Monthly Archives: ಜನವರಿ 2014

ಗಣರಾಜ್ಯೋತ್ಸವದ ಶುಭಾಶಯಗಳು

ಎಲ್ಲರಿಗೂ ೬೫ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಕನ್ನಡ ಅಂಕಿಗಳನ್ನೇ ಬಳಸಿ ೦ ೧ ೨ ೩ ೪ ೫ ೬ ೭ ೮ ೯

ಸಾಮಾನ್ಯ ಪೂರ್ವ ಶಕ ೩ನೆಯ ಶತಮಾನದ ಅಶೋಕನ ಶಾಸನಗಳು ಕರ್ನಾಟಕದ ಹಲವೆಡೆ ದೊರೆತಿವೆ. ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿರುವ ಈ ಶಾಸನಗಳಲ್ಲಿ ಮೊದಲ ಬಾರಿಗೆ ಅಂಕಿಗಳು ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಸಾ.ಶ. ೬ನೇ ಶತಮಾನದ ಕದಂಬ ರವಿವರ್ಮನ ಸಂಸ್ಕೃತ ಭಾಷೆಯ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.
ಬ್ರಾಹ್ಮೀ ಲಿಪಿಯ ದಕ್ಷಿಣ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಸಾ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಮೈಸೂರು ಒಡೆಯರು ತಮ್ಮ ನಾಣ್ಯಗಳಲ್ಲಿ; ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ (೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದರು. ಕನ್ನಡ ಬೆರಳಚ್ಚು ಯಂತ್ರದಲ್ಲಿ ಕನ್ನಡ ಅಂಕಿಗಳು ಕಣ್ಮರೆಯಾಗಿದ್ದವು. ಗಣಕ ತಂತ್ರಜ್ಞಾನ ಕನ್ನಡ ಅಂಕಿಗಳನ್ನು ಮತ್ತೆ ಒದಗಿಸಿದೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರ ದಿನಪತ್ರಿಕೆಗಳು, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಹೊಸತು, ಹುಬ್ಬಳ್ಳಿಯ ಕಸ್ತೂರಿ, ಬೆಂಗಳೂರಿನ ಕರ್ಮವೀರ ಹಾಗೂ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ. ಆಂದೋಲನ ಕೊಡಗಿನಲ್ಲಿ ಕನ್ನಡ ಅಂಕಿಗಳನ್ನು ಬಳಸುವ ದಿನಪತ್ರಿಕೆ ಎಂದು ಕೊಡವರ ಅಭಿಮಾನಕ್ಕೆ ಪಾತ್ರವಾಗಿದೆ. ಆಂದೋಲನ, ನವಕರ್ನಾಟಕ ಮೈಸೂರಿನ ಹರ್ಷ ಪ್ರಿಂಟರ್ಸ್ ಸಂಸ್ಥೆಗಳು ಕನ್ನಡ ಅಂಕಿಗಳ ದಿನಸೂಚಿಗಳನ್ನು ಪ್ರಕಟಿಸುತ್ತಿರುವುದು ಮೆಚ್ಚುವಂಥದು.
ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನು ಬಳಸಬೇಕೆಂಬ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳನ್ನು ಗೌರವಿಸಿ ಕನ್ನಡ ಅಂಕಿಗಳನ್ನು ಬಳಸಲು ಆರಂಭಿಸಿದ್ದ ಪತ್ರ್ರಿಕೆಗಳು ಅವನ್ನು ಬಿಟ್ಟಿರುವುದು ವಿಷಾದದ ಸಂಗತಿ. ಪ್ರಜಾವಾಣಿ ತನ್ನ ಮಾಸಿಕ ಸಾಹಿತ್ಯ ಪುರವಣಿಯಲ್ಲಿ ದಿನಾಂಕ, ಸಂಚಿಕೆಯ ಸಂಖ್ಯೆಗಳನ್ನು ಕನ್ನಡ ಅಂಕಿಯಲ್ಲಿ ನಮೂದಿಸುತಿತ್ತು. ಈ ತಿಂಗಳ ಸಾಹಿತ್ಯ ಪುರವಣಿಯೇ ಕಣ್ಮರೆಯಾಗಿದೆ! ಬಹುಶಃ ಸಂಪೂರ್ಣ ಕನ್ನಡ ಅಂಕಿಗಳನ್ನೇ ಬಳಸಿ ಸಾಹಿತ್ಯ ಸಮ್ಮೇಳನದ ವಿಶೇಷ ಪುರವಣಿ ಸಿದ್ಧಪಡಿಸುತ್ತಿರಬಹುದು. ಪತ್ರಿಕೆಯ ಎಲ್ಲೆಡೆ ಕನ್ನಡ ಅಂಕಿಗಳನ್ನೇ ಬಳಸಬೇಕು.
ವೈಜ್ಞಾನಿಕ ಮನೋಭಾವ, ವೈಚಾರಿಕತೆಗಳನ್ನು ಬೆಳಸಬೇಕಾದ ಸಮೂಹ ಮಾಧ್ಯಮಗಳು ಮತೀಯ ಮೂಲಭೂತವಾದ, ಇಂಗ್ಲಿಷ್ ಗುಲಾಮಗಿರಿಗಳ ಪ್ರತಿಪಾದನೆಯನ್ನು ಸ್ಪರ್ಧಾತ್ಮಕವೆಂಬಂತೆ ಹೆಚ್ಚಿಸುತ್ತಿರುವುದು ಕಳವಳದ ಸಂಗತಿ. ಕನ್ನಡ ಸಮೂಹ ಮಾಧ್ಯಮಗಳಲ್ಲಿ ಇಂಗ್ಲಿಷ್ ಪದಗಳ ಬಳಕೆ ಅನಗತ್ಯವಾಗಿ ಹೆಚ್ಚಿದೆ. ವಿಜಯ ಕರ್ನಾಟಕ ಪತ್ರಿಕೆ ತನ್ನ ಭಾನುವಾರದ ಸಂಚಿಕೆಯ ಹೆಸರಿನ ಜೊತೆ ’ಆನ್ ಸಂಡೇಸ್’ ಎಂದು ಇಂಗ್ಲಿಷ್ ಲಿಪಿಯಲ್ಲಿ ಮುದ್ರಿಸುತ್ತಿದೆ. ಪತ್ರಿಕೆಯ ವಿವಿಧ ವಿಭಾಗಗಳ, ಪುರವಣಿಗಳ ಹೆಸರುಗಳನ್ನು ಇಂಗ್ಲಿಷ್ ಭಾಷೆ ಮತ್ತು ಲಿಪಿಗಳಲ್ಲಿ ಪ್ರಕಟಿಸುತ್ತಿದೆ. ಕನ್ನಡ ಓದುಗರಿಗೆ ಅದರ ಅಗತ್ಯವಿಲ್ಲ. ಕನ್ನಡ ಬಾರದವರಿಗೆ ಅಷ್ಟನ್ನು ತಿಳಿದೂ ಪ್ರಯೋಜನವಿಲ್ಲ. ವಿಜಯ ಕರ್ನಾಟಕದ ಪುರವಣಿ ‘ಲವಲ’ದ ಜೊತೆ ಇಂಗ್ಲಿಷ್ ಅಕ್ಷರಗಳಲ್ಲಿರುವ ‘ವಿಕೆ’, ‘ವಿಕೆ ಎಜುಕೇಷನ್’, ‘ವಿಕೆ ಜಾಬ್ಸ್’, ‘ಪ್ರಾಪರ್ಟಿ’, ವಿಜಯ ‘ನೆಕ್ಸ್ಟ್’; ‘ಮೆಟ್ರೊ’, ‘ಬೈಟು ಕಾಫಿ’, ‘ಸುವರ್ಣ ಟೈಮ್ಸ್ ಆಫ್ ಕರ್ನಾಟಕ’ ಇವು ಕನ್ನಡ ಪತ್ರಿಕೆಗಳ, ಪುರವಣಿಗಳ ‘ಬೈ-ಟು-ಕನ್ನಡ’ ಹೆಸರುಗಳು! ಕನ್ನಡಿಗ ಮಾಲೀಕರೇ ಸಂಪಾದಕರಾಗಿರುವ ಪತ್ರಿಕೆಗಳೂ ಇಂಗ್ಲಿಷ್ ಭಾಷೆ ಮತ್ತು ಪದಗಳನ್ನು ಅನಗತ್ಯವಾಗಿ ಬಳಸುತ್ತಿವೆ. ಕನ್ನಡ ಪತ್ರಿಕೆ ಓದುಗರಿಗೆ ಕನ್ನಡ ಗೊತ್ತಿದ್ದರೆ ಸಾಲದು, ಇಂಗ್ಲಿಷ್ ಭಾಷೆಯ ಅರಿವೂ ಅನಿವಾರ್ಯ ಎನ್ನುವ ಪರಿಸ್ಥಿತಿಯನ್ನು ನಿರ್ಮಿಸುತ್ತಿರುವುದು ಸರಿಯಲ್ಲ. ಇಂಗ್ಲಿಷ್ ಸಮೂಹ ಮಾಧ್ಯಮಗಳು ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯನ್ನು ಬಳಸುವಂತೆ ಕನ್ನಡ ಸಮೂಹಮಾಧ್ಯಮಗಳೂ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಬಳಸಲೇಬೇಕು. ಇಂಗಿಷ್ ಮಾತ್ರ ಬಲ್ಲವರು ಗೌರವದಿಂದ ಇಂಗ್ಲಿಷ್ ಪತ್ರಿಕೆ ಓದಬಹುದಾದಂತೆ ಕನ್ನಡ ಮಾತ್ರ ಬಲ್ಲವರು ಕನ್ನಡ ಪತ್ರಿಕೆ ಓದಲಾಗದಂಥ ಅವಮಾನದ ವಾತಾವರಣವನ್ನು ಕನ್ನಡ ಪತ್ರಿಕೆಗಳು ಕನ್ನಡಿಗರಿಗೆ ನಿರ್ಮಿಸಿವೆ. ವಿಜಯ ಕರ್ನಾಟಕವಂತೂ ‘ಹೊಂದಾಣಿಕೆ ಮಾಡ್ಕೋಬೇಡಿ ಪ್ರತಿಭಟಿಸಿ’ ಎಂಬ ಕರೆಯನ್ನೂ ನೀಡಿದೆ. ವೈದ್ಯರೇ ನಿಮ್ಮನ್ನು ಗುಣಪಡಿಸಿಕೊಳ್ಳಿ!
ರಾಜಧಾನಿಯ ಕನ್ನಡ ಸಮೂಹ ಮಾಧ್ಯಮಗಳು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿವೆ. ಅವಕ್ಕೆ ತುರ್ತಾಗಿ ಕನ್ನಡತನದ ಆರೋಗ್ಯಕರ ರಕ್ತದಾನವಾಗಬೇಕಿದೆ. ಕನ್ನಡದ ಮಾಧ್ಯಮಗಳು ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನದ ಬದಲು ಕನ್ನಡ ಭಾಷೆಯ ಸೂಕ್ಷ್ಮ, ವೈಶಿಷ್ಟ್ಯಗಳನ್ನು ಬಳಸುವ ಮೂಲಕ ನಿಜವಾದ ಕನ್ನಡಾಭಿಮಾನವನ್ನು ಪ್ರದರ್ಶಿಸಬೇಕು. ಎಫ್.ಎಂ.(ಫಿನಿಶ್ ದ ಮದರ್ ಟಂಗ್?) ರೇಡಿಯೋ, ಇಂಗ್ಲಿಷ್ ಹೆಸರಿನ ಕನ್ನಡ ದೂರದರ್ಶನ ವಾಹಿನಿಗಳಲ್ಲಿನ ಇಂಗ್ಲಿಷ್ ಕಲಬೆರಕೆ ಜುಗುಪ್ಸೆ ಉಂಟುಮಾಡುತ್ತವೆ. ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ‘ಟೋಟಲ್ ಕನ್ನಡ’ ಎನ್ನುವುದು ಕನ್ನಡ ಮಳಿಗೆಯೊಂದರ ಹೆಸರು! ಕನ್ನಡವನ್ನೇ ಬಳಸಬೇಕೆಂಬ ವಾದವನ್ನು ಅದರ ತಾರ್ಕಿಕ ಅತಿಗೆ ಎಳೆದು ಸಾವಿರಾರು ವರ್ಷಗಳಿಂದ ಕನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಮೂಲದ ಪದಗಳ ಬದಲು ಮಿಂಚಂಚೆ(electronic mail), ಮಿಂಬಲೆ(weBLOG), ಓಡುತಿಟ್ಟ(ವಿಡಿಯೊ), ಎಣ್ಣುಕ(ಗಣಕ) ನನ್ನಿ (ಧನ್ಯವಾದ?) ಮೊದಲಾದ ಹಳಗನ್ನಡದಂಥ ರೂಪಗಳನ್ನು ಸೃಷ್ಟಿಸುವ ಪ್ರಯತ್ನಗಳೂ ನಡೆಯುತ್ತಿವೆ. ಪಾರಿಭಾಷಿಕ ಪರಿಕಲ್ಪನೆಯ ನಿಖರ ಅನುವಾದಕ್ಕೆ, ಭಾಷೆಯ ಜೀವಂತಿಕೆಗೆ ಎರವಾಗುವ ಇಂಥ ಎಲ್ಲ ಪ್ರಯತ್ನಗಳ ಬಗ್ಗೆ ಗಂಭೀರವಾದ ಮರುಚಿಂತನೆ ಅಗತ್ಯ.
ರಾಜ್ಯ ಸರಕಾರದ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-: ವೈವ ೨: ೭೮: ೨೦೦೧-೦೨ ದಿನಾಂಕ ೩೧-೮-೨೦೦೧). ನೋಂದಣಿ ಸಂಖ್ಯಾ ಫಲಕಗಳ ಬರವಣಿಗೆ ಉಬ್ಬು ಅಕ್ಷರಗಳಲ್ಲಿರಬೇಕೆಂಬ ಸರ್ವೋನ್ನತ ನ್ಯಾಯಾಲಯದ ಸೂಚನೆಯಂತೆ ಕನ್ನಡದಲ್ಲಿ ಉಬ್ಬು ಅಕ್ಷರ-ಅಂಕಿಗಳ ಫಲಕಗಳನ್ನು ಮೈಸೂರಿನ ‘ರಂಜನ್ ರೇಡಿಯಮ್ಸ್’ ಒದಗಿಸುತ್ತಿರುವುದು ಮೆಚ್ಚುವಂಥದು. ರಾಜ್ಯಗಳಲ್ಲಿ ನೋಂದಣಿಯಾಗುವ ವಾಹನಗಳು ಆಯಾ ರಾಜ್ಯಗಳ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ನಗರ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳು ಕನ್ನಡ ಅಂಕಿಗಳಲ್ಲಿರಬೇಕು.
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩). ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಇದು ದೇಶಕ್ಕೇ ಮಾದರಿಯಾಗಿದೆ ಎಂದು ಪ್ರಶಂಸಿಸಿತ್ತು.
ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದ್ದು ಇದರಿಂದ ಮಕ್ಕಳು ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.
ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು ಈ ತಿಂಗಳಿನಿಂದ ವಿಚಾರಣೆ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ಮಾಧ್ಯಮದ ವಿಚಾರಣೆಯಲ್ಲಿ ಕೇಂದ್ರ ಸರಕಾರವನ್ನು ಭಾಗಿಯಾಗಿ ಮಾಡಲಾಗಿದೆ. ಸಂವಿಧಾನ ಪೀಠದ ಅನುಮೋದನೆ ಪಡೆದ ಮೇಲೆ ರಾಜ್ಯದ ಶಿಕ್ಷಣ ಮಾಧ್ಯಮ ನೀತಿಯು ದೇಶಾದ್ಯಂತ ಅನ್ವಯವಾಗುವುದು ಮಹತ್ವದ ಸಂಗತಿ.
ನ್ಯಾಯಾಲಯ ತೀರ್ಪು ನೀಡುವವರೆಗೆ ಕಾಯದೆ, ಯಾರ ಮಾತೃಭಾಷೆಯೂ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವ, ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವ ಮತ್ತು ಜಿಲ್ಲೆಯಲ್ಲಿ ಒಂದೊಂದು ಮಾದರಿ ವಸತಿ ಶಾಲೆಗಳನ್ನು ತೆರೆಯುವ ಸರಕಾರದ ತೀರ್ಮಾನಗಳ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚು ಇರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಅವಕಾಶ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿ ನೀಡುವಂತಿದೆ.
ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ‘ಎಲ್ಲ ವರ್ಗ ಹಾಗೂ ಸಮುದಾಯಗಳ ಜನಪರ ಬೇಡಿಕೆ’ ಎಂದು ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸಬಾರದು; ಶಿಕ್ಷಣ ತಜ್ಞರ ಅಭಿಪ್ರಾಯದಂತೆ ನಿರ್ಧರಿಸಬೇಕು. ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಮಾತೃಭಾಷೆಯಲ್ಲದ ಇಂಗ್ಲಿಷನ್ನು ಎರಡನೆಯ ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಬಹುದು. ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿ ಮೊದಲು ಅವರನ್ನು ಸಿದ್ಧಪಡಿಸಬೇಕು. ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಮೊದಲು ಕಲಿಸಿದ ಅನಂತರವೇ ಇಂಗ್ಲಿಷಿನಲ್ಲಿ ಓದಿ ಬರೆಯುವುದನ್ನು ಕಲಿಸಬೇಕು.
ಮುಸ್ಲಿಮರಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಇರುವುದರಿಂದ ಇತರ ಸಾಮಾಜಿಕ ವರ್ಗಗಳ ಜೊತೆ ಅವರಿಗೆ ಇರುವ ಅಂತರ ತಗ್ಗಲು ಅವರಿಗೆ ಹೆಚ್ಚಿನ ಶಿಕ್ಷಣಾವಕಾಶಗಳನ್ನು ಒದಗಿಸಬೇಕು ಎಂದು ಸಾಚಾರ್ ಸಮಿತಿ ಶಿಫಾರಸು ಮಾಡಿದೆ. ಅದರ ಅನ್ವಯ ಕೇಂದ್ರ ಸರಕಾರವು ದೇಶದ ಐದು ಕಡೆಗಳಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಗಳನ್ನು ತೆರೆಯುವುದಾಗಿ ತಿಳಿಸಿದೆ. ಅವುಗಳಲ್ಲಿ ಒಂದನ್ನು ಶ್ರೀರಂಗಪಟ್ಟಣ/ಕೋಲಾರ(?)ದಲ್ಲಿ ತೆರೆದು ಅದಕ್ಕೆ ಟಿಪ್ಪೂಸುಲ್ತಾನನ ಹೆಸರಿಡುವುದಾಗಿಯೂ ಸಂಬಂಧಪಟ್ಟ ಸಚಿವರು ಹೇಳಿದ್ದಾರೆ. ಧಾರ್ಮಿಕ/ಭಾಷಿಕ ಅಲ್ಪಸಂಖ್ಯಾತರು ತಮ್ಮ ಧರ್ಮ, ಸಂಸ್ಕೃತಿ, ಭಾಷೆ, ಲಿಪಿ, ಅಕ್ಷರ, ಅಂಕಿ ಮೊದಲಾದುವನ್ನು ರಕ್ಷಿಸಿಕೊಳ್ಳಲು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದನ್ನು ನಿರ್ವಹಿಸುವ ವಿಶೇಷ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ವ್ಯಾಖ್ಯೆಯ ಬಗ್ಗೆ ಬಗೆಹರಿಯದ ಗೊಂದಲ, ವಾದ ವಿವಾದಗಳಿವೆ. ಇಂಥ ಸಂಸ್ಥೆಗಳು ಸ್ಥಾಪಿಸಿ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ. ೫೦ ಅನ್ನು ಅವರ(ಸಮುದಾಯದ?)ಆಯ್ಕೆಗೆ ಬಿಡಲಾಗಿದೆ. ಅಲ್ಲಿ ಸಾಮಾನ್ಯ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ; ಇತರ ಹಿಂದುಳಿದ ವರ್ಗಗಳಿಗೆ ಶೇ. ೨೭ರ ಮೀಸಲಾತಿ ಇರುವುದಿಲ್ಲ. ಮತಧರ್ಮ ನಿರಪೇಕ್ಷತೆಯ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು ಸರಕಾರವೇ ಸ್ಥಾಪಿಸಿ ನಡೆಸುವ ಸಂಸ್ಥೆಗಳೇ ಪೋಷಿಸುವುದರ ಪರಿಣಾಮಗಳನ್ನು ಕುರಿತು, ಸಂವಿಧಾನದ ವಿಶೇಷ ಹಕ್ಕಿನ ವ್ಯಾಪ್ತಿ, ಅದರಿಂದ ಕನ್ನಡ ಭಾಷೆ, ಶಿಕ್ಷಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾದ ತುರ್ತು ಇದೆ. ಅದರ ಬದಲು ಚರಿತ್ರೆಯಲ್ಲಿ ಆಗಿಹೋದ ಟಿಪ್ಪುಸುಲ್ತಾನನ ಹೆಸರನ್ನು ಇಡುವ ಬಗ್ಗೆ, ಅವನ ದೇಶಪ್ರೇಮ, ಮತಾಂಧತೆ ಮೊದಲಾದವುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಲ್ಲಿ ಪ್ರಸಿದ್ಧ ಸಂಶೋಧಕರು, ಲೇಖಕರು, ನ್ಯಾಯವೇತ್ತರೂ ಭಾಗವಹಿಸುತ್ತಿರುವುದು ದುರದೃಷ್ಟಕರ.
ಸ್ವಾತಂತ್ರ್ಯಾನಂತರ ದೇಶ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಈಗ ಸಮೀಕರಿಸುವಂತಿಲ್ಲ. ಕನ್ನಡತಾಯಿ, ನಾಡದೇವಿಯ ಹೆಸರಿನಲ್ಲಿ ಒಂದು ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಹೇಳುವಂತೆ ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬರ’ಬೇಕು. ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.
ಕೊಡಗು ಕರ್ನಾಟಕದ ವಿಶಿಷ್ಟ ಜಿಲ್ಲೆ. ಕೊಡವ ಭಾಷೆ, ಸಂಸ್ಕೃತಿಗಳನ್ನು ಮತಧರ್ಮ ನಿರಪೇಕ್ಷತೆಯ ನೆಲೆಯಲ್ಲಿ ಪ್ರೋತ್ಸಾಹಿಸಿ ಬೆಳೆಸುವ, ಕೊಡಗಿನ ವಿಶಿಷ್ಟ ಸಮಸ್ಯೆಗಳಿಗೆ ವಿಶೇಷ ಗಮನಹರಿಸಬೇಕಾದ ಹೊಣೆಯೂ ರಾಜ್ಯ ಸರಕಾರದ ಮೇಲಿದೆ. ಪ್ರಸಿದ್ಧ ಸಂಶೋಧಕರಾಗಿದ್ದ ಡಾ ಶ್ರೀನಿವಾಸ ಹಾವನೂರ ಅವರು ೧೯೮೦ರ ದಶಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಕನ್ನಡ ಎಂ.ಎ. ತರಗತಿಯಲ್ಲಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತ ಐಚ್ಛಿಕ ಆಧ್ಯಯನ ವಿಷಯವನ್ನು ಆರಂಭಿಸಿದ್ದರು. ಕೊಡಗಿನ ಸ್ನಾತಕೋತ್ತರ ಕೆಂದ್ರದಲ್ಲಿ ಈ ಅಧ್ಯಯನಕ್ಕೆ ವಿಶೇಷ ಆವಕಾಶಗಳನ್ನು ಒದಗಿಸಬೇಕು. ಕೊಡವ ಭಾಷೆಯನ್ನು ಸಮೃದ್ಧ ಬರವಣಿಗೆಯ ಭಾಷೆಯಾಗಿ ಬಳಸುವ ಬೆಳೆಸುವ ಹೊಣೆ ಸರಕಾರ, ಶಿಕ್ಷಣ ತಜ್ಞರು, ಪರಿಷತ್ತು, ಅಕಾಡೆಮಿಗಳು ಮತ್ತು ಕೊಡವ ಭಾಷಾಭಿಮಾನಿಗಳ ಮೇಲಿದೆ. ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಎಂಬ ಭಾಷಾ ನೀತಿಯಂತೆ ಪ್ರಾಥಮಿಕ ಶಿಕ್ಷಣದಿಂದ ಕೊಡವ ಭಾಷೆಯ ಕಲಿಕೆಯನ್ನು ಆರಂಭಿಸುವುದು ಸ್ವಾಗತಾರ್ಹ.
ಪ್ರಾಥಮಿಕ ಪೂರ್ವದಿಂದ ಪಿಎಚ್ ಡಿಯೋತ್ತರದವರೆಗೆ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು. ಮಾತೃಭಾಷೆಯಲ್ಲಿ ನಡೆಸುವ ಅಧ್ಯಯನ ಸಂಶೋಧನೆಗಳು ಪರಿಣಾಮಕಾರಿಯಾದ ಅಭಿವ್ಯಕ್ತಿ ಪಡೆಯುತ್ತವೆ. ಐದನೆಯ ತರಗತಿಯಿಂದ ಆಡುಭಾಷೆಯಾಗಿ, ಅನಂತರ ಗ್ರಂಥಾಲಯ ಭಾಷೆಯಾಗಿ ಇಂಗ್ಲಿಷನ್ನು ಕಲಿತಿರುವುದರಿಂದ ಉನ್ನತ ಅಧ್ಯಯನಕ್ಕೆ, ನೆರೆ ರಾಜ್ಯಕ್ಕೆ, ವಿದೇಶಗಳಿಗೆ ಹೋಗುವ ಕೆಲವರಿಗೆ ತೊಂದರೆಯಾಗುವುದಿಲ್ಲ. ಬಹುಸಂಖ್ಯೆಯಲ್ಲಿ ಜನರು ತಮ್ಮ ಭಾಷೆಯಲ್ಲಿ ಹೊಸ ಹೊಸ ವಿಷಯಗಳನ್ನು ಕುರಿತು ಸ್ವತಂತ್ರವಾಗಿ ಯೋಚಿಸಿ ಸಂಶೋಧಿಸಲು ಸಾಧ್ಯವಾಗುವುದು ಮುಖ್ಯ.

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ

ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ(ವಿ)
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
೮೮೧ ಬಸವೇಶ್ವರ ರಸ್ತೆ ಮೈಸೂರು ೫೭೦೦೦೪
ದೂರವಾಣಿ ೯೪೪೮೪೮೧೪೦೨

*ಮಡಿಕೇರಿ
೭ ಜನವರಿ ೨೦೧೪
ರಾಷ್ಟ್ರೀಯ ಶಕೆ ೧೯೩೫ ಶಿಶಿರ ಪುಷ್ಯ ೧೬
O ಸಪ್ತಮಿ ಉತ್ತರಾಭಾದ್ರ ಮಂಗಳವಾರ
ವಿ ಅಂಚೆ panditaradhya@gmail.com
ಜಾಲಚರಿ panditaputa.wordpress.com

* ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.