ಕನ್ನಡ ಅಂಕಿಗಳ ವಿಕಾಸ

(ಚಿತ್ರ ಆಕರ: ನರಸಿಂಹಮೂರ್ತಿ ಎ.ವಿ.(೧೯೬೮) ಕನ್ನಡ ಲಿಪಿಯ ಉಗಮ ಮತ್ತು ವಿಕಾಸ (೨೦೦೬:೧೨೧)
ಕರ್ನಾಟಕದ ಹಲವೆಡೆ ದೊರೆತಿರುವ ಕ್ರಿಪೂ ೩ನೇ ಶತಮಾನದ ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿರುವ, ಅಶೋಕನ ಶಾಸನಗಳಲ್ಲಿ ಮೊದಲಿಗೆ ಅಂಕಿಗಳು ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ಎನ್ನುವುದನ್ನು ೨೦೦, ೫೦,೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ. ದಕ್ಷಿಣ ಬ್ರಾಹ್ಮೀ ಲಿಪಿಯಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಅಂಕಿಗಳೂ ಇವೆ.
ಕ್ರಿ.ಶ. ೮ನೆಯ ಶತಮಾನದಿಂದಲೇ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ.
ರಾಜ್ಯದ ಹಲವು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿವೆ. ಬೆಂಗಳೂರಿನ ಕರ್ಮವೀರ, ಕಸ್ತೂರಿ ಹಾಗೂ ಹೊಸತು, ಸಂವಾದ ಮತ್ತು ಸಂಯುಕ್ತ ಕರ್ನಾಟಕ, ಹೊಸ ದಿಗಂತಗಳ ಪುರವಣಿಗಳಲ್ಲಿ ಕನ್ನಡ ಅಂಕಿಗಳಿವೆ. ಕನ್ನಡ ಪ್ರಭದ ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಕನ್ನಡ ಅಂಕಿಗಳಿವೆ. ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ.
ಟೈಮ್ಸ್ ಲಿಟೆರರಿ ಸಪ್ಲಿಮೆಂಟ್, ದಿ ಹಿಂದೂನ ಲಿಟೆರರಿ ರಿವ್ಯೂ ಮಾದರಿಯಲ್ಲಿ ಪ್ರಜಾವಾಣಿಯು ದೇಶಕಾಲದ ಸಹಯೋಗದಲ್ಲಿ ಆರಂಭಿಸಿರುವ ಶುದ್ಧ(ಪ್ರತ್ಯೇಕ, ವಿಶೇಷ?) ಸಾಹಿತ್ಯ ಪುರವಣಿಯಲ್ಲಿ ಕನ್ನಡ ಅಂಕಿಗಳಿರುವುದು ಮೆಚ್ಚುವಂಥದು. ಈ ಪುರವಣಿಯ ‘ಶುದ್ಧ ಸಾಹಿತ್ಯ’ ಎಂಬ ವಿಶೇಷಣವು ನೇತ್ಯಾತ್ಮಕವಾಗದಿರಲಿ ಎಂದು ಓದುಗರು ಎಚ್ಚರಿಸಿದ್ದಾರೆ. ಮಾಧ್ಯಮಗಳಲ್ಲಿ ಮೌಢ್ಯದ ಪ್ರಸಾರ ಹೆಚ್ಚುತ್ತಿದೆ. ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾದ ಮಾಧ್ಯಮಗಳು ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಒಂದೇ ಉಸಿರಿನಲ್ಲಿ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿದೆ. ಕನ್ನಡ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸಲಿ; ಕನ್ನಡಿಗರ ಪ್ರಜ್ಞಾ ವಾಣಿಗಳಾಗಲಿ.
ರಾಜ್ಯಮಟ್ಟದ ಕನ್ನಡ ಪತ್ರಿಕೆಗಳು ಜಿಲ್ಲಾ ಆವೃತ್ತಿಗಳನ್ನು ಮುದ್ರಿಸಿ ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳಿಗೆ ಅಸಮಾನತೆಯ ಸ್ಪರ್ಧೆಯನ್ನು ಒಡ್ಡಿವೆ. ಇವು ಸುದ್ದಿಗಳಿಗೆ ಜಿಲ್ಲೆಯ ಬೇಲಿಯನ್ನು ಹಾಕಿರುವುದಲ್ಲದೆ ರಾಜಧಾನಿಯ ಭಾಷಾವಿಕಾರಗಳನ್ನು ರಾಜ್ಯಾದ್ಯಂತ ಹರಡುತ್ತಿವೆ. ಆರೋಗ್ಯಕರವೂ ಜೀವಂತವೂ ಆದ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳಸುತ್ತಿರುವ ಜಿಲ್ಲಾಮಟ್ಟದ ಹಲವು ಪತ್ರಿಕೆಗಳು ಈ ಅಸಮಾನ ಸ್ಪರ್ಧೆಯಿಂದ ಪ್ರಕಟಣೆಯನ್ನು ನಿಲ್ಲಿಸುವ ಹಂತ ತಲುಪಿವೆ. ರಾಜಧಾನಿಯ ಮಾಧ್ಯಮಗಳ ಕನ್ನಡವು ಪ್ರತಿರೋಧ ಸಾಮರ್ಥ್ಯವನ್ನು ಕಳೆದುಕೊಂಡ ಏಡ್ಸ್ ರೋಗಿಯಂತಾಗಿದ್ದು ಅದಕ್ಕೆ ತುರ್ತಾಗಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನವಾಗಬೇಕಿದೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ಹಲವು ಜಿಲ್ಲೆಗಳ ಸಣ್ಣ ಪತ್ರಿಕೆಗಳು ತಮ್ಮ ಜಿಲ್ಲ್ಲಾ ಆವೃತ್ತಿಗಳ ಬೇಲಿಯನ್ನು ತೆಗೆದುಹಾಕಿ ಸಮಗ್ರ ಆವೃತ್ತಿಗಳನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹ. ಕನ್ನಡ ಅಂಕಿಗಳನ್ನೇ ಬಳಸುತ್ತಿರುವ ಮೈಸೂರಿನ ಆಂದೋಲನ, ಮೈಸೂರು ಮಿತ್ರ ಅಂಥ ಸಮಗ್ರ ಪತ್ರಿಕೆಗಳಾಗಿರುವುದು ಅಭಿಮಾನದ ಸಂಗತಿ. ಸರಕಾರದ ಕನ್ನಡ ಮಾಸಪತ್ರಿಕೆ ಜನಪದ ಇಂಗ್ಲಿಷ್ ಅಂಕಿಗಳನ್ನೇ ಬಳಸುತ್ತಿರುವುದು ಖಂಡನೀಯ.
ಕನ್ನಡ ಭಾಷೆಯ ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸಬೇಕಾದ ಕನ್ನಡ ಪತ್ರಿಕೆಗಳು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬಳಸುತ್ತಿವೆ. ನಿರ್ದಿಷ್ಟ ವ್ಯಕ್ತಿಗಳೊಂದಿಗೆ ನೇರವಾಗಿ ಮಾತನಾಡುವಾಗ ಅವರ ಭಾಷಿಕ ಸಾಮರ್ಥ್ಯದ ಅರಿವು ನಮಗಿರುತ್ತದೆ. ಅವರಿಗೆ ಅರ್ಥವಾಗುವ ಎಷ್ಟು ಭಾಷೆಗಳಲ್ಲಿಯೂ ಮಾತನಾಡಬಹುದು. ಆದರೆ ಎದುರಿಗೆ ಇಲ್ಲದವರನ್ನು ಉದ್ದೇಶಿಸಿ ಮಾತನಾಡುವಾಗ, ಬರೆಯುವಾಗ ಸಾಮಾನ್ಯ ಕನ್ನಡವನ್ನೇ ಬಳಸಬೇಕು. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ ‘ತಾEA ದೇವರು!’ ಎಂದು ಬರೆಯುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷ್ನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ ‘ಲವಲವಿಕೆ’ಯಲ್ಲಿರುವ ‘ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು ‘ಲವಲ’ ಎಂದು ಅರ್ಥಹೀನವಾಗಿಸಿ, ಅಂಗವಿಕಲ (‘ವಿಕಲಚೇತನ’?) ಗೊಳಿಸಿರುವುದು ಸರಿಯಲ್ಲ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ಕನ್ನಡ ಪತ್ರಿಕೆಯ ಹೆಸರಿನಲ್ಲಿಯೇ ವಿಜಯ Next(ನೆಕ್ಸ್ಟ್) ಎಂದು ಕಲಬೆರಕೆ ಮಾಡಿ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳನ್ನು ಬಳಸಲಾಗುತ್ತಿದೆ. ಕೆಲವು ಕನ್ನಡ ಸಂಪಾದಕರು (‘ಆಫ್ ಕೋರ್ಸ್’ ಇತ್ಯಾದಿ) ಇಂಗ್ಲಿಷ್ ಪದಗಳನ್ನು ಅನಗತ್ಯವಾಗಿ ಬೆರಸುವ ರೋಗದಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವ ನಾವು ಕನ್ನಡದ ಬಗ್ಗೆಯೂ ಹಾಗೆ ಪ್ರಬುದ್ಧರಾಗಿ ವರ್ತಿಸುವುದು ಯಾವಾಗ?
ಕನ್ನಡ ಅಂತರಜಾಲ ತಾಣಗಳಲ್ಲಿ ಹೆಚ್ಚಿನವು ಪೂರ್ಣ ಕನ್ನಡತನದ ತಾಣಗಳಾಗಿಲ್ಲದಿರುವುದು ವಿಷಾದನೀಯ. ಕನ್ನಡದ ಬಗ್ಗೆ ಕನ್ನಡಿಗರ ಜೊತೆ ಮಾತನಾಡುವಾಗ ಇಲ್ಲಿ ಅನಗತ್ಯವಾಗಿ ಇಂಗ್ಲಿಷ್ ಬಳಸುವ ಪ್ರವೃತ್ತಿ ಹೆಚ್ಚಿದೆ. ಕೆಲವು ಜಾಲತಾಣಗಳು ತಮ್ಮ ಹೆಸರುಗಳನ್ನೇ ಇಂಗ್ಲಿಷಿನಲ್ಲಿ ಹೇಳಿಕೊಂಡು ಧನ್ಯತೆಯನ್ನು ಅನುಭವಿಸುತ್ತಿವೆ(‘ದಟ್ಸ್ ಕನ್ನಡ.ಕಾಂ’, ‘ಕನ್ನಡ ಬ್ಲಾಗರ್ಸ್!’). ಇದಕ್ಕೆ ಕನ್ನಡವನ್ನು ಗಣಕದಲ್ಲಿ ನೇರವಾಗಿ ಬಳಸಲು ಇದ್ದ ತಾಂತ್ರಿಕ ಕೊರತೆಗಳು ಕಾರಣವಾಗಿರಬಹುದು. ಹೊರನಾಡಿನಲ್ಲಿರುವ ಕನ್ನಡಿಗರಿಗೆ ಗಣಕದಲ್ಲಿ ಕನ್ನಡದಲ್ಲ್ಲಿ ಬರೆಯಲು ತಿಳಿಯದೆ ಅವರು ಇಂಗ್ಲಿಷಿನಲ್ಲಿ ಲಿಪ್ಯಂತರ ಮಾಡುತ್ತಿರಬಹುದು. ಕನ್ನಡ ತಾಣಗಳು ಅಂಥ ಬರಹಗಳನ್ನು ಸಂಪಾದಿಸಿ ಕನ್ನಡದಲ್ಲಿಯೇ ಪ್ರಕಟಿಸಬೇಕು; ಹೊರನಾಡ ಕನ್ನಡಿಗರು ಕನ್ನಡದಲ್ಲಿಯೇ ಓದಿ ಬರೆದು ಮಾತನಾಡಲು ನೆರವಾಗಿ ಪ್ರೋತ್ಸಾಹಿಸಬೇಕು.
ಎಫ್.ಎಂ. ತಂತ್ರಜ್ಞಾನದಿಂದ ಆಕಾಶವಾಣಿಯು ಕೇಳುಗರನ್ನು ಮತ್ತೆ ಆಕರ್ಷಿಸಿದೆೆ. ಇಲ್ಲಿಯವರೆಗೆ ಆಕಾಶವಾಣಿಯಲ್ಲಿ ಸ್ವಚ್ಛ ಕನ್ನಡ ಭಾಷಾರೂಪಗಳನ್ನು ಕೇಳಲು ಅವಕಾಶವಿತ್ತು. ಈಗ ಇಂಗ್ಲಿಷ್ ಕಲಬೆರಕೆಯ ರೂಪಗಳು ಮೊಳಗುತ್ತಿವೆ. ಸರಕಾರಿ ಸ್ವಾಮ್ಯದ ಆಕಾಶವಾಣಿಯ ‘ರೇನ್ ಬೊ ಎಫ್.ಎಂ’ (ಕನ್ನಡ ಕಾಮನಬಿಲ್ಲು!) ಎಂಬ ವಾಹಿನಿಯಲ್ಲಿಯೇ ‘ಲಂಚ್ ಬಾಕ್ಸ್’, ‘ಡಿನ್ನರ್ ಟೈಮ್’ ಹೆಸರಿನ ಕನ್ನಡ ಕಾರ್ಯಕ್ರಮಗಳಲ್ಲದೆ ಇಂಗ್ಲಿಷ್ ಕಾರ್ಯಕ್ರಮಗಳೂ ಸಾಕಷ್ಟು ಇರುವುದು ಸಖೇದಾಶ್ಚರ್ಯದ ಸಂಗತಿ. ಖಾಸಗಿ ಎಫ್.ಎಂ ವಾಹಿನಿಗಳ ‘ಸಿಕ್ಕಾಪಟ್ಟೆ ‘ಕನ್ನಡದ ಸ್ಥಿತಿಯಂತೂ ಶೋಚನೀಯ. ಕಾರ್ಯಕ್ರಮ ನಿರೂಪಕರು ಅನಗತ್ಯವಾಗಿ ಅರ್ಧವಾಕ್ಯ ಕನ್ನಡ, ಅರ್ಧವಾಕ್ಯ ಇಂಗ್ಲಿಷ್ ಬೆರೆಸಿ ಮಾತನಾಡುವುದರಿಂದ ಕೇಳಲು ಜುಗುಪ್ಸೆಯಾಗುತ್ತದೆ. ‘ಸಖತ್ ಹಾಟ್ ಮಗಾ!’, ‘ಕೇಳಿ ಕೇಳಿಸಿ `ಲೈಫ್’ ನಿಮ್ಮದಾಗಿಸಿ’ ಎಂದು ಉಲಿಯುವ ಈ ವಾಹಿನಿಗಳು ಕನ್ನಡತನದ ‘ಬದುಕ’ನ್ನು ನಮ್ಮದಾಗಿಸುವುದು ಯಾವಾಗ? ಇವುಗಳಿಗೆ ಕನ್ನಡತನದ ‘ಚುರುಕು’ ಮುಟ್ಟಿಸುವುದು ಹೇಗೆ?
ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.
ರಾಜಧಾನಿಯ ಮಾಧ್ಯಮಗಳು ಕನ್ನಡಿಗರಲ್ಲಿ ಗೊಂದಲ, ಕೀಳರಿಮೆ ಬೆಳೆಸುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎನ್ನುವುದಕ್ಕಿಂತ ಇಂಗ್ಲಿಷ್ ಬೆರಸಿ ಮಾತನಾಡುವುದೇ ದೊಡ್ಡದು ಎಂಬ ತಪ್ಪು ಸಂದೇಶವನ್ನು ನೀಡುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯದಿರುವುದರಿಂದ ಇಂಗ್ಲಿಷನ್ನೂ ಸಮರ್ಪಕವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬ ಸತ್ಯವನ್ನು ಮರೆಮಾಚಿವೆ. ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವ ಮೂಲಕ ಭಾಷಾಕಲಿಕೆಯ ಕೌಶಲಗಳನ್ನು ಗಳಿಸಿಕೊಂಡು ಅನಂತರ ಎಷ್ಟೂ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂಬ ಶೈಕ್ಷಣಿಕ ಸತ್ಯವನ್ನು ಮರೆಮಾಚಿ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ.
ಗೋಕಾಕ್ ವರದಿಯ ಫಲವಾಗಿ ಒಂದನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಸರಕಾರದ ಆದೇಶವನ್ನು ಭಾಷಾ ಅಲ್ಪಸಂಖ್ಯಾತರು ವಿರೋಧಿಸಿದರು. ಸಂವಿಧಾನ ನೀಡಿರುವ ರಕ್ಷಣೆಯಂತೆ ತಮ್ಮ ಮಕ್ಕಳಿಗೆ ಒಂದನೆಯ ತರಗತಿಯಲ್ಲಿ ಮಾತೃಭಾಷೆಯನ್ನು ಮಾತ್ರ ಕಲಿಸಬೇಕೆಂದೂ ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ, ಅಂದರೆ ಮೂರನೆಯ ತರಗತಿಯಿಂದ, ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಮಾತ್ರ ಕಡ್ಡಾಯವಾಗಿ ಕನ್ನಡವನ್ನು ಕಲಿಸಬಹುದೆಂದೂ ಉಚ್ಚ ನ್ಯಾಯಾಲಯದಿಂದ ರಕ್ಷಣೆ ಪಡೆದರು. ಆದರೆ ಆಂಗ್ಲೋ ಇಂಡಿಯನ್ನರನ್ನು ಬಿಟ್ಟು ಬೇರೆ ಯಾರ ಮಾತೃಭಾಷೆಯೂ ಅಲ್ಲದ, ಪರಿಸರದ ಭಾಷೆಯಾದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸಲು ಭಾಷಾ ಅಲ್ಪಸಂಖ್ಯಾತರ ಮತ್ತು ಕೆಲವು ಕನ್ನಡಿಗರ ಆಕ್ಷೇಪವಿಲ್ಲ! ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿದ್ದ, ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಅಧ್ಯಯನದ ವಿಷಯ ಮತ್ತು ಮಾಧ್ಯಮ ಎಂಬ ರಾಜ್ಯ ಸರಕಾರದ ಭಾಷಾನೀತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಮಿತಗೊಳಿಸಿ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಮಾಧ್ಯಮಕ್ಕೆ ಅವಕಾಶ ನೀಡಿ ‘ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ, ಇಲ್ಲದವರಿಗೆ ಕನ್ನಡ ಮಾಧ್ಯಮ’ ಎಂಬ ಶೈಕ್ಷಣಿಕವಲ್ಲದ, ಹೊಸ ಸಾಮಾಜಿಕ ಅಸಮಾನತೆಯನ್ನು ಪೋಷಿಸಿದೆ.
ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರವು ಸಲ್ಲಿಸಿರುವ ಮೇಲ್ಮನವಿಯು ಸರ್ವೋನ್ನತ ನ್ಯಾಯಾಲಯದ ಮುಂದೆ ಇದ್ದು ಅದು ಬೇಗ ಇತ್ಯರ್ಥವಾಗಿ ಎಲ್ಲ ಬಗೆಯ ಶಾಲೆಗಳ ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಲಿಕೆಯ ವಿಷಯ ಮತ್ತು ಮಾಧ್ಯಮವಾಗಬೇಕು. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಮಗುವಿಗೆ ಪರಿಚಯವಿರುವ ಅದರ ಮಾತೃಭಾಷೆ/ ಪರಿಸರಭಾಷೆಯಾದ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಬೇಕು. ಎರಡನೆಯ ಭಾಷೆಯನ್ನು ಕಲಿಯುವ ಹಂತದಲ್ಲಿ ಇಂಗ್ಲಿಷ್ನಲ್ಲಿ ಕೇಳುವ ಮಾತನಾಡುವ ಕೌಶಲಗಳನ್ನು ಮಾತ್ರ ಕಲಿಸಬೇಕು. ಐದನೆಯ ತರಗತಿಯಿಂದ ಓದುವ, ಬರೆಯುವ ಕೌಶಲಗಳನ್ನು ಕಲಿಸಬೇಕು ಎಂಬ ಶೈಕ್ಷಣಿಕ ನೀತಿಯ ಸ್ಪಷ್ಟ ಅನುಷ್ಠಾನವಾಗಬೇಕು.
ಇಂಗ್ಲಿಷರ ಆಳ್ವಿಕೆಯ ಪರಿಣಾಮವಾಗಿ ಇಂಗ್ಲಿಷಿನಲ್ಲಿ ವಿರೂಪಗೊಂಡಿರುವ ನಮ್ಮ ಊರುಗಳ ಹೆಸರುಗಳನ್ನು ಸಹಜ ಉಚ್ಚಾರಣೆಯ ಕಾಗುಣಿತಕ್ಕೆ ಬದಲಾಯಿಸುವ ಕಾರ್ಯ ದೇಶಾದ್ಯಂತ ನಡೆದಿದೆ. ಕರ್ನಾಟಕದ ಕೆಲವು ಊರುಗಳ ಹೆಸರುಗಳ ಇಂಗ್ಲಿಷ್ ಕಾಗುಣಿತವನ್ನು ಬದಲಾಯಿಸಿರುವುದರ ವಿರುದ್ಧದ ದೂರನ್ನು ಪುರಸ್ಕರಿಸಿರುವ ನ್ಯಾಯಾಲಯ ಹೊಸ ಕಾಗುಣಿತವನ್ನು ಮರುಪರಿಶೀಲಿಸುವಂತೆ ಆದೇಶಿಸಿರುವುದು ಆತಂಕದ ಸಂಗತಿ. ಈ ಬಗ್ಗೆ ನ್ಯಾಯಾಲಯದ ಎದುರು ಸಮರ್ಪಕವಾಗಿ ವಿಷಯ ಪ್ರತಿಪಾದಿಸುವಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ ಕೂಡಲೆ ನ್ಯಾಯಾಲಯವನ್ನು ಮತ್ತೆ ಪ್ರಾರ್ಥಿಸಬೇಕು. ಒಂದು ಭಾಷೆಯ ಉಚ್ಚಾರಣೆಯನ್ನು ಇನ್ನೊಂದು ಭಾಷೆಯ ಲಿಪಿಯಲ್ಲಿ ಸಮರ್ಪಕವಾಗಿ ಬರೆಯಲಾಗುವುದಿಲ್ಲ. ಸಾಧ್ಯವಿರುವಷ್ಟು ಮೂಲಕ್ಕೆ ಸಮೀಪವಾದ ಉಚ್ಚಾರಣೆಯಲ್ಲಿ ಬರೆಯಬಹುದು. ಹಾಗೆ ಬರೆಯುವಾಗಲೂ ಭಾಷಾ ವೈಜ್ಞಾನಿಕ ಕ್ರಮವನ್ನು ಅನುಸರಿಸುವುದು ಮುಖ್ಯ. ಇಂಗ್ಲಿಷ್ ಭಾಷೆಯ ಅವೈಜ್ಞಾನಿಕ ಕಾಗುಣಿತದ ಕ್ರಮವನ್ನು ಕುರುಡಾಗಿ ಅನುಸರಿಸುತ್ತಿರುವುದು ಇಂಥ ಗೊಂದಲಕ್ಕೆ ಕಾರಣ ಎಂಬ ಅಂಶಗಳನ್ನು ನ್ಯಾಯಾಲಯಕ್ಕೆ ಸಮರ್ಥವಾಗಿ ವಿವರಿಸುವ ಅಗತ್ಯವಿದೆ.
ಬೆಂಗಳೂರನ್ನು ಸ್ಥೂಲ ಧ್ವನಿಲೇಖನ(broad phonetic transcription)ದಲ್ಲಿ bengaluru ಎಂದೂ, ಸೂಕ್ಷ್ಮ ಧ್ವನಿಲೇಖನ(narrow phonetic transcription)ದಲ್ಲಿ bengaLuuru ಅಥವಾ bengaLUru ಎಂದೂ ಬರೆಯಬಹುದು. bengalooruಎಂದು ಬರೆದರೆ ಅದು door (ಡೋರ್ ‘ಬಾಗಿಲು’)ನಂತೆ ಬೆಂಗಲೋರು ಆಗುತ್ತದೆ. ಅಲ್ಲದೆ ಅಲ್ಲಿ ಳ ಬದಲು ಲ ಇರುವುದನ್ನು ನ್ಯಾಯಾಲಯವು ಗಮನಿಸಿದಂತಿಲ್ಲ. ಇಂಗ್ಲಿಷಿನ ಸಾಂಪ್ರದಾಯಿಕ ಕಾಗುಣಿತ ಧ್ವನಿ ನಿಯಮಗಳನ್ನು ಪಾಲಿಸುವುದಿಲ್ಲ. ಹ್ರಸ್ವ ಸ್ವರ ಬರೆದು ಅದನ್ನು ದೀರ್ಘ ಸ್ವರವಾಗಿ ಓದುವ ಕ್ರಮವೂ ಇದೆ. ಉದಾ: pure(ಪ್ಯೂರ್, ‘ಶುದ್ಧ’), sure(ಶೂರ್, ‘ಖಂಡಿತ’) sore(ಸೋರ್, ‘ಹುಣ್ಣು’) ಇತ್ಯಾದಿ. ಆದ್ದರಿಂದ ಬೆಂಗಳೂರಿನ ಹೆಸರನ್ನು bengaluru ಎಂದು ಸ್ಥೂಲ ಧ್ವನಿಲೇಖನದಲ್ಲಿ ಸರಿಯಾಗಿಯೇ ಬರೆದಿರುವುದರ ವಿರುದ್ಧ ನೀಡಿರುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಘನ ನ್ಯಾಯಾಲಯವನ್ನು ಪ್ರಾರ್ಥಿಸಬೇಕು; ಇಂಥ ವಿಷಯಗಳ ಬಗ್ಗೆ ತೀರ್ಪು ನೀಡುವ ಮುನ್ನ ಭಾಷಾ ತಜ್ಞರ ಅಭಿಮತವನ್ನೂ ಪಡೆಯುವಂತೆ ಕೋರಬೇಕು.
ಊರುಗಳ ಹೆಸರುಗಳನ್ನು ಬಸ್ಸು, ರೈಲು, ವಿಮಾನ ನಿಲ್ದಾಣಗಳು, ಭೂಪಟ, ಗೂಗಲ್ ಅರ್ಥ್ ಇತ್ಯಾದಿ ಎಲ್ಲ ಕಡೆ ಧ್ವನಿ ವೈಜ್ಞಾನಿಕ ಕಾಗುಣಿತದಲ್ಲಿ ಬರೆಯಬೇಕು. ಮೈಸೂರಿನ ಹೆಸರನ್ನು ಇಂಗ್ಲಿಷಿನಲ್ಲಿ ವಿಪರೀತ ಅರ್ಥ ಬರುವಂತೆ ಬರೆಯಲಾಗುತ್ತಿದೆ. ಮಹಾರಾಜರ ಮೈಸೂರು ಸಂಸ್ಥಾನದಲ್ಲಿದ್ದ ಕನ್ನಡೇತರ ಅಧಿಕಾರಿಗಳು ಮೈಸೂರು ಎಂಬುನ್ನು ಇಂಗ್ಲಿಷಿನ my(‘ನನ್ನ’) sore(‘ಹುಣ್ಣು!’) ಎಂದು ಎರಡು ಪದಗಳಾಗಿ ವಿಭಜಿಸಿ ಗೇಲಿ ಮಾಡುತ್ತಿದ್ದರು. ಕನ್ನಡದ ಮೈ ಎಂಬ ಅಕ್ಷರದಲ್ಲಿರುವ ಮ್ ವ್ಯಂಜನ ಮತ್ತು ಐ ಸ್ವರಗಳನ್ನು ಇಂಗ್ಲಿಷಿನ ಕಾಗುಣಿತದ ಮ್ ಮತ್ತು ಯ್ ಎಂಬ ಎರಡು ವ್ಯಂಜನಗಳಾಗಿ ಬರೆಯುವುದು ಸರಿಯಲ್ಲ. ಅದನ್ನು ಮ್ ವ್ಯಂಜನ ಮತ್ತು mumbai, chennaiಗಳ ಅಂತ್ಯದಲ್ಲಿರುವ ಐ ಸ್ವರದಂತೆ ಅಂದರೆ maiಎಂದೇ ಬರೆಯಬೇಕು. ಮೈಸೂರಿನ ಹೆಸರನ್ನು ಸ್ಥೂಲ ಧ್ವನಿಲೇಖನದಲ್ಲಿ maisuru ಎಂದೂ ಸೂಕ್ಷ್ಮ ಧ್ವನಿಲೇಖನದಲ್ಲಿ maisuuru ಅಥವಾ maisUru ಎಂದು ಬರೆಯಬೇಕು. ಮ್ ಯ್ ಸೊರೆ(mysore) ಅಥವಾ ಮ್ ಯ್ ಸೋರು(mysooru) ಎಂದು ವಿಕೃತವಾಗಿ ಬರೆಯಕೂಡದು.
ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೧ ದಿನಾಂಕ ೩೧-೮-೨೦೦೧). ರಾಜ್ಯದಲ್ಲಿ ನೋಂದಣಿಯಾಗುವ ಎಲ್ಲ ಖಾಸಗೀ ವಾಹನಗಳೂ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.
ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಆದ್ದರಿಂದ ‘ಕನ್ನಡ ತಾಯಿ’ ಎನ್ನುವುದು ಕನ್ನಡಿಗರೆಲ್ಲರ ತಾಯಿ ಎಂಬ ಅಮೂರ್ತ ಕಲ್ಪನೆ. ಅದನ್ನು ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಇತ್ಯಾದಿ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬಂದು’, ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ನಾವು ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸಬೇಕಿದೆ. ಹಾಗೆ ಬೆಳಸುವ ಹೊಣೆ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.
ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
0.000000
0.000000