Monthly Archives: ಜೂನ್ 2012

ಪತ್ರೋತ್ತರ

ಹಿರಿಯರಾದ ಪಂಡಿತಾರಾಧ್ಯರಿಗೆ
ತಾವು ಪಂಡಿತಪುಟದಲ್ಲಿ ಪ್ರಕಟಿಸಿರುವ ಪತ್ರವನ್ನು ‘ಕಾಮನಬಿಲ್ಲು’ ಪುರವಣಿಗೆ ಕಳುಹಿಸಿಕೊಟ್ಟಿಲ್ಲ. ಆದ್ದರಿಂದ ದಯವಿಟ್ಟು ಇದನ್ನು ಪ್ರಜಾವಾಣಿ ಪ್ರಕಟಿಸಿಲ್ಲ ಎಂಬರ್ಥದ ಸಾಲನ್ನು ನಿಮ್ಮ ಬ್ಲಾಗ್‌ನಿಂದ ತೆಗೆದು ಹಾಕಬೇಕಾಗಿ ಕೋರುತ್ತೇನೆ. ಸಾಮಾನ್ಯವಾಗಿ ಪ್ರಜಾವಾಣಿ ಆಯಾ ಪುರವಣಿಗಳಲ್ಲಿ ಪ್ರಕಟವಾಗುವ ಪ್ರತಗಳಿಗೆ ಸಂಬಂಧಿಸಿದ ಉತ್ತರಗಳನ್ನೂ ಆಯಾ ಪುರವಣಿಗಳಲ್ಲೇ ಪ್ರಕಟಿಸುತ್ತದೆ. ತಾವು ಇಂಥದ್ದೊಂದು ಉತ್ತರವನ್ನು ‘kamanabillu (at) prajavani.co.in’ ಎಂಬ ‘ಕಾಮನಬಿಲ್ಲು’ ಪುರವಣಿಯ ಅಧಿಕೃತ ವಿಳಾಸಕ್ಕಂತೂ ಕಳುಹಿಸಿಲ್ಲ. ಈ ಹಿಂದೆ ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾದ ನಿಮ್ಮ ಪತ್ರ, ಅದಕ್ಕೆ ನಾನು ಬರೆದ ಉತ್ತರಗಳೆಲ್ಲವೂ ಇದೇ ಮೇಲ್ ವಿಳಾಸವನ್ನು ಬಳಸಿಕೊಂಡಿದ್ದವು ಎಂಬುದನ್ನಿಲ್ಲಿ ನೆನಪಿಸಲು ಬಯಸುತ್ತೇನೆ. ನೀವು ಕಳುಹಿಸದೇ ಇರುವ ಪತ್ರವೊಂದನ್ನು ಪತ್ರಿಕೆ ಪ್ರಕಟಿಸಿಲ್ಲ ಎಂದು ಅದು ಹೇಗೆ ಹೇಳುತ್ತೀರಿ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ‘ಈ ಪತ್ರವನ್ನು ಪ್ರಜಾವಾಣಿ ಪತ್ರಿಕೆ ಪ್ರಕಟಿಸದಿದ್ದುದರಿಂದ ಇಲ್ಲಿ ಪ್ರಕಟಿಸಿದೆ’ ಎಂಬ ಮಾತುಗಳನ್ನು ಬರೆಯುವುದು ತಮ್ಮಂಥ ಹಿರಿಯರಿಗೆ ಶೋಭಿಸುವುದಿಲ್ಲ ಎಂದು ವಿಷಾದಪೂರ್ವಕವಾಗಿ ಇಲ್ಲಿ ದಾಖಲಿಸ ಬಯಸುತ್ತೇನೆ. ಇದನ್ನು ತಕ್ಷಣವೇ ಸರಿಪಡಿಸುತ್ತೇರೆಂದು ನಾನು ಭಾವಿಸಿದ್ದೇನೆ.

ಎನ್.ಎ.ಎಂ. ಇಸ್ಮಾಯಿಲ್
ಮುಖ್ಯ ಉಪಸಂಪಾದಕ
ಪ್ರಜಾವಾಣಿ

ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರಿಗೆ ನಮಸ್ಕಾರಗಳು.
ನಾನು ಪ್ರಜಾವಾಣಿಯ ಕಾಮನಬಿಲ್ಲು ಪುರವಣಿಯ ವಾಚಕರವಾಣಿ ವಿಭಾಗಕ್ಕೆಂದು ಬರೆದು ಎಂದಿನಂತೆ ಎಡಿಟ್ ಪೇಜ್ ಅಟ್ ಪ್ರಜಾವಾಣಿ.ಕೊ.ಇನ್ ವಿಳಾಸಕ್ಕೆ ಕಳುಹಿಸಿದ ಈ ಪತ್ರ ನಿಮಗೆ ತಲುಪಿಲ್ಲ ಎಂಬ ನಿಮ್ಮ ವಿವರಣೆಯನ್ನು ಒಪ್ಪಿ ನಿಮ್ಮ ಅಪೇಕ್ಷೆಯಂತೆ ಪಂಡಿತಪುಟದಲ್ಲಿ ಪ್ರಕಟಿಸಿದ ಪತ್ರವನ್ನು ತೆಗೆದಿರಿಸಿದ್ದೇನೆ. ಕಾಮನಬಿಲ್ಲನಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಗಣಕ ಸಾಧನಗಳಲ್ಲಿ ಕನ್ನಡ ಬಳಕೆಗೆ ಇರುವ ಅವಕಾಶಗಳು ಮತ್ತು ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದು ಬರೆದಿದ್ದ ನನ್ನ ಪತ್ರದ ಆಶಯವನ್ನು ಗೌಣಗೊಳಿಸಿ ನಾನು ಬಳಸಿರುವ ಕನ್ನಡ ಪಾರಿಭಾಷಿಕಗಳ ಬಗ್ಗೆ ನೀವು ಬರೆದ ಪತ್ರಗಳು ಮತ್ತು ನನ್ನ ಉತ್ತರಗಳ ಹಿನ್ನೆಲೆಯಲ್ಲಿ ಎರಡು ವಾರ ಕಳೆದರೂ ನನ್ನ ಪತ್ರ ಪ್ರಕಟವಾಗಿಲ್ಲ ಎಂದು ಅನಿಸಿತು. ಈಗಲೂ ನೀವು ನನ್ನ ಅಭಿಪ್ರಾಯ ಮಂಡನೆಗೆ ಅವಕಾಶಕೊಡಬಹುದು ಎಂಬ ಭಾವನೆಯಿಂದ ಪಂಡಿತ ಪುಟದ ಪತ್ರವನ್ನು ತೆಗೆದಿರಿಸಿದ್ದೇನೆ. ಈ ಬಗ್ಗೆ ಮುಕ್ತ ವಿಚಾರ ವಿನಿಮಯಕ್ಕೆ ನಿಮ್ಮಲ್ಲಿ ಅವಕಾಶವಿದೆ ಎಂದು ಭಾವಿಸಿದ್ದೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಸಮಾನ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲವಿರುವ ಮುಂದುವರೆದ ವರ್ಗಗಳ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಇಂಗಿಷಿನಲ್ಲಿ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವೆ ಅಸಮಾನತೆಯ ಅಂತರ ಹೆಚ್ಚುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸಿರುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅಗತ್ಯವಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವಷ್ಟೇ ಅಲ್ಲ, ಸಾಧ್ಯವಾದಷ್ಟೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರ ಕ್ರಮದಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.
ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅವಕಾಶದ ಹಕ್ಕನ್ನು ಶಾಶ್ವತವಾಗಿ ವಂಚಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವುದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆಯ ಬೇಡಿಕೆಯ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಯಾವ ಶಿಕ್ಷಣ ತಜ್ಞರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ. ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸುವುದನ್ನು ಯಾರೂ ಬೇಡವೆನ್ನುತ್ತಿಲ್ಲ.

ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವ ರೀತಿಯಲ್ಲಿಯೇ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಹಾಗೆ ತರಬೇತಿಪಡೆದ ಶಿಕ್ಷಕರು ಮಕ್ಕಳೊಂದಿಗೆ ಸರಳವಾಗಿ ಇಂಗ್ಲಿಷಿನಲ್ಲಿ ಯೋಚಿಸುವುದನ್ನು, ಮಾತನಾಡುವುದನ್ನು ಮೊದಲು ಕಲಿಸಬೇಕು. ಅನಂತರವೇ ಇಂಗ್ಲಿಷಿನಲ್ಲಿ ಓದುವುದು, ಬರೆಯುವುದನ್ನು ಕಲಿಸಬೇಕು. ಈಗ ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶಿತ ಪ್ರಯೋಜನವಾಗುತ್ತಿಲ್ಲ. ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದ ಇಂಗ್ಲಿಷ್ ಭಾಷೆಯನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯಗೊಳಿಸಿ ಆರನೆಯ ತರಗತಿಯಿಂದ ಹಾಗೆ ಅಸಮರ್ಪಕವಾಗಿ ಕಲಿಸಿದ ಇಂಗ್ಲಿಷನ್ನು ಮಾಧ್ಯಮವಾಗಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ.

ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಸರಕಾರ ಯಾವ ಕಾರಣಕ್ಕೂ ಮಕ್ಕಳ ಈ ಹಕ್ಕನ್ನು ಕಸಿಯಬಾರದು. ಸರಕಾರ ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆ ಮತ್ತು ಶಿಕ್ಷಣ ವ್ಯಾಪಾರಿಗಳ ದುರಾಸೆಗೆ ಇಂಬುಕೊಡುವಂತೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಮತ್ತು ಮಾಧ್ಯಮವಾಗಿ ಅದನ್ನು ಬಳಸುವ ವಿಷಯದಲ್ಲಿ ದುಡುಕಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಹಕ್ಕಿನ ರಕ್ಷಕನಾಗಿ ವರ್ತಿಸಬೇಕು.

೧೯೮೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ರಾಮಾಜೋಯಿಸ್ ಮತ್ತು ಶ್ರೀ ರಾಜೇಂದ್ರಬಾಬು ಅವರು ನೀಡಿದ ತೀರ್ಪು ಇಡೀ ದೇಶಕ್ಕೆ ಮಾದರಿಯಾದುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ಸಂಪಾದಕೀಯದಲ್ಲಿ ಪ್ರಶಂಸಿಸಿತ್ತು. ಅದನ್ನು ೧೯೯೩ರಲ್ಲಿ ಸರ್ವೋನ್ನತ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ ಎನ್ ವೆಂಕಟಾಚಲಯ್ಯ ಮತ್ತು ಶ್ರೀ ಎಸ್ ಮೋಹನ್ ಅವರು ಅನುಮೋದಿಸಿದ್ದರು. ಅದನ್ನು ಆಧರಿಸಿ ಶ್ರೀ ಎಂ ವೀರಪ್ಪ ಮೊಯಿಲಿ ಅವರ ಸರಕಾರ ೧೯೯೪ರಲ್ಲಿ ರೂಪಿಸಿದ ಭಾಷಾನೀತಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಸದವಕಾಶ ಇಂದಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರ ಸರಕಾರಕ್ಕೆ ದೊರೆತಿದೆ. ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರದಾಗಲಿ ಎಂದೇ ನನ್ನ ಆಶಯ.

ಬೆಂಗಳೂರು*
೧೯೩೪ ಗ್ರೀಷ್ಮ ಜ್ಯೇಷ್ಠ ೨೫ ಕೃಷ್ಣ ಏಕಾದಶಿ ಅಶ್ವಿನಿ ಶುಕ್ರವಾರ
೧೫ಜೂನ್ ೨೦೧೨
—-
* ಸರಕಾರಿ ಶಾಲೆಗಳಲ್ಲಿ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವುದರ ವಿರುದ್ಧ ಮೈಸೂರಿನ ಕನ್ನಡ ಕ್ರಿಯಾ ಸಮಿತಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನೆಯ ಧರಣಿಯಲ್ಲಿ ವಿತರಿಸಿದೆ

ಮೂಲ ಕನ್ನಡ ಕೃತಿಗಳಿಂದ ಮಾತ್ರ ಕನ್ನಡದ ಉಳಿವು; ಎರವಲು(ಎಂಜಲು) ಕೃತಿಗಳಿಂದ ಅಲ್ಲ

ಮಾನ್ಯರೆ,
ಕನ್ನಡದ ಉಳಿವಿಗಾಗಿ ಕನ್ನಡದಲ್ಲಿ ಸೃಜನಶೀಲ ಕೃತಿಗಳು ಹೆಚ್ಚು ಹೆಚ್ಚು ಬರಬೇಕು ಎನ್ನುವುದು ಸರಿಯಾದ ಚಿಂತನೆ; ಬೇರೆಯವರ ಸೃಜನಶೀಲತೆಯನ್ನು ತಮ್ಮದೆಂಬಂತೆ ವಂಚಿಸುವುದು ಅರ್ಥಯುತವಾದ ಚಿಂತನೆಯಲ್ಲವೆಂದು ನನ್ನ ಅನಿಸಿಕೆ. ಈಗ ಜನಶ್ರೀ ವಾಹಿನಿಯವರು ಆರ್ ಕೆ ನಾರಾಯಣ್ ಅವರ ಇಂಗ್ಲಿಷ್ ಕಥೆಗಳ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ತಯಾರಿಸಿದ್ದ ‘ಮಾಲ್ಗುಡಿ ಡೇಸ್’ ಅನ್ನು ಮೂಲ ಭಾಷೆಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಒದಗಿಸಿ, ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯವಾದಷ್ಟು ಸಂಭಾಷಣೆಗಳನ್ನು ಕನ್ನಡದಲ್ಲಿ ಅಡಿಬರಹದಲ್ಲಿ ಕೊಟ್ಟಿರುವುದು ಕನ್ನಡದ ಪ್ರಬುದ್ಧ ಪ್ರೇಕ್ಷಕರ ವಿವೇಕಕ್ಕೆ ತೋರಿದ ಗೌರವವಾಗಿದೆ. ಆಮೀರ್ ಖಾನ್ ಅವರು ಕೂಡ ಸತ್ಯಮೇವ ಜಯತೆಯ ಇಂಗ್ಲಿಷ್ ಆವೃತ್ತಿಯನ್ನು ಮೂಲ ಹಿಂದಿಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಉಳಿಸಿ ಇಂಗ್ಲಿಷಿನಲ್ಲಿ ಸಂಭಾಷಣೆಗಳನ್ನು ಅಡಿ ಬರಹದಲ್ಲಿ ನೀಡುತ್ತಿರುವುದನ್ನೂ ಗಮನಿಸಬೇಕು.

ದೂರದರ್ಶನದಲ್ಲಿ ಭಾನುವಾರಗಳಂದು ಪ್ರಸಾರವಾಗುವ ವಿವಿಧ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸಂಭಾಷಣೆಗಳು ಭಾರತೀಯ ಭಾಷೆಗಳಲ್ಲಿ ಅಡಿ ಬರಹದಲ್ಲಿ ಲಭ್ಯವಿರುವುದರಿಂದ ಪ್ರೇಕ್ಷಕರು ಮೂಲ ಭಾಷೆಯನ್ನು ಕೇಳುವುದರೊಂದಿಗೆ ತಮ್ಮ ಭಾಷೆಯಲ್ಲಿರುವ ಅಡಿ ಬರಹದಲ್ಲಿ ಸಂಭಾಷಣೆಯನ್ನು ಓದಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಭಾರತೀಯ ಭಾಷೆಗಳಲ್ಲಿ ಅಡಿಬರಹದಲ್ಲಿ ಸಂಭಾಷಣೆಗಳಿರುವ ಅನೇಕ ಚಿತ್ರಗಳ ಅಡಕತಟ್ಟೆಗಳು ಲಭ್ಯವಿವೆ. ಇದರಿಂದ ಈ ಚಿತ್ರಗಳಿಗೆ ಮೂಲಭಾಷೆಯ ಕೃತಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ತಮ್ಮ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.

ಇತ್ತೀಚೆಗೆ ರಾಷ್ಟ್ರಪತಿಗಳ ಚಿನ್ನದ ಕಮಲ ಪ್ರಶಸ್ತಿ ಪಡೆದ ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕ ಶ್ರೀ ಅಭಯ ಸಿಂಹ ಅವರು ಸ್ವತಂತ್ರವಾಗಿ, ಪ್ರತ್ಯೇಕವಾಗಿಯೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ತಯಾರಿಸಿದ್ದ ಶಿಕಾರಿ ಚಿತ್ರಕ್ಕೆ ಮಲಯಾಳಂ ಮತ್ತು ಕನ್ನಡ ಪ್ರೇಕ್ಷಕರನ್ನು ನಿರೀಕ್ಷಿಸಿದ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ. ಮಮ್ಮೂಟಿಯವರೇ ಕಂಠದಾನದ ನೆರವು ಪಡೆಯದೆ ಕನ್ನಡದಲ್ಲಿ ಸಂಭಾಷಣೆಗಳನ್ನು ಹೇಳಿದ್ದರೂ ಅದು ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ಮಲೆಯಾಳಂ ಪ್ರೇಕ್ಷಕರೂ ಇದು ಕನ್ನಡದಿಂದ ಧ್ವನಿವಾಹಿನಿ ಮಾತ್ರ ಬದಲಿಸಿದ(ಡಬ್ ಮಾಡಿದ) ಚಿತ್ರವೆಂಬಂತೆ ದೂರವಿರಿಸಿದರು ಎಂಬುದು ಒಂದು ವಿವರಣೆ. ಅಂದರೆ ಒಂದು ಭಾಷೆಯ ನಿಜ ಬಳಕೆಯ ಸಂರ್ಭವನ್ನು ಇನ್ನೊಂದು ಭಾಷೆಯ ನಿಜಬಳಕೆಯ ಸಂದರ್ಭವಾಗಿಸುವುದು ಕಷ್ಟ. ಆದರೆ ಅಡಿಬರಹದ ಸಂಭಾಷಣೆಯಿದ್ದಾಗ ಚಿತ್ರವನ್ನು ಮೂಲಭಾಷೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಒಪ್ಪಿ ಸ್ವೀಕರಿಸಿ ಅನುವಾದಿಸಿರುವ ಸಂಭಾಷಣೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.

ಆದ್ದರಿಂದ ಸತ್ಯಮೇವ ಜಯತೆಯನ್ನೂ ಅದರ ಇಂಗ್ಲಿಷ್ ಅವತರಣಿಕೆಯ ಹಾಗೆ ಎಲ್ಲ ಭಾರತೀಯ ಭಾಷೆಗಳ ಅಡಿ ಬರಹದ ಸಂಭಾಷಣೆಗಳೊಂದಿಗೆ ಮಾತ್ರ ಪ್ರಸಾರಮಾಡುವಂತೆ ಅಮೀರ್ ಖಾನ್ ಅವರನ್ನು ಕೋರಿದ್ದೇನೆ. ಈಗ ಅವರು ವಿವಿಧ ಭಾಷಾ ಪತ್ರಿಕೆಗಳಲ್ಲಿ ಆಯಾ ವಾರ ಪ್ರಸಾರವಾದ ಕಂತಿನ ಅನುವಾದವನ್ನು ಲೇಖನ ರೂಪದಲ್ಲಿ ನೀಡುತ್ತಿರುವುದು ಸ್ವಾಗತಾರ್ಹ. ದೂರದರ್ಶನ ನೋಡಲಾರದ, ಪತ್ರಿಕೆ ಓದಲಾರದ ದೃಷ್ಟಿಹೀನತೆಯುಳ್ಳವರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಇದನ್ನು ಧ್ವನಿರೂಪದಲ್ಲಿ ವಿವಿಧ ಆಕಾಶವಾಣಿಯ ವಾಹಿನಿಗಳಲ್ಲಿ ಪ್ರಸಾರಮಾಡಬಹುದು.

ವಿವಿಧ ಭಾಷೆಗಳ ಚಿತ್ರಗಳನ್ನು ಅಡಿ ಬರಹಗಳಲ್ಲಿರುವ ಅನುವಾದಿತ ಸಂಭಾಷಣೆಯ ಸರಳ ವಿಧಾನದ ಮೂಲಕ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲ ಭಾಷೆಗಳವರು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಈ ವಿಷಯದಲ್ಲಿ ದಯವಿಟ್ಟು ಎಲ್ಲರೂ ನಿರುದ್ವಿಗ್ನವಾಗಿ ಯೋಚಿಸಬೇಕೆಂದು ಕೋರುತ್ತೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ
ಮೈಸೂರು