ನಾನು ೨೦೧೨ನೇ ಜುಲೈ ೩೧ರಂದು ನಿವೃತ್ತನಾದ ಮೇಲೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಡೆ ಹೋಗುವುದು ಅಪರೂಪ. ಕಳೆದ ವಾರ ಹೋಗಿದ್ದಾಗ ನನಗೆ ಒಂದು ಮದುವೆಯ ಅಮಂತ್ರಣ ಕಾದಿತ್ತು. ಸರಳವಲ್ಲದ ಮತ್ತು ಸಂಪ್ರದಾಯ ರಹಿತವಲ್ಲದ ಮದುವೆಗಳಿಗೆ ನಾನು ಹೋಗುವುದಿಲ್ಲವೆಂಬುದು ನನ್ನ ವಿದ್ಯಾರ್ಥಿಗಳಿಗೂ ಗೊತ್ತಿದೆ. ಆದರೂ ಅಭ್ಯಾಸದಂತೆ ನನಗೂ ಒಂದು ಆಮಂತ್ರಣ ಪತ್ರವನ್ನು ಕೊಡುವುದುಂಟು. ಆಮಂತ್ರಣ ನೀಡಲು ಬಂದಾಗಲೇ ಅವರಿಗೆ ನನ್ನ ಸಂತೋಷವನ್ನೂ ಹಾರೈಕೆಗಳನ್ನು ತಿಳಿಸುತ್ತಿದ್ದೆ.
ಈಗ ನನಗೆ ಬಂದಿರುವ ಆಮಂತ್ರಣವೂ ನನ್ನ ವಿದ್ಯಾರ್ಥಿನಿಯಾಗಿದ್ದ ರೇಣುಕಾ ಕೋಡಗುಂಟಿ ಅವರ ಮದುವೆಯದು. ಅವರು ಮದುವೆಯಾಗುತ್ತಿರುವುದು ಸಂತೋಷದ ವಿಷಯ. ಆಮಂತ್ರಣ ಪತ್ರವನ್ನು ನನಗೆ ಪ್ರತ್ಯಕ್ಷವಾಗಿ ಕೊಡಲು ಸಾಧ್ಯವಾಗಿದ್ದರೆ ಅವರಿಗೆ ನನ್ನ ಶುಭಾಶಯಗಳನ್ನು ಹೇಳಬಹುದಿತ್ತು. ಹಾಗೆ ಸಾಧ್ಯವಾಗದ್ದರಿಂದ ಈ ಮೂಲಕ ಅವರಿಗೆ ಎಲ್ಲ ಒಳಿತನ್ನೂ ಹಾರೈಸುತ್ತೇನೆ.
ಆಮಂತ್ರಣ ಪತ್ರದ ಸ್ವರೂಪ, ಒಕ್ಕಣೆ ವಿಲಕ್ಷಣವಾಗಿ ಕಂಡದ್ದರಿಂದ ಅದನ್ನು ಇಲ್ಲಿ ಕೊಟ್ಟಿದ್ದೇನೆ:
ಹೊರ ಕವಚದ ಮೇಲಿನ ಬರಹ:
ಕೋಡಗುಂಟಿ ಕುಟುಂಬದವರ ಮದುವೆಯ ಆಮಂತ್ರಣ
ತಾರೀಕು : ೨೦–೦೫–೨೦೧೩ ಸೋಮವಾರ ಮುಂಜಾನೆ ೧೦.೦೦ರಿಂದ ೧೧.೩೦ರವರೆಗೆ
ಸ್ತಳ: ನಿಜಲಿಂಗಪ್ಪ ಸಬಾಬವನ, ವೀರಶಯಿವ ಕಲ್ಯಾಣ ಮಂಟಪದ ಪಕ್ಕ, ಶಿವಮೊಗ್ಗ
ಪೊಸತಿದು ಪಾವನಮಿದು ರಂ
ಜಿಸುವ ಮಹಾನರ್ ಗ್ಯಮ್ ಇಂತಿದೆಂಬೀ ಜಸದಿಂ
ರಸಕಾವ್ಯಮೀ ಮದುವೆ ರಾ
ಜಸಬೆ ಬ್ರಹ್ಮಸಬೆ ದೇವಸಬೆಗೆಸೆದಿರ್ಕುಂ
ಗೆ
ಕೋಡಗುಂಟಿ ವಂಶದ್ವಯರ್
ಬಸವರಾಜ ಕೋಡಗುಂಟಿ
(ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ)
ಪರಶುರಾಮ ಕೋಡಗುಂಟಿ
(ಪ್ರಕಾಶಕ, ಬಂಡಾರ ಪ್ರಕಾಶನ ಮಸ್ಕಿ)
ಆಮಂತ್ರಣದ ಒಕ್ಕಣೆ:
ಸ್ವಸ್ತಿಶ್ರೀ ವಿಜಯಾಬ್ಯುದಯ ಶ್ರೀಮನ್ರುಪ ಶಾಲಿವಾಹನ ಶಕ ಸಂವತ್ಸರಂಗಳ್ ಸಾವಿರದೊಂಬತ್ತುನೂರ ಮೂವತ್ತಯ್ದನೆ ಶ್ರೀ ವಿಜಯನಾಮ ಸಂವತ್ಸರದ ವಯಿಸಾಕ ಸುದ್ದ ದಶಮಿಯನ್ದು ತಾರೀಕು ಎರಡು ಸಾವಿರದಹದಿಮೂರನೆ ಮೇ ಮಾಸದ ಇಪ್ಪತ್ತನೆಯ ದಿವಸದೊಳ್ ಸೋಮವಾರದನ್ದು ಮುಂಜಾನೆಯ ಸಮಯ ಹತ್ತರಿಂ ಹನ್ನೊಂದುವರೆವರಂ ಸಲ್ವ ಶುಬ ಕರ್ಕಾಟಕ ಲಗ್ನದೊಳ್ ಶುಬ ಮುಹೂರ್ತದೊಳ್ ಎಮ್ಮ ತಂಗಿಯಪ್ಪ ರೇಣುಕಾ ಕೋಡಗುಂಟಿ ಎನ್ಬ ಕನ್ಯಾರತ್ನಮನ್ ಶ್ರೀಮತಿ ಶ್ರೀಯರು ಪೇರ್ಮಿ ಗವುರಮ್ಮ ಕ್ರಿಶ್ಣಮೂರ್ತಿಯವರ್ಕಳ ಕಿರಿಯ ಮಗನ್ ಪೇರ್ಮಿ ಬಾಲಾಜಿ ಎನ್ಬ ವರಂಗೆ ಕೊಟ್ಟು ವಿವಾಹಮನ್ ನೆರವೇರಿಸಲ್ ಮನೆದೇವರಾ ಹರಕೆಯಲ್ ಗುರುಹಿರಿಯರ ಕಯ್ಯಲ್ ನಿಶ್ಚಯಮನ್ ಮಾಡಿರ್ಪುದು.
ಶುಬ ಕಲ್ಯಾಣಂ ಶಿವಮೊಗ್ಗೆಯ ಶ್ರೀ ವೀರಶಯಿವ ಕಲ್ಯಾಣ ಮಂಟಪ ಪಕ್ಕದೊಳ್ ನಿಜಲಿಂಗಪ್ಪ ಸಬಾಬವನದೊಳು
ತಮ್ಮಂಗಳ ಆಶೀರ್ವಾದಂಗಳನ್ ಮದುಮಕ್ಕಳಿಂಗೆ ನೀಡುವುದು ಮನಮುದಮನ್ ತರುವುದು
ರಾಯಚೂರು ಜಿಲ್ಲೆಯೊಳ್ ಲಿಂಗಸೂಗೂರು ತಾಲೂಕಿನೊಳ್ ನಿಜಗ್ರಾಮ ಮಸ್ಕಿಯ
ಶ್ರೀಯರ್ಕಳ್ ಕೋಡಗುಂಟಿ ವಂಶದ್ವಯರ್ ಬಸವರಾಜ ಪರಶುರಾಮರ್
——
ವಾರದ ನೀರು:
ತಾರೀಕು ೨೨–೦೫–೨೦೧೩ ಬುದುವಾರ ಶ್ರೀ ಚವುಡೇಶ್ವರಿ ಸಮುದಾಯ ಬವನ ವೀರಾಪೂರ ಓಣಿ ಮಸ್ಕಿ (ಊಟ: ೧.೦೦ಕ್ಕೆ)
ಯೂನಿಕೋಡ್ ನಲ್ಲಿ ಅರ್ಕಾವತ್ತು ಮಾತ್ರ ಬಳಸಲು ಸಾಧ್ಯವಾದ್ದರಿಂದ ಮೂಲದಲ್ಲಿದ್ದಂತೆ ರಕಾರಕ್ಕೆ ಒತ್ತಕ್ಷರವನ್ನು ಬಳಸಲಾಗಿಲ್ಲ.
ಇಡೀ ಆಮಂತ್ರಣ ಪತ್ರದ ಭಾಷೆ ಯಾವ ಕಾಲದ ಕನ್ನಡದಲ್ಲಿದೆ ಎಂಬುದೇ ತಿಳಿಯಲಿಲ್ಲ. ಹಳಗನ್ನಡದ ಸುದ್ದಗೆಯೂ ಅಲ್ಲದ ಇಂದಿನ ಪ್ರಾದೇಶಿಕ, ಸಾಮಾಜಿಕ ಉಪಭಾಷೆ ಅಥವಾ ಶಿಷ್ಟ ಭಾಷೆಯೂ ಅಲ್ಲದ ವಿಲಕ್ಷಣ ವಿಕೃತಿಯಂತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಭಾಷಾವಿಜ್ಞಾನವನ್ನು ಅಧ್ಯಯನ, ಅಧ್ಯಾಪನ ಮಾಡುವವರು ಬಳಸಿರುವ ಭಾಷೆಯನ್ನು ನೋಡಿ ವಿಷಾದವಾಯಿತು. ಭಾಷಾವೈಜ್ಞಾನಿಕ ಕಾರಣವಾಗಲಿ ತರ್ಕವಾಗಲಿ ಇಲ್ಲದೆ, ಬಳಕೆಯಲ್ಲಿರುವ ಮಹಾಪ್ರಾಣ, ಶ ಆರ್ಕಾವತ್ತು ಮೊದಲಾದವನ್ನು ಬಿಟ್ಟು, ಯಾವ ಕಾಲದ, ಯಾವ ಸಮುದಾಯದ ಆಡುನುಡಿಯೂ ಅಲ್ಲದ, ಶಿಷ್ಟ ನುಡಿಯೂ ಅಲ್ಲದ ಭಾಷೆ ಮತ್ತು ಬರವಣಿಗೆಯಿಂದ ಕನ್ನಡವನ್ನು ವಿಕಾರಗೊಳಿಸುವುದಕ್ಕಿಂತೆ ಹೆಚ್ಚಿನದೇನನ್ನಾದರೂ ಸಾಧಿಸಿದಂತಾಗುತ್ತದೆ ಎಂದು ಅನಿಸುವುದಿಲ್ಲ.
ಆಮಂತ್ರಣದ ಕೊನೆಯಲ್ಲಿ ವಾರದ ನೀರು ಎಂಬ ಮಾತಿದೆ. ಅದು ಬಹುಶಃ ಆರತಕ್ಷತೆಯಂಥ ಸಂಪ್ರದಾಯವಿರಬಹುದು. ಆದರೆ ಆಮಂತ್ರಣದ ಪತ್ರದ ಭಾಷೆಯನ್ನು ನೋಡಿದಾಗ ಕನ್ನಡ ಭಾಷೆಗೆ ಎಳ್ಳುನೀರು ಬಿಟ್ಟಂತೆ ಅನಿಸಿತು.