ರಾಜ್ಯದಲ್ಲಿ ಹಲವು ಕಡೆ ಆಚರಣೆಲ್ಲಿರುವ ಕುಖ್ಯಾತ ಮಡೆಸ್ನಾನವನ್ನು ನಿಲ್ಲಿಸಬೇಕೆಂದು ಪ್ರಗತಿಪರ ಚಿಂತಕರು ಒತ್ತಾಯಿಸುತ್ತ ಬಂದಿದ್ದರೂ ಸರಕಾರ ನಿರ್ಧಾರ ಕೈಗೊಂಡಿಲ್ಲ. ಈ ಬಾರಿ ಸುಬ್ರಹ್ಮಣ್ಯದ ಮಡೆಸ್ನಾನದ ವಿರುದ್ಧ ದನಿ ಎತ್ತಿದ ಪ್ರಗತಿಪರರ ಮೇಲೆ ಪಟ್ಟಭದ್ರ ಶಕ್ತಿಗಳು ಆಕ್ರಮಣ ಮಾಡಿದಾಗಲೂ ಸರಕಾರ ಇತ್ಯಾತ್ಮಕವಾಗಿ ಸ್ಪಂದಿಸಿಲ್ಲ. ಪೇಜಾವರದ ಶ್ರೀ ವಿಶ್ವೇಶತೀರ್ಥರು ಅದು ನಂಬಿಕೆಯ ವಿಷಯವೆಂದೂ ಪರಂಪರೆಯ ಆಚರಣೆಯೆಂದೂ ಅದನ್ನು ನಿಷೇಧಿಸಲು ಮುಂದಾಗದಿದ್ದಾಗ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲರು ಮಡೆಸ್ನಾನ ಕುರಿತ ಸಂವಾದ ಏರ್ಪಡಿಸಿ ಸಮಾನ ಮನಸ್ಕ ಮಠಾಧಿಪತಿಗಳು ಮತ್ತು ವಿಚಾರವಂತರೊಂದಿಗೆ ಸಂವಾದದಲ್ಲಿ ಭಾಗವಹಿಸುವಂತೆ ಶ್ರೀ ವಿಶ್ವೇಶತೀರ್ಥರನ್ನು ಆಹ್ವಾನಿಸಿದರು. ಇದೇ ಶನಿವಾರ ೭ರಂದು ನಡೆದ ಆ ಸಭೆಯಲ್ಲಿ ಶ್ರೀ ವಿಶ್ವೇಶತೀರ್ಥರು ಭಾಗವಹಿಸಲಿಲ್ಲ. ಇತರ ಹಿಂದುಳಿದ ವರ್ಗಗಳ ವಿವಿಧ ಮಠಾಧಿಪತಿಗಳು ಸೇರಿ ಮಡೆಸ್ನಾನವನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಭಾನುವಾರ ೮ರಂದು ನಡೆದ ಮತ್ತೊಂದು ಸಭೆಯಲ್ಲಿ ಪೇಜಾವರದ ಶ್ರೀ ವಿಶ್ವೇಶತೀರ್ಥರು ತಾವು ಮಡೆಸ್ನಾನವನ್ನು ಸಮರ್ಥಿಸಿಲ್ಲವೆಂದೂ ಅದು ಹಿಂದೂ ಸಂಪ್ರದಾಯದ ಭಾಗವಾಗಿ ಉಳಿಯಬೇಕಿಲ್ಲವೆಂದೂ ಹೇಳಿದ್ದಾರೆ. ಇದಕ್ಕೆ ಮುನ್ನ ಶ್ರೀ ವೀರಭದ್ರ ಚನ್ನಮಲ್ಲರು ಮಾತನಾಡಿ ಪೇಜಾವರರ ಬಗ್ಗೆ ತಮಗೆ ಅಪಾರ ಗೌರವವಿರುವುದಾಗಿಯೂ ಅವರು, ವರ್ಷದಲ್ಲಿ ಒಂದು ದಿನ ಅಷ್ಟಮಠಗಳಲ್ಲಿ ಸಮಾಜದ ಎಲ್ಲ ವರ್ಗಗಳವರಿಗೆ ಪೂಜೆ ಸಲ್ಲಿಸಲು ಅವಕಾಶ- ಮೊದಲಾದ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ ತಾವು ಅವರ ಶಿಷ್ಯವೃತ್ತಿ ಸ್ವೀಕರಿಸುವುದಾಗಿಯೂ ಹೇಳಿದರೆಂದು ವರದಿಯಾಗಿದೆ.
ಸಂವಿಧಾನ ಮತ್ತು ಪರಂಪರೆಗಳಲ್ಲಿ ತಾವು ಪರಂಪರೆಯನ್ನು ಹೆಚ್ಚು ಗೌರವಿಸುವವರು ಎಂದು ಹೇಳಿರುವ ಶ್ರೀ ವಿಶ್ವೇಶತೀರ್ಥರ ಎದುರು ಪ್ರಗತಿಪರರೆಂದುಕೊಂಡವರು ಈ ರೀತಿ ಶರಣಾದುದನ್ನು ನೋಡಿ ಇದೇನು ಸಮಾನತೆಯ ನೆಲೆಯ ಅನುಸಂಧಾನವೊ ನೈಚ್ಯಾನುಸಂಧಾನವೊ ಎಂದು ಸಖೇದಾಶ್ಚರ್ಯವಾಯಿತು. ‘ಪ್ರಗತಿಪರ ಸ್ವಾಮೀಜಿ’ ಎನ್ನುವುದೇ ‘ಬಿಸಿಬಿಸಿ ಐಸ್ ಕ್ರೀಮ್’ ಎಂಬಂಥ ವಿರೋಧಾಭಾಸ. ಪರಂಪರೆ, ಆಚರಣೆಗಳು ಖಾಸಗೀ ನಂಬಿಕೆಗಳು. ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮಾತ್ರ ಪರಮೋಚ್ಚ. ಶ್ರೀ ವಿಶ್ವೇಶತೀರ್ಥರ ಶಿಷ್ಯರಾಗಲು ಶ್ರೀ ವೀರಭದ್ರ ಚನ್ನಮಲ್ಲರು ಹಾತೊರೆಯುವ ಬದಲು ರಾಷ್ಟ್ರಕವಿ ಕುವೆಂಪು ಅವರ ಕರೆಗೆ ಓಗೊಟ್ಟು, ‘ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬಂದು, ಮೌಢ್ಯತೆಯ ಮಾರಿಯನ್ನು ಹೊರದೂಡ’ಲಿ; ‘ಕೇವಲ ಮನುಷ್ಯ’ರಾಗಿ ಎಲ್ಲರ ಜೊತೆ ಸಮಾನ ಗೌರವದ ನೆಲೆಯಲ್ಲಿ ಅನುಸಂಧಾನ ಮಾಡಲಿ.
ಸಂವಿಧಾನ ಪರಮೋಚ್ಚ ಎಂದು ಒಪ್ಪದ ಸ್ವಾಮಿಗಳಿಗೆ ಪ್ರಗತಿಪರತೆಯ ಮುಖವಾಡದ ಅಗತ್ಯ ಇದೆ;
ಅಂಥವರ ಆಶ್ರಯದಲ್ಲಿ ವಿಚಾರವಾದವನ್ನು ಬೆಳೆಸುವ(?) ಅನಿವಾರ್ಯತೆ ವಿಚಾರವಾದಿಗಳಿಗೆ ಇಲ್ಲ.
ಡಾ ಪಂಡಿತಾರಾಧ್ಯ
ಜಿ.ಪಿ. ಬಸವರಾಜು