ನನಸಾದೀತೆ ಕಂಬಾರರ ‘ಕನಸು’?*

* ಈ ಪತ್ರವನ್ನು ಪ್ರಜಾವಾಣಿ ಪ್ರಕಟಿಸದಿದ್ದುದರಿಂದ ಇದನ್ನು ಕರಪತ್ರವಾಗಿ ಮುದ್ರಿಸಿ ಬೆಳಗಾವಿಯಲ್ಲಿ ನಡೆದ ಎರಡನೆಯ ವಿಶ್ವಕನ್ನಡ ಸಮ್ಮೇಳನದ ತಂತ್ರಜ್ಞಾನ ಗೋಷ್ಠಿಯಲ್ಲಿ ವಿತರಿಸಿದೆ. ಪ್ರಸಿದ್ಧ ವ್ಯಕ್ತಿಗಳು ಇತರರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದನ್ನು ಪ್ರಕಟಿಸುವ ಪತ್ರಿಕೆಗಳು ಸಂಬಂಧಪಟ್ಟವರು ಸ್ಪಷ್ಟನೆಯನ್ನುನೀಡಿ/ ವಿವರಣೆಯನ್ನು ಕೋರಿ ಬರೆದ ಪತ್ರಗಳನ್ನೂ ಪ್ರಕಟಿಸಬೇಕಾದುದು ಅವುಗಳ ಹೊಣೆಗಾರಿಕೆ. ಹಾಗೆ ಪ್ರಕಟಿಸದಿರುವುದು ಅಕ್ಷಮ್ಯ. ಆದ್ದರಿಂದ ಈ ಮಾಧ್ಯಮದಲ್ಲಿ ಅದನ್ನು ಪ್ರಕಟಿಸಿದೆ.

ಸಂಪಾದಕರಿಗೆ
ಪ್ರಜಾವಾಣಿ ಅಭಿಮತ (ವಾಚಕರವಾಣಿ ಅಥವಾ ಸಂಗತ) ವಿಭಾಗ
೭೫, ಮಹಾತ್ಮಾ ಗಾಂಧಿ ರಸ್ತೆ
ಬೆಂಗಳೂರು ೫೬೦೦೦೧
೨ ಮಾರ್ಚಿ ೨೦೧೧
ಮಾನ್ಯರೆ,
೨೭ನೇ ಫೆಬ್ರುವರಿ ೨೦೧೧ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಚಂದ್ರಶೇಖರ ಕಂಬಾರರ ‘ನನಸಾದೀತೆ ತೇಜಸ್ವಿ ಕನಸು?’
ಎಂಬ ಬರಹವನ್ನು ಓದಿ ಸಖೇದ ಆಶ್ಚರ್ಯವಾಯಿತು. ನಮ್ಮ ನೆರೆಹೊರೆ ಭಾಷೆಗಳಲ್ಲಿ ಆಗಿರುವಂಥ ಬೆಳವಣಿಗೆಯೂ ಕನ್ನಡದಲ್ಲಿ ಆಗಿಲ್ಲವೆಂದು ಅವರು ತಿಳಿಸಿದ್ದಾರೆ. ಈ ಮಾಹಿತಿಗೆ ಆಧಾರವನ್ನಾಗಲೀ ಆ ಭಾಷೆಗಳಲ್ಲಿ ಏನೇನು ಆಗಿದೆ ಎಂಬುದನ್ನಾಗಲಿ ತಿಳಿಸಿಲ್ಲ. ‘ಆಗಿದೆಯಂತೆ’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ನಿಜ ಸ್ಥಿತಿ ಏನೆಂಬುದು ಅವರಿಗೂ ಗೊತ್ತಿಲ್ಲ! ಕಂಬಾರರು ಹೇಳಿರುವಂತೆ ‘ಒಂದು ತಂತ್ರಾಂಶದಲ್ಲಿ ಸಿದ್ಧಪಡಿಸಿದ ಪಠ್ಯವನ್ನು ಇನ್ನೊಂದರಲ್ಲಿ ಓದಲಾಗದ’ ತೊಂದರೆ ತಪ್ಪಿಸಲೇ ಸರಕಾರ ನುಡಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು! ಅದರಿಂದ ಇಂದು ಕರ್ನಾಟಕದ ಮಟ್ಟಿಗೆ ಆ ಸಮಸ್ಯೆ ಇಲ್ಲ. ಕರ್ನಾಟಕದಲ್ಲಿ ಆಗಿರುವಂತೆ ಒಂದು ಶಿಷ್ಟತೆ ರೂಪಿಸಿಕೊಳ್ಳದ ರಾಜ್ಯಗಳು(ಉದಾ: ಮಧ್ಯಪ್ರದೇಶ) ಸಂಕಷ್ಟಗಳನ್ನು ಈಗಲೂ ಅನುಭವಿಸುತ್ತಿವೆ.

ಕನ್ನಡದಲ್ಲಿ ಕೀಲಿಮಣೆ ಮತ್ತು ಸಂಕೇತ ಶಿಷ್ಟತೆ ಇಲ್ಲವೆಂದು ತೇಜಸ್ವಿಯವರು ಹೇಳಿದ್ದನ್ನು ಕಂಬಾರರು ನೆನಪಿಸಿದ್ದಾರೆ. ಕರ್ನಾಟಕ ಸರಕಾರ ನೇಮಿಸಿದ್ದ ತಜ್ಞರ ಸಮಿತಿಯು ಅವನ್ನು ನಿರ್ಧರಿಸಿದ ಮೇಲೆ ಅಕ್ಷರ ಸಂಕೇತಗಳ ಶಿಷ್ಟತೆಯನ್ನೂ ಕೆ.ಪಿ ರಾಯರ ಕೀಲಿಮಣೆಯನ್ನೂ ಸರಕಾರ ಅಂಗೀಕರಿಸಿತು. ಸರಕಾರದ ಅಪೇಕ್ಷೆಯಂತೆ ಕನ್ನಡ ಗಣಕ ಪರಿಷತ್ತು ಒಂದು ಮಾದರಿ ತಂತ್ರಾಂಶ ‘ನುಡಿ’ಯನ್ನು ಸಿದ್ಧಪಡಿಸಿಕೊಟ್ಟಿತು. ಅದನ್ನು ಸರಕಾರ ತನ್ನ ಕಛೇರಿಗಳಲ್ಲಿ ಕಡ್ಡಾಯಗೊಳಿಸಿದ್ದಲ್ಲದೆ ಸಾರ್ವಜನಿಕರಿಗೆ ಉಚಿತವಾಗಿ ದೊರೆಯುವಂತೆ ತನ್ನ ಜಾಲತಾಣಗಳಲ್ಲಿ ಒದಗಿಸಿತು. ತಾನು ಕೊಳ್ಳುವ ಖಾಸಗಿಯವರ ತಂತ್ರಾಂಶಗಳು ಈ ಶಿಷ್ಟತೆಗೆ ಅನುಗುಣವಾಗಿರಬೇಕೆಂದು ತಿಳಿಸಿತು. ಇದರಿಂದ ‘ಕನ್ನಡದಲ್ಲಿ ತಂತ್ರಾಂಶ ಅಭಿವೃದ್ಧಿಯನ್ನು ಮಾಡುತ್ತಿದ್ದ ದೊಡ್ಡ ಕಂಪನಿಗಳು ಬಾಗಿಲು ಮುಚ್ಚಿ ಹೊರರಾಜ್ಯಗಳಿಗೆ ನಡೆದವು’ ಎಂದು ತೇಜಸ್ವಿಯವರು ಹೇಳಿದ್ದು ಸರಿಯಲ್ಲ.

ನುಡಿ ಸರಕಾರದ ಸ್ವಾಮ್ಯದ ಮಾದರಿ ತಂತ್ರಾಂಶವಾಗಿದ್ದು ಅದಕ್ಕೆ ಅನುಗುಣವಾದ ಆನ್ವಯಿಕ ತಂತ್ರಾಂಶಗಳನ್ನು ಸಿದ್ಧಪಡಿಸಲು
ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ತೇಜಸ್ವಿಯವರು ಹೇಳಿದ ದೊಡ್ಡ ಕಂಪನಿಗಳು ಯಾವ ಶಿಷ್ಟತೆಯನ್ನೂ ಒಪ್ಪದೆ,
ಕೇವಲ ತಮ್ಮದೇ ಅಕ್ಷರ ಶೈಲಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದವು. ಅವುಗಳ ಒಂದು ತಂತ್ರಾಂಶದಲ್ಲಿ ಸಿದ್ಧಪಡಿಸಿದ ಮಾಹಿತಿಯನ್ನು ಬೇರೆಯವರ ತಂತ್ರಾಂಶಗಳಲ್ಲಿರಲಿ, ಅವುಗಳ ಬೇರೆ ಆವೃತ್ತಿಗಳಲ್ಲಿಯೇ ಓದಲು ಸಾಧ್ಯವಿರಲಿಲ್ಲ.

ತೇಜಸ್ವಿಯವರ ಪ್ರೋತ್ಸಾಹದಿಂದ ಕನ್ನಡ ವಿಶ್ವವಿದ್ಯಾಲಯವು ‘ಚಕ್ರವನ್ನು ಇನ್ನೊಮ್ಮೆ ಕಂಡುಹಿಡಿಯುವಂತೆ’ ನುಡಿಯಂತಹ ಇನ್ನೊಂದು ಅಕ್ಷರ ತಂತ್ರಾಂಶವನ್ನು ನಿರ್ಮಿಸಿ ಅದಕ್ಕೆ ಕುವೆಂಪು ಅವರ ಹೆಸರನ್ನು ನೀಡಿತು. ಜೊತೆಗೆ ಅದರ ಆಕರ ಸಂಕೇತವನ್ನೂ ನೀಡಿತು. ಅದನ್ನು ಬಳಸಿಕೊಂಡು ಇದುವರೆಗೆ ಯಾರೂ ಯಾವ ಬಗೆಯ ಕನ್ನಡ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿಲ್ಲ. ಪರಿಣತ ತಂತ್ರಾಂಶ ತಜ್ಞರಿಗೆ ಇನ್ನೊಬ್ಬರು ರೂಪಿಸಿರುವ ಆಕರ ಸಂಕೇತಗಳು ಅಂತಹ ಪ್ರಯೋಜನಕಾರಿಯಾಗುವುದಿಲ್ಲ. ಕುವೆಂಪು ತಂತ್ರಾಂಶವನ್ನು ಕನ್ನಡ ವಿಶ್ವವಿದ್ಯಾಲಯವೇ ತನ್ನ ನಿತ್ಯ ವ್ಯವಹಾರಗಳಲ್ಲಿ, ಪ್ರಕಟಣೆಗಳಲ್ಲಿ ಬಳಸಿಲ್ಲ ಎಂಬುದನ್ನು ಕಂಬಾರರು ಅರಿಯದವರಲ್ಲ.

ಕನ್ನಡದಲ್ಲಿ ಆಸ್ಕಿ ಸಂಕೇತಗಳ ಬಳಕೆ ಇದ್ದಾಗ ಅದರಲ್ಲಿ ಶಿಷ್ಟತೆಯನ್ನೂ ಧ್ವನ್ಯಾತ್ಮಕ ಕೀಲಿಮಣೆಯನ್ನೂ ನುಡಿಯಲ್ಲಿ ಬಳಸಲಾಯಿತು.
ಇಂದು ಆಸ್ಕಿ ಕಾಲ ಮುಗಿದು ಅದರ ಸ್ಥಾನದಲ್ಲಿ ಯೂನಿಕೋಡ್ ಸಂಕೇತಗಳ ವ್ಯವಸ್ಥೆ ಬಂದಿದೆ. ನುಡಿಯಲ್ಲಿ ಸಿದ್ಧಪಡಿಸಿರುವ ಮಾಹಿತಿಯನ್ನು ಯೂನಿಕೋಡ್ ಗೆ ಪರಿವರ್ತಿಸುವ ಸೌಲಭ್ಯವನ್ನೂ ನುಡಿಯಲ್ಲಿ ಕೊಡಲಾಗಿದೆ.

ತೇಜಸ್ವಿಯವರು ಇಲ್ಲದಿರುವಾಗ ಅವರು ಆಡಿದ ಮಾತನ್ನು ಉಲ್ಲೇಖಿಸಿ ಗಣಕ ಪರಿಷತ್ತಿನ ಮೇಲೆ ಆಪಾದನೆ ಹೊರಿಸುವುದು
ಕಂಬಾರರಂಥವರಿಗೆ ಶೋಭಿಸುವುದಿಲ್ಲ. ‘ಸರಕಾರದ ಕಾರ್ಯದರ್ಶಿಯವರು, ಹೆಚ್ಚು ಹಣವನ್ನು ಸರಕಾರದಿಂದ ಕೇಳಿ ಎಂದು ಗಣಕ ಪರಿಷತ್ತಿಗೆ ಪತ್ರ ಬರೆದಿದ್ದರು’ ಎಂಬ ಆಪಾದನೆಯನ್ನು ತೇಜಸ್ವಿಯವರು ಮಾಡಿದಾಗ, ಸಂಬಂಧಪಟ್ಟ ಮಾಹಿತಿಯ ವಿವರಗಳನ್ನು ತಿಳಿಸಬೇಕೆಂದೂ ಇಲ್ಲದಿದ್ದಲ್ಲಿ ಸುಳ್ಳು ಹೇಳಿದ್ದಕ್ಕಾಗಿ ಸಾರ್ವಜನಿಕರ ಕ್ಷಮೆಕೋರಬೇಕೆಂದೂ ತೇಜಸ್ವಿಯವರನ್ನು ಕೋರಿದ್ದೆ. ತೇಜಸ್ವಿಯವರು ಯಾವುದನ್ನೂ ಮಾಡಲಿಲ್ಲ! ಮುಂದೊಂದು ದಿನ ಸಿಕ್ಕಿದ್ದಾಗ ‘ಮಾತು ಬರುತ್ತೆ, ಹೋಗುತ್ತೆ, ಕಣ್ರಿ’ ಎಂದಿದ್ದರು! ವಿಧಾನಪರಿಷತ್ತಿನ ಸದಸ್ಯರಾಗಿರುವ ಕಂಬಾರರಾದರೂ ತೇಜಸ್ವಿಯವರು ಮಾಡಿದ್ದ ‘ಆಪಾದನೆ’ಗಳ ಬಗ್ಗೆ ಆಧಾರಗಳನ್ನು ನೀಡಲಿ.

ಇಂದು ಕನ್ನಡ ಮಾಹಿತಿಗಳ ನಿರ್ಮಾಣ ಎಷ್ಟಾಗಿದೆ? ಎಂದು ತಿಳಿಯಲು, ಗೂಗಲ್ ನಲ್ಲಿ ಹುಡುಕಿದರೆ, ಉದಾಹರಣೆಗೆ ‘ಜಾನಪದ’, ‘ಕನ್ನಡ ವಿಮರ್ಶೆ’, ‘ಕನ್ನಡ ರಂಗಭೂಮಿ’ ಎಂದಾಗ ಬರುವ ವಿವರಗಳನ್ನೂ ಇಂಗ್ಲಿಷಿನ ಫೋಕ್ ಲೋರ್, ಕ್ರಿಟಿಸಿಸಂ, ಥಿಯೇಟರ್ ಎಂದು ಹುಡುಕಿದಾಗ ಬರುವ ವಿವರಗಳನ್ನೂ ಹೋಲಿಸಿದರೆ ನಮ್ಮಲ್ಲಿ ಆಗಬೇಕಾಗಿರುವ ಕೆಲಸದ ಅಗಾಧತೆಯ ಅರಿವಾಗುತ್ತದೆ.

ಕೆಲವು ತಿಂಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಲೆನಾಡಿನ ಪತ್ರಮಿತ್ರ ಸಂಸ್ಥೆ ಏರ್ಪಡಿಸಿದ್ದ ಕನ್ನಡ ಗಣಕ ಸಾಧನೆಗಳನ್ನು ಕುರಿತ
ವಿಚಾರ ಸಂಕಿರಣದಲ್ಲಿ ಗಣಕ ಪರಿಷತ್ತಿನ ಗೆಳೆಯರೊಂದಿಗೆ ಭಾಗವಹಿಸಿದ್ದೆ. ಗಣಕ ಪರಿಷತ್ತು ಸಿದ್ಧಪಡಿಸಿರುವ ನುಡಿ, ಕನ್ನಡ ವಿಶ್ವಕೋಶ, ಪಂಪನ ಎರಡು ಕಾವ್ಯಗಳು, ಕನ್ನಡ-ಕನ್ನಡ ನಿಘಂಟು ಮೊದಲಾದವುಗಳ ಅಡಕ ತಟ್ಟೆಗಳನ್ನು ಪ್ರದರ್ಶಿಸಿದ್ದೆವು.
ಆಗ ಅಲ್ಲಿದ್ದ ಕಂಬಾರರು ಈವರೆಗೆ ನಾನು ಇವನ್ನು ನೋಡಿರಲಿಲ್ಲ! ಎಂದು ಸಭೆಗೆ ತಿಳಿಸಿದ್ದರು! ಆಸ್ಕಿ ಸಂಕೇತಗಳ ನುಡಿಯ ಕಾಲ ಮುಗಿದಿದ್ದು ಇನ್ನು ಯೂನಿಕೋಡ್ ಅನ್ನು ಕನ್ನಡದ ಶಿಷ್ಟತೆ ಎಂದು ಘೋಷಿಸಬೇಕೆಂದು ಸರಕಾರವನ್ನು ಕೋರುವುದಾಗಿ ತಿಳಿಸಿದ್ದೆವು.

ಈಗ ಕಂಬಾರರು ನಿದ್ರೆಯಲ್ಲಿ ಕನವರಿಸುವವರಂತೆ ‘ತೇಜಸ್ವಿಯವರ ಕನಸು, ಅವರ ಆತ್ಮಕ್ಕೆ ಶಾಂತಿ!’ ಎಂಬ ಬೆದರುಬೊಂಬೆ’ ಪ್ರದರ್ಶಿಸಿದ್ದಾರೆ. ‘ಕನ್ನಡ ತಂತ್ರಾಂಶಗಳ ಬಗ್ಗೆ ಮಾತನಾಡಲು ಸರಕಾರದ ಕಛೇರಿಗೆ ಹೋಗಿದ್ದಾಗ ಎಲ್ಲರೂ ತಮ್ಮ ಮತ್ತು ತೇಜಸ್ವಿಯವರ ಜೊತೆ ನಿಂತು ಫೋಟೊ ತೆಗೆಸಿಕೊಂಡರು. ಆದರೆ ಏನೂ ಮಾಡಿಲ್ಲ’ ಎಂದು ಅಲವತ್ತುಕೊಂಡಿದ್ದಾರೆ.
ಕನ್ನಡ ತಂತ್ರಾಂಶಗಳ ಪ್ರಾಥಮಿಕ ಪರಿಚಯವಿಲ್ಲದವರು ‘ಮಾತನಾಡಿ’ದರೆ ತಿಳಿದವರು ಇನ್ನೇನು ಮಾಡಲು ಸಾಧ್ಯ?
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦

Post a comment or leave a trackback: Trackback URL.

ಟಿಪ್ಪಣಿಗಳು

 • ಕನ್ನಡಿಗ  On ಮಾರ್ಚ್ 16, 2011 at 5:02 ಫೂರ್ವಾಹ್ನ

  ವಿವಾದಗಳೇನೇ ಇರಲಿ, ಏಕರೂಪ ಕೀಲಿಮಣೆ, ಫಾಂಟುಗಳನ್ನು ಮಾಡುವುದರ ಮೂಲಕ ತನ್ನ ಇತಿಮಿತಿಯಲ್ಲೇ ಗಣಕ ಪರಿಶತ್ತು ಒಳ್ಳೆಯ ಕೆಲಸ ಮಾಡಿದೆ.

 • ಕೆಎಸ್ ನವೀನ್  On ಮಾರ್ಚ್ 18, 2011 at 12:36 ಅಪರಾಹ್ನ

  ಮಾನ್ಯರೆ,

  ಇಲ್ಲಿನ ತಮಾಶೆ ಎಂದರೆ, ವಿವಾದ ಇಲ್ಲವೇ ಇಲ್ಲ! Making silly things big and big things silly ಎನ್ನುತ್ತಾರಲ್ಲ ಅದಕ್ಕೆ academic ಉದಾಹರಣೆ ‘ವಿವಾದ’. ಗಣಕ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳು ಹಿಮಾಲಯದಷ್ಟಿರುವಾಗ, ಅವನ್ನೆಲ್ಲ ಬದಿಗೆ ಸರಿಸಿ, ಕೆಲಸಕ್ಕೆ ಬಾರದ್ದನ್ನು ತೆಗೆದುಕೊಂಡು ಅದಕ್ಕೆ ಇಲ್ಲದ ಪ್ರಾಧಾನ್ಯ ಆರೋಪಿಸಿ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ.

  ಅಕ್ಷರ ಕೊಡುವ ತಂತ್ರಾಂಶ ಮುಗಿದ ಅಧ್ಯಾಯ. ಇನ್ನು ಕನ್ನಡದಲ್ಲಿ content creation ಬಗ್ಗೆ ಯೋಚಿಸಿ ಮಾಡಬೇಕಾಗಿರುವ ಅಪಾರ ಕಾರ್ಯದ ಬಗ್ಗೆ ದೃಷ್ಟಿ ಹಾಯಿಸಬೇಕಾಗಿದೆ.

  ಕೆ ಎಸ್ ನವೀನ್
  94489-05214

 • ತೋಂಟದಾರ್ಯ ಸಂಪಿಗೆ  On ಮೇ 16, 2011 at 1:41 ಅಪರಾಹ್ನ

  ಪ್ರತಿಕೆಯವರು ಅವರಿಗೆ ಪ್ರಿಯರಾಗಿರುವಂತವರನ್ನಷ್ಠೇ ಮುಂದೆ ತರುವುದು ಅವರ ಅಭಿಪ್ರಾಯಗಳನ್ನಷ್ಠೇ ಬಿಂಬಿಸುವುದು ತುಂಬ ಹಳೇ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ದತಿಯೇ ಆಗಿದೆ.ನಾನು ಪತ್ರಿಕೆಗಳಿಗೆ ಬರೆಯುವುದನ್ನೇ ಬಿಟ್ಟು ಹಲವಾರು ವರ್ಷಗಳೇ ಆಗಿವೆ.ಆದರೆ ನಿಮ್ಮಂತಹ ಹೆಸರಾಗಿರುವ ಕನ್ನಡ ಸಾಹಿತಿಗಳಿಗೂ ಹೀಗೆ ಅಗುವುದು ಅಪರೂಪ, ಆದರೆ ನಿಜ. ಇರಲಿ ಬಿಡಿ. ನಷ್ಠವೇನಿಲ್ಲ.
  ತಪ್ಪು ತಿಳೀಬೇಡಿ, ಪತ್ರಿಕೆಗಳಲ್ಲಿ ಅದು ಯಾವುದೇ ವಿಷಯ ಇರಲಿ, ವಿಜ್ಞಾನ, ಪರಿಸರ, ರಾಜಕೀಯ, ಸಾಮಾಜಿಕ, ಹೀಗೆ ಏನೇ ಇರಲಿ ಈ ಜನಪ್ರಿಯ ಪ್ರತಿಭಾವಂತ (?)ಕನ್ನಡ ಸಾಹಿತಿಗಳ ಅಭಿಪ್ರಾಯಗಳಿಗಷ್ಠೇ ಮನ್ನಣೆ. ವಿಷಯ ತಜ್ಞರಿಗೂ ಮನ್ನಣೆಯಿಲ್ಲ. ಇದಕ್ಕೆ ಕಾರಣವೇನಿರಬಹುದು? ನನಗಂತೂ ತಿಳಿಯದಾಗಿದೆ.ನಾನು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
  ತೋಂಟದಾರ್ಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: