ವಿಶ್ವ ಅಧ್ಯಾಪಕರ ದಿನ ೨೦೧೩ : ಅಧ್ಯಾಪಕರಿಗೆ ಕರೆ !

WTD 2013
‘ಅಧ್ಯಾಪಕರಿಗೆ ಕರೆ’ ಎನ್ನುವುದು ವಿಶ್ವರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು(ಯುನೆಸ್ಕೊ) ತನ್ನ ಪಾಲುದಾರರಾದ ವಿಶ್ವ ಕಾರ್ಮಿಕರ ಸಂಸ್ಥೆ(ಐಎಲ್ಒ), ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ), ವಿಶ್ವರಾಷ್ಟ್ರಗಳ ಮಕ್ಕಳ ಅಂತಾರಾಷ್ಟ್ರೀಯ ತುರ್ತು ನಿಧಿ (ಯುನಿಸೆಫ಼್) ಮತ್ತು ಅಂತಾರಾಷ್ಟ್ರೀಯ ಶಿಕ್ಷಣ(ಐಎಲ್) ಇವುಗಳ ಜೊತೆಗೂಡಿ ೨೦೧೩ರ ಅಕ್ಟೋಬರ್ ೫ರಂದು ಆಚರಿಸುವ ವಿಶ್ವ ಅಧ್ಯಾಪಕರ ದಿನದ ಘೋಷಣೆಯಾಗಿದೆ.
ಅಧ್ಯಾಪಕರು ಸಮಾನತೆಯ, ಕೈಗೆ ಎಟುಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಬಲ್ಲ ಅತ್ಯಂತ ಪ್ರಬಲವಾದ ಶಕ್ತಿಯಾಗಿದ್ದಾರೆ. ಅವರಿಗೆ ಕರೆನೀಡುವುದೆಂದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವಂತೆ ಕರೆನೀಡಿದಂತೆ.
ಗುಣಮಟ್ಟದ ಶಿಕ್ಷಣವು ಉತ್ತಮ ಜೀವನಮಟ್ಟದ ಬಗ್ಗೆ ಆಸೆ ಮತ್ತು ಭರವಸೆಗಳನ್ನು ನೀಡುತ್ತದೆ. ಶಾಶ್ವತವಾದ ಶಾಂತಿ ಮತ್ತು ತಾಳಿಕೆಯ ಅಭಿವೃದ್ಧಿಗಳಿಗೆ ಅಗತ್ಯವಾಗಿರುವ ಭದ್ರವಾದ ತಳಪಾಯಕ್ಕಾಗಿ ಮೌಲಿಕವಾದ, ತಕ್ಕ ಬೆಂಬಲವುಳ್ಳ ಮತ್ತು ಅದಕ್ಕೆ ಅಗತ್ಯವಾದ ಉತ್ತಮ ತರಬೇತಿ ಪಡೆದಿರುವ ಅಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ಪಡೆಯುವುದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ.

“ಗುಣಮಟ್ಟದ ಶಿಕ್ಷಣಕ್ಕಾಗಿ ಅಧ್ಯಾಪಕರಿಗೆ ವೃತ್ತಿಪರ ಜ್ಞಾನ ಮತ್ತು ಕೌಶಲಗಳು ಅತ್ಯಂತ ಮುಖ್ಯ. ಅದಕ್ಕಾಗಿ ಶಕ್ತಿಶಾಲಿ ತರಬೇತಿ, ನಿರಂತರ ವೃತ್ತಿಪರ ಅಭಿವೃದ್ಧಿ ಮತ್ತು ಬೆಂಬಲಗಳನ್ನು ಪಡೆದುಕೊಳ್ಳುವಂತೆ ಈ ವಿಶ್ವ ಅಧ್ಯಾಪಕರ ದಿನದಂದು ಅವರಿಗೆ ಕರೆ ನೀಡುತ್ತೇವೆ”
ಇರಿನಾ ಬೊಕೊವಾ
ಯುನೆಸ್ಕೊ ಪ್ರಧಾನ ನಿರ್ದೇಶಕರು

ಅಧ್ಯಾಪಕರಿಗೆ ಕರೆ ನೀಡುವುದು ಏಕೆ?
ಏಕೆಂದರೆ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟವನ್ನು ಸಾಧಿಸಲು ಆಗತ್ಯವಾದ ವೃತ್ತಿಪರತೆ, ಉತ್ತಮ ತರಬೇತಿ ಮತ್ತು ಬೆಂಬಲಗಳಿರುವ ಆಧ್ಯಾಪಕರ ಕೊರತೆ ಆಪಾರ ಪ್ರಮಾಣದಲ್ಲಿದೆ. ಸಂಖ್ಯೆಯಲ್ಲಿ ಮಾತ್ರವಲ್ಲ, ಗುಣಮಟ್ಟದ ಅಧ್ಯಾಪಕರನ್ನು ನೇಮಿಸುವುದು ಸವಾಲಿನ ವಿಷಯವಾಗಿದೆ. ಬಹಳ ಬಾರಿ ಅಧ್ಯಾಪಕರು ಕಡಿಮೆ ಆರ್ಹತೆ ಮತ್ತು ಸಂಬಳಗಳೊಂದಿಗೆ ಕೆಳ ಮಟ್ಟದಲ್ಲಿಯೇ ಉಳಿದುಬಿಡುತ್ತಾರೆ.
೨೦೧ರ ಅಕ್ಟೋಬರ್ ರಂದು ಪ್ಯಾರಿಸ್‍ನ ಯುನೆಸ್ಕೊ ಕೇಂದ್ರ ಕಛೇರಿಯಲ್ಲಿ ನಡೆಯುವ ವಿಶ್ವ ಅಧ್ಯಾಪಕರ ದಿನಾಚರಣೆಯಲ್ಲಿ, ಉತ್ತಮ ಶಿಕ್ಷಣಕ್ಕಿರುವ ಅಧ್ಯಾಪಕರ ಕೊರತೆ, ಆಡೆತಡೆಗಳು ಮತ್ತು ವಿಶ್ವಮನೋಧರ್ಮದ ನಾಗರಿಕರನ್ನು ಬೆಳೆಸುವುದರಲ್ಲಿ ಅಧ್ಯಾಪಕರ ಪಾತ್ರ ಕುರಿತು ವಿಶೇಷವಾಗಿ ಪರಿಗಣಿಸಲಾಗುವುದು.
ವಿಶ್ವಾದ್ಯಂತ ಈ ಘಟನೆಯನ್ನು ನಿಜವಾದ ಅಂತಾರಾಷ್ಟ್ರೀಯ ದಿನವಾಗಿ ಆಚರಿಸುವಂತೆ ಪಾಲುದಾರರನ್ನು ಒತ್ತಾಯಿಸಲಾಗುವುದು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಧಾಕೃಷ್ಣನ್ ಕುರಿತು ಜಿ.ಎಚ್. ನಾಯಕರು ಬರೆದ ಲೇಖನಕ್ಕೆ ಪ್ರತಿಕ್ರಿಯೆ

(ಇದು ಕಳೆದ ವರ್ಷದ ಶಿಕ್ಷಕರ ದಿನಾಚರಣೆ ಸಂದರ್ಭ ನಾಯಕರ ಲೇಖನಕ್ಕೆ ಬರೆದಿದ್ದ ಅಪ್ರಕಟಿತ ಪ್ರತಿಕ್ರಿಯೆ)

ಅನುಪಮಾ ಪ್ರಸಾದ್ ಕಾಸರಗೊಡು

ಪ್ರೊ.ಜಿ.ಎಚ್. ನಾಯಕರು ತಮ್ಮ ಲೇಖನದಲ್ಲಿ (ಶಿಕ್ಷಕರ ದಿನಕ್ಕೆ ಅರ್ಥ ಇದೆಯೆ? ನಾವು ಕಾಣದ ರಾಧಾಕೃಷ್ಣನ್ ಮುಖ) ಡಾ.ಸರ್ವೇಪಲ್ಲಿ ಗೋಪಾಲ್ ಬರೆದಿರುವ ಪುಸ್ತಕದಿಂದ ಕೆಲವು ಸಾಲುಗಳನ್ನು ಉದ್ಧರಿಸುವುದರ ಮೂಲಕ ಸ್ಥಾಪಿತ ವಿಚಾರದಾಚಿಗಿನ ಸತ್ಯವನ್ನು ಬಿಚ್ಚಿಟ್ಟು ಮೂಲಕೃತಿ ಓದಲಾಗದವರ ಪಾಲಿಗೆ ಮುಸುಕಿನೊಳಗೇ ಉಳಿದುಬಿಡಬಹುದಾಗಿದ್ದ ರಾಧಾಕೃಷ್ಣನ್ ಅವರ ಇನ್ನೊಂದು ಮುಖವನ್ನು ತೋರಿಸಿ ಸತ್ಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದು ದಿನವನ್ನು ರಾಷ್ಟ್ರೀಯವಾಗಿ ಅದೂ ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆಂದರೆ ಆ ವ್ಯಕ್ತಿ ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿರಬೇಕು. ಆದರೆ, ಗೋಪಾಲ್ ಅವರ ಕೃತಿಯಲ್ಲಿರುವ ಎರಡು ಮುಖ್ಯ ವಿಷಯಗಳನ್ನು ಓದಿದಾಗ ರಾಧಾಕೃಷ್ಣನ್ನರಿಗೆ ಯಾವ ಕಾರಣಕ್ಕೂ ಅಂತಹ ಉನ್ನತ ವ್ಯಕ್ತಿತ್ವನ್ನು ಆರೋಪಿಸಲು ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಗೋಪಾಲ್ ಪುಸ್ತಕದಲ್ಲಿರುವ ಸಾಲುಗಳನ್ನು ಉದ್ಧರಿಸುತ್ತ ಪ್ರೊ. ನಾಯಕರು ವ್ಯಕ್ತಪಡಿಸಿದ ವಿಚಾರಗಳು, ಎತ್ತಿದ ಪ್ರಶ್ನೆಗಳು ಬಹಳ ಮಹತ್ವಪೂರ್ಣವಾದವು.

ಪ್ರೊ. ನಾಯಕರು ಗೋಪಾಲ್ ಬರಹಗಳನ್ನು ಉದ್ದರಿಸುವಾಗ ಕೇವಲ ಋಣಾತ್ಮಕ ಅಂಶಗಳನ್ನೇ ಎತ್ತಿಕೊಂಡಿರುವುದರಿಂದ ಮೂಲ ಕೃತಿಯ ಪರಿಚಯವೇ ಇಲ್ಲದ ಓದುಗರಿಗೆ ಗೋಪಾಲ್ ಅವರು ತಮ್ಮ ಪುಸ್ತಕದಲ್ಲಿ ತಂದೆಯ ಬಗ್ಗೆ ಋಣಾತ್ಮಕ ಅಂಶಗಳನ್ನೇ ಬರೆದಿದ್ದಾರೇನೋ ಅನಿಸಬಹುದಾದರೂ, ಪುಸ್ತಕ ಪರಿಚಯ ಮಾಡುವುದು ಲೇಖನದ ಉದ್ದೇಶ ಅಲ್ಲವಾದ್ದರಿಂದ ಅದು ಲೇಖನದ ಕೊರತೆ ಅನಿಸುವುದಿಲ್ಲ. ಅದೂ ಅಲ್ಲದೆ ರಾಧಾಕೃಷ್ಣನ್ನರ ವೃತ್ತಿ ಬದುಕಿನ ಸಾಧನೆ, ಶಿಕ್ಷಕರಾಗಿ ಅವರು ಗಳಿಸಿದ ಖ್ಯಾತಿ ಎಲ್ಲರಿಗೂ ಗೊತ್ತಿರುವಂತದ್ದೇ.

ಮುಖ್ಯವಾಗಿ ರಾಧಾಕೃಷ್ಣನ್ನರ ಜನ್ಮದಿನವೂ ಅಲ್ಲದ ಅಥವಾ ಆದರ್ಶದ ತುತ್ತ ತುದಿ ಎನ್ನಬಹುದಾದ (ಉನ್ನತ ವ್ಯಕ್ತಿತ್ವನ್ನು ಹೊಂದಿರುವ ಶಿಕ್ಷಕರು ಈಗಲೂ ನಮ್ಮಲ್ಲಿರುವಾಗ) ವ್ಯಕ್ತಿತ್ವವನ್ನೂ ಹೊಂದಿರದ ರಾಧಾಕೃಷ್ಣನ್ನರ ಹೆಸರಿನಲ್ಲಿ ಆಚರಿಸಲ್ಪಡುತ್ತಿರುವ ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರೊ. ನಾಯಕರು ಎತ್ತಿದ ಪ್ರಶ್ನೆ ತಾತ್ವಿಕವಾಗಿಯೂ ತಾಂತ್ರಿಕವಾಗಿಯೂ ಅತ್ಯಂತ ಸಮಂಜಸವಾಗಿದೆ. ಅದೇ ರೀತಿ ರಾಧಾಕೃಷ್ಣನ್ನರು ತಮ್ಮ ಹೆಣ್ಣು ಮಕ್ಕಳ ವಿಚಾರದಲ್ಲಿ ನಡೆದುಕೊಂಡ ರೀತಿ ಹಾಗೂ ಸ್ತ್ರೀಯರ ಬಗ್ಗೆ ಅವರಿಗಿದ್ದ ಹೇಯ ಭಾವ ಒಬ್ಬ ಸಾಮಾನ್ಯ ಶಿಕ್ಷಕನಲ್ಲಿದ್ದರೂ ಸಹಿಸುವಂತದ್ದಲ್ಲ. ರಾಷ್ಟ್ರವ್ಯಾಪಿಯಾಗಿ ಚರ್ಚಿಸಬೇಕಾದ ವಿಚಾರಗಳನ್ನು ಪ್ರೊ. ನಾಯಕರು ಪ್ರಸ್ತಾಪಿಸಿದ್ದಾರೆ. ಯಶಸ್ವೀ ಬೋಧಕನಾಗಿ ಹಾಗು ತನ್ನ ಪ್ರತಿಭೆ, ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೃತ್ತಿಯಲ್ಲಿ ಹೇಗೆ ಉನ್ನತಿಯನ್ನು ಪಡೆಯಬೇಕೆಂಬುದಕ್ಕೆ ರಾಧಾಕೃಷ್ಣನ್ ಆದರ್ಶವಾಗಬಹುದೇ ಹೊರತು ನಿಜದ ಶಿಕ್ಷಕತನಕ್ಕಲ್ಲ.

*********

ಕನ್ನಡ ಭಾಷೆಗೆ ಎಳ್ಳುನೀರು?

ನಾನು ೨೦೧೨ನೇ ಜುಲೈ ೩೧ರಂದು ನಿವೃತ್ತನಾದ ಮೇಲೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಡೆ ಹೋಗುವುದು ಅಪರೂಪ. ಕಳೆದ ವಾರ ಹೋಗಿದ್ದಾಗ ನನಗೆ ಒಂದು ಮದುವೆಯ ಅಮಂತ್ರಣ ಕಾದಿತ್ತು. ಸರಳವಲ್ಲದ ಮತ್ತು ಸಂಪ್ರದಾಯ ರಹಿತವಲ್ಲದ ಮದುವೆಗಳಿಗೆ ನಾನು ಹೋಗುವುದಿಲ್ಲವೆಂಬುದು ನನ್ನ ವಿದ್ಯಾರ್ಥಿಗಳಿಗೂ ಗೊತ್ತಿದೆ. ಆದರೂ ಅಭ್ಯಾಸದಂತೆ ನನಗೂ ಒಂದು ಆಮಂತ್ರಣ ಪತ್ರವನ್ನು ಕೊಡುವುದುಂಟು. ಆಮಂತ್ರಣ ನೀಡಲು ಬಂದಾಗಲೇ ಅವರಿಗೆ ನನ್ನ ಸಂತೋಷವನ್ನೂ ಹಾರೈಕೆಗಳನ್ನು ತಿಳಿಸುತ್ತಿದ್ದೆ.

ಈಗ ನನಗೆ ಬಂದಿರುವ ಆಮಂತ್ರಣವೂ ನನ್ನ ವಿದ್ಯಾರ್ಥಿನಿಯಾಗಿದ್ದ ರೇಣುಕಾ ಕೋಡಗುಂಟಿ ಅವರ ಮದುವೆಯದು. ಅವರು ಮದುವೆಯಾಗುತ್ತಿರುವುದು ಸಂತೋಷದ ವಿಷಯ. ಆಮಂತ್ರಣ ಪತ್ರವನ್ನು ನನಗೆ ಪ್ರತ್ಯಕ್ಷವಾಗಿ ಕೊಡಲು ಸಾಧ್ಯವಾಗಿದ್ದರೆ ಅವರಿಗೆ ನನ್ನ ಶುಭಾಶಯಗಳನ್ನು ಹೇಳಬಹುದಿತ್ತು. ಹಾಗೆ ಸಾಧ್ಯವಾಗದ್ದರಿಂದ ಈ ಮೂಲಕ ಅವರಿಗೆ ಎಲ್ಲ ಒಳಿತನ್ನೂ ಹಾರೈಸುತ್ತೇನೆ.

ಆಮಂತ್ರಣ ಪತ್ರದ ಸ್ವರೂಪ, ಒಕ್ಕಣೆ ವಿಲಕ್ಷಣವಾಗಿ ಕಂಡದ್ದರಿಂದ ಅದನ್ನು ಇಲ್ಲಿ ಕೊಟ್ಟಿದ್ದೇನೆ:

ಹೊರ ಕವಚದ ಮೇಲಿನ ಬರಹ:

ಕೋಡಗುಂಟಿ ಕುಟುಂಬದವರ ಮದುವೆಯ ಆಮಂತ್ರಣ

ತಾರೀಕು : ೨೦೦೫೨೦೧೩ ಸೋಮವಾರ ಮುಂಜಾನೆ ೧೦.೦೦ರಿಂದ ೧೧.೩೦ರವರೆಗೆ

ಸ್ತಳ: ನಿಜಲಿಂಗಪ್ಪ ಸಬಾಬವನ, ವೀರಶಯಿವ ಕಲ್ಯಾಣ ಮಂಟಪದ ಪಕ್ಕ, ಶಿವಮೊಗ್ಗ

 ಪೊಸತಿದು ಪಾವನಮಿದು ರಂ

ಜಿಸುವ ಮಹಾನರ್ ಗ್ಯಮ್  ಇಂತಿದೆಂಬೀ ಜಸದಿಂ

ರಸಕಾವ್ಯಮೀ ಮದುವೆ ರಾ

ಜಸಬೆ ಬ್ರಹ್ಮಸಬೆ ದೇವಸಬೆಗೆಸೆದಿರ್ಕುಂ

 ಗೆ

 ಕೋಡಗುಂಟಿ ವಂಶದ್ವಯರ್

 ಬಸವರಾಜ ಕೋಡಗುಂಟಿ

(ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ)

 ಪರಶುರಾಮ ಕೋಡಗುಂಟಿ

(ಪ್ರಕಾಶಕ, ಬಂಡಾರ ಪ್ರಕಾಶನ ಮಸ್ಕಿ)

 

ಆಮಂತ್ರಣದ ಒಕ್ಕಣೆ:

 ಸ್ವಸ್ತಿಶ್ರೀ ವಿಜಯಾಬ್ಯುದಯ ಶ್ರೀಮನ್ರುಪ ಶಾಲಿವಾಹನ ಶಕ ಸಂವತ್ಸರಂಗಳ್ ಸಾವಿರದೊಂಬತ್ತುನೂರ ಮೂವತ್ತಯ್ದನೆ ಶ್ರೀ ವಿಜಯನಾಮ ಸಂವತ್ಸರದ ವಯಿಸಾಕ ಸುದ್ದ ದಶಮಿಯನ್ದು ತಾರೀಕು ಎರಡು ಸಾವಿರದಹದಿಮೂರನೆ ಮೇ ಮಾಸದ ಇಪ್ಪತ್ತನೆಯ ದಿವಸದೊಳ್ ಸೋಮವಾರದನ್ದು ಮುಂಜಾನೆಯ ಸಮಯ ಹತ್ತರಿಂ ಹನ್ನೊಂದುವರೆವರಂ ಸಲ್ವ ಶುಬ ಕರ್ಕಾಟಕ ಲಗ್ನದೊಳ್ ಶುಬ ಮುಹೂರ್ತದೊಳ್ ಎಮ್ಮ ತಂಗಿಯಪ್ಪ ರೇಣುಕಾ ಕೋಡಗುಂಟಿ ಎನ್ಬ ಕನ್ಯಾರತ್ನಮನ್ ಶ್ರೀಮತಿ ಶ್ರೀಯರು ಪೇರ್ಮಿ ಗವುರಮ್ಮ ಕ್ರಿಶ್ಣಮೂರ್ತಿಯವರ್ಕಳ ಕಿರಿಯ ಮಗನ್ ಪೇರ್ಮಿ ಬಾಲಾಜಿ ಎನ್ಬ ವರಂಗೆ ಕೊಟ್ಟು ವಿವಾಹಮನ್ ನೆರವೇರಿಸಲ್ ಮನೆದೇವರಾ ಹರಕೆಯಲ್ ಗುರುಹಿರಿಯರ ಕಯ್ಯಲ್ ನಿಶ್ಚಯಮನ್ ಮಾಡಿರ್ಪುದು.

 ಶುಬ ಕಲ್ಯಾಣಂ ಶಿವಮೊಗ್ಗೆಯ ಶ್ರೀ ವೀರಶಯಿವ ಕಲ್ಯಾಣ ಮಂಟಪ ಪಕ್ಕದೊಳ್ ನಿಜಲಿಂಗಪ್ಪ ಸಬಾಬವನದೊಳು

 ತಮ್ಮಂಗಳ ಆಶೀರ್ವಾದಂಗಳನ್ ಮದುಮಕ್ಕಳಿಂಗೆ ನೀಡುವುದು ಮನಮುದಮನ್ ತರುವುದು

 ರಾಯಚೂರು ಜಿಲ್ಲೆಯೊಳ್ ಲಿಂಗಸೂಗೂರು ತಾಲೂಕಿನೊಳ್ ನಿಜಗ್ರಾಮ ಮಸ್ಕಿಯ

ಶ್ರೀಯರ್ಕಳ್ ಕೋಡಗುಂಟಿ ವಂಶದ್ವಯರ್ ಬಸವರಾಜ ಪರಶುರಾಮರ್

——

ವಾರದ ನೀರು:

ತಾರೀಕು ೨೨೦೫೨೦೧೩ ಬುದುವಾರ ಶ್ರೀ ಚವುಡೇಶ್ವರಿ ಸಮುದಾಯ ಬವನ ವೀರಾಪೂರ ಓಣಿ ಮಸ್ಕಿ (ಊಟ: .೦೦ಕ್ಕೆ)

ಯೂನಿಕೋಡ್ ನಲ್ಲಿ ಅರ್ಕಾವತ್ತು ಮಾತ್ರ ಬಳಸಲು ಸಾಧ್ಯವಾದ್ದರಿಂದ ಮೂಲದಲ್ಲಿದ್ದಂತೆ ರಕಾರಕ್ಕೆ ಒತ್ತಕ್ಷರವನ್ನು ಬಳಸಲಾಗಿಲ್ಲ.

ಇಡೀ ಆಮಂತ್ರಣ ಪತ್ರದ ಭಾಷೆ ಯಾವ ಕಾಲದ ಕನ್ನಡದಲ್ಲಿದೆ ಎಂಬುದೇ ತಿಳಿಯಲಿಲ್ಲ. ಹಳಗನ್ನಡದ ಸುದ್ದಗೆಯೂ ಅಲ್ಲದ ಇಂದಿನ ಪ್ರಾದೇಶಿಕ, ಸಾಮಾಜಿಕ ಉಪಭಾಷೆ ಅಥವಾ ಶಿಷ್ಟ ಭಾಷೆಯೂ ಅಲ್ಲದ ವಿಲಕ್ಷಣ ವಿಕೃತಿಯಂತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಭಾಷಾವಿಜ್ಞಾನವನ್ನು ಅಧ್ಯಯನ, ಅಧ್ಯಾಪನ ಮಾಡುವವರು ಬಳಸಿರುವ ಭಾಷೆಯನ್ನು ನೋಡಿ ವಿಷಾದವಾಯಿತು. ಭಾಷಾವೈಜ್ಞಾನಿಕ ಕಾರಣವಾಗಲಿ ತರ್ಕವಾಗಲಿ ಇಲ್ಲದೆ, ಬಳಕೆಯಲ್ಲಿರುವ ಮಹಾಪ್ರಾಣ, ಶ ಆರ್ಕಾವತ್ತು ಮೊದಲಾದವನ್ನು ಬಿಟ್ಟು, ಯಾವ ಕಾಲದ, ಯಾವ ಸಮುದಾಯದ ಆಡುನುಡಿಯೂ ಅಲ್ಲದ, ಶಿಷ್ಟ ನುಡಿಯೂ ಅಲ್ಲದ  ಭಾಷೆ ಮತ್ತು ಬರವಣಿಗೆಯಿಂದ ಕನ್ನಡವನ್ನು ವಿಕಾರಗೊಳಿಸುವುದಕ್ಕಿಂತೆ ಹೆಚ್ಚಿನದೇನನ್ನಾದರೂ ಸಾಧಿಸಿದಂತಾಗುತ್ತದೆ  ಎಂದು ಅನಿಸುವುದಿಲ್ಲ.
ಆಮಂತ್ರಣದ ಕೊನೆಯಲ್ಲಿ ವಾರದ ನೀರು ಎಂಬ ಮಾತಿದೆ. ಅದು ಬಹುಶಃ ಆರತಕ್ಷತೆಯಂಥ ಸಂಪ್ರದಾಯವಿರಬಹುದು. ಆದರೆ ಆಮಂತ್ರಣದ ಪತ್ರದ ಭಾಷೆಯನ್ನು ನೋಡಿದಾಗ ಕನ್ನಡ ಭಾಷೆಗೆ ಎಳ್ಳುನೀರು ಬಿಟ್ಟಂತೆ ಅನಿಸಿತು.

ಮತಧರ್ಮ ನಿರಪೇಕ್ಷತೆಯ ಸಾರ್ವತ್ರಿಕ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು…

ಕನ್ನಡ ಅಂಕಿಗಳನ್ನೇ ಬಳಸಿ
೦ ೧ ೨ ೩ ೪ ೫ ೬ ೭ ೮ ೯

ಕರ್ನಾಟಕದ ಹಲವೆಡೆ ದೊರೆತಿರುವ ಸಾ(ಮಾನ್ಯ).ಪೂ(ರ್ವ).ಶಕ ೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಸಾ.ಶ. ೬ನೇ ಶತಮಾನದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.

ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಸಾ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಮೈಸೂರು ಒಡೆಯರು ತಮ್ಮ ನಾಣ್ಯಗಳಲ್ಲಿ; ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದರು.

ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನು ಬಳಸಬೇಕೆಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ನಿರ್ಣಯ ಅಂಗೀಕರಿಸಿ ಒತಾಯಿಸಿದ್ದುದನ್ನು ಗೌರವಿಸಿ ಕನ್ನಡ ಅಂಕಿಗಳನ್ನು ಬಳಸಲು ಆರಂಭಿಸಿದ್ದ ಪತ್ರಿಕೆಗಳು ಮತ್ತೆ ಅವನ್ನು ಬಿಟ್ಟಿರುವುದು ವಿಷಾದದ ಸಂಗತಿ. ಕೆಲವು ಪತ್ರಿಕೆಗಳು ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಮಾತ್ರ ಬಳಸುತ್ತಿದ್ದು ಈಗ ಅಲ್ಲಿಯೂ ಕೈಬಿಟ್ಟಿವೆ. ಸಾಪಾಹಿಕ ಪುರವಣಿ, ಮಾಸಿಕ ಸಾಹಿತ್ಯ ಪುರವಣಿಗಳ ದಿನಾಂಕ, ಸಂಚಿಕೆಯ ಸಂಖ್ಯೆಗಳನ್ನು ಮಾತ್ರ ಕನ್ನಡ ಅಂಕಿಯಲ್ಲಿ ನಮೂದಿಸುತ್ತಿವೆ. ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾದ ಮಾಧ್ಯಮಗಳು ಒಂದೇ ಉಸಿರಿನಲ್ಲಿ ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ. ಈ ಆತಂಕಕ್ಕೆ ಪ್ರತೀಕಾರ ಎಂಬಂತೆ ಭಾಗಶಃ ಕನ್ನಡ ಅಂಕಿಗಳನ್ನು ಬಳಸುತ್ತಿದ್ದ ಪತ್ರಿಕೆಗಳು ಮತಧರ್ಮ ಮೌಢ್ಯ ಪ್ರಸಾರದ ಬದಲು ಕನ್ನಡ ಅಂಕಿಗಳ ಬಳಕೆಯನ್ನು ನಿಲ್ಲಿಸಿವೆ! ರಾಜ್ಯ ಸರಕಾರದ ಮಾಸಪತ್ರಿಕೆ ಜನಪದ ಕನ್ನಡ ಅಂಕಿಗಳನ್ನು ಬಳಸುವಂತೆ ಮಾಡಿದ ಮನವಿಗೆ ಕಿವುಡುತನ ನಟಿಸುತ್ತಿದೆ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಹೊಸತು ಮಾಸಪತ್ರಿಕೆಗಳಂತೆ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ.

ರಾಜಧಾನಿಯ ಕನ್ನಡ ಸಮೂಹ ಮಾಧ್ಯಮಗಳು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿವೆ. ಅವಕ್ಕೆ ತುರ್ತಾಗಿ ಕನ್ನಡತನದ ಆರೋಗ್ಯಕರ ರಕ್ತದಾನವಾಗಬೇಕಿದೆ. ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನವನ್ನು ಪ್ರಕಟಿಸುವ ಕನ್ನಡದ ಮಾಧ್ಯಮಗಳು ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮಗಳನ್ನು ಪರಿಚಯಿಸುವ ಗೋಜಿಗೆ ಹೋಗದೆ ಅನಗತ್ಯವಾಗಿ ಇಂಗ್ಲಿಷ್ ಅಕ್ಷರ, ಪದ, ಪದಪುಂಜಗಳನ್ನು ಬಳಸುತ್ತಿವೆ. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ `ತಾEA ದೇವರು!’ ಎಂದು ಬರೆಯುವಂತೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷಿನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ `ಲವಲವಿಕೆ’ಯಲ್ಲಿರುವ ‘`ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು `ಲವಲ’ ಎಂದು ಅರ್ಥಹೀನವಾಗಿಸಿ, ವಿಕಲಾಂಗ(`ವಿಕಲಚೇತನ’!) ಗೊಳಿಸಿದೆ. ವಿಜಯNext Next(ನೆಕ್ಸ್ಟ್) ಎಂಬ ಕಲಬೆರಕೆ ಹೆಸರಿನ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳ ಬಳಕೆ ಹೆಚ್ಚಿದೆ. ಕೆಲವು ಕನ್ನಡ ಸಂಪಾದಕರು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರಸುವ ಗೀಳಿನಿಂದ ನರಳುತ್ತಿರುವಂತಿದೆ.

ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ರಾಜಧಾನಿಯ ಪತ್ರಿಕೆಗಳು ಹಲವು ಕೇಂದ್ರಗಳಲ್ಲಿ ಮುದ್ರಣವಾಗಿ ರಾಜಧಾನಿಯ ರೋಗವನ್ನೂ ರಾಜ್ಯಾದ್ಯಂತ ಹರಡುತ್ತಿರುವುದು ಆತಂಕದ ಸಂಗತಿ. ಎಫ್.ಎಂ. ರೇಡಿಯೋ, ಇಂಗ್ಲಿಷ್ ಹೆಸರಿನ ಕನ್ನಡ ದೂರದರ್ಶನ ವಾಹಿನಿಗಳಲ್ಲಿ ಇಂಗ್ಲಿಷ್ ಕಲಬೆರಕೆಯ ಅಬದ್ಧ ರೂಪಗಳು ಜುಗುಪ್ಸೆಯನ್ನುಂಟುಮಾಡುತ್ತವೆ. ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು `’ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು. ಕನ್ನಡ ಪದ, ಅಂಕಿಗಳನ್ನೇ ಬಳಸಬೇಕೆಂಬ ವಾದವನ್ನು ತಾರ್ಕಿಕ ತುದಿಗೆ ಎಳೆದು ಬಳಕೆಯಲ್ಲಿರುವ ಸಂಸ್ಕೃತ ಮೂಲದ ಪದಗಳ ಬದಲು ಹಳಗನ್ನಡ ಪದಗಳನ್ನು ಬಳಸುವ ಪ್ರಯತ್ನಗಳೂ ನಡೆಯುತ್ತಿವೆ. ಭಾಷೆಯ ಜೀವಂತಿಕೆಗೆ ಎರವಾಗುವ ಇಂಥ ಪ್ರಯತ್ನಗಳ ಬಗ್ಗೆ ಮರುಚಿಂತನೆ ಅಗತ್ಯ.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೨ ದಿನಾಂಕ ೩೧-೮-೨೦೦೧). ರಾಜ್ಯಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳೂ ಆಯಾ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸುವುದು ದೇಶಾದ್ಯಂತ ಏಕರೂಪವಾಗಿ ಜಾರಿಗೆ ಬರುವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯ ಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ’ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ. ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಕಾಯ್ದಿರಿಸಿದೆ.

ನ್ಯಾಯಾಲಯದ ತೀರ್ಪು ಬರುವ ಮುನ್ನವೇ, ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದನ್ನು ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸಬಾರದು; ಶಿಕ್ಷಣ ತಜ್ಞರ ಅಭಿಪ್ರಾಯದಂತೆ ನಿರ್ಧರಿಸಬೇಕು. ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ, ಪರಿಣಾಮಕಾರಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಮೊದಲು ಕಲಿಸಿ ಅನಂತರ ಇಂಗ್ಲಿಷಿನಲ್ಲಿ ಓದುವುದು ಬರೆಯುವುದನ್ನು ಕಲಿಸಬೇಕು.

ಮುಸ್ಲಿಮರಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಇರುವುದರಿಂದ ಇತರ ಸಾಮಾಜಿಕ ವರ್ಗಗಳ ಜೊತೆಗಿನ ಅಂತರವನ್ನು ತಗ್ಗಿಸಲು ಅವರಿಗೆ ಹೆಚ್ಚಿನ ಶಿಕ್ಷಣಾವಕಾಶಗಳನ್ನು ಒದಗಿಸಬೇಕು ಎಂದು ಸಾಚಾರ್ ಸಮಿತಿ ಶಿಫಾರಸು ಮಾಡಿದೆ. ಇದರ ಅನ್ವಯ ಕೇಂದ್ರ ಸರಕಾರವು ದೇಶದ ಐದು ಕಡೆಗಳಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಗಳನ್ನು ತೆರೆಯುವುದಾಗಿ ತಿಳಿಸಿದೆ. ಅವುಗಳಲ್ಲಿ ಒಂದನ್ನು ಶ್ರೀರಂಗಪಟ್ಟಣದಲ್ಲಿ ತೆರೆದು ಅದಕ್ಕೆ ಟಿಪ್ಪೂಸುಲ್ತಾನನ ಹೆಸರಿಡುವುದಾಗಿಯೂ ಸಂಬಂಧಪಟ್ಟ ಸಚಿವರು ಹೇಳಿದ್ದಾರೆ. ಧಾರ್ಮಿಕ/ಭಾಷಿಕ ಅಲ್ಪಸಂಖ್ಯಾತರು ತಮ್ಮ ಧರ್ಮ, ಸಂಸ್ಕೃತಿ, ಭಾಷೆ, ಲಿಪಿ, ಅಕ್ಷರ, ಅಂಕಿ ಮೊದಲಾದುವನ್ನು ರಕ್ಷಿಸಿಕೊಳ್ಳಲು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದನ್ನು ನಿರ್ವಹಿಸುವ ವಿಶೇಷ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ವ್ಯಾಖ್ಯೆಯ ಬಗ್ಗೆ ಬಗೆಹರಿಯದ ಗೊಂದಲ, ವಾದ ವಿವಾದಗಳಿವೆ. ಇಂಥ ಸಂಸ್ಥೆಗಳು ಸ್ಥಾಪಿಸಿ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ.೫೦ಅನ್ನು ಅವರ (ಸಮುದಾಯದ?)ಆಯ್ಕೆಗೆ ಬಿಡಲಾಗಿದೆ. ಅಲ್ಲಿ ಸಾಮಾನ್ಯ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ; ಇತರ ಹಿಂದುಳಿದ ವರ್ಗಗಳಿಗೆ ಶೇ.೨೭ರ ಮೀಸಲಾತಿ ಇರುವುದಿಲ್ಲ. ಮತಧರ್ಮ ನಿರಪೇಕ್ಷತೆಯ ಸಾರ್ವತ್ರಿಕ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು ಸರಕಾರ ಸ್ಥಾಪಿಸಿ ನಡೆಸುವ ಸಂಸ್ಥೆಗಳೇ ಪೋಷಿಸುವುದರ ಪರಿಣಾಮಗಳನ್ನು ಕುರಿತು, ಸಂವಿಧಾನದ ವಿಶೇಷ ಹಕ್ಕಿನ ವ್ಯಾಪ್ತಿ, ಅದರಿಂದ ಕನ್ನಡ ಭಾಷೆ, ಶಿಕ್ಷಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಈಗ ಗಂಭೀರ ಚರ್ಚೆ ನಡೆಯಬೇಕಾದ ತುರ್ತು ಇದೆ. ಅದರ ಬದಲು ಚರಿತ್ರೆಯಲ್ಲಿ ಆಗಿಹೋದ ಟಿಪ್ಪುಸುಲ್ತಾನನ ಹೆಸರನ್ನು ಇಡುವ ಬಗ್ಗೆ, ಅವನ ‘ದೇಶಪ್ರೇಮ’, ‘ಮತಾಂಧತೆ’ ಮೊದಲಾದವುಗಳ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಇದರಲ್ಲಿ ಪ್ರಸಿದ್ಧ ಸಂಶೋಧಕರು, ಲೇಖಕರು, ನ್ಯಾಯವೇತ್ತರೂ ಭಾಗವಹಿಸುತ್ತಿರುವುದು ದುರದೃಷ್ಟಕರ.

ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿ, ನಾಡದೇವಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘`ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬರ’ಬೇಕು. ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘`ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.

ಈ ಸಮ್ಮೇಳನದ ವೇದಿಕೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಎಲ್ಲರೊಂದಿಗೆ ಸಮಾನ ಗೌರವದಿಂದ ಭಾಗವಹಿಸುತ್ತಿರುವುದು, ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಮೂಢನಂಬಿಕೆಗಳ ವಿರುದ್ದ ಅವುಗಳ ಪ್ರಾಯೋಗಿಕ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸಂತೋಷದ ಸಂಗತಿಗಳು; ಇವುಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ

ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ(ವಿ)
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬

ವಿಳಾಸ: ೮೮೧ ಬಸವೇಶ್ವರ ರಸ್ತೆ ಮೈಸೂರು ೫೭೦೦೦೪
ವಿ ಅಂಚೆ panditaradhya@gmail.com
ಜಾಲಚರಿ panditaputa.wordpress.com
ದೂರವಾಣಿ ೯೪೪೮೪೮೧೪೦೨

*ಬಿಜಾಪುರ
೯ ಫೆಬ್ರುವರಿ ೨೦೧೩
ರಾಷ್ಟ್ರೀಯ ಶಕೆ ೧೯೩೪ ಶಿಶಿರ ಮಾಘ ೨೦ ಕೃಷ್ಣ ಚತುರ್ದಶಿ ಉತ್ತರಾಷಾಢ ಶನಿವಾರ

*ಬಿಜಾಪುರದಲ್ಲಿ ನಡೆದ ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.

ಅಕ್ಟೋಬರ್ ೫ ವಿಶ್ವ ಅಧ್ಯಾಪಕರ ದಿನದ ಶುಭಾಶಯಗಳು!

 

Image

 

೧೯೯೪ನೇ ಅಕ್ಟೋಬರ್ ೫ನೇ ದಿನವನ್ನು ವಿಶ್ವ ಅಧ್ಯಾಪಕರ ದಿನವೆಂದು ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೊ) ಘೋಷಿಸಿದೆ. ಅಧ್ಯಾಪಕರಿಗೆ ಬೆಂಬಲವನ್ನು ಕ್ರೋಡೀಕರಿಸುವುದು ಮತ್ತು ಅವರು ಭವಿಷ್ಯದ ತಲೆಮಾರುಗಳ ಅಗತ್ಯಗಳನ್ನು ನಿರಂತರವಾಗಿ ಪೂರೈಸುವುದನ್ನು ಖಚಿತಗೊಳಿಸುವುದು ಅದರ ಉದ್ದೇಶ. ಅಧ್ಯಾಪಕರ ದಿನಾಚರಣೆಯನ್ನು ವಿವಿಧ ದೇಶಗಳು ವಷ೯ದ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಿವೆ. ಆದರೆ ಅಕ್ಟೋಬರ್ ೫ರಂದು  ವಿಶ್ವದ ಅಧ್ಯಾಪಕ ಸಮುದಾಯದೊಡನೆ ಒಂದಾಗಿಆಚರಿಸಬಹುದು.

೧೯೬೬ರ ಅಕ್ಟೋಬರ್ ೫ರಂದು ಯುನೆಸ್ಕೊ, ಅಂತಾರಾಷ್ಟ್ರೀಯ ಕಾಮಿ೯ಕ ಸಂಸ್ಥೆಯ ಸಹಯೋಗದೊಂದಿಗೆ ಪ್ಯಾರಿಸ್ಸಿನಲ್ಲಿ ಏಪ೯ಡಿಸಿದ್ದ ವಿವಿಧ ಸರಕಾರಗಳ ವಿಶೇಷ ಸಮ್ಮೇಳನದಲ್ಲಿ ಅಧ್ಯಾಪಕರ ಸ್ಥಿತಿಗತಿ ಕುರಿತ ಶಿಫಾರಸುಗಳನ್ನು ಅಂಗೀಕರಿಸಲಾಯಿತು. ಅದರಲ್ಲಿ ಅಧ್ಯಾಪಕರ ಹಕ್ಕುಗಳು, ಕತ೯ವ್ಯಗಳು, ಅವರ ತರಬೇತಿ ಮತ್ತು ಮುಂದಿನ ಶಿಕ್ಷಣ, ನೇಮಕ. ನೌಕರಿ, ಬೋಧನೆ ಮತ್ತು ಕಲಿಕೆಯ ಮೊದಲಾದವುಗಳ ಸ್ಥಿತಿಗತಿಗಳನ್ನು ನಿಧ೯ರಿಸಲಾಗಿತ್ತು. ಜೊತೆಗೆ ಶೈಕ್ಷಣಿತ ನಿಧಾ೯ರಗಳಲ್ಲಿ ಶಿಕ್ಷಣ ಪ್ರಾಧಿಕಾರದ ಜೊತೆ ಸಮಾಲೋಚನೆ, ಅನುಸಂಧಾನಗಳ ಮೂಲಕ ಅಧ್ಯಾಪಕರು ಭಾಗವಹಿಸುವುದೂ ಸೇರಿತ್ತು. ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಶಿಕ್ಷಕರ ಸ್ಥಿತಿಯನ್ನು ಉತ್ತಮಪಡಿಸಲು ಈ ಶಿಫಾರಸುಗಳನ್ನು ಮುಖ್ಯ ಮಾಗ೯ದಶಿ೯ಯಾಗಿ ಪರಿಗಣಿಸಲಾಯಿತು.

೧೯೬೭ರ ಅಕ್ಟೋಬರ್ ೫ರಂದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಧ್ಯಾಪಕರ ಸ್ಥಿತಿಗತಿಗಳನ್ನು ಕುರಿತ ಶಿಫಾರಸನ್ನು ಯುನೆಸ್ಕೊ ಮಹಾಸಭೆಯು ಅಂಗೀಕರಿಸಿತು.

೧೯೯೪ರ ಅಕ್ಟೋಬರ್ ೫ರಂದು ಮೊದಲ ವಿಶ್ವ ಅಧ್ಯಾಪಕರ ದಿನವನ್ನು ಆಚರಿಸಲಾಯಿತು. ಅನಂತರ ಪ್ರತಿ ವಷ೯ ಅದೇ ದಿನ ವಿಶ್ವ ಅಧ್ಯಾಪಕರ ದಿನವನ್ನು ಆಚರಿಸಲಾಗುತ್ತಿದೆ. ಯುನೆಸ್ಕೊ ಪ್ರತಿವಷ೯ ಹೊಸ ಘೋಷಣೆಯಿರುವ ಭಿತ್ತಿಪತ್ರವನ್ನು ಬಿಡುಗಡೆ ಮಾಡುತ್ತಿದೆ. ಈ ವಷ೯ದ ಭಿತ್ತಿಪತ್ರ ಇಲ್ಲಿದೆ. ಯುನೆಸ್ಕೊ ಸಿದ್ಧಪಡಿಸಿರುವ ಶುಭಾಶಯ ಪತ್ರಗಳನ್ನು ಅಧ್ಯಾಪಕರು ವಿನಿಮಯಮಾಡಿಕೊಳ್ಳುತ್ತಾರೆ.

೨೦೦೯ರಿಂದ ಅಕ್ಟೋಬರ್ ೫ರಿಂದ ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು  ವಿಶ್ವ ಅಧ್ಯಾಪಕರ ದಿನವನ್ನು ಆಚರಿಸಿಕೊಂಡು ಬರುತ್ತಿದೆ.

ಎಲ್ಲರಿಗೂ ವಿಶ್ವ ಅಧ್ಯಾಪಕರ ದಿನದ ಶುಭಾಶಯಗಳು.

ಪತ್ರೋತ್ತರ

ಹಿರಿಯರಾದ ಪಂಡಿತಾರಾಧ್ಯರಿಗೆ
ತಾವು ಪಂಡಿತಪುಟದಲ್ಲಿ ಪ್ರಕಟಿಸಿರುವ ಪತ್ರವನ್ನು ‘ಕಾಮನಬಿಲ್ಲು’ ಪುರವಣಿಗೆ ಕಳುಹಿಸಿಕೊಟ್ಟಿಲ್ಲ. ಆದ್ದರಿಂದ ದಯವಿಟ್ಟು ಇದನ್ನು ಪ್ರಜಾವಾಣಿ ಪ್ರಕಟಿಸಿಲ್ಲ ಎಂಬರ್ಥದ ಸಾಲನ್ನು ನಿಮ್ಮ ಬ್ಲಾಗ್‌ನಿಂದ ತೆಗೆದು ಹಾಕಬೇಕಾಗಿ ಕೋರುತ್ತೇನೆ. ಸಾಮಾನ್ಯವಾಗಿ ಪ್ರಜಾವಾಣಿ ಆಯಾ ಪುರವಣಿಗಳಲ್ಲಿ ಪ್ರಕಟವಾಗುವ ಪ್ರತಗಳಿಗೆ ಸಂಬಂಧಿಸಿದ ಉತ್ತರಗಳನ್ನೂ ಆಯಾ ಪುರವಣಿಗಳಲ್ಲೇ ಪ್ರಕಟಿಸುತ್ತದೆ. ತಾವು ಇಂಥದ್ದೊಂದು ಉತ್ತರವನ್ನು ‘kamanabillu (at) prajavani.co.in’ ಎಂಬ ‘ಕಾಮನಬಿಲ್ಲು’ ಪುರವಣಿಯ ಅಧಿಕೃತ ವಿಳಾಸಕ್ಕಂತೂ ಕಳುಹಿಸಿಲ್ಲ. ಈ ಹಿಂದೆ ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾದ ನಿಮ್ಮ ಪತ್ರ, ಅದಕ್ಕೆ ನಾನು ಬರೆದ ಉತ್ತರಗಳೆಲ್ಲವೂ ಇದೇ ಮೇಲ್ ವಿಳಾಸವನ್ನು ಬಳಸಿಕೊಂಡಿದ್ದವು ಎಂಬುದನ್ನಿಲ್ಲಿ ನೆನಪಿಸಲು ಬಯಸುತ್ತೇನೆ. ನೀವು ಕಳುಹಿಸದೇ ಇರುವ ಪತ್ರವೊಂದನ್ನು ಪತ್ರಿಕೆ ಪ್ರಕಟಿಸಿಲ್ಲ ಎಂದು ಅದು ಹೇಗೆ ಹೇಳುತ್ತೀರಿ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ‘ಈ ಪತ್ರವನ್ನು ಪ್ರಜಾವಾಣಿ ಪತ್ರಿಕೆ ಪ್ರಕಟಿಸದಿದ್ದುದರಿಂದ ಇಲ್ಲಿ ಪ್ರಕಟಿಸಿದೆ’ ಎಂಬ ಮಾತುಗಳನ್ನು ಬರೆಯುವುದು ತಮ್ಮಂಥ ಹಿರಿಯರಿಗೆ ಶೋಭಿಸುವುದಿಲ್ಲ ಎಂದು ವಿಷಾದಪೂರ್ವಕವಾಗಿ ಇಲ್ಲಿ ದಾಖಲಿಸ ಬಯಸುತ್ತೇನೆ. ಇದನ್ನು ತಕ್ಷಣವೇ ಸರಿಪಡಿಸುತ್ತೇರೆಂದು ನಾನು ಭಾವಿಸಿದ್ದೇನೆ.

ಎನ್.ಎ.ಎಂ. ಇಸ್ಮಾಯಿಲ್
ಮುಖ್ಯ ಉಪಸಂಪಾದಕ
ಪ್ರಜಾವಾಣಿ

ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರಿಗೆ ನಮಸ್ಕಾರಗಳು.
ನಾನು ಪ್ರಜಾವಾಣಿಯ ಕಾಮನಬಿಲ್ಲು ಪುರವಣಿಯ ವಾಚಕರವಾಣಿ ವಿಭಾಗಕ್ಕೆಂದು ಬರೆದು ಎಂದಿನಂತೆ ಎಡಿಟ್ ಪೇಜ್ ಅಟ್ ಪ್ರಜಾವಾಣಿ.ಕೊ.ಇನ್ ವಿಳಾಸಕ್ಕೆ ಕಳುಹಿಸಿದ ಈ ಪತ್ರ ನಿಮಗೆ ತಲುಪಿಲ್ಲ ಎಂಬ ನಿಮ್ಮ ವಿವರಣೆಯನ್ನು ಒಪ್ಪಿ ನಿಮ್ಮ ಅಪೇಕ್ಷೆಯಂತೆ ಪಂಡಿತಪುಟದಲ್ಲಿ ಪ್ರಕಟಿಸಿದ ಪತ್ರವನ್ನು ತೆಗೆದಿರಿಸಿದ್ದೇನೆ. ಕಾಮನಬಿಲ್ಲನಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಗಣಕ ಸಾಧನಗಳಲ್ಲಿ ಕನ್ನಡ ಬಳಕೆಗೆ ಇರುವ ಅವಕಾಶಗಳು ಮತ್ತು ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದು ಬರೆದಿದ್ದ ನನ್ನ ಪತ್ರದ ಆಶಯವನ್ನು ಗೌಣಗೊಳಿಸಿ ನಾನು ಬಳಸಿರುವ ಕನ್ನಡ ಪಾರಿಭಾಷಿಕಗಳ ಬಗ್ಗೆ ನೀವು ಬರೆದ ಪತ್ರಗಳು ಮತ್ತು ನನ್ನ ಉತ್ತರಗಳ ಹಿನ್ನೆಲೆಯಲ್ಲಿ ಎರಡು ವಾರ ಕಳೆದರೂ ನನ್ನ ಪತ್ರ ಪ್ರಕಟವಾಗಿಲ್ಲ ಎಂದು ಅನಿಸಿತು. ಈಗಲೂ ನೀವು ನನ್ನ ಅಭಿಪ್ರಾಯ ಮಂಡನೆಗೆ ಅವಕಾಶಕೊಡಬಹುದು ಎಂಬ ಭಾವನೆಯಿಂದ ಪಂಡಿತ ಪುಟದ ಪತ್ರವನ್ನು ತೆಗೆದಿರಿಸಿದ್ದೇನೆ. ಈ ಬಗ್ಗೆ ಮುಕ್ತ ವಿಚಾರ ವಿನಿಮಯಕ್ಕೆ ನಿಮ್ಮಲ್ಲಿ ಅವಕಾಶವಿದೆ ಎಂದು ಭಾವಿಸಿದ್ದೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಸಮಾನ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲವಿರುವ ಮುಂದುವರೆದ ವರ್ಗಗಳ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಇಂಗಿಷಿನಲ್ಲಿ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವೆ ಅಸಮಾನತೆಯ ಅಂತರ ಹೆಚ್ಚುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸಿರುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅಗತ್ಯವಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವಷ್ಟೇ ಅಲ್ಲ, ಸಾಧ್ಯವಾದಷ್ಟೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರ ಕ್ರಮದಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.
ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅವಕಾಶದ ಹಕ್ಕನ್ನು ಶಾಶ್ವತವಾಗಿ ವಂಚಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವುದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆಯ ಬೇಡಿಕೆಯ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಯಾವ ಶಿಕ್ಷಣ ತಜ್ಞರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ. ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸುವುದನ್ನು ಯಾರೂ ಬೇಡವೆನ್ನುತ್ತಿಲ್ಲ.

ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವ ರೀತಿಯಲ್ಲಿಯೇ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಹಾಗೆ ತರಬೇತಿಪಡೆದ ಶಿಕ್ಷಕರು ಮಕ್ಕಳೊಂದಿಗೆ ಸರಳವಾಗಿ ಇಂಗ್ಲಿಷಿನಲ್ಲಿ ಯೋಚಿಸುವುದನ್ನು, ಮಾತನಾಡುವುದನ್ನು ಮೊದಲು ಕಲಿಸಬೇಕು. ಅನಂತರವೇ ಇಂಗ್ಲಿಷಿನಲ್ಲಿ ಓದುವುದು, ಬರೆಯುವುದನ್ನು ಕಲಿಸಬೇಕು. ಈಗ ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶಿತ ಪ್ರಯೋಜನವಾಗುತ್ತಿಲ್ಲ. ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದ ಇಂಗ್ಲಿಷ್ ಭಾಷೆಯನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯಗೊಳಿಸಿ ಆರನೆಯ ತರಗತಿಯಿಂದ ಹಾಗೆ ಅಸಮರ್ಪಕವಾಗಿ ಕಲಿಸಿದ ಇಂಗ್ಲಿಷನ್ನು ಮಾಧ್ಯಮವಾಗಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ.

ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಸರಕಾರ ಯಾವ ಕಾರಣಕ್ಕೂ ಮಕ್ಕಳ ಈ ಹಕ್ಕನ್ನು ಕಸಿಯಬಾರದು. ಸರಕಾರ ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆ ಮತ್ತು ಶಿಕ್ಷಣ ವ್ಯಾಪಾರಿಗಳ ದುರಾಸೆಗೆ ಇಂಬುಕೊಡುವಂತೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಮತ್ತು ಮಾಧ್ಯಮವಾಗಿ ಅದನ್ನು ಬಳಸುವ ವಿಷಯದಲ್ಲಿ ದುಡುಕಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಹಕ್ಕಿನ ರಕ್ಷಕನಾಗಿ ವರ್ತಿಸಬೇಕು.

೧೯೮೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ರಾಮಾಜೋಯಿಸ್ ಮತ್ತು ಶ್ರೀ ರಾಜೇಂದ್ರಬಾಬು ಅವರು ನೀಡಿದ ತೀರ್ಪು ಇಡೀ ದೇಶಕ್ಕೆ ಮಾದರಿಯಾದುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ಸಂಪಾದಕೀಯದಲ್ಲಿ ಪ್ರಶಂಸಿಸಿತ್ತು. ಅದನ್ನು ೧೯೯೩ರಲ್ಲಿ ಸರ್ವೋನ್ನತ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ ಎನ್ ವೆಂಕಟಾಚಲಯ್ಯ ಮತ್ತು ಶ್ರೀ ಎಸ್ ಮೋಹನ್ ಅವರು ಅನುಮೋದಿಸಿದ್ದರು. ಅದನ್ನು ಆಧರಿಸಿ ಶ್ರೀ ಎಂ ವೀರಪ್ಪ ಮೊಯಿಲಿ ಅವರ ಸರಕಾರ ೧೯೯೪ರಲ್ಲಿ ರೂಪಿಸಿದ ಭಾಷಾನೀತಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಸದವಕಾಶ ಇಂದಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರ ಸರಕಾರಕ್ಕೆ ದೊರೆತಿದೆ. ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರದಾಗಲಿ ಎಂದೇ ನನ್ನ ಆಶಯ.

ಬೆಂಗಳೂರು*
೧೯೩೪ ಗ್ರೀಷ್ಮ ಜ್ಯೇಷ್ಠ ೨೫ ಕೃಷ್ಣ ಏಕಾದಶಿ ಅಶ್ವಿನಿ ಶುಕ್ರವಾರ
೧೫ಜೂನ್ ೨೦೧೨
—-
* ಸರಕಾರಿ ಶಾಲೆಗಳಲ್ಲಿ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವುದರ ವಿರುದ್ಧ ಮೈಸೂರಿನ ಕನ್ನಡ ಕ್ರಿಯಾ ಸಮಿತಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನೆಯ ಧರಣಿಯಲ್ಲಿ ವಿತರಿಸಿದೆ

ಮೂಲ ಕನ್ನಡ ಕೃತಿಗಳಿಂದ ಮಾತ್ರ ಕನ್ನಡದ ಉಳಿವು; ಎರವಲು(ಎಂಜಲು) ಕೃತಿಗಳಿಂದ ಅಲ್ಲ

ಮಾನ್ಯರೆ,
ಕನ್ನಡದ ಉಳಿವಿಗಾಗಿ ಕನ್ನಡದಲ್ಲಿ ಸೃಜನಶೀಲ ಕೃತಿಗಳು ಹೆಚ್ಚು ಹೆಚ್ಚು ಬರಬೇಕು ಎನ್ನುವುದು ಸರಿಯಾದ ಚಿಂತನೆ; ಬೇರೆಯವರ ಸೃಜನಶೀಲತೆಯನ್ನು ತಮ್ಮದೆಂಬಂತೆ ವಂಚಿಸುವುದು ಅರ್ಥಯುತವಾದ ಚಿಂತನೆಯಲ್ಲವೆಂದು ನನ್ನ ಅನಿಸಿಕೆ. ಈಗ ಜನಶ್ರೀ ವಾಹಿನಿಯವರು ಆರ್ ಕೆ ನಾರಾಯಣ್ ಅವರ ಇಂಗ್ಲಿಷ್ ಕಥೆಗಳ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ತಯಾರಿಸಿದ್ದ ‘ಮಾಲ್ಗುಡಿ ಡೇಸ್’ ಅನ್ನು ಮೂಲ ಭಾಷೆಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಒದಗಿಸಿ, ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯವಾದಷ್ಟು ಸಂಭಾಷಣೆಗಳನ್ನು ಕನ್ನಡದಲ್ಲಿ ಅಡಿಬರಹದಲ್ಲಿ ಕೊಟ್ಟಿರುವುದು ಕನ್ನಡದ ಪ್ರಬುದ್ಧ ಪ್ರೇಕ್ಷಕರ ವಿವೇಕಕ್ಕೆ ತೋರಿದ ಗೌರವವಾಗಿದೆ. ಆಮೀರ್ ಖಾನ್ ಅವರು ಕೂಡ ಸತ್ಯಮೇವ ಜಯತೆಯ ಇಂಗ್ಲಿಷ್ ಆವೃತ್ತಿಯನ್ನು ಮೂಲ ಹಿಂದಿಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಉಳಿಸಿ ಇಂಗ್ಲಿಷಿನಲ್ಲಿ ಸಂಭಾಷಣೆಗಳನ್ನು ಅಡಿ ಬರಹದಲ್ಲಿ ನೀಡುತ್ತಿರುವುದನ್ನೂ ಗಮನಿಸಬೇಕು.

ದೂರದರ್ಶನದಲ್ಲಿ ಭಾನುವಾರಗಳಂದು ಪ್ರಸಾರವಾಗುವ ವಿವಿಧ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸಂಭಾಷಣೆಗಳು ಭಾರತೀಯ ಭಾಷೆಗಳಲ್ಲಿ ಅಡಿ ಬರಹದಲ್ಲಿ ಲಭ್ಯವಿರುವುದರಿಂದ ಪ್ರೇಕ್ಷಕರು ಮೂಲ ಭಾಷೆಯನ್ನು ಕೇಳುವುದರೊಂದಿಗೆ ತಮ್ಮ ಭಾಷೆಯಲ್ಲಿರುವ ಅಡಿ ಬರಹದಲ್ಲಿ ಸಂಭಾಷಣೆಯನ್ನು ಓದಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಭಾರತೀಯ ಭಾಷೆಗಳಲ್ಲಿ ಅಡಿಬರಹದಲ್ಲಿ ಸಂಭಾಷಣೆಗಳಿರುವ ಅನೇಕ ಚಿತ್ರಗಳ ಅಡಕತಟ್ಟೆಗಳು ಲಭ್ಯವಿವೆ. ಇದರಿಂದ ಈ ಚಿತ್ರಗಳಿಗೆ ಮೂಲಭಾಷೆಯ ಕೃತಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ತಮ್ಮ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.

ಇತ್ತೀಚೆಗೆ ರಾಷ್ಟ್ರಪತಿಗಳ ಚಿನ್ನದ ಕಮಲ ಪ್ರಶಸ್ತಿ ಪಡೆದ ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕ ಶ್ರೀ ಅಭಯ ಸಿಂಹ ಅವರು ಸ್ವತಂತ್ರವಾಗಿ, ಪ್ರತ್ಯೇಕವಾಗಿಯೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ತಯಾರಿಸಿದ್ದ ಶಿಕಾರಿ ಚಿತ್ರಕ್ಕೆ ಮಲಯಾಳಂ ಮತ್ತು ಕನ್ನಡ ಪ್ರೇಕ್ಷಕರನ್ನು ನಿರೀಕ್ಷಿಸಿದ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ. ಮಮ್ಮೂಟಿಯವರೇ ಕಂಠದಾನದ ನೆರವು ಪಡೆಯದೆ ಕನ್ನಡದಲ್ಲಿ ಸಂಭಾಷಣೆಗಳನ್ನು ಹೇಳಿದ್ದರೂ ಅದು ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ಮಲೆಯಾಳಂ ಪ್ರೇಕ್ಷಕರೂ ಇದು ಕನ್ನಡದಿಂದ ಧ್ವನಿವಾಹಿನಿ ಮಾತ್ರ ಬದಲಿಸಿದ(ಡಬ್ ಮಾಡಿದ) ಚಿತ್ರವೆಂಬಂತೆ ದೂರವಿರಿಸಿದರು ಎಂಬುದು ಒಂದು ವಿವರಣೆ. ಅಂದರೆ ಒಂದು ಭಾಷೆಯ ನಿಜ ಬಳಕೆಯ ಸಂರ್ಭವನ್ನು ಇನ್ನೊಂದು ಭಾಷೆಯ ನಿಜಬಳಕೆಯ ಸಂದರ್ಭವಾಗಿಸುವುದು ಕಷ್ಟ. ಆದರೆ ಅಡಿಬರಹದ ಸಂಭಾಷಣೆಯಿದ್ದಾಗ ಚಿತ್ರವನ್ನು ಮೂಲಭಾಷೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಒಪ್ಪಿ ಸ್ವೀಕರಿಸಿ ಅನುವಾದಿಸಿರುವ ಸಂಭಾಷಣೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.

ಆದ್ದರಿಂದ ಸತ್ಯಮೇವ ಜಯತೆಯನ್ನೂ ಅದರ ಇಂಗ್ಲಿಷ್ ಅವತರಣಿಕೆಯ ಹಾಗೆ ಎಲ್ಲ ಭಾರತೀಯ ಭಾಷೆಗಳ ಅಡಿ ಬರಹದ ಸಂಭಾಷಣೆಗಳೊಂದಿಗೆ ಮಾತ್ರ ಪ್ರಸಾರಮಾಡುವಂತೆ ಅಮೀರ್ ಖಾನ್ ಅವರನ್ನು ಕೋರಿದ್ದೇನೆ. ಈಗ ಅವರು ವಿವಿಧ ಭಾಷಾ ಪತ್ರಿಕೆಗಳಲ್ಲಿ ಆಯಾ ವಾರ ಪ್ರಸಾರವಾದ ಕಂತಿನ ಅನುವಾದವನ್ನು ಲೇಖನ ರೂಪದಲ್ಲಿ ನೀಡುತ್ತಿರುವುದು ಸ್ವಾಗತಾರ್ಹ. ದೂರದರ್ಶನ ನೋಡಲಾರದ, ಪತ್ರಿಕೆ ಓದಲಾರದ ದೃಷ್ಟಿಹೀನತೆಯುಳ್ಳವರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಇದನ್ನು ಧ್ವನಿರೂಪದಲ್ಲಿ ವಿವಿಧ ಆಕಾಶವಾಣಿಯ ವಾಹಿನಿಗಳಲ್ಲಿ ಪ್ರಸಾರಮಾಡಬಹುದು.

ವಿವಿಧ ಭಾಷೆಗಳ ಚಿತ್ರಗಳನ್ನು ಅಡಿ ಬರಹಗಳಲ್ಲಿರುವ ಅನುವಾದಿತ ಸಂಭಾಷಣೆಯ ಸರಳ ವಿಧಾನದ ಮೂಲಕ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲ ಭಾಷೆಗಳವರು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಈ ವಿಷಯದಲ್ಲಿ ದಯವಿಟ್ಟು ಎಲ್ಲರೂ ನಿರುದ್ವಿಗ್ನವಾಗಿ ಯೋಚಿಸಬೇಕೆಂದು ಕೋರುತ್ತೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ
ಮೈಸೂರು

ವಿಚಾರವಾದದ ಅನುಸಂಧಾನ ಮತ್ತು ನೈಚ್ಯಾನುಸಂಧಾನ

ರಾಜ್ಯದಲ್ಲಿ ಹಲವು ಕಡೆ ಆಚರಣೆಲ್ಲಿರುವ ಕುಖ್ಯಾತ ಮಡೆಸ್ನಾನವನ್ನು ನಿಲ್ಲಿಸಬೇಕೆಂದು ಪ್ರಗತಿಪರ ಚಿಂತಕರು ಒತ್ತಾಯಿಸುತ್ತ ಬಂದಿದ್ದರೂ ಸರಕಾರ ನಿರ್ಧಾರ ಕೈಗೊಂಡಿಲ್ಲ. ಈ ಬಾರಿ ಸುಬ್ರಹ್ಮಣ್ಯದ ಮಡೆಸ್ನಾನದ ವಿರುದ್ಧ ದನಿ ಎತ್ತಿದ ಪ್ರಗತಿಪರರ ಮೇಲೆ ಪಟ್ಟಭದ್ರ ಶಕ್ತಿಗಳು ಆಕ್ರಮಣ ಮಾಡಿದಾಗಲೂ ಸರಕಾರ ಇತ್ಯಾತ್ಮಕವಾಗಿ ಸ್ಪಂದಿಸಿಲ್ಲ. ಪೇಜಾವರದ ಶ್ರೀ ವಿಶ್ವೇಶತೀರ್ಥರು ಅದು ನಂಬಿಕೆಯ ವಿಷಯವೆಂದೂ ಪರಂಪರೆಯ ಆಚರಣೆಯೆಂದೂ ಅದನ್ನು ನಿಷೇಧಿಸಲು ಮುಂದಾಗದಿದ್ದಾಗ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲರು ಮಡೆಸ್ನಾನ ಕುರಿತ ಸಂವಾದ ಏರ್ಪಡಿಸಿ ಸಮಾನ ಮನಸ್ಕ ಮಠಾಧಿಪತಿಗಳು ಮತ್ತು ವಿಚಾರವಂತರೊಂದಿಗೆ ಸಂವಾದದಲ್ಲಿ ಭಾಗವಹಿಸುವಂತೆ ಶ್ರೀ ವಿಶ್ವೇಶತೀರ್ಥರನ್ನು ಆಹ್ವಾನಿಸಿದರು. ಇದೇ ಶನಿವಾರ ೭ರಂದು ನಡೆದ ಆ ಸಭೆಯಲ್ಲಿ ಶ್ರೀ ವಿಶ್ವೇಶತೀರ್ಥರು ಭಾಗವಹಿಸಲಿಲ್ಲ. ಇತರ ಹಿಂದುಳಿದ ವರ್ಗಗಳ ವಿವಿಧ ಮಠಾಧಿಪತಿಗಳು ಸೇರಿ ಮಡೆಸ್ನಾನವನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಭಾನುವಾರ ೮ರಂದು ನಡೆದ ಮತ್ತೊಂದು ಸಭೆಯಲ್ಲಿ ಪೇಜಾವರದ ಶ್ರೀ ವಿಶ್ವೇಶತೀರ್ಥರು ತಾವು ಮಡೆಸ್ನಾನವನ್ನು ಸಮರ್ಥಿಸಿಲ್ಲವೆಂದೂ ಅದು ಹಿಂದೂ ಸಂಪ್ರದಾಯದ ಭಾಗವಾಗಿ ಉಳಿಯಬೇಕಿಲ್ಲವೆಂದೂ ಹೇಳಿದ್ದಾರೆ. ಇದಕ್ಕೆ ಮುನ್ನ ಶ್ರೀ ವೀರಭದ್ರ ಚನ್ನಮಲ್ಲರು ಮಾತನಾಡಿ ಪೇಜಾವರರ ಬಗ್ಗೆ ತಮಗೆ ಅಪಾರ ಗೌರವವಿರುವುದಾಗಿಯೂ ಅವರು, ವರ್ಷದಲ್ಲಿ ಒಂದು ದಿನ ಅಷ್ಟಮಠಗಳಲ್ಲಿ ಸಮಾಜದ ಎಲ್ಲ ವರ್ಗಗಳವರಿಗೆ ಪೂಜೆ ಸಲ್ಲಿಸಲು ಅವಕಾಶ- ಮೊದಲಾದ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ ತಾವು ಅವರ ಶಿಷ್ಯವೃತ್ತಿ ಸ್ವೀಕರಿಸುವುದಾಗಿಯೂ ಹೇಳಿದರೆಂದು ವರದಿಯಾಗಿದೆ.
ಸಂವಿಧಾನ ಮತ್ತು ಪರಂಪರೆಗಳಲ್ಲಿ ತಾವು ಪರಂಪರೆಯನ್ನು ಹೆಚ್ಚು ಗೌರವಿಸುವವರು ಎಂದು ಹೇಳಿರುವ ಶ್ರೀ ವಿಶ್ವೇಶತೀರ್ಥರ ಎದುರು ಪ್ರಗತಿಪರರೆಂದುಕೊಂಡವರು ಈ ರೀತಿ ಶರಣಾದುದನ್ನು ನೋಡಿ ಇದೇನು ಸಮಾನತೆಯ ನೆಲೆಯ ಅನುಸಂಧಾನವೊ ನೈಚ್ಯಾನುಸಂಧಾನವೊ ಎಂದು ಸಖೇದಾಶ್ಚರ್ಯವಾಯಿತು. ‘ಪ್ರಗತಿಪರ ಸ್ವಾಮೀಜಿ’ ಎನ್ನುವುದೇ ‘ಬಿಸಿಬಿಸಿ ಐಸ್ ಕ್ರೀಮ್’ ಎಂಬಂಥ ವಿರೋಧಾಭಾಸ. ಪರಂಪರೆ, ಆಚರಣೆಗಳು ಖಾಸಗೀ ನಂಬಿಕೆಗಳು. ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮಾತ್ರ ಪರಮೋಚ್ಚ. ಶ್ರೀ ವಿಶ್ವೇಶತೀರ್ಥರ ಶಿಷ್ಯರಾಗಲು ಶ್ರೀ ವೀರಭದ್ರ ಚನ್ನಮಲ್ಲರು ಹಾತೊರೆಯುವ ಬದಲು ರಾಷ್ಟ್ರಕವಿ ಕುವೆಂಪು ಅವರ ಕರೆಗೆ ಓಗೊಟ್ಟು, ‘ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬಂದು, ಮೌಢ್ಯತೆಯ ಮಾರಿಯನ್ನು ಹೊರದೂಡ’ಲಿ; ‘ಕೇವಲ ಮನುಷ್ಯ’ರಾಗಿ ಎಲ್ಲರ ಜೊತೆ ಸಮಾನ ಗೌರವದ ನೆಲೆಯಲ್ಲಿ ಅನುಸಂಧಾನ ಮಾಡಲಿ.
ಸಂವಿಧಾನ ಪರಮೋಚ್ಚ ಎಂದು ಒಪ್ಪದ ಸ್ವಾಮಿಗಳಿಗೆ ಪ್ರಗತಿಪರತೆಯ ಮುಖವಾಡದ ಅಗತ್ಯ ಇದೆ;
ಅಂಥವರ ಆಶ್ರಯದಲ್ಲಿ ವಿಚಾರವಾದವನ್ನು ಬೆಳೆಸುವ(?) ಅನಿವಾರ್ಯತೆ ವಿಚಾರವಾದಿಗಳಿಗೆ ಇಲ್ಲ.

ಡಾ ಪಂಡಿತಾರಾಧ್ಯ
ಜಿ.ಪಿ. ಬಸವರಾಜು

“ನೀನು ನಕ್ಕರೆ ಹಾಲು ಸಕ್ಕರೆ!’

ಚಿತ್ರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕೀರ್ತಿಶ್ರೀ ನಾಯಕ

ಸುಸ್ಮಿತಾ ನಮ್ಮ ಮನೆಯಲ್ಲಿ ಇರಲು ಬಂದಾಗ ನಾನು ಆರನೆಯ ತರಗತಿಯಲ್ಲಿದ್ದೆ. ಸ್ವಲ್ಪ ಜಾಸ್ತಿಯೇ ಎನಿಸುವಂತೆ ಶಿಸ್ತಿನಲ್ಲಿ ಬೆಳೆದ ನನಗೆ ಸುಸ್ಮ ಯಾವ ಅಳುಕೂ ಇಲ್ಲದೆ ತನ್ನ ಮನೋಭಾವಗಳನ್ನು ಪ್ರಕಟಿಸುತ್ತಿದ್ದ ರೀತಿ ನೋಡಿ ನನಗೆ, ನಾನು ಕೈತೋಟದ ಗಿಡವಾದರೆ ಇವಳು ಕಾಡಿನ ಗಿಡದಂತೆ ಕಾಣುತ್ತಿದ್ದಳು.

ಸುಸ್ಮಿತಾ ನಮ್ಮ ಮನೆಗೆ ಬಂದ ಹೊಸದರಲ್ಲಿ ಯಾವುದೇ ಹಕ್ಕಿಯ ಕೂಗು ಕೇಳಿದರೂ ಸಾಕು, ‘ಏ ಕೀರ್ತಿ, ಇದು ಇಂಥಾ ಹಕ್ಕಿ’ ಎಂದು ಹಕ್ಕಿಯ ಹೆಸರು ಹೇಳುತ್ತಿದ್ದಳು. ಪಿಕರಾಳ, ಕಾಜಾಣ ಇತ್ಯಾದಿ ಹೆಸರುಗಳನ್ನು ಅವಳಿಂದಲೇ ಕೇಳಿ ಕಲಿತಿದ್ದೆ. ಅನಂತರ ತೇಜಸ್ವಿ ಮಾಮ ಮೈಸೂರಿಗೆ ಬಂದಾಗ ಇದು ಇಂಥದ್ದೇ ಹಕ್ಕಿ ಎಂದು ಹೇಗೆ ಗೊತ್ತುಮಾಡುವುದೆಂದು ಅವರಿಂದ ಕೇಳಿ ತಿಳಿಯುತ್ತಿದ್ದೆ. ಮೊದಮೊದಲು ಸುಸ್ಮಳಿಗೆ ಈ ಜ್ಞಾನ ಎಲ್ಲಿಂದ ಬಂತು ಎಂಬ ಕುತೂಹಲ ಆಗುತ್ತಿತ್ತು. ಕಾಡಿನಿಂದ ನಾಡಿಗೆ ಬಂದ ಇವಳು ಎಂತೆಂಥ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದಾಳೆಂದು ನನಗೆ ಆಗ ಅರ್ಥವಾಗಿರಲಿಲ್ಲ. ಇದೇ ರೀತಿ ೩-೪ ವರ್ಷದ ಪುಟಾಣಿಯಾಗಿದ್ದ ಈಶಾನ್ಯೆ ಕೂಡ ಗಿಡ-ಬಳ್ಳಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಳು. ಅವಳಿಗೆ ಗಿಡಗಳ ಬಗ್ಗೆ ಅಷ್ಟೇ ಅಲ್ಲದೆ, ಅವುಗಳ ಉಪಯೋಗಗಳ ಬಗ್ಗೆಯೂ ತಿಳಿದಿತ್ತು. ಈ ವಿಷಯದಲ್ಲಿ ‘ಮಾರ’ನೇ ಅವಳ ಗುರುವಿರಬೇಕು. ಸುಸ್ಮಿತಾ ಮೈಸೂರಿಗೆ ಓದಲು ಬಂದ ಮೇಲೆ ಸುಮಾರು ೮೫-೯೦ ವರ್ಷದ ಮಾರನೇ ಅವಳ ಸಹಪಾಠಿಯಾಗಿದ್ದ. ಅವನೊಂದಿಗೆ ಕಾಡು ಅಲೆಯುವಾಗ ಸಂಗ್ರಹಿಸಿದ ಮಾಹಿತಿ ಇದಾಗಿರಬಹುದು.

ತೇಜಸ್ವಿ ಮಾಮ, ರಾಜೇಶ್ವರಿ ಆಂಟಿ ತಿಂಗಳಿಗೊಮ್ಮೆಯಾದರೂ ಮೈಸೂರಿಗೆ ಬಂದು ಸುಸ್ಮಳನ್ನು ನೋಡಿಕೊಂಡು ಹೋಗುತ್ತಿದ್ದರು. ಆಗ ಅವರಿದ್ದಷ್ಟು ದಿನ ಇವಳು ಅವರಜ್ಜಿಯ ಮನೆಯಲ್ಲಿರುತ್ತಿದ್ದಳು. ಹೀಗಿದ್ದಾಗ ಒಂದು ಭಾನುವಾರ ಮಾಮ ಮನೆಗೆ ಬಂದವರು ಅವರ ಮಾತುಕತೆಯೆಲ್ಲ ಮುಗಿಸಿ ಹೊರಡುವಾಗ, ‘ಕೀರ್ತಿ ನಡಿಯೆ, ನಮ್ಮನೇಲಿ ಮೀನಿದೆ. ಅಲ್ಲೇ ಊಟಮಾಡೋಣ’ ಎಂದರು. ತೇಜಸ್ವಿ ಮಾಮ ಹೇಳಿದ ಅನಂತರ ಮತ್ತೊಮ್ಮೆ ಯೋಚಿಸುವ ರೂಢಿಯೇ ಇಲ್ಲದ ನಾನು ಅವರ ಹಿಂದೆ ಹೋದೆ.
ಬಾಗಿಲನ್ನು ತೆರೆದ ರಾಜೇಶ್ವರಿ ಆಂಟಿ ನಮ್ಮನ್ನು ನೇರವಾಗಿ ಊಟದ ಮನೆಗೆ ಕರೆದುಕೊಂಡುಹೋದರು. ಅಣ್ಣ(ಕುವೆಂಪು), ಸುಸ್ಮ, ಈಶ, ಪ್ರಾರ್ಥನೆ ಊಟಕ್ಕೆ ಕುಳಿತಿದ್ದರು. ಅಮ್ಮ(ಹೇಮಾವತಿ) ಬಿಸಿ ಬಿಸಿಯಾಗಿ ಮೀನು ಇತ್ಯಾದಿಗಳನ್ನು ಹುರಿದುಕೊಡುತ್ತಿದ್ದರು. ತಾರಿಣಕ್ಕ, ರಾಜೇಶ್ವರಿ ಆಂಟಿ ಬಡಿಸುತ್ತಿದ್ದರು. ಎಲ್ಲರೂ ಏನೊ ಮಾತಾಡಿಕೊಂಡು ಊಟಮಾಡುತ್ತಿದ್ದರು. ಅಣ್ಣ ಮುಂದೆ ಕೂತದ್ದರಿಂದ ನಾನು ಹೆಚ್ಚು ಮಾತಾಡದೆ ಮೀನು, ಕೋಳಿ ಇತ್ಯಾದಿಗಳಿದ್ದ ನನ್ನ ತಟ್ಟೆ ನೋಡಿಕೊಂಡು ಸುಮ್ಮನೆ ಊಟ ಮಾಡುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಅಣ್ಣ ಏನು ಊಟ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ತಲೆಗೆ ಬಂತು. ಅವರ ತಟ್ಟೆ ನೋಡಿ ನಾನು ಅವಾಕ್ಕಾದೆ. ಅವರೂ ನಮ್ಮಂತೆ ಮೀನು ಕೋಳಿಗಳನ್ನೇ ತಿನ್ನುತ್ತಿದ್ದರು. ಆ ವಯಸ್ಸಿನಲ್ಲಿ ನನಗೆ ಜಾತಿ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಆಗ ನನ್ನ ಪ್ರಕಾರ ಸಸ್ಯಾಹಾರಿಗಳೆಲ್ಲ ಬ್ರಾಹ್ಮಣರು, ಅಸಸ್ಯಾಹಾರಿಗಳೆಲ್ಲ ಗೌಡರು ಎಂಬ ಭಾವನೆ. ಆ ಪ್ರಕಾರ ನನ್ನ ಅಭಿಪ್ರಾಯದಲ್ಲಿ ಅಣ್ಣ ಬ್ರಾಹ್ಮಣರು, ತೇಜಸ್ವಿ ಮಾಮ, ನಾವು ಎಲ್ಲ ಗೌಡರು!
ಕುವೆಂಪು ಅವರು ಸಸ್ಯಾಹಾರಿಗಳು ಎಂದು ನಾನು ತಿಳಿದುಕೊಳ್ಳಲು ಹಲವು ಕಾರಣಗಳಿದ್ದವು. ಶಾಲೆಯಲ್ಲಿ ನಾವು ಕೇಳುತ್ತಿದ್ದ ಅಂಶಗಳು, ಅಣ್ಣ ಯಾವಾಗಲೂ ಧ್ಯಾನಾಸಕ್ತರಾಗಿರುತ್ತಾರೆಂಬ ವಿಷಯ ಮತ್ತು ಅವರಿಗೆ ಇಹದ ಅರಿವಿಲ್ಲವೆಂಬ ವಿಚಾರ ಕೇಳುತ್ತಲೇ ಬಂದಿದ್ದೆ. ಆದ್ದರಿಂದ ಕುವೆಂಪು=ತಪಸ್ವಿ=ಬಾಹ್ಮಣ ಎಂದಷ್ಟೇ ನನ್ನ ಪುಟ್ಟ ಮೆದುಳಿಗೆ ತಿಳಿದದ್ದು. ದೊಡ್ಡವಳಾಗುತ್ತಾ ಹೋದಂತೆ ತಪೋನಿರತ ಋಷಿಗಳಿಗಿಂತ ಅಣ್ಣನವರ ಜೀವನ ಹೊರತಾಗಿಲ್ಲ ಎಂಬುದು ತಿಳಿಯುತ್ತಾ ಹೋಯಿತು.

ತಾಳ್ಮೆ, ಸೌಜನ್ಯಗಳ ಮೂರ್ತಿಗಳಾಗಿದ್ದ ಅಣ್ಣ, ಅಮ್ಮ(ಕುವೆಂಪು. ಹೇಮಾವತಿ)ಯವರ ಆತ್ಮೀಯತೆಯನ್ನು, ಸುಸ್ಮಳನ್ನು ಶನಿವಾರ ಬಿಡಲು ಮತ್ತು ಭಾನುವಾರ ಕರೆತರಲು ಅವರ ಮನೆಗೆ ಹೋಗುತ್ತಿದ್ದಾಗ ಅನುಭವಿಸಿದ್ದೇನೆ. ಹಲವು ಬಾರಿ ಅಮ್ಮ, ತಾರಿಣಕ್ಕ, ನಾನು ವೆರಾಂಡದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಣ್ಣ ಬಿಡುವಾಗಿದ್ದರೆ ತಾವೂ ಬಂದು ನಮ್ಮೊಂದಿಗೆ ಕುಳಿತು ತೇಜಸ್ವಿ ಮಾಮನ ಲೀಲೆಗಳನ್ನು ಹೇಳಿ ತಾವೂ ನಕ್ಕು ನಮ್ಮನ್ನೂ ನಗಿಸುತ್ತಿದ್ದರು. ಹಾಗಾಗಿ ತಾರಿಣಕ್ಕನ ‘ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿನ ಹಲವು ವಿಷಯಗಳನ್ನು ಅಣ್ಣ, ಅಮ್ಮರ ಬಾಯಿಂದ ಕೇಳಿ ಬಲ್ಲೆ.

ಈ ಮೃದುಭಾಷಿಗಳ ನಡುವೆ ತೇಜಸ್ವಿ ಮಾಮ ಹೇಗೆ ಅವತರಿಸಿದರು ಎಂಬ ಬಗ್ಗೆ ಬಹಳ ಸೋಜಿಗವಾಗುತ್ತಿತ್ತು. ಅಣ್ಣ, ಅಮ್ಮ, ತಾರಿಣಕ್ಕ, ಕಲಕ್ಕ ಯಾವತ್ತೂ ಜೋರಾಗಿ ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ; ಮಾಮ ಸಣ್ಣಗೆ ಮಾತಾಡಿದ್ದನ್ನೂ ಕೇಳಿ ಇಲ್ಲ. ಇದರ ಜೊತೆಗೆ ಸಮಾಜದಲ್ಲಿ ಒಬ್ಬ ಮೇರು ವ್ಯಕ್ತಿ ಎನಿಸಿಕೊಂಡವರು ತಮ್ಮ ಮಗನ ಹುಡುಗಾಟ, ಹುಡುಕಾಟಕ್ಕೆ ಯಾವುದೇ ರೀತಿಯ ಬ್ರೇಕ್ ಹಾಕದೆ ಅವರ ದಾರಿಯನ್ನು ಅವರೇ ಅವರಿಗೆ ಬೇಕಾದಂತೆ ಹುಡುಕಿಕೊಳ್ಳಲು ಬಿಟ್ಟ ಬಗ್ಗೆ ಪರಮಾಶ್ಚರ್ಯವಾಗುತ್ತದೆ. ಇದರ ಜೊತೆ ಅಣ್ಣನವರಿಗೆ ತಮ್ಮ ಬಗ್ಗೆ ಮತ್ತು ತಮ್ಮ ಮಗನ ಬಗ್ಗೆ ಎಂಥ ವಿಶ್ವಾಸ ಇತ್ತೆಂದೂ ತಿಳಿಯುತ್ತದೆ. ಅಣ್ಣ ಯಾವ ನಿಮಿಷದಲ್ಲಿಯೂ ತಮ್ಮ ವ್ಯಕ್ತಿತ್ವಕ್ಕೆ ತೇಜಸ್ವಿ ಮಾಮನಿಂದ ತೊಂದರೆಯಾಗಬಹದೆಂದು ಯೋಚಿಸದೆ ತೇಜಸ್ವಿ ಮಾಮ ಸ್ವತಂತ್ರ ವ್ಯಕ್ತಿತ್ವವಾಗಿ ಬೆಳೆಯಲು ಸಹಾಯಮಾಡಿದ್ದು ವಿಶೇಷವಾಗಿ ಕಾಣುತ್ತದೆ. ಇದು ವಿಶಾಲವಾದ ಮರದ ನೆರಳಿನಲ್ಲಿ ಮತ್ತೊಂದು ಮರ ಬೆಳೆಯುವುದಿಲ್ಲ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿದಂತೆನಿಸುತ್ತದೆ. ಇಂತಹ ಅಮ್ಮ, ಅಪ್ಪರನ್ನು ಪಡೆದ ತೇಜಸ್ವಿ ಮಾಮ ಧನ್ಯರು. ಇಂತಹ ದೊಡ್ಡವರ ಒಡನಾಟದಲ್ಲಿ ನಾನೂ ಕೆಲಕಾಲ ಕಳೆದದ್ದಕ್ಕೆ ನನಗೂ ಬಹಳ ಸಂತೋಷವಿದೆ.

ಒಮ್ಮೆ ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಕುವೆಂಪು ಅವರ ಪ್ರತಿಮೆ ಮಾಡುವ ಸಲುವಾಗಿ ಶ್ರೀ ಪಿ.ಆರ್. ತಿಪ್ಪೇಸ್ವಾಮಿಯವರು ಕುವೆಂಪು ಅವರ ಮನೆಗೆ ಬಂದು ಅವರ ಚಿತ್ರಗಳನ್ನು ತೆಗೆಯುತ್ತಾ ಪ್ರತಿಮೆಯನ್ನು ಮಾಡಿಸುವುದರಲ್ಲಿ ನಿರತರಾಗಿದ್ದರು. ಅದು ರಜೆಯ ದಿನವಾಗಿದ್ದರಿಂದ ನಾನು ಸುಸ್ಮಳನ್ನು ಕರೆದುಕೊಳ್ಳಲೋ ಬಿಡಲೋ ಹೋಗಿದ್ದವಳು ಅವರು ಮಾಡುತ್ತಿದ್ದ ಪ್ರತಿಮೆಯನ್ನು ಕುತೂಹಲದಿಂದ ನೋಡುತ್ತಾ ಕುಳಿತಿದ್ದೆ. ತಿಪ್ಪೇಸ್ವಾಮಿಯವರು ಅಣ್ಣನವರಿಗೆ, ನಿಮ್ಮ ಮೊಮ್ಮಕ್ಕಳ ಜೊತೆ ಫೋಟೊ ತೊಗೋತೀನಿ ಅಂದರು. ಅಣ್ಣ ಸುಸ್ಮ ಪ್ರಾರ್ಥನೆಯರನ್ನು ಕರೆದರು.ಅನಂತರ ಅಲ್ಲೇ ಕುಳಿತಿದ್ದ ನನ್ನನ್ನೂ ‘ಬಾ ಅಕ್ಕ’ ಎಂದು ಕರೆದರು. ಆ ಕಾಲದ ಕನ್ನಡ ಅಧ್ಯಯನ ಸಂಸ್ಥೆಯ ರಾಜಕೀಯದ ಬಗ್ಗೆ ಅಲ್ಪ ಸ್ವಲ್ಪ ಅರಗಿಸಿಕೊಂಡಿದ್ದ ನನಗೆ ಏನು ಮಾಡಬೇಕೆಂದು ತಿಳಿಯದೆ ಬಹಳ ಮುಜುಗರವಾಯಿತು. ಆದರೆ ಅಣ್ಣನವರ ಮಾತನ್ನು ಮೀರುವಂತಿರಲಿಲ್ಲ. ಏನು ಮಾಡಬೇಕೆಂದೇ ತಿಳಿಯದೆ ತಿಪ್ಪೇಸ್ವಾಮಿಯವರ ಮುಖ ನೋಡಿದೆ. ಕುವೆಂಪು ಅವರು ಜಿ.ಎಚ್. ನಾಯಕರ ಮಗಳನ್ನು ತಮ್ಮೊಂದಿಗೆ ಫೋಟೋಗೆ ನಿಲ್ಲಲು ಕರೆಯುತ್ತಿರುವುದನ್ನು ನೋಡಿ ಅವರು ನನಗಿಂತ ಹೆಚ್ಚಿನ ಗೊಂದಲದಲ್ಲಿದ್ದಂತೆ ಕಂಡಿತು. ಅಣ್ಣನವರ ಮಾತನ್ನು ಮೀರಲಾರದೆ ನಾನೂ ಅವರೊಂದಿಗೆ ಫೋಟೋವನ್ನೇನೊ ತೆಗೆಸಿಕೊಂಡೆ. ಆದರೆ ಅದರ ಪ್ರತಿಯನ್ನು ತಿಪ್ಪೇಸ್ವಾಮಿಯವರೂ ಕೊಡಲಿಲ್ಲ, ನಾನೂ ಕೇಳಲಿಲ್ಲ. ಅಪ್ಪ, ಮೀರಕ್ಕರಿಗೆ ಈ ವಿಷಯವನ್ನು ನಾನು ಹೇಳಲೂ ಇಲ್ಲ.

ಶಿವಮೊಗ್ಗ ಸುಬ್ಬಣ್ಣನವರು ಕುವೆಂಪು ಭಾವಗೀತೆಗಳನ್ನು ಆಡಿಯೋ ಕ್ಯಾಸೆಟ್ ಮಾಡಿದ ಕಾಲವದು. ನಾನು, ಸುಸ್ಮ ಆ ಕ್ಯಾಸೆಟ್ಟನ್ನು ಪದೇಪದೇ ಕೇಳುತ್ತಿದ್ದೆವು. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ನಮ್ಮ ಮನೆಗೆ ಬಂದಿದ್ದರು. ಅವರು ಮೈಸೂರಿಗೆ ಬಂದಾಗಲೆಲ್ಲ ನಮ್ಮಲ್ಲಿ ಉಳಿದುಕೊಳ್ಳುತ್ತಿದ್ದರು. ಅಡಿಗರಿಗೆ ಕಾಫಿ, ಸಿಗರೇಟು ಎರಡು ಇದ್ದರೆ ಮತ್ತೇನೂ ಬೇಡವಾಗಿತ್ತು. ಆ ದಿನ ಕೂಡ ಮೀರಕ್ಕ ಶಾಲೆಯಿಂದ ಬರುತ್ತಿದ್ದಂತೆಯೇ ನೇರವಾಗಿ ಅಡಿಗೆ ಮನೆಗೆ ಅಡಿಗರಿಗೆ ಕಾಫಿ ಮಾಡಲು ಹೊರಟಿದ್ದನ್ನು ನೋಡಿದ ಅಡಿಗರು ಮೀರಕ್ಕನಿಗೆ ಹೇಳುತ್ತಿದ್ದ ಮಾತು ಆಗ ತಾನೇ ಶಾಲೆಯಿಂದ ಮರಳಿದ ನನ್ನ ಕಿವಿಗೂ ಬಿತ್ತು. ಅವರು ‘ಮೀರಾ, ಕಾಫಿ ಮಾಡಬೇಡಮ್ಮ. ನಾನು ಕುಡಿದಾಯಿತು’ ಎಂದರು. ನಾನೂ ಮನೆಯಲ್ಲಿಲ್ಲದ್ದರಿಂದ ಮೀರಕ್ಕ ಅವಾಕ್ಕಾಗಿ, ‘ಎಲ್ಲಿ ಸಾರ್’ ಎಂದರು. ಅದಕ್ಕೆ ಅಡಿಗರು ‘ಸುಸ್ಮಿತ ಮಾಡಿಕೊಟ್ಟಳು’ ಎಂದರು. ಸುಸ್ಮಿತಾ ಆಗ ೨-೩ ನೇ ತರಗತಿಯಲ್ಲಿ ಓದುತ್ತಿದ್ದ ಪುಟಾಣಿ. ಮೀರಕ್ಕ ಈ ಮಾತನ್ನು ನಂಬಲಾರದೆ ಅಲ್ಲೇ ಇದ್ದ ಸುಸ್ಮಳನ್ನು ಕಾಫಿ ಹೇಗೆ ಮಾಡಿದೆ? ಎಂದು ಕೇಳಿದರು. ಅವಳು ತಾನು ಮಾಡಿದ ರೀತಿಯನ್ನು ಮೀರಕ್ಕನಿಗೆ ವಿವರಿಸುತ್ತಿದ್ದಳು. ಅಲ್ಲೇ ನಿಂತು ಇವೆಲ್ಲವನ್ನೂ ಕೇಳುತ್ತಿದ್ದ ನಾನು ‘ಸುಸ್ಮ, ಕಾಫಿ ಮಾಡಕ್ಕೆ ನೀನು ಎಷ್ಟೆಲ್ಲಾ ಕಷ್ಟಪಟ್ಟೆ.. ಆದರೆ ನಿಮ್ಮ ಅಜ್ಜಯ್ಯನ ಮನೇಲಿ ಬಹಳ ಸುಲಭ ಕಣೆ’ ಎಂದೆ. ಚಿಕ್ಕವಳಾದ ಅವಳಿಗೆ ಅದೇನೂ ಅರ್ಥವಾಗಲಿಲ್ಲ. ‘ಅದ್ಹೇಗೇ?’ ಎಂದಳು. ನಾನು, ‘ನಿಮ್ಮ ಅಜ್ಜಿ ಕಾಫಿ ಡಿಕಾಕ್ಷನ್ ಲೋಟದಲ್ಲಿ ಹಾಕಿಕೊಂಡು ನಿಮ್ಮ ಅಜ್ಜನ ಮುಂದೆ ಬಂದು ನಿಂತು ನಕ್ಕರೆ ಹಾಲು ಸಕ್ಕರೆ ಮಿಕ್ಸ್ ಆಗುತ್ತೆ’ ಎಂದು ‘ನೀನು ನಕ್ಕರೆ ಹಾಲು ಸಕ್ಕರೆ’ ಎಂಬ ಕುವೆಂಪು ಅವರ ಭಾವಗೀತೆಯ ಸಾಲುಗಳನ್ನು ನೆನಪು ಮಾಡಿಕೊಂಡು ಹೇಳಿದೆ. ನಮ್ಮ ಈ ಸಂಭಾಷಣೆಗೆ ಮೀರಕ್ಕ, ಅಡಿಗರು ಜೋರಾಗಿ ನಕ್ಕರು. ಆದರೆ ಪಾಪ ಆ ಪುಟ್ಟ ಮನಸ್ಸಿಗೆ ಏನನಿಸಿತೋ ಏನೋ! ಮುಂದಿನ ಸಲ ನಾವು ಅವರ ಅಜ್ಜಯ್ಯನ ಮನೆಗೆ ಹೋದಾಗ ಅಜ್ಜಯ್ಯ, ಅಜ್ಜಿಯರಿಗೆ ಬಹಳ ಬೇಸರದಿಂದ ನನ್ನ ಮುಂದೇ ಈ ಸಂಗತಿಯನ್ನು ಹೇಳಿದಳು. ನಾನು ಇದನ್ನು ನಿರಿಕ್ಷಿಸಿಯೇ ಇರಲಿಲ್ಲ. ವಿಷಯವನ್ನು ಕೇಳಿ ಅಣ್ಣ, ಅಮ್ಮ ಮುಕ್ತವಾಗಿ ನಕ್ಕರು. ಅನಂತರ ಅಮ್ಮ ಸುಸ್ಮಿತಳಿಗೆ ಅರ್ಥವಾಗುವಂತೆ ‘ಅಕ್ಕಾ, ಕೀರ್ತಿ ಮಾಡಿದ್ದು ಹಾಸ್ಯ, ಅದಕ್ಕೆಲ್ಲ ಬೇಜಾರು ಮಾಡಿಕೊಳ್ಳಬಾರದಕ್ಕ’ ಎಂದು ಅವಳನ್ನು ಸಮಾಧಾನ ಮಾಡಿದರು.

ನಮ್ಮ ಮದುವೆಯಾದ ಹೊಸದರಲ್ಲಿ ಅಣ್ಣ, ತಾರಿಣಕ್ಕ ಅವರನ್ನು ಮಾತನಾಡಿಸಿಕೊಂಡು ಬರಲು ನಾನು, ಮದನ್ ಕುವೆಂಪು ಅವರ ಮನೆಗೆ ಹೋದೆವು. ಆಗ ಅಮ್ಮ ಇರಲಿಲ್ಲ. ಗೇಟಿನ ಹೊರಗೆ ಕುವೆಂಪು ವಿಶ್ವವಿದ್ಯಾನಿಲಯದ ಕಾರು, ಮತ್ತೂ ಒಂದೆರಡು ಕಾರುಗಳಿದ್ದದನ್ನು ನೋಡಿ ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬಂದರಾಯಿತೆಂದು ಮಾತನಾಡಿಕೊಂಡೆವು. ಈ ವಿಷಯವನ್ನು ತಾರಿಣಕ್ಕನವರಿಗೆ ಹೇಳಿಬರಲು ನಾನೊಬ್ಬಳೇ ಒಳಗೆ ಹೋದೆ. ಹಾಲಿನಲ್ಲಿ ಚದುರಂಗ ಮಾಮ, ಶಾಂತಿನಾಥ ದೇಸಾಯಿಯವರು, ಶಿವಮೊಗ್ಗೆಯ ಕೃಷ್ಣಮೂರ್ತಿ ಸಿರ್ಸಿ ಮತ್ತೆ ನಮಗೆ ಪರಿಚಯದ ಒಬ್ಬಿಬ್ಬರು ಇದ್ದರು. ಆಗ ಶಾಂತಿನಾಥ ದೇಸಾಯಿಯವರು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ನಾನು ಒಳಗೆ ಹೋಗುತ್ತಿದ್ದಂತೆಯೇ ಅಣ್ಣ, ‘ಅಕ್ಕಾ, ಬಂದ್ಯಾ’ ಎಂದು ಅತಿಥಿಗಳ ಕಡೆ ತಿರುಗಿ ‘ನಾವು ಕೀರ್ತಿ, ಅವಳ ಗಂಡನನ್ನು ಮನೆಗೆ ಬರಲು ಹೇಳಿದ್ದೆವು. ಆದರೆ ಅನಿರೀಕ್ಷಿತವಾಗಿ ನೀವು ಬಂದಿದ್ದೀರಿ’ ಅಂದರು. ಎಲ್ಲ ಹಿರಿಯರ ನಡುವೆ ನನಗೆ ಬಹಳ ಮುಜುಗರವಾಗುತ್ತಿತ್ತು. ನಮ್ಮ ಮಾತುಗಳನ್ನು ಕೇಳಿದ ತಾರಿಣಕ್ಕ ಹೊರಗೆ ಬಂದರು. ಆಗ ನಾನು ಅಕ್ಕನಿಗೆ ‘ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬರುತ್ತೇವೆ’ ಎಂದೆ. ಇದನ್ನು ಕೇಳಿಸಿಕೊಂಡ ಅಣ್ಣ ‘ಇಲ್ಲ ಇಲ್ಲ, ನಾವು ಈ ಹೊತ್ತಿಗೆ ನಿಮಗೆ ಬರಕ್ಕೆ ಹೇಳಿದ್ದು, ನೀನು ಹೋಗಿ ನಿನ್ನ ಗಂಡನನ್ನ ಕರ್ಕೊಂಬಾಕ್ಕ’ ಎಂದರು. ಅಣ್ಣನವರಿಗೆ ಎದುರಾಡಲಾಗದೆ ನಾನು ಮದನ್ ಅನ್ನು ಕರೆದುಕೊಂಡು ಬಂದೆ. ಆಗ ಅಣ್ಣ ಕುಳಿತಿದ್ದವರಿಗೆ ‘ಇವನು ಕಲ್ಲು ಮಣ್ಣುಗಳ ಜೊತೆ ಮಾತನಾಡುವವನು’ ಎಂದು ಪರಿಚಯಿಸಿದರು. ಒಂದು ನಿಮಿಷ ನಮಗ್ಯಾರಿಗೂ ಇವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಅನಂತರ ಅವರೇ ಇವನು ಇಂಜಿನಿಯರ್, ಇವನ ವ್ಯವಹಾರ ಏನಿದ್ದರೂ ಕಲ್ಲು ಮಣ್ಣುಗಳ ಜೊತೆ. ಅದಕ್ಕೇ ಹಾಗೆ ಹೇಳಿದೆ ಎಂದು ನಕ್ಕರು. ನಮ್ಮ ಮದುವೆಗೆ ಯಾರನ್ನೂ ಕರೆಯದೇ ಇದ್ದುದರಿಂದ ಮದನ್ ಗೆ ಚದುರಂಗ ಮಾಮ, ಸಿರ್ಸಿ, ದೇಸಾಯಿಯವರ ಪರಿಚಯವಾಗಿದ್ದು ಆಗಲೇ.
ಶಾಂತಿನಾಥ ದೇಸಾಯಿಯವರು ಕುವೆಂಪು ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯ ತೋರಿಸುವ ವ್ಯವಸ್ಥೆ ಮಾಡುವ ಸಲುವಾಗಿ ಬಂದಿದ್ದರೆಂಬುದು ಅವರ ಮಾತಿನ ಮೂಲಕ ನಮಗೆ ಅನಂತರ ತಿಳಿಯಿತು.

ಒಮ್ಮೊಮ್ಮೆ ಸುಸ್ಮಳನ್ನು ಕರೆಯಲು ನಾನು ಭಾನುವಾರ ಸಂಜೆ ಹೋದಾಗ ಬರಲು ನಿರಾಕರಿಸುತ್ತಿದ್ದಳು. ಆಗ ಸೋಮವಾರ ಬೆಳಗ್ಗೆ ಅಣ್ಣ, ಅಮ್ಮ ಅವರ ದೊಡ್ಡ ಕಾರಿನಲ್ಲಿ ಅವಳನ್ನು ಕರೆದುಕೊಂಡು ಬರುತ್ತಿದ್ದರು. ಅಣ್ಣನವರ ಆ ಕಾರು ಯೂನಿವರ್ಸಿಟಿಯ ಕ್ಯಾಂಪಸ್ಸಿನ ಸಣ್ಣ ರಸ್ತೆಯೊಳಗೆ ನುಗ್ಗದೇ ಇದ್ದುದರಿಂದ ಅಣ್ಣ ಮೇನ್ ರೊಡಿನಲ್ಲಿ ಕಾರು ನಿಲ್ಲಿಸಿಕೊಂಡಿರುತ್ತಿದ್ದರು. ಅಮ್ಮ ಒಂದು ಕೈಯಲ್ಲಿ ಸುಸ್ಮಿತಳ ಕೈಯನ್ನೂ ಮತ್ತೊಂದು ಕೈಯಲ್ಲಿ ಅವರ ತೋಟದಲ್ಲಿ ಬೆಳೆದ ಹಣ್ಣುಗಳ ಬುಟ್ಟಿಯನ್ನೂ ಹಿಡಿದುಕೊಂಡು ಬರುವ ದೃಶ್ಯವನ್ನು ನಾನೆಂದಿಗೂ ಮರೆಯಲಾರೆ. ಅಣ್ಣ, ಅಮ್ಮರ ನೆನಪಾದಾಗಲೆಲ್ಲ ನಾರು ಮಡಿಯುಟ್ಟು ಸಾತ್ವಿಕ ಜೀವನ ನಡೆಸುವ ತಪಸ್ವಿಗಳ ಬಗ್ಗೆ ಓದಿದ್ದು ಕಣ್ಣ ಮುಂದೆ ಬಂದು ಅವರು ಅದರ ಸಾಕಾರ ಮೂರ್ತಿಗಳಂತೆ ನನಗನಿಸುತ್ತಿದ್ದರು.


ನನ್ನ ಮಗಳು ಚಕಿತ ಡಿಸೆಂಬರ್ ೨೩.೧೯೮೯ರಂದು ಹುಟ್ಟಿದಳು. ನನ್ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಪದ್ಮಾ ಆಂಟಿಗೆ(ಪದ್ಮಾ ಶ್ರೀರಾಂ), ‘ಈ ಡಾಕ್ಟರುಗಳು ಗಡಿಬಿಡಿ ಮಾಡದಿದ್ದರೆ ಇವಳು ಅಣ್ಣನವರ ಹುಟ್ಟಿದ ದಿನದಂದೇ ಹುಟ್ಟುವ ಸಾಧ್ಯತೆ ಇತ್ತು’ ಎಂದಿದ್ದೆ. ಇದನ್ನು ಆಂಟಿ ತಾರಿಣಕ್ಕನಿಗೆ ಹೇಳಿರಬೇಕು. ತಾರಿಣಕ್ಕನ ಮೂಲಕ ವಿಷಯ ತಿಳಿದ ಅಣ್ಣ, ತಾರಿಣಕ್ಕ ನನ್ನನ್ನು ನೋಡಲು ಆಸ್ಪತ್ರೆಗೆ ಬರುವಾಗ ಅವರೊಂದಿಗೆ ಕಲ್ಲುಸಕ್ಕರೆ ಕೊಟ್ಟು ಕಳುಹಿಸಿ, ‘ಚಕಿತಾ ಕುವೆಂಪು ಅವರ ಅಧ್ಯಾತ್ಮ ಗುರು ಶ್ರೀ ಶಿವಾನಂದರು ಹುಟ್ಟಿದ ದಿನ ಹುಟ್ಟಿದ್ದಾಳೆಂದೂ ಈ ಸಂಗತಿ ಅವರಿಗೆ ಬಹಳ ಸಂತಸ ತಂದಿದೆ’ಯೆಂದೂ ಹೇಳಿ ಕಳುಹಿಸಿದ್ದರು.

ಹೀಗೇ ನಮಗೆ ವಯಸ್ಸಾದಂತೆ ನಾವು ನಮ್ಮ ಹಿರಿಯ ಚೇತನಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಆದರೆ ಎಂದೋ ಒಂದು ದಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗಿನ ಬೆಚ್ಚನೆ ನೆನಪುಗಳು ಮನಸ್ಸಿಗೆ ಹಿತವೆನಿಸುತ್ತವೆ, ಮುದ ನೀಡುತ್ತವೆ.

ಸೌಜನ್ಯ ಹಾಡು ಪಾಡು ಆಂದೋಲನ ದಿನ ಪತ್ರಿಕೆ ಮೈಸೂರು ೨೫-೧೨-೨೦೧೧