Monthly Archives: ಸೆಪ್ಟೆಂಬರ್ 2010

ಜೇನಿನಂಥ ಜನ

ಮಹಾಲಿಂಗ

ಕೆ.ಪಿ. ರಾವ್

ಕಂಪ್ಯೂಟರ್ ಕನ್ನಡ ಅಕ್ಷರಗಳ ‘ಈ ತಂದೆ’
ತನ್ನ ಬಗ್ಗೆ ತಾನೇ ಹೇಳುವ ಜೋಕು ಹೀಗಿದೆ:
‘ನನಗೆ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬರುವುದಿಲ್ಲಾ ಮಾರಾಯ್ರೆ.
ನನ ಟೈಪು ಸಿಕ್ಕಾಪಟ್ಟೆ ಸ್ಲೋ’.

ಶಬ್ದಗಳು ಕೇವಲ ಶಬ್ದಗಳಲ್ಲ. ನಮ್ಮ ಇದುವರೆಗಿನ ದೃಷ್ಟಿಕೋನಗಳು ಅವುಗಳಲ್ಲಿ ಅವಿತಿರುತ್ತವೆ.
‘ತಂತ್ರಜ್ಞಾನ ಮತ್ತು ಸಂಸ್ಕೃತಿ’- ಈ ಎರಡು ಶಬ್ದಗಳಲ್ಲಿ ಒಂದು ಬಗೆಯ ಹಗೆತನ ಇರಬೇಕು ಅಂತ ಇತ್ತಲ್ಲವೇ ನಮ್ಮ ನಂಬಿಕೆ? ಹಾಗಾಗಿ ಸಂಸ್ಕೃತಿಯನ್ನು ತಂತ್ರಜ್ಞಾನವು ಅತ್ಯಾಚಾರ ಮಾಡಿಬಿಡುತ್ತದೆ ಅಂತ ನಾವು ಹಲವು ವರ್ಷಗಳಿಂದ ಭ್ರಮಿಸಿದ್ದೇವೆ! ಕಂಪ್ಯೂಟರನ್ನು ಈಗ ತಂತ್ರಜ್ಞಾನದ ಜತೆಗೆ ಇಟ್ಟು ಬಿಡಲಾಗಿದೆ. ನಾಡಿನ ದೊಡ್ಡ ಸಂಸ್ಕೃತಿ ಚಿಂತಕರು ಕಂಪ್ಯೂಟರ್ ತಂತ್ರಜ್ಞರನ್ನು ‘ಕಂಪ್ಯೂಟರ್ ಕೂಲಿಗಳು’ ಅಂತ ತಪ್ಪಾಗಿ ಕರೆದು ವರ್ಷಗಳೇ ಆಗಿವೆ! ಅಧ್ಯಾತ್ಮ, ಕಲೆ, ಸಂಸ್ಕೃತಿ ಚಿಂತನೆ, ಕಂಪ್ಯೂಟರ್ ಇವೆಲ್ಲ ನಿಜವಾಗಿ ಬೇರೆ ಆಗಬೇಕಾಗಿಲ್ಲ. ಪ್ರತಿಭಾವಂತ ಮನಸ್ಸು ಇವನ್ನೆಲ್ಲ ಬೆಸೆದು ಬದುಕನ್ನು ತುಂಬಿದ ಜೇನಿನ ಹುಟ್ಟಾಗಿ ಮಾಡಬಲ್ಲುದು. ಕೆ.ಪಿ. ರಾಯರು ಇಂಥವರು. ಗುರುಪುರ ಬಳಿಯ ಕಿನ್ನಿಕಂಬಳ ಈ ‘ಕೆ’ ಅಕ್ಷರದೊಳಗೆ ಅಡಗಿ ಕುಳಿತಿದೆ.
ಕಿನ್ನಿಕಂಬಳ ಎಷ್ಟೊಂದು ‘ಕಿನ್ನಿ'(ಸಣ್ಣ) ಊರು! ಕತೆಗಾರ, ದೇಶದ ರಾಯಭಾರಿ ಎಲ್ಲಾ ಆಗಿದ್ದ ಬಾಗಲೋಡಿ ದೇವರಾಯ ಅಲ್ಲಿಯವರು. ಕನ್ನಡವೂ ಸೇರಿ ಭಾರತೀಯ ಭಾಷೆಗಳಿಗೆ ಅತ್ಯಂತ ಹೊಸಬಗೆಯ ತಂತ್ರಾಂಶಗಳನ್ನು ರೂಢಿಸಲು ಕಾರಣರಾದ ‘ಕನ್ನಡ ಸಾಫ್ಟ್ ವೇರ್ ಪಿತಾಮಹ’ ಕೆ.ಪಿ. ರಾಯರು ಅಲ್ಲಿಯವರು! ಗುರುಪುರ ಹೊಳೆಯ ನೀರು ಉಂಡ ಈ ಸಣ್ಣ ಊರು- ಹೇಗೆ ಇವರನ್ನೆಲ್ಲ ತನ್ನ ಬಸಿರಿಂದ ಮೂಡಿಸಿತು! ಬದುಕಿನ ಕಂಬಳದ ಓಟದಲ್ಲಿ ಕಳೆದುಹೋಗದಂತೆ ನೋಡಿಕೊಂಡಿತು!
ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಅಧ್ಯಾಪಕ ಪ್ರೊ. ಭವಾನಿಶಂಕರರು ನಿವೃತ್ತಿಯ ಕಡೆ ಸಾಗುತ್ತಿರುವ ಹಿರಿಯ. ಅವರು ಬರೆದ ‘ಕನ್ನಡದ ಈ ಲೋಕ’ ಪುಸ್ತಕ ನಿನ್ನೆ ಬಿಡುಗಡೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡವನ್ನು ಹೇಗೆ ಹೇಗೆ ಬಳಸಬಹುದೆಂದು ಹೈಸ್ಕೂಲು ವಿದ್ಯಾರ್ಥಿಗೂ ಅರ್ಥವಾಗುವಂತೆ ಈ ಪುಸ್ತಕ ಸರಳವಾಗಿ ಹೇಳುತ್ತದೆ. ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಬರೆಯುವ ವರ್ಣಲೋಕದ ಜಾಗದಲ್ಲಿ ಕಂಪ್ಯೂಟರ್ ಗೆ ‘ಸ್ಪೇಸ್’ ಎಲ್ಲಿ?’- ಹೀಗೆಂದು ನೀವು ಕೇಳಬಾರದು. ಅದು ಕಣ್ಣು, ಕೈ, ನಾಲಗೆಗಳಂತೆಯೇ ಮನುಷ್ಯನ ಪಾಲಿಗೆ; ಅವನ ಚಟುವಟಿಕೆಗಳ ವಿಸ್ತರಣೆಗೆ! ಹಾಗಾಗಿ ಭವಾನಿಶಂಕರರಂತಹ ಹಿರಿಯರು ಅತ್ಯುತ್ಸಾಹದಲ್ಲಿ ಮಾಡುವ ಕೆಲಸ, ಸಂಸ್ಕೃತಿಯ ಕೆಲಸವಾಗಿ ಕೊನೆಗೆ ಸಮುದಾಯದ ಒಳಗೆ ಕರಗಿಹೋಗುತ್ತದೆ.
‘ಬರಹ-ನುಡಿ’ ತಂತ್ರಾಂಶಗಳನ್ನು ನೀವಿಂದು ಕಂಪ್ಯೂಟರ್ ಟೈಪಿಂಗ್ ಅಂತಾ ಕರೀತೀರೋ? ಕನ್ನಡ-ತುಳು-ಕೊಂಕಣಿ ಸಂಸ್ಕೃತಿ ಕರೆಂಟು ಹರಿಸಬಲ್ಲ ವಯರು ಅಂತೀರೋ? ಬರಹ-ನುಡಿಗಳನ್ನು ನಾವು ಇಂದು ಹೀಗೆಲ್ಲ ಬಳಸುವುದಕ್ಕೆ ಮೂಲ ಕಾರಣ ಕೆ.ಪಿ. ರಾಯರ ಇಪ್ಪತ್ತೈದು ವರ್ಷದ ಹಿಂದಿನ ಸಂಶೋಧನೆ.
೧೯೮೮ರಲ್ಲಿ ಭಾರತದಲ್ಲಿ ಇಂಟರ್ ನೆಟ್ಟು, ವಿಂಡೋಸ್ ಎಂಥದ್ದೂ ಇಲ್ಲ. ಕಂಪ್ಯೂಟರ್ ಕಂಡವರೇ ಕಡಿಮೆ. ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀಧರ್ ಕನ್ನಡನಾಡನಿಂದ ಹೋಗುವಾಗ ಅವರ ಲ್ಯಾಪ್ ಟಾಪ್ ನ ಹೃದಯದಲ್ಲಿ ಸಣ್ಣ ಸಾಫ್ಟ್ ವೇರ್, ಒಂದು ಸ್ವಲ್ಪ ಜಾಗವನ್ನು ಆವರಿಸಿ ಕುಳಿತಿತ್ತು! ಅದನ್ನವರು ಅಮೆರಿಕದ ಅಂತರಜಾಲದಲ್ಲಿ ಕೂರಿಸಿ ಜಗ ಸುತ್ತಲು ಕಳುಹಿಸಿದರು. ಇಂದು ಇಂತಹ ಕೆಲಸ ಕ್ಷಣಕ್ಷಣಕ್ಕೂ ಸಾವಿರಾರು ನಡೆಯುತ್ತದೆ. ಆದರೆ ಶ್ರೀಧರ್ ಜಗಕ್ಕೆ ಬಿತ್ತಿದ ಆ ಸಾಫ್ಟ್ ವೇರ್ ಕನ್ನಡವನ್ನು ಕಂಪ್ಯೂಟರಲ್ಲಿ ಬಳಸುವುದಕ್ಕೆ ಇದ್ದ ಮೊದಲ ಸಾಧನವಾಗಿತ್ತು. ಅದರ ಹೆಸರು ‘ಸೇಡಿಯಾಪು’- ವಿಟ್ಲದ ಸಮೀಪದ ಒಂದು ಹಳ್ಳಿ!


ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಕಲಿಸುತ್ತಿದ್ದ ಶ್ರೇಷ್ಠ ಸಾಹಿತಿ ಪಂಡಿತ ಸೇಡಿಯಾಪು ಕೃಷ್ಣಭಟ್ಟ. ಅವರನ್ನು ಪ್ರೀತಿಸಿದ್ದ ವಿದ್ಯಾರ್ಥಿ ದಿನಾ ಕಿನ್ನಿಕಂಬಳದಿಂದ ಕಾಲೇಜಿಗೆ ಬರುತ್ತಿದ್ದ ಪದ್ಮನಾಭ. ಸೇಡಿಯಾಪು ಹೇಳುತ್ತಿದ್ದರು ‘ಅಕ್ಷರಗಳನ್ನು ಬದಲಾಯಿಸುವ ಗೊಡವೆ ನಿನಗೆ ಬೇಡ. ಜನ ಹಾಗೆಲ್ಲ ಅದನ್ನು ಒಪ್ಪುವುದಿಲ್ಲ. ತಂತ್ರಜ್ಞಾನಕ್ಕಾಗಿ ಭಾಷೆ ಬದಲುವುದಲ್ಲ. ಭಾಷೆಗಾಗಿ ತಂತ್ರಜ್ಞಾನವು ಬದಲಬೇಕು’.
ಕಂಪ್ಯೂಟರ್ ತಂತ್ರಜ್ಞಾನವನ್ನು ಕನ್ನಡಕ್ಕಾಗಿ ಬದಲಿಸಿ ಮರು ಹೊಂದಿಸಿ ಕಟ್ಟಿದ ತಂತ್ರಾಂಶಕ್ಕೆ ಏನು ಹೆಸರಿಡಲಿ? ಕೆ.ಪಿ. ರಾಯರಿಗೆ ತಾನು ಪದ್ಮನಾಭನೆಂಬ ಎಳೆಯ ಯುವಕನಾಗಿ ಕಾಲೇಜಿನಲ್ಲಿ ಇದ್ದಾಗ ಕೃಷ್ಣಭಟ್ಟರು ಭಾಷೆಯ ವಿಸ್ಮಯದ ಬಗ್ಗೆ ಹೇಳುತ್ತಿದ್ದದ್ದು ಯಾವತ್ತೂ ನೆನಪಿತ್ತು. ಗುರುವಿನ ಮೇಲಿನ ಪ್ರೀತಿಯಲ್ಲಿ ಆ ಸಾಫ್ಟ್ ವೇರ್ ಗೆ ‘ಸೇಡಿಯಾಪು’ ಎಂದೇ ಹೆಸರಿಟ್ಟರು.
ಕೆ.ಪಿ. ರಾಯರು ಉಚಿತವಾಗಿ ಹಾರಬಿಟ್ಟಿದ್ದ ಸಾಫ್ಟ್ ವೇರ್ ಗೆ ಪೇಟೆಂಟೂ ಇರಲಿಲ್ಲ. ರಾಯರ ನಿರ್ಮೋಹ ನೆನೆದರೆ ಅವರೊಳಗೊಬ್ಬ ‘ಇ-ಸಂತ’ ಇದ್ದಾನೋ ಅನಿಸಬೇಕು! ಯಾಕೆಂದರೆ ಆಗ ಫ್ರೀ ಸಾಫ್ಟ್ ವೇರ್ ಚಳವಳಿ ಶುರುವಾಗಿರಲಿಲ್ಲ. ಬುದ್ಧಿವಂತರು ಅಂತರಜಾಲದಲ್ಲಿ ಹಾರಿಬರುತ್ತಿದ್ದ ಸಾಫ್ಟ್ ವೇರನ್ನು ಹಿಡಿದು ಬೆಳೆಸಿದರು! ಭಾಷೆಗೆ ಸಂಸ್ಕೃತಿಗೆ ಹಾರಲು ಹೊಸ ರೆಕ್ಕೆಗಳು ಬಂದವು- ಸಾಮಾನ್ಯ ಜನತೆಯ ಬೆರಳಿಗೂ!
ಕೆ.ಪಿ.ರಾಯರು ಜಪ್ಪುವಿನಲ್ಲಿ ಯಾರೋ ಲೋಹಶಾಸ್ತ್ರ- ಮೆಟಲರ್ಜಿಯ ದೊಡ್ಡ ರಿಟೈರ್ಡು ಪ್ರೊಫೆಸರನ್ನು ಹುಡುಕಾಡುತ್ತಾ ಬಂದಿದ್ದರು. ಜನರು ಅಲೆಮಾರಿಗಳಾಗಿದ್ದಾಗ ಅವರಿಗೆ ಭಾಷೆಯನ್ನು ಅಕ್ಷರ ಮಾಡಬೇಕು ಅನಿಸದು. ಜನರು ಒಂದೆಡೆ ನಿಂತಾಗಲಷ್ಟೇ ಅವರ ಚೇತನ ಅಕ್ಷರವನ್ನು ಕಲ್ಪಿಸುತ್ತದೆ- ಹಾಗೆಯೇ ಮಣ್ಣಿನಿಂದ ಲೋಹಬೇರ್ಪಡಿಸುತ್ತದೆ. ಹಾಗಿದ್ದರೆ ಅಕ್ಷರಕ್ಕೂ ಲೋಹಶಾಸ್ತ್ರಕ್ಕೂ ಒಳಸಂಬಂಧವಿದೆ ಅಂತ ಆಯ್ತು!
ಕೆ.ಪಿ. ರಾಯರು ಜೀವನದುದ್ದಕ್ಕೂ ಅಕ್ಷರಗಳ ಹಿಂದೆ ಬಿದ್ದವರು. ಈಗ ಎಪ್ಪತ್ತು ವರ್ಷವಾದ ಮೇಲೆಯೂ ಮಾಡುತ್ತಿರುವುದು ಅದೇ! ಹೊಸ ಹೊಸ ಹುಡುಕಾಟ. ‘ಅದೊಂದು ಮಾಯಾಜಾಲ’ ಇದು ಅವರ ನಗುವಿನ ಮಾತು. ನಡುವೆ ಇದ್ದಕ್ಕಿದ್ದಂತೆ ಕಿರಂ ನಾಗರಾಜರ ಸಾವಿನ ನೆನಪು ಬಂತು. ಕೆ.ಪಿ. ರಾಯರು ಕಿರಂಗಾಗಿ ಮರುಗಿದರು- ಕಿರಂ ಮಾತುಗಳಲ್ಲಿ ಮೂಡಿದ ಬೇಂದ್ರೆಯು ಕಾಡಿದರು.
ಕಂಪ್ಯೂಟರು- ಸೇಡಿಯಾಪು- ಮೆಟಲರ್ಜಿ- ಕಿರಂ- ಹಿಮಾಲಯ- ಕನ್ನಡ ಫಾಂಟ್- ಅಧ್ಯಾತ್ಮ- ಬೇಂದ್ರೆ… ಎಲ್ಲಿಂದೆಲ್ಲಿಗೆ? ಎಲ್ಲವೂ ಬದುಕು ಅರಳಿಸುವ ಹಲವು ಹೂವುಗಳು. ಜೇನ್ನೊಣ ಎಲ್ಲದರಿಂದ ಅರ್ಥವನ್ನು ಹೆಕ್ಕಬಲ್ಲುದು. ಅಲ್ಲಿ ಭೇದವಿಲ್ಲ- ಅದರ ಅಂತರಂಗದ ಮಾಯಾಜಾಲಕ್ಕೆ ಇವೆಲ್ಲವನ್ನೂ ಜೀವಪೋಷಕ ದ್ರವವಾಗಿ ಜಿನುಗಿಸುವ ಶಕ್ತಿ ಇರುತ್ತದೆ. ಗೆಳೆಯ ಡಾ. ವಿಶ್ವನಾಥ ಬದಿಕಾನರು ಕಾಗದದಲ್ಲಿ ಸುತ್ತಿಟ್ಟ ಪೊಟ್ಟಣವನ್ನು ಬಿಚ್ಚಿ ನೋಡದೆ ಕೆ.ಪಿ. ರಾಯರು ಹೆಗಲಿನ ಬಟ್ಟೆಚೀಲಕ್ಕಿಳಿಸಿದರು. ಅದು ಒಂದು ಜೇನು ಬಾಟ್ಲಿ! ಪ್ರೀತಿಯನ್ನು ಬಿಚ್ಚಿ ಅಳೆಯಬಾರದು- ಎಂಬಂತೆ- ನಿನ್ನ ಒಳಗು ಅರ್ಥವಾಗಿದೆ ಅನ್ನುವಂತೆ ದೊಡ್ಡದಾಗಿ ಅದೊಂದು ನಗು!
ಕೆ.ಪಿ. ರಾಯರ ತಂದೆ ವೆಂಕಟ್ರಾಯ ಅವರು ಪಂಜ ಎಣ್ಮೂರಿನ ಕಡೆಯವರು. ಅದ್ಯಾವುದೋ ಐಗಳ ಶಾಲೆಯಲ್ಲಿ ಓದಿದವರು. ಶಾಲೆ ಮಾಸ್ತರಿಕೆ ಮಾಡುತ್ತಾ ಕುಡುಪು-ಕಿನ್ನಿಕಂಬಳದ ಕಡೆ ಬಂದರು. ಬ್ರಿಟಿಷ್ ಸರ್ಕಾರ ‘ನಿನಗೆ ಸರಿಯಾದ ಪದವಿ ಇಲ್ಲ ಹೋಗು’ ಅಂದಿತು. ಮಹಾಕವಿ ಮಂದಾರ ಕೇಶವ ಭಟ್ಟರಿಗೆ ತೊರವೆ ರಾಮಾಯಣ ಹೇಳಿದ್ದ ವೆಂಕಟ್ರಾಯರು ಮನೆ ಬಾಡಿಗೆ ಕಟ್ಟಲು, ಏಳು ಮಕ್ಕಳಿದ್ದ ಸಂಸಾರ ನಡೆಸಲು ಅಂಗಡಿ ಇಟ್ಟರು! ಮಗ ಪದ್ಮನಾಭ ಬೆಳಗ್ಗೆ-ಸಂಜೆ ದುಡಿಯುತ್ತಿದ್ದ; ನಡುವೆ ಶಾಲೆ ಕಲಿತ. ಇಂದಿಗೂ ಸರ್ಟಿಫಿಕೆಟಾಗಿ ಇರುವುದು ಒಂದು ಸಣ್ಣ ಸಿಂಗಲ್ ವಿಜ್ಞಾನ ಪದವಿ. ಹೆಗಲ ಚೀಲ ಸರಿಯಾಗಿ ತೆರೆದರೆ ವಿಷಯವಷ್ಟೂ ಆದೀತು ಒಂದೈವತ್ತು ಪಿಎಚ್.ಡಿ! ಎಲ್ಲಾ ಇಂಟರ್ ಡಿಸಿಪ್ಲಿನರಿ.
ಸಂಜೆ ಹೊತ್ತು ಕೆಲ ತಿಂಗಳು ಮಂಗಳೂರಿನ ಶಾರದಾ ಪ್ರೆಸ್ಸಲ್ಲಿ ದುಡಿಯುತ್ತಿದ್ದ ಪದ್ಮನಾಭ! ಪದವಿಯ ಬಳಿಕ ಕೆ.ಪಿ. ರಾಯರು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೇರಿದರು. ಅತ್ಯಾಧುನಿಕ ಟಾಟಾ ಪ್ರೆಸ್ಸಿನಲ್ಲಿದ್ದರು. ಕೊನೆಗೆ ಮೊನೋಟೈಪ್ ಕಂಪನಿಯ ನಿರ್ದೇಶಕರಾದರು. ೧೯೬೨-೬೩ರ ಕಾಲಕ್ಕೇ ಆ ಕಾಲದ ಕೋಣೆ ಗಾತ್ರದ ಕಂಪ್ಯೂಟರ್ ನಡುವೆ ರಾಯರು ಇದ್ದರು! ಅವರು ಸಿಂಧೂ ಕಣಿವೆಯ ಲಿಪಿಗಳ ಬಗೆಗಿನ ಗ್ರಂಥಕ್ಕೆ ಲಿಪಿ ವಿನ್ಯಾಸ-ಅಕ್ಷರ ಜೋಡಣೆಗೆ ದುಡಿಮೆ ಮಾಡಿದರು. ಮುದ್ರಣ ತಂತ್ರಜ್ಞಾನ ಹರಿದುಬಂದಂತೆಲ್ಲ ಈ ಅಕ್ಷರ ಭಗೀರಥ ಅದರ ಎದುರು ನಡೆದುಹೋಗುತ್ತಿದ್ದ.
ತುಳು ಮನೆಮಾತು. ಕನ್ನಡದಲ್ಲಿ ಯಕ್ಷಗಾನಕ್ಕೂ ಅರ್ಥ, ಆಳವಾದ ಇಂಗ್ಲಿಷ್ ಜತೆಗೆ ಭಾರತದ ಲಿಪಿಗಳೆಲ್ಲ ಗೊತ್ತು. ಟೈಪಿಸುವಾಗ ಇಂಗ್ಲಿಷಿನಲ್ಲಿ ಸ್ವರ, ವ್ಯಂಜನಕ್ಕೆ ಇಪತ್ತಾರರಲ್ಲಿ ಎಲ್ಲಾ ಬಹು ಸುಲಭ! ಆದರೆ ಇದೇ ಕೀಬೋರ್ಡಿನಲ್ಲಿ ಭಾರತೀಯ ಭಾಷೆಗಳ ನೂರಾರು ಬಳ್ಳಿ ಅಕ್ಷರಗಳನ್ನು ಮೂಡಿಸುವುದು ಹೇಗೆ? ಹಳೆಯ ಟೈಪ್ ರೈಟರ್ ನಲ್ಲಿ ಕನ್ನಡದ ‘ಯೋ’ ಅಕ್ಷರ ಹೊಡೆಯಬೇಕಾದರೆ ಆರು ಸಲ ಹೊಡೆದು ಅಕ್ಷರ ಭಾಗಗಳನ್ನು ಜೋಡಿಸಬೇಕಿತ್ತು. ಎಂಥಾ ಕಷ್ಟ! ಅದು ‘yO’ ಎಂಬ ಎರಡು ಅಕ್ಷರಗಳಲ್ಲಿ ಇಂದು ಕಂಪ್ಯೂಟರ್ನಲ್ಲಿ ಬರುತ್ತಲ್ಲಾ! ಭಾಷಾಶಾಸ್ತ್ರೀಯವಾಗಿ, ಉಚ್ಚಾರಣೆಗೆ ಸರಿಯಾಗಿ, ಭಾರತದ ಎಲ್ಲ ಭಾಷೆಗಳಿಗೆ ಒಗ್ಗುವಂತೆ ಕಂಪ್ಯೂಟರ್ ಗೆ ತರ್ಕವೊಂದನ್ನು ಕಂಡುಹಿಡಿದು ರೂಪಿಸಿದ್ದು ಕೆ.ಪಿ. ರಾಯರು.
ಅವರು ತಿರುಗಾಡಿಯೇ! ಪುಟ್ಟನಾಗಿದ್ದಾಗ ಅಜ್ಜಿಯಂದಿರು ಅಶ್ವತ್ಥ ಮರದಡಿ ಇಟ್ಟ ದಕ್ಷಿಣೆ ಹೆಕ್ಕಿ ಬಾಲಸಾಹಿತ್ಯ ಮಂಡಲದ ಪುಸ್ತಕ ತೆಗೆಯುತ್ತಿದ್ದರು. ಈಗ ಹಿಮಾಲಯದ ಗಂಗೋತ್ರ್ರಿಯಲ್ಲಿ ಕನ್ನಡದ ಸ್ವರ ತೆಗೆದರೆ ‘ಹಮಾರೆ ದೋಸ್ತ್ ಪದ್ಮನಾಭ್ಜೀ” ಎನ್ನುವ ಸಾಧುಗಳು ಸಿಕ್ಕಿಯಾರು. ಅಷ್ಟು ಬಾರಿ ಹಿಮಾಲಯವೇರಿದರೂ ಅವರು ‘ಬೆಳ್ಳಿಬೆಟ್ಟದೊಂದಿಗೆ ಈ ಪುಟ್ಟನ ಫೋಟೊ ಕ್ಲಿಕ್ಕಿಸುವುದು ಬೇಡ’ ಎನ್ನುವವರು! ‘ಹಿಮಾಲಯದಲ್ಲಿ ಬರಿಗೈ ಚಾಚಿದರಾಯಿತು-ಯಾರೋ ಖಾಲಿಯಾ ಗಿದ್ದಲ್ಲಿಗೆ ತುಂಬುತ್ತಿರುತ್ತಾರೆ’ ಇದೂ ಅನುಭವ! ಮತ್ತು ಅರ್ಥ! ವಾಸ್ತವವಾಗಿ, ಹಿಂದೆ ಇವರು ಅಧ್ಯಾತ್ಮ ಭಿಕ್ಷುವಾಗಿ ಒಮ್ಮೆ ಹೋಗಿದ್ದಾಗ ಪರ್ಸು ಕಳೆದುಕೊಂಡಾಗಿನ ಅನುಭವವೂ ಇಲ್ಲಿದೆ. ಹಾಗಾದರೆ ಇವರೊಬ್ಬ ಅಧ್ಯಾತ್ಮದ ಜಿಗುಟು ಅಂತೀರಾ? ಪ್ರಖರ ವಿಚಾರವಾದಿ ಚರಿತ್ರೆಕಾರ ಡಿ.ಡಿ. ಕೊಸಾಂಬಿ ಕೂಡಾ ಇವರ ಸ್ನೇಹಿತ! ಮನುಷ್ಯನನ್ನು ವಿಭಜಿಸುವುದು ಕಷ್ಟವೇ.
ಅಕ್ಷರವೆಂದರೆ ಏನು? ಅದು ಬಾಗು ಬಳುಕಿನ ಅರ್ಥಹೀನ ಗೆರೆಯಲ್ಲ. ಅದರ ಆಕಾರಕ್ಕೆ ಅರ್ಥವಿದೆ- ವಿಕಾಸವಿದೆ- ಗಣಿತವಿದೆ! ಕೆ.ಪಿ. ರಾಯರ ಶೋಧ ಈಗ ಈ ನಿಟ್ಟಿನಲ್ಲಿ. ‘ಓದಿಯೇ ಮುಗಿಯುವುದಿಲ್ಲ. ಬರೆಯುವುದು ಇನ್ನಾವಾಗಲೋ? ಸಾವು ತನ್ನ ಖಚಿತ ದಿನ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು- ಬರೆಯಲು ಸುರು ಮಾಡುತ್ತಿದ್ದೆ’- ಇದು ಎಪ್ಪತ್ತರ ಪಂಚಿಂಗ್ ಮಾತು.

ಆಕರ-ಸೌಜನ್ಯ: ಪ್ರಜಾವಾಣಿ ಮಂಗಳೂರು ಕರಾವಳಿ ಪುರವಣಿ ೪-೯-೨೦೧೦