ಮಾಯಾ
ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು
ಕನ್ನಡ ಮಾಧ್ಯಮದಲ್ಲಿ ನಾನು ೧೦ನೇ ತರಗತಿ ಮುಗಿಸಿದ ೧೦ ವರ್ಷಗಳ ಬಳಿಕ, ಸರಕಾರವು ಪ್ರಾಥಮಿಕ ಶಿಕ್ಷಣ ಮಾಧ್ಯಮದ ಬಗ್ಗೆ ಚಿಂತಿಸುತ್ತಿರುವ ಸಂದರ್ಭದಲ್ಲಿ ಈ ೧೦ ವರ್ಷಗಳ ಅನುಭವವನ್ನು ಸಮಾಜದ ಮುಂದಿಡಲು ಬಯಸುತ್ತೇನೆ.
೧೦ ವರ್ಷಗಳ ಹಿಂದೆ ಶಿಕ್ಷಣ ಮಾಧ್ಯಮದ ಬಗ್ಗೆ ಅವಲೋಕಿಸುವ ಯೋಚನಾಶಕ್ತಿ ನನ್ನ ಒಳಗಿತ್ತೆಂದು ಹೇಳಲಾಗದು. ಪದವಿಪೂರ್ವ ಹಂತವನ್ನು ಪ್ರವೇಶಿಸುವಾಗ ಇದ್ದುದು ಛಲವೊಂದೇ. ಕನ್ನಡ ಮಾಧ್ಯಮ ತೊಡಕಾಗದೆಂಬ ಧೈರ್ಯವೊಂದೇ… ಆ ಧೈರ್ಯವು ಜಗತ್ತನ್ನು ನಡೆಸುವ ಶಕ್ತಿಯ ಧನಾತ್ಮಕ ಪ್ರತಿಕ್ರಿಯೆಯೊಂದಿಗೆ ನನ್ನನ್ನಿಂದು ಭಾರತದ ಪ್ರಮುಖ ವಿಜ್ಞಾನ ವಿದ್ಯಾಲಯವೊಂದರಲ್ಲಿ ನಿಲ್ಲಿಸಿದೆ. ಜೀವನದ ಗುರಿಯ ಬಗ್ಗೆ ಶಿಕ್ಷಣದ ಬಗ್ಗೆ ಚಿಂತಿಸುವ ಅವಕಾಶ ನೀಡಿದೆ. ಅಂದು ಪಡೆದ ಪ್ರಾಥಮಿಕ ಶಿಕ್ಷಣವನ್ನು ಅವಲೋಕಿಸಿದರೆ, ನಾವು ಕಲಿತ ಶಾಲೆಯಲ್ಲಿ ವಿಜ್ಞಾನ, ಗಣಿತಗಳನ್ನು ಅರ್ಥವಾಗುವಂತೆ ಹೇಳಿಕೊಡುವ ಶಿಕ್ಷಕಿಯರಿದ್ದರು. ಭಾಷೆಗಳನ್ನು ಅವುಗಳ ಸ್ವರೂಪ ತಿಳಿಯುವಂತೆ ಬೋಧಿಸುವ ಶಿಕ್ಷಕಿಯರೂ ಇದ್ದರು. ಅಂದು ನಮ್ಮ ಗುರಿ ಅಂಕಗಳಿಸುವುದೊಂದೇ ಆಗಿದ್ದರೂ ಅಲ್ಲಿ ಅರಿತ ಪ್ರಾಥಮಿಕ ಜ್ಞಾನವೂ(basics) ವಿಷಯವನ್ನು ತಿಳಿಯುವ, ಕಲಿಯುವ ಪ್ರವೃತ್ತಿಯೂ ಮುಂದಿನ ಹಂತಗಳಲ್ಲಿ ಸಹಕಾರಿಯಾಗಿತ್ತು. ಅದರಿಂದ ಪದವಿಪೂರ್ವಕ್ಕೆ ಕಾಲಿಟ್ಟಾಗ ಮಾಧ್ಯಮ ತೊಡಕೆನಿಸಲಿಲ್ಲ.
ಮುಂದಿನ ಹತ್ತು ವರ್ಷಗಳ ಜೀವನದ ಅವಲೋಕನ, ವೀಕ್ಷಣೆಗಳಿಂದ ಹೀಗೆ ಅನ್ನಿಸುತ್ತಿದೆ. ಪದವಿಪೂರ್ವಕ್ಕೆ ಕಾಲಿಡುವ ವಯಸ್ಸಿನಲ್ಲಿ, ವಿಷಯಾನೇಕಗಳನ್ನು ತಿಳಿದು ಬೆಳೆಯುವ ದಿನಗಳಲ್ಲಿ ಕೇವಲ ಭಾಷಾಮಾಧ್ಯಮದ ಬದಲಾವಣೆ ಅಷ್ಟೊಂದು ದೊಡ್ಡ ಅಡ್ಡಿಯಾಗಿ ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸಬಹುದೆಂಬ ವಾದ ಸರಿಯಲ್ಲ. ಪದವಿಪೂರ್ವ ಮತ್ತು ಮುಂದಿನ ಶಿಕ್ಷಣ ಹಂತಗಳಲ್ಲಿ ಅನೇಕರು ಕಷ್ಟಪಡುವುದು ಸರಿ. ಅದಕ್ಕೆ ಕಾರಣಗಳು ಹಲವಾರು. ವಿಜ್ಞಾನ ವಿದ್ಯಾರ್ಥಿನಿಯಾದ ನನಗೆ ಅನ್ನಿಸುವಂತೆ ಈ ಕಾರಣಗಳು ಮಾಧ್ಯಮದ ಬದಲಾವಣೆಗಳನ್ನು ಮೀರಿದವು. ನಮ್ಮ ಶಾಲಾ ದಿನಗಳಲ್ಲಿ ೧೦ನೆಯ ತರಗತಿಯವರೆಗೆ ಇದ್ದ ವಿಷಯಗಳ ಪ್ರಮಾಣ ಮತ್ತು ಆಳ ಪದವಿಪೂರ್ವದ ವಿಜ್ಞಾನಕ್ಕೆ ಹೋಲಿಸಿದರೆ ತುಂಬ ಕಡಿಮೆಯಾಗಿತ್ತು. ಪ್ರೌಢಶಾಲೆಯಲ್ಲಿ ಪಠ್ಯವೊಂದನ್ನೇ ಉರುಹೊಡೆದು ಅಂಕಗಳಿಸಲು ಸಾಧ್ಯವಿದ್ದರೆ ೧೨ನೇ ತರಗತಿಯಲ್ಲಿ, ಅದೂ ಪ್ರವೇಶ ಪರೀಕ್ಷೆಗಳಲ್ಲಿ, ಅರ್ಥೈಸದೆ ಬಾಯಿಪಾಠಮಾಡುವ, ಅಪೂರ್ಣವಾಗಿ ವಿಷಯಗಳನ್ನು ತಿಳಿಯುವ ಪ್ರವೃತ್ತಿ ಗೆಲುವನ್ನು ತರಲಾರದಾಗಿತ್ತು. ಅರ್ಥೈಸುವಿಕೆ (understanding) ಮತ್ತು ಸಮಸ್ಯೆಗಳಿಗೆ ವಿಷಯಗಳನ್ನು ಅನ್ವಯಿಸುವ ಕೌಶಲ(application to the problem) ಈ ಪರೀಕ್ಷೆಗಳನ್ನು ಎದುರಿಸಲು ಅನಿವಾರ್ಯವಾಗಿದ್ದವು. ಈ ಪ್ರವೃತ್ತಿಗಳು ಸ್ವಂತವಾಗಿ ಕಲಿಯುವುದು, ತಿಳಿದುಕೊಳ್ಳುವ ಹಂಬಲಗಳೊಂದಿಗೆ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೂ ಅನಿವಾರ್ಯ. ಶಿಕ್ಷಣ ನನಗೆಂದೂ ಹೊರೆಯಾಗದಿರಲು ಕಾರಣ ನನಗೆ ಅಂದಿನಿಂದಿಂದಿನವರೆಗೆ ಕಲಿಸಿದ ಶಿಕ್ಷಕರ ಉತ್ತಮ ಬೋಧನಾ ವಿಧಾನ. ನನಗನ್ನಿಸುವಂತೆ ನಮಗಿಂದು ಬೇಕಾಗಿರುವುದು ಶಿಕ್ಷಣ ಕ್ರಮದ ಬದಲಾವಣೆಯಲ್ಲದೆ ಮಾಧ್ಯಮದ ಬದಲಾವಣೆಯಲ್ಲ. ಆಂಗ್ಲಭಾಷೆಗೆ, ಇತರ ವಿಷಯಗಳಿಗೆ ಉತ್ತಮ ಶಿಕ್ಷಕರನ್ನು ಅಣಿಗೊಳಿಸುವ ಬದಲು ಕನ್ನಡ ಮಾಧ್ಯಮದ ಮೂಲೋತ್ಪಾಟನೆ ಹೇಗೆ ಸಹಕಾರಿಯಾದೀತೊ ತಿಳಿಯುತ್ತಿಲ್ಲ. ವಿಷಯಗಳನ್ನು ಕನ್ನಡದಲ್ಲಿ ಸರಿಯಾಗಿ ಅರ್ಥೈಸಿದಲ್ಲಿ ಆಂಗ್ಲಭಾಷೆಯನ್ನು ಪ್ರೌಢಶಾಲಾ ಹಂತದಲ್ಲಿ ಸರಿಯಾಗಿ ತಿಳಿದಲ್ಲಿ ವಿದ್ಯಾರ್ಥಿಗಳನ್ನು ಮಾಧ್ಯಮ ಬದಲಾವಣೆಯೊಂದೇ ಹೇಗೆ ಕಷ್ಟಪಡಿಸೀತು? ಕನ್ನಡದಲ್ಲೇ ಅರ್ಥವಾಗದ ಪ್ರಾಥಮಿಕ ಜ್ಞಾನವನ್ನು ಆಂಗ್ಲ ಭಾಷೆಯ ಸಂಪರ್ಕವೇ ಇಲ್ಲದ ಹಳ್ಳಿಗಳಲ್ಲಿ ಬೋಧಿಸತೊಡಗಿದರೆ, ಈ ಹಂತದಲ್ಲೇ ವಿದ್ಯಾರ್ಥಿಗಳಿಗೆ ಅರ್ಥವಾಗದಿದ್ದರೆ, ಅವರು ಮುಂದುವರೆಯುವುದಾದರೂ ಹೇಗೆ?
ಆಂಗ್ಲಮಾಧ್ಯಮದಲ್ಲಿ ಕಲಿತವರೆಲ್ಲ ಉತ್ತಮ ಹುದ್ದೆಗಳಿಗೇರುವರೆಂಬ ವಾದವೂ ಸರಿಯಲ್ಲ. ಈ ಉತ್ತಮ ಹುದ್ದೆಗಳೇ ದೇಶದ ಅಭಿವೃದ್ಧಿಗೆ ಕಾರಣವೆನ್ನುವ ವಾದವೂ ಸರಿಯಲ್ಲ. ಯಾವುದಾದರೊಂದು ಕಂಪನಿ ಸೇರಿ ಧನ, ಕೀರ್ತಿ ಗಳಿಸುವ ಹುಚ್ಚಿನಲ್ಲಿ ಉತ್ತಮ ವಿದ್ಯಾರ್ಥಿಗಳೆಲ್ಲರೂ ಶಿಕ್ಷಣ, ವೈದ್ಯಕೀಯಗಳಂಥ ಸೇವಾಧಾರಿತ ಕ್ಷೇತ್ರಗಳನ್ನು ಪ್ರವೇಶಿಸದಿರುವುದೂ ಶಿಕ್ಷಣ ಮೌಲ್ಯಗಳ ಅವನತಿಗೆ ಕಾರಣವಾಗಬಲ್ಲುದು. ಇಂದಿನ ಶೀಕ್ಷಣ ಕ್ಷೇತ್ರದ ಅನೇಕ ಘಟನೆಗಳನ್ನು ಕಂಡರೆ ಶಿಕ್ಷಣದ ಗುರಿ ಕೇವಲ ಗಳಿಕೆಯೇ, ಪರಸ್ಪರ ಸಹಕಾರ, ಸಮಾಜಕ್ಕೆ ಸೇವೆ, ದೇಶದ ಋಣ ತೀರಿಸುವ ಮನೋಭಾವಗಳೇ ಬೇಕಿಲ್ಲವೆ ಅನ್ನಿಸುವುದು. ಕೋಟ್ಯಂತರ ರೂಪಾಯಿಗಳನ್ನು ಪಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳೂ, ಆರ್ಥಿಕ ಬೆಳವಣಿಗೆ ತಮ್ಮದೇ ಸೊತ್ತೆನ್ನುವ ಕಂಪನಿಗಳೂ ತಮ್ಮ ವಿದ್ಯಾರ್ಥಿ/ಉದ್ಯೋಗಿಗಳನ್ನು ಪ್ರಾಥಮಿಕ ಶಿಕ್ಷಣದ ಉನ್ನತಿಗೆ ಸ್ವಲ್ಪವಾದರೂ ಬಳಸಿದರೆ(ಗಳಿಕೆಯನ್ನು ಮಾತ್ರವಲ್ಲ, ಸೇವೆಯನ್ನೂ) ಆರ್ಥಿಕತೆಯೊಂದಿಗೆ ಶಿಕ್ಷಣದ ಉದ್ದೇಶವೂ ಬೆಳೆಯುವುದು. ಇಂತಹ ಬದಲಾವಣೆಗಳಿಗೆ ಸರಕಾರದ ಪ್ರಯತ್ನ ಸಾಕೆ? ಜನಸಾಮಾನ್ಯರ, ಅದರಲ್ಲೂ ಆರ್ಥಿಕವಾಗಿ ಸಬಲರ ಸಹಕಾರ ಅಗತ್ಯವಲ್ಲವೆ?
ಮತ್ತೆ, ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳು. ಇಲ್ಲದವರಿಗೆ ಕನ್ನಡ ಮಾಧ್ಯಮವೆಂಬ ಮಿಥ್ಯಾಪವಾದವು ಯಾರಿಂದ ಸೃಷ್ಟಿಯಾಯಿತು ಮತ್ತು ಯಾಕಾಗಿ? ಇಲ್ಲವದರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದು ಅಸಾಧ್ಯವಾದಲ್ಲಿ ಉಳ್ಳವರಿಗೆ ಕನ್ನಡದಲ್ಲಿ ಕಲಿಯಲು ಏಕೆ ಸಾಧ್ಯವಾಗದು? ಕನ್ನಡ ಮಾಧ್ಯಮಕ್ಕೆ ಕಳುಹಿಸದಿದ್ದರೆ ಬೇಡ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುವುದನ್ನಾದರೂ ನಿಲ್ಲಿಸಲಿ. ನಾನು ಶಾಲೆಯಲ್ಲಿದ್ದ ವರ್ಷಗಳಲ್ಲಿ ನನ್ನೂರಿನಲ್ಲಿ ಬಹುತೇಕ ಕಾಲೇಜು ಶಿಕ್ಷಕರ ಮಕ್ಕಳು ಕನಿಷ್ಠ ಐದು ವರ್ಷವಾದರೂ ಕನ್ನಡದಲ್ಲಿ ಓದುತ್ತಿದ್ದರು. ನಾನು ಕಲಿತ ಶಾಲೆ ಕಾನ್ವೆಂಟ್ ಶಾಲೆಯಾಗಿದ್ದರೂ ಅಲ್ಲಿನ ಯಾವ ಶಿಕ್ಷಕಿಯರೂ, ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿಯರೂ ಕನ್ನಡ ಮಾಧ್ಯಮದವರೆಂದು ನಮ್ಮನ್ನು ಹೀನೈಸಿದುದು ನೆನಪಿಲ್ಲ. ನಾನು ಕಲಿತ ಪದವಿಪೂರ್ವ ಕಾಲೇಜಿನಶಿಕ್ಷಕರಿಗೂ ಇದು ಅನ್ವಯಿಸುತ್ತದೆ. ಕನಿಷ್ಠ ಈ ಮನೋಭಾವವನ್ನಾದರೂ ಬೆಳಸಿಕೊಳ್ಳಲಿ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೂ, ಅವರ ಹೆತ್ತವರೂ, ಇಂದು ಆಂಗ್ಲ ಮಾಧ್ಯಮದ ದುಬಾರಿ ಶಾಲೆಗಳಿಗೆ ಕಳುಹಿಸಲು ಸಂಪತ್ತಿನ ತೋರಿಕೆ, ಮುಂದೆ ಕಷ್ಟವಾಗುವುದೆನ್ನುವುದು ಮಾತ್ರ ಕಾರಣಗಳಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸವಲತ್ತು, ಉತ್ತಮ ಶಿಕ್ಷಣ ಕ್ರಮಗಳಿಲ್ಲದಿರುವುದೂ ಕಾರಣವೆಂಬುದು ನನಗೆ ಇತ್ತೀಚೆಗೆ ಕೇಳಿಸಿದ ಅಭಿಪ್ರಾಯ. ಈ ವಿಷಯದ ಬಗ್ಗೆ ಇದರ ಪರಿಹಾರದ ಬಗ್ಗೆ ಚಿಂತಿಸುವುದು ಇಂದು ಅಗತ್ಯವೆನ್ನುವುದು ನನ್ನ ಭಾವನೆ.
ಮಾನವ ಜೀವನಕ್ಕೆ ಅನೇಕ ಪರಿಕರಗಳನ್ನು ತಂತ್ರಜ್ಞಾನಗಳನ್ನು (ಐಟಿಯೊಂದೇ ಅಲ್ಲ) ಒದಗಿಸುವ, ನಮಗಿಂತ ಬಹಳ ಮುಂದುವರೆದಿರುವ ಫ್ರಾನ್ಸ್, ಜರ್ಮನಿ ಮತ್ತಿತರ ಯೂರೋಪಿಯನ್ ಸಮುದಾಯದ ದೇಶಗಳಲ್ಲಿ ಸ್ನಾತಕೋತ್ತರ ಹಂತಗಳಲ್ಲೂ ವಿಜ್ಞಾನವನ್ನು ಅವರವರ ಭಾಷೆಗಳಲ್ಲಿ ಕಲಿಯುವರು. ಬಹುತೇಕ ಜನರು ಆಂಗ್ಲ ಭಾಷೆಯನ್ನು ಕೇವಲ ಭಾಷೆಯಾಗಿ ಮಾತ್ರ ಚೊಕ್ಕವಾಗಿ ಕಲಿಯುವ ಜಪಾನ್, ಯೂರೋಪಿಯನ್ ರಾಷ್ಟ್ರಗಳು ಮುಂದುವರಿದಿಲ್ಲವೆ? ಇಂದು ಯೋರೋಪಿಗೆ ತೆರಳುವ ಅನೇಕ ಭಾರತೀಯ ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆಯೆಂದರೆ ಇಪ್ಪತ್ತಕ್ಕೂ ಮೀರಿದ ರಾಷ್ಟ್ರೀಯ ಭಾಷೆಗಳಿರುವ ನೀವು ಪರಸ್ಪರ ಸಂಭಾಷಿಸಲು ಇಂಗ್ಲಿಷನ್ನು ಏಕೆ ಬಳಸುತ್ತೀರಿ? ಈ ಪ್ರಶ್ನೆ ನನ್ನಲ್ಲಿನ ಇತರ ಎಲ್ಲ ಪ್ರಶ್ನೆಗಳ ಸ್ಥಾನವನ್ನಾಕ್ರಮಿಸಿ ನಮ್ಮಲ್ಲಿ ಸ್ವಾಭಿಮಾನ ಇನ್ನೂ ಬೆಳದಿಲ್ಲವೆ ಎಂಬ ದುಃಖದ ಛಾಯೆಯನ್ನು ಮೂಡಿಸುತ್ತದೆ.
ಕೊನೆಯದಾಗಿ, ಕಳೆದ ದಶಮಾನದಲ್ಲಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಓದಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯಗಳಲ್ಲಿ (ಬಹುರಾಷ್ಟ್ರೀಯ ಕಂಪನಿಗಳನ್ನೂ ಸೇರಿಸಿ) ಸೇವೆ ಸಲ್ಲಿಸಿ ಸಂತೃಪ್ತರಾಗಿರುವ ಅನೇಕರನ್ನು ನಾನು ಬಲ್ಲೆ. ನನ್ನ ಪ್ರಾಚಾರ್ಯರು (ಅವರು ಸಂಶೋಧನಾ ಕ್ಷೇತ್ರದಲ್ಲಿ ಇಲ್ಲೂ, ವಿದೇಶಗಳಲ್ಲೂ ಅನುಭವವಿರುವವರು) ಇಂದು ನನಗಂದ ಮಾತು, Your technical English is good as compared to many other students. ಈ many other students ಗಳಲ್ಲಿ ಆಂಗ್ಲ ಮಾಧ್ಯದಲ್ಲಿ CBSE ಯಂತಹ ಪಠ್ಯಕ್ರಮದಲ್ಲಿ ಓದಿದವರೂ ಇರುವರೆಂದು ಬೇರೆ ಹೇಳಬೇಕಾಗಿಲ್ಲ. ಹತ್ತು ವರ್ಷಗಳ ಹಿಂದೆ ಕಷ್ಟವಾದೀತು ಎಂದು ಕನಿಕರ ತೋರಿದ ಅನೇಕರು ಇಂದು ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾಗಿದ್ದೆನೆಂಬುದನ್ನು ಮರೆತಿರುವರು(?)! ಪದವಿಪೂರ್ವ ಮತ್ತು ಅನಂತರದ ಹಂತಗಳಲ್ಲಿ ದುಬಾರಿ ಕೋಚಿಂಗ್ ಗಳನ್ನು ಪಡೆದೂ ಅವರಲ್ಲಿ ಅನೇಕರು ತಮಗೆ ಬೇಕಿದ್ದಲ್ಲಿಗೆ ತಲುಪಲು ಸಫಲರಾಗಿಲ್ಲ. ಈ ಎಲ್ಲ ಉದಾಹರಣೆಗಳಿಂದ ಮಾಧ್ಯಮ ಮುಖ್ಯವಲ್ಲ ಉತ್ತಮ ಶಿಕ್ಷಣಕ್ರಮ ಮುಖ್ಯ ಎನ್ನುವುದು ನನಗಂತೂ ಸ್ಪಷ್ಟವಾಗಿದೆ. ಅದೇನೇ ಇರಲಿ, ಈ ಹತ್ತು ವರ್ಷಗಳ ಅನುಭವಗಳು ನನಗೆ ಬಹಳ ಧೈರ್ಯವನ್ನು ನೀಡಿವೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೆ ಸುಲಭದಲ್ಲಿ ಮುಗಿಯುತ್ತಿತ್ತು. ಹೆಚ್ಚು ತಿಳಿಯುತ್ತಿತ್ತು. ಐಟಿ ಕಂಪನಿ ಏಕೆ ಸೇರಲಿಲ್ಲ, ಮುಂದೆ ನಿನ್ನ ಊರಿನಲ್ಲಿ ನೆಲಸಿ ಶಿಕ್ಷಕಿಯಾದರೆ ಬಹಳ ಉತ್ತಮ ಅವಕಾಶಗಳು ತಪ್ಪಿಹೋಗುವುವು ಎಂಬೆಲ್ಲ ವಾದಗಳು ಇಂದು ನನ್ನ ಮನಸನ್ನೇ ನಾಟಲಾರವು!
ಏಕೆಂದರೆ ಇದೇ ರೀತಿಯ ಜನಗಳು ಅಂದಿದ್ದರು ಹತ್ತು ವರ್ಷಗಳ ಹಿಂದೆ-
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಷ್ಟವಾಗುವುದು ಮುಂದೆ!!
ಸೌಜನ್ಯ ಉದಯವಾಣಿ ಮಣಿಪಾಲ ೩೦-೭-೨೦೧೧