ಮಾನ್ಯರೆ,
ಕನ್ನಡದ ಉಳಿವಿಗಾಗಿ ಕನ್ನಡದಲ್ಲಿ ಸೃಜನಶೀಲ ಕೃತಿಗಳು ಹೆಚ್ಚು ಹೆಚ್ಚು ಬರಬೇಕು ಎನ್ನುವುದು ಸರಿಯಾದ ಚಿಂತನೆ; ಬೇರೆಯವರ ಸೃಜನಶೀಲತೆಯನ್ನು ತಮ್ಮದೆಂಬಂತೆ ವಂಚಿಸುವುದು ಅರ್ಥಯುತವಾದ ಚಿಂತನೆಯಲ್ಲವೆಂದು ನನ್ನ ಅನಿಸಿಕೆ. ಈಗ ಜನಶ್ರೀ ವಾಹಿನಿಯವರು ಆರ್ ಕೆ ನಾರಾಯಣ್ ಅವರ ಇಂಗ್ಲಿಷ್ ಕಥೆಗಳ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ತಯಾರಿಸಿದ್ದ ‘ಮಾಲ್ಗುಡಿ ಡೇಸ್’ ಅನ್ನು ಮೂಲ ಭಾಷೆಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಒದಗಿಸಿ, ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯವಾದಷ್ಟು ಸಂಭಾಷಣೆಗಳನ್ನು ಕನ್ನಡದಲ್ಲಿ ಅಡಿಬರಹದಲ್ಲಿ ಕೊಟ್ಟಿರುವುದು ಕನ್ನಡದ ಪ್ರಬುದ್ಧ ಪ್ರೇಕ್ಷಕರ ವಿವೇಕಕ್ಕೆ ತೋರಿದ ಗೌರವವಾಗಿದೆ. ಆಮೀರ್ ಖಾನ್ ಅವರು ಕೂಡ ಸತ್ಯಮೇವ ಜಯತೆಯ ಇಂಗ್ಲಿಷ್ ಆವೃತ್ತಿಯನ್ನು ಮೂಲ ಹಿಂದಿಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಉಳಿಸಿ ಇಂಗ್ಲಿಷಿನಲ್ಲಿ ಸಂಭಾಷಣೆಗಳನ್ನು ಅಡಿ ಬರಹದಲ್ಲಿ ನೀಡುತ್ತಿರುವುದನ್ನೂ ಗಮನಿಸಬೇಕು.
ದೂರದರ್ಶನದಲ್ಲಿ ಭಾನುವಾರಗಳಂದು ಪ್ರಸಾರವಾಗುವ ವಿವಿಧ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸಂಭಾಷಣೆಗಳು ಭಾರತೀಯ ಭಾಷೆಗಳಲ್ಲಿ ಅಡಿ ಬರಹದಲ್ಲಿ ಲಭ್ಯವಿರುವುದರಿಂದ ಪ್ರೇಕ್ಷಕರು ಮೂಲ ಭಾಷೆಯನ್ನು ಕೇಳುವುದರೊಂದಿಗೆ ತಮ್ಮ ಭಾಷೆಯಲ್ಲಿರುವ ಅಡಿ ಬರಹದಲ್ಲಿ ಸಂಭಾಷಣೆಯನ್ನು ಓದಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಭಾರತೀಯ ಭಾಷೆಗಳಲ್ಲಿ ಅಡಿಬರಹದಲ್ಲಿ ಸಂಭಾಷಣೆಗಳಿರುವ ಅನೇಕ ಚಿತ್ರಗಳ ಅಡಕತಟ್ಟೆಗಳು ಲಭ್ಯವಿವೆ. ಇದರಿಂದ ಈ ಚಿತ್ರಗಳಿಗೆ ಮೂಲಭಾಷೆಯ ಕೃತಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ತಮ್ಮ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.
ಇತ್ತೀಚೆಗೆ ರಾಷ್ಟ್ರಪತಿಗಳ ಚಿನ್ನದ ಕಮಲ ಪ್ರಶಸ್ತಿ ಪಡೆದ ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕ ಶ್ರೀ ಅಭಯ ಸಿಂಹ ಅವರು ಸ್ವತಂತ್ರವಾಗಿ, ಪ್ರತ್ಯೇಕವಾಗಿಯೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ತಯಾರಿಸಿದ್ದ ಶಿಕಾರಿ ಚಿತ್ರಕ್ಕೆ ಮಲಯಾಳಂ ಮತ್ತು ಕನ್ನಡ ಪ್ರೇಕ್ಷಕರನ್ನು ನಿರೀಕ್ಷಿಸಿದ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ. ಮಮ್ಮೂಟಿಯವರೇ ಕಂಠದಾನದ ನೆರವು ಪಡೆಯದೆ ಕನ್ನಡದಲ್ಲಿ ಸಂಭಾಷಣೆಗಳನ್ನು ಹೇಳಿದ್ದರೂ ಅದು ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ಮಲೆಯಾಳಂ ಪ್ರೇಕ್ಷಕರೂ ಇದು ಕನ್ನಡದಿಂದ ಧ್ವನಿವಾಹಿನಿ ಮಾತ್ರ ಬದಲಿಸಿದ(ಡಬ್ ಮಾಡಿದ) ಚಿತ್ರವೆಂಬಂತೆ ದೂರವಿರಿಸಿದರು ಎಂಬುದು ಒಂದು ವಿವರಣೆ. ಅಂದರೆ ಒಂದು ಭಾಷೆಯ ನಿಜ ಬಳಕೆಯ ಸಂರ್ಭವನ್ನು ಇನ್ನೊಂದು ಭಾಷೆಯ ನಿಜಬಳಕೆಯ ಸಂದರ್ಭವಾಗಿಸುವುದು ಕಷ್ಟ. ಆದರೆ ಅಡಿಬರಹದ ಸಂಭಾಷಣೆಯಿದ್ದಾಗ ಚಿತ್ರವನ್ನು ಮೂಲಭಾಷೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಒಪ್ಪಿ ಸ್ವೀಕರಿಸಿ ಅನುವಾದಿಸಿರುವ ಸಂಭಾಷಣೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.
ಆದ್ದರಿಂದ ಸತ್ಯಮೇವ ಜಯತೆಯನ್ನೂ ಅದರ ಇಂಗ್ಲಿಷ್ ಅವತರಣಿಕೆಯ ಹಾಗೆ ಎಲ್ಲ ಭಾರತೀಯ ಭಾಷೆಗಳ ಅಡಿ ಬರಹದ ಸಂಭಾಷಣೆಗಳೊಂದಿಗೆ ಮಾತ್ರ ಪ್ರಸಾರಮಾಡುವಂತೆ ಅಮೀರ್ ಖಾನ್ ಅವರನ್ನು ಕೋರಿದ್ದೇನೆ. ಈಗ ಅವರು ವಿವಿಧ ಭಾಷಾ ಪತ್ರಿಕೆಗಳಲ್ಲಿ ಆಯಾ ವಾರ ಪ್ರಸಾರವಾದ ಕಂತಿನ ಅನುವಾದವನ್ನು ಲೇಖನ ರೂಪದಲ್ಲಿ ನೀಡುತ್ತಿರುವುದು ಸ್ವಾಗತಾರ್ಹ. ದೂರದರ್ಶನ ನೋಡಲಾರದ, ಪತ್ರಿಕೆ ಓದಲಾರದ ದೃಷ್ಟಿಹೀನತೆಯುಳ್ಳವರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಇದನ್ನು ಧ್ವನಿರೂಪದಲ್ಲಿ ವಿವಿಧ ಆಕಾಶವಾಣಿಯ ವಾಹಿನಿಗಳಲ್ಲಿ ಪ್ರಸಾರಮಾಡಬಹುದು.
ವಿವಿಧ ಭಾಷೆಗಳ ಚಿತ್ರಗಳನ್ನು ಅಡಿ ಬರಹಗಳಲ್ಲಿರುವ ಅನುವಾದಿತ ಸಂಭಾಷಣೆಯ ಸರಳ ವಿಧಾನದ ಮೂಲಕ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲ ಭಾಷೆಗಳವರು ಅರ್ಥಮಾಡಿಕೊಳ್ಳುತ್ತಿದ್ದಾರೆ.
ಈ ವಿಷಯದಲ್ಲಿ ದಯವಿಟ್ಟು ಎಲ್ಲರೂ ನಿರುದ್ವಿಗ್ನವಾಗಿ ಯೋಚಿಸಬೇಕೆಂದು ಕೋರುತ್ತೇನೆ.
ಪ್ರೀತಿಯಿಂದ
ಪಂಡಿತಾರಾಧ್ಯ
ಮೈಸೂರು