Category Archives: 1

ಆಂಗ್ಲ ಮಾಧ್ಯಮ – ಗುಡುಗುವವರಿಲ್ಲ ; ಗೊಣಗುವವರೇ ಎಲ್ಲ

ಎಚ್. ಶಾಂತರಾಜ ಐತಾಳ

ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೇ ಪ್ರೆಸಿಡೆನ್ಸಿಗಳೆಲ್ಲ ಮಾಯವಾದ ಮೇಲೆ ಭಾಷಾವಾರು ರಾಜ್ಯಗಳ ಉದಯವಾಗಿ ಅರ್ಧ ಶತಮಾನವೇ ಕಳೆದಿದೆ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲೇ ತಮ್ಮ ಮಾತೃಭಾಷೆ ಎನ್ನುವುದು ಎಳೆಯ ಕಂದಮ್ಮಗಳಿಗೆ ಕೈಗೆಟುಕದ ಕಜ್ಜಾಯವಾಗಿ ಬಿಟ್ಟಿದೆ. ಕನ್ನಡ ಮಾಧ್ಯಮ ಶಾಲೆಗಳೆಂದರೆ ತಾತ್ಸಾರ, ಆಂಗ್ಲ ಮಾಧ್ಯಮಕ್ಕೆ ಪುರಸ್ಕಾರ. ಇದು ಎಲ್ಲೆಡೆ ಕಂಡು ಬರುವ ದೃಶ್ಯ. ಹೀಗೆ ಆರಂಭದಲ್ಲೇ ಮಾತೃಭಾಷೆಯಿಂದ ವಂಚಿತರಾಗುವ ಮಕ್ಕಳು ಮುಂದೆ ಪ್ರತಿ ಹಂತದಲ್ಲೂ ತಡವರಿಸುತ್ತಾರೆ.

ಇದು ಮುಖ್ಯವಾಗಿ ಕನ್ನಡದ ಮಕ್ಕಳ ಮನತಟ್ಟುವ ಮೊರೆ. ವಿಚಿತ್ರವೆಂದರೆ ದೇಶದೆಲ್ಲೆಡೆಯ ಒಂದನೆಯ ತರಗತಿಯ ಎಳೆಯರಿಗೆ ಆಂಗ್ಲ ಮಾಧ್ಯಮವೆನ್ನುವುದು ಒಂದು ಹೊರೆ. ಗುಜರಾತ್ ರಾಜ್ಯದ ಒಂದು ಸರಕಾರೇತರ ಸಂಸ್ಥೆ ‘ಪ್ರಥಮ್” ಕೈಗೊಂಡ ಅಧ್ಯಯನದ ಅನ್ವಯ ಆ ರಾಜ್ಯದಲ್ಲಿ ಗುಜರಾತಿ ಭಾಷೆಯನ್ನು ಗುಜರಿ ಮಾಡಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಭಾಷೆಗೆ ಮನ್ನಣೆ ನೀಡಿದ್ದರಿಂದ, ಚಿಕ್ಕ ಮಕ್ಕಳ ಮೇಲೆ ಗಂಬಿರ ಪರಿಣಾಮ ಉಂಟಾಗಿದೆ. ಅಲ್ಲಿಯ ಆಂಗ್ಲ ಮಾಧ್ಯಮದ ಒಂದನೇ ಕ್ಲಾಸಿನ ಶೇ. ೨೫ ಮಕ್ಕಳು ಮಾತ್ರ ಆಂಗ್ಲ ಭಾಷೆಯ ದೊಡ್ಡಕ್ಷರಗಳನ್ನು (ಕ್ಯಾಪಿಟಲ್ ಲೆಟರ್ಸ್) ಗುರುತಿಸಬಲ್ಲರು ಹಾಗೂ ಕೇವಲ ೮ ಶೇ. ಮಕ್ಕಳು ಮಾತ್ರ ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲರು.

ಕೇರಳದ ಕೊಟ್ಟಾಯಂನಿಂದ ಮಕ್ಕಳಿಗಾಗಿಯೇ ಪ್ರಕಟವಾಗುವ ನಿಯತಕಾಲಿಕ (ಮಾಜಿಕ್ ಪೊಟ್)ದ ಸಂಪಾದಕೀಯದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗಿದೆ. ‘ದೇಶದಲ್ಲಿ ಆಂಗ್ಲ ಭಾಷಾ ಮಾಧ್ಯಮವನ್ನು ಒಂದನೇ ಕ್ಲಾಸಿನಿಂದಲೇ ಹೇರುತ್ತಾ ಬಂದಿರುವುದರಿಂದ ಮಕ್ಕಳಲ್ಲಿ ಇಂಗ್ಲಿಷ್ ಓದುವ ಸಾಮರ್ಥ್ಯ ಏನೂ ಸುಧಾರಿಸಿಲ್ಲ. ಹೀಗೆ ಮಾತೃಭಾಷಾ ಮಾಧ್ಯಮ ವಂಚಿತರಾದ ಮಕ್ಕಳ ಪೈಕಿ ಕೇವಲ ೪೩ ಶೇ. ದಷ್ಟು ಮಾತ್ರ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಲು ಶಕ್ತರಾಗಿದ್ದಾರೆ. ಇದೂ ದೊಡ್ಡಕ್ಷರಗಳನ್ನು ಮಾತ್ರ’ ಎಂಬ ಆತಂಕವನ್ನು ಪತ್ರಿಕೆ ವ್ಯಕ್ತಪಡಿಸಿದೆ.

ಇವೆಲ್ಲ ಏನನ್ನು ಸೂಚಿಸುತ್ತವೆ? ಆರಂಭಿಕ ಹಂತದಲ್ಲಿ ಮಾತೃಭಾಷೆಗೆ ಮಾನ್ಯತೆ ನೀಡಬೇಕೆಂಬುದು ವಿಶ್ವಕ್ಕೇ ತಿಳಿದ ಸತ್ಯ. ವಿದೇಶಗಳಲ್ಲಿ ನಡೆಸಲಾದ ಹಲವಾರು ಅಧ್ಯಯನಗಳನ್ವಯ ಮಕ್ಕಳು ನಿಮಿಷಕ್ಕೆ ೪೫ರಿಂದ ೬೦ ಶಬ್ದಗಳನ್ನು ಸರಾಗವಾಗಿ ಓದಲು ಶಕ್ತರಾದಾಗ ಮಾತ್ರ ತಾವು ಓದಿದ್ದನ್ನು ಅರಗಿಸಿಕೊಳ್ಳಬಲ್ಲರು. ಹೀಗೆ ಮಾಡಲು ಅವರ ತಾಯ್ನುಡಿಯಲ್ಲಿ ಮಾತ್ರ ಸಾಧ್ಯ. ಈ ಗುರಿ ತಲುಪಿದ ಮೇಲಷ್ಟೇ ಇಂಗ್ಲಿಷ್ ನಂತಹ ದ್ವಿತೀಯ ಭಾಷೆಯ ಕಲಿಕೆ ಅರಿವಿಗೆ ತುಂಬ ಸುಲಭವಾಗುತ್ತದೆ.
ಇದರ ಬದಲಿಗೆ ದ್ವಿತೀಯ ಭಾಷೆಯಾದ ಇಂಗ್ಲಿಷನ್ನೇ ಮಾಧ್ಯಮವನ್ನಾಗಿ ಮಾಡಿ ಬಿಟ್ಟರೆ ಅವರಿಗೆ ಯಾವ ಭಾಷೆಯಲ್ಲೂ ವೇಗವಾಗಿ ಓದಲು ಸಾಧ್ಯವೇ ಆಗಲಾರದು. ಎರಡನೇ ತರಗತಿಯ ಒಳಗೆ ಓದು ಮತ್ತು ಬರಹಗಳಲ್ಲಿ ವೇಗವನ್ನು ಗಳಿಸದೆ ಹೋದರೆ ಅಂತಹ ಮಕ್ಕಳು ಮೇಲಿನ ತರಗತಿಗಳಲ್ಲೂ ತಮ್ಮ ಸಹಪಾಠಿಗಳಿಗೆ ಸರಿ ಕಟ್ಟಲಾರರು.

ಜಾಗತಿಕ ಮಟ್ಟದ ಶಿಕ್ಷಣ ತಜ್ಞರು ನಿರಂತರವಾಗಿ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದ ಇತರ ಅಂಶಗಳೆಂದರೆ-ಮಾನವನ ಅಲ್ಪಾವದಿಯ ಜ್ಞಾಪಕ ಶಕ್ತಿ ೧೨ ಸೆಕೆಂಡುಗಳ ವರೆಗೆ ಮಾತ್ರ ಶ್ರೇಷ್ಠ ಮಟ್ಟದ್ದಾಗಿರುತ್ತದೆ. ಆದ್ದರಿಂದ ಈ ಅವದಿಯ ಒಳಗೆ ಒಂದು ವಾಕ್ಯವನ್ನು ಓದಬಲ್ಲ ವ್ಯಕ್ತಿ ಅದನ್ನು ತನ್ನ ಮೆದುಳೆಂಬ ಗ್ರಂಥಾಲಯದಲ್ಲಿ ಶೇಖರಿಸಿಟ್ಟುಕೊಳ್ಳಬಲ್ಲನು. ಹಾಗೆಯೇ ಒಂದರಿಂದ ಒಂದೂವರೆ ಸೆಕೆಂಡಿಗೆ ಒಂದು ಶಬ್ದವನ್ನು ಗ್ರಹಿಸಲು ಶಕ್ತನಾದ ವಿದ್ಯಾರ್ಥಿ ಉತ್ತಮ ಓದುಗನಾಗಬಲ್ಲನು. ಇದಕ್ಕಿಂತ ನಿಧಾನವಾಗಿ ಓದಿದರೆ ವಾಕ್ಯದ ಕೊನೆಯನ್ನು ತಲುಪುವಾಗ, ಆರಂಭದಲ್ಲಿ ಓದಿದ್ದನ್ನು ಆತ ಮರೆತೇ ಬಿಡುವ ಸಾಧ್ಯತೆಗಳಿವೆ.

ಚಿಕ್ಕ ಮಕ್ಕಳು ಸಾಮಾನ್ಯವಾಗಿ ಹೊಸ ಭಾಷೆಯ ಅಕ್ಷರಗಳನ್ನು ಸೇರಿಸಿ ಓದಲು ಶ್ರಮಿಸುತ್ತಾರೆ. ಅವರಿಗೆ ವಾಕ್ಯಗಳನ್ನು ವೇಗವಾಗಿ ಓದಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಮಾನಸಿಕ ಶ್ರಮವೆಲ್ಲ ಅಕ್ಷರಗಳನ್ನು ಒಂದೊಂದಾಗಿ ಪೋಣಿಸಿ, ಶಬ್ದಗಳನ್ನು ರಚಿಸುವುದರಲ್ಲೇ ವ್ಯಯವಾಗುತ್ತದೆಂದು ಹೊರತು ಇಡೀ ವಾಕ್ಯಾರ್ಥದ ಕಲ್ಪನೆಯಲ್ಲಲ್ಲ! ಹೀಗೆ ವೇಗವಾಗಿ ಓದಲು ಅಸಮರ್ಥವಾದ ಮಗುವಿಗೆ ಪಾಠದ ಒಟ್ಟು ಅರ್ಥವೇನು; ಶಿಕ್ಷಕರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೇ ಹೋದೀತು. ಒಂದೇ ಶಾಲೆಯಲ್ಲಿ ಎಂಟು ವರ್ಷಗಳನ್ನು ಕಳೆದರೂ ಅದರಲ್ಲಿ ಯಾವ ಬದಲಾವಣೆಯೂ ಗೋಚರವಾಗದು. ಇದರರ್ಥ ಎರಡು ಅಥವಾ ಮೂರು ಭಾಷೆಗಳನ್ನು ಎಳೆಯರು ಕಲಿಯಲಾರರು ಎಂದಲ್ಲ. ವಾಸ್ತವವಾಗಿ ಎಂಟು ವರ್ಷದ ಕೆಳಗಿನ ಮಕ್ಕಳು ಹೊಸ ಭಾಷೆಗಳನ್ನು ಅತೀ ಸುಲಭವಾಗಿ ಕಲಿಯಬಲ್ಲರು. ಆದರೆ ಒಂದು ಭಾಷೆಯ ಮೇಲೆ ಅಂದರೆ, ಮಾತೃ ಭಾಷೆಯ ಮೇಲೆ ಪೂರ್ಣ ಹಿಡಿತ ಬಂದಾದ ಮೇಲೆ ಮಾತ್ರ ದ್ವಿತೀಯ ಭಾಷೆಯನ್ನು ಅವರು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು. ಪ್ರಥಮ ಭಾಷೆಯನ್ನು ಕಲಿಯುವಾಗ ಒಂದು ಮಗುವಿನ ಕಲ್ಪನಾಶಕ್ತಿ ವಿಕಾಸಗೊಳ್ಳುತ್ತಾ ಹೋಗುತ್ತದೆ. ಅನಂತರ ಅದೇ ಮಾದರಿಯನ್ನನುಸರಿಸಿ ದ್ವಿತೀಯ ಭಾಷೆಯ ಕಲಿಕೆ ಮಗುವಿಗೆ ಕಷ್ಟವಾಗದು.

ಈ ಎಲ್ಲ ಅಧ್ಯಯನಗಳ ರೂವಾರಿ ಹೆಲೆನ್ ಅಬಾಜಿ ಎನ್ನುವ ಶಿಕ್ಷಣ ತಜ್ಞೆ. ಇವರು ಜಾಂಬಿಯಾ ದೇಶದಲ್ಲಿ ನಡೆಸಿದ ಪ್ರಯೋಗಗಳು ಜಾಗತಿಕ ಶಿಕ್ಷಣ ರಂಗದಲ್ಲೇ ಕ್ರಾಂತಿಕಾರಿ ಬದಲಾವಣೆಯನ್ನು ಮಾಡುತ್ತಿವೆ. ಆರಂಭದಲ್ಲೇ ಅಲ್ಲಿನ ಒಂದನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆ ಎರಡನ್ನೂ ಕಲಿಸಲಾಯಿತು. ಇನ್ನು ಕೆಲವು ಆಯ್ದ ಶಾಲೆಗಳಲ್ಲಿ ಒಂದನೇ ಕ್ಲಾಸಿನಲ್ಲಿ ಓದಲು ಮಾತ್ರ ಕಲಿಸಿ, ಎರಡನೇ ಕ್ಲಾಸಿನ ಅನಂತರ ಇಂಗ್ಲಿಷ್ನಲ್ಲಿ ಬರೆಯುವುದನ್ನು ಹೇಳಿ ಕೊಡಲಾಯಿತು. ಈ ಅಧ್ಯಯನಗಳ ಫಲಿತಾಂಶಗಳು ಅತ್ಯಂತ ರೋಚಕವಾಗಿದ್ದವು. ಒಂದನೇ ಕ್ಲಾಸಿಗೆ ಇಂಗ್ಲಿಷ್ ಮಾಧ್ಯಮವನ್ನು ನೆಚ್ಚಿಕೊಂಡಿದ್ದ ಶಾಲೆಗಳಲ್ಲಿ ಮಕ್ಕಳು ಓದುವ ಸಾಮರ್ಥ್ಯ ನಿಗದಿತ ಮಟ್ಟಕ್ಕಿಂತ ಎರಡು ಗ್ರೇಡ್ ಕೆಳಗೆ ಹಾಗೂ ಅವರ ಮಾತೃ ಭಾಷೆಯಲ್ಲಿ ಮೂರು ಗ್ರೇಡ್ ಕೆಳಗೆ ಇದ್ದವು. ಆದರೆ ಹೊಸ ಪ್ರಯೋಗದನ್ವಯ ಆಂಗ್ಲ ಮಾಧ್ಯಮವನ್ನು ಮೇಲಿನ ತರಗತಿಗಳಿಗೆ ಅಳವಡಿಸಲಾದ ಶಾಲೆಗಳಲ್ಲಿ ಒಂದನೇ, ಎರಡನೇ ಮತ್ತು ಮೂರನೇಯ ತರಗತಿಯ ಮಕ್ಕಳಲ್ಲಿ ಇಂಗ್ಲಿಷ್ ಪಾಠಗಳನ್ನು ಓದುವ ಮತ್ತು ಬರೆಯುವ ಸಾಮಥ್ರ್ಯದ ಮಟ್ಟ ಕ್ರಮವಾಗಿ ೫೭೫ ಶೇ. ೨೪೧೭ ಶೇ. ಹಾಗೂ ೩೩೦೦ ಶೇ. ದಷ್ಟು ವೃದ್ಧಿಗೊಂಡವು. ಈ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಗಳಲ್ಲಿ ಗಳಿಸಿದ ಅಂಕಗಳ ಏರಿಕೆ ಸಹ ಇದಕ್ಕನುಗುಣವಾಗಿಯೇ ಇದ್ದವು.

ಈ ಅಧ್ಯಯನದ ಸಂದೇಶದಿಂದ ಪ್ರಭಾವಿತರಾದ ಜಾಂಬಿಯಾ ಸರಕಾರ ಇದೇ ಪದ್ಧತಿಯನ್ನು ದೇಶದ ಎಲ್ಲ ಶಾಲೆಗಳಿಗೂ ವಿಸ್ತರಿಸಿತು. ಒಂದನೇ ಕ್ಲಾಸಿನ ವಿದ್ಯಾರ್ಥಿಗಳು ಈಗ ತಮ್ಮ ತಾಯ್ನಾಡಿನ ಮಾಧ್ಯಮದಲ್ಲೇ ಕಲಿಯಲು ಉತ್ಸಾಹ ತೋರುತ್ತಿದ್ದಾರೆ. ಮಂದಹಾಸ ಬೀರುತ್ತಿದ್ದಾರೆ. ಎರಡನೇ ಅಥವಾ ಮೂರನೇ ಕ್ಲಾಸಿನ ಇಂಗ್ಲಿಷ್ ಮಾಧ್ಯಮದ ಕಲಿಕೆಯಲ್ಲೂ ಅವರಿಗೆ ಆಸಕ್ತಿ ಉಂಟಾಗಿದೆ. ತಾಯ್ತಂದೆಯರಿಗಿದ್ದ ಆತಂಕ ದೂರವಾಗಿದೆ.

ಜಾಂಬಿಯಾ ದೇಶ ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದೆ. ಇದನ್ನು ಭಾರತ ದೇಶ ಸಹ ಅನುಸರಿಸಬೇಕಿದೆ. ಈಗಿನ ಐಟಿ, ಬಿಟಿ ಯುಗದಲ್ಲಿ ಆಂಗ್ಲ ಭಾಷೆಯ ಪರಿಜ್ಞಾನ ನಿಸ್ಸಂದೇಹವಾಗಿ ಅತ್ಯಗತ್ಯ. ಇದರಿಂದ ಭಾರತಕ್ಕೆ ಚೀನಾದಂತಹ ಬೃಹತ್ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸಿ ಹಲವಾರು ಕ್ಷೇತ್ರಗಳಲ್ಲಿ ಮೇಲುಗೈ ಸಾದಿಸಲು ಸಾಧ್ಯವಾಗಿದೆ. ಆದರೆ ಆಂಗ್ಲ ಭಾಷಾ ಜ್ಞಾನವಿದ್ದರೆ ಮಾತ್ರ ಹಣ ಗಳಿಕೆಯ ಶಕ್ತಿ ಹೆಚ್ಚುತ್ತದೆ ಎನ್ನುವ ಪರಿಜ್ಞಾನವಿರುವ ಬಡ ವರ್ಗದ ತಾಯ್ತಂದೆಯರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವರ್ಗಾಯಿಸುತ್ತಾ ಬರುತ್ತಿದ್ದಾರೆ. ಇದೊಂದು ದುರಂತ. ಇದಕ್ಕೆ ಪರಿಹಾರವೆಂದರೆ ಕಲಿಕೆಯ ಆರಂಬಿಕ ಹಂತದಲ್ಲೇ ರಾಜ್ಯದ ಎಲ್ಲ ಶಾಲೆಗಳಿಗೂ ಏಕರೂಪಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಮತ್ತು ಒಂದನೇ ತರಗತಿಯಲ್ಲಿ ಕನ್ನಡ ಭಾಷೆಯನ್ನೇ ವ್ಯಾಪಕ ಮಾಧ್ಯಮವನ್ನಾಗಿ ಸ್ಥಾಪಿಸುವುದು.

ದೇಶದೆಲ್ಲೆಡೆ ಸರಕಾರಿ ಶಾಲೆಗಳ ಕ್ಲಾಸ್ ರೂಮುಗಳು ಭಣಗುಟ್ಟುತ್ತಿವೆ. ಇದನ್ನು ಗಮನಿಸಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಬಿಸುವ ಹುನ್ನಾರ ನಡೆದಿದೆ. ಇದೊಂದು ತಪ್ಪು ಹೆಜ್ಜೆ, ಮಾತ್ರವಲ್ಲ, ಶಿಕ್ಷಣ ವ್ಯವಸ್ಥೆಗೆ ಒಂದು ಕಪ್ಪು ಚುಕ್ಕೆ.
ಹೆತ್ತವರ ಕನಸಿನ ದಾಳಗಳಾಗುತ್ತಿವೆ ಈಗಿನ ಮಕ್ಕಳು. ಆರಂಬಿಕ ಹಂತದಲ್ಲೇ ತಾಯ್ನುಡಿಯ ಮಾಧ್ಯಮದಿಂದ ವಂಚಿತರಾದ ಮಕ್ಕಳು ನೀರಿನಿಂದ ಹೊರಬಿದ್ದ ಮೀನುಗಳಂತಾಗುತ್ತವೆ. ‘ಜಾನಿ ಜಾನಿ ಎಸ್, ಪಪ್ಪ’ ಎಂದು ತೊದಲುತ್ತಾ ಉರು ಹೊಡೆಯುವ ಯಂತ್ರಗಳಾಗುತ್ತವೆ. ‘ಸ್ವಾಮಿ ದೇವನೆ ಲೋಕಪಾಲನೆ’ ಎನ್ನುತ್ತಾ ಅರ್ಥವನ್ನು ಕಲ್ಪಿಸಿಕೊಂಡು ಉಲಿಯುವ ಚಿಲುಮೆಗಳನ್ನು ನಾವೀಗ ಸೃಷ್ಟಿಸಬೇಕಾಗಿದೆ.

ರಾಜ್ಯದ, ಜಿಲ್ಲೆಗಳ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ಬಗ್ಗೆ ಗಂಬಿರ ಚಿಂತನೆಗಳಾಗಬೇಕಿದೆ. ಆದರೆ ಈಗ ಈ ಸಮ್ಮೇಳನಗಳಲ್ಲಿ ಭಾಗವಹಿಸಿ ಬಂದ ಹೆಚ್ಚಿನವರು ಅಲ್ಲಿಯ ಭೋಜನ ವ್ಯವಸ್ಥೆ , ಮೆರವಣಿಗೆ, ಆಮಂತ್ರಣ ಪತ್ರಿಕೆಯ ಬಿಡುಗಡೆ, ಚಪ್ಪರ ಮುಹೂರ್ತ ಇವುಗಳ ವೈಭವಗಳನ್ನು ವಿಶ್ಲೇಷಿಸುತ್ತಾರೆ.

ಹೌದು. ಆಂಗ್ಲ ಭಾಷೆ ಅನಿವಾರ್ಯ. ಆದರೆ ಒಂದನೇ ಕ್ಲಾಸಿನಿಂದಲೇ ಕಲಿಕೆಯ ಮಾಧ್ಯಮವನ್ನಾಗಿ ಅದನ್ನು ಹೇರುವುದರಿಂದ ಆಗದೇ ಅಚಾತುರ್ಯ? ನಮ್ಮ ದುರ್ದೈವ-ಸಚಿವಾಲಯಗಳಲ್ಲಾಗಲೀ, ಪ್ರಾದಿಕಾರಗಳಲ್ಲಾಗಲೀ, ಸಮ್ಮೇಳನಗಳಲ್ಲೇ ಆಗಲೀ ಈ ಬಗ್ಗೆ ಗುಡುಗುವವರೇ ಇಲ್ಲ. ನಮ್ಮ ನಿಮ್ಮಂತೆ ಗೊಣಗುವವರೇ ಎಲ್ಲ.

ಉದಯವಾಣಿ ೨೧ ಮಾರ್ಚಿ ೨೦೧೦ ಪು ೬