ಕೀರ್ತಿಶ್ರೀ ನಾಯಕ
ಇಂದು ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿಯವರು ನಮ್ಮನ್ನು ಅಗಲಿದ ದಿನ.
ಅವರ ನೆನಪು ನಮ್ಮೊಂದಿಗೆ ಚಿರಂತನ.
ಅವರ ಆತ್ಮೀಯರಾದ ಪ್ರೊ ಜಿ ಎಚ್ ನಾಯಕರ ಮಗಳು ಕೀರ್ತಿಶ್ರೀ ನೆನಪಿನಲ್ಲಿ ತೇಜಸ್ವಿ ಹೀಗಿದ್ದಾರೆ.
ನಿಟ್ಟೆಯಿಂದ ಕಾರ್ಕಳ ಮಾರ್ಗವಾಗಿ ಮೈಸೂರಿಗೆ ಬರುವ ಎಲ್ಲ ಮಾರ್ಗಗಳೂ ಹಾಳಾಗಿ ಹೋಗಿರುವುದರಿಂದ ಚಕಿತಳನ್ನು ನಿಟ್ಟೆಯಲ್ಲಿ ಬಿಟ್ಟು ಬರಲು ಹೋದಾಗ ಪ್ರತಿಸಲ ಬೇರೆ ಬೇರೆ ರಸ್ತೆಗಳನ್ನು ಹುಡುಕುವುದು ಮದನ್‌ಗೆ ರೂಢಿಯಾಗಿ ಹೋಗಿದೆ. ಮದನ್ ನನಗಿಂತ ಹೆಚ್ಚು ಆಶಾವಾದಿ. ಈ ರಸ್ತೆ ಅಲ್ಲದಿದ್ದರೆ ಮತ್ತೊಂದು ರಸ್ತೆ ಸರಿ ಇರಬಹುದು ಅಥವಾ ಮುಂದೆ ರಸ್ತೆ ರಿಪೇರಿ ಮಾಡಿರಬಹುದು ಎಂಬ ಆಶಾವಾದದಿಂದಲೇ ಯಾವಾಗಲೂ ಹಾಳಾಗಿಹೋದ ರಸ್ತೆಯಲ್ಲಿ ಡ್ರೈವ್ ಮಾಡುವ ಸ್ಫೂರ್ತಿಯನ್ನು ಉಳಿಸಿಕೊಂಡು ಮುಂದುವರೆಯುವ ಪ್ರವೃತ್ತಿಯುಳ್ಳವರು. ಅಥವಾ ೧೫ ವರ್ಷ ಕಾಲ ತಾನು ದುಡಿದು ಬಿಟ್ಟ ಪಿಡಬ್ಲ್ಯೂಡಿ ವಿಷಯದಲ್ಲಿ ಮಾತನಾಡಲಿಚ್ಛಿಸದೆ ಈ ರೀತಿ ಮಾಡುತ್ತಿರಬಹುದು. ಅಂತೂ ನಮ್ಮ ಪ್ರಯಾಣದ ಅಂತ್ಯದಲ್ಲಿ ನಾವು ಗೊತ್ತಿದ್ದ ರಸ್ತೆಯಲ್ಲೇ ಮರ್ಯಾದೆಯಿಂದ ಬಂದಿದ್ದರೆ ಒಳ್ಳೆಯದಿತ್ತು ಎನ್ನುವ ತೀರ್ಮಾನಕ್ಕೆ ಬಂದರೂ ಮುಂದಿನ ಸಲ ಮದನ್ ಮತ್ತೊಂದು ರಸ್ತೆಯನ್ನು ಹುಡುಕಿಕೊಂಡು ಹೋಗುವುದು ಮಾಮೂಲು. ಇಷ್ಟೆಲ್ಲ ಆದರೂ ಸೋಲದೆ ತನ್ನ ಪ್ರಯತ್ನ ಮುಂದುವರೆಸುತ್ತಿದ್ದುದು ನನಗೆ ರೂಢಿಯಾಗಿ ಹೋಗಿದೆ. ಆದ್ದರಿಂದ ನಾವು ‘ಮೈಸೂರಿಗೆ’,’ಬೇಲೂರಿಗೆ’ ಎಂಬ ಬೋರ್ಡುಗಳನ್ನು ನೋಡುತ್ತಾ ಆಟೋ, ಟ್ಯಾಕ್ಸಿ ಡ್ರೈವರ್‌ಗಳನ್ನು ರಸ್ತೆಯ ಸ್ಥಿತಿಗತಿಯ ಬಗ್ಗೆ ವಿಚಾರಿಸುತ್ತಾ ಪ್ರಯಾಣ ಮುಂದುವರೆಸುತ್ತಿದ್ದಾಗ ಯಾರೊ ಒಬ್ಬ ಪುಣ್ಯಾತ್ಮರು ‘ಸಾರ್, ನೀವು ಕೊಟ್ಟಿಗೆ ಹಾರದವರೆಗೆ ಹೋಗಿ. ಅಲ್ಲಿಂದ ಒಂದೇ ರಸ್ತೆ. ಇದ್ದದ್ದರಲ್ಲಿ ಸ್ವಲ್ಪ ಚೆನ್ನಾಗಿದೆ’ ಎಂದರು. ಸರಿ, ಹಿಂದುಮುಂದು ನೋಡದೆ ನಾವು ಹೊರಟೆವು.
ಮಳೆಗಾಲ ಆಗತಾನೆ ಮುಗಿದಿತ್ತು. ಘಟ್ಟ ಪ್ರದೇಶ ಬೇರೆ. ಒಂದು ಬದಿಯಲ್ಲಿ ಹತ್ಹತ್ತು ಮಾರಿಗೂ ಝರಿಗಳು, ಇನ್ನೊಂದು ಬದಿಗೆ ಎದೆ ಝಲ್ ಎನಿಸುವ ಪ್ರಪಾತಗಳು, ಗುಡ್ಡಗಳು. ನಾವು ಎಲ್ಲಿದ್ದೇವೆಂದು ತಿಳಿಯದಿದ್ದರೂ ಅಷ್ಟಷ್ಟು ಹೊತ್ತಿಗೆ ಕಾರು ನಿಲ್ಲಿಸಿ ಮದನ್ ಫೋಟೊ ತೆಗೆಯುತ್ತಿದ್ದರು. ನಾನು ಆ ದೃಶ್ಯವನ್ನು ನೋಡುತ್ತಾ ನಮ್ಮನ್ನು ಈ ರಸ್ತೆಯಲ್ಲಿ ಕಳುಹಿಸಿದವರಿಗೆ ಮನಸ್ಸಿನಲ್ಲೇ ‘ಥ್ಯಾಂಕ್ಸ್’ ಹೇಳುತ್ತಿದ್ದೆ. ಹೀಗೇ ಬರುತ್ತಿದ್ದಾಗ ಇದ್ದಕ್ಕಿದಂತೆ ರಸ್ತೆಯ ಬದಿಯಲ್ಲಿ ಅಗಲವಾದ ಝರಿಯೊಂದು ಕಣ್ಣಿಗೆ ಬಿತ್ತು. ಅದು ಬಹಳ ಪರಿಚಿತ ಜಾಗ ಎಂದು ಅನಿಸತೊಡಗಿತು. ತಕ್ಷಣ ನನಗೆ ಮತ್ತು ಮದನ್ ಗೆ ಆ ಜಾಗದ ನೆನಪಾಯಿತು. ಚಕಿತ ೫-೬ ತಿಂಗಳ ಮಗುವಾಗಿದ್ದಾಗ ನಾವು ನಮ್ಮ ಊರಾದ ಅಂಕೋಲೆಗೆ ಹೋಗುವಾಗ ತೇಜಸ್ವಿ ಮಾಮನ ಮನೆಗೆ ಹೋಗಿ, ಅಲ್ಲಿಂದ ಚಾರ್ಮಾಡಿಯ ಮೂಲಕ ಡ್ರೈವ್ ಮಾಡುವಾಗ ಚಕಿತ, ಮದನ್‌ರ ಫೋಟೊವನ್ನು ನಾನು ಈ ಜಾಗದಲ್ಲಿ ಕ್ಲಿಕ್ಕಿಸಿದ್ದೆ. ರಸ್ತೆಜ್ಞಾನ ಮತ್ತು ನೆನಪಿನ ಶಕ್ತಿ ವಿಷಯದಲ್ಲಿ ಬಹಳ ದುರ್ಬಲಳಾಗಿರುವ ನನಗೆ ಈ ವಿಷಯ ಹೊಳೆದದ್ದು ನನಗೇ ಬಹಳ ಸೋಜಿಗವಾಯಿತು! ನೆನಪಿನ ಶಕ್ತಿ ಮತ್ತು ರಸ್ತೆ ಜ್ಞಾನ ಜಾಸ್ತಿಯಿದ್ದ ಮದನ್‌ಗೂ ನಾವು ಚಾರ್ಮಾಡಿ ಘಾಟಿಯ ರಸ್ತೆಯಲ್ಲಿದ್ದೇವೆಂದು ಆಗಲೇ ಗೊತ್ತಾಗಿದ್ದು. ಇವೆಲ್ಲ ಗೊಂದಲಗಳಿಂದ ನಾವು ಹೊರಬರುವುದರೊಳಗೆ ‘ಮೂಡಿಗೆರೆ ೧೭ ಕಿಮೀ’ ಎಂಬ ಕಲ್ಲನ್ನು ನೋಡಿದೆವು. ಮೂಡಿಗೆರೆ ಎಂದಾಕ್ಷಣ ನಮಗೆ ತೇಜಸ್ವಿ ಮಾಮ, ರಾಜೇಶ್ವರಿ ಆಂಟಿ ಬಿಟ್ಟು ಬೇರೇನೂ ನೆನಪಾಗುವುದಿಲ್ಲ.
ಆ ಸಂದರ್ಭದಲ್ಲಿ ಆಂಟಿ ಊರಲ್ಲಿಲ್ಲದ್ದರಿಂದ ಅವರ ತೋಟಕ್ಕೆ ಹೋಗದೆ ಬೇಲೂರು ರಸ್ತೆ ಹಿಡಿದೆವು. ದಾರಿಯಲ್ಲಿ ಜನ್ನಾಪುರ, ಗೋಣಿಬೀಡು ಇತ್ಯಾದಿ ಊರುಗಳನ್ನು ನೋಡುತ್ತಿದ್ದಂತೆ ಚಿಕ್ಕವರಿದ್ದದಾಗ ಮಾಮನ ಎರಡನೇ ಮಹಾಯುದ್ಧದ ಕಾಲದ ಜೀಪಿನಲ್ಲಿ ಸುತ್ತಾಡಿದ ನೆನಪುಗಳು. ಜನ್ನಾಪುರದಿಂದ ಹಳೇತೋಟ ‘ಚಿತ್ರಕೂಟ’ಕ್ಕೆ ಮುಖ್ಯರಸ್ತೆ ಬಿಟ್ಟು ರಸ್ತೆಯೇ ಇಲ್ಲದಲ್ಲಿ ರಸ್ತೆ ಮಾಡಿಕೊಂಡು ‘ಕ್ರಾಸ್‌ಕಂಟ್ರಿ ರೇಸ್’ ಥರ ಗುಂಡಿಯಲ್ಲಿ ಇಳಿಯುತ್ತಾ ದಿನ್ನೆ ಹತ್ತುತ್ತಾ ಜೀಪು ಹೋಗುತ್ತಿತ್ತು. ಇದು ೩೦ ವರ್ಷಗಳ ಹಿಂದಿನ ಕತೆ. ವಿಪರ್ಯಾಸ ಅಂದರೆ ೨೧ನೇ ಶತಮಾನದ ಕಂಪ್ಯೂಟರ್ ಯುಗದಲ್ಲೂ ನಮ್ಮ ರಸ್ತೆಗಳು ಅದಕ್ಕಿಂತ ಹಾಳಾಗಿ ಜನ ಅಡ್ಡಾಡುವುದನ್ನು ಕಷ್ಟಕ್ಕೀಡುಮಾಡಿದೆ.
ನಾವು ಚಿತ್ರಕೂಟಕ್ಕೆ ಹೋಗುವ ರಸ್ತೆಯಲ್ಲಿ ಒಂದು ಕಲ್ಲು ಮಂಟಪ ನೋಡಿದ ನೆನಪು. ನಾನಾಗ ೬-೭ನೇ ಕ್ಲಾಸಿನಲ್ಲಿದ್ದುದರಿಂದ ಹೊಯ್ಸಳರ ಬಗ್ಗೆ ಸ್ವಲ್ಪ ತಿಳಿದಿತ್ತು. ಹಾಗಾಗಿ ಆ ಕಲ್ಲಿನ ಮಂಟಪದಲ್ಲೇ ಸಳ ಹುಲಿಯನ್ನು ಹೊಡೆದದ್ದೆಂದು ನನ್ನ ಮನಸ್ಸಿಗೆ ಬಂದಿತ್ತು. ಇದರ ಜೊತೆ ಮಾಮ ನನಗೆ ಒಂದು ತುಕ್ಕುಹಿಡಿದ ಕತ್ತಿಯನ್ನು ತೋರಿಸಿ ಈ ಮನೆಯ ಪಾಯ ತೆಗೆಯುವಾಗ ಸಿಕ್ಕಿದ್ದು ಎಂದು ಹೇಳಿದ್ದರು. ಹಾಗಾಗಿ ‘ಚಿತ್ರಕೂಟ’ ನನಗೆ ಹೊಯ್ಸಳರ ಸಾಮ್ರಾಜ್ಯವಾಗಿಯೂ ಅದರಲ್ಲಿ ನಾವೆಲ್ಲ ಒಂದೊಂದು ಪಾತ್ರಗಳಾಗಿಯೂ ನನ್ನ ಮನದಲ್ಲಿ ತರಹಾವರಿ ಕತೆಗಳು ಹೆಣೆದುಕೊಳ್ಳುತ್ತಿದ್ದವು!
‘ಚಿತ್ರಕೂಟ’ದ ಮನೆ, ತೋಟ ‘ನಿರುತ್ತರ’ಕ್ಕಿಂತ ಬಹಳ ಚೆನ್ನಾಗಿತ್ತು. ಜನಸಂಪರ್ಕವೇ ಇಲ್ಲದ ಕಾರಣ ಅಲ್ಲಿ ಎಲ್ಲರೂ ಅವರವರ ಪ್ರಪಂಚದಲ್ಲಿ ವಿಹರಿಸುತ್ತಿದ್ದೆವು. ಬೆಳಗ್ಗೆ ತೆಗೆದ ಫೋಟೊಗಳನ್ನು ಮಾಮ ಡೆವೆಲಪ್ ಮಾಡಲು ಡಾರ್ಕ್ ರೂಂ ಒಳಗೆ ಸೇರಿದರೆ ನಾನು, ಸುಸ್ಮ, ಈಶ ಏನಾದರೂ ಮಾಡುತ್ತಾ ಅಂಗಳದಲ್ಲಿರುತ್ತಿದ್ದೆವು. ಆಂಟಿ ಅಡಿಗೆ ಮತ್ತು ಬೇರೆ ಕೆಲಸಗಳಲ್ಲಿ ತೊಡಗಿರುತ್ತಿದ್ದರು. ಹೀಗಿರುವಾಗ ಒಮ್ಮೆ ಸುಸ್ಮಿತ ಮೈಸೂರಿನ ನಮ್ಮ ಯೂನಿವರ್ಸಿಟಿ ಕ್ವಾರ್ಟರ್ಸ್ ಗೆ ಕಳ್ಳ ಬಂದ ಪ್ರಕರಣವನ್ನು ಈಶಳಿಗೆ ವಿವರಿಸುತ್ತಿದ್ದಳು. ಈಶ ಆಗಿನ್ನೂ ೪-೫ ವರ್ಷದವಳಿರಬಹುದು. ಸುಸ್ಮಿತ ಹೇಳಿದ್ದೆಲ್ಲವನ್ನೂ ತದೇಕಚಿತ್ತದಿಂದ ಕೇಳಿದ ಈಶ ಸುಸ್ಮಿತಳ ಕತೆ ಮುಗಿದನಂತರ ಅಳಲು ಪ್ರಾರಂಭಿಸಿದಳು. ನನಗೆ ಏಕೆ ಎಂದು ತಿಳಿಯಲೇ ಇಲ್ಲ. ನಾನು ಈಶಳನ್ನು ಸಮಾಧಾನ ಮಾಡುತ್ತಾ ಯಾಕೆ ಈಶ ಅಳ್ತಿದ್ದೀಯಾ?’ ಅಂತ ಕೇಳಿದ್ದೇ ಶುರು ಮಾಡಿದಳು, ‘ನೀವೆಲ್ಲಾ ಪೇಟೆಲ್ಲಿದ್ದಿರ, ನಿಮಗೆ ಎಷ್ಟು ಮಜಾ, ಕಳ್ಳರೆಲ್ಲ ನೋಡೋಕೆ ಸಿಕ್ತಾರೆ! ನಮಗೆ ಈ ತೋಟದ ಯಾರೂ ಸಿಗಲ್ಲ!’ ಅವಳ ಮಾತು ಕೇಳಿ ನನಗೊ ನಗು ಎಂದರೆ ನಗು. ಸುಸ್ಮಾ ಅವಳಿಗಿಂತ ೨-೩ ವರ್ಷ ದೊಡ್ಡವಳಾದ್ದರಿಂದ ಅವಳಿಗೆ ತಾನೇನೋ ಹೊಸ ವಿಷಯ ಹೇಳಿದೆ ಎಂಬ ಹೆಮ್ಮೆ. ಮಾರನ ಹತ್ತಿರ ದೆವ್ವಚೂಡಿಗಳ ಕತೆ ಕೇಳುವುದು ಸಾಮಾನ್ಯವಾಗಿದ್ದರಿಂದ ಈಶ ಕಳ್ಳನನ್ನು ಸೂಪರ್ ಮ್ಯಾನ್ ಥರ ಕಲ್ಪಿಸಿಕೊಂಡಿದ್ದಳು.
ನಾವು ಇಂಥವೇ ಏನೋ ಪ್ರಕರಣಗಳಲ್ಲಿ ಮುಳುಗಿರುವಾಗ ಮಾರ ನಮ್ಮ ಸಂಗಾತಿಯಾಗಿರುತ್ತಿದ್ದ. ಆತ ೮೦-೯೦- ವರ್ಷದ ಮುದುಕ. ಕಲ್ಪನೆಯ ಕತೆ ಹೇಳುವುದರಲ್ಲಿ ಮಕ್ಕಳಾದ ನಮಗಿಂತ ಅವನೇ ಬಲವಾಗಿದ್ದ. ಒಮ್ಮೆ ದೊಡ್ಡದಾಗಿ ಉಸಿರು ಬಿಡುತ್ತಾ ದುಡುದುಡು ಬರುತ್ತಿದ್ದ ಮಾರನನ್ನು ನೋಡಿ ಸುಸ್ಮ, ಈಶ ‘ಏನಾಯಿತೋ ಮಾರ?’ ಎಂದದ್ದೇ ತಡ ಅವನ ಮೋಹಿನಿಯ ಹೊಸ ಕತೆ ಬಿಚ್ಚಿಕೊಂಡಿತ್ತು. ಅವನ ಕತೆ ಕೇಳಲು ನಮಗೂ ಬಹಳ ಇಷ್ಟವಾದ್ದರಿಂದ ನಾವು ಮೂವರೂ ಅವನ ಸುತ್ತ ನಿಂತು ಅವನ ‘ದೃಶ್ಯಕಾವ್ಯ’ವನ್ನು ಕೇಳಿ, ನೋಡಿ ನಲಿಯುತ್ತಿದ್ದೆವು. ಹೊಸ ಕತೆಯ ವಸ್ತು ‘ಎಲೆಕ್ಟ್ರಿಕ್ ವೈರ್ ರಸ್ತೆ ಬದಿಗೆ ಬಿದ್ದಿದ್ದು’. ಪಾಪ ಶನಿವಾರ ಬಟವಾಡೆ ತೆಗೆದುಕೊಂಡು ಗೋಣಿಬೀಡಿನ ಸಂತೆಗೋ ಎಲ್ಲಿಗೋ ಮಾರ ಹೋಗಿದ್ದ. ವಾಪಸ್ ತೋಟಕ್ಕೆ ಬರುವಾಗ ಕರೆಂಟ್ ವೈರೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಮಾರನಿಗೆ ಅದನ್ನು ದಾಟಿ ಬರುವುದೇ ಒಂದು ದೊಡ್ಡ ಸವಾಲಾಗಿತ್ತಂತೆ. ಅವನನ್ನು ಕರೆಂಟ್ ಎಳೆದುಕೊಳ್ಳುತ್ತಿದ್ದರೂ ಅದನ್ನು ಲೆಕ್ಕಿಸದೆ ಸಾವಿನೊಂದಿಗೆ ಸೆಣೆಸಿ ಗೆದ್ದು ಮಾರ ನಮ್ಮ ಮುಂದೆ ಪ್ರತ್ಯಕ್ಷನಾಗಿದ್ದ. ಅವನ ಪ್ರಕಾರ ಕರೆಂಟ್ ಕೂಡ ಒಂದು ದೆವ್ವ ಇದ್ದಂತೆ. ನಾವೆಲ್ಲ ಮಾರನ ಸಾಹಸಗಾಥೆಯನ್ನು ತನ್ಮಯತೆಯಿಂದ ಕೇಳುತ್ತಿದ್ದರೆ ಅಲ್ಲೆ ಇದ್ದ ಮಾಮ ಕತೆಯ ಕೊನೆಯಲ್ಲಿ, ‘ಅವನನ್ನು ದೂಡಿದ್ದು, ಎಳೆದದ್ದು ಕರೆಂಟ್ ಅಲ್ಲ ಕಣ್ರಿ ಅವನ ಹೊಟ್ಟೆಯೊಳಗಿರೋ ಸೇಂದಿ’ ಎಂದು ನಮ್ಮನ್ನು ಈ ಲೋಕಕ್ಕೆ ತಂದಿದ್ದರು.
ನಾನು ೫-೬ನೇ ಕ್ಲಾಸಿನಲ್ಲಿದ್ದಾಗ ಮಾಮನ ‘ಪಕ್ಷಿ ವೀಕ್ಷಣೆ'(ಬರ್ಡ್ ವಾಚಿಂಗ್)ಶಿಖರದಲ್ಲಿತ್ತು. ಒಮ್ಮೆ ಕ್ವಾರ್ಟರ್ಸ್ ನ ನಮ್ಮ ಮನೆಯ ಕಿಟಕಿಯಲ್ಲಿ ಚಂದದ ಹಕ್ಕಿಯೊಂದು ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು.
ಆ ಸಂದರ್ಭದಲ್ಲಿ ನಾವೆಲ್ಲ ಶಾಲೆಗೆ ಹೋಗುವ ಮುಂಚೆ ಮಾಮ ನಮ್ಮ ಮನೆಗೆ ಬಂದು ಆ ಹಕ್ಕಿಯ ಚಲನವಲನ ಅಭ್ಯಸಿಸಲು ಪ್ರಾರಂಭಿಸಿದರೆ ನಾವು ಮನೆಸೇರಿ ಎಷ್ಟೋ ಹೊತ್ತಿನ ಮೇಲೆ, ಹಕ್ಕಿ ಗೂಡು ಸೇರಿದ ಮೇಲೆ, ಅಲ್ಲಿಂದ ಹೊರಬರುತ್ತಿದ್ದರು. ಎಷ್ಟೋ ಸಲ ಮೀರಕ್ಕ ಅವರಿಗೆ ತಿನ್ನಲು ಇಟ್ಟುಹೋಗಿರುತ್ತಿದ್ದ ತಿಂಡಿ, ಊಟ ಹಾಗೇ ಇರುತ್ತಿತ್ತು. ಎಷ್ಟೋ ದಿನಗಳಾದ ಮೇಲೆ ಒಂದು ರಜಾ ದಿನದಂದು ನನಗೆ, ಸುಸ್ಮಾಗೆ ‘ಏನೋ ತೋರಿಸುತ್ತೇನೆ ಬನ್ರೆ’ ಎಂದರು. ನಾವು ಓಡಿಬಂದು ಡೈನಿಂಗ್ ಟೇಬಲ್ ನ ಕುರ್ಚಿ ಎಳೆದುಕೊಂಡು ಕೂತೆವು. ನೋಡ್ತಿವಿ, ಮಾಮನ ಕೈನಲ್ಲಿ ಆ ಹಕ್ಕಿಯ ಮೊಟ್ಟೆಗಳು! ಅವನ್ನು ನೋಡಿ ನಾನು ‘ಮಾಮ ಮನುಷ್ಯರು ಮೊಟ್ಟೆನ ಮುಟ್ಟಿದರೆ ಆ ಹಕ್ಕಿ ಮೊಟ್ಟೆ ಮರಿ ಎಲ್ಲ ಬಿಟ್ಟು ಹಾರಿಹೋಗುತ್ತೆ, ಆಮೇಲೆ ಅವೆಲ್ಲ ಸತ್ತುಹೋಗುತ್ತವೆ. ನೀವ್ಯಾಕೆ ಅವನ್ನ ತೆಗೆಯೋಕೆ ಹೋದ್ರಿ’ ಎಂದೆ. ಅದಕ್ಕೆ ಮಾಮ, ಅದೇನೂ ಆಗಲ್ಲ ತಡಿ ಎಂದು ಒಂದು ಗುಂಡು ಸೂಜಿಯಿಂದ ಮೊಟ್ಟೆಯ ಓಡನ್ನು ನಿಧಾನವಾಗಿ ಬಹಳ ಸೂಕ್ಷ್ಮವಾಗಿ ಬಿಡಿಸಿದರು. ಎಷ್ಟೋ ಹೊತ್ತು ನಾವು ಕಾದ ಮೇಲೆ ಜೀವವಿರುವ ಪುಟ್ಟ ಮರಿಗಳು ಮೊಟ್ಟೆಗಳಿಂದ ಹೊರಬಂದವು. ತೇಜಸ್ವಿ ಮಾಮನಿಗೆ ಇಷ್ಟೊಂದುತಾಳ್ಮೆ ಇದೆ ಎಂದು ನನಗೆ ಅಲ್ಲಿಯವರೆಗೂ ಗೊತ್ತೇ ಇರಲಿಲ್ಲ. ಅನಂತರ ಆ ಮರಿಗಳನ್ನು ಅದರ ಗೂಡಿಗೆ ವಾಪಸ್ಸು ಹಾಕಿದೆವು. ಮರಿಗಳು ದೊಡ್ಡವಾಗುವವರೆಗೆ ಆ ಗೂಡಿನಲ್ಲಿದ್ದು ಆಮೇಲೆ ಹಾರಿಹೋದವು.
ಈ ನಡುವೆ ಮಾಮ ತಾವು ತೆಗೆದ ಆ ಹಕ್ಕಿಗಳ ಒಂದು ರಾಶಿ ಫೋಟೊಗಳನ್ನು ನಮ್ಮ ಮುಂದೆ ತಂದು ಹಾಕಿದರು. ಓದು ಬರಹ ಮಾತ್ರ ನಮ್ಮ ಜ್ಞಾನವನ್ನು ವಿಸ್ತರಿಸುವುದಿಲ್ಲ ಚಿಕ್ಕಚಿಕ್ಕ ವಿಷಯಗಳಲ್ಲಿನ ನಮ್ಮ ಆಸಕ್ತಿ ನಮ್ಮ ಜ್ಷಾನ ಭಂಡಾರವನ್ನು ವಿಸ್ತರಿಸುತ್ತದೆ ಎನ್ನುವುದನ್ನು ತೇಜಸ್ವಿ ಮಾಮನನ್ನು ನೋಡಿ ಕಲಿತೆ.
ನಾನು ದೊಡ್ಡವಳಾದಂತೆ ಮಾಮನಿಗಿರುವ ಅಪಾರ ತಾಳ್ಮೆಯ ಅರಿವಾಗುತ್ತಾ ಹೋಯಿತು. ಒಮ್ಮೆ ಚಿತ್ರಕೂಟದಲ್ಲಿ ಮಾಮ ನನ್ನ ಫೋಟೊ ತೆಗೆದರು. ಅನಂತರ ಅದನ್ನು ಡೆವೆಲಪ್ ಮಾಡಲು ಡಾರ್ಕ್ ರೂಮ್ ಗೆ ಹೋಗುವಾಗ ‘ನೀನೂ ಬಾರೆ’ ಎಂದರು. ನನಗೂ ಅವರು ಅಲ್ಲಿ ಏನು ಮಾಡುತ್ತಾರೆ ಎಂಬ ಕುತೂಹಲವಿದ್ದುದರಿಂದ ಮೆತ್ತಗೆ ಡಾರ್ಕ್ ರೂಮಿನೊಳಗೆ ನುಸುಳಿದೆ. ಅಲ್ಲಿ ಮಾಮ ಮೌನವಾಗಿ ಕೆಲಸಮಾಡುತ್ತಿದ್ದರೆ ನೋಡುತ್ತಾ ನಿಂತ ನಾನೂ ತುಟಿಪಿಟಕ್ ಅನ್ನಲಿಲ್ಲ. ನನ್ನ ಪ್ರಕಾರ ಡಾರ್ಕ್ ರೂಮಿನಲ್ಲಿ ಮಾತಾಡಬಾರದು, ಇದೂ ಒಂದು ಕ್ರಿಯೇಟೀವ್ ವರ್ಕ್ ಆದ್ದರಿಂದ ಮಾಮನ ಏಕಾಗ್ರತೆಗೆ ಭಂಗತರಬಾರದು ಎಂಬ ಭಾವನೆ. ಪೂರ್ತಿ ಚಿತ್ರ ಪ್ರಿಂಟ್ ಆದ ಮೇಲೆ ಮಾಮನಿಗೆ ಆ ಫೋಟೊ ಬಹಳ ಖುಷಿಕೊಟ್ಟಿತು. ‘ಏ ಕೀರ್ತಿ, ನೋಡೆ ಇಲ್ಲಿ. ಎಷ್ಟು ಟ್ರಿಮ್ ಆಗಿದೆ’ ಎಂದರು. ಆ ಫೋಟೊ ನೋಡಿ ನನಗೆ ಪಿಚ್ಚೆನಿಸಿತು.
ನಾನು ತಲೆಸ್ನಾನಮಾಡಿ ಕೂದಲು ಒಣಗಿಸಲೆಂದು ಬಿಸಿಲಿಗೆ ಬಂದು ನಿಂತಾಗ ಮಾಮ, ಬಾಳ ಚೆನ್ನಾಗಿದೆ ಎಂದು ತೆಗೆದ ಫೋಟೊ ಅದು. ನಮಗೆ ಫೋಟೊ ಎಂದರೆ ಅಪರೂಪ. ಆದ್ದರಿಂದ ಹೊಸ ಬಟ್ಟೆ ಹಾಕಿಕೊಂಡು ಅಟೆನ್ ಷನ್ ಪೊಸಿಷನ್ ನಲ್ಲಿ ನಿಂತು ಫೋಟೊ ತೆಗೆಸಬೇಕು. ಇದರ ಜೊತೆ ನನ್ನ ಕೂದಲು ಸ್ವಲ್ಪ ಭಾಗ ಬಿಳಿ, ಸ್ವಲ್ಪ ಕಪ್ಪಗಿತ್ತು. ಇದು ಯಾಕೆಂದು ತಿಳಿಯದೆ ನಾನು ತಬ್ಬಿಬ್ಬಾಗಿದ್ದೆ. ಅನಂತರ ಮಾಮ ಬೆಳಕಿನ ವೇರಿಯೇಷನ್ ನಿಂದಾಗಿ ಈ ಕಪ್ಪು-ಬಿಳುಪು ಚಿತ್ರ ಎಷ್ಟು ಚೆನ್ನಾಗಿ ಬಂದಿದೆ ಎಂದು ವಿವರಿಸಿದರು. ಆದರೆ ಆಗ ನನಗೇನೂ ಅದು ಅರ್ಥವಾಗಲಿಲ್ಲ.
ನನ್ನ ಫೋಟೊ ಡೆವೆಲಪ್ ಮಾಡುವಾಗಲೇ ಟೇಲರ್ ಬರ್ಡ್ ನ ಗೂಡಿನ ಒಂದೆರಡು ಫೋಟೊಗಳನ್ನು ಮಾಮ ಡೆವೆಲಪ್ ಮಾಡುತ್ತಿದ್ದುದನ್ನು ನೋಡಿ ನಾನು ‘ಮಾಮ ಇದು ಎಲ್ಲೀ ಫೋಟೊ?’ ಎಂದೆ. ಮಾಮ ಆ ಸಂದರ್ಭದಲ್ಲಿ ಟೇಲರ್ ಬರ್ಡ್ ನ ಚಿತ್ರ ತೆಗೆಯುವ ಸಲುವಾಗಿ ಒಂದು ಹೈಡ್ ಔಟನ್ನು ತಯಾರಿಮಾಡಕೊಂಡು ಫೋಟೊ ತೆಗೆಯಲು ಪ್ರಾರಂಭಿಸಿಕೊಂಡಿದ್ದ ಸುದ್ದಿ ಹೇಳಿದರು. ಅವರು ಹೇಳಿದ ಈ ‘ಹೈಡ್ ಔಟ್’ ಸುದ್ದಿ ಏನೆಂದು ತಿಳಿಯದಿದ್ದರೂ ಬಹಳ ಕುತೂಹಲಕಾರಿಯಾಗಿತ್ತು. ಆದರೂ ಯಾರನ್ನೇ ಆಗಲಿ ‘ನಾನೂ ಮಾಡಲಾ’ ‘ನಾನೂ ಬರ್ಲಾ’ ಎಂದು ಕೇಳಿ ಗೊತ್ತೇ ಇರದ ನಾನು ಮಾಮ ಹೇಳಿದ್ದನ್ನು ಸುಮ್ಮನೆ ಕೇಳಿಸಿಕೊಂಡೆ. ಅನಂತರ ಮಾಮನೆ ‘ನಾಳೆ ಬೆಳಗ್ಗೆ ನಾನು ಆ ಜಾಗಕ್ಕೆ ಹೋಗುವಾಗ ನಿನ್ನನ್ನು ಕರಕೊಂಡು ಹೋಗ್ತೀನಿ, ಆದರೆ ಈ ವಿಷಯ ಸುಸ್ಮ, ಈಶಂಗೆ ಹೇಳ್ಬೇಡ’ ಎಂದರು. ನನಗೆ ಇದೇನೊ ದೊಡ್ಡ ‘ಸೀಕ್ರೆಟ್ ಮಿಷನ್’ ತರಹ ಅನ್ನಿಸಿತು. ಮಾರನೇ ದಿನ ಬೆಳಗ್ಗೆ ಮಾಮನ ಜೊತೆ ಸುಸ್ಮ, ಈಶ ಏಳುವ ಮೊದಲೇ ಆ ಜಾಗಕ್ಕೆ ಹೋಗಿ ನೋಡ್ತೀನಿ, ಒಂದು ತಾಳೆ ಚಾಪೆಯನ್ನು ಗೋಲಕ್ಕೆ ಸಿಲಿಂಡರಿನಾಕಾರದಲ್ಲಿ ನಿಲ್ಲಿಸಿತ್ತು. ಅದರೊಳಗೆ ಒಬ್ಬರೇ ನುಸುಳಬಹುದಿತ್ತು. ಮೆಲ್ಲಗೆ ಶಬ್ದ ಮಾಡದೇ ಮಾಮ ನುಸುಳಿದರು. ಅವೆ ಹಿಂದೆ ನಾನು ಮುದುರಿಕೊಂಡು ನಿಂತೆ. ಆ ಚಾಪೆಯ ಮಧ್ಯೆ ಕ್ಯಾಮೆರಾಲೆನ್ಸ್ ಹೋಗುವಷ್ಟು ಜಾಗವನ್ನು ಚೌಕಾಕಾರವಾಗಿ ಕತ್ತರಿಸಲಾಗಿತ್ತು. ಕ್ಯಾಮೆರಾವನ್ನು ಆ ಚೌಕದಲ್ಲಿ ತೂರಿಸಿ ಮಾಮ ಸ್ವಲ್ಪ ಹೊತ್ತು ಮಾತುಕತೆ ಇಲ್ಲದೆ ಲೆನ್ಸಿನ ಮೂಲಕ ನೋಡಿದರು. ನನಗೋ ಜೋರಾಗಿ ಉಸಿರಾಡಲೂ ಭಯ. ಸುಸ್ಮ ಈಶರನ್ನು ಇಲ್ಲಿಗೆ ಏಕೆ ಕರೆದುಕೊಂಡು ಬರಲಿಲ್ಲ ಎಂಬುದು ಈಗ ಅರ್ಥವಾಯಿತು.
ಸ್ವಲ್ಪ ಹೊತ್ತಿನ ಅನಂತರ ಮಾಮ ಮೆಲುದನಿಯಲ್ಲಿ ಹಕ್ಕಿ ಆಹಾರ ತರಲು ಹೊರಹೋಗಿರುವ ವಿಷಯ ಹೇಳಿ ನನಗೆ ಲೆನ್ಸ್ ಮೂಲಕ ಅದರ ಗೂಡನ್ನು ತೋರಿಸಿದರು. ಹಕ್ಕಿ ವಾಪಸ್ ಬಂದಾಗ ನಾವು ಯಾವುದೇ ತರಹದ ಸದ್ದು ಮಾಡಿದರೂ ಹಕ್ಕಿ ಹಾರಿಹೋಗಿ ಮತ್ತೆ ಈ ಗೂಡಿಗೆ ವಾಪಸ್ ಬರುವುದಿಲ್ಲವೆಂಬ ವಿಷಯವನ್ನೂ ಹೇಳಿದರು. ಆಗ ಉಸಿರು ಬಿಗಿ ಹಿಡಿದು ನಿಂತ ನಾನು ಮಧ್ಯಾಹ್ನ ಮಾಮನ ಕೆಲಸ ಮುಗಿಯುವವರೆಗೂ ಅಲ್ಲಾಡಲೂ ಹೆದರಿ ಹಾಗೇ ನಿಂತಿದ್ದೆ. ಕೆಲಸ ಮುಗಿಸಿ ವಾಪಸ್ ಹೋಗುವಾಗ ಹೈಡ್ ಔಟನ್ನುಹೇಗೆ ಹಕ್ಕಿಗೆ ರೂಢಿಮಾಡಿಸಬೇಕು, ಇಲ್ಲದಿದ್ದರೆ ಹಕ್ಕಿ ಹೆದರಿ ಹೇಗೆ ಹಾರಿ ಹೋಗುತ್ತದೆ ಎಂಬ ಬಗ್ಗೆ ಹೇಳುತ್ತಿದ್ದಾಗ ಋಷಿ ಮುನಿಗಳು ಕಣ್ಣುಮುಚ್ಚಿ ಒಂದೆಡೆ ಕುಳಿತು ಮಾಡುವುದಷ್ಟೇ ತಪಸ್ಸಲ್ಲ, ಮಾಮ, ಅಪ್ಪ ಎಲ್ಲಾ ಒಂದೊಂದು ಬಗೆಯ ತಪದಲ್ಲಿರುತ್ತಾರೆ ಎನಿಸಿತು.
‘ಚಿತ್ರಕೂಟ’, ‘ನಿರುತ್ತರ’ಗಳಲ್ಲಿ ಐದೂವರೆ-ಆರಕ್ಕೆಲ್ಲಾ ಕತ್ತಲಾಗಿ ಹೋಗುತ್ತಿತ್ತು. ಆಗ ನಾವೆಲ್ಲ ಮನೆಯೊಳಗೆ ಸೇರಿಕೊಂಡು ಆಂಟಿ ಏನಾದರೂ ಕೆಲಸ ಮಾಡುತ್ತಿದ್ದರೆ ಅದನ್ನು ನೋಡುತ್ತಾ ಇಲ್ಲ ಮಾಮನ ರೂಂನಲ್ಲಿ ಹಕ್ಕಿ ಚಿತ್ರ ನೋಡುತ್ತಲೊ ಕಾಲ ಕಳೆಯುತ್ತಿದ್ದೆವು. ಒಮ್ಮೊಮ್ಮೆ ಮಾಮನಿಗೆ ಮೂಡ್ ಬಂದರೆ ಸಿತಾರ್ ಹಿಡಿದುಕೊಂಡು ನಾವಿದ್ದಲ್ಲಿಗೆ ಬಂದು ಕುವೆಂಪು ಭಾವಗೀತೆಗಳನ್ನು ಅವರು ನುಡಿಸಿದಂತೆ ಹಾಡಲು ನನಗೆ ಹೇಳುತ್ತಿದ್ದರು. ಅನಂತರ ಬೇರೆ ಬೇರೆ ಸ್ವರಗಳನ್ನು ಪ್ರಯೋಗಿಸಿ ನೋಡಿ ಅವರಿಗೆ ಖುಷಿಕೊಟ್ಟ ಟ್ಯೂನ್ ಗಳನ್ನು ನಾನು, ಸುಸ್ಮ, ಈಶ ಹಾಡುತ್ತಿದ್ದೆವು. ಹೀಗೆ ಕುವೆಂಪು ಅವರ ೨-೩ ಭಾವಗೀತೆಗಳಿಗೆ ಮಾಮ ಟ್ಯೂನ್ ಹಾಕಿಕೊಟ್ಟಿದ್ದರು.
ನಾನು ೭-೮ನೇ ಕ್ಲಾಸಿನಲ್ಲಿದ್ದಾಗೊಮ್ಮೆ ಮಾಮ ಬೆಳಗ್ಗೆ ನಮ್ಮ ಮನೆಗೆ ಬಂದವರು ‘ಏ ಕೀರ್ತಿ ನಡಿಯೆ’ ಎಂದರು. ನನ್ನ ಪ್ರತಿಯೊಂದು ನಡೆಗೂ ಆ ಕಾಲದಲ್ಲಿ ಮೀರಕ್ಕನ ಪರ್ಮಿಷನ್ ಬೇಕಿರುತ್ತಿತ್ತು. ಆದರೆ ಮಾಮ ಕರೆದರೆ ಮೀರಕ್ಕ ಏನೂ ಮಾತಾಡುವಂತಿರಲಿಲ್ಲ ಅನ್ನೋದು ನನಗೆ ಗೊತ್ತಿತ್ತು. ಆದ್ದರಿಂದ ಮೀರಕ್ಕನಿಗೆ ನಾನು ತೇಜಸ್ವಿ ಮಾಮನ ಜೊತೆ ಹೋಗ್ತಿರೋ ವಿಷಯನ ತಿಳಿಸಿ ಪರ್ಮಿಷನ್ ಗೆ ಕಾಯದೆ ಓಡಿಹೋಗಿ ಜೀಪ್ ಹತ್ತಿದೆ. ಯಾವಾಗಲೂ ಮಾಮನಿಗೆ ಎಲ್ಲಿಗೆ, ಏನು ಎಂಬ ಪ್ರಶ್ನೆಗಳು ಬಹಳ ಕಿರಿಕಿರಿಯನ್ನುಂಟು ಮಾಡುತ್ತಿದ್ದವು. ಅದಕ್ಕಾಗಿ ನಾನು ಯಾವತ್ತೂ ಆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ.
ನಾವು ನೇರವಾಗಿ ಕೃಷ್ಣಾ ಬೇಕರಿಗೆ ಹೋದೆವು. ಅಲ್ಲಿ ಒಂದು ರಾಶಿ ತಿಂಡಿ ತೆಗೆದುಕೊಂಡು ಮುಂದೆ ಹೋದೆವು. ಅದೆಲ್ಲಿ ಅಂತ ನನಗೆ ಈವತ್ತಿಗೂ ಗೊತ್ತಿಲ್ಲ. ಸ್ವಲ್ಪ ದೂರ ಮುಖ್ಯ ರಸ್ತೆಯಲ್ಲಿ ಹೋಗಿ ಅನಂತರ ಮಣ್ಣು ರಸ್ತೆಗೆ ಹೋದೆವು. ಮಳೆ ಬಂದು ನಿಂತಿದ್ದರಿಂದ ನಮ್ಮ ಜೀಪ್ ಟೈರ್ ಜಾರುತ್ತಿತ್ತು. ನಮ್ಮ ಜೀಪ್, ಮಾರ ಕುಡಿದಾಗ ತೂರಾಡಿದಂತೆ ತೂರಾಡುತ್ತಾ ಮುಂದೆ ಹೋಗುತ್ತಿತ್ತು. ಅಲ್ಲೆಲ್ಲೋ ಒಂದು ಆಲದ ಮರದ ಹತ್ತಿರ ಪಾಳುಬಿದ್ದ ದೇವಸ್ಥಾನ, ಕೆರೆ ಇತ್ತು. ಮಾಮ ಅಲ್ಲಿ ಜಾಗ ಮಾಡಿಕೊಂಡು ಗಾಳ ಹಾಕಿಕೊಂಡು ಕುಳಿತೇ ಬಿಟ್ಟರು. ನಾನೂ ಅವರ ಪಕ್ಕ ಮಾತಾಡದೇ ಕುಳಿತೆ. ಹೀಗೆ ಒಂದೆರಡು ಗಂಟೆ ಕಳೆದಿರಬಹುದು. ಅತ್ಲಾಗೆ ಇತ್ಲಾಗೆ ನೋಡಿ ನನಗೆ ಬೇಜಾರಾಯಿತು. ಮೆಲ್ಲಗೆ ಎದ್ದು ಜೀಪಿನೊಳಗೆ ಹೋಗಿ ಒಂದೊಂದೇ ತಿಂಡಿ ತಿನ್ನುತ್ತಾ ಕುಳಿತಿದ್ದಾಗ ಧೋ ಎಂದು ಮಳೆ ಶುರುವಾಯಿತು. ಹಾಂ. ಈಗ ಮಾಮ ಜೀಪಿಗೆ ಓಡಿಬರಬಹುದೆಂದು ಕಾದೆ. ಆದರೆ ಮಾಮ ಅಲ್ಲಾಡಲಿಲ್ಲ. ನನಗೆ ಮಳೆಯಿಂದ ರಕ್ಷಣೆಗೆ ಟಾಪ್ ಮೇಲಿನ ಟಾರ್ಪಾಲ್ ಬಿಟ್ಟರೆ ಪಕ್ಕದಲ್ಲಿ ಏನೂ ಇಲ್ಲದ್ದರಿಂದ ನಾನು ನೆನೆದು ನಡುಗುತ್ತಿದ್ದೆ. ಇಷ್ಟು ಹೊತ್ತಿಗಾಗಲೇ ಕತ್ತಲಾಗುತ್ತಾ ಬಂದಿತ್ತು. ಆ ದಿನ ಮಾಮನಿಗೆ ಒಂದೂ ಮೀನು ಸಿಕ್ಕಿರಲಿಲ್ಲ. ಬಹಳ ಬೇಸರದಿಂದ ಮೀನನ್ನೂ ತನ್ನನ್ನೂ ಮಳೆಯನ್ನೂ ಬೈದುಕೊಳ್ಳುತ್ತಾ ಎದ್ದು ಬಂದರು. ಅನಂತರ ನಾವು ಮನೆದಿಕ್ಕಿಗೆ ಹೋಗುವಾಗ ಕುಕ್ಕರಹಳ್ಳಿ ಕೆರೆಯ ಹತ್ತಿರ ನಮ್ಮ ಜೀಪು ಫಕ್ಕನೆ ನಿಂತಿತು. ‘ಏ ಕೀರ್ತಿ ಇಲ್ಲೊಂದೈದು ನಿಮಿಷ ಗಾಳ ಹಾಕಿ ನೋಡೋಣ’ ಎಂದರು ಮಾಮ. ನಾನು ಜೀಪಿನಿಂದ ಇಳಿದು ಅವರ ಜೊತೆ ಹೋದೆ. ನಾವು ಕೂತ ೩-೪ ನಿಮಿಷದೊಳಗೇ ಒಂದು ದೊಡ್ಡ ಮೀನು ಗಾಳಕ್ಕೆ ಸಿಕ್ಕಿಹಾಕಿಕೊಂಡಿತು. ಅದನ್ನು ನೋಡಿ ಬೆಳಗಿನಿಂದ ಆಗಿದ್ದ ಬೇಸರವೆಲ್ಲ ಮಾಯವಾಗಿ ನಾವಿಬ್ಬರೂ ಕೂಗಾಡುತ್ತ ಆ ಮೀನನ್ನು ಹೊರತೆಗೆದೆವು. ಮಾಮ ಆ ಮೀನನ್ನು ಗಾಳದಿಂದ ಬೇರ್ಪಡಿಸಿ ಮತ್ತೆ ಕೆರೆಗೆ ಬಿಟ್ಟರು. ಇದನ್ನು ನೋಡಿದ ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಹೀಗೆ ೨-೩ ಮೀನು ಹಿಡಿದು ಅವುಗಳನ್ನು ಕೆರೆಯಲ್ಲಿಯೇ ವಾಪಸ್ ಬಿಟ್ಟು ಮನೆಕಡೆ ಹೋದೆವು. ಸಾಮಾನ್ಯವಾಗಿ ಯಾವಾಗಲೂ ತೇಜಸ್ವಿ ಮಾಮನ ಜೊತೆ ಮೀನು ಹಿಡಿಯಲು ರಾಮದಾಸ್ ಮಾಮ, ಶ್ರೀರಾಮ ಮಾಮ ಹೋಗುತ್ತಿದ್ದರು. ಆ ದಿನ ಅವರೇಕೆ ಇರಲಿಲ್ಲ ನನಗೆ ಗೊತ್ತಿಲ್ಲ. ಮಾಮನ ಮೀನು ಹಿಡಿಯುವ ಖಯಾಲಿ ಒಂದಷ್ಟು ವರ್ಷ ಮುಂದುವರೆದಿತ್ತು.
ನಾವು ಮೈಸೂರಿನಿಂದ ಮೂಡಿಗೆರೆಗೆ ಬೆಳಗ್ಗೆ ಹೊರಟರೆ ಸಂಜೆ ೩-೪ ಗಂಟೆಗೆ ತಲುಪುತ್ತಿದ್ದೆವು. ದಾರಿಯಲ್ಲಿ ಎಲ್ಲಾದರೂ ಒಂದು ಹಕ್ಕಿಯೋ ಏನೋ ಮಾಮನ ಕಣ್ಣಿಗೆ ಬಿದ್ದರೆ ಜೀಪ್ ರಿವರ್ಸ್ ತೆಗೆದುಕೊಂಡು ಹೋಗಿ ಅದನ್ನು ನಮಗೆಲ್ಲಾ ತೋರಿಸಿ ಅದರ ಕುಲ, ಗೋತ್ರದ ಬಗ್ಗೆ ಹೇಳಿ ಜೀಪನ್ನು ನಿಲ್ಲಿಸಿ ಕಾಡಲ್ಲಿ ಮಾಮ ಮಾಯವಾಗುತ್ತಿದ್ದರು. ಇಲ್ಲ, ಹೇಮಾವತಿ ನದಿ ಕಣಿವೆ ಕೆಲಸ ನಡೆಯುತ್ತಿದ್ದ ಜಾಗದಲ್ಲಿ ಜೀಪ್ ನಿಲ್ಲಿಸಿ ನಮಗೆ ಕಾಗೆ ಬಂಗಾರದ ದೊಡ್ಡ ಭಂಡಾರವನ್ನೇ ತೋರಿಸುತ್ತಿದ್ದರು. ನಾವು ಮೂವರೂ ನಮ್ಮ ಅಂಗಿಗಳ ತುಂಬ ಕಾಗೆ ಬಂಗಾರ ಹೊತ್ತು ಮುಖ ಮೈಯೆಲ್ಲ ಫಳ ಫಳ ಹೊಳೆಯಿಸಿಕೊಳ್ಳುತ್ತಾ ಜೀಪಿನೊಳಗೆ ಸುರುವಿಕೊಳ್ಳುತ್ತಿದ್ದೆವು. ಈಗ ಯೋಚಿಸಿದರೆ, ರಾಜೇಶ್ವರಿ ಆಂಟಿ ಯಾವ ಕಾಲದಲ್ಲಿಯೂ ನಮ್ಮ ಹುಚ್ಚಾಟಗಳಿಗೆ ಒಂದು ಮಾತನ್ನೂ ಆಡದೆ ಅದು ಹೇಗೆ ಅಷ್ಟು ತಾಳ್ಮೆಯಿಂದ ಇರುತ್ತಿದ್ದರು ಅನ್ನಿಸುತ್ತದೆ.
ತೇಜಸ್ವಿ ಮಾಮನ ಕತೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳಲ್ಲಿ ಹೆಚ್ಚುಕಮ್ಮಿ ಹಲವರನ್ನು ನಾನು ನೋಡಿದ್ದೇನೆ. ಮೂಡಿಗೆರೆಯಲ್ಲಿ ಮಾಮ ಲೇಖಕನಾಗಿ ಸುಮಾರು ಜನಕ್ಕೆ ಗೊತ್ತಿರದೇ ಇದ್ದರೂ ಅವರನ್ನು ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಪ್ರತಿಯೊಬ್ಬರೂ ಗುರುತಿಸುತ್ತಿದ್ದರು. ನಾನು, ಚಕಿತ, ಮದನ್ ಸುಮಾರು ೧೦-೧೨ ವರ್ಷಗಳ ಅನಂತರ ‘ನಿರುತ್ತರ’ಕ್ಕೆ ಹೋಗಿದ್ದೆವು. ಅವರ ತೋಟ ಯಾವುದೆಂದು ನಮಗೆ ಸ್ವಲ್ಪ ಗೊಂದಲವಾಯಿತು. ಆ ರಸ್ತೆಯಲ್ಲಿ ಸಂಜೆ ಹೊತ್ತಾದ್ದರಿಂದ ಜನ ಯಾರೂ ಇರಲಿಲ್ಲ. ಸ್ವಲ್ಪ ಹೊತ್ತಿನ ಅನಂತರ ಸೌದೆ ಹೊರೆಯನ್ನು ಹೊತ್ತ ಒಬ್ಬ ಹೆಂಗಸು ಬಂದರು. ಅನುಮಾನಿಸುತ್ತಲೆ ಬೇರೆ ಗತಿಯಿಲ್ಲದೆ ಆಕೆಯನ್ನು ತೇಜಸ್ವಿಯವರ ಮನೆಯಾವುದು ಎಂದು ಪ್ರಶ್ನಿಸಿದೆ. ಆಕೆ ಥಟ್ಟನೆ ಇದೇ ಗೇಟು ಒಳಗೆ ಹೋಗಿ ಅಂದರು. ನಾನು ದಂಗಾದೆ. ಮಾರನೇ ದಿನ ನಮಗೆ ಚಿಕನ್ ಕಬಾಬ್ ಕೊಡಿಸಲು ಮಾಮ ನಮ್ಮನ್ನು ಪೇಟೆಗೆ ಕರೆದುಕೊಂಡು ಹೋದರು. ಅಲ್ಲಿ ಕಬಾಬ್ ಕರಿಯುತ್ತಿದ್ದ ಸಾಬರು ಮಾಮನನ್ನು ನೋಡಿದ್ದೆ ತಡ ಅದೇನೊ ಹುಡುಕಿ ತೆಗೆದು ಮಾಮನಿಗೆ ತೋರಿಸಿದರು. ಅದೇನೆಂದು ನಾವೂ ಕುತೂಹಲದಿಂದ ಬಗ್ಗಿ ನೋಡಿದರೆ ಒಂದು ಹಳೆಯ ‘ಸುಧಾ’ ಪತ್ರಿಕೆ. ಮಾಮನಿಗೆ ಪಂಪ ಪ್ರಶಸ್ತಿ ಬಂದ ಕಾಲದಲ್ಲಿ ಮುಖಪುಟದಲ್ಲಿ ಅವರ ಫೋಟೊ ಹಾಕಿದ್ದರು. ‘ಸಾರ್, ನಿಮ್ಮನ್ನು ನಮ್ಮ ಸಾರ್ ಅಂದುಕೊಂಡಿದ್ದೆ. ನೀವು ಇಷ್ಟು ದೊಡ್ಡೋರು ಅಂತ ಗೊತ್ತಿರಲಿಲ್ಲ’ ಎಂದರು. ನಾವೆಲ್ಲ ನಕ್ಕೆವು. ಆ ‘ಸುಧಾ’ ಪತ್ರಿಕೆ ಕಬಾಬ್ ಕಟ್ಟಲು ತೆಗೆದುಕೊಂಡುಬಂದ ಹಳೆ ಪತ್ರಿಕೆಗಳ ಮಧ್ಯೆ ಅವರಿಗೆ ಸಿಕ್ಕಿತ್ತು. ಪಾಪ, ಅದನ್ನು ಅವರು ಜೋಪಾನಮಾಡಿ ಇಟ್ಟುಕೊಂಡಿದ್ದರು.
ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ಇಂಥವೇ ಎಷ್ಟೊ ನೆನಪುಗಳು ಗರಿಗೆದರುತ್ತಾ ಹೋಗುತ್ತವೆ.ಹಾಗಾಗಿ ಮಾಮ ಈಗ ನಮ್ಮ ಮಧ್ಯದಲ್ಲಿಇಲ್ಲದಿದ್ದರೂ ಯಾವ ಯಾವುದೋ ಸಂದರ್ಭಗಳಲ್ಲಿ ಮಾಮನ ನೆನಪಾಗಿ ಅವರು ಅವರ ತೋಟದಲ್ಲಿದ್ದಾರೆ ಎಂಬ ಭಾವನೆ ನಮ್ಮನ್ನು ಸಂತೈಸಲು ಪ್ರಯತ್ನಿಸುತ್ತದೆ.
ಟಿಪ್ಪಣಿಗಳು
ಪ್ರಿಯರೇ
ಕೀರ್ತಿಶ್ರೀ ನಾಯಕರ ತೇಜಸ್ವಿ ಮಾಮನ ನೆನಪುಗಳು ಓದಿದೆ – ತುಂಬಾ ಕುಶಿಕೊಟ್ಟಿತು.
ನನಗೆ ತೇಜಸ್ವಿ ಒಡನಾಟ ಏನೇನೂ ಇರಲಿಲ್ಲ. ಬಹುಕಾಲ ಅವರ ಬರಹಗಳನ್ನು ನೆಲಮನೆ ಪ್ರಕಾಶನದ ಕೆಟ್ಟ ಮುದ್ರಣದಲ್ಲೂ ಅನಂತರ ಪುಸ್ತಕ ಪ್ರಕಾಶನದ ಒಳ್ಳೇ ಮುದ್ರಣದಲ್ಲೂ ಮಾರಿ ಮಾರಿಯಾದ ಮೇಲೆ ಎಂದೋ ಒಂದು ಸಂಜೆ ಸ್ಕೂಟರಿನಲ್ಲಿ ಭಾರೀ ಅವಸರದಲ್ಲಿ ನನ್ನಂಗಡಿಗೆ ನುಗ್ಗಿ ಅಷ್ಟೇ ಅವಸರದಲ್ಲಿ ಮೂಡಿಗೆರೆಯತ್ತ ಹೋದದ್ದೇ ಮೊದಲ ದರ್ಶನವಿರಬೇಕು. ನನ್ನ ಕಾಡು ಸುತ್ತಾಟದಲ್ಲಿ ಎಂದೋ ಮೂಡಿಗೆರೆ ಕೈಮರದ ಬಳಿ ತುಂಬಾ ನಿಲ್ಲಬೇಕಾದಾಗ ಜೊತೆಗಾರ ಮರಕಿಣಿ ನಾರಾಯಣಮೂರ್ತಿ (ಪುಸ್ತಕ ಕೀಟ) “ಅಶೋಕರೇ ತೇಜಸ್ವಿ ನೋಡಿ ಬರುವನಾ” ಎಂದು ಬೇರೆ ಜ್ಞಾಪಿಸಿದರು. ನನ್ನ ಮುಖ ಹೇಡಿತನದಲ್ಲಿ ತಪ್ಪಿಸಿಬಿಟ್ಟೆ. (ಸಾಮಾನ್ಯವಾಗಿ ಯಾರೊಡನೆಯೂ ಹೀಗೆ ಹೋಗಿ, ಮಾತಾಡುವುದಕ್ಕೆ ನಿಲ್ಲುವುದೆಲ್ಲಾ ನನ್ನಿಂದೆಂದೂ ಆಗಿಲ್ಲ!) ಮತ್ತೆ ನನ್ನ ಬ್ಲಾಗಿನಲ್ಲಿ ಬರೆದುಕೊಂಡಂತೆ ಅವರು ಸಂದೇಶ ಪ್ರಶಸ್ತಿ ಸ್ವೀಕಾರಕ್ಕೆ ಬಂದಾಗ ಸ್ವಲ್ಪ ಹೆಚ್ಚು ಮಾತಾಡಲು ಸಿಕ್ಕಿದ್ದರು. ಮತ್ತೆ ಅವರೇ ನನ್ನ ‘ಅಭಯಾರಣ್ಯ’ಕ್ಕೆ ಯಾವ ಪೋಸುಗಳೂ ಇಲ್ಲದೇ ಬಂದು ಹೋದ ಮೇಲೆ ನನ್ನ ಚಳಿ ಬಿಟ್ಟು, ಇನ್ನೊಮ್ಮೆ ಅತ್ತ ಹೋದರೆ ಖಂಡಿತಾ ಅವರ ಮನ್ಗೆ ಹೋಗಬೇಕು ಅಂದುಕ್ಕೊಂಡಿದ್ದೆ. ಅಶೋಕವನ ಕೊಂಡಮೇಲಂತೂ ಅವರನ್ನು ಒಮ್ಮೆ ಅಲ್ಲಿಗೆ ಕರೆದೊಯ್ದು ‘ಅಭಯಾರಣ್ಯ’ಕ್ಕವರು ಮಾಡಿದ್ದ ಗೇಲಿಯನ್ನು ವಾಪಾಸು ತೆಗೆಸಬೇಕೆಂದೂ ಯೋಚಿಸಿದ್ದೆ – ಅವರೇ ಹೋಗಿಬಿಟ್ಟರು. ಆದರೆ ಅಂಥ ಎಲ್ಲಾ ಬಹುಕಾಲ ನೆನಪಲ್ಲುಳಿಯುವ ಅನುಭವವನ್ನು ಕೀರ್ತಿ ಬಾಲಸಹಜವಾಗಿ ಗಳಿಸಿದ್ದು, ಅದನ್ನು ಅಷ್ಟೇ ಚಂದಕ್ಕೆ ನಮ್ಮ ಓದಿಗೂ ದಕ್ಕಿಸಿದ್ದಕ್ಕೆ ಕೀರ್ತಿಗೆ ಕೃತಜ್ಞತೆಗಳು.
ಇಂತು ವಿಶ್ವಾಸಿ
ಅಶೋಕವರ್ಧನ
ಪಂಡಿತರೆ,
ಬಹಳ ಸೊಗಸಾದ ಲೇಖನ. ಕಳುಹಿಸಿದ್ದಕ್ಕೆ ಧನ್ಯವಾದಗಳು.
ನೀವು ಹೇಗಿದ್ದೀರಿ?
ಗಿರಿ
ತೇಜಸ್ವಿ ಮಾಮನ ನೆನಪುಗಳು ಖುಷಿ ಕೊಡ್ತು. ಧನ್ಯವಾದಗಳು. 🙂
ಕೀರ್ತಿ ಅಕ್ಕನ ಲೇಖನ ಓದಿ ಬಹಳ ಕುಷಿಯಾಯಿತು.
ಕನ್ನಡ ಸಂಪದದ ಮುಖಾಂತರ ಈ ಲೇಖನದ ಬಗ್ಗೇ ಆರಿವಾಯ್ತು.
ಪ್ರಕಟ ಮಾಡಿದ ನಿಮಗೆ ತುಂಬ ಧನ್ಯವಾದಗಳು.
– ಉಮಾ ಅರಸ್