ಕನ್ನಡ ಅಂಕಿಗಳನ್ನೇ ಬಳಸಿ
೦ ೧ ೨ ೩ ೪ ೫ ೬ ೭ ೮ ೯
ಕರ್ನಾಟಕದ ಹಲವೆಡೆ ದೊರೆತಿರುವ ಸಾ(ಮಾನ್ಯ).ಪೂ(ರ್ವ).ಶಕ ೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಸಾ.ಶ. ೬ನೇ ಶತಮಾನದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.
ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಸಾ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಮೈಸೂರು ಒಡೆಯರು ತಮ್ಮ ನಾಣ್ಯಗಳಲ್ಲಿ; ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದರು.
ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನು ಬಳಸಬೇಕೆಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ನಿರ್ಣಯ ಅಂಗೀಕರಿಸಿ ಒತಾಯಿಸಿದ್ದುದನ್ನು ಗೌರವಿಸಿ ಕನ್ನಡ ಅಂಕಿಗಳನ್ನು ಬಳಸಲು ಆರಂಭಿಸಿದ್ದ ಪತ್ರಿಕೆಗಳು ಮತ್ತೆ ಅವನ್ನು ಬಿಟ್ಟಿರುವುದು ವಿಷಾದದ ಸಂಗತಿ. ಕೆಲವು ಪತ್ರಿಕೆಗಳು ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಮಾತ್ರ ಬಳಸುತ್ತಿದ್ದು ಈಗ ಅಲ್ಲಿಯೂ ಕೈಬಿಟ್ಟಿವೆ. ಸಾಪಾಹಿಕ ಪುರವಣಿ, ಮಾಸಿಕ ಸಾಹಿತ್ಯ ಪುರವಣಿಗಳ ದಿನಾಂಕ, ಸಂಚಿಕೆಯ ಸಂಖ್ಯೆಗಳನ್ನು ಮಾತ್ರ ಕನ್ನಡ ಅಂಕಿಯಲ್ಲಿ ನಮೂದಿಸುತ್ತಿವೆ. ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾದ ಮಾಧ್ಯಮಗಳು ಒಂದೇ ಉಸಿರಿನಲ್ಲಿ ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ. ಈ ಆತಂಕಕ್ಕೆ ಪ್ರತೀಕಾರ ಎಂಬಂತೆ ಭಾಗಶಃ ಕನ್ನಡ ಅಂಕಿಗಳನ್ನು ಬಳಸುತ್ತಿದ್ದ ಪತ್ರಿಕೆಗಳು ಮತಧರ್ಮ ಮೌಢ್ಯ ಪ್ರಸಾರದ ಬದಲು ಕನ್ನಡ ಅಂಕಿಗಳ ಬಳಕೆಯನ್ನು ನಿಲ್ಲಿಸಿವೆ! ರಾಜ್ಯ ಸರಕಾರದ ಮಾಸಪತ್ರಿಕೆ ಜನಪದ ಕನ್ನಡ ಅಂಕಿಗಳನ್ನು ಬಳಸುವಂತೆ ಮಾಡಿದ ಮನವಿಗೆ ಕಿವುಡುತನ ನಟಿಸುತ್ತಿದೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಹೊಸತು ಮಾಸಪತ್ರಿಕೆಗಳಂತೆ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ.
ರಾಜಧಾನಿಯ ಕನ್ನಡ ಸಮೂಹ ಮಾಧ್ಯಮಗಳು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿವೆ. ಅವಕ್ಕೆ ತುರ್ತಾಗಿ ಕನ್ನಡತನದ ಆರೋಗ್ಯಕರ ರಕ್ತದಾನವಾಗಬೇಕಿದೆ. ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನವನ್ನು ಪ್ರಕಟಿಸುವ ಕನ್ನಡದ ಮಾಧ್ಯಮಗಳು ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮಗಳನ್ನು ಪರಿಚಯಿಸುವ ಗೋಜಿಗೆ ಹೋಗದೆ ಅನಗತ್ಯವಾಗಿ ಇಂಗ್ಲಿಷ್ ಅಕ್ಷರ, ಪದ, ಪದಪುಂಜಗಳನ್ನು ಬಳಸುತ್ತಿವೆ. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ `ತಾEA ದೇವರು!’ ಎಂದು ಬರೆಯುವಂತೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷಿನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ `ಲವಲವಿಕೆ’ಯಲ್ಲಿರುವ ‘`ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು `ಲವಲ’ ಎಂದು ಅರ್ಥಹೀನವಾಗಿಸಿ, ವಿಕಲಾಂಗ(`ವಿಕಲಚೇತನ’!) ಗೊಳಿಸಿದೆ. ವಿಜಯNext Next(ನೆಕ್ಸ್ಟ್) ಎಂಬ ಕಲಬೆರಕೆ ಹೆಸರಿನ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳ ಬಳಕೆ ಹೆಚ್ಚಿದೆ. ಕೆಲವು ಕನ್ನಡ ಸಂಪಾದಕರು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರಸುವ ಗೀಳಿನಿಂದ ನರಳುತ್ತಿರುವಂತಿದೆ.
ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ರಾಜಧಾನಿಯ ಪತ್ರಿಕೆಗಳು ಹಲವು ಕೇಂದ್ರಗಳಲ್ಲಿ ಮುದ್ರಣವಾಗಿ ರಾಜಧಾನಿಯ ರೋಗವನ್ನೂ ರಾಜ್ಯಾದ್ಯಂತ ಹರಡುತ್ತಿರುವುದು ಆತಂಕದ ಸಂಗತಿ. ಎಫ್.ಎಂ. ರೇಡಿಯೋ, ಇಂಗ್ಲಿಷ್ ಹೆಸರಿನ ಕನ್ನಡ ದೂರದರ್ಶನ ವಾಹಿನಿಗಳಲ್ಲಿ ಇಂಗ್ಲಿಷ್ ಕಲಬೆರಕೆಯ ಅಬದ್ಧ ರೂಪಗಳು ಜುಗುಪ್ಸೆಯನ್ನುಂಟುಮಾಡುತ್ತವೆ. ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು `’ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು. ಕನ್ನಡ ಪದ, ಅಂಕಿಗಳನ್ನೇ ಬಳಸಬೇಕೆಂಬ ವಾದವನ್ನು ತಾರ್ಕಿಕ ತುದಿಗೆ ಎಳೆದು ಬಳಕೆಯಲ್ಲಿರುವ ಸಂಸ್ಕೃತ ಮೂಲದ ಪದಗಳ ಬದಲು ಹಳಗನ್ನಡ ಪದಗಳನ್ನು ಬಳಸುವ ಪ್ರಯತ್ನಗಳೂ ನಡೆಯುತ್ತಿವೆ. ಭಾಷೆಯ ಜೀವಂತಿಕೆಗೆ ಎರವಾಗುವ ಇಂಥ ಪ್ರಯತ್ನಗಳ ಬಗ್ಗೆ ಮರುಚಿಂತನೆ ಅಗತ್ಯ.
ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೨ ದಿನಾಂಕ ೩೧-೮-೨೦೦೧). ರಾಜ್ಯಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳೂ ಆಯಾ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸುವುದು ದೇಶಾದ್ಯಂತ ಏಕರೂಪವಾಗಿ ಜಾರಿಗೆ ಬರುವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.
ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯ ಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).
ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ’ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ. ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಾಲಯದ ತೀರ್ಪು ಬರುವ ಮುನ್ನವೇ, ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿಯನ್ನು ನೀಡುವಂತಿದೆ.
‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದನ್ನು ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸಬಾರದು; ಶಿಕ್ಷಣ ತಜ್ಞರ ಅಭಿಪ್ರಾಯದಂತೆ ನಿರ್ಧರಿಸಬೇಕು. ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ, ಪರಿಣಾಮಕಾರಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಮೊದಲು ಕಲಿಸಿ ಅನಂತರ ಇಂಗ್ಲಿಷಿನಲ್ಲಿ ಓದುವುದು ಬರೆಯುವುದನ್ನು ಕಲಿಸಬೇಕು.
ಮುಸ್ಲಿಮರಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಇರುವುದರಿಂದ ಇತರ ಸಾಮಾಜಿಕ ವರ್ಗಗಳ ಜೊತೆಗಿನ ಅಂತರವನ್ನು ತಗ್ಗಿಸಲು ಅವರಿಗೆ ಹೆಚ್ಚಿನ ಶಿಕ್ಷಣಾವಕಾಶಗಳನ್ನು ಒದಗಿಸಬೇಕು ಎಂದು ಸಾಚಾರ್ ಸಮಿತಿ ಶಿಫಾರಸು ಮಾಡಿದೆ. ಇದರ ಅನ್ವಯ ಕೇಂದ್ರ ಸರಕಾರವು ದೇಶದ ಐದು ಕಡೆಗಳಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಗಳನ್ನು ತೆರೆಯುವುದಾಗಿ ತಿಳಿಸಿದೆ. ಅವುಗಳಲ್ಲಿ ಒಂದನ್ನು ಶ್ರೀರಂಗಪಟ್ಟಣದಲ್ಲಿ ತೆರೆದು ಅದಕ್ಕೆ ಟಿಪ್ಪೂಸುಲ್ತಾನನ ಹೆಸರಿಡುವುದಾಗಿಯೂ ಸಂಬಂಧಪಟ್ಟ ಸಚಿವರು ಹೇಳಿದ್ದಾರೆ. ಧಾರ್ಮಿಕ/ಭಾಷಿಕ ಅಲ್ಪಸಂಖ್ಯಾತರು ತಮ್ಮ ಧರ್ಮ, ಸಂಸ್ಕೃತಿ, ಭಾಷೆ, ಲಿಪಿ, ಅಕ್ಷರ, ಅಂಕಿ ಮೊದಲಾದುವನ್ನು ರಕ್ಷಿಸಿಕೊಳ್ಳಲು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದನ್ನು ನಿರ್ವಹಿಸುವ ವಿಶೇಷ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ವ್ಯಾಖ್ಯೆಯ ಬಗ್ಗೆ ಬಗೆಹರಿಯದ ಗೊಂದಲ, ವಾದ ವಿವಾದಗಳಿವೆ. ಇಂಥ ಸಂಸ್ಥೆಗಳು ಸ್ಥಾಪಿಸಿ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ.೫೦ಅನ್ನು ಅವರ (ಸಮುದಾಯದ?)ಆಯ್ಕೆಗೆ ಬಿಡಲಾಗಿದೆ. ಅಲ್ಲಿ ಸಾಮಾನ್ಯ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ; ಇತರ ಹಿಂದುಳಿದ ವರ್ಗಗಳಿಗೆ ಶೇ.೨೭ರ ಮೀಸಲಾತಿ ಇರುವುದಿಲ್ಲ. ಮತಧರ್ಮ ನಿರಪೇಕ್ಷತೆಯ ಸಾರ್ವತ್ರಿಕ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು ಸರಕಾರ ಸ್ಥಾಪಿಸಿ ನಡೆಸುವ ಸಂಸ್ಥೆಗಳೇ ಪೋಷಿಸುವುದರ ಪರಿಣಾಮಗಳನ್ನು ಕುರಿತು, ಸಂವಿಧಾನದ ವಿಶೇಷ ಹಕ್ಕಿನ ವ್ಯಾಪ್ತಿ, ಅದರಿಂದ ಕನ್ನಡ ಭಾಷೆ, ಶಿಕ್ಷಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಈಗ ಗಂಭೀರ ಚರ್ಚೆ ನಡೆಯಬೇಕಾದ ತುರ್ತು ಇದೆ. ಅದರ ಬದಲು ಚರಿತ್ರೆಯಲ್ಲಿ ಆಗಿಹೋದ ಟಿಪ್ಪುಸುಲ್ತಾನನ ಹೆಸರನ್ನು ಇಡುವ ಬಗ್ಗೆ, ಅವನ ‘ದೇಶಪ್ರೇಮ’, ‘ಮತಾಂಧತೆ’ ಮೊದಲಾದವುಗಳ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಇದರಲ್ಲಿ ಪ್ರಸಿದ್ಧ ಸಂಶೋಧಕರು, ಲೇಖಕರು, ನ್ಯಾಯವೇತ್ತರೂ ಭಾಗವಹಿಸುತ್ತಿರುವುದು ದುರದೃಷ್ಟಕರ.
ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿ, ನಾಡದೇವಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘`ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬರ’ಬೇಕು. ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘`ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.
ಈ ಸಮ್ಮೇಳನದ ವೇದಿಕೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಎಲ್ಲರೊಂದಿಗೆ ಸಮಾನ ಗೌರವದಿಂದ ಭಾಗವಹಿಸುತ್ತಿರುವುದು, ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಮೂಢನಂಬಿಕೆಗಳ ವಿರುದ್ದ ಅವುಗಳ ಪ್ರಾಯೋಗಿಕ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸಂತೋಷದ ಸಂಗತಿಗಳು; ಇವುಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.
ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ(ವಿ)
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬
ವಿಳಾಸ: ೮೮೧ ಬಸವೇಶ್ವರ ರಸ್ತೆ ಮೈಸೂರು ೫೭೦೦೦೪
ವಿ ಅಂಚೆ panditaradhya@gmail.com
ಜಾಲಚರಿ panditaputa.wordpress.com
ದೂರವಾಣಿ ೯೪೪೮೪೮೧೪೦೨
*ಬಿಜಾಪುರ
೯ ಫೆಬ್ರುವರಿ ೨೦೧೩
ರಾಷ್ಟ್ರೀಯ ಶಕೆ ೧೯೩೪ ಶಿಶಿರ ಮಾಘ ೨೦ ಕೃಷ್ಣ ಚತುರ್ದಶಿ ಉತ್ತರಾಷಾಢ ಶನಿವಾರ
—
*ಬಿಜಾಪುರದಲ್ಲಿ ನಡೆದ ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.