ಕಂಪ್ಯೂಟರ್ ಕನ್ನಡ ಅಕ್ಷರಗಳ ‘ಈ ತಂದೆ’
ತನ್ನ ಬಗ್ಗೆ ತಾನೇ ಹೇಳುವ ಜೋಕು ಹೀಗಿದೆ:
‘ನನಗೆ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬರುವುದಿಲ್ಲಾ ಮಾರಾಯ್ರೆ.
ನನ ಟೈಪು ಸಿಕ್ಕಾಪಟ್ಟೆ ಸ್ಲೋ’.
ಶಬ್ದಗಳು ಕೇವಲ ಶಬ್ದಗಳಲ್ಲ. ನಮ್ಮ ಇದುವರೆಗಿನ ದೃಷ್ಟಿಕೋನಗಳು ಅವುಗಳಲ್ಲಿ ಅವಿತಿರುತ್ತವೆ.
‘ತಂತ್ರಜ್ಞಾನ ಮತ್ತು ಸಂಸ್ಕೃತಿ’- ಈ ಎರಡು ಶಬ್ದಗಳಲ್ಲಿ ಒಂದು ಬಗೆಯ ಹಗೆತನ ಇರಬೇಕು ಅಂತ ಇತ್ತಲ್ಲವೇ ನಮ್ಮ ನಂಬಿಕೆ? ಹಾಗಾಗಿ ಸಂಸ್ಕೃತಿಯನ್ನು ತಂತ್ರಜ್ಞಾನವು ಅತ್ಯಾಚಾರ ಮಾಡಿಬಿಡುತ್ತದೆ ಅಂತ ನಾವು ಹಲವು ವರ್ಷಗಳಿಂದ ಭ್ರಮಿಸಿದ್ದೇವೆ! ಕಂಪ್ಯೂಟರನ್ನು ಈಗ ತಂತ್ರಜ್ಞಾನದ ಜತೆಗೆ ಇಟ್ಟು ಬಿಡಲಾಗಿದೆ. ನಾಡಿನ ದೊಡ್ಡ ಸಂಸ್ಕೃತಿ ಚಿಂತಕರು ಕಂಪ್ಯೂಟರ್ ತಂತ್ರಜ್ಞರನ್ನು ‘ಕಂಪ್ಯೂಟರ್ ಕೂಲಿಗಳು’ ಅಂತ ತಪ್ಪಾಗಿ ಕರೆದು ವರ್ಷಗಳೇ ಆಗಿವೆ! ಅಧ್ಯಾತ್ಮ, ಕಲೆ, ಸಂಸ್ಕೃತಿ ಚಿಂತನೆ, ಕಂಪ್ಯೂಟರ್ ಇವೆಲ್ಲ ನಿಜವಾಗಿ ಬೇರೆ ಆಗಬೇಕಾಗಿಲ್ಲ. ಪ್ರತಿಭಾವಂತ ಮನಸ್ಸು ಇವನ್ನೆಲ್ಲ ಬೆಸೆದು ಬದುಕನ್ನು ತುಂಬಿದ ಜೇನಿನ ಹುಟ್ಟಾಗಿ ಮಾಡಬಲ್ಲುದು. ಕೆ.ಪಿ. ರಾಯರು ಇಂಥವರು. ಗುರುಪುರ ಬಳಿಯ ಕಿನ್ನಿಕಂಬಳ ಈ ‘ಕೆ’ ಅಕ್ಷರದೊಳಗೆ ಅಡಗಿ ಕುಳಿತಿದೆ.
ಕಿನ್ನಿಕಂಬಳ ಎಷ್ಟೊಂದು ‘ಕಿನ್ನಿ'(ಸಣ್ಣ) ಊರು! ಕತೆಗಾರ, ದೇಶದ ರಾಯಭಾರಿ ಎಲ್ಲಾ ಆಗಿದ್ದ ಬಾಗಲೋಡಿ ದೇವರಾಯ ಅಲ್ಲಿಯವರು. ಕನ್ನಡವೂ ಸೇರಿ ಭಾರತೀಯ ಭಾಷೆಗಳಿಗೆ ಅತ್ಯಂತ ಹೊಸಬಗೆಯ ತಂತ್ರಾಂಶಗಳನ್ನು ರೂಢಿಸಲು ಕಾರಣರಾದ ‘ಕನ್ನಡ ಸಾಫ್ಟ್ ವೇರ್ ಪಿತಾಮಹ’ ಕೆ.ಪಿ. ರಾಯರು ಅಲ್ಲಿಯವರು! ಗುರುಪುರ ಹೊಳೆಯ ನೀರು ಉಂಡ ಈ ಸಣ್ಣ ಊರು- ಹೇಗೆ ಇವರನ್ನೆಲ್ಲ ತನ್ನ ಬಸಿರಿಂದ ಮೂಡಿಸಿತು! ಬದುಕಿನ ಕಂಬಳದ ಓಟದಲ್ಲಿ ಕಳೆದುಹೋಗದಂತೆ ನೋಡಿಕೊಂಡಿತು!
ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಅಧ್ಯಾಪಕ ಪ್ರೊ. ಭವಾನಿಶಂಕರರು ನಿವೃತ್ತಿಯ ಕಡೆ ಸಾಗುತ್ತಿರುವ ಹಿರಿಯ. ಅವರು ಬರೆದ ‘ಕನ್ನಡದ ಈ ಲೋಕ’ ಪುಸ್ತಕ ನಿನ್ನೆ ಬಿಡುಗಡೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡವನ್ನು ಹೇಗೆ ಹೇಗೆ ಬಳಸಬಹುದೆಂದು ಹೈಸ್ಕೂಲು ವಿದ್ಯಾರ್ಥಿಗೂ ಅರ್ಥವಾಗುವಂತೆ ಈ ಪುಸ್ತಕ ಸರಳವಾಗಿ ಹೇಳುತ್ತದೆ. ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಬರೆಯುವ ವರ್ಣಲೋಕದ ಜಾಗದಲ್ಲಿ ಕಂಪ್ಯೂಟರ್ ಗೆ ‘ಸ್ಪೇಸ್’ ಎಲ್ಲಿ?’- ಹೀಗೆಂದು ನೀವು ಕೇಳಬಾರದು. ಅದು ಕಣ್ಣು, ಕೈ, ನಾಲಗೆಗಳಂತೆಯೇ ಮನುಷ್ಯನ ಪಾಲಿಗೆ; ಅವನ ಚಟುವಟಿಕೆಗಳ ವಿಸ್ತರಣೆಗೆ! ಹಾಗಾಗಿ ಭವಾನಿಶಂಕರರಂತಹ ಹಿರಿಯರು ಅತ್ಯುತ್ಸಾಹದಲ್ಲಿ ಮಾಡುವ ಕೆಲಸ, ಸಂಸ್ಕೃತಿಯ ಕೆಲಸವಾಗಿ ಕೊನೆಗೆ ಸಮುದಾಯದ ಒಳಗೆ ಕರಗಿಹೋಗುತ್ತದೆ.
‘ಬರಹ-ನುಡಿ’ ತಂತ್ರಾಂಶಗಳನ್ನು ನೀವಿಂದು ಕಂಪ್ಯೂಟರ್ ಟೈಪಿಂಗ್ ಅಂತಾ ಕರೀತೀರೋ? ಕನ್ನಡ-ತುಳು-ಕೊಂಕಣಿ ಸಂಸ್ಕೃತಿ ಕರೆಂಟು ಹರಿಸಬಲ್ಲ ವಯರು ಅಂತೀರೋ? ಬರಹ-ನುಡಿಗಳನ್ನು ನಾವು ಇಂದು ಹೀಗೆಲ್ಲ ಬಳಸುವುದಕ್ಕೆ ಮೂಲ ಕಾರಣ ಕೆ.ಪಿ. ರಾಯರ ಇಪ್ಪತ್ತೈದು ವರ್ಷದ ಹಿಂದಿನ ಸಂಶೋಧನೆ.
೧೯೮೮ರಲ್ಲಿ ಭಾರತದಲ್ಲಿ ಇಂಟರ್ ನೆಟ್ಟು, ವಿಂಡೋಸ್ ಎಂಥದ್ದೂ ಇಲ್ಲ. ಕಂಪ್ಯೂಟರ್ ಕಂಡವರೇ ಕಡಿಮೆ. ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀಧರ್ ಕನ್ನಡನಾಡನಿಂದ ಹೋಗುವಾಗ ಅವರ ಲ್ಯಾಪ್ ಟಾಪ್ ನ ಹೃದಯದಲ್ಲಿ ಸಣ್ಣ ಸಾಫ್ಟ್ ವೇರ್, ಒಂದು ಸ್ವಲ್ಪ ಜಾಗವನ್ನು ಆವರಿಸಿ ಕುಳಿತಿತ್ತು! ಅದನ್ನವರು ಅಮೆರಿಕದ ಅಂತರಜಾಲದಲ್ಲಿ ಕೂರಿಸಿ ಜಗ ಸುತ್ತಲು ಕಳುಹಿಸಿದರು. ಇಂದು ಇಂತಹ ಕೆಲಸ ಕ್ಷಣಕ್ಷಣಕ್ಕೂ ಸಾವಿರಾರು ನಡೆಯುತ್ತದೆ. ಆದರೆ ಶ್ರೀಧರ್ ಜಗಕ್ಕೆ ಬಿತ್ತಿದ ಆ ಸಾಫ್ಟ್ ವೇರ್ ಕನ್ನಡವನ್ನು ಕಂಪ್ಯೂಟರಲ್ಲಿ ಬಳಸುವುದಕ್ಕೆ ಇದ್ದ ಮೊದಲ ಸಾಧನವಾಗಿತ್ತು. ಅದರ ಹೆಸರು ‘ಸೇಡಿಯಾಪು’- ವಿಟ್ಲದ ಸಮೀಪದ ಒಂದು ಹಳ್ಳಿ!
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಕಲಿಸುತ್ತಿದ್ದ ಶ್ರೇಷ್ಠ ಸಾಹಿತಿ ಪಂಡಿತ ಸೇಡಿಯಾಪು ಕೃಷ್ಣಭಟ್ಟ. ಅವರನ್ನು ಪ್ರೀತಿಸಿದ್ದ ವಿದ್ಯಾರ್ಥಿ ದಿನಾ ಕಿನ್ನಿಕಂಬಳದಿಂದ ಕಾಲೇಜಿಗೆ ಬರುತ್ತಿದ್ದ ಪದ್ಮನಾಭ. ಸೇಡಿಯಾಪು ಹೇಳುತ್ತಿದ್ದರು ‘ಅಕ್ಷರಗಳನ್ನು ಬದಲಾಯಿಸುವ ಗೊಡವೆ ನಿನಗೆ ಬೇಡ. ಜನ ಹಾಗೆಲ್ಲ ಅದನ್ನು ಒಪ್ಪುವುದಿಲ್ಲ. ತಂತ್ರಜ್ಞಾನಕ್ಕಾಗಿ ಭಾಷೆ ಬದಲುವುದಲ್ಲ. ಭಾಷೆಗಾಗಿ ತಂತ್ರಜ್ಞಾನವು ಬದಲಬೇಕು’.
ಕಂಪ್ಯೂಟರ್ ತಂತ್ರಜ್ಞಾನವನ್ನು ಕನ್ನಡಕ್ಕಾಗಿ ಬದಲಿಸಿ ಮರು ಹೊಂದಿಸಿ ಕಟ್ಟಿದ ತಂತ್ರಾಂಶಕ್ಕೆ ಏನು ಹೆಸರಿಡಲಿ? ಕೆ.ಪಿ. ರಾಯರಿಗೆ ತಾನು ಪದ್ಮನಾಭನೆಂಬ ಎಳೆಯ ಯುವಕನಾಗಿ ಕಾಲೇಜಿನಲ್ಲಿ ಇದ್ದಾಗ ಕೃಷ್ಣಭಟ್ಟರು ಭಾಷೆಯ ವಿಸ್ಮಯದ ಬಗ್ಗೆ ಹೇಳುತ್ತಿದ್ದದ್ದು ಯಾವತ್ತೂ ನೆನಪಿತ್ತು. ಗುರುವಿನ ಮೇಲಿನ ಪ್ರೀತಿಯಲ್ಲಿ ಆ ಸಾಫ್ಟ್ ವೇರ್ ಗೆ ‘ಸೇಡಿಯಾಪು’ ಎಂದೇ ಹೆಸರಿಟ್ಟರು.
ಕೆ.ಪಿ. ರಾಯರು ಉಚಿತವಾಗಿ ಹಾರಬಿಟ್ಟಿದ್ದ ಸಾಫ್ಟ್ ವೇರ್ ಗೆ ಪೇಟೆಂಟೂ ಇರಲಿಲ್ಲ. ರಾಯರ ನಿರ್ಮೋಹ ನೆನೆದರೆ ಅವರೊಳಗೊಬ್ಬ ‘ಇ-ಸಂತ’ ಇದ್ದಾನೋ ಅನಿಸಬೇಕು! ಯಾಕೆಂದರೆ ಆಗ ಫ್ರೀ ಸಾಫ್ಟ್ ವೇರ್ ಚಳವಳಿ ಶುರುವಾಗಿರಲಿಲ್ಲ. ಬುದ್ಧಿವಂತರು ಅಂತರಜಾಲದಲ್ಲಿ ಹಾರಿಬರುತ್ತಿದ್ದ ಸಾಫ್ಟ್ ವೇರನ್ನು ಹಿಡಿದು ಬೆಳೆಸಿದರು! ಭಾಷೆಗೆ ಸಂಸ್ಕೃತಿಗೆ ಹಾರಲು ಹೊಸ ರೆಕ್ಕೆಗಳು ಬಂದವು- ಸಾಮಾನ್ಯ ಜನತೆಯ ಬೆರಳಿಗೂ!
ಕೆ.ಪಿ.ರಾಯರು ಜಪ್ಪುವಿನಲ್ಲಿ ಯಾರೋ ಲೋಹಶಾಸ್ತ್ರ- ಮೆಟಲರ್ಜಿಯ ದೊಡ್ಡ ರಿಟೈರ್ಡು ಪ್ರೊಫೆಸರನ್ನು ಹುಡುಕಾಡುತ್ತಾ ಬಂದಿದ್ದರು. ಜನರು ಅಲೆಮಾರಿಗಳಾಗಿದ್ದಾಗ ಅವರಿಗೆ ಭಾಷೆಯನ್ನು ಅಕ್ಷರ ಮಾಡಬೇಕು ಅನಿಸದು. ಜನರು ಒಂದೆಡೆ ನಿಂತಾಗಲಷ್ಟೇ ಅವರ ಚೇತನ ಅಕ್ಷರವನ್ನು ಕಲ್ಪಿಸುತ್ತದೆ- ಹಾಗೆಯೇ ಮಣ್ಣಿನಿಂದ ಲೋಹಬೇರ್ಪಡಿಸುತ್ತದೆ. ಹಾಗಿದ್ದರೆ ಅಕ್ಷರಕ್ಕೂ ಲೋಹಶಾಸ್ತ್ರಕ್ಕೂ ಒಳಸಂಬಂಧವಿದೆ ಅಂತ ಆಯ್ತು!
ಕೆ.ಪಿ. ರಾಯರು ಜೀವನದುದ್ದಕ್ಕೂ ಅಕ್ಷರಗಳ ಹಿಂದೆ ಬಿದ್ದವರು. ಈಗ ಎಪ್ಪತ್ತು ವರ್ಷವಾದ ಮೇಲೆಯೂ ಮಾಡುತ್ತಿರುವುದು ಅದೇ! ಹೊಸ ಹೊಸ ಹುಡುಕಾಟ. ‘ಅದೊಂದು ಮಾಯಾಜಾಲ’ ಇದು ಅವರ ನಗುವಿನ ಮಾತು. ನಡುವೆ ಇದ್ದಕ್ಕಿದ್ದಂತೆ ಕಿರಂ ನಾಗರಾಜರ ಸಾವಿನ ನೆನಪು ಬಂತು. ಕೆ.ಪಿ. ರಾಯರು ಕಿರಂಗಾಗಿ ಮರುಗಿದರು- ಕಿರಂ ಮಾತುಗಳಲ್ಲಿ ಮೂಡಿದ ಬೇಂದ್ರೆಯು ಕಾಡಿದರು.
ಕಂಪ್ಯೂಟರು- ಸೇಡಿಯಾಪು- ಮೆಟಲರ್ಜಿ- ಕಿರಂ- ಹಿಮಾಲಯ- ಕನ್ನಡ ಫಾಂಟ್- ಅಧ್ಯಾತ್ಮ- ಬೇಂದ್ರೆ… ಎಲ್ಲಿಂದೆಲ್ಲಿಗೆ? ಎಲ್ಲವೂ ಬದುಕು ಅರಳಿಸುವ ಹಲವು ಹೂವುಗಳು. ಜೇನ್ನೊಣ ಎಲ್ಲದರಿಂದ ಅರ್ಥವನ್ನು ಹೆಕ್ಕಬಲ್ಲುದು. ಅಲ್ಲಿ ಭೇದವಿಲ್ಲ- ಅದರ ಅಂತರಂಗದ ಮಾಯಾಜಾಲಕ್ಕೆ ಇವೆಲ್ಲವನ್ನೂ ಜೀವಪೋಷಕ ದ್ರವವಾಗಿ ಜಿನುಗಿಸುವ ಶಕ್ತಿ ಇರುತ್ತದೆ. ಗೆಳೆಯ ಡಾ. ವಿಶ್ವನಾಥ ಬದಿಕಾನರು ಕಾಗದದಲ್ಲಿ ಸುತ್ತಿಟ್ಟ ಪೊಟ್ಟಣವನ್ನು ಬಿಚ್ಚಿ ನೋಡದೆ ಕೆ.ಪಿ. ರಾಯರು ಹೆಗಲಿನ ಬಟ್ಟೆಚೀಲಕ್ಕಿಳಿಸಿದರು. ಅದು ಒಂದು ಜೇನು ಬಾಟ್ಲಿ! ಪ್ರೀತಿಯನ್ನು ಬಿಚ್ಚಿ ಅಳೆಯಬಾರದು- ಎಂಬಂತೆ- ನಿನ್ನ ಒಳಗು ಅರ್ಥವಾಗಿದೆ ಅನ್ನುವಂತೆ ದೊಡ್ಡದಾಗಿ ಅದೊಂದು ನಗು!
ಕೆ.ಪಿ. ರಾಯರ ತಂದೆ ವೆಂಕಟ್ರಾಯ ಅವರು ಪಂಜ ಎಣ್ಮೂರಿನ ಕಡೆಯವರು. ಅದ್ಯಾವುದೋ ಐಗಳ ಶಾಲೆಯಲ್ಲಿ ಓದಿದವರು. ಶಾಲೆ ಮಾಸ್ತರಿಕೆ ಮಾಡುತ್ತಾ ಕುಡುಪು-ಕಿನ್ನಿಕಂಬಳದ ಕಡೆ ಬಂದರು. ಬ್ರಿಟಿಷ್ ಸರ್ಕಾರ ‘ನಿನಗೆ ಸರಿಯಾದ ಪದವಿ ಇಲ್ಲ ಹೋಗು’ ಅಂದಿತು. ಮಹಾಕವಿ ಮಂದಾರ ಕೇಶವ ಭಟ್ಟರಿಗೆ ತೊರವೆ ರಾಮಾಯಣ ಹೇಳಿದ್ದ ವೆಂಕಟ್ರಾಯರು ಮನೆ ಬಾಡಿಗೆ ಕಟ್ಟಲು, ಏಳು ಮಕ್ಕಳಿದ್ದ ಸಂಸಾರ ನಡೆಸಲು ಅಂಗಡಿ ಇಟ್ಟರು! ಮಗ ಪದ್ಮನಾಭ ಬೆಳಗ್ಗೆ-ಸಂಜೆ ದುಡಿಯುತ್ತಿದ್ದ; ನಡುವೆ ಶಾಲೆ ಕಲಿತ. ಇಂದಿಗೂ ಸರ್ಟಿಫಿಕೆಟಾಗಿ ಇರುವುದು ಒಂದು ಸಣ್ಣ ಸಿಂಗಲ್ ವಿಜ್ಞಾನ ಪದವಿ. ಹೆಗಲ ಚೀಲ ಸರಿಯಾಗಿ ತೆರೆದರೆ ವಿಷಯವಷ್ಟೂ ಆದೀತು ಒಂದೈವತ್ತು ಪಿಎಚ್.ಡಿ! ಎಲ್ಲಾ ಇಂಟರ್ ಡಿಸಿಪ್ಲಿನರಿ.
ಸಂಜೆ ಹೊತ್ತು ಕೆಲ ತಿಂಗಳು ಮಂಗಳೂರಿನ ಶಾರದಾ ಪ್ರೆಸ್ಸಲ್ಲಿ ದುಡಿಯುತ್ತಿದ್ದ ಪದ್ಮನಾಭ! ಪದವಿಯ ಬಳಿಕ ಕೆ.ಪಿ. ರಾಯರು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೇರಿದರು. ಅತ್ಯಾಧುನಿಕ ಟಾಟಾ ಪ್ರೆಸ್ಸಿನಲ್ಲಿದ್ದರು. ಕೊನೆಗೆ ಮೊನೋಟೈಪ್ ಕಂಪನಿಯ ನಿರ್ದೇಶಕರಾದರು. ೧೯೬೨-೬೩ರ ಕಾಲಕ್ಕೇ ಆ ಕಾಲದ ಕೋಣೆ ಗಾತ್ರದ ಕಂಪ್ಯೂಟರ್ ನಡುವೆ ರಾಯರು ಇದ್ದರು! ಅವರು ಸಿಂಧೂ ಕಣಿವೆಯ ಲಿಪಿಗಳ ಬಗೆಗಿನ ಗ್ರಂಥಕ್ಕೆ ಲಿಪಿ ವಿನ್ಯಾಸ-ಅಕ್ಷರ ಜೋಡಣೆಗೆ ದುಡಿಮೆ ಮಾಡಿದರು. ಮುದ್ರಣ ತಂತ್ರಜ್ಞಾನ ಹರಿದುಬಂದಂತೆಲ್ಲ ಈ ಅಕ್ಷರ ಭಗೀರಥ ಅದರ ಎದುರು ನಡೆದುಹೋಗುತ್ತಿದ್ದ.
ತುಳು ಮನೆಮಾತು. ಕನ್ನಡದಲ್ಲಿ ಯಕ್ಷಗಾನಕ್ಕೂ ಅರ್ಥ, ಆಳವಾದ ಇಂಗ್ಲಿಷ್ ಜತೆಗೆ ಭಾರತದ ಲಿಪಿಗಳೆಲ್ಲ ಗೊತ್ತು. ಟೈಪಿಸುವಾಗ ಇಂಗ್ಲಿಷಿನಲ್ಲಿ ಸ್ವರ, ವ್ಯಂಜನಕ್ಕೆ ಇಪತ್ತಾರರಲ್ಲಿ ಎಲ್ಲಾ ಬಹು ಸುಲಭ! ಆದರೆ ಇದೇ ಕೀಬೋರ್ಡಿನಲ್ಲಿ ಭಾರತೀಯ ಭಾಷೆಗಳ ನೂರಾರು ಬಳ್ಳಿ ಅಕ್ಷರಗಳನ್ನು ಮೂಡಿಸುವುದು ಹೇಗೆ? ಹಳೆಯ ಟೈಪ್ ರೈಟರ್ ನಲ್ಲಿ ಕನ್ನಡದ ‘ಯೋ’ ಅಕ್ಷರ ಹೊಡೆಯಬೇಕಾದರೆ ಆರು ಸಲ ಹೊಡೆದು ಅಕ್ಷರ ಭಾಗಗಳನ್ನು ಜೋಡಿಸಬೇಕಿತ್ತು. ಎಂಥಾ ಕಷ್ಟ! ಅದು ‘yO’ ಎಂಬ ಎರಡು ಅಕ್ಷರಗಳಲ್ಲಿ ಇಂದು ಕಂಪ್ಯೂಟರ್ನಲ್ಲಿ ಬರುತ್ತಲ್ಲಾ! ಭಾಷಾಶಾಸ್ತ್ರೀಯವಾಗಿ, ಉಚ್ಚಾರಣೆಗೆ ಸರಿಯಾಗಿ, ಭಾರತದ ಎಲ್ಲ ಭಾಷೆಗಳಿಗೆ ಒಗ್ಗುವಂತೆ ಕಂಪ್ಯೂಟರ್ ಗೆ ತರ್ಕವೊಂದನ್ನು ಕಂಡುಹಿಡಿದು ರೂಪಿಸಿದ್ದು ಕೆ.ಪಿ. ರಾಯರು.
ಅವರು ತಿರುಗಾಡಿಯೇ! ಪುಟ್ಟನಾಗಿದ್ದಾಗ ಅಜ್ಜಿಯಂದಿರು ಅಶ್ವತ್ಥ ಮರದಡಿ ಇಟ್ಟ ದಕ್ಷಿಣೆ ಹೆಕ್ಕಿ ಬಾಲಸಾಹಿತ್ಯ ಮಂಡಲದ ಪುಸ್ತಕ ತೆಗೆಯುತ್ತಿದ್ದರು. ಈಗ ಹಿಮಾಲಯದ ಗಂಗೋತ್ರ್ರಿಯಲ್ಲಿ ಕನ್ನಡದ ಸ್ವರ ತೆಗೆದರೆ ‘ಹಮಾರೆ ದೋಸ್ತ್ ಪದ್ಮನಾಭ್ಜೀ” ಎನ್ನುವ ಸಾಧುಗಳು ಸಿಕ್ಕಿಯಾರು. ಅಷ್ಟು ಬಾರಿ ಹಿಮಾಲಯವೇರಿದರೂ ಅವರು ‘ಬೆಳ್ಳಿಬೆಟ್ಟದೊಂದಿಗೆ ಈ ಪುಟ್ಟನ ಫೋಟೊ ಕ್ಲಿಕ್ಕಿಸುವುದು ಬೇಡ’ ಎನ್ನುವವರು! ‘ಹಿಮಾಲಯದಲ್ಲಿ ಬರಿಗೈ ಚಾಚಿದರಾಯಿತು-ಯಾರೋ ಖಾಲಿಯಾ ಗಿದ್ದಲ್ಲಿಗೆ ತುಂಬುತ್ತಿರುತ್ತಾರೆ’ ಇದೂ ಅನುಭವ! ಮತ್ತು ಅರ್ಥ! ವಾಸ್ತವವಾಗಿ, ಹಿಂದೆ ಇವರು ಅಧ್ಯಾತ್ಮ ಭಿಕ್ಷುವಾಗಿ ಒಮ್ಮೆ ಹೋಗಿದ್ದಾಗ ಪರ್ಸು ಕಳೆದುಕೊಂಡಾಗಿನ ಅನುಭವವೂ ಇಲ್ಲಿದೆ. ಹಾಗಾದರೆ ಇವರೊಬ್ಬ ಅಧ್ಯಾತ್ಮದ ಜಿಗುಟು ಅಂತೀರಾ? ಪ್ರಖರ ವಿಚಾರವಾದಿ ಚರಿತ್ರೆಕಾರ ಡಿ.ಡಿ. ಕೊಸಾಂಬಿ ಕೂಡಾ ಇವರ ಸ್ನೇಹಿತ! ಮನುಷ್ಯನನ್ನು ವಿಭಜಿಸುವುದು ಕಷ್ಟವೇ.
ಅಕ್ಷರವೆಂದರೆ ಏನು? ಅದು ಬಾಗು ಬಳುಕಿನ ಅರ್ಥಹೀನ ಗೆರೆಯಲ್ಲ. ಅದರ ಆಕಾರಕ್ಕೆ ಅರ್ಥವಿದೆ- ವಿಕಾಸವಿದೆ- ಗಣಿತವಿದೆ! ಕೆ.ಪಿ. ರಾಯರ ಶೋಧ ಈಗ ಈ ನಿಟ್ಟಿನಲ್ಲಿ. ‘ಓದಿಯೇ ಮುಗಿಯುವುದಿಲ್ಲ. ಬರೆಯುವುದು ಇನ್ನಾವಾಗಲೋ? ಸಾವು ತನ್ನ ಖಚಿತ ದಿನ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು- ಬರೆಯಲು ಸುರು ಮಾಡುತ್ತಿದ್ದೆ’- ಇದು ಎಪ್ಪತ್ತರ ಪಂಚಿಂಗ್ ಮಾತು.
ಆಕರ-ಸೌಜನ್ಯ: ಪ್ರಜಾವಾಣಿ ಮಂಗಳೂರು ಕರಾವಳಿ ಪುರವಣಿ ೪-೯-೨೦೧೦
ಟಿಪ್ಪಣಿಗಳು
ನಿಜ. ಕನ್ನಡಕ್ಕೊಬ್ಬ ಕೆ. ಪಿ. ರಾಯರು. ಸರಳ ಸಜ್ಜನಿಕೆಯ ಪ್ರತೀಕ.
ಪ್ರಖರ ಪಂಡಿತ. ಮಗುವಿನಂತಹ ಮನೋಭವ.
ಅವರ ಬಗ್ಗೆ ಓದಿ ಸಂತೋಷವಾಯ್ತು.
ಎನ್.ಎ.ಮಧ್ಯಸ್ಥ
ಓಹ್ ಅದ್ಬುತ ಅಲ್ಲ ಜೇನಿನಂಥ ಸವಿಯ ಪಂಚಾಮೃತ ಈ ಲೇಖನ.
ಎಷ್ಟು ವಿಷಯಗಳು – ಒಳ ಹೊಳವುಗಳು. ಲವಲವಿಕೆಯ ಬರವಣಿಗೆ.
ಮಹಾಲಿಂಗರಿಗೆ ನನ್ನ ಅಭಿನಂದನೆಗಳು.
ಅವರನ್ನು ಅಂತರ್ಜಾಲದಲ್ಲಿ ಹುಡುಕುವುದು ಎಲ್ಲಿ?
ರಾಧ
ಹದಿನೈದು ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ಕನ್ನಡವನ್ನು ಕಂಪ್ಯೂಟರ್ ನ ಕರಿ ಪರದೆಯ ಮೇಲೆ ಮೂಡಿಸಲು ಶ್ರಮಿಸುತ್ತಿದ್ದಾಗ ನನಗೆ ದೇವರಂತೆ ಒದಗಿದ್ದು ಫೊನೆಟಿಕ್ ಫಾಂಟ್ ಟೈಪಿಂಗ್ ಕೆ.ಪಿ.ರಾವ್ ಕೀ ಬೋರ್ಡ್. ಮುಂದೆ ಶ್ರೀಲಿಪಿ ತಂತ್ರಾಂಶ ಬಳಸಲಾರಂಭಿಸಿದಾಗ ಲಭ್ಯವಿದ್ದ ಹದಿನಾಲ್ಕು ಕೀ ಬೋರ್ಡ್ ಗಳ ಪೈಕಿ ನನ್ನ ಬೆರಳಿಗೆ ಹತ್ತಿಕೊಂಡದ್ದೇ ಈ ಕೆ.ಪಿ.ರಾವ್ ಕೀ ಬೋರ್ಡ್. ಅವರು ಉದಯವಾಣಿಯಲ್ಲಿ ಕೆಲಸದಲ್ಲಿದ್ದರೆಂದು ಯಾರೋ ಹೇಳಿದ್ದರು ಆಗ. ಅವರ ಬಗ್ಗೆ ಇಷ್ಟೊಂದು ವಿವರ ರಾಜ್ಯದ ಪತ್ರಿಕೆಗಳಲ್ಲಿ ಬಂದಿರಲಿಲ್ಲ. ಇದೀಗ ಮಹಾಲಿಂಬ ಭಟ್ಟರ ಕೃಪೆಯಿಂದ ಜನರಿಗೆ ತಲುಪಿದೆ. ರಾಜ್ಯವ್ಯಾಪಿ ಕಾಲಂನಲ್ಲಿ ಬರುವ ವಿಷಯ ಕೇವಲ ಕರಾವಳಿಯ ಭಾಗಕ್ಕೆ ಸೀಮಿತವೆಂಬಂತೆ ಪ್ರಕಟವಾಗಿರುವುದು ನಮ್ಮ ಮಾನಸಿಕ ಕಿಲುಬುತನಕ್ಕೆ ಸಂಕೇತವಾಗಿದೆಯೇನೋ!
ಧನ್ಯ ಪದ್ಮನಾಭರಾಯರೇ.
ನಿಮ್ಮಿಂದ ಅದೆಷ್ಟೋ ಪತ್ರಕರ್ತರ ಕೀಲಿಮಣೆಗಳು ಕಿರುಗುಟ್ಟಿ ಹೊಟ್ಟೆ ತುಂಬಿಸುತ್ತಿರುವುದು ನಿತ್ಯ ಸತ್ಯ. ಅನ್ನದಾತ ಸುಖೀಭವ ಎಂಬಂತೆ ಕೀಬೋರ್ಡ್ ದಾತ ಕೆ.ಪಿ.ರಾವ್ ಸುಖೀಭವ.
ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ – ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ
ಪದ್ಮನಾಭಣ್ಣ ನನ್ನ ಒಡ ಹುಟ್ಟಿದ ಅಣ್ಣ ಅಲ್ಲ. ಆತ ನನಗೆ ಒಡಹುಟ್ಟಿದ ಅಣ್ಣಂದಿರಿಗಿಂತಲೂ ಹೆಚ್ಚು!
ಆತ ನನ್ನ ಅಜ್ಜನ ಊರಾದ ಕಿನ್ನಿಕಂಬಳದಲ್ಲಿ ಬೆಳೆದ ‘ಮೇಧಾವಿ’ ಹುಡುಗ. ಇಂದು ಆತ ಸಾರಸ್ವತ ಜಗತ್ತಿನ ಆಸ್ತಿ. ಆತ ಒಂದು ಓಡಾಡುವ ವಿಶ್ವಕೋಶ.
ನನ್ನ ಪ್ರೀತಿಯ ಅಣ್ಣ, ಈ ಪದ್ಮನಾಭಣ್ಣ. ನನಗಿಂತ ಆರು ವರುಷ ದೊಡ್ಡವನು. ಆತ ನನ್ನನ್ನು ಪುಟ್ಟ ಶಿಶುವಾಗಿದ್ದಾಗಿನಿಂದಲೂ ಬಲ್ಲವನು. ನಮ್ಮ ಮನೆಯವರೆಲ್ಲರಿಗೂ ಆತನನ್ನು ಕಂಡರೆ ಪ್ರೀತಿ.
ನನ್ನ ಅಜ್ಜ ಬಾಗಲೋಡಿ ರಾಮರಾಯರು ಸ್ಥಾಪಿಸಿದ ಕಿನ್ನಿಕಂಬಳ ಶಾಲೆಯಲ್ಲಿ ಈ ಆದರ್ಶ ವಿಧ್ಯಾರ್ಥಿಯು ಓದುತ್ತಾ ಇದ್ದಾಗ ಆಟ ಪಾಠ ಪಾಟಗಳಲ್ಲಿ ಆತನೇ ಮೊದಲಿಗ. ಆತ ಏಕ ಪಾಠಿ. ನನ್ನ ಮಾವನ ಮಗ ಬಾಗಲೋಡಿ ದೇವರಾಯರಂತೆಯೇ ಆತನದು “ಫೋಟೋಗ್ರಾಫಿಕ್ ಮೆಮೋರಿ.”
ಯಾರಾದರೂ ಏನಾದರೂ ವಿವರ ಕೇಳಿದರೆ, ‘ಇಂತಹಾ ಪುಸ್ತಕ ಇಷ್ಟನೇ ಪೇಜ್ ಇಷ್ಟನೇ ಪ್ಯಾರ’ ಅಂತ
ಪಿನ್ ಪಾಯಿಂಟ್ ಮಾಡುವ ಪಾಂಡಿತ್ಯ ಅವನದು.
ಆತ ಪಾಠ ಪುಸ್ತಕ ಎಂದೂ ಕೈಯ್ಯಲ್ಲಿ ಹಿಡಿದು ಕ್ಲಾಸಿಗೆ ಹೋದವನಲ್ಲ. ಶಾಲಾಕಾಲೇಜುಗಳ ಪಾಠಗಳು ಶುರು ಆಗುವ ಮೊದಲೇ ಪಠ್ಯ ಪುಸ್ತಕಗಳನ್ನು ಲೈಬ್ರರಿಯಿಂದ ಪಡೆದು ಒಮ್ಮೆ ಓದಿಬಿಟ್ಟರೆ ಆಮೇಲೆ ಅವುಗಳ ಅಗತ್ಯವೇ ಅವನಿಗೆ ಇರಲಿಲ್ಲ.
ಜ್ಞಾನದಾಹಿಯಾದ ಅವನು ದಿನಕ್ಕೆರಡು ಪುಸ್ತಕಗಳಮೇಲೆ ಕಣ್ಣಾಡಿಸಿ ಅವನ್ನು ಲೈಬ್ರರಿಗೆ ಹಿಂದಿತಿಗಿಗಿಸುತ್ತಿದ್ದ. ಎಲ್ಲಾ ಸಬ್ಜೆಕ್ಟ್ ಗಳ ಪುಸ್ತಕಗಳನ್ನು ಅವನು ಓದುತ್ತಾ ಇದ್ದ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ. ಆತ ಏಳನೇ ಕ್ಲಾಸಿಗೆ ತಲುಪುವಾಗಲೇ ಕನ್ನಡ. ಇಂಗ್ಲಿಷ್, ಹಿಂದೀ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ.
ನಾನು ಎಂಟನೇ ಕ್ಲಾಸು ತಲುಪುವಷ್ಟರಲ್ಲೇ ಆತ ತನ್ನ ಬಿಎಸ್.ಸಿ. ಮುಗಿಸಿ ಭಾರತೀಯ ಅಣು ವಿಜ್ಞಾನ ಇಲಾಖೆಯಲ್ಲಿ ಕೆಲಸ ಪಡೆದಿದ್ದ.ಅಲ್ಲಿಯೂ, ಆತ ಮಾನ್ಯ ಹೋಮಿ ಭಾಬಾ ಅವರ ಪಟ್ಟದ ಶಿಷ್ಯ ಆಗಿ ಮೆರೆದ ವ್ಯಕ್ತಿ !..
ಕ್ರಮೇಣ ಕಂಪ್ಯೂಟರ ಬಗ್ ಆತನನ್ನು ಹಿಡಿಯಿತು. ಆಮೇಲೆ, ಹಲವಾರು ಪ್ರಖ್ಯಾತ ಸಂಸ್ಥೆಳಲ್ಲಿ ಕೆಲಸ ಮಾಡಿದ ದೇಶ ವಿದೇಶ ಸುತ್ತಾಟ ಮಾಡಿದ. ವಿಯೆನ್ನಾ ಯೂನಿವರ್ಸಿಟಿಯ ಕಂಬ ಕಂಬವೂ ಅವನಿಗೆ ಪರಿಚಿತ!
ಎಲ್ಲಿದ್ದರೂ ವಾರ್ಷಿಕ ರಜೆಯಲ್ಲಿ ಒಮ್ಮೆ ಹಿಮಾಲಯದ ಚಾರಣ. ತನ್ನ ಸಂಸ್ಕೃತ ಸಂಸ್ಕೃತಿಗಳ ಟ್ಯಾಂಕ್ ತುಂಬಿಸಿಕೊಂಡೇ ಪುನಃ ಕೆಲಸಕ್ಕೆ ಮರಳುವ ಜಾಯ ಮಾನ. ತನ್ನ ಬಾಲ್ಯದ ಊರಿನ ದರ್ಶನ ಆತನಿಗೆ ಕಡ್ಡಾಯ.
ರಜಾದಲ್ಲಿ ಊರಿಗೆ ಬಂದಾಗ ಪ್ರತೀವರ್ಷ ತನ್ನ ಕಿನ್ನಿಕಂಬಳದ ಬಾಲ್ಯದ ದೋಸ್ತಿಗಲೆಲ್ಲರನ್ನೂ ಕಾಣಲೇ ಬೇಕು! ಕಾಡು ಮೇಡು ಸುತ್ತಬೇಕು! ಕಿನ್ನಿಕಂಬಳದ ಅಂಗಡಿಯ ನಮಣ ಕಾಮತ್, ಗೂಡಂಗಡಿಯ ಅಂಗವಿಕಲ ಮಾಲಿಂಗ, ಸೂಲಗಿತ್ತಿ ನಾಗಜ್ಜಿ, ಸತ್ತರ್ ಮಾಸ್ತರು, ಸದಾಶಿವ ಮಾಸ್ತರ್ , ಅಂಗಡಿ ರಶೀದ್,
ಫಾದರ್ ಸಿರಿಲ್, ಗಾಣದ ಐತು, ಡಾ. ರಾಮ ಭಟ್ಟರು, ದುಬಾಯಿಯ ನರಸಿಂಗ ರೈ, ಬೊಂಬಾಯಿಯ ಕಮಲಾಕ್ಷ ಇವರೆಲ್ಲರ ಬಳಿಯೂ ನಮ್ಮ ಪದ್ಮನಾಭಣ್ಣ ಎಡ್ರಸ್ ಸದಾ ಇದ್ದೇ ಇರುತ್ತಿತ್ತು.
ಎಂಭತ್ತನೇ ದಶಕದಲ್ಲಿ ಬೆಂಗಳೂರಿನಲ್ಲಿ ವಾಸ. ಈ ಕೆ.ಪಿ. ರಾವ್.ಅಣ್ಣನ ಮನೆಯಲ್ಲೇ ನಾನು ಮೊದಲಬಾರಿ ಕಂಪ್ಯೂಟರ್ ನೋಡಿದ್ದು! ಪ್ರೈಮರೀ ಶಾಲೆಯಲ್ಲಿ ಓದುತ್ತಿದ್ದ ನನ್ನ ಕಿರೇ ಮಗಳಿಗೆ ಕಂಪ್ಯೂಟರ್ ಗೀಳು ಹತ್ತಿಸಿದ್ದೇ ನಮ್ಮ ಪದ್ಮನಾಭಣ್ಣ.
ಬೆಂಗಳೂರಲ್ಲೂ ಕೆ.ಪಿ. ರಾವ್ ಮನೆಯಲ್ಲಿ. ಪ್ರತಿಭಾವಂತ ಎಳೆಯರ ಬಳಗ ಒಟ್ಟಾಗುತ್ತಿತ್ತು.
ಅವರಲ್ಲಿ ಶತಾವಧಾನಿಗಣೇಶ್ ಮತ್ತು ಸ್ವಾಮಿ ಛಾಯಾಪತಿ ಇಂದು ಎಲ್ಲರಿಗೂ ಪರಿಚಿತರು.
ಕೆ.ಪಿ. ರಾವ್ ಅವರಿಂದ ಇಂಜೀನಿಯರಿಂಗ್, ಕಂಪ್ಯೂಟರ್ ಮೆಡಿಕಲ್, ಡೆಂಟಲ್ ವಿದ್ಯಾರ್ಥಿಗಳಿಗೆ ಧರ್ಮಾರ್ಥ ಪಾಠ, ಪಾಠ ಆದಮೇಲೆ ಊಟೋಪಚಾರ ! ಅವನ ಮನೆ ಒಂದು ಮುಕ್ತ ವಿದ್ಯಾಪೀಠ.
ಬೆಂಗಳೂರಿನಿಂದ ಮಣಿಪಾಲಕ್ಕೆ. ಅಲ್ಲಿಂದ ಚಂಡೀಘಡಕ್ಕೆ ಹಾಗೂ ಗುವಾಹಟಿಯ ಐ.ಐ.ಟಿ.ಯಲ್ಲಿ ಪ್ರೊಫೆಸರ್ ಗಿರಿ.
ಪ್ರತೀ ವರುಷ ಹಿಮಾಲಯದ ಜಾರಣ ನಿರಂತರ ಸಾಗಿದೆ. ಚಾರೋ ಧಾಮ್, ವ್ಯಾಲಿ ಆಫ್ ಫ್ಲವರ್ಸ್, ಭೋಜ ಪಾಸ್ , ಕೈಲಾಸ ಪರ್ವತ್….ಹಿಮಾಲಯದಲ್ಲಿ ಆತ ಒಬ್ಬಂಟಿಯಾಗಿ ಕಾಲುಸವೆಸದ ಜಾಗವಿಲ್ಲ..
ಈಗ ಮರಳಿ ಮಣಿಪಾಲಕ್ಕೆ! ಯುವಜನರ ಸಹವಾಸ ಈ ಪ್ರೊ. ಕೆ. ಪಿ. ರಾಯರಿಗೆ ಇಷ್ಟ..
ಪ್ರತಿಭೆಯನ್ನು ಬೆಳಗಿಸುವ ಪರುಷ ಮಣಿ ನಮ್ಮ ಪದ್ಮನಾಭಣ್ಣ..
ಆತನಿಗೆ ಕೊಡಲು ಶುಭ ಹಾರೈಕೆಗಳ ಹೊರತು ನನ್ನಲ್ಲೇನಿದೆ?
ಈ ಪ್ರತಿಕ್ರಿಯೆ ಬರೆಯಯುವ ಸಂಧರ್ಭ ಒದಗಿಸಿಕೊಟ್ಟ ಮಾನ್ಯ ಪಂಡಿತಾರಾಧ್ಯರು ಮತ್ತು
ನನ್ನ ಇ-ಮಿತ್ರ ಅಶೋಕವರ್ಧನರಿಗೆ ನನ್ನ ವಂದನೆಗಳು.
ಇಂತೀ
ಕೇಸರಿ ಪೆಜತ್ತಾಯ
.
ಪೆಜತ್ತಾಯರೇ, ಬಹು ಆತ್ಮೀಯ ಸಮಗ್ರ ವಿವರಣೆ ನೀಡಿದ್ದೀರಿ, ಮಾನ್ಯ ರಾಯರ ಬಗ್ಗೆ. ಪ್ರಜಾವಾಣಿಗೆ, ಅಥವಾ ನಿಮ್ಮಿಷ್ಟದ ಕೆ೦ಡಸ೦ಪಿಗೆಗೆ, ಮಹಾಲಿ೦ಗರ ಲೇಖನದ ಅನುಸರಣೆಯಾಗಿ ಅವಶ್ಯ ಪ್ರಕಟಿಸಬೇಕು. ವ೦ದನೆಗಳು. ಜಿ೦ಕೆ ಸುಬ್ಬಣ್ಣ, ಪುತ್ತೂರು.
ಪ್ರಿಯ (ಡಿಯರ್/ಡೀರ್?) ಸುಬ್ಬಣ್ಣನವರೆ,
ಕನ್ನಡದಲ್ಲಿಯೇ ಯೋಚಿಸಿ, ಬರೆಯಿರಿ, ಮಾತನಾಡಿ
ಕೆ.ಪಿ. ರಾಯರು ಮತ್ತು ಬಾಗಲೋಡಿಯವರು ಇಬ್ಬರೂ ಕಿನ್ನಿಕಂಬಳದವರು
ಎಂದು ಓದಿ ತುಂಬ ಖುಷಿಯಾಯ್ತು. ನಾನು ಊರಿಗೆ ಹೋದಾಗಲ್ಲೆಲ ಅಲಿ ತಿರುಗಾಡುತ್ತೇನೆ.
ಇನ್ನು ಮುಂದೆ ಆ ಊರಿಗೆ ಹೋದಾಗ ವಿಶೇಷ ಖುಷಿ ಆಗುವುದು ಖಂಡಿತಾ.
‘ನಮ್ಮವರನ್ನು’ ನಮಗೆ ಪರಿಚಯಿಸ್ದಿದಕ್ಕೆ ಥ್ಯಾಂಕ್ಸ್.
ಕೆಪಿರಾಯರ ಕುರಿತ ಲೇಖನ ಆಲ್ ಎಡಿಷನ್‌ಗೇ ಬರಬೇಕಾಗಿತ್ತು.
ಇತ್ತೀಚಿನ ಪತ್ರಿಕೋದ್ಯಮದ್ಲಲಿ ಇಂತಹ ತಾಪತ್ರಯಗಳು ಸಾಕಷ್ಟು ಆಗುತ್ತಿವೆ.
ಬಿ.ಎಂ.ಹನೀಫ್, ಬೆಂಗಳೂರು
ಕೆ.ಪಿ. ರಾಯರ ಬಗ್ಗೆ ಮಹಾಲಿಂಗರು ಬರೆದದ್ದನ್ನು ನೋಡಿದೆ.
ಶ್ರೀ ಮಹಾಲಿಂಗರ ಬಗ್ಗೆ ಅಶೋಕರು ಮತ್ತೆ ಮತ್ತೆ ಬರೆಯುತ್ತಿರುವುದೇಕೆ ಎಂದು ಈಗ ತಿಳಿಯಿತು.
ಅದ್ಭುತ ಬರಹ. ಕೆ.ಪಿ.ರಾಯರ ಮಹತ್ತಿನ ಬಗ್ಗೆ ಗೆಳೆಯ (ಕೆ.ಪಿ.ರಾಯರಿಗೂ ಗೆಳೆಯ)
ಹರಿ ಪ್ರಸಾದ ನಾಡಿಗ್ ಹೇಳುತ್ತಿದ್ದ.
ವಿವರಗಳಿಗಾಗಿ ಧನ್ಯವಾದಗಳು (ನಿಮಗೂ ಮಹಾಲಿಂಗ ಭಟ್ಟರಿಗೂ).
ವಂದನೆಗಳು,
ವಸಂತ್ ಕಜೆ.
ಕೆ.ಪಿ.ರಾಯರು ಹುಟ್ಟಿದ ಊರಲ್ಲೇ ನಾನು ಹುಟ್ಟಿದೆ
ಎನ್ನುವುದೇ ನನ್ನ ಪಾಲಿನ ಸೌಭಾಗ್ಯ.
ಬಾಗಲೋಡಿ ಮನೆ ನಮ್ಮ ಕೂಗಳತೆ ದೂರದಲ್ಲಿದೆ.
ಕಂಪ್ಯೂಟರ್ ಕನ್ನಡ ತಂತ್ರಜ್ಞಾನಕ್ಕೆ ಭಾಷ್ಯಬರೆದ
ನಮ್ಮೂರಿನ ಮಹಾನ್ ಪ್ರತಿಭೆಗೆ ಶರಣು ಶರಣು.
ವಾದಿ
ನನಗೆ ಕೆ.ಪಿ.ರಾಯರ ಪರಿಚಯವಾದದ್ದು ಅವರ ಕನ್ನಡ ಸಾಫ್ಟ್ ವೇರಿನಿಂದ. ಬಂಟ್ವಾಳ ತಾಲೂಕಿನ ಒಂದು ಮೂಲೆಯಲ್ಲಿರುವ ವಾಮದಪದವಿನಲ್ಲಿ ಒಂದು ಸಣ್ಣ ಪ್ರಿಂಟಿಂಗ್ ಪ್ರೆಸ್ ಇತ್ತು. ಆ ಮನುಷ್ಯ ಒಂದು ಟೇಬಲ್ ಟಾಪ್ ಆಫ್ ಸೆಟ್ ಪ್ರಿಂಟಿಂಗ್ ಮೆಶಿನ್ ಮತ್ತು ಒಂದು ಕಂಪ್ಯೂಟರ್ ಇಟ್ಟುಕೊಂಡು ಗುದ್ದಾಡುತ್ತಿದ್ದರು. ಅವರ ಕಂಪ್ಯೂಟರಿಗೆ ರಾಯರು ತಮ್ಮ ಸಾಫ್ಟ್ ವೇರ್ ಹಾಕಿಕೊಟ್ಟಿದ್ದರು. ಅದು ಬಹುಶಃ ೧೯೯೦ ಇರಬೇಕು. ನನ್ನ ಪ್ರೆಸ್ ಇದ್ದದ್ದು ಬಿ.ಸಿ.ರೋಡಿನಲ್ಲಿ. ಹೈಸ್ಕೂಲಿಗೆ ಹೋಗುತ್ತಿದ್ದಾಗ ನಾನು ಟೈಪಿಂಗ್ ಶಾಲೆಗೆ ಹೋಗಿದ್ದೆ. ಹಾಗಾಗಿ, ಸೀಸದ ಮೊಳೆಗಳನ್ನು ಜೋಡಿಸುತ್ತ ನರಕ ಬರುವಾಗೆಲ್ಲ ನಾನು, “ಇದನ್ನು ಟೈಪ್ ಮಾಡುವ ಹಾಗಿದ್ದರೆ ಎಷ್ಟು ಸುಲಭವಾಗುತ್ತಿತ್ತಲ್ಲ” ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಈಗ ಅದು ಸಾಧ್ಯವಾಗಿತ್ತು!
ನಾನೂ ಒಂದು ಕಂಪ್ಯೂಟರ್ ತೆಗೆದುಕೊಂಡೆ. ವಾಮದಪದವಿನ ಪ್ರೆಸ್ಸಿನ ಆ ಮನುಷ್ಯನ ಮೂಲಕ ಪರಿಚಯವಾಗಿ, ಕೆ.ಪಿ.ರಾಯರು ಬಂದು ಅದರಲ್ಲಿ ಅವರ ಸಾಫ್ಟ್ ವೇರ್ ಪ್ರತಿಷ್ಠೆ ಮಾಡಿಕೊಟ್ಟರು. ನನಗೆ ಇತ್ತ ಕಂಪ್ಯೂಟರಿನ ತಲೆ ಬುಡ ಗೊತ್ತಿಲ್ಲ. ಅತ್ತ ಸಾಫ್ಟ್ ವೇರುಗಳ ಕುಂಡೆ ಬಾಯಿ ಗೊತ್ತಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆದರೂ ರಾಯರಿಗೆ ಫೋನ್ ಮಾಡುವುದು. ಅವರು, ಅದು ಹೇಗೆ ಪುರುಸೊತ್ತು ಮಾಡಿಕೊಳ್ಳುತ್ತಿದ್ದರೋ ಏನೋ, ಮಣಿಪಾಲದಿಂದ ಬಿ.ಸಿ.ರೋಡಿಗೆ, ಬಸ್ ಹತ್ತಿಕೊಂಡು, ಹಾಜರು. ಅವರ ವ್ಯಕ್ತಿತ್ವದ ಪರಿಚಯವೇ ಇದ್ದಿರದ ನಾನು ಎಷ್ಟು ಸಲ ಅವರಿಗೆ ಹೀಗೆ ತೊಂದರೆ ಕೊಟ್ಟಿದ್ದೆನೋ ಏನೋ, ಆದರೆ ಅವರು ಒಂದು ಸಲವಾದರೂ ಗೊಣಗಿದವರಲ್ಲ. ಬಂದದ್ದಕ್ಕೆ, ಸರಿ ಮಾಡಿಕೊಟ್ಟದ್ದಕ್ಕೆ, ದುಡ್ಡು ತೆಗೆದುಕೊಂಡವರೂ ಅಲ್ಲ.
ಬಿ.ಸಿ.ರೋಡಿಗೆ ಬಂದರೆ ಅವರ ಕರುಳು ವಾಮದಪದವಿಗೆ ಎಳೆಯುತ್ತಿತ್ತು. ಆ ಮನುಷ್ಯನೋ ಮಹಾ ಅಧ್ವಾನ. (ಅವರೀಗ ಇಲ್ಲ. ಈ ಲೋಕ ಬೇಡವೆಂದು ಬಿಟ್ಟು ಹೋದರು. ಅವರ ಪತ್ನಿ ಸಿದ್ದಕಟ್ಟೆಯಲ್ಲಿ ಪ್ರೆಸ್ ಇಟ್ಟುಕೊಂಡಿದ್ದಾರೆ. ಧೈರ್ಯವಾಗಿ ಬದುಕನ್ನು ಎದುರಿಸಿ ಮುಂದುವರಿದಿದ್ದಾರೆ. ಆಕೆಯ ಬಗ್ಗೆ ನನಗೆ ತುಂಬಾ ಗೌರವ ಇದೆ). ಇವರಾಗಿಯೇ ಹುಡುಕಿಕೊಂಡು ಹೋದರೂ ಸಿಕ್ಕುವುದು ಕಷ್ಟ. ರಾಯರು ಅಲ್ಲಿ ಹೋಗಿ ಆ ಮನುಷ್ಯನಿಗಾಗಿ ಕಾದು ಕುಳಿತು, ಅವರ ಸಮಸ್ಯೆ ಪರಿಹರಿಸಿ, ಒಂದು ಪೈಸೆ ತೆಗೆದುಕೊಳ್ಳದೆ, ಕಡೆಗೆ ಅವರೂ, ನಾನೂ ನಮ್ಮದೇ ದುಡ್ಡಿನಲ್ಲಿ ಚಾ ಕುಡಿದು ಹಿಂದೆ ಬಂದದ್ದೂ ಇದೆ. ಆಗ ನನ್ನ ಹತ್ತಿರ ಯೆಜ್ಡಿ ಇತ್ತು. ಹಾಗೆ ನಾನು ಅವರ ಸಾರಥಿ.
ದಾರಿಯಲ್ಲಿ ಹೋಗುವಾಗ ಯಾವುದೋ ಒಂದು ಭೂತದ ಗುಡಿ ಕಂಡರೆ “ಇಂವ ಇಲ್ಲಿದ್ದಾನೋ, ಅದು ಹೇಗೆ ಇಲ್ಲಿಗೆ ಬಂದ?” ಎಂಬ ಕುತೂಹಲ. ಯಾತಕ್ಕೋ ನಾನು ಒಂದು ದಿವಸ ಅವರ ಹತ್ತಿರ ಅಭಿನವಗುಪ್ತನ ಹೆಸರು ಹೇಳಿದೆ. “ಮುಂದುವರಿಸಿ. ನಾನೂ ಸ್ವಲ್ಪ ಕೇಳುತ್ತೇನೆ” ಎಂದರು. (ಅಭಿನವ ಗುಪ್ತ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಬಹು ದೊಡ್ಡ ಹೆಸರು) ರಸ್ತೆ ಬದಿಯಲ್ಲಿ ಇದ್ದದ್ದರಲ್ಲಿ ಸಣ್ಣ ಹೋಟೆಲು ಕಂಡರೆ ಅಲ್ಲಿ ಚಾ ಕುಡಿಯಲೇ ಬೇಕು! ಚಾದಂಗಡಿಯ ಮಾಲಿಕನ ಹತ್ತಿರ ಕಷ್ಟ ಸುಖದ ಎರಡು ಮಾತಾಡಬೇಕು!
ಒಂದು ಸಲ ಯಾವುದೋ ಕಾರಣಕ್ಕೆ ನಮ್ಮ ಒಬ್ಬ ಹುಡುಗ ಹಮೀದ್ ನನ್ನು ಮಣಿಪಾಲದ ಅವರ ಮನೆಗೆ ಕಳಿಸಿದ್ದೆ. ಅಂವ ಭಯಂಕರ ಚಾಲಾಕಿ. ರಾಯರು ಮತ್ತೆ ನನಗೆ ಸಿಕ್ಕಿದಾಗ ಹೇಳಿದರು: “ಅಡ್ಡಿಯಿಲ್ಲ ನಿಮ್ಮ ಹುಡುಗ, ನನ್ನ ಮನೆ ನೋಡಿ, ಇದು ನಿಮ್ಮ ಸ್ವಂತದ್ದೋ ಬಾಡಿಗೆಯದೋ ಎಂದು ವಿಚಾರಿಸಿದ!” ಅಂದರು.
ಮಹಾಲಿಂಗರು ಅವರನ್ನು ಜೇನಿನಂಥ ಜನ ಎಂದಿದ್ದಾರೆ. ಇದಕ್ಕಿಂತ ಚೆನ್ನಾಗಿ ರಾಯರನ್ನು ವರ್ಣಿಸುವುದು ಸಾಧ್ಯವಿಲ್ಲವೆನಿಸುತ್ತದೆ.
***************
“ತಂತ್ರಜ್ಞಾನ ಮತ್ತು ಸಂಸ್ಕೃತಿ- ಈ ಎರಡು ಶಬ್ದಗಳಲ್ಲಿ ಒಂದು ಬಗೆಯ ಹಗೆತನ ಇರಬೇಕು ಅಂತ ಇತ್ತಲ್ಲವೇ ನಮ್ಮ ನಂಬಿಕೆ? ಹಾಗಾಗಿ ಸಂಸ್ಕೃತಿಯನ್ನು ತಂತ್ರಜ್ಞಾನವು ಅತ್ಯಾಚಾರ ಮಾಡಿಬಿಡುತ್ತದೆ ಅಂತ ನಾವು ಹಲವು ವರ್ಷಗಳಿಂದ ಭ್ರಮಿಸಿದ್ದೇವೆ! ಕಂಪ್ಯೂಟರನ್ನು ಈಗ ತಂತ್ರಜ್ಞಾನದ ಜತೆಗೆ ಇಟ್ಟು ಬಿಡಲಾಗಿದೆ. ನಾಡಿನ ದೊಡ್ಡ ಸಂಸ್ಕೃತಿ ಚಿಂತಕರು ಕಂಪ್ಯೂಟರ್ ತಂತ್ರಜ್ಞರನ್ನು ‘ಕಂಪ್ಯೂಟರ್ ಕೂಲಿಗಳು ಅಂತ ತಪ್ಪಾಗಿ ಕರೆದು ವರ್ಷಗಳೇ ಆಗಿವೆ! ಅಧ್ಯಾತ್ಮ, ಕಲೆ, ಸಂಸ್ಕೃತಿ ಚಿಂತನೆ, ಕಂಪ್ಯೂಟರ್ ಇವೆಲ್ಲ ನಿಜವಾಗಿ ಬೇರೆ ಆಗಬೇಕಾಗಿಲ್ಲ. ಪ್ರತಿಭಾವಂತ ಮನಸ್ಸು ಇವನ್ನೆಲ್ಲ ಬೆಸೆದು ಬದುಕನ್ನು ತುಂಬಿದ ಜೇನಿನ ಹುಟ್ಟಾಗಿ ಮಾಡಬಲ್ಲುದು.” ಎಂದಿದ್ದಾರೆ ಮಹಾಲಿಂಗರು. ಈ ಮಾತುಗಳನ್ನು ಇಡಿಯಾಗಿ ನುಂಗುವುದು ನನಗೆ ಕಷ್ಟ. ಆಧುನಿಕ ತಂತ್ರಜ್ಞಾನ ಮನುಷ್ಯನಿಗೆ ಒಳ್ಳೆಯದು ಮಾಡುತ್ತದೆ ಎನ್ನುವುದಕ್ಕೆ ಕಾರಣಗಳು ನನಗೆ ಸಿಕ್ಕುತ್ತಿಲ್ಲ. ಅದು ಅವನನ್ನು ಹೆಚ್ಚು ಹೆಚ್ಚು ವಿಕಾರಗೊಳಿಸುತ್ತಿದೆ, ಅಂತಿಮವಾಗಿ ಅದು ಮನುಷ್ಯಸಂತತಿಯನ್ನು ಈ ಗ್ರಹದಿಂದ ಸಮೂಲ ನಾಶ ಮಾಡಿಬಿಡುತ್ತದೆ ಎಂದು ನನ್ನ ಮನಸ್ಸು ಹೇಳುತ್ತಿದೆ.
ಸುಂದರ ರಾಯರೇ, ಮನುಷ್ಯನ ಆವಿಷ್ಕಾರಗಳಲ್ಲೇ ಅತ್ಯಂತ ಮುಂದುವರಿದದ್ದು, ಉನ್ನತ ಮಟ್ಟದ್ದು ಎಂದು ಪರಿಗಣಿಸಲ್ಪಟ್ಟಿರುವ ಗಣಕಯಂತ್ರದಲ್ಲೇ ಕೆ.ಪಿ. ರಾಯರು ಸಾಮಾನ್ಯರಿಗೂ ಉಪಯೋಗವಾಗುವ ಕೆಲಸ ಮಾಡಿ ನಿಮ್ಮಂತಹ ಮುದ್ರಕರ ಕೆಲಸ ಹಗುರ ಮಾಡಿದ್ದನ್ನು ಕಂಡ ಮೇಲೂ ತಂತ್ರಜ್ಞಾನದ ಬಗೆಗೆ ಭಯವೇಕೆ? ಸೇಡಿಯಾಪು ಅವರ ಮಾತನ್ನೇ ಇಲ್ಲಿಗೆ ಅನ್ವಯಿಸಿದರೆ, ತಂತ್ರಜ್ಞಾನವನ್ನು ನಮ್ಮ ಒಳ್ಳೆಯದಕ್ಕೆ ಉಪಯೋಗಿಸುವ ವಿವೇಕ ನಮಗಿರಬೇಕೇ ಹೊರತು ತಂತ್ರಜ್ಞಾನದಿಂದ ವಿಕಾರಗೊಳ್ಳುವ ಮಟ್ಟಕ್ಕೆ ನಾವು ಹೋಗಬಾರದಲ್ಲವೇ? ಈ ಗಣಕಯಂತ್ರ, ಅಂತರಜಾಲ, ಕನ್ನಡ ಅಕ್ಷರಗಳನ್ನು ಮೂಡಿಸುವ ತಂತ್ರಾಂಶ ಇವೆಲ್ಲ ಇರುವುದರಿಂದಲೇ ಅಲ್ಲವೇ ಜೇನಿನಂಥ ರಾಯರ ಪರಿಚಯ ಲೇಖನ ನಾವು ಓದಲು ಸಾಧ್ಯವಾದದ್ದು, ಅಂತಹವರ ಸಾಧನೆ ನೋಡಿ ಪ್ರೇರಣೆ ಪಡೆಯಲು ಆಗುವುದು? ಇದರಿಂದ ನಮಗೆ ಒಳಿತೇ ಆಗುವುದಲ್ಲವೇ? ಮತ್ತೆ ಅದೇ ಹಳೆಯ ಮಾತು – ಯಾವ ಆವಿಷ್ಕಾರವನ್ನೂ ಒಳ್ಳೆಯದಕ್ಕಾಗಿ ಅಥವಾ ಸ್ವ/ಪರ ವಿನಾಶಕ್ಕಾಗಿ ಬಳಸುವುದು ಆಯಾಯ ವ್ಯಕ್ತಿಯ ವಿಚಾರ, ಸಂಸ್ಕಾರಕ್ಕೆ ಬಿಟ್ಟದ್ದು.
ಕಳೆದ ವರ್ಷ ’ಆಳ್ವಾಸ್ ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಲು ಹೋಗಿದ್ದ ನನಗೆ, ಬಂದಿದ್ದ ಮೊದಲ ಸಾಲಿನ ಗಣ್ಯರಲ್ಲಿ ಎದ್ದು ಕಾಣುತ್ತಿದ್ದ ವ್ಯಕ್ತಿಯೊಬ್ಬರು ಯಾರೆಂಬ ಕುತೂಹಲ. ಆಗೀಗ ಚಪ್ಪರದ ಹೊರಗೆ-ಒಳಗೆ ಓಡಾಡುತ್ತಾ ಉದ್ದನೆಯ ಕೆದರಿದ ತಲೆಗೂದಲುಗಳುಳ್ಳ, ಕನ್ನಡಕಧಾರಿಯಾಗಿದ್ದ, ಎತ್ತರದ ಈ ವ್ಯಕ್ತಿ ಅದೆಷ್ಟೋ ಜನರನ್ನು ಹಸನ್ಮುಖಿಯಾಗಿ ಮಾತಾಡಿಸುತ್ತಾ ಇದ್ದರು. ಇವರನ್ನು ಎಲ್ಲಿಯೂ ನೋಡಿಲ್ಲ, ಚಿತ್ರವನ್ನೂ ಕಂಡಿಲ್ಲವಲ್ಲಾ, ನುಡಿಸಿರಿಯ ಗಣ್ಯ ಆಹ್ವಾನಿತರಿಗೆ ಕೊಡುವ ದೊಡ್ಡ badge ತಗುಲಿಸಿಕೊಂಡು ಓಡಾಡುತ್ತಿರುವ ಇವರು ಯಾರಿರಬಹುದು? ಎಂದು ನನ್ನಲ್ಲೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದ ನನಗೆ ಉತ್ತರ ಸಿಕ್ಕಿದ್ದು ನುಡಿಸಿರಿಯ ಮೂರನೆಯ ದಿನ ಇವರು ವೇದಿಕೆಯೇರಿ ಸನ್ಮಾನಿತರ ಸಾಲಿನಲ್ಲಿ ಕೂತಾಗ. ಇವರ ಪರಿಚಯ ಪತ್ರ ಓದುತ್ತಿದ್ದಂತೆ ಅರೆರೇ, ಇಷ್ಟು ಹಿರಿಯ ವ್ಯಕ್ತಿ, computer ಅಂದ್ರೆ ಅದೇನೋ ಮಹಾಮಾಯೆಯ ಯಂತ್ರ ಎಂದು ಅಚ್ಚರಿಗೊಳ್ಳುತ್ತಿದ್ದ ಕಾಲದಲ್ಲೇ, ಕನ್ನಡದ software ಅಭಿವೃದ್ಧಿಪಡಿಸಿದವರೇ ಎಂದು ತಿಳಿದು ಆಶ್ಚರ್ಯವಾಯಿತು. ನುಡಿಸಿರಿಯಲ್ಲಿ ಇವರನ್ನು ಕರೆದು ಸನ್ಮಾನ ಮಾಡದಿದ್ದರೆ ಬಹುಶಃ ಮುದ್ರಣ ಕಾರ್ಯದಲ್ಲಿ, ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಹಿರಿಯರು ಮತ್ತು ಕೆಲವೇ ಕಿರಿಯರನ್ನು ಬಿಟ್ಟರೆ ಉಳಿದ ನನ್ನಂತಹವರಿಗೆ ನಮ್ಮೊಂದಿಗೇ ಇರುವ ಇವರ ಪರಿಚಯ ಆಗುತ್ತಿರಲಿಲ್ಲ.
ಅಂದು ಇವರ ಸಂಕ್ಷಿಪ್ತ ಪರಿಚಯ ಕೇಳಿದ್ದ ನನಗೆ ಮಹಾಲಿಂಗರ ಲೇಖನದಿಂದ ಇನ್ನೂ ಹೆಚ್ಚಿನ ವಿವರ ದೊರೆತಂತಾಯ್ತು. ಈ ಆತ್ಮೀಯವಾದ ಪರಿಚಯ ಲೇಖನಕ್ಕೆ ಧನ್ಯವಾದಗಳು.
ಮಹಾಲಿಂಗರ ಲೇಖನವನ್ನು ನಾಡಿನಾದ್ಯಂತದ ಪುರವಣಿಯಲ್ಲಿ ಪ್ರಕಟಿಸಿದ್ದರೆ ರಾಯರ ಕನ್ನಡ ಅಕ್ಷರಾವಿಷ್ಕಾರದ ಫಲ ಉಣ್ಣುತ್ತಿರುವ ಪ್ರಜಾವಾಣಿ ಒಳ್ಳೆಯ ಕೆಲಸ ಮಾಡಿದಂತಾಗುತ್ತಿತ್ತು.
ಪ್ರಿಯ ಮಧುಸೂದನ್
ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇ-ತ್ಯಾಜ್ಯಗಳು ಆಧುನಿಕ ತಂತ್ರಜ್ಞಾನದ ಉತ್ಪಾದನೆಗಳು. ಅವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂದು ಹೇಳುತ್ತೀರಾ?
ಸುಂದರ ರಾಯರೇ, ಬಹುಶಃ ಇಲ್ಲಿನ ಲೇಖನಕ್ಕೆ ಹೊರತಾದ ವಿಷಯ; ಆದರೂ ಹೇಳಿಬಿಡುತ್ತೇನೆ. ನೀವೇ ಅಂದಂತೆ, ಪ್ಲಾಸ್ಟಿಕ್ ಮತ್ತು ’ಇ’ ವಸ್ತುಗಳು ತ್ಯಾಜ್ಯಗಳಾದಾಗ ಸಮಸ್ಯೆಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಆದಷ್ಟೂ ಕಡಿಮೆ ಮಾಡುವುದು ಒಂದು ದಾರಿಯಾದರೆ ನಿರುಪಯೋಗಿ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆಗಾಗಿ ಕಳಿಸುವುದು ಎರಡನೆಯ ದಾರಿ. ಪ್ಲಾಸ್ಟಿಕ್ ಅನ್ನು ಪೂರ್ತಿ ತ್ಯಜಿಸುವ ದಾರಿ ಸುಲಭದ್ದಲ್ಲ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಆದಾಗ್ಯೂ ಮನೆಗೆ ಬಂದು ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಒಂದು ಪ್ಲಾಸ್ಟಿಕ್ ಲಕೋಟೆಯಲ್ಲಿ ಸಂಗ್ರಹಿಸಿ ಚಿಂದಿ ಆಯುವವರಿಗೆ ಕೊಡುವುದು ನಾನು ಕಂಡುಕೊಂಡ ದಾರಿ.
ಇ-ತ್ಯಾಜ್ಯದ ಮರುಬಳಕೆ/ಸಂಸ್ಕರಣೆ ಪ್ಲಾಸ್ಟಿಕ್‍ಗಿಂತ ಸಂಕೀರ್ಣವಾಗಿದೆ. ಆ ಸೌಲಭ್ಯಗಳು ನಮ್ಮಲ್ಲಿನ್ನೂ ಪೂರ್ತಿಯಾಗಿ ಬಂದಿಲ್ಲ. ಬೆಂಗಳೂರಿನಂತಹ ಮಹಾನಗರಿಗಳಲ್ಲಷ್ಟೇ ಸದ್ಯಕ್ಕೆ ಲಭ್ಯ. ಸದ್ಯೋಭವಿಷ್ಯದಲ್ಲಿ ಎಲ್ಲೆಡೆ ಇದಕ್ಕೂ ಒಂದು ಪರಿಹಾರ ಸಿಗಬಹುದೆಂದು ನಾನೆಣಿಸಿದ್ದೇನೆ.
ರಾಯರೇ
ಪ್ರಾಯ ಹೆಚ್ಚಾಗುವುದು ಸಹಜ, ಹಾಗೆಂದು ಮನಸ್ಸಿನ ಮುದಿತನಕ್ಕೆ ಆಸ್ಪದ ಕೊಡುವುದು ಕೂಡದು. ಪ್ಲ್ಯಾಸ್ಟಿಕ್, ಇ-ಕಸಗಳಿಗೇ ಯಾಕೆ ನಿಂತಿರಿ? ತಿನ್ನುವ, ಕುಡಿಯುವ, ಸೇವಿಸುವ, ವಿಹರಿಸುವ, ಕಲ್ಪಿಸುವ ಒಂದೊಂದೂ ಪರಿಷ್ಕರಣೆಗೆ ಒಳಗಾಗುತ್ತಲೇ ಇತ್ತು/ ಇದೆ/ ಇರಬೇಕು. “ವಿವೇಚನೆ ವಿವೇಚನೆ” ಎಂಬ ಕೀಚಲು ಸದ್ದಿನೊಡನೇ ಪರಿವರ್ತನೆಯ ಭಾರೀ ರಥ ಹಳೆಯ ಮೌಲ್ಯಗಳನ್ನು ಹುಡಿಗುಟ್ಟಿ ಹೊಸತು ಹೊಸತನ್ನು ಕಾಣಿಸುವುದನ್ನು ಒಪ್ಪಿಕೊಳ್ಳಲೇಬೇಕು. ಕಮ್ಮಾರ, ಕುಂಬಾರ, ಚಮ್ಮಾರ, ಜೇಡ ಎಷ್ಟೊಂದು ಹೋಯ್ತು. ಸಿಂಪಿಗ, ಅಕ್ಕಸಾಲಿ, ದಿನಸಿಯಂಗಡಿ, ಹೆಚ್ಚೇಕೆ – ನನ್ನ ಬಿಡಿ ಪುಸ್ತಕ ಮಳಿಗೆಯೂ ಅಳಿಸಿ ಹೋಗುವುದು ಖಚಿತ. ‘ಚಿಕ್ಕದು ಚೊಕ್ಕದು’ ಉಕ್ತಿ ಚಂದ ಆದರೆ ವಾಸ್ತವ ಬೃಹತ್, BIGಗಳ ಕಡೆಗೇ ತುಡಿಯುತ್ತದೆ. ನಿರಾಶೆ, ಸಿನಿಕತನ, ವಿಧಿವಾದವಲ್ಲ – ಪ್ರಕೃತಿನಿಯಮ. ಹಗ್ಗ ಜಗ್ಗುವವರೊಡನೆ ನಾವೂ ಕೈಸೇರಿಸುವಾ ಆದರೆ ನಮ್ಮ ಸಂಸ್ಕಾರಕ್ಕನುಗುಣವಾಗಿ ವಿವೇಚನೆಯ ಕೀಚಲು ಧ್ವನಿ ನಮ್ಮದಿರಲಿ ಖಂಡಿತ.
ಆಕ್ರೋಶ ವರ್ಜನ
ಪ್ರಿಯ ಮಧುಸೂದನ್,
ನಾನು ಎತ್ತಿದ್ದು ಆಧುನಿಕ ತಂತ್ರಜ್ಞಾನದ ವಿಷಯ. ನೀವು ಪ್ರತಿಕ್ರಿಯೆ ನೀಡಿದ್ದೂ ಅದಕ್ಕೇ. ಪ್ಲಾಸ್ಟಿಕ್, ಇ-ತ್ಯಾಜ್ಯಗಳು ಆಧುನಿಕ ತಂತ್ರಜ್ಞಾನದ ನೇರ ಬಳುವಳಿಗಳು. ಹಾಗಾಗಿಯೇ ನಾನು ಅವುಗಳ ಪ್ರಶ್ನೆಯನ್ನು ಎತ್ತಿದ್ದು.
ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ನೀವು ಅಂದುಕೊಂಡಿರುವಷ್ಟು ಸುಲಭದ್ದಲ್ಲ. ಅದರ ರೂಪಗಳು ಅಸಂಖ್ಯಾತ. “ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಒಂದು ದಾರಿ” ಎನ್ನುತ್ತೀರಿ ನೀವು. ನನಗೆ ನಗು ಬರುತ್ತದೆ. ಯಾರು ಕಡಿಮೆ ಮಾಡುವವರು? ಹೇಗೆ ಕಡಿಮೆ ಮಾಡುವುದು? ಯಾರಿಗೆ ಯಾರು ಹೇಳುವವರು? ಯಾರ ಮಾತನ್ನು ಯಾರು ಕೇಳುತ್ತಾರೆ? ಆಗದ ಹೋಗದ ಪರಿಹಾರಗಳನ್ನು ಹೇಳಿ ಪ್ರಯೋಜನವಿಲ್ಲ. ಶಾಸ್ತ್ರ ಹೇಳಲಿಕ್ಕೆ, ಬದನೆಕಾಯಿ ತಿನ್ನಲಿಕ್ಕೆ ಎಂಬ ಗಾದೆ ಕೇಳಿದ್ದೀರಲ್ಲ? ಇದೂ ಅಷ್ಟೇ. ಯಾರು ಏನೇ ಹೇಳಿದರೂ ಪ್ಲಾಸ್ಟಿಕ್ ಬಳಕೆ, ಅದನ್ನು ತಯಾರಿಸಲು ಬೇಕಾದ ಕಚ್ಚಾವಸ್ತು ಸಿಗುವ ತನಕ ಅವ್ಯಾಹತವಾಗಿ ಮುಂದುವರಿಯುತ್ತದೆ.
ಇನ್ನು ಚಿಂದಿ ಆಯುವವರಿಗೆ ಕೊಡುವ ವಿಚಾರ. ನಿಮ್ಮಲ್ಲಿದ್ದ ಪ್ಲಾಸ್ಟಿಕ್ಕನ್ನು ನೀವು ಅವರಿಗೆ ದಾಟಿಸಿದಿರಿ. ಅವರು ಅದನ್ನು ಯಾರಿಗೆ ದಾಟಿಸುತ್ತಾರೆ? ಹಾಗೆ ತೆಗೆದುಕೊಂಡವರು ಅದನ್ನು ಏನು ಮಾಡುತ್ತಾರೆ? (ದೊಡ್ಡ ದೊಡ್ಡ ಕಂಪೆನಿಗಳು ತಮ್ಮಲ್ಲಿರುವ ಹಳೆಯ ಕಂಪ್ಯೂಟರ್ ಗಳನ್ನು ಶಾಲೆಗಳಿಗೆ ದಾನ ಕೊಟ್ಟು ತಮ್ಮ ಆವರಣವನ್ನು ಸ್ವಚ್ಛ ಮಾಡಿಕೊಂಡಂತೆಯೇ ಅಲ್ಲವೆ ಇದು?). ಪ್ಲಾಸ್ಟಿಕ್ ಮರುಬಳಕೆ, ಸಂಸ್ಕರಣಗಳು ಸುಲಭದ ವಿಷಯಗಳಲ್ಲ. ಸುಟ್ಟರೆ ಅದರಿಂದ ಹೊರಡುವ ಅನಿಲಗಳು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ. ರಸ್ತೆ ಮಾಡಲು ಬಳಸಬಹುದೆಂದು ತಜ್ಞರು ಹೇಳುತ್ತಾರೆ. ಆ ರಸ್ತೆಯ ಧೂಳು ತಿಂದವರ ಗತಿ ಏನಾದೀತೆಂಬುದು ಸಂಶೋಧನೆಗಳಿಂದ ತಿಳಿಯಬೇಕಷ್ಟೆ. ರಿಸೈಕ್ಲಿಂಗ್ ಮಾಡುವ ಪ್ರಕ್ರಿಯೆಯಲ್ಲಿ ಏನೇನು ಅಪಾಯಗಳು ಇವೆಯೋ ಯಾರಿಗೆ ಗೊತ್ತು?
ಆಧುನಿಕ ತಂತ್ರಜ್ಞಾನ ಸುಖಸಾಧನಗಳನ್ನು ಸೃಷ್ಟಿ ಮಾಡಿ ಮಾಡಿ ಮಾರ್ಕೆಟ್ಟಿಗೆ ತುಂಬುತ್ತಿದೆ. ಆ ಒಂದೊಂದು ಸುಖಸಾಧನವೂ ಸುಖದ ಜೊತೆಗೆ, ಅನುಕೂಲದ ಜೊತೆಗೆ ಹತ್ತಾರು, ನೂರಾರು ಸಮಸ್ಯೆಗಳನ್ನು ಹೊಟ್ಟೆಯಲ್ಲಿಟ್ಟುಕೊಂಡೇ ಹೊರಬರುತ್ತದೆ. ಆ ಸಮಸ್ಯೆಗಳನ್ನು ಪರಿಹರಿಸಲು ಹೊಸ ಸಾಧನ. ಅದರಿಂದ ಮತ್ತೆ ಹೊಸ ಸಮಸ್ಯೆ. ಇದು ಮುಗಿಯದ ಕತೆ. ಶಾಲೆಗೆ ಹೋಗುವ ಮಗಳೋ, ಮಗನೋ ಎಲ್ಲಿದ್ದಾರೆಂದು ತಿಳಿಯಲು ಅನುಕೂಲ. ಆತಂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಅವರ ಕೈಗೊಂದು ಕರ್ಣಪಿಶಾಚಿ ಕೊಡುವುದು. ಉದ್ದೇಶ ಒಳ್ಳೆಯದೇ. ಆದರೆ ಅವರು, ಎಚ್ಚರಿರುವಷ್ಟು ಹೊತ್ತೂ ಆ ಕರ್ಣಪಿಶಾಚಿಯಿಂದ ಕಣ್ಣು ಕೀಳಲಾಗದ ಸ್ಥಿತಿಗೆ ಮುಟ್ಟಿದರೆ, ತಂದೆತಾಯಿಗಳ ಆತಂಕ ಕಡಿಮೆಯಾಯಿತೋ ಹೆಚ್ಚಾಯಿತೋ? ಹೈಸ್ಕೂಲು ಮಕ್ಕಳು ಚರ್ಚಾಕೂಟದಲ್ಲಿ ಹೇಳುವ ಹಾಗೆ “ತಪ್ಪು ಕರ್ಣಪಿಶಾಚಿಯದ್ದಲ್ಲ, ಅದನ್ನು ಬಳಸಿದವರದ್ದು” ಎನ್ನುತ್ತೀರಿ ನೀವು. ಒಂದನೇ ಕ್ಲಾಸಿನ ಮಕ್ಕಳಿಗೆ ಎಲ್ಲಿಂದ ವಿವೇಕ? ಎಂತಹ ವಿವೇಚನೆ? “ನಿನ್ನ ಕೈಗೆ ಮೊಬೈಲ್ ಕೊಡುವುದಿಲ್ಲ” ಎನ್ನುವ ಧೈರ್ಯ ಯಾವ ತಂದೆತಾಯಿಗಿದೆ? ಹಾಗೇನಾದರೂ ಹೇಳಿದರೆ ಮಗು ಆತ್ಮಹತ್ಯೆ ಮಾಡಿಕೊಂಡುಬಿಟ್ಟರೆ? ಶಾಲೆಯಲ್ಲಿ ಅವನ/ಅವಳ ಕ್ಲಾಸ್ ಮೇಟ್ ಗಳೆಲ್ಲರ ಕೈಯಲ್ಲೂ ಕರ್ಣಪಿಶಾಚಿ ಕುಣಿದಾಡುತ್ತಿರುವಾಗ ನಮ್ಮ ಮಗನಿಗೋ ಮಗಳಿಗೋ ಅದನ್ನು ಕೊಡಿಸದೆ ಇದ್ದರೆ, ನಮ್ಮ ಇಜ್ಜತ್ತಿನ ಗತಿ ಏನು?
ರನ್ನ ಒಂದು ಕಡೆ ಹೇಳುತ್ತಾನೆ: “ಪಾಲನೆ ಕಂಡಂ ಬಡಿಗಂಡನಿಲ್ಲ” (ಬೆಕ್ಕು ಹಾಲನ್ನು ಮಾತ್ರ ಕಂಡಿತಂತೆ; ಬಡಿಗೆಯನ್ನು ಕಾಣಲಿಲ್ಲ). ಆಧುನಿಕ ತಂತ್ರಜ್ಞಾನದ ಹಾಲು ಮಾತ್ರ ನಮಗೆ ಕಾಣುತ್ತಿದೆ. ಬಡಿಗೆ ಕಾಣುತ್ತಿಲ್ಲ. ನಮಗೆ ಕಾಣಲಿ ಬಿಡಲಿ ಬಡಿಗೆ ಇರುವುದು ಸುಳ್ಳಲ್ಲ, ಅದು ಪ್ಲಾಸ್ಟಿಕ್ಕಿನ ರೂಪದಲ್ಲೋ, ಇ-ತ್ಯಾಜ್ಯದ ರೂಪದಲ್ಲೋ, ವಿಶ್ವ ತಾಪಮಾನದ ರೂಪದಲ್ಲೋ, ಉಗ್ರಗಾಮಿಗಳ ರೂಪದಲ್ಲೋ, ಬಿಟಿ ಬದನೆಯ ರೂಪದಲ್ಲೋ, ಔಷಧಗಳ ರೂಪದಲ್ಲೋ, ಬಾಂಬಿನ ರೂಪದಲ್ಲೋ ಮನುಷ್ಯ ನಾಗರಿಕತೆಯನ್ನು ವಿಕಾರಗೊಳಿಸುವ, ನಾಶ ಮಾಡುವ ಸಾಧ್ಯತೆಯೇ ಹೆಚ್ಚು ಎಂದು ನನಗೆ ಕಾಣುತ್ತದೆ.
ಪ್ರಿಯ ಆಕ್ರೋಶವರ್ಜನರೇ,
ಮನುಷ್ಯನ ಇತಿಹಾಸದಲ್ಲಿ ಒಂದು ಹೋಗಿ ಇನ್ನೊಂದು ಆಗುತ್ತಲೇ ಬಂದಿದೆ, ಹೌದು. ಈ ಎಲ್ಲ ಬದಲಾವಣೆಗಳ ಮೂಲ ಉದ್ದೇಶ ಒಳ್ಳೆಯದೇ ಎಂದು ಒಂದು ಕ್ಷಣ ಭಾವಿಸಿದರೂ, ಪರಿಣಾಮ ಮಾತ್ರ ಒಳ್ಳೆಯದೇ ಆಗಿದೆ ಎಂದು ಹೇಳುವಂತಿಲ್ಲ. ಅಣುವನ್ನು ವಿಭಜಿಸಿದ ವಿಜ್ಞಾನಿಗೆ ಸತ್ಯಾನ್ವೇಷಣೆಯ ಉದ್ದೇಶ ಇತ್ತೋ ಏನೋ. ಆದರೆ ಆ “ಸತ್ಯ” ಬಾಂಬ್ ತಯಾರಿಕೆಗೆ ಬಳಕೆಯಾಗುತ್ತಿದೆಯಲ್ಲವೆ? ಇವೊತ್ತು ಬಾಂಬ್ ತಯಾರಿಕೆ ಸಾಮಾನ್ಯರಿಗೆ ಎಟುಕದ ತಂತ್ರಜ್ಞಾನ ಆಗಿರಬಹುದು; ನಾಳೆ ಹಾಗೆ ಇರಬೇಕಿಲ್ಲ ತಾನೆ? ಇವೊತ್ತು ತಲೆ ಕೆಟ್ಟವನೊಬ್ಬ ಸುತ್ತಲಿನ ನಾಲ್ಕು ಜನರನ್ನು ಬಂದೂಕಿನಿಂದ ಕೊಲ್ಲಬಹುದು. ಅದು ಸದ್ಯದ ತಂತ್ರಜ್ಞಾನದ ಮಿತಿ. ನಾಳೆ ಅವನ ಕೈಗೆ ಬಾಂಬ್ ಸಿಕ್ಕಿದರೆ, ಅವನು ಲಕ್ಷಾಂತರ ಜನರನ್ನು ಕೊಲ್ಲುವುದು ಸಾಧ್ಯವಾಗಬೇಕಲ್ಲವೆ? ಆಗ ಪರಿವರ್ತನೆಯ ರಥದ ಕೆಳಗೆ ಸಿಕ್ಕಿ ಮನುಷ್ಯ ನಾಗರಿಕತೆ ಚಟ್ನಿಯಾಗಿ ಹೋದೀತು. ಆಧುನಿಕ ತಂತ್ರಜ್ಞಾನವೇ ಇದಕ್ಕೆ ಕಾರಣ ತಾನೆ?
ಗುಬ್ಬಚ್ಚಿ ಎಷ್ಟು ಕೋಟಿ ವರ್ಷಗಳಿಂದ ಅದೇ ರೀತಿಯಲ್ಲಿ ಗೂಡು ಕಟ್ಟುತ್ತಿದೆಯೋ ಗೊತ್ತಿಲ್ಲ. ಬದಲಾವಣೆಯೇ ಇಲ್ಲದ ಅದರ ಜೀವನಶೈಲಿಯಲ್ಲೂ ಅದು ಸುಖವಾಗಿಯೇ ಇರುವಂತೆ ನನಗೆ ಕಾಣುತ್ತದೆ. ಮನುಷ್ಯ ಹೀಗಿರುವುದು ಸಾಧ್ಯವಿಲ್ಲ. ಏಕೆಂದರೆ ಅವನು ಬುದ್ಧಿವಂತ. ಬಹುಶಃ ಮನುಷ್ಯನಿಗೆ ಅವನ ಬುದ್ಧಿಯೇ ಶತ್ರು.
ಅಂದ ಹಾಗೆ, ಆಕ್ರೋಶವನ್ನು ವರ್ಜಿಸುವುದೂ ಮನಸ್ಸನ್ನು ಮುದಿತನದೆಡೆಗೆ ಒಯ್ಯುವ ಪ್ರಯತ್ನವೇ. ಅದಕ್ಕೆ ಆಸ್ಪದ ಕೊಡಕೂಡದು ಅಲ್ಲವೆ?
Trackbacks
[…] ಪಂಡಿತ ಪುಟ […]