿಂದ ಮಕ್ಕಳಲ್ಲಿ ಇಂಗ್ಲಿಷ್ ಓದುವ ಸಾಮರ್ಥ್ಯ ಏನೂ ಸುಧಾರಿಸಿಲ್ಲ. ಹೀಗೆ ಮಾತೃಭಾಷಾ ಮಾಧ್ಯಮ ವಂಚಿತರಾದ ಮಕ್ಕಳ ಪೈಕಿ ಕೇವಲ ೪೩ ಶೇ. ದಷ್ಟು ಮಾತ್ರ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಲು ಶಕ್ತರಾಗಿದ್ದಾರೆ. ಇದೂ ದೊಡ್ಡಕ್ಷರಗಳನ್ನು ಮಾತ್ರ’ ಎಂಬ ಆತಂಕವನ್ನು ಪತ್ರಿಕೆ ವ್ಯಕ್ತಪಡಿಸಿದೆ.

ಇವೆಲ್ಲ ಏನನ್ನು ಸೂಚಿಸುತ್ತವೆ? ಆರಂಭಿಕ ಹಂತದಲ್ಲಿ ಮಾತೃಭಾಷೆಗೆ ಮಾನ್ಯತೆ ನೀಡಬೇಕೆಂಬುದು ವಿಶ್ವಕ್ಕೇ ತಿಳಿದ ಸತ್ಯ. ವಿದೇಶಗಳಲ್ಲಿ ನಡೆಸಲಾದ ಹಲವಾರು ಅಧ್ಯಯನಗಳನ್ವಯ ಮಕ್ಕಳು ನಿಮಿಷಕ್ಕೆ ೪೫ರಿಂದ ೬೦ ಶಬ್ದಗಳನ್ನು ಸರಾಗವಾಗಿ ಓದಲು ಶಕ್ತರಾದಾಗ ಮಾತ್ರ ತಾವು ಓದಿದ್ದನ್ನು ಅರಗಿಸಿಕೊಳ್ಳಬಲ್ಲರು. ಹೀಗೆ ಮಾಡಲು ಅವರ ತಾಯ್ನುಡಿಯಲ್ಲಿ ಮಾತ್ರ ಸಾಧ್ಯ. ಈ ಗುರಿ ತಲುಪಿದ ಮೇಲಷ್ಟೇ ಇಂಗ್ಲಿಷ್ ನಂತಹ ದ್ವಿತೀಯ ಭಾಷೆಯ ಕಲಿಕೆ ಅರಿವಿಗೆ ತುಂಬ ಸುಲಭವಾಗುತ್ತದೆ.
ಇದರ ಬದಲಿಗೆ ದ್ವಿತೀಯ ಭಾಷೆಯಾದ ಇಂಗ್ಲಿಷನ್ನೇ ಮಾಧ್ಯಮವನ್ನಾಗಿ ಮಾಡಿ ಬಿಟ್ಟರೆ ಅವರಿಗೆ ಯಾವ ಭಾಷೆಯಲ್ಲೂ ವೇಗವಾಗಿ ಓದಲು ಸಾಧ್ಯವೇ ಆಗಲಾರದು. ಎರಡನೇ ತರಗತಿಯ ಒಳಗೆ ಓದು ಮತ್ತು ಬರಹಗಳಲ್ಲಿ ವೇಗವನ್ನು ಗಳಿಸದೆ ಹೋದರೆ ಅಂತಹ ಮಕ್ಕಳು ಮೇಲಿನ ತರಗತಿಗಳಲ್ಲೂ ತಮ್ಮ ಸಹಪಾಠಿಗಳಿಗೆ ಸರಿ ಕಟ್ಟಲಾರರು.

ಜಾಗತಿಕ ಮಟ್ಟದ ಶಿಕ್ಷಣ ತಜ್ಞರು ನಿರಂತರವಾಗಿ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದ ಇತರ ಅಂಶಗಳೆಂದರೆ-ಮಾನವನ ಅಲ್ಪಾವದಿಯ ಜ್ಞಾಪಕ ಶಕ್ತಿ ೧೨ ಸೆಕೆಂಡುಗಳ ವರೆಗೆ ಮಾತ್ರ ಶ್ರೇಷ್ಠ ಮಟ್ಟದ್ದಾಗಿರುತ್ತದೆ. ಆದ್ದರಿಂದ ಈ ಅವದಿಯ ಒಳಗೆ ಒಂದು ವಾಕ್ಯವನ್ನು ಓದಬಲ್ಲ ವ್ಯಕ್ತಿ ಅದನ್ನು ತನ್ನ ಮೆದುಳೆಂಬ ಗ್ರಂಥಾಲಯದಲ್ಲಿ ಶೇಖರಿಸಿಟ್ಟುಕೊಳ್ಳಬಲ್ಲನು. ಹಾಗೆಯೇ ಒಂದರಿಂದ ಒಂದೂವರೆ ಸೆಕೆಂಡಿಗೆ ಒಂದು ಶಬ್ದವನ್ನು ಗ್ರಹಿಸಲು ಶಕ್ತನಾದ ವಿದ್ಯಾರ್ಥಿ ಉತ್ತಮ ಓದುಗನಾಗಬಲ್ಲನು. ಇದಕ್ಕಿಂತ ನಿಧಾನವಾಗಿ ಓದಿದರೆ ವಾಕ್ಯದ ಕೊನೆಯನ್ನು ತಲುಪುವಾಗ, ಆರಂಭದಲ್ಲಿ ಓದಿದ್ದನ್ನು ಆತ ಮರೆತೇ ಬಿಡುವ ಸಾಧ್ಯತೆಗಳಿವೆ.

ಚಿಕ್ಕ ಮಕ್ಕಳು ಸಾಮಾನ್ಯವಾಗಿ ಹೊಸ ಭಾಷೆಯ ಅಕ್ಷರಗಳನ್ನು ಸೇರಿಸಿ ಓದಲು ಶ್ರಮಿಸುತ್ತಾರೆ. ಅವರಿಗೆ ವಾಕ್ಯಗಳನ್ನು ವೇಗವಾಗಿ ಓದಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಮಾನಸಿಕ ಶ್ರಮವೆಲ್ಲ ಅಕ್ಷರಗಳನ್ನು ಒಂದೊಂದಾಗಿ ಪೋಣಿಸಿ, ಶಬ್ದಗಳನ್ನು ರಚಿಸುವುದರಲ್ಲೇ ವ್ಯಯವಾಗುತ್ತದೆಂದು ಹೊರತು ಇಡೀ ವಾಕ್ಯಾರ್ಥದ ಕಲ್ಪನೆಯಲ್ಲಲ್ಲ! ಹೀಗೆ ವೇಗವಾಗಿ ಓದಲು ಅಸಮರ್ಥವಾದ ಮಗುವಿಗೆ ಪಾಠದ ಒಟ್ಟು ಅರ್ಥವೇನು; ಶಿಕ್ಷಕರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೇ ಹೋದೀತು. ಒಂದೇ ಶಾಲೆಯಲ್ಲಿ ಎಂಟು ವರ್ಷಗಳನ್ನು ಕಳೆದರೂ ಅದರಲ್ಲಿ ಯಾವ ಬದಲಾವಣೆಯೂ ಗೋಚರವಾಗದು. ಇದರರ್ಥ ಎರಡು ಅಥವಾ ಮೂರು ಭಾಷೆಗಳನ್ನು ಎಳೆಯರು ಕಲಿಯಲಾರರು ಎಂದಲ್ಲ. ವಾಸ್ತವವಾಗಿ ಎಂಟು ವರ್ಷದ ಕೆಳಗಿನ ಮಕ್ಕಳು ಹೊಸ ಭಾಷೆಗಳನ್ನು ಅತೀ ಸುಲಭವಾಗಿ ಕಲಿಯಬಲ್ಲರು. ಆದರೆ ಒಂದು ಭಾಷೆಯ ಮೇಲೆ ಅಂದರೆ, ಮಾತೃ ಭಾಷೆಯ ಮೇಲೆ ಪೂರ್ಣ ಹಿಡಿತ ಬಂದಾದ ಮೇಲೆ ಮಾತ್ರ ದ್ವಿತೀಯ ಭಾಷೆಯನ್ನು ಅವರು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು. ಪ್ರಥಮ ಭಾಷೆಯನ್ನು ಕಲಿಯುವಾಗ ಒಂದು ಮಗುವಿನ ಕಲ್ಪನಾಶಕ್ತಿ ವಿಕಾಸಗೊಳ್ಳುತ್ತಾ ಹೋಗುತ್ತದೆ. ಅನಂತರ ಅದೇ ಮಾದರಿಯನ್ನನುಸರಿಸಿ ದ್ವಿತೀಯ ಭಾಷೆಯ ಕಲಿಕೆ ಮಗುವಿಗೆ ಕಷ್ಟವಾಗದು.

ಈ ಎಲ್ಲ ಅಧ್ಯಯನಗಳ ರೂವಾರಿ ಹೆಲೆನ್ ಅಬಾಜಿ ಎನ್ನುವ ಶಿಕ್ಷಣ ತಜ್ಞೆ. ಇವರು ಜಾಂಬಿಯಾ ದೇಶದಲ್ಲಿ ನಡೆಸಿದ ಪ್ರಯೋಗಗಳು ಜಾಗತಿಕ ಶಿಕ್ಷಣ ರಂಗದಲ್ಲೇ ಕ್ರಾಂತಿಕಾರಿ ಬದಲಾವಣೆಯನ್ನು ಮಾಡುತ್ತಿವೆ. ಆರಂಭದಲ್ಲೇ ಅಲ್ಲಿನ ಒಂದನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆ ಎರಡನ್ನೂ ಕಲಿಸಲಾಯಿತು. ಇನ್ನು ಕೆಲವು ಆಯ್ದ ಶಾಲೆಗಳಲ್ಲಿ ಒಂದನೇ ಕ್ಲಾಸಿನಲ್ಲಿ ಓದಲು ಮಾತ್ರ ಕಲಿಸಿ, ಎರಡನೇ ಕ್ಲಾಸಿನ ಅನಂತರ ಇಂಗ್ಲಿಷ್ನಲ್ಲಿ ಬರೆಯುವುದನ್ನು ಹೇಳಿ ಕೊಡಲಾಯಿತು. ಈ ಅಧ್ಯಯನಗಳ ಫಲಿತಾಂಶಗಳು ಅತ್ಯಂತ ರೋಚಕವಾಗಿದ್ದವು. ಒಂದನೇ ಕ್ಲಾಸಿಗೆ ಇಂಗ್ಲಿಷ್ ಮಾಧ್ಯಮವನ್ನು ನೆಚ್ಚಿಕೊಂಡಿದ್ದ ಶಾಲೆಗಳಲ್ಲಿ ಮಕ್ಕಳು ಓದುವ ಸಾಮರ್ಥ್ಯ ನಿಗದಿತ ಮಟ್ಟಕ್ಕಿಂತ ಎರಡು ಗ್ರೇಡ್ ಕೆಳಗೆ ಹಾಗೂ ಅವರ ಮಾತೃ ಭಾಷೆಯಲ್ಲಿ ಮೂರು ಗ್ರೇಡ್ ಕೆಳಗೆ ಇದ್ದವು. ಆದರೆ ಹೊಸ ಪ್ರಯೋಗದನ್ವಯ ಆಂಗ್ಲ ಮಾಧ್ಯಮವನ್ನು ಮೇಲಿನ ತರಗತಿಗಳಿಗೆ ಅಳವಡಿಸಲಾದ ಶಾಲೆಗಳಲ್ಲಿ ಒಂದನೇ, ಎರಡನೇ ಮತ್ತು ಮೂರನೇಯ ತರಗತಿಯ ಮಕ್ಕಳಲ್ಲಿ ಇಂಗ್ಲಿಷ್ ಪಾಠಗಳನ್ನು ಓದುವ ಮತ್ತು ಬರೆಯುವ ಸಾಮಥ್ರ್ಯದ ಮಟ್ಟ ಕ್ರಮವಾಗಿ ೫೭೫ ಶೇ. ೨೪೧೭ ಶೇ. ಹಾಗೂ ೩೩೦೦ ಶೇ. ದಷ್ಟು ವೃದ್ಧಿಗೊಂಡವು. ಈ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಗಳಲ್ಲಿ ಗಳಿಸಿದ ಅಂಕಗಳ ಏರಿಕೆ ಸಹ ಇದಕ್ಕನುಗುಣವಾಗಿಯೇ ಇದ್ದವು.

ಈ ಅಧ್ಯಯನದ ಸಂದೇಶದಿಂದ ಪ್ರಭಾವಿತರಾದ ಜಾಂಬಿಯಾ ಸರಕಾರ ಇದೇ ಪದ್ಧತಿಯನ್ನು ದೇಶದ ಎಲ್ಲ ಶಾಲೆಗಳಿಗೂ ವಿಸ್ತರಿಸಿತು. ಒಂದನೇ ಕ್ಲಾಸಿನ ವಿದ್ಯಾರ್ಥಿಗಳು ಈಗ ತಮ್ಮ ತಾಯ್ನಾಡಿನ ಮಾಧ್ಯಮದಲ್ಲೇ ಕಲಿಯಲು ಉತ್ಸಾಹ ತೋರುತ್ತಿದ್ದಾರೆ. ಮಂದಹಾಸ ಬೀರುತ್ತಿದ್ದಾರೆ. ಎರಡನೇ ಅಥವಾ ಮೂರನೇ ಕ್ಲಾಸಿನ ಇಂಗ್ಲಿಷ್ ಮಾಧ್ಯಮದ ಕಲಿಕೆಯಲ್ಲೂ ಅವರಿಗೆ ಆಸಕ್ತಿ ಉಂಟಾಗಿದೆ. ತಾಯ್ತಂದೆಯರಿಗಿದ್ದ ಆತಂಕ ದೂರವಾಗಿದೆ.

ಜಾಂಬಿಯಾ ದೇಶ ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದೆ. ಇದನ್ನು ಭಾರತ ದೇಶ ಸಹ ಅನುಸರಿಸಬೇಕಿದೆ. ಈಗಿನ ಐಟಿ, ಬಿಟಿ ಯುಗದಲ್ಲಿ ಆಂಗ್ಲ ಭಾಷೆಯ ಪರಿಜ್ಞಾನ ನಿಸ್ಸಂದೇಹವಾಗಿ ಅತ್ಯಗತ್ಯ. ಇದರಿಂದ ಭಾರತಕ್ಕೆ ಚೀನಾದಂತಹ ಬೃಹತ್ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸಿ ಹಲವಾರು ಕ್ಷೇತ್ರಗಳಲ್ಲಿ ಮೇಲುಗೈ ಸಾದಿಸಲು ಸಾಧ್ಯವಾಗಿದೆ. ಆದರೆ ಆಂಗ್ಲ ಭಾಷಾ ಜ್ಞಾನವಿದ್ದರೆ ಮಾತ್ರ ಹಣ ಗಳಿಕೆಯ ಶಕ್ತಿ ಹೆಚ್ಚುತ್ತದೆ ಎನ್ನುವ ಪರಿಜ್ಞಾನವಿರುವ ಬಡ ವರ್ಗದ ತಾಯ್ತಂದೆಯರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವರ್ಗಾಯಿಸುತ್ತಾ ಬರುತ್ತಿದ್ದಾರೆ. ಇದೊಂದು ದುರಂತ. ಇದಕ್ಕೆ ಪರಿಹಾರವೆಂದರೆ ಕಲಿಕೆಯ ಆರಂಬಿಕ ಹಂತದಲ್ಲೇ ರಾಜ್ಯದ ಎಲ್ಲ ಶಾಲೆಗಳಿಗೂ ಏಕರೂಪಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಮತ್ತು ಒಂದನೇ ತರಗತಿಯಲ್ಲಿ ಕನ್ನಡ ಭಾಷೆಯನ್ನೇ ವ್ಯಾಪಕ ಮಾಧ್ಯಮವನ್ನಾಗಿ ಸ್ಥಾಪಿಸುವುದು.

ದೇಶದೆಲ್ಲೆಡೆ ಸರಕಾರಿ ಶಾಲೆಗಳ ಕ್ಲಾಸ್ ರೂಮುಗಳು ಭಣಗುಟ್ಟುತ್ತಿವೆ. ಇದನ್ನು ಗಮನಿಸಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಬಿಸುವ ಹುನ್ನಾರ ನಡೆದಿದೆ. ಇದೊಂದು ತಪ್ಪು ಹೆಜ್ಜೆ, ಮಾತ್ರವಲ್ಲ, ಶಿಕ್ಷಣ ವ್ಯವಸ್ಥೆಗೆ ಒಂದು ಕಪ್ಪು ಚುಕ್ಕೆ.
ಹೆತ್ತವರ ಕನಸಿನ ದಾಳಗಳಾಗುತ್ತಿವೆ ಈಗಿನ ಮಕ್ಕಳು. ಆರಂಬಿಕ ಹಂತದಲ್ಲೇ ತಾಯ್ನುಡಿಯ ಮಾಧ್ಯಮದಿಂದ ವಂಚಿತರಾದ ಮಕ್ಕಳು ನೀರಿನಿಂದ ಹೊರಬಿದ್ದ ಮೀನುಗಳಂತಾಗುತ್ತವೆ. ‘ಜಾನಿ ಜಾನಿ ಎಸ್, ಪಪ್ಪ’ ಎಂದು ತೊದಲುತ್ತಾ ಉರು ಹೊಡೆಯುವ ಯಂತ್ರಗಳಾಗುತ್ತವೆ. ‘ಸ್ವಾಮಿ ದೇವನೆ ಲೋಕಪಾಲನೆ’ ಎನ್ನುತ್ತಾ ಅರ್ಥವನ್ನು ಕಲ್ಪಿಸಿಕೊಂಡು ಉಲಿಯುವ ಚಿಲುಮೆಗಳನ್ನು ನಾವೀಗ ಸೃಷ್ಟಿಸಬೇಕಾಗಿದೆ.

ರಾಜ್ಯದ, ಜಿಲ್ಲೆಗಳ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ಬಗ್ಗೆ ಗಂಬಿರ ಚಿಂತನೆಗಳಾಗಬೇಕಿದೆ. ಆದರೆ ಈಗ ಈ ಸಮ್ಮೇಳನಗಳಲ್ಲಿ ಭಾಗವಹಿಸಿ ಬಂದ ಹೆಚ್ಚಿನವರು ಅಲ್ಲಿಯ ಭೋಜನ ವ್ಯವಸ್ಥೆ , ಮೆರವಣಿಗೆ, ಆಮಂತ್ರಣ ಪತ್ರಿಕೆಯ ಬಿಡುಗಡೆ, ಚಪ್ಪರ ಮುಹೂರ್ತ ಇವುಗಳ ವೈಭವಗಳನ್ನು ವಿಶ್ಲೇಷಿಸುತ್ತಾರೆ.

ಹೌದು. ಆಂಗ್ಲ ಭಾಷೆ ಅನಿವಾರ್ಯ. ಆದರೆ ಒಂದನೇ ಕ್ಲಾಸಿನಿಂದಲೇ ಕಲಿಕೆಯ ಮಾಧ್ಯಮವನ್ನಾಗಿ ಅದನ್ನು ಹೇರುವುದರಿಂದ ಆಗದೇ ಅಚಾತುರ್ಯ? ನಮ್ಮ ದುರ್ದೈವ-ಸಚಿವಾಲಯಗಳಲ್ಲಾಗಲೀ, ಪ್ರಾದಿಕಾರಗಳಲ್ಲಾಗಲೀ, ಸಮ್ಮೇಳನಗಳಲ್ಲೇ ಆಗಲೀ ಈ ಬಗ್ಗೆ ಗುಡುಗುವವರೇ ಇಲ್ಲ. ನಮ್ಮ ನಿಮ್ಮಂತೆ ಗೊಣಗುವವರೇ ಎಲ್ಲ.

ಉದಯವಾಣಿ ೨೧ ಮಾರ್ಚಿ ೨೦೧೦ ಪು ೬

Post a comment or leave a trackback: Trackback URL.

ಟಿಪ್ಪಣಿಗಳು

 • ಪಂಡಿತಾರಾಧ್ಯ  On ಏಪ್ರಿಲ್ 2, 2010 at 3:50 ಫೂರ್ವಾಹ್ನ

  ಇದು ಫೆಬ್ರುವರಿ ೨೧ರಂದು ಗದಗಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದ ಕರಪತ್ರ

  ಮಾತೃಭಾಷೆಯಲ್ಲಿಯೇ ಪ್ರ್ರಾಥಮಿಕ ಶಿಕ್ಷಣ
  ವಿಶ್ವ ತಾಯಿನುಡಿಯ ದಿನದ(ಫೆ ೨೧ )
  ಅರ್ಥಪೂರ್ಣ ಆಚರಣೆಯಾಗಲಿ

  ಕುಮಾರವ್ಯಾಸನ ಗದಗಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನ ವಿಶಿಷ್ಟವಾಗಿದೆ. ಸಮ್ಮೇಳನದ ಕೊನೆಯ ದಿನ ವಿಶ್ವ ತಾಯಿನುಡಿ ದಿನವಾಗಿದೆ. ಎಲ್ಲರಿಗೂ ತಾಯಿನುಡಿಯ ದಿನದ ನಲ್ಮೆಯ ಹಾರೈಕೆಗಳು.
  ೧೯೫೨ರ ಫೆಬ್ರುವರಿ ೨೧ರಂದು ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶದಲ್ಲಿ ಬಂಗಾಳಿಗಳ ಮೇಲೆ ಉರ್ದುವನ್ನು ರಾಷ್ಟ್ರಭಾಷೆಯಾಗಿ ಹೇರುವುದರ ವಿರುದ್ಧ ಬಂಗಾಳಿಗಳು ಹೋರಾಟ ನಡೆಸಿ ಐವರು ಹುತಾತ್ಮರಾಗಿ ತಮ್ಮ ತಾಯಿನುಡಿಯಾದ ಬಂಗಾಳಿ ಭಾಷೆಗೆ ರಾಷ್ಟ್ರಭಾಷೆಯ ಗೌರವವನ್ನು ಪಡೆದರು. ಆ ದಿನವನ್ನು ಸಂಯುಕ್ತ ರಾಷ್ಟ್ರಗಳ ಶಿಕ್ಷಣ-ವಿಜ್ಞಾನ-ಸಂಸ್ಕೃತಿ ಸಂಸ್ಥೆ (ಯುನೆಸ್ಕೊ) ವಿಶ್ವ ತಾಯಿನುಡಿಯ ದಿನ ಎಂದು ಮಾನ್ಯಮಾಡಿದೆ. ಇಂದು ವಿಶ್ವವೇ ತಾಯಿನುಡಿಯ ದಿನವನ್ನು ಆಚರಿಸುತ್ತಿದೆ.
  ಕನ್ನಡಿಗರು ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿಯೇ ಏಕೀಕರಣದ ಹೋರಾಟವನ್ನೂ ನಡೆಸಿದ ಫಲವಾಗಿ ಕನ್ನಡನಾಡು ಒಂದಾಗಿದೆ. ಆದರೆ ಈಗ ಕನ್ನಡ ಭಾಷೆಗೆ ಹೊರಗಿನಿಂದ ಮಾತ್ರವಲ್ಲ ಒಳಗಿನಿಂದಲೂ ಅಪಾಯಗಳಿವೆ. ಆದ್ದರಿಂದ ಇಂದು ನಾವು ಕನ್ನಡವನ್ನು ಕಾಪಾಡಿಕೊಳ್ಳುವ ಸಂಕಲ್ಪವನ್ನು ಮಾಡಬೇಕು. ಜಾಗತೀಕರಣವೆಂಬ ವಾಣಿಜ್ಯ ಹೆಮ್ಮಾರಿಯಿಂದ ತಮ್ಮ ತಾಯಿನುಡಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಜಗತ್ತಿನ ಎಲ್ಲ ಭಾಷೆಗಳ ಪ್ರಜ್ಞಾವಂತರ ಜೊತೆ ಕೈಗೂಡಿಸಬೇಕು.
  ೧೯೮೦ರ ದಶಕದಲ್ಲಿ ನಡೆದ ಗೋಕಾಕ ವರದಿಯ ಹೋರಾಟದ ಫಲವಾಗಿ ರಾಜ್ಯ ಸರಕಾರ ರೂಪಿಸಿದ ಶಿಕ್ಷಣ ನೀತಿಯನ್ನು ರಾಜ್ಯ ಉಚ್ಚನ್ಯಾಯಾಲಯವು ಕೆಲವು ಬದಲಾವಣೆಗಳೊಂದಿಗೆ ಅನುಮೋದಿಸಿತು. ಎಲ್ಲರೂ ತಮ್ಮ ತಾಯಿನುಡಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂಬುದು ಜಗತ್ತಿನ ಎಲ್ಲ ಪ್ರಮುಖ ಶಿಕ್ಷಣ ತಜ್ಞರು ಪ್ರತಿಪಾದಿಸುವ ಶಿಕ್ಷಣನೀತಿ. ಅದನ್ನು ನ್ಯಾಯಾಲಯವು ಎತ್ತಿಹಿಡಿದು ಕರ್ನಾಟಕದಲ್ಲಿ ನೆಲಸಿರುವ ಕನ್ನಡ ಮಾತೃಭಾಷೆಯಲ್ಲದವರಿಗೆ ಪ್ರದೇಶಭಾಷೆಯಾದ ಕನ್ನಡವೇ ಎರಡನೆಯ ಮಾತೃಭಾಷೆ. ಅಂಥವರಿಗೆ ತಮ್ಮ ಸ್ವಂತ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವಿಲ್ಲದಿದ್ದಾಗ ಕನ್ನಡದಲ್ಲಿ ಶಿಕ್ಷಣ ನೀಡುವುದು ಅವರ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಷ್ಟೇ ಪರಿಣಾಮಕಾರಿ ಎಂದೂ ಅದು ಸ್ಪಷ್ಟಪಡಿಸಿತು. ಈ ತೀರ್ಪನ್ನು ಸರ್ವೋನ್ನತ ನ್ಯಾಯಾಲಯವೂ ಅನುಮೋದಿಸಿತು.
  ಈ ತೀರ್ಪಿನ ಪ್ರಕಾರ ರಾಜ್ಯದಲ್ಲಿ ಮಕ್ಕಳು ಪ್ರಾಥಮಿಕ ಒಂದನೆಯ ತರಗತಿಯಿಂದ ತಮ್ಮ ಮಾತೃಭಾಷೆಯಲ್ಲಿ ಮಾತ್ರ ಕಲಿಯುತ್ತಾರೆ. ಈ ಹಂತದಲ್ಲಿ ಕನ್ನಡೇತರರಿಗೆ ಕನ್ನಡ ಕಡಾಯವಲ್ಲ. ಅವರು ಕನ್ನಡ ಮಾತೃಭಾಷೆಯ ಮಕ್ಕಳು ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುತ್ತಾರೆ. ಇದರಿಂದ ಕನ್ನಡೇತರರ ಮಾತೃಭಾಷೆಯ ವಿರುದ್ಧ ಒಂದನೆಯ ತರಗತಿಯಿಂದ ಕನ್ನಡವನ್ನು ಹೇರಿದಂತಾಗುವುದಿಲ್ಲ. ಐದನೆಯ ತರಗತಿಯಿಂದ ಎಲ್ಲರೂ ಸಮಾನವಾಗಿ ಇಂಗ್ಲಿಷ್ ಕಲಿಯಬಹುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ಅದಕ್ಕೆ ಅನುಗುಣವಾಗಿ ಪುನರ್ ರೂಪಿತವಾದ ಕರ್ನಾಟಕ ಸರಕಾರದ ಭಾಷಾನೀತಿಯ ಜಾರಿಗೆ ಸರ್ವೋನ್ನತ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಮೊಕದ್ದಮೆಗಳಿವೆ ಎನ್ನು ವಾದವನ್ನು ಮನ್ನಿಸಿದ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಸರ್ವೋನ್ನತ ನ್ಯಾಯಾಲಯದಲ್ಲಿದ್ದ ಮೊಕದ್ದಮೆಗಳು ನಿವಾರಣೆಯಾದ ಮೇಲೂ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವಾಗಲಿಲ್ಲ.
  ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಶಿಕ್ಷಣ ತಜ್ಞರು ಅನುಮೋದಿಸದಿದ್ದರೂ ಸಾಮಾಜಿಕ ನ್ಯಾಯಕ್ಕಾಗಿ ಹಾಗೆ ಮಾಡಬೇಕೆಂದು ಕೆಲವು ಕನ್ನಡ ಚಿಂತಕರ ಒತ್ತಾಯವನ್ನು ಅಂದಿನ ಮುಖ್ಯಮಂತ್ರಿ ಶ್ರೀ ಧರ್ಮಸಿಂಗ್ಅವರ ಸರಕಾರ ಅಂಗೀಕರಿಸಿತು. ಒಂದನೆಯ ತರಗತಿಯಿಂದಲೇ ಕಲಿಸಿದರೆ ತಮ್ಮ ಮಕ್ಕಳು ಇಂಗ್ಲಿಷನ್ನು ಚೆನ್ನಾಗಿ ಕಲಿಯಬಹುದೆಂಬ ಪೋಷಕರ ಆಸೆಯೂ ಇದಕ್ಕೆ ಕಾರಣವಾಗಿದೆ. ಇದರಿಂದ ಕನ್ನಡೇತರ ಮಾತೃಭಾಷೆಯ ಮಕ್ಕಳು ಮೂರನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಲಿಯುವ ಮುನ್ನವೇ ಅಂದರೆ ಒಂದನೆಯ ತರಗತಿಯಿಂದಲೇ ಆಂಗ್ಲೊ ಇಂಡಿಯನ್ನರನ್ನು ಬಿಟ್ಟರೆ ಬೇರೆ ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಪರಿಸರದ ಭಾಷೆಯೂ ಅಲ್ಲದ ಇಂಗ್ಲಿಷನ್ನು ಕಲಿಯುವ ವಿಲಕ್ಷಣ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಕೀಳರಿಮೆಯನ್ನು ಆರಂಭದಲ್ಲಿಯೇ ಬಿತ್ತಿದಂತಾಗಿದೆ.
  ಉಚ್ಚ ನ್ಯಾಯಾಲಯದ ಪೂರ್ಣಪೀಠವು ಹೊಸದಾಗಿ ಇಡೀ ಪ್ರಕರಣವನ್ನು ಆಲಿಸಿ ನೀಡಿದ ತೀರ್ಪು ಸರಕಾರದ ಭಾಷಾನೀತಿಯನ್ನು ಸರಕಾರಿ ಶಾಲೆಗಳಿಗೆ ಮಿತಗೊಳಿಸಿತು. ಖಾಸಗಿ ಶಾಲೆಗಳಿಗೆ ಒಂದನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಅವಕಾಶ ಕಲ್ಪಿಸಿ ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ; ಇಲ್ಲದವರಿಗೆ ಕನ್ನಡ ಮಾಧ್ಯಮ ಸರಕಾರಿ ಶಾಲೆ ಎನ್ನುವ ಶೈಕ್ಷಣಿಕವಲ್ಲದ ಹೊಸ ಸಾಮಾಜಿಕ ಭೇದವನ್ನು ಹುಟ್ಟುಹಾಕಿತು.
  ಮಾತೃಭಾಷೆಯಲ್ಲಿ ಪ್ರ್ರಾಥಮಿಕ ಶಿಕ್ಷಣ ಪಡೆಯುವ ಮಗು ಭಾಷೆಯನ್ನು ಕಲಿಯುವ ಸಾಮರ್ಥ್ಯವನ್ನೂ ಕಲಿಯುತ್ತದೆ. ಮಾತೃಭಾಷೆಯನ್ನು ಚೆನ್ನಾಗಿ ಕಲಿತ ಅನಂತರ ಎರಡನೆಯ ಭಾಷೆಯನ್ನು ಕಲಿಯಲು ಅದರಿಂದ ನೆರವಾಗುತ್ತದೆ ಎನ್ನುವುದು ಶಿಕ್ಷಣ ತಜ್ಞರ ಸ್ಪಷ್ಟ ಅಭಿಪ್ರಾಯ. ಅಲ್ಲದೆ ಮಗು ಶಾಲೆಗೆ ಬರುವ ಮುನ್ನವೇ ತನ್ನ ಮಾತೃಭಾಷೆ, ಪರಿಸರದ ಭಾಷೆಯಲ್ಲಿ ಗ್ರಹಿಸುವ ಮಾತನಾಡುವ ಸಾಮರ್ಥ್ಯ ಪಡೆದಿರುತ್ತದೆ. ಶಾಲೆಯಲ್ಲಿ ಅದು ಆ ಭಾಷೆಯಲ್ಲಿ ಓದುವ ಬರೆಯುವ ಕೌಶಲಗಳನ್ನು ಕಲಿಯುತ್ತದೆ. ಆದರೆ ಒಂದನೆಯ ತರಗತಿಯಿಂದ ಮಾತೃಭಾಷೆಯಲ್ಲದ, ಪರಿಸರದ ಭಾಷೆಯೂ ಅಲ್ಲದ ಇಂಗ್ಲಿಷನ್ನು ಓದಲು ಬರೆಯಲು ಕಲಿಸುವುದರಿಂದ ಮಗುವಿನ ಪಾಲಿಗೆ ಇಂಗ್ಲಿಷ್ ಕಲಿಕೆ ಗಗನ ಕುಸುಮವೇ ಆಗಿದೆ. ಆದ್ದರಿಂದ ತಜ್ಞರು ಹೇಳುವಂತೆ ಮೊದಲು ಮಗು ತನ್ನ ಮಾತೃಭಾಷೆ ಅಥವಾ ಎರಡನೆಯ ಮಾತೃಭಾಷೆಯಾದ ಪರಿಸರದ ಭಾಷೆ ಅಥವಾ ರಾಜ್ಯ ಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಅನಂತರ ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಇಂಗ್ಲಿಷನ್ನು ಕೇಳುವ, ಮಾತನಾಡುವ ಕೌಶಲಗಳನ್ನು ಕಲಿಸಬೇಕು. ಈ ಕೌಶಲಗಳು ಬಂದ ಅನಂತರವೇ ಇಂಗ್ಲಿಷಿನಲ್ಲಿ ಓದುವ, ಬರೆಯುವ ಕೌಶಲಗಳನ್ನು ಕಲಿಸಬಹುದು. ಆಗ ಮಾತ್ರ ಇಂಗ್ಲಿಷ್ ಕಲಿಕೆ ಸಾರ್ಥಕವಾಗುತ್ತದೆ.
  ಬಹುಜನ ತಂದೆತಾಯಿಗಳ ಅಪೇಕ್ಷೆಯಂತೆ ಒಂದನೆಯ ತರಗತಿಯಿಂದಲೇ ಮಾತೃಭಾಷೆಯ ಜೊತೆ ಇಂಗ್ಲಿಷ್ಅನ್ನೂ ಕಲಿಸಲು ಪ್ರಯತ್ನಿಸುವುದರಿಂದ ಎರಡು ಭಾಷೆಗಳ ಕಲಿಕೆಯೂ ಕುಂದುತ್ತದೆ ಎಂದು ಪ್ರತಿಪಾದಿಸಿರುವ ವಿಶ್ವಬ್ಯಾಂಕ್ ಶಿಕ್ಷಣ ತಜ್ಞರಾದ ಹೆಲನ್ ಅಬಾದ್ಜಿ ಅವರ ಅಧ್ಯಯನದ ಬಗ್ಗೆ ಸ್ವಾಮಿನಾಥನ್ ಅಯ್ಯರ್ ಅವರು ತಮ್ಮ ಜನಪ್ರಿಯ ಅಂಕಣದಲ್ಲಿ ಬರೆದಿದ್ದಾರೆ(‘ಸ್ವಾಮಿನೊಮಿಕ್ಸ್’ – ‘ದಿ ಫಸ್ಟ್ ಲರ್ನಿಂಗ್ ಈಸ್ ಬೆಸ್ಟ್ ಇನ್ ಮದರ್ ಟಂಗ್ ‘ ದಿ ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಪು ೧೪ ಜನವರಿ ೩೧ ೨೦೧೦).
  ಕರ್ನಾಟಕದ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಕರ್ನಾಟಕ ಸರಕಾರದ ಶಿಕ್ಷಣ ನೀತಿಯನ್ನು ಉಚ್ಚನ್ಯಾಯಾಲಯದಲ್ಲಿ ಬೆಂಬಲಿಸಿದಂತೆ ಸರ್ವೋನ್ನತ ನ್ಯಾಯಾಲಯದಲ್ಲಿಯೂ ಬೆಂಬಲಿಸಿ ಭಾಗಿಗಳಾಗಿದ್ದಾರೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯಿಲಿ ಅವರಿಂದ ಜಾರಿಗೆ ಬಂದ ಕರ್ನಾಟಕ ಸರಕಾರ ಭಾಷಾನೀತಿಯನ್ನು ಪಕ್ಷಭೇದವಿಲ್ಲದೆ ಎಲ್ಲ ಸರಕಾರಗಳು ಬೆಂಬಲಿಸುತ್ತ ಬಂದಿರುವುದು ಸಂತೋಷದ ಸಂಗತಿ. ಈ ವಿಷಯದಲ್ಲಿ ಇಂದಿನ ಕರ್ನಾಟಕ ಸರಕಾರ ಮತ್ತು ಪ್ರಾಥಮಿಕ ಶಿಕ್ಷಣ ಮಂತ್ರಿ ಶ್ರೀ ವಿಶ್ವನಾಥ ಕಾಗೇರಿ ಅವರ ನಿಲುವು ಮೆಚ್ಚುವಂಥದು.
  ಇಂದು ಈ ಸಮ್ಮೇಳನದಲ್ಲಿ ‘ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು’ ಎನ್ನುವ ನಿರ್ಣಯವನ್ನು ಅಂಗೀಕರಿಸಿ ವಿಶ್ವ ತಾಯಿನುಡಿಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು.

  ಮತಧರ್ಮ ನಿರಪೇಕ್ಷ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರೂ ಸಮಾನ ಗೌರವದಲ್ಲಿ ಭಾಗವಹಿಸುವಂತಿರಬೇಕು
  ವೈಯಕ್ತಿಕ ಧಾರ್ಮಿಕ ನಂಬಿಕೆಗಳ ‘ದಿವ್ಯಸನ್ನಿ’ಯು ಇಂದು ಇಲ್ಲಿಗು ಹಾಯಿತೆ ಎಂದು ಯಾರೂ ತಲೆತಗ್ಗಿಸುವಂತಾಗಕೂಡದು

  ಪ್ರೀತಿಯಿಂದ
  ಡಾ ಪಂಡಿತಾರಾಧ್ಯ
  ಕನ್ನಡ ಪ್ರಾಧ್ಯಾಪಕ
  ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
  ಮಾನಸಗಂಗೋತ್ರಿ
  ಮೈಸೂರು ೫೬೦೦೦೬

  ಗದಗ*
  ೧೯-೨೧ ಫೆಬ್ರುವರಿ ೨೦೧೦
  ರಾಷ್ಟ್ರೀಯ ಶಕ ೧೯೩೧ ಶಿಶಿರ-ವಸಂತ, ಮಾಘ ೩೦-ಫಾಲ್ಗುಣ
  ೦ ಪಂಚಮಿ-ಸಪ್ತಮಿ, ಅಶ್ವಿನಿ-ಭರಣಿ, ಶುಕ್ರವಾರ-ಭಾನುವಾರ
  ದೂರವಾಣಿ ೯೪೪೮೪೮೧೪೦೨
  ವಿ ಅಂಚೆ panditaradhya@yahoo.com

  • ಜಿ ಎನ್ ಅಶೋಕವರ್ಧನ  On ಏಪ್ರಿಲ್ 4, 2010 at 10:07 ಅಪರಾಹ್ನ

   ಮಾತೃಭಾಷೆಯಲ್ಲಿ ಶುಷ್ಕಣ

   ಉಡುಪಿ ಸಮ್ಮೇಳನಕ್ಕೂ ಎರಡು ದಿನ ಮೊದಲು ಸಂಪನ್ನಗೊಂಡ ದಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ಶಿಕ್ಷಣ ಗೋಷ್ಠಿಯೊಂದರಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ| ವಿಲ್ಯಂ ಡಿಸಿಲ್ವಾ ಅವರು ಹೇಳಿದ ಮಾತನ್ನು ಸ್ಮರಿಸಿಕೊಳ್ಳುವಾಗ ಐತಾಳರ ಮತ್ತು ಆರಾಧ್ಯರ ವಾದಗಳು ಕೇವಲ ಇಂಗ್ಲಿಷ್ ವಿರೋಧದ ಒತ್ತಡದಲ್ಲಿ ಕನ್ನಡವನ್ನು ಮಾತೃಭಾಷೆಯೆಂದು ಹೇರುವ ತಪ್ಪು ಕಾಣುತ್ತದೆ. ಈಗಾಗಲೇ ನಮ್ಮ ರಾಜ್ಯದಲ್ಲಿರುವ (ಹಿಂದಿ ಬಿಡಿ, ಅದಕ್ಕೆ ರಾಷ್ಠ್ರಭಾಷೆಯ ಉರ್ಕು ಕಟ್ಟಿದ್ದೇವೆ. ಬಿಚ್ಚಿ ಬಿಸಾಡದಂತೆ ದಿಲ್ಲಿ ದರ್ಬಾರ್ ಕಾಪಾಡುತ್ತದೆ. ಇನ್ನು ಅಹಂ ಸಂಸ್ಕೃತಂ ವಧಾಮಿಗಳ ಕಥೆಯೂ ಇಲ್ಲಿ ಬೇಡ) ಉರ್ದು, ಕೊಂಕಣಿ ಮತ್ತು ಬರುವ ವಿದ್ಯಾ ವರ್ಷದಿಂದ ತುಳು (ಇನ್ನೆಂದೋ ಕೊಡವ, ಬ್ಯಾರೀ, ಹವ್ಯಕ, ಗೌಡೀ) ಮುಂತಾದ ನಿಜ ಮಾತೃಭಾಷೆಗಳು ಭಾಷಾ ಪೀಠದಿಂದ ಮಾಧ್ಯಮ ಪೀಠಕ್ಕೆ ಏರಿದ ಹಾಗೇ. ನಾನು ಕನ್ನಡ ವಿರೋಧಿಯಲ್ಲ ಆದರೆ ಪ್ರಾಂತೀಯ ಮಿತಿ ಮೀರಿದ ಇನ್ನೇನೋ ದಾರಿ (ಕ್ಷಮಿಸಿ, ನನಗೆ ಗೊತ್ತಿಲ್ಲ) ಇರಬೇಕೆಂದು ಭಾವಿಸುತ್ತೇನೆ ಮತ್ತು ಚರ್ಚಾ ವೇದಿಕೆಗೆ ಡಾ| ವಿಲ್ಯಂ ಡಿಸಿಲ್ವಾರನ್ನು ಆಹ್ವಾನಿಸುತ್ತೇನೆ.
   ಅಶೋಕವರ್ಧನ

 • ಮಹಮದ್ ಇಸ್ಮಾಯಿಲ್  On ಏಪ್ರಿಲ್ 4, 2010 at 10:57 ಅಪರಾಹ್ನ

  ಮಾತೃಭಾಷೆಯಲ್ಲಿ ಶುಷ್ಕಣ

  ಎಲ್ಲರಿಗೂ ನಮಸ್ಕಾರ

  ನನ್ನದು ಸ್ವಲ್ಪ ವಿಷಯಾಂತರದಂತೆ ಕಾಣಬಹುದು. ಕನ್ನಡ ಮಾಧ್ಯಮದ ಪರವಾಗಿ ಮಾತನಾಡುವವರು ಉಳಿದ ಭಾಷೆಗಳನ್ನು (ಅಶೋಕರು ಸೂಚಿಸಿದಂಥ ಭಾಷೆಗಳು) ಮರೆತಿರುವುದು ಒಂದು ಕಡೆಯಾದರೆ ಇಂಗ್ಲಿಷ್ ಕಲಿಸುವಿಕೆಯ ವೈಫಲ್ಯದ ಕುರಿತಂತೆ ಶೈಕ್ಷಣಿಕ ಕಾರಣಗಳಿಗಾಗಿಯೂ ಕಾಳಜಿ ವಹಿಸದೇ ಇರುವುದು ಮತ್ತೊಂದು ಸಮಸ್ಯೆ.

  ನಾನೂ ಸೇರಿದಂತೆ ಕನ್ನಡ ಮಾಧ್ಯಮದ ಕಲಿತ ಅನೇಕರು ಐದನೇ ತರಗತಿಯಿಂದ ಪದವಿ ಎರಡನೇ ವರ್ಷದ ತನಕ ಸತತವಾಗಿ ಇಂಗ್ಲಿಷ ಅನ್ನು ಒಂದು ಭಾಷೆಯಾಗಿ ಕಲಿಯುತ್ತಲೇ ಇರುತ್ತೇವೆ. ಆದರೆ ನಮಗೆ ಇಂಗ್ಲಿಷ್ ನಲ್ಲೊಂದು ಸರಿಯಾದ ವಾಕ್ಯ ಬರೆಯಲು ಸಾಧ್ಯವಾಗುವುದು ಈ ಕಲಿಕೆಯನ್ನು ತ್ಯಜಿಸಿ ನಿಜ ಅರ್ಥದಲ್ಲಿ ಇಂಗ್ಲಿಷ್ ಕಲಿಯಲು ಆರಂಭಿಸಿದ ನಂತರವಷ್ಟೇ. ಅಂದರೆ ಹತ್ತು ವರ್ಷಗಳ ಸತತ ಇಂಗ್ಲಿಷ್ ಕಲಿಸುವಿಕೆಯ ಕ್ರಿಯೆಯಲ್ಲಿ ನಾವು ಕಲಿತದ್ದೇನು? ಈ ಪ್ರಶ್ನೆಯನ್ನು ಎತ್ತಿಕೊಂಡು ಯಾರೂ ಮಾತನಾಡುವುದಿಲ್ಲ.

  ಹೀಗೆ ಇಂಗ್ಲಿಷ್ ಕಲಿಸದೇ ಇರುವ ಕಲಿಸುವಿಕೆಯ ಕೊರತೆಗಳನ್ನು ಚರ್ಚಿಸಬೇಕಾದುದನ್ನು ಮರೆತು ನಮ್ಮ ರಾಜಕಾರಣಿಗಳಂತೆ ನಾವೂ ಸಮಸ್ಯೆಯ ಪರಿಹಾರಕ್ಕೆ ಮಂತ್ರದಂಡಗಳನ್ನು ಹುಡುಕುತ್ತೇವೆ. ಮಾತೃಭಾಷೆಯಲ್ಲಿ ಕಲಿಸಿದರೆ ಎಲ್ಲವೂ ಅರ್ಥವಾಗುತ್ತದೆ. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಿದರೆ ಹೊಸ ಕಾಲದ ಅಗತ್ಯಗಳನ್ನು ಪೂರೈಸಲು ಅನುಕೂಲ ಎಂಬಂಥ ವಾದಗಳು ಹುಟ್ಟಿಕೊಳ್ಳುವುದೇ ಈ ಮಂತ್ರದಂಡಗಳ ಹುಡುಕಾಟದಲ್ಲಿ. ನನ್ನ ಮಂತ್ರದಂಡದ ಪರಿಕಲ್ಪನೆಯನ್ನು ಸ್ವಲ್ಪ ವಿಸ್ತರಿಸಬೇಕು ಅನಿಸುತ್ತದೆ. ನಮ್ಮಲ್ಲಿ ಬಡತನ ನಿವಾರಣೆಗೆ ಸರ್ಕಾರಗಳು ಅನುಸರಿಸುವ ‘ಜನಪ್ರಿಯ ಕಾರ್ಯಕ್ರಮ’ಗಳಿಗೆ ಸ್ವಲ್ಪ ಮಟ್ಟಿಗೆ ಈ ಮಂತ್ರದಂಡದ ಗುಣವಿದೆ. ಬಡತನ ನಿವಾರಣೆಗೆ ಬಳಕೆಯಾಗುವ ಬಹುಮುಖ್ಯ ಮಂತ್ರದಂಡವೆಂದರೆ ಬಡತನ ರೇಖೆಯನ್ನೇ ಪರಿಷ್ಕರಿಸಿಬಿಡುವುದು. ಬಾಲಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವ ವಿಷಯ ಬಂದಾಗ ಅಸಾಂಪ್ರದಾಯಿಕ ಶಿಕ್ಷಣದ ಮೂಲಕ ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡುವ ಬಗ್ಗೆ ಹೇಳುವುದು. ಉದ್ಯೋಗ ಸೃಷ್ಟಿಯ ವಿಷಯ ಬಂದಾಗ ಸ್ವಉದ್ಯೋಗದ ಬಗ್ಗೆ ಹೇಳುವುದು. ಹೀಗೆ ರಾಜಕಾರಣಿಗಳ ಮಂತ್ರದಂಡದ ಬಗ್ಗೆ ಅನೇಕ ಉದಾಹರಣೆಗಳನ್ನು ಕೊಡಬಹುದು.

  ಕನ್ನಡ ಮಾಧ್ಯಮದ ಶಿಕ್ಷಣದ ಅಗತ್ಯದ ಕುರಿತಂತೆ ಅದೆಷ್ಟನೆಯ ಸುತ್ತಿನ (ಇತ್ತೀಚಿನ) ಚರ್ಚೆಯೊಂದು ಆರಂಭವಾದುದು ಕರ್ನಾಟಕ ಸರ್ಕಾರ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ನಿರ್ಧಾರ ಕೈಗೊಂಡ ಮೇಲೆ. ಕರ್ನಾಟಕದಲ್ಲಿರುವ ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳು ಈ ವಾದ ವಿವಾದಗಳ ಜಂಜಾಟವೇ ಇಲ್ಲ. ಇಂಗ್ಲಿಷ್ ಮಾಧ್ಯಮಕ್ಕಾಗಿ ಹಿಂದೆಯೇ ಅನುಮತಿ ಪಡೆದುಕೊಂಡಿರುವ ಖಾಸಗಿ ಶಾಲೆಗಳಿಗೂ ಇದು ಬಾಧಕವಲ್ಲ. ಅನುಮತಿಯೇ ಪಡೆಯದೇ ಕೋರ್ಟಿನ ಆಶ್ರಯ ಪಡೆದ ಶಾಲೆಗಳಿಗೂ ಇದು ಭಾಧಕವಲ್ಲ. ಈ ಮಾಧ್ಯಮದ ಚರ್ಚೆ ಬಾಧಿಸುವುದು ಕೇವಲ ಸರ್ಕಾರಿ ಶಾಲೆಗಳನ್ನು ಮಾತ್ರ. ಇಲ್ಲಿಯೂ ಕುರಿ,ಕೋಳಿ, ಕೋಣಗಳು ಮಾತ್ರ ದೇವರಿಗೆ ಬಲಿಯಾದಂತೆ ಬಡವರ ಮಕ್ಕಳ ಮೇಲೆ ಎಲ್ಲ ಪ್ರಯೋಗಗಳೂ.

  ಈ ಎಲ್ಲಾ ಅಂಶಗಳನ್ನೂ ಸಮಗ್ರವಾಗಿ ಪರಿಗಣಿಸಿ ಚರ್ಚೆಯ ವೇದಿಕೆ ರೂಪಿಸಿಕೊಂಡರೆ ಚರ್ಚಿಸಲು ಉಳಿಯುವುದು ಸರಳ ಪ್ರಶ್ನೆ. ಜ್ಞಾನದ ಗ್ರಹಿಕೆಗೆ ಬೇಕಿರುವ ಭಾಷೆಗಳು ಮತ್ತು ಗ್ರಹಿಸಿದ ಜ್ಞಾನವನ್ನು ವಿಶ್ಲೇಷಿಸುವುದಕ್ಕೆ ಮತ್ತು ಅಭಿವ್ಯಕ್ತಿಸುವುದಕ್ಕೆ ಬೇಕಿರುವ ಭಾಷೆಗಳು ಯಾವುವು ಎಂಬುದು. ಈ ಪ್ರಶ್ನೆಗೆ ಅವರವರ ಮಟ್ಟದ ಉತ್ತರವನ್ನು ಪ್ರತಿಯೊಬ್ಬರೂ ಕಂಡುಕೊಳ್ಳಬಹುದು. ಇಂಥ ಉತ್ತರವನ್ನು ಕಂಡುಕೊಳ್ಳುವುದಕ್ಕೆ ಅಗತ್ಯವಾಗುವಂಥ ಶಿಕ್ಷಣ ಪದ್ಧತಿಯೊಂದು ನಮಗೆ ಅಗತ್ಯ ಎನಿಸುತ್ತದೆ. ಹಾಗಾದಾಗ ಎಲ್ಲ ಭಾಷೆಗಳೂ ಉಳಿಯುತ್ತವೆ. ಎಲ್ಲವೂ ಜ್ಞಾನಸೃಷ್ಟಿಯ ಮತ್ತು ಜ್ಞಾನದ ಅಭಿವ್ಯಕ್ತಿಯ ಭಾಷೆಗಳಾಗುತ್ತವೆ.

  ಇದನ್ನು ಹೇಗೆ ಸಾಧಿಸುವುದು ಎಂಬುದಕ್ಕೆ ರೋಡ್ ಮ್ಯಾಪ್ ಕೊಡುವಷ್ಟು ಜ್ಞಾನ ನನಗಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಭಾಷೆಯನ್ನು ಕಲಿಯುವ ಕ್ರಿಯೆ ಯಾವ ಭಾಷೆಗೂ ಮಾರಕವಾಗಿ ಪರಿಣಮಿಸದು ಎಂಬುದು ನನ್ನ ಅರಿವು. ತಂದೆಯ ಮಲೆಯಾಳಂ, ತಾಯಿಯ ಬ್ಯಾರಿ, ಶಾಲೆಯಲ್ಲಿ ಕಲಿತ ಕನ್ನಡ-ಇಂಗ್ಲಿಷು, ಮಂಗಳೂರಿನಲ್ಲಿ ಕಲಿತ ತುಳು, ಅಂದಿನ ಮದ್ರಾಸು ಅಥವಾ ಇಂದಿನ ಚೆನ್ನೈ ಕಲಿಸಿದ ತಮಿಳುಗಳೆಲ್ಲವೂ ನನಗೆ ಆಪ್ತವೇ. ಒಂದೊಂದು ಭಾಷೆಯೂ ಹಲವು ವಿಷಯಗಳನ್ನು ನನಗೆ ಕಲಿಸಿಕೊಟ್ಟಿದೆ. ಇಷ್ಟೆಲ್ಲಾ ಆಗಿಯೂ ನನಗೆ ಬಳಕೆಗೆ ಸುಲಲಿತವಾಗಿ ಒಗ್ಗುವುದು ಕನ್ನಡವೇ. ಹಾಗೆಂದು ಕನ್ನಡ ಮಾತ್ರ ಶ್ರೇಷ್ಠ ಎಂದು ವಾದಿಸಲು ನನಗಾಗದು. ನಾನೊಂದು ವೇಳೆ ಇಂಗ್ಲಿಷ್ ಮೀಡಿಯಂನಲ್ಲಿ ಕಲಿತಿದ್ದರೂ ಈ ಎಲ್ಲಾ ಭಾಷೆಗಳೂ ನನ್ನಿಂದ ದೂರವಾಗುತ್ತಿರಲಿಲ್ಲ ಎನಿಸುತ್ತದೆ.

  ಇಸ್ಮಾಯಿಲ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: