Category Archives: ಈಗ

ಈಗ ಚರ್ಚೆಯಾಗುತ್ತಿರುವ ವಿಷಯಗಳು

ಗೋಹತ್ಯೆ ನಿಷೇಧ ಮತ್ತು ಸಾವರಕರ್

ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಿ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆದು ಮತ್ತೆ ಮಂಡಿಸಿದೆ. ಮತಧರ್ಮನಿರಪೇಕ್ಷ ಸಂವಿಧಾನವನ್ನು ಒಪ್ಪಿರುವ ನಾವು ಗೋಹತ್ಯೆಯಂಥ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯವನ್ನು ವೈಚಾರಿಕ ನಿಕಷಕ್ಕೆ ಒಡ್ಡಬೇಕು. ಈ ನಿಟ್ಟಿನಲ್ಲಿ ಹಿಂದೂರಾಷ್ಟ್ರ ಪ್ರತಿಪಾದಕರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರ ಗೋವಿನ ಕುರಿತ ವಿಚಾರಗಳು ಗಮನಾರ್ಹ (`ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’ ಮಹಾರಾಷ್ಟ್ರ ಶಾರದಾ, ಏಪ್ರಿಲ್ ೧೯೩೫):

“…ಹಸು ಎತ್ತುಗಳನ್ನು ಪೂಜಿಸುವುದು ಹಿಂದೂ ಧರ್ಮಕ್ಕೇ ವಿಶಿಷ್ಟವಾದ ಸಂಗತಿಯಲ್ಲ. ಪ್ರಪಂಚದ ವಿವಿಧ ಕಡೆ ಜೀವಸೃಷ್ಟಿಗೆ ಕಾರಣವಾದ ಪುರುಷ ಮತ್ತು ಸ್ತ್ರೀ ಅವಯವಗಳ ಪ್ರತೀಕಗಳಾಗಿ ವೃಷಭ ಮತ್ತು ಗೋವಿನ ಪೂಜೆ ನಡೆಯುತ್ತಿತ್ತು.

“…ನಾನು ಕಂಡ ಹಲವು ಪ್ರಾಮಾಣಿಕ, ಶ್ರೇಷ್ಠ, ಸಭ್ಯ ಗೋಭಕ್ತರು ಗೋಮಾತೆಯ ಗಂಜಲ ಮತ್ತು ಸಗಣಿಗಳಿಗೆ ಬ್ರಹ್ಮವಾದದ ಆಧಾರ ನೀಡಿ ಪಂಚಗವ್ಯ ಸೇವಿಸುತ್ತಾರೆ. ಗಂಜಲವನ್ನು ದೇವಾಲಯದಲ್ಲಿ ಸಿಂಪಡಿಸುತ್ತಾರೆ. ಆದರೆ ಅವರಿಗಿಂತಲೂ ಪ್ರಜ್ಞಾವಂತರಾದ ಡಾ ಅಂಬೇಡ್ಕರರಂಥ ಶುದ್ಧ ಮತ್ತು ಪೂರ್ವಾಸ್ಪೃಶ್ಯರ ಕೈಯಿಂದ ನಿರ್ಮಲ ಗಂಗೋದಕ ಕುಡಿಯುವುದಿಲ್ಲ! ಅದು ಮೈಗೆ ಸಿಂಪಡಿಸಿದರೂ ಮೈಲಿಗೆಯಾಯಿತೆಂದು ಸ್ನಾನ ಮಾಡುತ್ತಾರೆ.

“ಹಸು ದೇವತೆ ಎಂದೂ ಹಾಗೆಯೇ ವರಾಹಾವತಾರಿಯಾದ ದೇವರೂ ಹಂದಿ ಎಂದು ಪುರಾಣ ಹೇಳುತ್ತದೆ. ಹೀಗಿರುವಾಗ ಗೋರಕ್ಷಣೆಯೇ ಏಕೆ ಬೇಕು? ಹಂದಿ ರಕ್ಷಣೆ ಸಂಘವನ್ನು ಸ್ಥಾಪಿಸಿ ಹಂದಿಪೂಜೆಯನ್ನೇಕೆ ಬಳಕೆಗೆ ತರಬಾರದು? ಮನುಷ್ಯನು ಎಲ್ಲ ರೀತಿಯಿಂದ ತನಗಿಂತ ಹೀನಗುಣವಿರುವ ಪಶುವನ್ನು ದೇವರೆಂದು ಒಪ್ಪುವುದರಿಂದ ಮನುಷ್ಯನನ್ನೇ ಪಶುವಿಗಿಂತಲೂ ಕೀಳೆಂದು ಒಪ್ಪಿ ಮಾನವೀಯತೆಯನ್ನು ಗೌಣಗೊಳಿಸಿದಂತಾಗುತ್ತದೆ.

“ಮನುಷ್ಯ ಎಲ್ಲ ದೃಷ್ಟಿಯಿಂದ ತನಗಿಂತಲೂ ಸರ್ವಶ್ರೇಷ್ಠವಾದ ಪ್ರತೀಕವನ್ನು ಮಾತ್ರ ದೇವರೆಂದು ಸ್ವೀಕರಿಸಬೇಕು. ಕತ್ತೆ ಬೇಕಾದರೆ ಗೋವನ್ನು ತನಗಿಂತ ಶ್ರೇಷ್ಠ ಎಂದು ಸ್ವೀಕರಿಸಲಿ. ಆದರೆ ಮನುಷ್ಯ ಹಾಗೆ ಮಾಡುವುದು ಮೂರ್ಖತನ.

“ಇಂದಿನ ಪರಿಸ್ಥಿತಿಯಲ್ಲಿ ಅರ್ವಾಚೀನ ಮತ್ತು ಪ್ರಯೋಗಸಿದ್ಧ ವಿಜ್ಞಾನವೇ ನಮ್ಮ ರಾಷ್ಟ್ರದ ವೇದವಾಗಬೇಕು. ಈ ಪ್ರವೃತ್ತಿಗೆ ಗೋಪೂಜೆ ಹೊಂದಿಕೆಯಾಗದಿದ್ದರೆ ಅದನ್ನು ಬಿಡಬೇಕು. ಇಂಥ ಮೂರ್ಖತನಕ್ಕೆ `ಧರ್ಮ’ ಎಂದು ಪುರಾಣಗಳು ಹೇಳಿರುವುದಕ್ಕೆ ತಲೆದೂಗಿದರೆ ರಾಷ್ಟ್ರದ ಸರ್ವನಾಶ ಖಂಡಿತ. ಗೋಪೂಜೆಯಿಂದ ಆಗುವ ಲಾಭಕ್ಕಿಂತ ಹಾನಿ ಅತ್ಯಂತ ಘಾತುಕ. ಒಂದು ವೇಳೆ ಗೋಹತ್ಯೆ ನಡೆದರೂ ಅಡ್ಡಿಯಿಲ್ಲ. ರಾಷ್ಟ್ರದ ಬುದ್ಧಿಹತ್ಯೆ ಮಾತ್ರ ಆಗಬಾರದು. ಹಸು ಮತ್ತು ಎತ್ತು ನಮ್ಮ ಕೃಷಿಪ್ರಧಾನ ರಾಷ್ಟ್ರಕ್ಕೆ ಉಪಯುಕ್ತ ಪ್ರಾಣಿಗಳು ಎಂದು ಆ ಪ್ರಾಣಿಗಳನ್ನು ಎಷ್ಟು ಬೇಕೊ ಅಷ್ಟು ಬಳಸಿದರೆ ಸಾಕು. ಅದರ ಬದಲು ಅದು ದೇವತೆ, ಪುರಾಣದಲ್ಲಿ ಅದನ್ನು ಪೂಜಿಸುವುದನ್ನು ಧರ್ಮ ಎಂದು ಹೇಳಿದೆ ಎಂದು ಬೊಗಳೆ ಬಿಟ್ಟರೆ ರಾಷ್ಟ್ರಕ್ಕೆ ನೂರುಪಟ್ಟು ಹಾನಿಯಾಗುತ್ತದೆ. ಅಲ್ಪ ಲಾಭಕ್ಕಾಗಿ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ.

“ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ ೩೩ ಕೋಟಿ ದೇವತೆಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ ವಿಸರ್ಜನೆಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಭಕ್ತರಂತೆ ಹೇಡಿಯೇ? ಕಟುಕನೇ ೩೩ ಕೋಟಿ ದೇವತೆಗಳಿಗಿಂತ ಪರಾಕ್ರಮಿಯೆ?

“`ಹಸು ಮಹಾಮಾತೆಯಾಗಿರುವವನೇ ಹಿಂದೂ’ ಎನ್ನುವುದು ಹಿಂದುತ್ವಕ್ಕೆ ಮಾಡಿದ ಅಪಮಾನ. ಹಸು ಕರುವಿಗೆ ಮಾತ್ರ ತಾಯಿ, ಹಿಂದೂಗಳಿಗಲ್ಲ. `ಗೋರಕ್ಷಣೆಯೇ ಧರ್ಮ’, `ಸ್ವಧರ್ಮೇ ನಿಧನಂ ಶ್ರೇಯಃ’ ಎಂದಾಗ ವಿವೇಕ, ಬುದ್ಧಿ ಸಂಪೂರ್ಣ ಕುರುಡಾಗಿ ಪ್ರಜ್ಞೆ ತಪ್ಪಿದ ಅನುಭವವಾಗುತ್ತದೆ.

“ಇಂಥ ಅನಾಗರಿಕ ಮತ್ತು ಮೂರ್ಖ ಸಂಸ್ಕಾರಕ್ಕೆ ತಿಲಾಂಜಲಿ ನೀಡುವುದೇ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಶೋಭಿಸುವ ಮಾರ್ಗ. ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದೃಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪ ಬಿಟ್ಟು ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ಹಸು ಎತ್ತುಗಳನ್ನು ದೇವರೆಂದು ತೋರಿಸುತ್ತ ತಿರುಗುವ ಗೋಭಕ್ತನನ್ನು ತಡೆದು ಎತ್ತನ್ನು ನೊಗಕ್ಕೆ ಹೂಡಬೇಕು; ಅವನನ್ನು ದೇಶಸೇವೆಗೆ ದುಡಿಸಬೇಕು” (ಸಾವರಕರ: ಒಂದು ಅಭಿನವ ದರ್ಶನ, ಅನುವಾದ: ಚಂದ್ರಕಾಂತ ಪೋಕಳೆ ಬೆಳಗಾವಿ ೨೦೦೯ ಪು.೨೭-೩೭).

ಸಾವರಕರ್, ಗೋರಕ್ಷಣೆಯ ಹುಚ್ಚುತನದಂತೆ ಧಾರ್ಮಿಕ ನಂಬಿಕೆಯ ಗೋಭಕ್ಷಣೆಯ ಕ್ರೌರ್ಯವನ್ನೂ ಖಂಡಿಸಿದ್ದಾರೆ. ಆದ್ದರಿಂದ ಸರಕಾರ ಗೋರಕ್ಷಣೆಯ ಮಸೂದೆಯನ್ನು ಹಿಂದಕ್ಕೆ ಪಡೆದು ಅದರ ಬಗ್ಗೆ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಗೌರವಕ್ಕೆ ಸಲ್ಲುವಂತೆ ವ್ಯಾಪಕವಾದ ವೈಚಾರಿಕ, ವೈಜ್ಞಾನಿಕ ಸಾರ್ವಜನಿಕ ಚರ್ಚೆ ನಡೆಸುವುದು ಅಗತ್ಯ.

೧೬ಮಾರ್ಚಿ೨೦೧೦

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು ೫೭೦೦೦೬

ನಮಸ್ಕಾರ

ಮಾನ್ಯರೆ,

ಹನ್ನೆರಡು ವರ್ಷಗಳ ಹಿಂದೆ ಪ್ರತಿ ತಿಂಗಳು
ಜಿಯೊಸಿಟಿಸ್.ಕಾಂ ತಾಣದಲ್ಲಿ ಪಂಡಿತ ಪುಟವನ್ನು ಪ್ರಕಟಿಸುತ್ತಿದ್ದೆ..
ಕಾರಣಾಂತರಗಳಿಂದ ಪಂಡಿತ ಪುಟದ ಪ್ರಕಟಣೆ ನಿಂತುಹೋಗಿತ್ತು.
ಈಗ ಅದನ್ನು ಜಾಲ ಚರಿಯಾಗಿ ಪ್ರಕಟಿಸುತ್ತಿದ್ದೇನೆ.
ನೀವು ಮುಕ್ತವಾಗಿ ಪ್ರತಿಕ್ರಿಯಿಸಬೇಕೆಂದು ಕೋರುತ್ತೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ