Monthly Archives: ಮೇ 2011

ಓದುವ ಸುಖ

ಸುಖಗಳಲ್ಲಿ ಓದುವ ಸುಖಕ್ಕೆ ನಾನು ಮೊದಲನೆಯ ಸ್ಥಾನ ಕೊಡುತ್ತೇನೆ. ಅದರಲ್ಲಿಯೂ ಒಬ್ಬರೇ ಪ್ರಯಾಣ ಮಾಡುವಾಗ ನಮಗೆ ಆಪ್ತಸಂಗಾತಿಯಾಗುವುದು ಪತ್ರಿಕೆ ಅಥವಾ ಪುಸ್ತಕವೇ. ಪ್ರಯಾಣದಲ್ಲಿ ಕೈಯಲ್ಲಿರುವ ಪತ್ರಿಕೆ ನಿಮಗೆ ಅಪರಿಚಿತರನ್ನು ಪರಿಚಿತರನ್ನಾಗಿಸಬಹುದು. ಕೈಯಲ್ಲಿ ಪುಸ್ತಕವಿದ್ದರೆ ಯಾರೂ ನಿಮ್ಮ ಓದಿಗೆ ಅಡ್ಡಿಪಡಿಸದಿರಬಹುದು.

ಮೊದಲೇ ಯೋಚಿಸಿದ್ದರೆ ಪ್ರಯಾಣದಲ್ಲಿ ಓದಿಗೆ ಅಗತ್ಯವಾದ ಅನುಕೂಲಗಳನ್ನು ಹೊಂದಿಸಿಕೊಳ್ಳಬಹುದು.
ಓದುವ ಸುಖಕ್ಕೆ ಬಸ್ಸಿಗಿಂತ ರೈಲು ಉತ್ತಮ. ರೈಲು ಹೊರಡುವುದಕ್ಕೆ ಸ್ವಲ್ಪ ಮುಂಚಿತವಾಗಿ ನೀವು ಬೋಗಿಯನ್ನು ತಲುಪಲು ಸಾಧ್ಯವಾದರೆ ಗಾಳಿ ಬೆಳಕಿನ ಅನುಕೂಲವಿರುವ ಕಿಟಕಿಯ ಪಕ್ಕದ ಸ್ಥಾನ ನಿಮಗೆ ಸಿಗುತ್ತದೆ. ಅಲ್ಲಿ ನೀವು ಕುಳಿತಮೇಲೆ ಗಾಡಿ ಎಷ್ಟುಹೊತ್ತಿಗೆ ಬೇಕಾದರೂ ಹೊರಡಲಿ, ತಲುಪಬೇಕಾದ ಸ್ಥಳವನ್ನು ತಲುಪಲಿ ಆ ಬಗ್ಗೆ ನಿಮಗೆ ಯೋಚನೆ ಇರುವುದಿಲ್ಲ. ಕೈಯಲ್ಲಿ ನಿಮಗೆ ಪ್ರಿಯವಾದ ಪುಸ್ತಕವಿರುತ್ತದೆ.

ನೀವು ಪದೇ ಪದೇ ಪ್ರಯಾಣ ಮಾಡುವವರಾಗಿದ್ದರೆ ನಿಮಗೆ ಪ್ರಯಾಣದ ಅವಧಿಯಲ್ಲಿ ಕಿಟಕಿಯ ಆಚೆ ಹೊಸ ಸ್ಥಳವನ್ನು ನೋಡುವ ಕುತೂಹಲವಿರುವುದಿಲ್ಲ. ಪೂರ್ಣ ಅವಧಿ ನಿಮ್ಮ ಓದಿಗೆಂದೇ ಕಾಯ್ದಿರಿಸಿದ ಸಮಯವಾಗಿರುತ್ತದೆ. ಪ್ರಯಾಣಿಕರ ಅಗತ್ಯಗಳನ್ನೂ ಪೂರೈಸುವುದಕ್ಕಾಗಿ ಪ್ರಯಾಣದುದ್ದಕ್ಕೂ ತಿಂಡಿ ಕಾಫಿ ಮಾರುವ ಹುಡುಗರು ಇದ್ದೇ ಇರುತ್ತಾರೆ. ಪ್ರತಿ ಪ್ರಯಾಣದಲ್ಲಿಯೂ ಬದಲಾಗುವ ಪ್ರಯಾಣಿಕರ ಗುಂಪಿನಲ್ಲಿ ಅವರಿಗೆ ಎಲ್ಲರೂ ಅಪರಿಚಿತರೆ, ನಿಮ್ಮನ್ನು ಬಿಟ್ಟು. ನಿಮಗೂ ಅಷ್ಟೆ. ನೀವು ಏನನ್ನೂ ಕೊಳ್ಳದಿದ್ದಾಗಲೂ ತಿಂಡಿ ಕಾಫಿ ಮಾರುವ ಹುಡುಗರು ನಿಮ್ಮತ್ತ ಪರಿಚಯದ ಮುಗುಳ್ನಗೆ ಬೀರುವುದು ಇತರ ಪ್ರಯಾಣಿಕರ ಕುತೂಹಲಕ್ಕೆ ಕಾರಣವಾಗಬಹುದು. ಓದುತ್ತ ಕುಳಿತಿರುವಲ್ಲಿಗೇ ಅವರು ತಿಂಡಿ ಕಾಫಿಗಳನ್ನು ಪೂರೈಸುವುದು ನಿಮಗೆ ಪ್ರಿಯವಾಗುವ ಸಂಗತಿಯಾಗಬಹುದು.

ನಿಮ್ಮ ಕೈಯಲ್ಲಿರುವ ಪುಸ್ತಕ ನಿಮ್ಮನ್ನು ಸುತ್ತಲಿನ ಜಂಜಡಗಳಿಂದ ದೂರವಿರಿಸುತ್ತದೆ. ಸಹಪ್ರಯಾಣಿಕರ ಮಾತುಕತೆ, ಜಗಳ, ಸಂಚಾರಿ ದೂರವಾಣಿಯ ಅಬ್ಬರ ಎಲ್ಲಕ್ಕೂ ನೀವು ಹೊರಗಿನವರು. ‘ಕಿವುಡನ ಮಾಡಯ್ಯ ತಂದೆ’ ಎಂದು ನೀವು ಬೇಡದಿದ್ದರೂ ನಿಮಗೆ ಅದರ ಫಲ ದೊರೆತಿರುತ್ತದೆ. ಪುಸ್ತಕವನ್ನು ನೀವು ಕೆಳಗಿರಿಸಿದರೆ ಸಹಪ್ರಯಾಣಿಕರೊಬ್ಬರು ಅದನ್ನು ಕುತೂಹಲದಿಂದ ಕೈಗೆತ್ತಿಕೊಂಡು ನೋಡಬಹುದು. ಆ ಪುಸ್ತಕದ ವಿಷಯದ ಬಗ್ಗೆ ಅವರಿಗಿರುವ ಅಭಿಪ್ರಾಯ, ಪೂರ್ವಾಗ್ರಹಗಳನ್ನು ಆಧರಿಸಿ ಅವರು ನಿಮ್ಮ ಬಗ್ಗೆ ಮೆಚ್ಚುಗೆ, ತಿರಸ್ಕಾರಗಳನ್ನು ಪ್ರದರ್ಶಿಸಬಹುದು.

ಒಮ್ಮೆ ನಾನು ಪಾ.ವೆಂ.ಆಚಾರ್ಯರ ‘ಬ್ರಾಹ್ಮಣ,ಮುಸ್ಲಿಂ ಇತ್ಯಾದಿ ಮತ್ತು ಇತರ ಕತೆಗಳು’ ಎಂಬ ಕಥಾ ಸಂಕಲನವನ್ನು ಓದುತ್ತಿದ್ದೆ. ವಿಕಲಚಿತ್ತಳಂತೆ ತೋರುವ ಮಹಿಳೆಯೊಬ್ಬಳು ನನ್ನ ಕೈಯಲ್ಲಿ ಪುಸ್ತಕವಿದ್ದುದನ್ನು ನೋಡಿ ‘ಓ ಪುಸ್ತಕ!’ ಎಂದು ಕಿರುಚಿ ಅದನ್ನು ಕಿತ್ತುಕೊಂಡು ನೋಡಿದಳು. ‘ಬೆಳಗ್ಗೆ ಬೆಳಗ್ಗೆ ದೇವರಧ್ಯಾನ ಮಾಡುವ ಬದಲು ಇಂಥ ಪುಸ್ತಕವನ್ನು ಓದುತ್ತೀರಲ್ಲ!’ ಎಂದು ಕೂಗಿದಳು. ಅವಳ ಸ್ಥಿತಿಯನ್ನು ಗಮನಿಸಿದ ನಾನು ಉತ್ತರಿಸಲಿಲ್ಲ. ಸಹಪ್ರಯಾಣಿಕರು ಯಾರಿಗೂ ನಾನು ಗೊತ್ತಿಲ್ಲದಿದ್ದರೂ ನಾನು ಏನು ಓದುತ್ತಿದ್ದಿರಬಹುದು ಎಂದು ಅವರು ಕಲ್ಪಿಸಿಕೊಂಡಿರಬಹುದು ಎಂದು ಮುಜುಗರವಾಯಿತು.

ಇನ್ನೊಮ್ಮೆ ಸಹಪ್ರಯಾಣಿಕರ ಮಗುವನ್ನು ನಾನು ಎತ್ತಿಕೊಂಡು ಪ್ರೀತಿಯಿಂದ ಮಾತನಾಡಿಸಿದಾಗ ಮಗುವಿನ ತಂದೆ ತಾಯಿಗಳು ಸಂತೋಷಪಟ್ಟಿದ್ದರು. ಆಮೇಲೆ ನಾನು ಚೀಲದಿಂದ ಬೇರೆ ಭಾಷೆಯ ಪುಸ್ತಕವೊಂದನ್ನು ತೆಗೆದು ಓದುತ್ತಿದ್ದೆ. ಸ್ವಲ್ಪ ಸಮಯದ ಅನಂತರ ತಲೆ ಎತ್ತಿ ನೋಡಿದಾಗ ಸಹಪ್ರಯಾಣಿಕರು ಮಗುವನ್ನೆತ್ತಿಕೊಂಡು ಬೇರೆ ಸ್ಥಳಕ್ಕೆ ಹೋಗಿ ಕುಳಿತಿದ್ದರು! ಬೇರೆ ಭಾಷೆಯ ಪತ್ರಿಕೆಯನ್ನು ಓದುತ್ತಿರುವಾಗ ಆ ಭಾಷೆಯ ಸಹಪ್ರಯಾಣಿಕರು ಸಹಜವಾಗಿಯೇ ತಮ್ಮ ಕುತೂಹಲ, ಮೆಚ್ಚುಗೆಗಳನ್ನು ತೋರಿಸಿರುವುದೂ ಉಂಟು.

ಇಂದು ತಂತ್ರಜ್ಞಾನದ ಪ್ರಗತಿಯಿಂದ ಓದಿಗೆ ಹೊಸ ಹೊಸ ಅನುಕೂಲಗಳು ಲಭ್ಯವಾಗುತ್ತಿವೆ. ಪ್ರಯಾಣದಲ್ಲಿ ಓದುವ ಸುಖಕ್ಕೆ ಪತ್ರಿಕೆ, ಪುಸ್ತಕಗಳು ಅನಿವಾರ್ಯವಲ್ಲ. ನಿಮ್ಮ ಸಂಚಾರಿ ದೂರವಾಣಿಯಲ್ಲಿಯೇ ಅವು ಲಭ್ಯ. ನಿಮ್ಮ ಸಂಗ್ರಹದಲ್ಲಿರುವ ನೂರಾರು ವಿದ್ಯುನ್ಮಾನ ಪುಸ್ತಕಗಳನ್ನು ಅದರಲ್ಲಿ ತುಂಬಿಕೊಂಡು ಹೋಗಿ ಅವನ್ನು ಓದಬಹುದು. ವಿದ್ಯುನ್ಮಾನ ಪತ್ರಿಕೆಗಳು, ಪುಸ್ತಕಗಳನ್ನು ಅಂತರಜಾಲದಿಂದ ನೇರವಾಗಿ ಇಳಿಸಿಕೊಳ್ಳ ಬಹುದು. ಓದುವಾಗ ಮುದ್ರಿತ ಪುಸ್ತಕಗಳಲ್ಲಿ ಮಾಡುವಂತೆ ವಿದ್ಯುನ್ಮಾನ ಪುಸ್ತಕಗಳ ಪುಟಗಳಲ್ಲಿಯೂ ಕೆಳಗೆರೆ, ಗುರುತು, ಟಿಪ್ಪಣಿ ಮೊದಲಾದವನ್ನೂ ಮಾಡಬಹುದು. ಒಂದೇ ಕೊರತೆ ಎಂದರೆ ಪುಟ ತಿರುವಲು ಬೆರಳನ್ನು ಎಂಜಲಿಸಲಾಗುವುದಿಲ್ಲ! ವಿದ್ಯುನ್ಮಾನ ಪುಸ್ತಕಗಳನ್ನು ಓದುವ ಹಲವು ಸಾಧನಗಳು ಈಗ ಇವೆಯಾದರೂ ಅವುಗಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಆಭ್ಯಾಸ ಇನ್ನೂ ವ್ಯಾಪಕವಾಗಿಲ್ಲ. ವಿದ್ಯುನ್ಮಾನ ಓದುವ ಪುಸ್ತಕಗಳಿರುವಂತೆ ಕೇಳುವ ಪುಸ್ತಕಗಳೂ ಲಭ್ಯವಿವೆ. ಅಂದರೆ ಒಂದು ಪುಸ್ತಕವನ್ನು ವ್ಯಕ್ತಿ ಅಥವಾ ಗಣಕಯಂತ್ರ ಓದಿರುವ ಧ್ವನಿವಾಹಿನಿಗಳು ಸಿಗುತ್ತವೆ. ಎಂಪಿ೩ ರೂಪದಲ್ಲಿರುವ ಅವನ್ನು ನಿಮ್ಮ ಎಂಪಿ೩ ಚಾಲಕ, ಐಪಾಡ್ ಅಥವಾ ಸಂಚಾರಿ ದೂರವಾಣಿಗಳಲ್ಲಿ ಹಾಕಿಕೊಂಡು ಕೇಳಬಹುದು.

ಪ್ರಯಾಣದ ಬೇಸರವಾಗದಿರಲೆಂದು ದೂರ ಪ್ರಯಾಣದ ರೈಲುಗಳಲ್ಲಿ ವಿಡಿಯೊ ಪ್ರದರ್ಶನದ ವ್ಯವಸ್ಥೆ ಮಾಡಿದ್ದಾರೆ. ಆದರೆ ವಿಮಾನದಲ್ಲಿರುವಂತೆ ಬೇಕಾದವರು ಮಾತ್ರ ಅದರ ಧ್ವನಿವಾಹಿನಿಯನ್ನು ಕೇಳಿಸಿಕೊಳ್ಳುಲು ಅನುಕೂಲವಾಗುವ ಕಿವಿ-ಗೂಟಗಳನ್ನುಎಲ್ಲ ಪ್ರಯಾಣಿಕರಿಗೂ ಒದಗಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ ಇದು ಹೆಚ್ಚಿನ ಪ್ರಯಾಣಿಕರಿಗೆ ಬಲವಂತ ಮಾಘಸ್ನಾನವಾಗಿದೆ. ಅವರು ಶಾಂತವಾಗಿ ಏನನ್ನಾದರೂ ಯೋಚಿಸುತ್ತ, ಓದುತ್ತ ಅಥವಾ ನಿದ್ದೆಮಾಡುತ್ತ ನೆಮ್ಮದಿಯಿಂದ ಪ್ರಯಾಣ ಮಾಡಲು ಅಡ್ಡಿಯಾಗಿದೆ.

ಪ್ರಯಾಣದ ಸಮಯವನ್ನು ಓದುವುದಕ್ಕೆ ಬಳಸಿಕೊಳ್ಳುವುದರಿಂದ ನಿಮಗೆ ಪ್ರಯಾಣದಲ್ಲಿ ಆಯಾಸ ಬೇಸರಗಳು ಆಗುವುದಿಲ್ಲ. ಓದಿನಲ್ಲಿ ಮಗ್ನರಾಗಿರುವ ನಿಮಗೆ ಪ್ರಯಾಣ ಮುಗಿದುದು ಅರಿವಿಗೆ ಬರುವುದಿಲ್ಲ. ಓದುತ್ತಿರುವಾಗ ನೀವು ಸೂಕ್ಷ್ಮ ಚೇತನವೊಂದರೊಡನೆ ಒಡನಾಡುತ್ತಿರುತ್ತೀರಿ. ಪ್ರಯಾಣ ಮುಗಿದಾಗ ಹೊಸ ಅನುಭವವನ್ನೂ ಅರಿವನ್ನೂ ಪಡೆದ ಉಲ್ಲಾಸ ನಿಮ್ಮದಾಗಿರುತ್ತದೆ. ‘ಸತ್ತವರ ಸಂಗದಲಿ ಹೊತ್ತು ಹೋಗುವುದೆನಗೆ’ ಎಂದು ಕವಿಯೊಬ್ಬರು ಹೇಳಿದ್ದಾರೆ. ಆದರೆ ಓದುವ ಸುಖ ಹೊತ್ತು ಹೋಗುವುದರಿಂದ ಬರುವುದಲ್ಲ; ಸಾವಿಲ್ಲದ ಚೈತನ್ಯವೊಂದರ ಜೊತೆ ಒಡನಾಡಿ ಹೊಸ ಅನುಭವ, ಹೊಸ ಅರಿವು ಪಡೆದುದರಿಂದ ಬರುತ್ತದೆ.
ಸೌಜನ್ಯ: ಮೈಸೂರು ಆಕಾಶವಾಣಿ
_

ಸೈಕಲ್ ಯಾನ

ವೇಗ ಇಂದಿನ ಜನಜೀವನದ ಮುಖ್ಯ ಲಕ್ಷಣ. ಎಲ್ಲರೂ ಸ್ವಂತ ವಾಹನಗಳನ್ನು ಬಳಸಿ ಸಮಯಕ್ಕೆ ಸರಿಯಾಗಿ ತಾವು ತಲುಪಬೇಕಾದ ಸ್ಥಳದಲ್ಲಿರಲು ಬಯಸುತ್ತಾರೆ. ಇದರ ಪರಿಣಾಮವಾಗಿ ಇಂದಿನ ರಸ್ತೆಗಳು ವಾಹನಗಳಿಂದ ಗಿಜಿಗುಡುತ್ತಿವೆ. ಅದರಿಂದ ಎಷ್ಟೊ ವೇಳೆ ಸ್ವಂತ ವಾಹನದಲ್ಲಿ ಹೋಗುವ ಬದಲು ಸಾರ್ವಜನಿಕ ವಾಹನಗಳಲ್ಲಿ ಹೋಗಿದ್ದರೆ ಸಮಯಕ್ಕೆ ಸರಿಯಾಗಿ ತಲುಪಬಹುದಿತ್ತು ಎಂದೂ ಅನಿಸುವುದುಂಟು. ಆದರೂ ವೈಯಕ್ತಿಕ ಬಳಕೆಗೆ ಸೈಕಲ್ ಉಪಯುಕ್ತವಾದ ಎರಡು ಚಕ್ರಗಳ ವಾಹನ. ಅದಕ್ಕೆ ಎರಡು ಚಕ್ರಗಳಿರುವುದರಿಂದ ಆ ಹೆಸರು. ಎರಡು ಚಕ್ರಗಳ ವಾಹನವನ್ನು ಇಂಗ್ಲಿಷಿನಲ್ಲಿ ಬೈ-ಸೈಕಲ್ ಎನ್ನುತ್ತಾರೆ. ೧೯ನೇ ಶತಮಾನದ ಕೊನೆಯಲ್ಲಿ ಬೈಸಿಕಲ್ ಭಾರತಕ್ಕೆ ಬಂದ ಹೊಸದರಲ್ಲಿ ಅದನ್ನು ನಮ್ಮವರು ‘ಬೀಸೆಕಲ್ಲು’ ಎಂದುದನ್ನು ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ದಾಖಲಿಸಿದ್ದಾರೆ. ಅಂದಿಗೆ ಅದು ನವನಾಗರಿಕತೆಯ ಸಂಕೇತವಾಗಿತ್ತು. ಇತ್ತೀಚಿನವರೆಗೆ ಮದುವೆಯಲ್ಲಿ ವರನಿಗೆ ದಕ್ಷಿಣೆಯಾಗಿ ಸೈಕಲ್ಲನ್ನು ಕೊಡುವುದು, ತೆಗೆದುಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿತ್ತು.

ಬೈಸಿಕಲ್ ಮಕ್ಕಳ ಮೊದಲ ವಾಹನ. ಮಗು ಬೆಳೆದು ಸ್ವಲ್ಪ ದೊಡ್ಡದಾಗುತ್ತಿರುವಂತೆ ಅದರ ಶಕ್ತಿಗೆ ನಿಲುಕುವ ವಿವಿಧ ಬಗೆಯ ಸೈಕಲ್ಲುಗಳಿವೆ. ಮೊದಲಿಗೆ ಮೂರು ಚಕ್ರದ ಸೈಕಲ್ ತುಳಿದು ಮುಗಿಸಿದ ಮಗು ಎರಡು ಚಕ್ರದ ಸೈಕಲ್ಲಿಗೆ ತೇರ್ಗಡೆಯಾಗುತ್ತದೆ. ಆರಂಭದಲ್ಲಿ ಮಗುವಿನ ಸೈಕಲ್ಲಿನ ಹಿಂದಿನ ಚಕ್ರದ ಎರಡೂ ಬದಿಗಳಲ್ಲಿ ಆಧಾರವಾಗಿ ಎರಡು ಚಿಕ್ಕ ಚಕ್ರಗಳನ್ನು ಜೋಡಿಸಿರುತ್ತಾರೆ. ಇದರಿಂದ ಮಗುವಿಗೆ ಬೀಳುವ ಭಯವಿಲ್ಲ. ಮಗು ಎರಡು ಚಕ್ರದ ಸೈಕಲ್ಅನ್ನು ತುಳಿಯುವ ಕೌಶಲ ಕಲಿತಂತೆ ಆಧಾರದ ಚಕ್ರಗಳು ಕಾಣೆಯಾಗುತ್ತವೆ. ಮಗುವಿನ ಬೆಳವಣಿಗೆ, ಶಕ್ತಿ ಸಾಮರ್ಥ್ಯಗಳನ್ನು ಆಧರಿಸಿ ಸೈಕಲ್ಲಿನ ಎತ್ತರವೂ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳ ಹಂತದಿಂದಲೇ ಲಿಂಗಾಧಾರಿತ ವ್ಯತ್ಯಾಸಕ್ಕನುಗುಣವಾದ ಸೈಕಲ್ಲುಗಳಿವೆ. ಅವರವರ ಅಗತ್ಯಕ್ಕನುಗುಣವಾದ ಹಿಂಬದಿಯಲ್ಲಿ ಕ್ಯಾರಿಯರ್, ಮುಂದೆ ಹ್ಯಾಂಡಲ್ಲಿಗೆ ಬುಟ್ಟಿ ಇತ್ಯಾದಿ ಹೆಚ್ಚುವರಿ ಸೌಲಭ್ಯಗಳೂ ಇವೆ. ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸಿದ ಎಳೆಯರಿಗೆ ಸೈಕಲ್ಅನ್ನು ತೆಗೆಸಿಕೊಡುವ ಪ್ರೋತ್ಸಾಹ ಇಂದಿಗೂ ಎಲ್ಲ ಮನೆಗಳಲ್ಲಿ ಸಾಮಾನ್ಯವಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿ ಜೀವನ ಮುಗಿಯುವವರೆಗೆ ಸೈಕಲ್ ನಮ್ಮ ಮುಖ್ಯ ವಾಹನವಾಗಿರುತ್ತದೆ. ಆರೋಗ್ಯ, ಹುಮ್ಮಸ್ಸು ನಮ್ಮಲ್ಲಿರುವುದರಿಂದ ಸೈಕಲ್ ತುಳಿಯುವುದು ಕಷ್ಟವೆನಿಸುವುದಿಲ್ಲ. ಇದಕ್ಕೆ ಪೆಟ್ರೋಲ್ ಖರ್ಚು ಇರುವುದಿಲ್ಲ. ವಾಹನದ ಬದಲು ಸವಾರರ ಪೆಟ್ರೋಲಿಗೆ ಆ ಹಣವನ್ನು ಬಳಸಬಹುದು! ಉದ್ಯೋಗಕ್ಕೆ ಸೇರಿದ ಮೇಲೆ ಎಲ್ಲ ಬದಲಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳದಲ್ಲಿರಲು ಸೈಕಲ್ಲಿನ ವೇಗ ಸಾಲುವುದಿಲ್ಲ ಎನಿಸಬಹುದು. ಈಗ ನಾವು ಸಂಪಾದಿಸುತ್ತಿರುವುದರಿಂದ ಪೆಟ್ರೋಲಿನ ಖರ್ಚಿನ ಬಗ್ಗೆ ಚಿಂತಿಸುವುದಿಲ್ಲ. ಸೈಕಲ್ ಜಾಗದಲ್ಲಿ ಸ್ಕೂಟರ್, ಮೋಟರ್ ಸೈಕಲ್ ಬರುತ್ತವೆ. ಸವಾರರೂ ಸೈಕಲ್ ತುಳಿಯುವ ವ್ಯಾಯಾಮವಿಲ್ಲದೆ, ಸೈಕಲ್ಲಿನಂತೆ ಇದ್ದವರು ಸ್ಕೂಟರ್, ಮೋಟರ್ ಸೈಕಲ್ಲುಗಳಂತೆ ಆಗುತ್ತಾರೆ!

ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತವೆ. ಸಾರಿಗೆ ಬಿಕ್ಕಟ್ಟು, ಆರೋಗ್ಯದ ಸಮಸ್ಯೆಗಳೂ ಹೆಚ್ಚುತ್ತವೆ. ಸ್ವಂತವಾಹನವಿದ್ದರೂ ಸಮಯಕ್ಕೆ ಸರಿಯಾಗಿ ಸಂಚರಿಸಲು ಸಾಧ್ಯವಿಲ್ಲದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವ್ಯಾಯಾಮವಿಲ್ಲದೆ ನಮ್ಮ ದೇಹವೇ ನಮಗೆ ಭಾರವೆನಿಸತೊಡಗುತ್ತದೆ.

ನಗರ ಸಾರಿಗೆಯವರು ರಸ್ತೆಯಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆಮಾಡಲು, ಹೆಚ್ಚು ಶುದ್ಧಗಾಳಿಯನ್ನು ಉಸಿರಾಡಲು ತಿಂಗಳಿಗೆ ಒಂದು ದಿನವನ್ನು ‘ಬಸ್ ದಿನ’ವಾಗಿ ಆಚರಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಬಸ್ಸುಗಳಲ್ಲಿ ಸಂಚರಿಸುವಂತೆ ವಿವಿಧ ಪಾಸುಗಳನ್ನು ನೀಡುತ್ತಿದ್ದಾರೆ. ಇದರಿಂದ ರಸ್ತೆಯ ಮೇಲಿನ ವಾಹನಗಳ ದಟ್ಟಣೆ, ಒತ್ತಡಗಳು ಕಡಿಮೆಯಾಗುತ್ತವೆ. ಬಸ್ ಪ್ರಯಾಣಿಕರೂ ಸ್ವಂತ ವಾಹನ ಚಾಲನೆಯ ಹೊಣೆಯ ಆತಂಕವಿಲ್ಲದೆ ಸಂಚರಿಸಬಹುದು.

ಇಂದು ಸೈಕಲ್ಲುಗಳು ಬಹಳಷ್ಟು ಸುಧಾರಿಸಿವೆ. ಸೈಕಲ್ ಸವಾರಿ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಅದಕ್ಕಾಗಿಯೇ ವಿಶೇಷ ಸೈಕಲ್ಲುಗಳೂ ಇವೆ. ಜನರು ಸೈಕಲ್ಅನ್ನು ಬಳಸಿ ತಮ್ಮ ವ್ಯಾಯಾಮದ ಗತಿಯನ್ನು ಮರಳಿ ಕಂಡುಕೊಳ್ಳುತ್ತಿದ್ದಾರೆ. ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದಕ್ಕಲ್ಲವಾದರೂ ವ್ಯಾಯಾಮದ ದಿನಚರಿಯಾಗಿ ಸೈಕಲ್ ಮತ್ತೆ ಸ್ಥಾನವನ್ನು ಗಳಿಸುತ್ತಿದೆ. ಇದಕ್ಕೆ ಸೈಕಲ್ ಗಳ ತಾಂತ್ರಿಕತೆಯ ಸುಧಾರಣೆಯೂ ಕಾರಣವಾಗಿದೆ. ಹಿಂದೆ ಅಪರೂಪವಾಗಿದ್ದ, ಗೇರುಗಳಿರುವ ಸೈಕಲ್ ಗಳು ಇಂದು ಸಾಮಾನ್ಯವಾಗಿವೆ. ವಿದೇಶಗಳಲ್ಲಿ ತಯಾರಾಗುವ ಸೈಕಲ್ಲುಗಳು ಅತಿ ಹಗುರವಾಗಿವೆ. ನಮ್ಮ ದೇಶದಲ್ಲಿ ಗೇರುಗಳಿರುವ ಸೈಕಲ್ಲುಗಳು ತಯಾರಾಗುತಿದ್ದರೂ ಅವು ವಿಪರೀತ ಭಾರದವಾಗಿವೆ. ಈಗ ನಮ್ಮಲ್ಲೇ ಜೇಬಿಗೂ ಹಗುರವಾದ ಸೈಕಲ್ಲುಗಳು ಬಂದಿವೆ

ಹಲವು ಬಗೆಯ ಹಗುರವಾದ ಸೈಕಲ್ಲುಗಳಿವೆ. ಬೆಟ್ಟಗುಡ್ಡಗಳನ್ನು ಹತ್ತುವ ಒರಟು ಬಳಕೆಯ ಸೈಕಲ್ಲುಗಳು; ತುಳಿದು ಸಾಕೆನಿಸಿದರೆ ಮಡಿಸಿ ಕೈಯಲ್ಲಿ ಹಿಡಿದುಕೊಂಡು ಹೋಗಬಲ್ಲ ಅಥವಾ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಬಲ್ಲ ಸೈಕಲ್ಲುಗಳಿವೆ. ನಾನು ಸೈಕಲ್ ಬಳಸುವುದನ್ನು ನಿಲ್ಲಿಸಿದ ನಲವತ್ತು ವರ್ಷಗಳ ಅನಂತರ ಅಂಥದೊಂದು ಮಡಿಸುವ ಸೈಕಲ್ ತೆಗೆದುಕೊಂಡೆ. ಅದರ ಚಕ್ರಗಳು ಚಿಕ್ಕವು. ನಾನು ಅದರಲ್ಲಿ ಹೋಗುವಾಗ, ಅದು ರಸ್ತೆಯಲ್ಲಿ ಹೋಗುವವರ, ವಿಶೇಷವಾಗಿ ಮಕ್ಕಳ, ಗಮನ ಸೆಳೆಯುತ್ತದೆ. ಅವರು ಮೆಚ್ಚುಗೆಯಿಂದ ಅದನ್ನು ನೋಡಿ ಅದರ ಬಗ್ಗೆ ವಿಚಾರಿಸುತ್ತಾರೆ. ಸೈಕಲ್ ಬಗೆಗಿನ ಮಕ್ಕಳ ತಾದಾತ್ಮ್ಯ ಆ ಬಗೆಯದು. ಒಮ್ಮೆ ಕುರುಡು-ಮೂಕ ಮಕ್ಕಳ ಶಾಲೆಯ ಹೊರಗೆ ನನ್ನ ಸೈಕಲ್ ನಿಲ್ಲಿಸಿ ಒಳಗೆ ಹೋಗಿದ್ದೆ. ನಾನು ಹೊರಗೆ ಬಂದಾಗ ಆ ಶಾಲೆಯ ಮಕ್ಕಳು ಸೈಕಲ್ ಅನ್ನು ಮುತ್ತಿ ಮುಟ್ಟಿ, ಪರೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ಸನ್ನೆಗಳ ಮೂಲಕ ವ್ಯಕ್ತಪಡಿಸಿದರು.

ಚಕ್ರ ಒಂದು ಸುತ್ತು ಪೂರ್ಣಗೊಳಿಸಿ ಮತ್ತೆ ಮೊದಲಿನ ಸ್ಥಾನಕ್ಕೆ ಬಂದು ಸುತ್ತನ್ನು ಮುಂದುವರೆಸುವಂತೆ ಇಂದು ನಾವು ಸೈಕಲ್ ಅನ್ನು ಮತ್ತೆ ಬಳಸುವುದು ಹೆಚ್ಚಬೇಕಿದೆ. ಇದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲ್ಲದೆ ರಸ್ತೆಯ ಮೇಲಿನ ಒತ್ತಡ, ಪರಿಸರ ಮಾಲಿನ್ಯಗಳು ಕಡಿಮೆಯಾಗುತ್ತವೆ. ಪೆಟ್ರೋಲಿಗಾಗಿ ಮಾಡುವ ಖರ್ಚಿನಲ್ಲಿ ನಮಗೆ, ದೇಶಕ್ಕೆ ಗಣನೀಯ ಉಳಿತಾಯವಾಗುತ್ತದೆ.

ಇದಕ್ಕಾಗಿ ನಮ್ಮ ನಗರಗಳ ರಸ್ತೆಗಳಲ್ಲಿ ಸುರಕ್ಷಿತ ಸೈಕಲ್ ಸವಾರಿಗಾಗಿ ರಸ್ತೆಯ ಅಂಚಿನ ನಿರ್ದಿಷ್ಟ ಜಾಗವನ್ನು ಮೀಸಲಿರಿಸುವುದು ಕಡ್ಡಾಯವಾಗಬೇಕು. ನಮ್ಮಲ್ಲಿ ದೊಡ್ಡ ವಾಹನಗಳಿದ್ದರೂ ದಿನದಲ್ಲಿ ನಿರ್ದಿಷ್ಟ ಸಮಯವನ್ನು ಸೈಕಲ್ ಸವಾರಿಗೆ ಮೀಸಲಿಡಬೇಕು. ‘ಅವಸರವೂ ಸಾವಧಾನದ ಬೆನ್ನೇರಿ’ದಂತೆ ಸೈಕಲ್ ತುಳಿಯುತ್ತಾ ಚಿಂತನಶೀಲರಾಗಿ ವಿಹರಿಸುವುದು ಸಾಧ್ಯವಾಗಬೇಕು.
ಸೌಜನ್ಯ: ಮೈಸೂರು ಆಕಾಶವಾಣಿ

ಇದನ್ನು ೨೦೧೧ರ ಫಬ್ರುವರಿಯಲ್ಲಿ ಮೈಸೂರು ಆಕಾಶವಾಣಿಗಾಗಿ ಬರೆದಿದ್ದೆ. ಈಗ ಪೆಟ್ರೋಲಿನ ಬೆಲೆ ಜಿಗಿದಿರುವುದರಿಂದ ಹಲವರಾದರೂ ಸೈಕಲ್ ಬಳಸುವ ಕಡೆ ಮನಸ್ಸುಮಾಡಬಹುದು. ಅಮೆರಿಕದಲ್ಲಿ ಸೈಕಲ್ ಅನ್ನು ಬಾಡಿಗೆಗೆ ಕೊಡುವ ಪದ್ಧತಿ ಮತ್ತೆ ಆರಂಭವಾಗಿರುವುದಾಗಿ ಶ್ರೀವತ್ಸ ಜೋಶಿ ಅವರು ತಿಳಿಸಿರುವುದು ಸಂತೋಷದ ಸಂಗತಿ.ಕಾರಣ ಯಾವುದಾದರೂ ಸೈಕಲ್ ಬಳಕೆ ಹೆಚ್ಚುವುದು ಸ್ವಾಗತಾರ್ಹ.