ಸೈಕಲ್ ಯಾನ

ವೇಗ ಇಂದಿನ ಜನಜೀವನದ ಮುಖ್ಯ ಲಕ್ಷಣ. ಎಲ್ಲರೂ ಸ್ವಂತ ವಾಹನಗಳನ್ನು ಬಳಸಿ ಸಮಯಕ್ಕೆ ಸರಿಯಾಗಿ ತಾವು ತಲುಪಬೇಕಾದ ಸ್ಥಳದಲ್ಲಿರಲು ಬಯಸುತ್ತಾರೆ. ಇದರ ಪರಿಣಾಮವಾಗಿ ಇಂದಿನ ರಸ್ತೆಗಳು ವಾಹನಗಳಿಂದ ಗಿಜಿಗುಡುತ್ತಿವೆ. ಅದರಿಂದ ಎಷ್ಟೊ ವೇಳೆ ಸ್ವಂತ ವಾಹನದಲ್ಲಿ ಹೋಗುವ ಬದಲು ಸಾರ್ವಜನಿಕ ವಾಹನಗಳಲ್ಲಿ ಹೋಗಿದ್ದರೆ ಸಮಯಕ್ಕೆ ಸರಿಯಾಗಿ ತಲುಪಬಹುದಿತ್ತು ಎಂದೂ ಅನಿಸುವುದುಂಟು. ಆದರೂ ವೈಯಕ್ತಿಕ ಬಳಕೆಗೆ ಸೈಕಲ್ ಉಪಯುಕ್ತವಾದ ಎರಡು ಚಕ್ರಗಳ ವಾಹನ. ಅದಕ್ಕೆ ಎರಡು ಚಕ್ರಗಳಿರುವುದರಿಂದ ಆ ಹೆಸರು. ಎರಡು ಚಕ್ರಗಳ ವಾಹನವನ್ನು ಇಂಗ್ಲಿಷಿನಲ್ಲಿ ಬೈ-ಸೈಕಲ್ ಎನ್ನುತ್ತಾರೆ. ೧೯ನೇ ಶತಮಾನದ ಕೊನೆಯಲ್ಲಿ ಬೈಸಿಕಲ್ ಭಾರತಕ್ಕೆ ಬಂದ ಹೊಸದರಲ್ಲಿ ಅದನ್ನು ನಮ್ಮವರು ‘ಬೀಸೆಕಲ್ಲು’ ಎಂದುದನ್ನು ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ದಾಖಲಿಸಿದ್ದಾರೆ. ಅಂದಿಗೆ ಅದು ನವನಾಗರಿಕತೆಯ ಸಂಕೇತವಾಗಿತ್ತು. ಇತ್ತೀಚಿನವರೆಗೆ ಮದುವೆಯಲ್ಲಿ ವರನಿಗೆ ದಕ್ಷಿಣೆಯಾಗಿ ಸೈಕಲ್ಲನ್ನು ಕೊಡುವುದು, ತೆಗೆದುಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿತ್ತು.

ಬೈಸಿಕಲ್ ಮಕ್ಕಳ ಮೊದಲ ವಾಹನ. ಮಗು ಬೆಳೆದು ಸ್ವಲ್ಪ ದೊಡ್ಡದಾಗುತ್ತಿರುವಂತೆ ಅದರ ಶಕ್ತಿಗೆ ನಿಲುಕುವ ವಿವಿಧ ಬಗೆಯ ಸೈಕಲ್ಲುಗಳಿವೆ. ಮೊದಲಿಗೆ ಮೂರು ಚಕ್ರದ ಸೈಕಲ್ ತುಳಿದು ಮುಗಿಸಿದ ಮಗು ಎರಡು ಚಕ್ರದ ಸೈಕಲ್ಲಿಗೆ ತೇರ್ಗಡೆಯಾಗುತ್ತದೆ. ಆರಂಭದಲ್ಲಿ ಮಗುವಿನ ಸೈಕಲ್ಲಿನ ಹಿಂದಿನ ಚಕ್ರದ ಎರಡೂ ಬದಿಗಳಲ್ಲಿ ಆಧಾರವಾಗಿ ಎರಡು ಚಿಕ್ಕ ಚಕ್ರಗಳನ್ನು ಜೋಡಿಸಿರುತ್ತಾರೆ. ಇದರಿಂದ ಮಗುವಿಗೆ ಬೀಳುವ ಭಯವಿಲ್ಲ. ಮಗು ಎರಡು ಚಕ್ರದ ಸೈಕಲ್ಅನ್ನು ತುಳಿಯುವ ಕೌಶಲ ಕಲಿತಂತೆ ಆಧಾರದ ಚಕ್ರಗಳು ಕಾಣೆಯಾಗುತ್ತವೆ. ಮಗುವಿನ ಬೆಳವಣಿಗೆ, ಶಕ್ತಿ ಸಾಮರ್ಥ್ಯಗಳನ್ನು ಆಧರಿಸಿ ಸೈಕಲ್ಲಿನ ಎತ್ತರವೂ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳ ಹಂತದಿಂದಲೇ ಲಿಂಗಾಧಾರಿತ ವ್ಯತ್ಯಾಸಕ್ಕನುಗುಣವಾದ ಸೈಕಲ್ಲುಗಳಿವೆ. ಅವರವರ ಅಗತ್ಯಕ್ಕನುಗುಣವಾದ ಹಿಂಬದಿಯಲ್ಲಿ ಕ್ಯಾರಿಯರ್, ಮುಂದೆ ಹ್ಯಾಂಡಲ್ಲಿಗೆ ಬುಟ್ಟಿ ಇತ್ಯಾದಿ ಹೆಚ್ಚುವರಿ ಸೌಲಭ್ಯಗಳೂ ಇವೆ. ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸಿದ ಎಳೆಯರಿಗೆ ಸೈಕಲ್ಅನ್ನು ತೆಗೆಸಿಕೊಡುವ ಪ್ರೋತ್ಸಾಹ ಇಂದಿಗೂ ಎಲ್ಲ ಮನೆಗಳಲ್ಲಿ ಸಾಮಾನ್ಯವಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿ ಜೀವನ ಮುಗಿಯುವವರೆಗೆ ಸೈಕಲ್ ನಮ್ಮ ಮುಖ್ಯ ವಾಹನವಾಗಿರುತ್ತದೆ. ಆರೋಗ್ಯ, ಹುಮ್ಮಸ್ಸು ನಮ್ಮಲ್ಲಿರುವುದರಿಂದ ಸೈಕಲ್ ತುಳಿಯುವುದು ಕಷ್ಟವೆನಿಸುವುದಿಲ್ಲ. ಇದಕ್ಕೆ ಪೆಟ್ರೋಲ್ ಖರ್ಚು ಇರುವುದಿಲ್ಲ. ವಾಹನದ ಬದಲು ಸವಾರರ ಪೆಟ್ರೋಲಿಗೆ ಆ ಹಣವನ್ನು ಬಳಸಬಹುದು! ಉದ್ಯೋಗಕ್ಕೆ ಸೇರಿದ ಮೇಲೆ ಎಲ್ಲ ಬದಲಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳದಲ್ಲಿರಲು ಸೈಕಲ್ಲಿನ ವೇಗ ಸಾಲುವುದಿಲ್ಲ ಎನಿಸಬಹುದು. ಈಗ ನಾವು ಸಂಪಾದಿಸುತ್ತಿರುವುದರಿಂದ ಪೆಟ್ರೋಲಿನ ಖರ್ಚಿನ ಬಗ್ಗೆ ಚಿಂತಿಸುವುದಿಲ್ಲ. ಸೈಕಲ್ ಜಾಗದಲ್ಲಿ ಸ್ಕೂಟರ್, ಮೋಟರ್ ಸೈಕಲ್ ಬರುತ್ತವೆ. ಸವಾರರೂ ಸೈಕಲ್ ತುಳಿಯುವ ವ್ಯಾಯಾಮವಿಲ್ಲದೆ, ಸೈಕಲ್ಲಿನಂತೆ ಇದ್ದವರು ಸ್ಕೂಟರ್, ಮೋಟರ್ ಸೈಕಲ್ಲುಗಳಂತೆ ಆಗುತ್ತಾರೆ!

ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತವೆ. ಸಾರಿಗೆ ಬಿಕ್ಕಟ್ಟು, ಆರೋಗ್ಯದ ಸಮಸ್ಯೆಗಳೂ ಹೆಚ್ಚುತ್ತವೆ. ಸ್ವಂತವಾಹನವಿದ್ದರೂ ಸಮಯಕ್ಕೆ ಸರಿಯಾಗಿ ಸಂಚರಿಸಲು ಸಾಧ್ಯವಿಲ್ಲದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವ್ಯಾಯಾಮವಿಲ್ಲದೆ ನಮ್ಮ ದೇಹವೇ ನಮಗೆ ಭಾರವೆನಿಸತೊಡಗುತ್ತದೆ.

ನಗರ ಸಾರಿಗೆಯವರು ರಸ್ತೆಯಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆಮಾಡಲು, ಹೆಚ್ಚು ಶುದ್ಧಗಾಳಿಯನ್ನು ಉಸಿರಾಡಲು ತಿಂಗಳಿಗೆ ಒಂದು ದಿನವನ್ನು ‘ಬಸ್ ದಿನ’ವಾಗಿ ಆಚರಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಬಸ್ಸುಗಳಲ್ಲಿ ಸಂಚರಿಸುವಂತೆ ವಿವಿಧ ಪಾಸುಗಳನ್ನು ನೀಡುತ್ತಿದ್ದಾರೆ. ಇದರಿಂದ ರಸ್ತೆಯ ಮೇಲಿನ ವಾಹನಗಳ ದಟ್ಟಣೆ, ಒತ್ತಡಗಳು ಕಡಿಮೆಯಾಗುತ್ತವೆ. ಬಸ್ ಪ್ರಯಾಣಿಕರೂ ಸ್ವಂತ ವಾಹನ ಚಾಲನೆಯ ಹೊಣೆಯ ಆತಂಕವಿಲ್ಲದೆ ಸಂಚರಿಸಬಹುದು.

ಇಂದು ಸೈಕಲ್ಲುಗಳು ಬಹಳಷ್ಟು ಸುಧಾರಿಸಿವೆ. ಸೈಕಲ್ ಸವಾರಿ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಅದಕ್ಕಾಗಿಯೇ ವಿಶೇಷ ಸೈಕಲ್ಲುಗಳೂ ಇವೆ. ಜನರು ಸೈಕಲ್ಅನ್ನು ಬಳಸಿ ತಮ್ಮ ವ್ಯಾಯಾಮದ ಗತಿಯನ್ನು ಮರಳಿ ಕಂಡುಕೊಳ್ಳುತ್ತಿದ್ದಾರೆ. ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದಕ್ಕಲ್ಲವಾದರೂ ವ್ಯಾಯಾಮದ ದಿನಚರಿಯಾಗಿ ಸೈಕಲ್ ಮತ್ತೆ ಸ್ಥಾನವನ್ನು ಗಳಿಸುತ್ತಿದೆ. ಇದಕ್ಕೆ ಸೈಕಲ್ ಗಳ ತಾಂತ್ರಿಕತೆಯ ಸುಧಾರಣೆಯೂ ಕಾರಣವಾಗಿದೆ. ಹಿಂದೆ ಅಪರೂಪವಾಗಿದ್ದ, ಗೇರುಗಳಿರುವ ಸೈಕಲ್ ಗಳು ಇಂದು ಸಾಮಾನ್ಯವಾಗಿವೆ. ವಿದೇಶಗಳಲ್ಲಿ ತಯಾರಾಗುವ ಸೈಕಲ್ಲುಗಳು ಅತಿ ಹಗುರವಾಗಿವೆ. ನಮ್ಮ ದೇಶದಲ್ಲಿ ಗೇರುಗಳಿರುವ ಸೈಕಲ್ಲುಗಳು ತಯಾರಾಗುತಿದ್ದರೂ ಅವು ವಿಪರೀತ ಭಾರದವಾಗಿವೆ. ಈಗ ನಮ್ಮಲ್ಲೇ ಜೇಬಿಗೂ ಹಗುರವಾದ ಸೈಕಲ್ಲುಗಳು ಬಂದಿವೆ

ಹಲವು ಬಗೆಯ ಹಗುರವಾದ ಸೈಕಲ್ಲುಗಳಿವೆ. ಬೆಟ್ಟಗುಡ್ಡಗಳನ್ನು ಹತ್ತುವ ಒರಟು ಬಳಕೆಯ ಸೈಕಲ್ಲುಗಳು; ತುಳಿದು ಸಾಕೆನಿಸಿದರೆ ಮಡಿಸಿ ಕೈಯಲ್ಲಿ ಹಿಡಿದುಕೊಂಡು ಹೋಗಬಲ್ಲ ಅಥವಾ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಬಲ್ಲ ಸೈಕಲ್ಲುಗಳಿವೆ. ನಾನು ಸೈಕಲ್ ಬಳಸುವುದನ್ನು ನಿಲ್ಲಿಸಿದ ನಲವತ್ತು ವರ್ಷಗಳ ಅನಂತರ ಅಂಥದೊಂದು ಮಡಿಸುವ ಸೈಕಲ್ ತೆಗೆದುಕೊಂಡೆ. ಅದರ ಚಕ್ರಗಳು ಚಿಕ್ಕವು. ನಾನು ಅದರಲ್ಲಿ ಹೋಗುವಾಗ, ಅದು ರಸ್ತೆಯಲ್ಲಿ ಹೋಗುವವರ, ವಿಶೇಷವಾಗಿ ಮಕ್ಕಳ, ಗಮನ ಸೆಳೆಯುತ್ತದೆ. ಅವರು ಮೆಚ್ಚುಗೆಯಿಂದ ಅದನ್ನು ನೋಡಿ ಅದರ ಬಗ್ಗೆ ವಿಚಾರಿಸುತ್ತಾರೆ. ಸೈಕಲ್ ಬಗೆಗಿನ ಮಕ್ಕಳ ತಾದಾತ್ಮ್ಯ ಆ ಬಗೆಯದು. ಒಮ್ಮೆ ಕುರುಡು-ಮೂಕ ಮಕ್ಕಳ ಶಾಲೆಯ ಹೊರಗೆ ನನ್ನ ಸೈಕಲ್ ನಿಲ್ಲಿಸಿ ಒಳಗೆ ಹೋಗಿದ್ದೆ. ನಾನು ಹೊರಗೆ ಬಂದಾಗ ಆ ಶಾಲೆಯ ಮಕ್ಕಳು ಸೈಕಲ್ ಅನ್ನು ಮುತ್ತಿ ಮುಟ್ಟಿ, ಪರೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ಸನ್ನೆಗಳ ಮೂಲಕ ವ್ಯಕ್ತಪಡಿಸಿದರು.

ಚಕ್ರ ಒಂದು ಸುತ್ತು ಪೂರ್ಣಗೊಳಿಸಿ ಮತ್ತೆ ಮೊದಲಿನ ಸ್ಥಾನಕ್ಕೆ ಬಂದು ಸುತ್ತನ್ನು ಮುಂದುವರೆಸುವಂತೆ ಇಂದು ನಾವು ಸೈಕಲ್ ಅನ್ನು ಮತ್ತೆ ಬಳಸುವುದು ಹೆಚ್ಚಬೇಕಿದೆ. ಇದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲ್ಲದೆ ರಸ್ತೆಯ ಮೇಲಿನ ಒತ್ತಡ, ಪರಿಸರ ಮಾಲಿನ್ಯಗಳು ಕಡಿಮೆಯಾಗುತ್ತವೆ. ಪೆಟ್ರೋಲಿಗಾಗಿ ಮಾಡುವ ಖರ್ಚಿನಲ್ಲಿ ನಮಗೆ, ದೇಶಕ್ಕೆ ಗಣನೀಯ ಉಳಿತಾಯವಾಗುತ್ತದೆ.

ಇದಕ್ಕಾಗಿ ನಮ್ಮ ನಗರಗಳ ರಸ್ತೆಗಳಲ್ಲಿ ಸುರಕ್ಷಿತ ಸೈಕಲ್ ಸವಾರಿಗಾಗಿ ರಸ್ತೆಯ ಅಂಚಿನ ನಿರ್ದಿಷ್ಟ ಜಾಗವನ್ನು ಮೀಸಲಿರಿಸುವುದು ಕಡ್ಡಾಯವಾಗಬೇಕು. ನಮ್ಮಲ್ಲಿ ದೊಡ್ಡ ವಾಹನಗಳಿದ್ದರೂ ದಿನದಲ್ಲಿ ನಿರ್ದಿಷ್ಟ ಸಮಯವನ್ನು ಸೈಕಲ್ ಸವಾರಿಗೆ ಮೀಸಲಿಡಬೇಕು. ‘ಅವಸರವೂ ಸಾವಧಾನದ ಬೆನ್ನೇರಿ’ದಂತೆ ಸೈಕಲ್ ತುಳಿಯುತ್ತಾ ಚಿಂತನಶೀಲರಾಗಿ ವಿಹರಿಸುವುದು ಸಾಧ್ಯವಾಗಬೇಕು.
ಸೌಜನ್ಯ: ಮೈಸೂರು ಆಕಾಶವಾಣಿ

ಇದನ್ನು ೨೦೧೧ರ ಫಬ್ರುವರಿಯಲ್ಲಿ ಮೈಸೂರು ಆಕಾಶವಾಣಿಗಾಗಿ ಬರೆದಿದ್ದೆ. ಈಗ ಪೆಟ್ರೋಲಿನ ಬೆಲೆ ಜಿಗಿದಿರುವುದರಿಂದ ಹಲವರಾದರೂ ಸೈಕಲ್ ಬಳಸುವ ಕಡೆ ಮನಸ್ಸುಮಾಡಬಹುದು. ಅಮೆರಿಕದಲ್ಲಿ ಸೈಕಲ್ ಅನ್ನು ಬಾಡಿಗೆಗೆ ಕೊಡುವ ಪದ್ಧತಿ ಮತ್ತೆ ಆರಂಭವಾಗಿರುವುದಾಗಿ ಶ್ರೀವತ್ಸ ಜೋಶಿ ಅವರು ತಿಳಿಸಿರುವುದು ಸಂತೋಷದ ಸಂಗತಿ.ಕಾರಣ ಯಾವುದಾದರೂ ಸೈಕಲ್ ಬಳಕೆ ಹೆಚ್ಚುವುದು ಸ್ವಾಗತಾರ್ಹ.

Post a comment or leave a trackback: Trackback URL.

ಟಿಪ್ಪಣಿಗಳು

 • ಅಶೋಕವರ್ಧನ ಜಿ.ಎನ್  On ಮೇ 16, 2011 at 6:48 ಫೂರ್ವಾಹ್ನ

  ನಮಗೆಲ್ಲಾ ಚಡ್ಡಿ ಹಾಕುವ ಪ್ರಾಯದಲ್ಲಿ ಪ್ಯಾಂಟ್ ಬಯಕೆ ಇತ್ತು. ಈಚೆಗೆ ತೀರಾ ಪುಟ್ಟ ಮಕ್ಕಳಿಗೂ ಪ್ಯಾಂಟ್ ನಿತ್ಯಕ್ಕೆ ಬಂದು ಚಡ್ಡಿ ಬಯಕೆ ಕಾಡುವುದಕ್ಕಿರಬೇಕು – ದೊಡ್ಡವರು ಚಡ್ಡಿಯಲ್ಲಿ ಮೆರೆಯುವುದು ಹೆಚ್ಚುತ್ತಿದೆ! ಹೀಗೇ ಎಲ್ಲಾ ರಂಗಗಳಲ್ಲೂ ವಿಕಾಸದ ಮೆಟ್ಟಿಲುಗಳನ್ನು ಹಾರಿ ಮೇಲೆ ಬಂದವರು (ಉದಾ: ಸವಾರಿಯಲ್ಲಿ – ಒಂದು ಚಕ್ರದ ನೂಕು ಗಾಡಿ, ಮೂರುಚಕ್ರ, ಸೈಕಲ್, ಮೋಟಾರ್ ದ್ವಿಚಕ್ರಿ ಮತ್ತೆ ಚತುಷ್ಚಕ್ರಿ) ಸಣ್ಣವಕ್ಕೆ, ಸರಳವಾದವಕ್ಕೆ ಹಪಹಪಿಸುವುದನ್ನು, ಹೊರಳುವುದನ್ನು ಕಂಡಂತೆಯೇ ಇದೆ ಇಂದಿನ ಸೈಕಲ್ ಪ್ರೀತಿ. ಆದರೆ ಸೈಕಲ್ಲಿನ ಬಹೂಪಯೋಗೀ ಆವಶ್ಯಕತೆ ಮಾತ್ರ (ಅಂಚೆಯಣ್ಣ, ಪೇಪರಿನ ಹುಡುಗರು, ಮನೆಮನೆಗೆ ಗ್ಯಾಸ್ ಒದಗಿಸುವವರು, ಅಗಲದ ಬುಟ್ಟಿ ಕಟ್ಟಿ ತರಕಾರಿ ಹೂ ಮಾರುವವರು, ಕೊಡಪಾನ ನೇತು ಹಾಕಿ ದೂರದ ನೀರು, ಹಾಲು ತರುವವರು, ಬಾರಿನ ಮಧ್ಯೆ ಸೌದೆ ತುಂಬಿ ಸಾಗಿಸುವವರು, ಎಳನೀರ ಗೊನೆ ಗೊನೆ ಹೇರಿ ಕ್ಯಾರಿಯರಿನಲ್ಲಿ ಕೂತು ಕಾಲಿನಲ್ಲಿ ನೆಲ ನೂಕುತ್ತಾ ಬರುವವರು, ಸೈಕಲ್ ರಿಕ್ಷಾದ ಹತ್ತೆಂಟು ಮಾದರಿಗಳು ಇತ್ಯಾದಿ) ಮರುಕಳಿಸಲಾರದು ಎಂದೇ ಕಾಣುತ್ತದೆ. ಏರುವ ಯಾಂತ್ರೀಕೃತ ವಾಹನ ಸಮ್ಮರ್ದ, ಬಿಗಡಾಯಿಸುವ ವೈಯಕ್ತಿಕ ಆರೋಗ್ಯ ಪರಿಸ್ಥಿತಿಗಳ ಮುನ್ನೆಲೆಯಲ್ಲಿ ಕನಿಷ್ಠ ಸಂಚಾರ ಸೌಲಭ್ಯಕ್ಕಾದರೂ ನಡಿಗೆ, ಸೈಕಲ್ ಬರುವುದು ದಿನದ ತುರ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕುರಿತು ಹೆಚ್ಚಿನ ನನ್ನ ಲಹರಿಗೆ ಇಲ್ಲಿಗೆ ಭೇಟಿ ಕೊಡಲೂಬಹುದು: http://athree.wordpress.com/2010/12/10/10dec2010/#more-593
  ಅಶೋಕವರ್ಧನ

 • panditaputa  On ಮೇ 16, 2011 at 8:59 ಫೂರ್ವಾಹ್ನ

  ನೀವು ಹೇಳುವುದು ನಿಜ.
  ಸಂಚಾರೇತರ ಬಳಕೆಗೆ ಹಿಂದಿನಂತೆ ಸೈಕಲ್ ಅವಲಂಬಿಸಲು ಸಾಧ್ಯವಿಲ್ಲ.
  ವೈಯಕ್ತಿಕ ಸಂಚಾರಕ್ಕೆ ಅದು ಇನ್ನೂ ಉಪಯುಕ್ತವೆ.
  ಪಂಡಿತಾರಾಧ್ಯ

 • ಪಂಡಿತರೆ,
  ಚೆನ್ನಾಗಿ ಒಳ್ಳೆ ಪಂಡಿತರ ತರಹವೇ ಬರೆದಿದ್ದೀರಿ.
  ಧನ್ಯವಾದಗಳು ಸ್ವಾಮಿ, ತಮಗೆ.

 • ಪಂಡಿತಾರಾಧ್ಯ  On ಮೇ 17, 2011 at 6:35 ಅಪರಾಹ್ನ

  ನಿಮಗೂ ಧನ್ಯವಾದಗಳು

 • ಗೋವಿಂದ ನೇಲ್ಯಾರು  On ಮೇ 19, 2011 at 8:07 ಅಪರಾಹ್ನ

  ನಮ್ಮ ಜೀವನದಲ್ಲಿ ನೀವು ಬರೆದಿರುವ ಈ ವಾಕ್ಯಗಳು ನಿರ್ಣಾಯಕ ಅನಿಸುತ್ತದೆ- ಎಲ್ಲಕ್ಕಿಂತ ಮುಖ್ಯವಾಗಿ ವ್ಯಾಯಾಮವಿಲ್ಲದೆ ನಮ್ಮ ದೇಹವೇ ನಮಗೆ ಭಾರವೆನಿಸತೊಡಗುತ್ತದೆ – ಅನಂತರ ಸೈಕಲು ತುಳಿಯಲು ಚೈತನ್ಯ ಸಾಲದೆನ್ನುವ ಹಾಗೂ ಕಷ್ಟ ಅನಿಸುವುದು ನಮಗೆ ಪೆಟ್ರೊಲ್ ಚಟ ಅಂಟಿಸುತ್ತದೆ.

  ಸಮೀಪ ಪ್ರಯಾಣಕ್ಕೆ ಖಂಡಿತ ಉಪಯುಕ್ತ. ವಿದ್ಯುತ್ ಸಹಾಯಕ ಇರುವ ಮೂರು ಚಕ್ರದ ಸೈಕಲನ್ನು ನಾನು ದಿನಕ್ಕೆ ನೂರು ಕಿಮಿ ವರೆಗಿನ ಪ್ರಯಾಣಗಳಿಗೆ ಬಳಸುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: