ರಾಜ್ಯದಲ್ಲಿ ಹಲವು ಕಡೆ ಆಚರಣೆಲ್ಲಿರುವ ಕುಖ್ಯಾತ ಮಡೆಸ್ನಾನವನ್ನು ನಿಲ್ಲಿಸಬೇಕೆಂದು ಪ್ರಗತಿಪರ ಚಿಂತಕರು ಒತ್ತಾಯಿಸುತ್ತ ಬಂದಿದ್ದರೂ ಸರಕಾರ ನಿರ್ಧಾರ ಕೈಗೊಂಡಿಲ್ಲ. ಈ ಬಾರಿ ಸುಬ್ರಹ್ಮಣ್ಯದ ಮಡೆಸ್ನಾನದ ವಿರುದ್ಧ ದನಿ ಎತ್ತಿದ ಪ್ರಗತಿಪರರ ಮೇಲೆ ಪಟ್ಟಭದ್ರ ಶಕ್ತಿಗಳು ಆಕ್ರಮಣ ಮಾಡಿದಾಗಲೂ ಸರಕಾರ ಇತ್ಯಾತ್ಮಕವಾಗಿ ಸ್ಪಂದಿಸಿಲ್ಲ. ಪೇಜಾವರದ ಶ್ರೀ ವಿಶ್ವೇಶತೀರ್ಥರು ಅದು ನಂಬಿಕೆಯ ವಿಷಯವೆಂದೂ ಪರಂಪರೆಯ ಆಚರಣೆಯೆಂದೂ ಅದನ್ನು ನಿಷೇಧಿಸಲು ಮುಂದಾಗದಿದ್ದಾಗ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲರು ಮಡೆಸ್ನಾನ ಕುರಿತ ಸಂವಾದ ಏರ್ಪಡಿಸಿ ಸಮಾನ ಮನಸ್ಕ ಮಠಾಧಿಪತಿಗಳು ಮತ್ತು ವಿಚಾರವಂತರೊಂದಿಗೆ ಸಂವಾದದಲ್ಲಿ ಭಾಗವಹಿಸುವಂತೆ ಶ್ರೀ ವಿಶ್ವೇಶತೀರ್ಥರನ್ನು ಆಹ್ವಾನಿಸಿದರು. ಇದೇ ಶನಿವಾರ ೭ರಂದು ನಡೆದ ಆ ಸಭೆಯಲ್ಲಿ ಶ್ರೀ ವಿಶ್ವೇಶತೀರ್ಥರು ಭಾಗವಹಿಸಲಿಲ್ಲ. ಇತರ ಹಿಂದುಳಿದ ವರ್ಗಗಳ ವಿವಿಧ ಮಠಾಧಿಪತಿಗಳು ಸೇರಿ ಮಡೆಸ್ನಾನವನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಭಾನುವಾರ ೮ರಂದು ನಡೆದ ಮತ್ತೊಂದು ಸಭೆಯಲ್ಲಿ ಪೇಜಾವರದ ಶ್ರೀ ವಿಶ್ವೇಶತೀರ್ಥರು ತಾವು ಮಡೆಸ್ನಾನವನ್ನು ಸಮರ್ಥಿಸಿಲ್ಲವೆಂದೂ ಅದು ಹಿಂದೂ ಸಂಪ್ರದಾಯದ ಭಾಗವಾಗಿ ಉಳಿಯಬೇಕಿಲ್ಲವೆಂದೂ ಹೇಳಿದ್ದಾರೆ. ಇದಕ್ಕೆ ಮುನ್ನ ಶ್ರೀ ವೀರಭದ್ರ ಚನ್ನಮಲ್ಲರು ಮಾತನಾಡಿ ಪೇಜಾವರರ ಬಗ್ಗೆ ತಮಗೆ ಅಪಾರ ಗೌರವವಿರುವುದಾಗಿಯೂ ಅವರು, ವರ್ಷದಲ್ಲಿ ಒಂದು ದಿನ ಅಷ್ಟಮಠಗಳಲ್ಲಿ ಸಮಾಜದ ಎಲ್ಲ ವರ್ಗಗಳವರಿಗೆ ಪೂಜೆ ಸಲ್ಲಿಸಲು ಅವಕಾಶ- ಮೊದಲಾದ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ ತಾವು ಅವರ ಶಿಷ್ಯವೃತ್ತಿ ಸ್ವೀಕರಿಸುವುದಾಗಿಯೂ ಹೇಳಿದರೆಂದು ವರದಿಯಾಗಿದೆ.
ಸಂವಿಧಾನ ಮತ್ತು ಪರಂಪರೆಗಳಲ್ಲಿ ತಾವು ಪರಂಪರೆಯನ್ನು ಹೆಚ್ಚು ಗೌರವಿಸುವವರು ಎಂದು ಹೇಳಿರುವ ಶ್ರೀ ವಿಶ್ವೇಶತೀರ್ಥರ ಎದುರು ಪ್ರಗತಿಪರರೆಂದುಕೊಂಡವರು ಈ ರೀತಿ ಶರಣಾದುದನ್ನು ನೋಡಿ ಇದೇನು ಸಮಾನತೆಯ ನೆಲೆಯ ಅನುಸಂಧಾನವೊ ನೈಚ್ಯಾನುಸಂಧಾನವೊ ಎಂದು ಸಖೇದಾಶ್ಚರ್ಯವಾಯಿತು. ‘ಪ್ರಗತಿಪರ ಸ್ವಾಮೀಜಿ’ ಎನ್ನುವುದೇ ‘ಬಿಸಿಬಿಸಿ ಐಸ್ ಕ್ರೀಮ್’ ಎಂಬಂಥ ವಿರೋಧಾಭಾಸ. ಪರಂಪರೆ, ಆಚರಣೆಗಳು ಖಾಸಗೀ ನಂಬಿಕೆಗಳು. ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮಾತ್ರ ಪರಮೋಚ್ಚ. ಶ್ರೀ ವಿಶ್ವೇಶತೀರ್ಥರ ಶಿಷ್ಯರಾಗಲು ಶ್ರೀ ವೀರಭದ್ರ ಚನ್ನಮಲ್ಲರು ಹಾತೊರೆಯುವ ಬದಲು ರಾಷ್ಟ್ರಕವಿ ಕುವೆಂಪು ಅವರ ಕರೆಗೆ ಓಗೊಟ್ಟು, ‘ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬಂದು, ಮೌಢ್ಯತೆಯ ಮಾರಿಯನ್ನು ಹೊರದೂಡ’ಲಿ; ‘ಕೇವಲ ಮನುಷ್ಯ’ರಾಗಿ ಎಲ್ಲರ ಜೊತೆ ಸಮಾನ ಗೌರವದ ನೆಲೆಯಲ್ಲಿ ಅನುಸಂಧಾನ ಮಾಡಲಿ.
ಸಂವಿಧಾನ ಪರಮೋಚ್ಚ ಎಂದು ಒಪ್ಪದ ಸ್ವಾಮಿಗಳಿಗೆ ಪ್ರಗತಿಪರತೆಯ ಮುಖವಾಡದ ಅಗತ್ಯ ಇದೆ;
ಅಂಥವರ ಆಶ್ರಯದಲ್ಲಿ ವಿಚಾರವಾದವನ್ನು ಬೆಳೆಸುವ(?) ಅನಿವಾರ್ಯತೆ ವಿಚಾರವಾದಿಗಳಿಗೆ ಇಲ್ಲ.
ಡಾ ಪಂಡಿತಾರಾಧ್ಯ
ಜಿ.ಪಿ. ಬಸವರಾಜು
ಟಿಪ್ಪಣಿಗಳು
undoubtedly you are true. the world needs to be cultured in scientific temper. the role of media can go unsaid for it is visible even to the closed eyes. there is a lot that can be spoken and written about it. but finally as Chomsky says, truth needs to be spoken to the people and not to the people in power for it is people who can change the system and not those who are in power. we should speak to people, initiate dialogue with people. but before that we need to listen to them and then get involved in a dialogue. the art of dialogue is forgotten. the art which Gandhi used all his life, starting from his book ‘Hind Swaraj’. this art of dialogue needs to be reinvented.
in harmony,
—
B.A. Samvartha (‘Sahil’)
Research Scholar
Theater and Performance Studies
School of Arts and Aesthetics
Jawaharlal Nehru University
New Delhi-67
Mobile: +919540199559 (Delhi)
‘Sahtyashree’
MIG, 4th Cross, 6th Main,
KHB Colony, HUDCO,
Manipal- 576104
Mobile: +919844121911 (Karnataka)
ಶ್ರೀ ನಿಡುಮಾಮಿಡಿ ಸ್ವಾಮೀಜಿ ಅಷ್ಟಾದರೂ ಮಾಡಿದರಲ್ಲ.
ಅವರು ಶ್ರೀ ಪೇಜಾವರ ಸ್ವಾಮಿಗಳ ಮನ ಗೆಲ್ಲುವುದಕ್ಕೆ ಆ ಮಾತನ್ನು ಹೇಳಿದ್ದು ಎಂದು ನಿಮಗೆ ಗೊತ್ತಾಗುವುದಿಲ್ಲವೇ?
ಅದಕ್ಕಾಗಿ ನಾನು ಅವರನ್ನು ಅಭಿನಂದಿಸುವೆ.
ಕೆ.ವಿ. ತಿರುಮಲೇಶ್
ಬೆಳಗ್ಗೆ ಎದ್ದು ಕನ್ನಡದ ಯಾವ ಟೀವಿ ಚಾನೆಲ್ ಹಾಕಿದರೂ ಮನಸ್ಸಿಗೆ ತೀರಾ ಕಿರಿಕಿರಿಯಾಗುತ್ತೆ. ನಾಮಧಾರಿಗಳು, ಗಡ್ಡಧಾರಿಗಳು, ಕಾವಿಧಾರಿಗಳು, ಲ್ಯಾಪ್ಟಾಪ್ ಹಿಡಿದುಕೊಂಡು ಪುಂಖಾನುಪುಂಖವಾಗಿ ಭವಿಷ್ಯ ನುಡಿಯುತ್ತಿರುತ್ತಾರೆ, ಗ್ರಹಗತಿಗಳ ಬಗ್ಗೆ ಬಡಬಡಾಯಿಸುತ್ತಾರೆ, ಮನುಷ್ಯನ ಮೂರನೇ, ನಾಲ್ಕನೇ ಕಣ್ಣುಗಳನ್ನು ಪತ್ತೆ ಹಚ್ಚಿ ಕೊಡುತ್ತಿರುತ್ತಾರೆ… ಒಂದೊಂದುಸಾರಿ ಟೀವಿ ಸ್ಕ್ರೀನ್ ಗೆ ಕಲ್ಲು ಹೊಡೆಯಬೇಕು ಅನ್ನಿಸುತ್ತೆ… ಟೀವಿಗೆ ದುಡ್ಡು ಕೊಟ್ಟಿದ್ದು ನಾನೆ ಅಲ್ವಾ… ಆಫ್ ಮಾಡುತ್ತೇನೆ ಅಷ್ಟೆ…
ಕುಮಾರ್
ಪತ್ರಕರ್ತ, ದ ಸಂಡೆ ಇಂಡಿಯನ್
ಸರ್
ಮಡೆಸ್ನಾನದ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಮತ್ತೆ ಮತ್ತೆ ಇದು ಪ್ರಸ್ತಾಪವಾಗುತ್ತಿರುವುದರಿಂದ ಇದನ್ನು ಬರೆಯುತ್ತಿದ್ದೇನೆ.
೧. ಒಂದು ವೇಳೆ ಸರಕಾರ ಮಡೆಸ್ನಾನವನ್ನು ನಿಷೇಧಿಸಿತು ಎಂದುಕೊಳ್ಳೋಣ. ಪ್ರಕರಣ ಕೋರ್ಟಿಗೆ ಹೋಗುವ ಸಾಧ್ಯತೆಗಳು ಹೆಚ್ಚು. ಆಗ, ನನಗನಿಸುವಂತೆ, ತೀರ್ಪು ಮಡೆಸ್ನಾನದ ಪರವಾಗಿಯೇ ಬರುತ್ತದೆ. ಕೆಲವು ಸಮಯದ ಹಿಂದೆ ಸರಕಾರ ಮಹಿಳೆಯರು ಬಾರ್ ಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿತು. ಪ್ರಕರಣ ಕೋರ್ಟಿಗೆ ಹೋದಾಗ ಕೋರ್ಟು ಹಾಗೆ ನಿಷೇಧಿಸಿದ್ದು ತಪ್ಪು ಎಂದೇ ತೀರ್ಪು ಕೊಟ್ಟಿತು.
೨. ಮಡೆಸ್ನಾನಕ್ಕಿಂತ ಹೆಚ್ಚು “ಕುಖ್ಯಾತ” ಆಚರಣೆಗಳು ನಮ್ಮಲ್ಲಿ ಚಾಲ್ತಿಯಲ್ಲಿವೆ. ಕೋಟಿಗಟ್ಟಳೆ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಮುಖ ಮುಚ್ಚಿಕೊಂಡೇ ತಿರುಗುತ್ತ, ಪ್ರತಿಕ್ಷಣ ಅದರ ಅವಮಾನವನ್ನು ಅನುಭವಿಸುತ್ತಿರುವ ಆಚರಣೆ ಅತ್ಯಂತ ಅಮಾನವೀಯವಾದದ್ದಲ್ಲವೆ? ಮಡೆಸ್ನಾನ ಆಚರಿಸುವವರ ಸಂಖ್ಯೆ ಕೆಲವು ಸಾವಿರವನ್ನೂ ದಾಟಲಾರದು. ಹಾಗಿರುವಾಗ ಮಡೆಸ್ನಾನದ ಕುರಿತೇ ಹುಯಿಲು ಏಕೆ?
೩. ಆದ್ಯತೆಯ ದೃಷ್ಟಿಯಿಂದ ಮಡೆಸ್ನಾನ ನಮ್ಮೆದುರಿನ ಮಹತ್ವದ ಪ್ರಶ್ನೆ ಏನಲ್ಲ. ಊರಿನ ತ್ಯಾಜ್ಯವಿಲೇವಾರಿ, ಸರಕಾರಿ ಆಸ್ಪತ್ರೆಗಳ ಸಮಸ್ಯೆ, ಪ್ರಜಾಪ್ರಭುತ್ವಕ್ಕೆ ಬಂದೊದಗುತ್ತಿರುವ ಗಂಡಾಂತರ, ದಿನೇದಿನೇ ಸರಕಾರ ದುರ್ಬಲಗೊಳ್ಳುತ್ತ, ಖಾಸಗಿ ಕ್ಷೇತ್ರ ಕೊಬ್ಬುತ್ತ ಹೋಗುತ್ತಿರುವುದು, ಇಡೀ ಸರಕಾರಿಯಂತ್ರ ಮರಗಟ್ಟಿ ಹೋಗಿರುವುದು, ಪರಿಸರವನ್ನು ಎಗ್ಗಿಲ್ಲದೆ ನಾಶ ಮಾಡಿ ಕೈಗಾರಿಕೆಗಳನ್ನು ಬೆಳೆಸುತ್ತಿರುವುದು, ಕೈಗಾರಿಕೀಕರಣದ ಹೆಸರಿನಲ್ಲಿ ಖಾಸಗಿ ಜಮೀನನ್ನು ವಶಪಡಿಸಿಕೊಂಡು ಸಾವಿರಗಟ್ಟಳೆ ಎಕ್ರೆಯ ಬಂಡವಾಳಶಾಹಿ ಪಾಳೆಯಪಟ್ಟುಗಳಾಗಿ ಪರಿವರ್ತಿಸುತ್ತಿರುವುದು, ಕಳ್ಳನೋಟುಗಳು ಅಪಾರಪ್ರಮಾಣದಲ್ಲಿ ಚಲಾವಣೆಯಾಗುತ್ತಿರುವುದು, ಜನತೆ ಸಾಮೂಹಿಕವಾಗಿ ದೇಶೀಭಾಷೆಗಳನ್ನು ಕೈಬಿಟ್ಟು ಇಂಗ್ಲಿಷನ್ನು ಹಿಡಿಯುತ್ತಿರುವುದರಿಂದ ಇಡೀ ದೇಶದ ಹೊಸ ಪೀಳಿಗೆ ಸಾಂಸ್ಕೃತಿಕ ಹಿಜಡಾಗಳಾಗಿ ಪರಿವರ್ತನೆಗೊಳ್ಳುತ್ತಿರುವುದು, ಜನ ಸದಾ ಮೊಬೈಲಿನ ಅಮಲಿನಲ್ಲಿರುವುದು ಹೀಗೆ ನಮ್ಮೆದುರಿಗೆ ಕೂಡಲೇ ಗಮನ ಹರಿಸಬೇಕಾದ ಸಾವಿರಾರು ಸಮಸ್ಯೆಗಳಿವೆ. ಜವಾಬ್ದಾರಿಯುತ ನಾಗರಿಕರು ಆ ಕಡೆ ಮೊದಲು ಗಮನ ಹರಿಸುವುದು ಹೆಚ್ಚು ಅಪೇಕ್ಷಣೀಯ.
೪. ಅವೊತ್ತು ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ನಾನು ನೋಡಿದ್ದೆ. ಸಮಯದ ಮಿತಿಯಿಂದಾಗಿ ಯಾವೊಂದು ಸಮಸ್ಯೆಯನ್ನೂ ಸಮಗ್ರವಾಗಿ ಚರ್ಚಿಸುವುದು ಟಿವಿಯಲ್ಲಿ ಸಾಧ್ಯವಿಲ್ಲ. ಇಲ್ಲೂ ಹಾಗೆಯೇ ಆಯಿತು. ಸಂವಿಧಾನಕ್ಕಿಂತ ಪರಂಪರೆಯನ್ನೇ ಹೆಚ್ಚು ಗೌರವಿಸುತ್ತೇನೆ ಎಂದೆ ಪೇಜಾವರರು ಹೇಳಿದರೆ, ಅದಕ್ಕೆ ವಿವರಣೆ ಕೊಡುವಷ್ಟು ಅವಕಾಶ ಅವರಿಗೆ ಸಿಗಬೇಕು, ಅದಿಲ್ಲದಿದ್ದರೆ ಅವರ ಮಾತಿಗೆ ತಪ್ಪು ಅರ್ಥ ಆಗಿಯೇ ಆಗುತ್ತದೆ. ಆ ಮಾತಿನ ಅರ್ಥ ಏನು ಎನ್ನುವುದನ್ನು ವಿವರಿಸಲು ಅವರಿಗೆ ಅವಕಾಶ ಸಿಕ್ಕು, ಅದಕ್ಕೆ ಅವರು ವಿವರಣೆ ಕೊಟ್ಟರೆ ಮಾತ್ರ ಚರ್ಚೆ ಮುಂದುವರಿಸುವುದರಲ್ಲಿ ಅರ್ಥ ಇದೆ.
-ಎಚ್. ಸುಂದರ ರಾವ್
೧೯-೦೧-೨೦೧೨