Monthly Archives: ಅಕ್ಟೋಬರ್ 2010

ಪವಾಡ ರಹಸ್ಯ ಬಯಲು ತರಬೇತಿ ಕಾರ್ಯಾಗಾರ ಹಾಗೂ ಕರಾವಿಪ ಮಂಡ್ಯ ಜಿಲ್ಲಾ ಘಟಕದ ಉದ್ಘಾಟನ ಸಮಾರಂಭಗಳ ಉದ್ಘಾಟನ ಭಾಷಣ*

ಸನ್ಮಾನ್ಯ ಅಧ್ಯಕ್ಷರೆ, ಮುಖ್ಯ ಅತಿಥಿಗಳಾದ ಎಲ್ಲ ಗಣ್ಯರೆ, ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಪ್ರೊ ನರೇಂದ್ರ ನಾಯಕರೆ, ಮಂಡ್ಯ ಜಿಲ್ಲೆಯ ಹಾಗೂ ಶ್ರೀರಂಗಪಟ್ಟಣದ ವೈಜ್ಞಾನಿಕ ಮನೋಭಾವದ ಎಲ್ಲ ಚಿರಯುವ ಚೇತನಗಳೆ,

ನಾನು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬ ಸಂತೋಷ ತಂದಿದೆ. ಇಂದಿಗೆ ೭೫ ವರ್ಷ ೯ ತಿಂಗಳು ೧೦ ದಿನಗಳ ಹಿಂದೆ, ಅಂದರೆ ೧೯೩೫ರ ಜನವರಿ ೧೩ ಭಾನುವಾರದಂದು ಇಳಿಹಗಲಿನ ೪.೦ ಗಂಟೆಯ ಸಮಯದಲ್ಲಿ ಈ ಊರಿನಲ್ಲಿ ‘ಯುವಜನ ಸಮ್ಮೇಳನ’ನಡೆಯಿತು. ಅದರಲ್ಲಿ ಮಂಡ್ಯ ಜಿಲ್ಲೆಯವರೇ ಆದ ಬಿಎಂಶ್ರೀ ಅವರು ಮತ, ಭಾಷೆ, ಜಾತಿ ಇವುಗಳ ತೊಡಕುಗಳ ವಿಚಾರವಾಗಿ ಸ್ವಾರಸ್ಯವಾಗಿ ಮಾತನಾಡಿದರು. ಅನಂತರ ರಾಷ್ಟ್ರಕವಿ ಕುವೆಂಪು ಅವರು ‘ಯುವಕರು ನಿರಂಕುಶಮತಿಗಳಾಗಬೇಕು’ ಎಂದು ಭಾಷಣ ಮಾಡಿದರು.

ಭಾಷಣ ಮುಗಿಸಿ ಹೊರಬಂದ ಕುವೆಂಪು ಅವರನ್ನು ಸಂಪ್ರದಾಯಸ್ಥರಾಗಿ ತೋರುತ್ತಿದ್ದು ಪೇಟಕೋಟು ಉತ್ತರೀಯ ತೊಟ್ಟಿದ್ದ ಮುದುಕರಾದ ದೊಡ್ಡ ಮನುಷ್ಯರೊಬ್ಬರು ಅಭಿನಂದಿಸಿ,‘ನಾನು ಮುದುಕ. ಆದರೂ ನೀವು ಭಾಷಣ ಮಾಡುತ್ತಿದ್ದಾಗ ರೋಮಾಂಚನವಾಯಿತು’ ಎಂದು ಹೇಳಿದರು.

ಕುವೆಂಪು ಅವರ ಭಾಷಣ ಪತ್ರಿಕೆಗಳಲ್ಲಿ ವರದಿಯಾದುದೆ ತಡ ಕೆಲವು ಸಂಪ್ರದಾಯದ ಮೂಢಮತಿಗಳು ನಾನಾ ವಿಧವಾಗಿ ಟೀಕಿಸಿ ಕುವೆಂಪು ಅವರನ್ನು ಶಿಕ್ಷಿಸಬೇಕೆಂದು ಸರಕಾರ ಮತ್ತು ವಿಶ್ವವಿದ್ಯಾನಿಲಯಗಳನ್ನು ಒತ್ತಾಯಿಸಿದರು. ಈ ಬಗ್ಗೆ ತನಿಖೆ ಮಾಡಿ ವರದಿ ಒಪ್ಪಿಸಲು ವಿಶ್ವವಿದ್ಯಾನಿಲಯ, ಕುವೆಂಪು ಅವರು ಅಧ್ಯಾಪಕರಾಗಿದ್ದ ವಿಭಾಗದ ಮುಖ್ಯಸ್ಥ ಪ್ರೊ ಟಿ ಎಸ್ ವೆಂಕಣ್ಣಯ್ಯನವರನ್ನು ಕೇಳಿತು. ಈ ವಿಚಾರ ಏನನ್ನೂ ತಿಳಿಸದೆ ವೆಂಕಣ್ಣಯ್ಯನವರು, ‘ಅದೇನಯ್ಯಾ ನೀನು ಭಾಷಣ ಮಾಡಿದಿಯಂತೆ ಶ್ರೀರಂಗಪಟ್ಟಣದಲ್ಲಿ? ತಂದು ಕೊಡುತ್ತೀಯೇನು ನನಗೆ’ ಎಂದು ಕೇಳಿದರು. ಅಚ್ಚಾಗಿದ್ದ ತಮ್ಮ ಭಾಷಣದ ಒಂದು ಪ್ರತಿಯನ್ನು ಕುವೆಂಪು ಕೊಟ್ಟರು.

ವೆಂಕಣ್ಣಯ್ಯನವರು ಮುಂದೆ ಎಂದೂ ಕುವೆಂಪು ಅವರಿಗೆ ಯಾವ ವಿಚಾರವನ್ನೂ ಹೇಳಲಿಲ್ಲ. ಕುವೆಂಪು ಅವರಿಗೆ ಆಮೇಲೆ ತಿಳಿದುಬಂದ ಪ್ರಕಾರ ವೆಂಕಣ್ಣಯ್ಯನವರು ವಿಶ್ವವಿದ್ಯಾನಿಲಯಕ್ಕೆ ಬರೆದ ಕಾಗದದಲ್ಲಿ,’ನಾನು ನನ್ನ ಮಗನಿಗೆ ಬುದ್ಧಿ ಹೇಳಬೇಕಾಗಿ ಬಂದರೆ ಇದಕ್ಕಿಂತಲೂ ವಿಚಾರಪೂರ್ವಕವಾಗಿ ಸೊಗಸಾಗಿ ಸಮರ್ಥವಾಗಿ ಹೇಳಲಾರೆ’ ಎಂದು ಬರೆದಿದ್ದರಂತೆ(ನೆನಪಿನದೋಣಿಯಲ್ಲಿ (೧೯೮೦) ೧೯೯೮:೧೦೭೧-೭೩).

ಆ ಎಲ್ಲ ಹಿರಿಯರ ಆಶೀರ್ವಾದವಿದೆ ಎಂದು ಭಾವಿಸಿ ಇಂದಿನ ಕಾರ್ಯಕ್ರಮಗಳನ್ನು ತುಂಬ ಪ್ರೀತಿಯಿಂದ ಉದ್ಘಾಟಿಸಿದ್ದೇನೆ.

ಕುವೆಂಪು ಅವರ ಭಾಷಣದ ಮುಖ್ಯ ಅಂಶಗಳು ಹೀಗಿವೆ:

“ಯುವಕರು ‘ನಿರಂಕುಶಮತಿ’ಗಳಾಗಬೇಕು. ‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನ ಸ್ವಚ್ಛಂದ ವರ್ತನೆ. ಸಂಯಮಪೂರ್ಣ ಬುದ್ಧಿಸ್ವಾತಂತ್ರ್ಯವೇ ‘ನಿರಂಕುಶಮತಿ’.

“ಮತಿ, ಮಾನವನ ಸರ್ವೋತ್ಕೃಷ್ಟ ಆಯುಧ. ಮತಿಯೇ ಕತ್ತಲಲ್ಲಿ ದಾರಿತೋರುವ ರತ್ನದ ಕೈದೀವಿಗೆ. ಮನುಷ್ಯರೆಲ್ಲರಲ್ಲಿ ಇರುವ ಮತಿಯು ಮೌಢ್ಯ, ಮತಾಚಾರಗಳು, ದೇವಾನುದೇವತೆಗಳ ಮೋಹಮಾಯೆಗಳಿಂದ ಸತ್ವರಹಿತವಾಗಿದೆ; ಕಾಂತಿಹೀನವಾಗಿದೆ. ಅಧೋಗತಿಗಿಳಿದಿರುವ ನಮ್ಮ ಮತಿಯನ್ನು ಮತ್ತೆ ಆಕಾಶಕ್ಕೆ ಎತ್ತಬೇಕು…

“ಸರ್ವ ಮತಧರ್ಮಗಳಿಗಿಂತಲೂ ಶುದ್ಧಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ಮತಿಯದು. ಮತಿಯನ್ನು ತಿರಸ್ಕರಿಸುವವನೇ ನಿಜವಾದ ನಾಸ್ತಿಕ. ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭಪಡೆಯುವವನು ಪಾಷಂಡಿ. ಯಾವ ಕಾಲದ ಯಾವ ಸಮಾಜಕ್ಕಾಗಿಯೊ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನು ಆಳಬೇಕಿಲ್ಲ. ನಂಬುಗೆ ಪುರಾತನವಾದ ಮಾತ್ರಕ್ಕೆ ಸತ್ಯವಲ್ಲ.ವಿಜ್ಞಾನ ಪ್ರಪಂಚದಲ್ಲಿ ಹೊಸದಾಗಿ ಕಂಡುಹಿಡಿದ ಸತ್ಯಗಳು ಹಳೆಯ ಅರ್ಧ ಸತ್ಯಗಳಿಗಿಂತಲೂ ಮಾನ್ಯವಾಗುವುದಾದರೆ ಧರ್ಮ ಪ್ರಪಂಚದಲ್ಲೇಕೆ ಹಾಗಾಗಬಾರದು?
ವೇದ ಅನಾದಿಯಾದರೆ ಅನಂತವೂ ಆಗಿರುವುದಿಲ್ಲವೆ? ಅದು ಇಂದಿಗೂ ನಾಳೆಗೂ ಮುಂದುವರೆಯುತ್ತದೆ. ಹೊಸ ಋಷಿಗಳ ಹೊಸ ವೇದವಾಕ್ಯಗಳನ್ನು ಕಿವಿಗೊಟ್ಟು ಕೇಳಿ. ಸಂಕುಚಿತ ಬುದ್ಧಿಯನ್ನು ದೂರಮಾಡಿ. ನಿಮ್ಮ ಹೃದಯ ಯಾವಾಗಲೂ ಹೊಸನೀರು ಬಂದು ಹರಿಯುತ್ತಿರುವ ಸ್ವಚ್ಛ ಸಲಿಲ ಸ್ರೋತವಾಗಿರಲಿ…

“ಆದ್ದರಿಂದ ಯುವಕ ಸೋದರರೆ, ಯಾವ ಒಂದು ಸಂಪ್ರದಾಯದ ಸಂಕೋಚಕ್ಕೂ ಸಿಕ್ಕಿಹಾಕಿಕೊಳ್ಳಬಾರದು. ಸರ್ವಧರ್ಮಗಳ ಸಾರವಾದ ಉದಾರ ‘ದರ್ಶನ’ವೊಂದನ್ನು ಕಂಡು, ಕಟ್ಟಿಕೊಂಡು ಬಾಳಬೇಕು. ಆ ‘ದರ್ಶನ’ವನ್ನು ಪಡೆದ ಮೇಲೆ ನಮಗೆ ದೇವಸ್ಥಾನಗಳ ಅವಶ್ಯಕತೆ ಇರುವುದಿಲ್ಲ. ಇಂಥ ದಿವ್ಯ ‘ದರ್ಶನ’ದ ಪ್ರಾಪ್ತಿಗಾಗಿ ನಮಗೆ ಬೇಕಾಗುವ ಧೀರ, ಸ್ವತಂತ್ರ, ಉದಾರ, ಪ್ರತಿಭಾಪೂರ್ಣವಾದ ಬುದ್ಧಿಯನ್ನೇ ನಾನು ‘ನಿರಂಕುಶಮತಿ’ ಎಂದು ಕರೆದಿದ್ದೇನೆ. ಆದ್ದರಿಂದ ತಮ್ಮ ಮತ್ತು ಜಗತ್ತಿನ ಶ್ರೇಯಸ್ಸನ್ನು ಕೋರುವ ಯುವಕರೆಲ್ಲರೂ ‘ನಿರಂಕುಶಮತಿ’ ಗಳಾಗಬೇಕು”.

– ಈ ಮಾತುಗಳನ್ನು ಕುವೆಂಪು ಅವರು ಶ್ರೀರಂಗಪಟ್ಟಣದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ, ದೇಶ ಬ್ರಿಟಿಷರ ದಾಸ್ಯದಲ್ಲಿ ರಾಜಪ್ರಭುತ್ವದ ಅಡಿಯಲ್ಲಿದ್ದಾಗ ಹೇಳಿದರು. ಆದರೆ ಈಗ ಸ್ವಾತಂತ್ರ್ಯಾನಂತರ, ರಾಜಪ್ರಭುತ್ವವನ್ನು ತಿರಸ್ಕರಿಸಿ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಸಂವಿಧಾನವನ್ನು ಒಪ್ಪಿಕೊಂಡು ಅದಕ್ಕನುಗುಣವಾಗಿ ನಡೆದುಕೊಳ್ಳುತ್ತೇವೆಂದು ಅದರ ಮೇಲೆ ಪ್ರಮಾಣಮಾಡಿ ಅಧಿಕಾರ ಸ್ವೀಕರಿಸಿರುವ ಸರಕಾರಗಳು ಅದಕ್ಕೆ ಅವಮಾನವಾಗುವಂತೆ ನಡೆದುಕೊಳ್ಳುತಿವೆ.

ಉದಾಹರಣೆಗೆ, ಸ್ವಾತಂತ್ರ್ಯಪೂರ್ವದ ರಾಜತ್ವ ಮತ್ತು ಧಾರ್ಮಿಕತೆಗಳ ಸಂಪ್ರದಾಯವಾದ ದಸರಾವನ್ನು ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಸಂವಿಧಾನದ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ಸರಕಾರಗಳು ನಡೆಸುತ್ತಿರುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಪ್ರವಾಸೋದ್ಯಮದ ನೆಪದಲ್ಲಿ, ನಾಡಹಬ್ಬದ ಹೆಸರಿನಲ್ಲಿ ಸಾಮ್ರಾಜ್ಯಶಾಹಿಯ ಧಾರ್ಮಿಕ ಪಳೆಯುಳಿಕೆಯನ್ನು ಆಚರಿಸಲಾಗುತ್ತಿದೆ. ದಸರೆಯಲ್ಲಿ ರಾಜರು ಜಂಬೂಸವಾರಿಯಲ್ಲಿ ತಾವೇ ಆನೆಯ ಮೇಲೆ ಕುಳಿತು ಬನ್ನಿ ಮಂಟಪಕ್ಕೆ ಹೋಗಿ ಬನ್ನಿ ಮರವನ್ನು ಪೂಜಿಸಿ, ಕಡಿದು ಬರುತ್ತಿದ್ದರು; ತಮ್ಮ ನಂಬಿಕೆಯ ದೇವತೆಯ ವಿಗ್ರಹವನ್ನು ಜಂಬೂಸವಾರಿಯಲ್ಲಿ ಕೊಂಡೊಯ್ಯುವ ಸಂಪ್ರದಾಯವಿರಲಿಲ್ಲ. ಸಂಪ್ರದಾಯದಲ್ಲಿ ಇರದಿದ್ದ ಮತ್ತು ಸಂವಿಧಾನ ವಿರೋಧಿಯೂ ಆಗಿರುವ, ಮತಧರ್ಮವೊಂದರ ನಂಬಿಕೆಯ ದೇವತೆಯ ವಿಗ್ರಹವನ್ನು ಇಂದು ಮತಧರ್ಮ ನಿರಪೇಕ್ಷ ಸರಕಾರಗಳು ಮೆರೆಸುತ್ತಿವೆ. ಎಲ್ಲ ಸರಕಾರಗಳ ಮುಖ್ಯಮಂತ್ರಿಗಳು ಅಂಬಾರಿಯಲ್ಲಿನ ವಿಗ್ರಹಕ್ಕೆ ಹೂಗಳನ್ನು ಎರಚಿ ರಾಷ್ಟ್ರಗೀತೆ ನುಡಿಸುವುದು ಮತಧರ್ಮ ನಿರಪೇಕ್ಷ ಸಂವಿಧಾನದ ಅಣಕವಾಗಿದೆ. ಇದನ್ನು ಮೈಸೂರಿನ ಪ್ರಜ್ಞಾವಂತರು ಖಂಡಿಸಿದ್ದಾರೆ. ಈ ಬಾರಿ ಸಂವಿಧಾನದ ರಕ್ಷಕರಾದ ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರೂ ಇದರಲ್ಲಿ ಭಾಗವಹಿಸಿರುವುದು ವಿಲಕ್ಷಣವಾಗಿದೆ.

ಸಂಜೆ ಬನ್ನಿಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂವಿಧಾನದ ರಕ್ಷಕರಾದ ರಾಜ್ಯಪಾಲರು ದಸರಾ ಗೌರವ ವಂದನೆ ಸ್ವೀಕರಿಸುತ್ತಾರೆ. ಅಲ್ಲಿ ಪಂಜಿನ ಮೆರವಣಿಗೆಯನ್ನು ನಡೆಸಿಕೊಡುವ ರಾಜ್ಯ ಪೊಲಿಸ್ ಶಿಕ್ಷಣಾರ್ಥಿಗಳು ಪಂಜುಗಳಿಂದ ಇಂಗ್ಲಿಷಿನಲ್ಲಿ ‘ಹ್ಯಾಪಿ ದಸರಾ’, ‘ಜೈ ಕರ್ನಾಟಕ’, ‘ಜೈ ಜವಾನ್ ಜೈ ಕಿಸಾನ್’ಗಳ ಜೊತೆಗೆ ‘ಜೈ ಚಾಮುಂಡಿ!’ ಎಂಬ ಸಂದೇಶವನ್ನೂ ರಚಿಸುವುದು, ಅದೇ ರೀತಿ ಬೆಟ್ಟದ ಮೇಲೆ ಇಂಗ್ಲಿಷಿನಲಿ ‘ವೆಲ್‌ಕಮ್’ ಎಂದು ಬೆಳಗಿಸುವುದು ವಿಲಕ್ಷಣವಾಗಿವೆ.

ಇಂದು ವಿದ್ಯಾವಂತರಾಗುವ ಅವಕಾಶ ಮತ್ತು ಆರ್ಥಿಕ ಜೀವನ ಮಟ್ಟಗಳು ಹೆಚ್ಚಿದಂತೆ ಮತ, ಮೌಢ್ಯಗಳ ಪ್ರಮಾಣವೂ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಹೆಚ್ಚಿನ ಸಮೂಹ ಮಾಧ್ಯಮಗಳು ವೈಚಾರಿಕತೆಯನ್ನು ಪ್ರಸಾರಮಾಡುವ ಬದಲು ಮೌಢ್ಯವನ್ನು ಪ್ರಸಾರಮಾಡುತ್ತಿವೆ. ನಮ್ಮ ಸಾಮಾಜಿಕ, ರಾಜಕೀಯ ವ್ಯವಸ್ಥೆ ದೇಶವನ್ನು ಮತ-ಮೌಢ್ಯಗಳಲ್ಲಿ ಮುಳುಗಿಸುತ್ತಿರುವುದು ಆಘಾತಕಾರಿ. ಸಾರ್ವಜನಿಕ ಜೀವನದಲ್ಲಿ ಯಾವ ಮಹತ್ವವೂ ಇರಕೂಡದ, ಖಾಸಗಿ ವಿಷಯ ಮಾತ್ರ ಆಗಿರಬೇಕಾಗಿದ್ದ ಮತಧರ್ಮ ಮತ್ತು ಮತಾಂತರಗಳನ್ನು ಇಂದು ವೈಭವೀಕರಿಸುತ್ತಿರುವಂತೆ(ಉದಾ: ಬೌದ್ಧಧರ್ಮಕ್ಕೆ ಮತಾಂತರ) ಅನ್ಯ ಮತಧರ್ಮಗಳ ದ್ವೇಷಕ್ಕೂ ಬಳಸುತ್ತಿರುವುದು ಆತಂಕದ ಸಂಗತಿಯಾಗಿದೆ.

ವಿದ್ಯಾವಂತರೆನಿಸಿಕೊಂಡವರೂ ಮತಿಯನ್ನು ಬಳಸದೆ ಮೌಢ್ಯವನ್ನು ಒಪ್ಪುವುದನ್ನು ಖಂಡಿಸಿ ಆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಿತ್ರರಾದ ಪ್ರೊ ನರೇಂದ್ರ ನಾಯಕರು ಕಳೆದ ಮೂವತ್ತೈದು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರು ಪ್ರಸಿದ್ಧ ವಿಚಾರವಾದಿಗಳಾಗಿದ್ದ ಡಾ ಅಬ್ರಹಾಮ್ ಕೋವೂರ್, ಬಿ ಪ್ರೇಮಾನಂದ ಅವರು ನಡೆಸಿದ ವೈಚಾರಿಕ ಜಾಗೃತಿಯ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ, ಎಂಟು ವರ್ಷದ ಹೆಣ್ಣುಮಗಳನ್ನು ಅಪಹರಿಸಿ, ಕೊಂದು ಅವಳ ಚರ್ಮವನ್ನು ಹಾಸಿ ಅದರ ಮೇಲೆ ಕುಳಿತು ನಿಧಿಶೋಧನೆಗಾಗಿ ಪೂಜೆಮಾಡಿದ ಅಮಾನುಷ ಪ್ರಸಂಗದಿಂದ ವಿಚಲಿತರಾದ ಪ್ರೊ ನಾಯಕರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಜನಜಾಗೃತಿಯ ಕಾರ್ಯವನ್ನು ಪೂರ್ಣಾವಧಿ ಕೈಗೊಂಡಿರುವುದು ಅನನ್ಯವಾದುದು. ಬೀದರಿನಲ್ಲಿ ಇದೇ ರೀತಿ ಒಬ್ಬ ಬಾಲಕನ ಅಪಹರಣ ನಡೆದಾಗ ಪ್ರೊ ನಾಯಕರ ಜಾಗೃತಿಯಿಂದ ಎಚ್ಚೆತ್ತ ಜನರು, ಅಪಹರಣಕಾರರನ್ನು ಪೊಲೀಸರಿಗೆ ಹಿಡಿದುಕೊಟ್ಟು ಬಾಲಕನನ್ನು ಕಾಪಾಡಿದ್ದು ಅವರ ಪರಿಶ್ರಮಕ್ಕೆ ದೊರೆತ ಫಲವಾಗಿದೆ.

ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಪ್ರೊ ನರೇಂದ್ರ ನಾಯಕರು ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದ ಹಲವು ಕಡೆಗಳಲ್ಲಿ ಇಂಥ ಜಾಗೃತಿ ಕಾರ್ಯಕ್ರಮಗಳನ್ನೂ ತರಬೇತಿ ಕಾರ್ಯಾಗಾರಗಳನ್ನೂ ನಡೆಸುತ್ತಿರುವುದು ಮೆಚ್ಚುವಂಥದು. ಅವರು ಮಾನಸಗಂಗೋತ್ರಿಯಲ್ಲಿ, ಮೈಸೂರಿನ ವಿವಿಧ ಕಾಲೇಜುಗಳಲ್ಲಿ, ಗ್ರಾಮಾಂತರ ಶಾಲೆಯಲ್ಲಿ ನಡೆಸಿದ ವೈಚಾರಿಕ ಜಾಗೃತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳು ಹೊಸ ಅರಿವಿನಿಂದ ಪುಳಕಿತರಾದುದನ್ನು ನೋಡಿದ್ದೇನೆ. ಅವರು ಈಗ ನಡೆಸುವ ಮೂರು ದಿನಗಳ ಕಾರ್ಯಾಗಾರದ ಶಿಬಿರಾರ್ಥಿಗಳು ವೈಚಾರಿಕ ಜಾಗೃತಿಯನ್ನು ಪಡೆದು, ತಾವೇ ಸ್ವತಂತ್ರವಾಗಿ ಜನಜಾಗೃತಿಯ ಕಾರ್ಯವನ್ನು ನಡೆಸುವ ಸಾಮರ್ಥ್ಯವನ್ನು ಪಡೆಯುತ್ತಾರೆಂದು ಆಶಿಸುತ್ತೇನೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕದ ಉದ್ಘಾಟನೆಯೂ ಇಂದು ಆಗಿರುವುದು ಸಂತೋಷದ ಸಂಗತಿ. ವಿಜ್ಞಾನವನ್ನು ಕೇವಲ ಭೌತಿಕ ವಿಷಯಗಳಿಗೆ ಮಿತಗೊಳಿಸದೆ, ಅವುಗಳ ಸಾಮಾಜಿಕ ಪರಿಣಾಮಗಳನ್ನೂ ಗಮನಿಸುವ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಕೆಲಸವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಂಥ ಸಂಸ್ಥೆಗಳು ಮಾಡುತ್ತಿವೆ. ಈಗ ಮಂಡ್ಯ ಜಿಲ್ಲಾ ಘಟಕವು ಈ ಸಾಲಿಗೆ ಸೇರ್ಪಡೆಯಾಗಿರುವುದು ಮೆಚ್ಚುವಂಥದು. ಅದಕ್ಕೆ ಎಲ್ಲ ಶುಭವನ್ನೂ ಕೋರುತ್ತೇನೆ.

ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ನನ್ನ ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಒದಗಿಸಿದ್ದಕ್ಕೆ ಸಂಬಂಧಪಟ್ಟ ಎಲ್ಲರಿಗೂ, ಕೇಳಿದ ನಿಮಗೂ ಧನ್ಯವಾದಗಳು.

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬
______
*ಸರಕಾರಿ ಪದವಿ ಪೂರ್ವ ಕಾಲೇಜು ಶ್ರೀರಂಗಪಟ್ಟಣ ೨೩ ಅಕ್ಟೋಬರ್ ೨೦೧೦ನೇ ಶನಿವಾರ