“ನೀನು ನಕ್ಕರೆ ಹಾಲು ಸಕ್ಕರೆ!’

ಚಿತ್ರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕೀರ್ತಿಶ್ರೀ ನಾಯಕ

ಸುಸ್ಮಿತಾ ನಮ್ಮ ಮನೆಯಲ್ಲಿ ಇರಲು ಬಂದಾಗ ನಾನು ಆರನೆಯ ತರಗತಿಯಲ್ಲಿದ್ದೆ. ಸ್ವಲ್ಪ ಜಾಸ್ತಿಯೇ ಎನಿಸುವಂತೆ ಶಿಸ್ತಿನಲ್ಲಿ ಬೆಳೆದ ನನಗೆ ಸುಸ್ಮ ಯಾವ ಅಳುಕೂ ಇಲ್ಲದೆ ತನ್ನ ಮನೋಭಾವಗಳನ್ನು ಪ್ರಕಟಿಸುತ್ತಿದ್ದ ರೀತಿ ನೋಡಿ ನನಗೆ, ನಾನು ಕೈತೋಟದ ಗಿಡವಾದರೆ ಇವಳು ಕಾಡಿನ ಗಿಡದಂತೆ ಕಾಣುತ್ತಿದ್ದಳು.

ಸುಸ್ಮಿತಾ ನಮ್ಮ ಮನೆಗೆ ಬಂದ ಹೊಸದರಲ್ಲಿ ಯಾವುದೇ ಹಕ್ಕಿಯ ಕೂಗು ಕೇಳಿದರೂ ಸಾಕು, ‘ಏ ಕೀರ್ತಿ, ಇದು ಇಂಥಾ ಹಕ್ಕಿ’ ಎಂದು ಹಕ್ಕಿಯ ಹೆಸರು ಹೇಳುತ್ತಿದ್ದಳು. ಪಿಕರಾಳ, ಕಾಜಾಣ ಇತ್ಯಾದಿ ಹೆಸರುಗಳನ್ನು ಅವಳಿಂದಲೇ ಕೇಳಿ ಕಲಿತಿದ್ದೆ. ಅನಂತರ ತೇಜಸ್ವಿ ಮಾಮ ಮೈಸೂರಿಗೆ ಬಂದಾಗ ಇದು ಇಂಥದ್ದೇ ಹಕ್ಕಿ ಎಂದು ಹೇಗೆ ಗೊತ್ತುಮಾಡುವುದೆಂದು ಅವರಿಂದ ಕೇಳಿ ತಿಳಿಯುತ್ತಿದ್ದೆ. ಮೊದಮೊದಲು ಸುಸ್ಮಳಿಗೆ ಈ ಜ್ಞಾನ ಎಲ್ಲಿಂದ ಬಂತು ಎಂಬ ಕುತೂಹಲ ಆಗುತ್ತಿತ್ತು. ಕಾಡಿನಿಂದ ನಾಡಿಗೆ ಬಂದ ಇವಳು ಎಂತೆಂಥ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದಾಳೆಂದು ನನಗೆ ಆಗ ಅರ್ಥವಾಗಿರಲಿಲ್ಲ. ಇದೇ ರೀತಿ ೩-೪ ವರ್ಷದ ಪುಟಾಣಿಯಾಗಿದ್ದ ಈಶಾನ್ಯೆ ಕೂಡ ಗಿಡ-ಬಳ್ಳಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಳು. ಅವಳಿಗೆ ಗಿಡಗಳ ಬಗ್ಗೆ ಅಷ್ಟೇ ಅಲ್ಲದೆ, ಅವುಗಳ ಉಪಯೋಗಗಳ ಬಗ್ಗೆಯೂ ತಿಳಿದಿತ್ತು. ಈ ವಿಷಯದಲ್ಲಿ ‘ಮಾರ’ನೇ ಅವಳ ಗುರುವಿರಬೇಕು. ಸುಸ್ಮಿತಾ ಮೈಸೂರಿಗೆ ಓದಲು ಬಂದ ಮೇಲೆ ಸುಮಾರು ೮೫-೯೦ ವರ್ಷದ ಮಾರನೇ ಅವಳ ಸಹಪಾಠಿಯಾಗಿದ್ದ. ಅವನೊಂದಿಗೆ ಕಾಡು ಅಲೆಯುವಾಗ ಸಂಗ್ರಹಿಸಿದ ಮಾಹಿತಿ ಇದಾಗಿರಬಹುದು.

ತೇಜಸ್ವಿ ಮಾಮ, ರಾಜೇಶ್ವರಿ ಆಂಟಿ ತಿಂಗಳಿಗೊಮ್ಮೆಯಾದರೂ ಮೈಸೂರಿಗೆ ಬಂದು ಸುಸ್ಮಳನ್ನು ನೋಡಿಕೊಂಡು ಹೋಗುತ್ತಿದ್ದರು. ಆಗ ಅವರಿದ್ದಷ್ಟು ದಿನ ಇವಳು ಅವರಜ್ಜಿಯ ಮನೆಯಲ್ಲಿರುತ್ತಿದ್ದಳು. ಹೀಗಿದ್ದಾಗ ಒಂದು ಭಾನುವಾರ ಮಾಮ ಮನೆಗೆ ಬಂದವರು ಅವರ ಮಾತುಕತೆಯೆಲ್ಲ ಮುಗಿಸಿ ಹೊರಡುವಾಗ, ‘ಕೀರ್ತಿ ನಡಿಯೆ, ನಮ್ಮನೇಲಿ ಮೀನಿದೆ. ಅಲ್ಲೇ ಊಟಮಾಡೋಣ’ ಎಂದರು. ತೇಜಸ್ವಿ ಮಾಮ ಹೇಳಿದ ಅನಂತರ ಮತ್ತೊಮ್ಮೆ ಯೋಚಿಸುವ ರೂಢಿಯೇ ಇಲ್ಲದ ನಾನು ಅವರ ಹಿಂದೆ ಹೋದೆ.
ಬಾಗಿಲನ್ನು ತೆರೆದ ರಾಜೇಶ್ವರಿ ಆಂಟಿ ನಮ್ಮನ್ನು ನೇರವಾಗಿ ಊಟದ ಮನೆಗೆ ಕರೆದುಕೊಂಡುಹೋದರು. ಅಣ್ಣ(ಕುವೆಂಪು), ಸುಸ್ಮ, ಈಶ, ಪ್ರಾರ್ಥನೆ ಊಟಕ್ಕೆ ಕುಳಿತಿದ್ದರು. ಅಮ್ಮ(ಹೇಮಾವತಿ) ಬಿಸಿ ಬಿಸಿಯಾಗಿ ಮೀನು ಇತ್ಯಾದಿಗಳನ್ನು ಹುರಿದುಕೊಡುತ್ತಿದ್ದರು. ತಾರಿಣಕ್ಕ, ರಾಜೇಶ್ವರಿ ಆಂಟಿ ಬಡಿಸುತ್ತಿದ್ದರು. ಎಲ್ಲರೂ ಏನೊ ಮಾತಾಡಿಕೊಂಡು ಊಟಮಾಡುತ್ತಿದ್ದರು. ಅಣ್ಣ ಮುಂದೆ ಕೂತದ್ದರಿಂದ ನಾನು ಹೆಚ್ಚು ಮಾತಾಡದೆ ಮೀನು, ಕೋಳಿ ಇತ್ಯಾದಿಗಳಿದ್ದ ನನ್ನ ತಟ್ಟೆ ನೋಡಿಕೊಂಡು ಸುಮ್ಮನೆ ಊಟ ಮಾಡುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಅಣ್ಣ ಏನು ಊಟ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ತಲೆಗೆ ಬಂತು. ಅವರ ತಟ್ಟೆ ನೋಡಿ ನಾನು ಅವಾಕ್ಕಾದೆ. ಅವರೂ ನಮ್ಮಂತೆ ಮೀನು ಕೋಳಿಗಳನ್ನೇ ತಿನ್ನುತ್ತಿದ್ದರು. ಆ ವಯಸ್ಸಿನಲ್ಲಿ ನನಗೆ ಜಾತಿ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಆಗ ನನ್ನ ಪ್ರಕಾರ ಸಸ್ಯಾಹಾರಿಗಳೆಲ್ಲ ಬ್ರಾಹ್ಮಣರು, ಅಸಸ್ಯಾಹಾರಿಗಳೆಲ್ಲ ಗೌಡರು ಎಂಬ ಭಾವನೆ. ಆ ಪ್ರಕಾರ ನನ್ನ ಅಭಿಪ್ರಾಯದಲ್ಲಿ ಅಣ್ಣ ಬ್ರಾಹ್ಮಣರು, ತೇಜಸ್ವಿ ಮಾಮ, ನಾವು ಎಲ್ಲ ಗೌಡರು!
ಕುವೆಂಪು ಅವರು ಸಸ್ಯಾಹಾರಿಗಳು ಎಂದು ನಾನು ತಿಳಿದುಕೊಳ್ಳಲು ಹಲವು ಕಾರಣಗಳಿದ್ದವು. ಶಾಲೆಯಲ್ಲಿ ನಾವು ಕೇಳುತ್ತಿದ್ದ ಅಂಶಗಳು, ಅಣ್ಣ ಯಾವಾಗಲೂ ಧ್ಯಾನಾಸಕ್ತರಾಗಿರುತ್ತಾರೆಂಬ ವಿಷಯ ಮತ್ತು ಅವರಿಗೆ ಇಹದ ಅರಿವಿಲ್ಲವೆಂಬ ವಿಚಾರ ಕೇಳುತ್ತಲೇ ಬಂದಿದ್ದೆ. ಆದ್ದರಿಂದ ಕುವೆಂಪು=ತಪಸ್ವಿ=ಬಾಹ್ಮಣ ಎಂದಷ್ಟೇ ನನ್ನ ಪುಟ್ಟ ಮೆದುಳಿಗೆ ತಿಳಿದದ್ದು. ದೊಡ್ಡವಳಾಗುತ್ತಾ ಹೋದಂತೆ ತಪೋನಿರತ ಋಷಿಗಳಿಗಿಂತ ಅಣ್ಣನವರ ಜೀವನ ಹೊರತಾಗಿಲ್ಲ ಎಂಬುದು ತಿಳಿಯುತ್ತಾ ಹೋಯಿತು.

ತಾಳ್ಮೆ, ಸೌಜನ್ಯಗಳ ಮೂರ್ತಿಗಳಾಗಿದ್ದ ಅಣ್ಣ, ಅಮ್ಮ(ಕುವೆಂಪು. ಹೇಮಾವತಿ)ಯವರ ಆತ್ಮೀಯತೆಯನ್ನು, ಸುಸ್ಮಳನ್ನು ಶನಿವಾರ ಬಿಡಲು ಮತ್ತು ಭಾನುವಾರ ಕರೆತರಲು ಅವರ ಮನೆಗೆ ಹೋಗುತ್ತಿದ್ದಾಗ ಅನುಭವಿಸಿದ್ದೇನೆ. ಹಲವು ಬಾರಿ ಅಮ್ಮ, ತಾರಿಣಕ್ಕ, ನಾನು ವೆರಾಂಡದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಣ್ಣ ಬಿಡುವಾಗಿದ್ದರೆ ತಾವೂ ಬಂದು ನಮ್ಮೊಂದಿಗೆ ಕುಳಿತು ತೇಜಸ್ವಿ ಮಾಮನ ಲೀಲೆಗಳನ್ನು ಹೇಳಿ ತಾವೂ ನಕ್ಕು ನಮ್ಮನ್ನೂ ನಗಿಸುತ್ತಿದ್ದರು. ಹಾಗಾಗಿ ತಾರಿಣಕ್ಕನ ‘ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿನ ಹಲವು ವಿಷಯಗಳನ್ನು ಅಣ್ಣ, ಅಮ್ಮರ ಬಾಯಿಂದ ಕೇಳಿ ಬಲ್ಲೆ.

ಈ ಮೃದುಭಾಷಿಗಳ ನಡುವೆ ತೇಜಸ್ವಿ ಮಾಮ ಹೇಗೆ ಅವತರಿಸಿದರು ಎಂಬ ಬಗ್ಗೆ ಬಹಳ ಸೋಜಿಗವಾಗುತ್ತಿತ್ತು. ಅಣ್ಣ, ಅಮ್ಮ, ತಾರಿಣಕ್ಕ, ಕಲಕ್ಕ ಯಾವತ್ತೂ ಜೋರಾಗಿ ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ; ಮಾಮ ಸಣ್ಣಗೆ ಮಾತಾಡಿದ್ದನ್ನೂ ಕೇಳಿ ಇಲ್ಲ. ಇದರ ಜೊತೆಗೆ ಸಮಾಜದಲ್ಲಿ ಒಬ್ಬ ಮೇರು ವ್ಯಕ್ತಿ ಎನಿಸಿಕೊಂಡವರು ತಮ್ಮ ಮಗನ ಹುಡುಗಾಟ, ಹುಡುಕಾಟಕ್ಕೆ ಯಾವುದೇ ರೀತಿಯ ಬ್ರೇಕ್ ಹಾಕದೆ ಅವರ ದಾರಿಯನ್ನು ಅವರೇ ಅವರಿಗೆ ಬೇಕಾದಂತೆ ಹುಡುಕಿಕೊಳ್ಳಲು ಬಿಟ್ಟ ಬಗ್ಗೆ ಪರಮಾಶ್ಚರ್ಯವಾಗುತ್ತದೆ. ಇದರ ಜೊತೆ ಅಣ್ಣನವರಿಗೆ ತಮ್ಮ ಬಗ್ಗೆ ಮತ್ತು ತಮ್ಮ ಮಗನ ಬಗ್ಗೆ ಎಂಥ ವಿಶ್ವಾಸ ಇತ್ತೆಂದೂ ತಿಳಿಯುತ್ತದೆ. ಅಣ್ಣ ಯಾವ ನಿಮಿಷದಲ್ಲಿಯೂ ತಮ್ಮ ವ್ಯಕ್ತಿತ್ವಕ್ಕೆ ತೇಜಸ್ವಿ ಮಾಮನಿಂದ ತೊಂದರೆಯಾಗಬಹದೆಂದು ಯೋಚಿಸದೆ ತೇಜಸ್ವಿ ಮಾಮ ಸ್ವತಂತ್ರ ವ್ಯಕ್ತಿತ್ವವಾಗಿ ಬೆಳೆಯಲು ಸಹಾಯಮಾಡಿದ್ದು ವಿಶೇಷವಾಗಿ ಕಾಣುತ್ತದೆ. ಇದು ವಿಶಾಲವಾದ ಮರದ ನೆರಳಿನಲ್ಲಿ ಮತ್ತೊಂದು ಮರ ಬೆಳೆಯುವುದಿಲ್ಲ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿದಂತೆನಿಸುತ್ತದೆ. ಇಂತಹ ಅಮ್ಮ, ಅಪ್ಪರನ್ನು ಪಡೆದ ತೇಜಸ್ವಿ ಮಾಮ ಧನ್ಯರು. ಇಂತಹ ದೊಡ್ಡವರ ಒಡನಾಟದಲ್ಲಿ ನಾನೂ ಕೆಲಕಾಲ ಕಳೆದದ್ದಕ್ಕೆ ನನಗೂ ಬಹಳ ಸಂತೋಷವಿದೆ.

ಒಮ್ಮೆ ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಕುವೆಂಪು ಅವರ ಪ್ರತಿಮೆ ಮಾಡುವ ಸಲುವಾಗಿ ಶ್ರೀ ಪಿ.ಆರ್. ತಿಪ್ಪೇಸ್ವಾಮಿಯವರು ಕುವೆಂಪು ಅವರ ಮನೆಗೆ ಬಂದು ಅವರ ಚಿತ್ರಗಳನ್ನು ತೆಗೆಯುತ್ತಾ ಪ್ರತಿಮೆಯನ್ನು ಮಾಡಿಸುವುದರಲ್ಲಿ ನಿರತರಾಗಿದ್ದರು. ಅದು ರಜೆಯ ದಿನವಾಗಿದ್ದರಿಂದ ನಾನು ಸುಸ್ಮಳನ್ನು ಕರೆದುಕೊಳ್ಳಲೋ ಬಿಡಲೋ ಹೋಗಿದ್ದವಳು ಅವರು ಮಾಡುತ್ತಿದ್ದ ಪ್ರತಿಮೆಯನ್ನು ಕುತೂಹಲದಿಂದ ನೋಡುತ್ತಾ ಕುಳಿತಿದ್ದೆ. ತಿಪ್ಪೇಸ್ವಾಮಿಯವರು ಅಣ್ಣನವರಿಗೆ, ನಿಮ್ಮ ಮೊಮ್ಮಕ್ಕಳ ಜೊತೆ ಫೋಟೊ ತೊಗೋತೀನಿ ಅಂದರು. ಅಣ್ಣ ಸುಸ್ಮ ಪ್ರಾರ್ಥನೆಯರನ್ನು ಕರೆದರು.ಅನಂತರ ಅಲ್ಲೇ ಕುಳಿತಿದ್ದ ನನ್ನನ್ನೂ ‘ಬಾ ಅಕ್ಕ’ ಎಂದು ಕರೆದರು. ಆ ಕಾಲದ ಕನ್ನಡ ಅಧ್ಯಯನ ಸಂಸ್ಥೆಯ ರಾಜಕೀಯದ ಬಗ್ಗೆ ಅಲ್ಪ ಸ್ವಲ್ಪ ಅರಗಿಸಿಕೊಂಡಿದ್ದ ನನಗೆ ಏನು ಮಾಡಬೇಕೆಂದು ತಿಳಿಯದೆ ಬಹಳ ಮುಜುಗರವಾಯಿತು. ಆದರೆ ಅಣ್ಣನವರ ಮಾತನ್ನು ಮೀರುವಂತಿರಲಿಲ್ಲ. ಏನು ಮಾಡಬೇಕೆಂದೇ ತಿಳಿಯದೆ ತಿಪ್ಪೇಸ್ವಾಮಿಯವರ ಮುಖ ನೋಡಿದೆ. ಕುವೆಂಪು ಅವರು ಜಿ.ಎಚ್. ನಾಯಕರ ಮಗಳನ್ನು ತಮ್ಮೊಂದಿಗೆ ಫೋಟೋಗೆ ನಿಲ್ಲಲು ಕರೆಯುತ್ತಿರುವುದನ್ನು ನೋಡಿ ಅವರು ನನಗಿಂತ ಹೆಚ್ಚಿನ ಗೊಂದಲದಲ್ಲಿದ್ದಂತೆ ಕಂಡಿತು. ಅಣ್ಣನವರ ಮಾತನ್ನು ಮೀರಲಾರದೆ ನಾನೂ ಅವರೊಂದಿಗೆ ಫೋಟೋವನ್ನೇನೊ ತೆಗೆಸಿಕೊಂಡೆ. ಆದರೆ ಅದರ ಪ್ರತಿಯನ್ನು ತಿಪ್ಪೇಸ್ವಾಮಿಯವರೂ ಕೊಡಲಿಲ್ಲ, ನಾನೂ ಕೇಳಲಿಲ್ಲ. ಅಪ್ಪ, ಮೀರಕ್ಕರಿಗೆ ಈ ವಿಷಯವನ್ನು ನಾನು ಹೇಳಲೂ ಇಲ್ಲ.

ಶಿವಮೊಗ್ಗ ಸುಬ್ಬಣ್ಣನವರು ಕುವೆಂಪು ಭಾವಗೀತೆಗಳನ್ನು ಆಡಿಯೋ ಕ್ಯಾಸೆಟ್ ಮಾಡಿದ ಕಾಲವದು. ನಾನು, ಸುಸ್ಮ ಆ ಕ್ಯಾಸೆಟ್ಟನ್ನು ಪದೇಪದೇ ಕೇಳುತ್ತಿದ್ದೆವು. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ನಮ್ಮ ಮನೆಗೆ ಬಂದಿದ್ದರು. ಅವರು ಮೈಸೂರಿಗೆ ಬಂದಾಗಲೆಲ್ಲ ನಮ್ಮಲ್ಲಿ ಉಳಿದುಕೊಳ್ಳುತ್ತಿದ್ದರು. ಅಡಿಗರಿಗೆ ಕಾಫಿ, ಸಿಗರೇಟು ಎರಡು ಇದ್ದರೆ ಮತ್ತೇನೂ ಬೇಡವಾಗಿತ್ತು. ಆ ದಿನ ಕೂಡ ಮೀರಕ್ಕ ಶಾಲೆಯಿಂದ ಬರುತ್ತಿದ್ದಂತೆಯೇ ನೇರವಾಗಿ ಅಡಿಗೆ ಮನೆಗೆ ಅಡಿಗರಿಗೆ ಕಾಫಿ ಮಾಡಲು ಹೊರಟಿದ್ದನ್ನು ನೋಡಿದ ಅಡಿಗರು ಮೀರಕ್ಕನಿಗೆ ಹೇಳುತ್ತಿದ್ದ ಮಾತು ಆಗ ತಾನೇ ಶಾಲೆಯಿಂದ ಮರಳಿದ ನನ್ನ ಕಿವಿಗೂ ಬಿತ್ತು. ಅವರು ‘ಮೀರಾ, ಕಾಫಿ ಮಾಡಬೇಡಮ್ಮ. ನಾನು ಕುಡಿದಾಯಿತು’ ಎಂದರು. ನಾನೂ ಮನೆಯಲ್ಲಿಲ್ಲದ್ದರಿಂದ ಮೀರಕ್ಕ ಅವಾಕ್ಕಾಗಿ, ‘ಎಲ್ಲಿ ಸಾರ್’ ಎಂದರು. ಅದಕ್ಕೆ ಅಡಿಗರು ‘ಸುಸ್ಮಿತ ಮಾಡಿಕೊಟ್ಟಳು’ ಎಂದರು. ಸುಸ್ಮಿತಾ ಆಗ ೨-೩ ನೇ ತರಗತಿಯಲ್ಲಿ ಓದುತ್ತಿದ್ದ ಪುಟಾಣಿ. ಮೀರಕ್ಕ ಈ ಮಾತನ್ನು ನಂಬಲಾರದೆ ಅಲ್ಲೇ ಇದ್ದ ಸುಸ್ಮಳನ್ನು ಕಾಫಿ ಹೇಗೆ ಮಾಡಿದೆ? ಎಂದು ಕೇಳಿದರು. ಅವಳು ತಾನು ಮಾಡಿದ ರೀತಿಯನ್ನು ಮೀರಕ್ಕನಿಗೆ ವಿವರಿಸುತ್ತಿದ್ದಳು. ಅಲ್ಲೇ ನಿಂತು ಇವೆಲ್ಲವನ್ನೂ ಕೇಳುತ್ತಿದ್ದ ನಾನು ‘ಸುಸ್ಮ, ಕಾಫಿ ಮಾಡಕ್ಕೆ ನೀನು ಎಷ್ಟೆಲ್ಲಾ ಕಷ್ಟಪಟ್ಟೆ.. ಆದರೆ ನಿಮ್ಮ ಅಜ್ಜಯ್ಯನ ಮನೇಲಿ ಬಹಳ ಸುಲಭ ಕಣೆ’ ಎಂದೆ. ಚಿಕ್ಕವಳಾದ ಅವಳಿಗೆ ಅದೇನೂ ಅರ್ಥವಾಗಲಿಲ್ಲ. ‘ಅದ್ಹೇಗೇ?’ ಎಂದಳು. ನಾನು, ‘ನಿಮ್ಮ ಅಜ್ಜಿ ಕಾಫಿ ಡಿಕಾಕ್ಷನ್ ಲೋಟದಲ್ಲಿ ಹಾಕಿಕೊಂಡು ನಿಮ್ಮ ಅಜ್ಜನ ಮುಂದೆ ಬಂದು ನಿಂತು ನಕ್ಕರೆ ಹಾಲು ಸಕ್ಕರೆ ಮಿಕ್ಸ್ ಆಗುತ್ತೆ’ ಎಂದು ‘ನೀನು ನಕ್ಕರೆ ಹಾಲು ಸಕ್ಕರೆ’ ಎಂಬ ಕುವೆಂಪು ಅವರ ಭಾವಗೀತೆಯ ಸಾಲುಗಳನ್ನು ನೆನಪು ಮಾಡಿಕೊಂಡು ಹೇಳಿದೆ. ನಮ್ಮ ಈ ಸಂಭಾಷಣೆಗೆ ಮೀರಕ್ಕ, ಅಡಿಗರು ಜೋರಾಗಿ ನಕ್ಕರು. ಆದರೆ ಪಾಪ ಆ ಪುಟ್ಟ ಮನಸ್ಸಿಗೆ ಏನನಿಸಿತೋ ಏನೋ! ಮುಂದಿನ ಸಲ ನಾವು ಅವರ ಅಜ್ಜಯ್ಯನ ಮನೆಗೆ ಹೋದಾಗ ಅಜ್ಜಯ್ಯ, ಅಜ್ಜಿಯರಿಗೆ ಬಹಳ ಬೇಸರದಿಂದ ನನ್ನ ಮುಂದೇ ಈ ಸಂಗತಿಯನ್ನು ಹೇಳಿದಳು. ನಾನು ಇದನ್ನು ನಿರಿಕ್ಷಿಸಿಯೇ ಇರಲಿಲ್ಲ. ವಿಷಯವನ್ನು ಕೇಳಿ ಅಣ್ಣ, ಅಮ್ಮ ಮುಕ್ತವಾಗಿ ನಕ್ಕರು. ಅನಂತರ ಅಮ್ಮ ಸುಸ್ಮಿತಳಿಗೆ ಅರ್ಥವಾಗುವಂತೆ ‘ಅಕ್ಕಾ, ಕೀರ್ತಿ ಮಾಡಿದ್ದು ಹಾಸ್ಯ, ಅದಕ್ಕೆಲ್ಲ ಬೇಜಾರು ಮಾಡಿಕೊಳ್ಳಬಾರದಕ್ಕ’ ಎಂದು ಅವಳನ್ನು ಸಮಾಧಾನ ಮಾಡಿದರು.

ನಮ್ಮ ಮದುವೆಯಾದ ಹೊಸದರಲ್ಲಿ ಅಣ್ಣ, ತಾರಿಣಕ್ಕ ಅವರನ್ನು ಮಾತನಾಡಿಸಿಕೊಂಡು ಬರಲು ನಾನು, ಮದನ್ ಕುವೆಂಪು ಅವರ ಮನೆಗೆ ಹೋದೆವು. ಆಗ ಅಮ್ಮ ಇರಲಿಲ್ಲ. ಗೇಟಿನ ಹೊರಗೆ ಕುವೆಂಪು ವಿಶ್ವವಿದ್ಯಾನಿಲಯದ ಕಾರು, ಮತ್ತೂ ಒಂದೆರಡು ಕಾರುಗಳಿದ್ದದನ್ನು ನೋಡಿ ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬಂದರಾಯಿತೆಂದು ಮಾತನಾಡಿಕೊಂಡೆವು. ಈ ವಿಷಯವನ್ನು ತಾರಿಣಕ್ಕನವರಿಗೆ ಹೇಳಿಬರಲು ನಾನೊಬ್ಬಳೇ ಒಳಗೆ ಹೋದೆ. ಹಾಲಿನಲ್ಲಿ ಚದುರಂಗ ಮಾಮ, ಶಾಂತಿನಾಥ ದೇಸಾಯಿಯವರು, ಶಿವಮೊಗ್ಗೆಯ ಕೃಷ್ಣಮೂರ್ತಿ ಸಿರ್ಸಿ ಮತ್ತೆ ನಮಗೆ ಪರಿಚಯದ ಒಬ್ಬಿಬ್ಬರು ಇದ್ದರು. ಆಗ ಶಾಂತಿನಾಥ ದೇಸಾಯಿಯವರು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ನಾನು ಒಳಗೆ ಹೋಗುತ್ತಿದ್ದಂತೆಯೇ ಅಣ್ಣ, ‘ಅಕ್ಕಾ, ಬಂದ್ಯಾ’ ಎಂದು ಅತಿಥಿಗಳ ಕಡೆ ತಿರುಗಿ ‘ನಾವು ಕೀರ್ತಿ, ಅವಳ ಗಂಡನನ್ನು ಮನೆಗೆ ಬರಲು ಹೇಳಿದ್ದೆವು. ಆದರೆ ಅನಿರೀಕ್ಷಿತವಾಗಿ ನೀವು ಬಂದಿದ್ದೀರಿ’ ಅಂದರು. ಎಲ್ಲ ಹಿರಿಯರ ನಡುವೆ ನನಗೆ ಬಹಳ ಮುಜುಗರವಾಗುತ್ತಿತ್ತು. ನಮ್ಮ ಮಾತುಗಳನ್ನು ಕೇಳಿದ ತಾರಿಣಕ್ಕ ಹೊರಗೆ ಬಂದರು. ಆಗ ನಾನು ಅಕ್ಕನಿಗೆ ‘ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬರುತ್ತೇವೆ’ ಎಂದೆ. ಇದನ್ನು ಕೇಳಿಸಿಕೊಂಡ ಅಣ್ಣ ‘ಇಲ್ಲ ಇಲ್ಲ, ನಾವು ಈ ಹೊತ್ತಿಗೆ ನಿಮಗೆ ಬರಕ್ಕೆ ಹೇಳಿದ್ದು, ನೀನು ಹೋಗಿ ನಿನ್ನ ಗಂಡನನ್ನ ಕರ್ಕೊಂಬಾಕ್ಕ’ ಎಂದರು. ಅಣ್ಣನವರಿಗೆ ಎದುರಾಡಲಾಗದೆ ನಾನು ಮದನ್ ಅನ್ನು ಕರೆದುಕೊಂಡು ಬಂದೆ. ಆಗ ಅಣ್ಣ ಕುಳಿತಿದ್ದವರಿಗೆ ‘ಇವನು ಕಲ್ಲು ಮಣ್ಣುಗಳ ಜೊತೆ ಮಾತನಾಡುವವನು’ ಎಂದು ಪರಿಚಯಿಸಿದರು. ಒಂದು ನಿಮಿಷ ನಮಗ್ಯಾರಿಗೂ ಇವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಅನಂತರ ಅವರೇ ಇವನು ಇಂಜಿನಿಯರ್, ಇವನ ವ್ಯವಹಾರ ಏನಿದ್ದರೂ ಕಲ್ಲು ಮಣ್ಣುಗಳ ಜೊತೆ. ಅದಕ್ಕೇ ಹಾಗೆ ಹೇಳಿದೆ ಎಂದು ನಕ್ಕರು. ನಮ್ಮ ಮದುವೆಗೆ ಯಾರನ್ನೂ ಕರೆಯದೇ ಇದ್ದುದರಿಂದ ಮದನ್ ಗೆ ಚದುರಂಗ ಮಾಮ, ಸಿರ್ಸಿ, ದೇಸಾಯಿಯವರ ಪರಿಚಯವಾಗಿದ್ದು ಆಗಲೇ.
ಶಾಂತಿನಾಥ ದೇಸಾಯಿಯವರು ಕುವೆಂಪು ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯ ತೋರಿಸುವ ವ್ಯವಸ್ಥೆ ಮಾಡುವ ಸಲುವಾಗಿ ಬಂದಿದ್ದರೆಂಬುದು ಅವರ ಮಾತಿನ ಮೂಲಕ ನಮಗೆ ಅನಂತರ ತಿಳಿಯಿತು.

ಒಮ್ಮೊಮ್ಮೆ ಸುಸ್ಮಳನ್ನು ಕರೆಯಲು ನಾನು ಭಾನುವಾರ ಸಂಜೆ ಹೋದಾಗ ಬರಲು ನಿರಾಕರಿಸುತ್ತಿದ್ದಳು. ಆಗ ಸೋಮವಾರ ಬೆಳಗ್ಗೆ ಅಣ್ಣ, ಅಮ್ಮ ಅವರ ದೊಡ್ಡ ಕಾರಿನಲ್ಲಿ ಅವಳನ್ನು ಕರೆದುಕೊಂಡು ಬರುತ್ತಿದ್ದರು. ಅಣ್ಣನವರ ಆ ಕಾರು ಯೂನಿವರ್ಸಿಟಿಯ ಕ್ಯಾಂಪಸ್ಸಿನ ಸಣ್ಣ ರಸ್ತೆಯೊಳಗೆ ನುಗ್ಗದೇ ಇದ್ದುದರಿಂದ ಅಣ್ಣ ಮೇನ್ ರೊಡಿನಲ್ಲಿ ಕಾರು ನಿಲ್ಲಿಸಿಕೊಂಡಿರುತ್ತಿದ್ದರು. ಅಮ್ಮ ಒಂದು ಕೈಯಲ್ಲಿ ಸುಸ್ಮಿತಳ ಕೈಯನ್ನೂ ಮತ್ತೊಂದು ಕೈಯಲ್ಲಿ ಅವರ ತೋಟದಲ್ಲಿ ಬೆಳೆದ ಹಣ್ಣುಗಳ ಬುಟ್ಟಿಯನ್ನೂ ಹಿಡಿದುಕೊಂಡು ಬರುವ ದೃಶ್ಯವನ್ನು ನಾನೆಂದಿಗೂ ಮರೆಯಲಾರೆ. ಅಣ್ಣ, ಅಮ್ಮರ ನೆನಪಾದಾಗಲೆಲ್ಲ ನಾರು ಮಡಿಯುಟ್ಟು ಸಾತ್ವಿಕ ಜೀವನ ನಡೆಸುವ ತಪಸ್ವಿಗಳ ಬಗ್ಗೆ ಓದಿದ್ದು ಕಣ್ಣ ಮುಂದೆ ಬಂದು ಅವರು ಅದರ ಸಾಕಾರ ಮೂರ್ತಿಗಳಂತೆ ನನಗನಿಸುತ್ತಿದ್ದರು.


ನನ್ನ ಮಗಳು ಚಕಿತ ಡಿಸೆಂಬರ್ ೨೩.೧೯೮೯ರಂದು ಹುಟ್ಟಿದಳು. ನನ್ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಪದ್ಮಾ ಆಂಟಿಗೆ(ಪದ್ಮಾ ಶ್ರೀರಾಂ), ‘ಈ ಡಾಕ್ಟರುಗಳು ಗಡಿಬಿಡಿ ಮಾಡದಿದ್ದರೆ ಇವಳು ಅಣ್ಣನವರ ಹುಟ್ಟಿದ ದಿನದಂದೇ ಹುಟ್ಟುವ ಸಾಧ್ಯತೆ ಇತ್ತು’ ಎಂದಿದ್ದೆ. ಇದನ್ನು ಆಂಟಿ ತಾರಿಣಕ್ಕನಿಗೆ ಹೇಳಿರಬೇಕು. ತಾರಿಣಕ್ಕನ ಮೂಲಕ ವಿಷಯ ತಿಳಿದ ಅಣ್ಣ, ತಾರಿಣಕ್ಕ ನನ್ನನ್ನು ನೋಡಲು ಆಸ್ಪತ್ರೆಗೆ ಬರುವಾಗ ಅವರೊಂದಿಗೆ ಕಲ್ಲುಸಕ್ಕರೆ ಕೊಟ್ಟು ಕಳುಹಿಸಿ, ‘ಚಕಿತಾ ಕುವೆಂಪು ಅವರ ಅಧ್ಯಾತ್ಮ ಗುರು ಶ್ರೀ ಶಿವಾನಂದರು ಹುಟ್ಟಿದ ದಿನ ಹುಟ್ಟಿದ್ದಾಳೆಂದೂ ಈ ಸಂಗತಿ ಅವರಿಗೆ ಬಹಳ ಸಂತಸ ತಂದಿದೆ’ಯೆಂದೂ ಹೇಳಿ ಕಳುಹಿಸಿದ್ದರು.

ಹೀಗೇ ನಮಗೆ ವಯಸ್ಸಾದಂತೆ ನಾವು ನಮ್ಮ ಹಿರಿಯ ಚೇತನಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಆದರೆ ಎಂದೋ ಒಂದು ದಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗಿನ ಬೆಚ್ಚನೆ ನೆನಪುಗಳು ಮನಸ್ಸಿಗೆ ಹಿತವೆನಿಸುತ್ತವೆ, ಮುದ ನೀಡುತ್ತವೆ.

ಸೌಜನ್ಯ ಹಾಡು ಪಾಡು ಆಂದೋಲನ ದಿನ ಪತ್ರಿಕೆ ಮೈಸೂರು ೨೫-೧೨-೨೦೧೧

ಗಂಗಾವತಿ ಸಮ್ಮೇಳನದ ಕರಪತ್ರ

ಮಾನ್ಯರೆ,
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮುಗಿದಿದೆ. ಸಮ್ಮೇಳನಕ್ಕಾಗಿ ಸಿದ್ಧಪಡಿಸಿ ಅಲ್ಲಿ ವಿತರಿಸಿದ ಕರಪತ್ರವನ್ನು ಇಲ್ಲಿ ಕೊಟ್ಟಿದೆ. ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ, ಕನ್ನಡ ಅಂಕಿಗಳನ್ನು ಬಳಸಿ ಎನ್ನುವ ಕರಪತ್ರವನ್ನು ಇಂದಿನವರೆಗೆ ನವೀಕರಿಸಲಾಗಿದೆ. ಮಕ್ಕಳ ಶಿಕ್ಷಣ ಹಕ್ಕಿನ ಹಕ್ಕೊತ್ತಾಯವಿರುವಂತೆ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ದುಡುಕಿನ ಬಗ್ಗೆ, ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ವಿರೋಧ ಇಲ್ಲಿವೆ. ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳಿಗೆ ಮುಕ್ತ ಸ್ವಾಗತವಿದೆ.

ಕರ್ನಾಟಕದ ಹಲವೆಡೆ ದೊರೆತಿರುವ ಕ್ರಿಪೂ ೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಕ್ರಿಶ.೬ನೇ ಶತಮಾದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.

ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಕ್ರಿ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ.

ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದ ರಾಜ್ಯದ ದೊಡ್ಡ ಪತ್ರಿಕೆಗಳು ಈಗ ಕನ್ನಡ ಅಂಕಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿಲ್ಲ. ಕರ್ಮವೀರ, ಕಸ್ತೂರಿ, ಹೊಸತು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳುತ್ತಿರುವುದು ಮೆಚ್ಚುವಂಥದು. ಸಂಜೆವಾಣಿ ಸುದ್ದಿಯ ದಿನಾಂಕವನ್ನು ಮಾತ್ರ ಕನ್ನಡ ಅಂಕಿಗಳಲ್ಲಿ ನಮೂದಿಸುತ್ತಿದೆ! ಕನ್ನಡ ಪ್ರಭದ ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಮಾತ್ರ ಕನ್ನಡ ಅಂಕಿಗಳಿವೆ! ಪ್ರಜಾವಾಣಿಯ ಮಾಸಿಕ ಪುರವಣಿ ಸಾಹಿತ್ಯ ಸಂಚಿಕೆಯ ಸಂಖ್ಯೆ ಮಾತ್ರ ಕನ್ನಡ ಅಂಕಿಯಲ್ಲಿದೆ! ಸಂಯುಕ್ತ ಕರ್ನಾಟಕ, ಹೊಸ ದಿಗಂತ ಮೊದಲಾದವುಗಳಲ್ಲಿ ಭಾನುವಾರದ ಪುರವಣಿಗಳ ಪುಟಸಂಖ್ಯೆಗಳು ಮಾತ್ರ ಕನ್ನಡ ಅಂಕಿಗಳಲ್ಲಿವೆ! ರಾಜ್ಯ ಸರಕಾರದ ಮಾಸಪತ್ರ್ರಿಕೆ ಜನಪದ ಮುಖಪುಟದಲ್ಲಿ ವರ್ಷವನ್ನು ಮಾತ್ರ ಕನ್ನಡ ಅಂಕಿಗಳಲ್ಲಿ ಪ್ರಕಟಿಸುತ್ತಿದೆ! ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರಗಳಂತೆ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ.

ರಾಜಧಾನಿಯ ಮಾಧ್ಯಮಗಳು ಬಳಸುತ್ತಿರುವ ಕನ್ನಡವು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿದೆ. ಅದಕ್ಕೆ ತುರ್ತಾಗಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನವಾಗಬೇಕಿದೆ. ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾದ ಮಾಧ್ಯಮಗಳು ಒಂದೇ ಉಸಿರಿನಲ್ಲಿ ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ.

ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನವನ್ನು ಪ್ರಕಟಿಸುವ ಕನ್ನಡದ ಮಾಧ್ಯಮಗಳು ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸುವ ಗೋಜಿಗೆ ಹೋಗದೆ ಅನಗತ್ಯವಾಗಿ ಇಂಗ್ಲಿಷ್ ಅಕ್ಷರ, ಪದ, ಪದಪುಂಜಗಳನ್ನು ಬಳಸುತ್ತಿವೆ. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ ‘ತಾEA ದೇವರು!’ ಎಂದು ಬರೆಯುವಂತೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷಿನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ ‘ಲವಲವಿಕೆ’ಯಲ್ಲಿರುವ ‘ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು ‘ಲವಲ’ ಎಂದು ಅರ್ಥಹೀನವಾಗಿಸಿ, ವಿಕಲಾಂಗ(‘ವಿಕಲಚೇತನ’!)ಗೊಳಿಸಿದೆ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ವಿಜಯ Next(ನೆಕ್ಸ್ಟ್) ಎಂಬ ಕಲಬೆರಕೆ ಹೆಸರಿನ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳ ಬಳಕೆ ಹೆಚ್ಚಿದೆ. ಕೆಲವು ಕನ್ನಡ ಸಂಪಾದಕರು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರಸುವ ಗೀಳಿನಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವವರು ಕನ್ನಡದ ಬಗ್ಗೆಯೂ ಅಷ್ಟೇ ಪ್ರಬುದ್ಧರಾಗಿ ವರ್ತಿಸುವುದು ಯಾವಾಗ?

ಎಫ್.ಎಂ. ರೇಡಿಯೋ ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಕಲಬೆರಕೆಯ ಅಬದ್ಧ ರೂಪಗಳು ಜುಗುಪ್ಸೆಯನ್ನು ಉಂಟುಮಾಡುತ್ತವೆ. ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೨ ದಿನಾಂಕ ೩೧-೮-೨೦೦೧). ರಾಜ್ಯಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳೂ ಆಯಾ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸುವುದು ದೇಶಾದ್ಯಂತ ಏಕರೂಪವಾಗಿ ಜಾರಿಗೆ ಬರುವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯ ಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ (೨೦೧೧). ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಸೌಲಭ್ಯಗಳಿರುವ ಮುಂದುವರೆದ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಸೌಲಭ್ಯಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವಿನ ಅಸಮಾನತೆಯ ಅಂತರ ಹೆಚ್ಚುವಂತಾಗುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅನಿವಾರ್ಯತೆಯಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವೂ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮಥ್ರ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.

ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಶಿಕ್ಷಣ ತಜ್ಞರು ಯಾರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ.

ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸಬೇಕು. ಅದನ್ನು ಯಾರೂ ಬೇಡವೆನ್ನುತ್ತಿಲ್ಲ. ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವಂತೆ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಅವರು ಮಕ್ಕಳೊಂದಿಗೆ ಸಹಜವಾಗಿ ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸುವುದರಿಂದ ಮಕ್ಕಳು ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಮೊದಲು ಕಲಿಯುತ್ತಾರೆ. ಅನಂತರ ಇಂಗ್ಲಿಷಿನಲ್ಲಿ ಓದುವುದು ಬರೆಯುವುದನ್ನು ಕಲಿಸಬೇಕು. ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶೀತ ಪ್ರಯೋಜನವಾಗುತ್ತಿಲ್ಲ. ಯಾವಾಗಬೇಕಾದರೂ ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದುದನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯವಾಗಿ ಕಲಿಸಬೇಕೆಂದು ವಾದಿಸುವುದರಲ್ಲಿ ಅರ್ಥವಿಲ್ಲ.

ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿ, ನಾಡದೇವಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬಂದು’, ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಧಾರ್ಮಿಕ ವ್ಯಕ್ತಿಗಳೂ ಎಲ್ಲರೊಂದಿಗೆ ಸಮಾನ ಗೌರವದಿಂದ ಭಾಗವಹಿಸಬಹುದು. ಆದರೆ ಇಲ್ಲಿ ಅವರನ್ನು ಧಾರ್ಮಿಕ ವೇದಿಕೆಗಳಲ್ಲಿ ಸ್ತುತಿಸುವಂತೆ ‘ದಿವ್ಯ ಸಾನ್ನಿಧ್ಯ’ ಎಂದು ವಿಶೇಷವಾಗಿ ಸಂಬೋಧಿಸುವುದು ಅನುಚಿತ. ಪರಿಷತ್ತು ಈ ದಿವ್ಯಸನ್ನಿಯಿಂದ ಗುಣಮುಖವಾಗಬೇಕು.

ಗಂಗಾವತಿ*
೯ ಡಿಸೆಂಬರ್ ೨೦೧೧
ರಾಷ್ಟ್ರೀಯ ಶಕೆ ೧೯೩೩ ಹೇಮಂತ ಮಾರ್ಗಶಿರ ೯
O ಚತುರ್ದಶಿ ಕೃತ್ತಿಕಾ ಶುಕ್ರವಾರ

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು ೫೭೦೦೦೬

ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ*

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
೧೮ ಸೆಪ್ಟೆಂಬರ್ ೧೯೩೫


ಪ್ರೊ ಜಿ ಎಚ್ ನಾಯಕ

‘ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ’ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದಲ್ಲಿ ೫-೯-೨೦೦೮ರಂದು ನಾನು ವಿಶೇಷ ಉಪನ್ಯಾಸ ನೀಡಿದ್ದೆ. ನನ್ನ ಭಾಷಣದ ಪತ್ರಿಕಾವರದಿ ಓದಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರು ‘ಪ್ರೊ ನಾಯಕರ ತರ್ಕವನ್ನು ಒಪ್ಪಬಹುದಾದರೂ ಡಾ ರಾಧಾಕೃಷ್ಣನ್ ಉಪಾಧ್ಯಾಯ ವೃತ್ತಿಗೊಂದು ಮಹತ್ತ್ವವನ್ನು ಕೊಟ್ಟಿರುವುದನ್ನು ಮರೆಯಬಾರದು. ಅದು ಶಿಕ್ಷಕರ ದಿನಾಚರಣೆ. ಅಷ್ಟೇ. ಡಾ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಲ್ಲ ಎಂದು ತಿಳಿದರೆ ನಮ್ಮ ಸಮಸ್ಯೆ ಬಗೆಹರಿಯಬಹುದೆನಿಸುತ್ತದೆ’ ಎಂದಿದ್ದಾರೆ(ಪ್ರಜಾವಾಣಿ ೧೮-೯-೨೦೦೮). ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರು ‘ರಾಧಾಕೃಷ್ಣನ್ ರಾಷ್ಟ್ರಪತಿಯಾಗುವುದರ ಮೂಲಕ ಅಧ್ಯಾಪಕವರ್ಗಕ್ಕೇ ಗೌರವ ತಂದುಕೊಟ್ಟರು. ಅವರ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸುವುದು ಅರ್ಥಪೂರ್ಣವಾಗಿದೆ’ ಎಂದು ಹೇಳಿ ನನ್ನ ಹೇಳಿಕೆ ಸಮಂಜಸವಲ್ಲ ಎಂದು ಆಕ್ಷೇಪಿಸಿದ್ದಾರೆ(ಕನ್ನಡಪ್ರಭ ೧೪-೯-೨೦೦೮). ನನ್ನ ಹೇಳಿಕೆ ಮತ್ತು ಅಭಿಪ್ರಾಯಗಳ ಬಗ್ಗೆ ಸಂಕ್ಷಿಪ್ತವಾಗಿಯಾದರೂ ವಿವರ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ:

೧. ಅಧ್ಯಾಪಕರ ದಿನಾಚರಣೆ ಮಾಡುವುದು ಅಧ್ಯಾಪಕರಿಗೆ, ಅಧ್ಯಾಪಕ ವೃತ್ತಿಗೆ ಗೌರವ, ಕೃತಜ್ಞತೆ ಸೂಚಿಸುವುದಕ್ಕೆ. ಆದರೆ ಈಗಿರುವಂತೆ ಅದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅಧ್ಯಾಪಕ ವರ್ಗವು ಅವರ ಜನ್ಮದಿನದಂದು ಗೌರವ, ಕೃತಜ್ಞತೆ ಸಲ್ಲಿಸುವ ಆರಾಧನಾ ದಿನವೆಂಬಂಥ ಸ್ವರೂಪ ಪಡೆದುಕೊಂಡಿದೆ. ಈ ಸ್ವರೂಪದಲ್ಲಿ ಅದು ಮುಂದುವರಿಯುವುದು ತರವಲ್ಲ. ರಾಧಾಕೃಷ್ಣನ್ ಅವರ ವ್ಯಕ್ತಿತ್ವಕ್ಕೆ, ಅವರ ವೃತ್ತಿನಿಷ್ಠೆಗೆ ಅಧ್ಯಾಪಕರಿಗೆ ಪರಮ ಆದರ್ಶವಾಗುವ ಮಟ್ಟದ ಘನತೆಯೂ ಇಲ್ಲ; ಅಧ್ಯಾಪಕ ವರ್ಗಕ್ಕೆ ಅಧ್ಯಾಪಕ ವೃತ್ತಿಗೆ ಯಾರದೇ ವ್ಯಕ್ತಿಪೂಜೆ ಗೌರವದ ಸಂಗತಿಯೂ ಅಲ್ಲ. ಅಕ್ಟೋಬರ್ ೫ ಅಧ್ಯಾಪಕರ ದಿನ ಎಂದು ಯುನೆಸ್ಕೊ ಘೋಷಿಸಿದೆ. ಆ ದಿನವನ್ನೇ ಅಧ್ಯಾಪಕರ ದಿನವೆಂದು ಆಚರಿಸುವ ಬಗ್ಗೆ ಅಧ್ಯಾಪಕರ `ನ್ಯಾಷನಲ್ ಫೆಡರೇಷನ್’ ಯೋಚಿಸಬಾರದೇಕೆ?

೨. ಅಧ್ಯಾಪಕರ ದಿನವನ್ನು ಸೆಪ್ಟೆಂಬರ್ ೫ರಂದು ಆಚರಿಸುತ್ತಿರುವುದರಿಂದ ನನಗೆ ಸಂತೋಷವಾಗುವುದಕ್ಕೆ ವೈಯಕ್ತಿಕವಾದ ಅಷ್ಟೇನೂ ಮಹತ್ವದ್ದಲ್ಲದ ಒಂದು ಕಾರಣವೇನೊ ಇದೆ! ನಾನು ಅಧ್ಯಾಪಕ ವೃತ್ತಿಗೆ ಸೇರಿದ ದಿನ ಸೆಪ್ಟೆಂಬರ್ ೫, ೧೯೬೦. ಆ ದಿನ ನಾನು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ನನ್ನ ಅಧ್ಯಾಪಕ ವೃತ್ತಿ ಆರಂಭಿಸಿದೆ.

ಸರ್ವೆಪಲ್ಲಿ ರಾಧಾಕೃಷ್ಣನ್

೩. ಸೆಪ್ಟೆಂಬರ್ ೫ ರಾಧಾಕೃಷ್ಣನ್ ಅವರ ಜನ್ಮದಿನ ಎಂಬುದೇ ವಿವಾದಾಸ್ಪದ. ಅದು ೫-೯-೧೮೮೮ ಅಲ್ಲ, ೨೦-೯-೧೮೮೭ ಎಂದು ಅವರ ಮಗ, ಇತಿಹಾಸ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಡಾ ಸರ್ವಪಲ್ಲಿ ಗೋಪಾಲ್ ಬರೆದಿದ್ದಾರೆ. (ನೋಡಿ: RADHAKRISHNAN – A Biography. Oxford University Press, ೧೯೮೯(ಪು. ೧೦).
೪. ರಾಧಾಕೃಷ್ಣನ್ ಅವರ ಹುಟ್ಟಿನ ಬಗ್ಗೆ ಗೋಪಾಲ್ ಬರೆದಿರುವುದು ನಿಜವೇ ಆಗಿದ್ದರೂ ಅದಕ್ಕೆ ರಾಧಾಕೃಷ್ಣನ್ ಹೊಣೆಗಾರರಲ್ಲ. ಆ ಕಾರಣಕ್ಕಾಗಿ ತಾಯಿಯನ್ನು ಆಕೆಯ ದೀರ್ಘ ಜೀವನದುದ್ದಕ್ಕೂ ಅವರು ದೂರವೇ ಇಟ್ಟಿದ್ದರೆಂದು ಗೋಪಾಲ್ ಬರೆಯುತ್ತಾರೆ:
‘Most of the major details about the birth of Sarvepalli Radhakrishnan are uncertain. The official version is that he was born on 5 September 1888 at Tirutani, a very small temple town to the north-west of Madras city, the second son of a poor Brahmin couple, Sarvepalli Veeraswami and his wife Sitamma. However, Radhakrishnan himself was inclined to believe that the date of his birth was in fact 20 September 1887. More important is the doubt whether Veeraswami was his father. Parental responsibility lay, according to village rumour, with an itinerant Vaishnavite official. Sitamma’s brother, who served in the local administration, was thought to have arranged the rendezvous to oblige a superior officer. Credence is lent to the story by the difficulty in believing that Radhakrishnan and his four brothers and sister belonged to the same genetic pool. Intellectual endowment and physical appearance both suggested that Radhakrishnan belonged to different stock. Radhakrishnan himself accepted this version and, critical of his mother’s conduct, always, throughout her long life, kept her at a distance. But he was attached to the man who passed for his father(ಪು ೧೦).

ಅಂಥ ನಿಷ್ಠುರ ನೈತಿಕ ಕ್ರೋಧ ಪ್ರದರ್ಶಿಸಿದ ರಾಧಾಕೃಷ್ಣನ್ಅವರ ಬಗ್ಗೆ ಗೋಪಾಲ್ಅವರ ಬರವಣಿಗೆಯಿಂದ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ:

‘…Radhakrishnan began, too, to show an interest in other women… He would not accept, even to himself, that his loyalty to her(ಅವರ ಹೆಂಡತಿ) was tarnished by his extra-marital adventures…Marriage as he saw it, did not require a husband’s monogamous attitude. She was a devoted wife by any standards'(ಪು ೧೪). ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಪಕ್ಕದ ಮನೆಯವನ ಹೆಂಡತಿಯೊಂದಿಗೆ ಪ್ರಾರಂಭವಾಗಿ, ಮುಂದೆ ಹಲವು ಹೆಂಗಸರೊಂದಿಗೆ ಸರಮಾಲೆಯಾಗಿ ಬೆಳೆದ ಸಂಬಂಧ ವ್ಯವಹಾರಗಳ ಬಗ್ಗೆ ಗೋಪಾಲ್ ಬರೆದಿದ್ದಾರೆ: ‘…he showed his mistresses consideration…but he never gave them even the semblance of love…all the women whom he accepted in his life were of superficial mind, some enjoyed dubious reputations and many were dominating and hysterical’ (ಪು. ೫೦-೫೧). ಮತ್ತೊಂದು ಕಡೆ ಗೋಪಾಲ್, ‘…But what casts a shadow is the contrast between the way he conducted his private life and what he preached in public’ ಎಂದು ಬರೆಯುತ್ತ ಕಲ್ಕತ್ತಾದಲ್ಲಿ ೧೯೪೨ರ ಡಿಸೆಂಬರಿನಲ್ಲಿ, ಅವರ ಒಬ್ಬ ‘ಮಿಸ್ಟ್ರೆಸ್’ ಮುಂದಿನ ಸಾಲಿನಲ್ಲಿಯೇ ಕುಳಿತಿರುವ ಸಭೆಯಲ್ಲಿ ಏಕಪತ್ನಿ ನಿಷ್ಠೆಯ ವೈವಾಹಿಕ ಜೀವನ ಶ್ರೇಷ್ಠವೆಂದು ಪ್ರತಿಪಾದಿಸಿ ರಾಧಾಕೃಷ್ಣನ್ ಭಾಷಣ ಮಾಡಿದ್ದನ್ನು ಉದಾಹರಣೆಯಾಗಿ ನೀಡುತ್ತಾರೆ (ಪು.೩೮೦). ಹೇಳುವುದೊಂದು ಮಾಡುವುದಿನ್ನೊಂದು ಈ ಆತ್ಮವಂಚಕ ಬುದ್ಧಿ ಯಾಕೆ, ಎಂದು ರಾಧಾಕೃಷ್ಣನ್ ಅವರನ್ನು ಕೇಳಿದರೆ ಅವರ ಉತ್ತರ ಏನಿದ್ದೀತು, ಎಂಬ ಬಗ್ಗೆ ಕೂಡ ಗೋಪಾಲ್ ಬರೆಯುತ್ತಾರೆ: ‘Radhakrishnan’s answer to the charge of hypocracy would have been that it was his duty to lay down the highest standards even if he himself failed to reach them’(ಪು ೩೮೦).

ರಾಧಾಕೃಷ್ಣನ್ ತಮ್ಮ ಐವರು ಹೆಣ್ಣುಮಕ್ಕಳ ಮದುವೆಯನ್ನೂ ಹನ್ನೊಂದರಿಂದ ಹದಿನಾರು ವರ್ಷಗಳ ಒಳಗೇ ಅವರ ಒಪ್ಪಿಗೆ ಕೇಳದೆ ಮಾಡಿದ್ದಲ್ಲದೆ ಮದುವೆ ದಿನಕ್ಕಿಂತ ಮೊದಲು ವರನಾಗುವವನನ್ನು ತಾವು ನೋಡದೆ ಇದ್ದ ಉದಾಹರಣೆಯೂ ಇದೆ ಎಂದು ಕೂಡ ಗೋಪಾಲ್ ಹೇಳಿ, ‘But his attitude also indicates that, whatever his utterances, his instinctive outlook was that women were made for men’ಎಂದಿದ್ದಾರೆ(ಪು. ೪೯). ಇಂಥವರನ್ನು ಅಧ್ಯಾಪಕ ವರ್ಗ ಆದರ್ಶಪ್ರಾಯರೆಂದು ಆರಾಧಿಸಬೇಕೆ?

೫. ಅಧ್ಯಾಪಕರ ಪರಮ ಆದರ್ಶ ಆ ವೃತ್ತಿಗೆ ಸಂಬಂಧಿಸಿರದ ರಾಷ್ಟ್ರಪತಿಯಂಥ ರಾಜಕೀಯ ಹುದ್ದೆ ಪಡೆಯುವುದರಲ್ಲಿದೆ ಎನ್ನಬಹುದೆ? ಅದೇ ಪರಮ ಆದರ್ಶ ಎಂದಾದಲ್ಲಿ ಡಾ ಝಕೀರ್ ಹುಸೇನ್ ಕೂಡ ಪ್ರಾಧ್ಯಾಪಕ, ಕುಲಪತಿ, ಉಪರಾಷ್ಟ್ರಪತಿ, ರಾಷ್ಟ್ರಪತಿ ಆಗಿದ್ದರಲ್ಲವೆ? ಭಾರತದ ಈಗಿನ ಪ್ರಧಾನಿ ಡಾ ಮನಮೋಹನ ಸಿಂಗ್ ಅವರೂ ಅಧ್ಯಾಪಕರಾಗಿದ್ದವರೇ ಅಲ್ಲವೆ?

ಅಧ್ಯಾಪಕವರ್ಗ ಎಲ್ಲ ವರ್ಗಗಳಿಗಿಂತ ಹೆಚ್ಚು ಪ್ರಜ್ಞಾವಂತ ವರ್ಗ. ಪ್ರಜ್ಞಾವಂತರಾದವರು ಉನ್ನತೋನ್ನತ ರಾಜಕೀಯ ಹುದ್ದೆಗಳಲ್ಲಿ ಇರುವಂತಾದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವು. ಹಾಗಾದಲ್ಲಿ ಎಲ್ಲ ವರ್ಗದವರೂ ಸಂತೋಷ ಪಡಬೇಕು; ಅಧ್ಯಾಪಕವರ್ಗ ಅದು ತಮಗೆ ಮಾತ್ರವೇ ಗೌರವ ಎಂದು ಸಂಭ್ರಮ ತೋರಬೇಕಾದ್ದಿಲ್ಲ. ಅಂಥ ಹುದ್ದೆಗಳಿಗೆ ಬಂದವರು, ಬರುವವರು ಪ್ರಜ್ಞಾವಂತರು, ಶ್ರೇಷ್ಠ ವಿದ್ವಾಂಸರು ಆಗಿದ್ದರೆ ಮಾತ್ರ ಸಾಲದು, ಶುಭ್ರಶೀಲವಂತರೂ ಆಗಿರಬೇಕೆಂದು ಅಧ್ಯಾಪಕವರ್ಗ ಬಯಸಬೇಕಲ್ಲವೆ?

ಅಧ್ಯಾಪಕರೇ ಆಗಿದ್ದ ಕುವೆಂಪು ಹೇಳುವ ಅಸೀಮ ಜ್ಞಾನಲೋಕದ ಅಂದರೆ ಅನಿಕೇತನ ಪ್ರಜ್ಞೆಯ ಯಾತ್ರಿಕನಾಗಿರಬೇಕಾದ ಹಾಗೂ ಅರಿವು ಇರವು ಬಿಡಿ ಬಿಡಿಯಾಗಿರದೆ ಇಡಿಯಾಗಿರಬೇಕಾದ ಪೂರ್ಣದೃಷ್ಟಿಯ ಬೆನ್ನುಹತ್ತಿ ಸಾಗುತ್ತಲೇ ಇರಬೇಕಾದ ಅನಂತಯಾತ್ರೀ ಆದರ್ಶವನ್ನು ಅಧ್ಯಾಪಕವರ್ಗದವರು, ಪರಿಕಲ್ಪನೆ, ಕಲ್ಪನೆಗಳಲ್ಲಿಯಾದರೂ ಕಲ್ಪಿಸಿಕೊಳ್ಳಲಾಗದಂಥ ಕುಬ್ಜರಾಗಬೇಕೆ?

೬. ರಾಧಾಕೃಷ್ಣನ್ ೧೯೪೯ರಿಂದ ೧೯೬೭ರವರೆಗೆ ಹದಿನೆಂಟು ವರ್ಷಗಳ ಕಾಲ ರಾಜಕೀಯದ ಆಡಳಿತ ವ್ಯವಸ್ಥೆಯ ಭಾಗವಾಗಿ ಭಾರತದ ರಾಯಭಾರಿ, ಉಪರಾಷ್ಟ್ರಪತಿ, ರಾಷ್ಟ್ರಪತಿ -ಹೀಗೆ ಉನ್ನತೋನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವುದರ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದರು. ಅದು ಅವರ ತತ್ತ್ವಶಾಸ್ತ್ರದ ವಿದ್ವತ್ತು ಮತ್ತು ತತ್ತ್ವಜ್ಞಾನ ಪರಿಪಕ್ವವಾಗಿದ್ದ ಕಾಲಘಟ್ಟವಾಗಿತ್ತು. ಅಂಥ ಕಾಲದಲ್ಲಿ ಅವರ ಪ್ರಥಮ ಪ್ರೇಮ ಅವುಗಳ ಬಗ್ಗೆ ಇರದೆ ವ್ಯವಸ್ಥೆಯ ಭಾಗವಾದ ಅಧಿಕಾರದ ಬಗೆಗಿನ ವ್ಯಾಮೋಹವಾಗಿಬಿಟ್ಟಿತ್ತು. ಅಷ್ಟೂ ವರ್ಷಗಳ ಕಾಲ ಅವರ ವೃತ್ತಿನಿಷ್ಠೆ, ಜ್ಞಾನನಿಷ್ಠೆ ಎಲ್ಲಿದ್ದವು?

೭. ಉಜ್ವಲ ದೇಶಭಕ್ತಿ, ರಾಜಕೀಯದಲ್ಲಿ ಉತ್ಕಟ ಆಸಕ್ತಿ, ದೇಶದ ಆಗುಹೋಗುಗಳಲ್ಲಿ ಅಪಾರ ಕಾಳಜಿ ಇವು ಕಾರಣವಾಗಿ ರಾಧಾಕೃಷ್ಣನ್ ರಾಜಕೀಯದಲ್ಲಿ ಸೇವೆಸಲ್ಲಿಸಲು ಮುಂದಾದವರೆಂದು ಹೇಳಬಹುದೆ? ಸ್ವಾತಂತ್ರ್ಯಪೂರ್ವದಲ್ಲಿ ದೇಶ ಪರಕೀಯರ ಆಡಳಿತದಲ್ಲಿದ್ದಾಗ ಅವರಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಹೋರಾಟ ಮಾಡಬೇಕೆಂಬ ಜಾಗೃತಿ, ಪ್ರೇರಣೆ ಉಂಟಾಗಲಿಲ್ಲ ಏಕೆ? ರಾಧಾಕೃಷ್ಣನ್ ಅವರೊಳಗಿದ್ದ ದೇಶಭಕ್ತ ಆಗ ಎಲ್ಲಿದ್ದ? ಖಾದಿಯನ್ನಾದರೂ ಧರಿಸುವ ಮೂಲಕ ದೇಶಭಕ್ತಿಯನ್ನು ಸಾಂಕೇತಿಕವಾಗಿ ಸೂಚಿಸುವುದನ್ನಾದರೂ ಮಾಡಿದ್ದರೆ? ಗಾಂಧೀಜಿ ಕುರಿತ ಲೇಖನವೊಂದನ್ನು ರಾಧಾಕೃಷ್ಣನ್ ಹುಸಿ ಹೆಸರಿನಲ್ಲಿ ಪ್ರಕಟಿಸಿದ್ದರು(ಪು. ೬೭). ಗಾಂಧೀಜಿಯವರ ವಿಚಾರಗಳ ತತ್ತ್ವಶಾಸ್ತ್ರೀಯ ಅಧ್ಯಯನ ಕುರಿತ Gandhi and the Indian Problem ಪುಸ್ತಕ ಪ್ರಕಟಿಸಲೆಂದು ಆಗಿನ ಮದ್ರಾಸ್ ಸರಕಾರದ ಅನುಮತಿಗೆ ಬರೆದಾಗ ಹಸ್ತಪ್ರತಿ ಒಪ್ಪಿಸಲು ಸರಕಾರ ಕೇಳಿದ್ದರಿಂದ ಧೈರ್ಯಗುಂದಿ ಆ ಪ್ರಕಟಣೆಯ ಯೋಜನೆಯನ್ನೇ ಕೈಬಿಟ್ಟಿದ್ದರು(ಪು.೬೯). ಆದರೆ ಗಾಂಧೀಜಿಯ ಆತ್ಮಚರಿತ್ರೆ My Experiments with Truth ಹೆಸರಿನಂತೆಯೇ ರಾಧಾಕೃಷ್ಣನ್ ಅವರ ಆತ್ಮಚರಿತ್ರಾತ್ಮಕ ಲೇಖನದ ಹೆಸರೂ My Search for Truth ಎಂದಿರುವುದು ಗಮನಾರ್ಹ! ರಾಧಾಕೃಷ್ಣನ್ ಅವರ ಸತ್ಯನಿಷ್ಠೆ, ಧೈರ್ಯದ ಸ್ವರೂಪ ಹೀಗಿದ್ದವು.

೮. ೭೯-೮೦ ವರ್ಷದ ‘ತತ್ತ್ವಜ್ಞಾನಿ’ ಕೈ ಮರಗಟ್ಟಿ, ಮಾತು ಅಸ್ತವ್ಯಸ್ತವಾಗಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗುತ್ತಿರುವಾಗಲೂ ರಾಷ್ಟ್ರಪತಿಯಾಗಿ ಎರಡನೇ ಅವಧಿಗೆ ಮುಂದುವರಿಯುವ ಆಸೆ ಬಿಡದಿದ್ದುದು ಏನನ್ನು ಹೇಳುತ್ತದೆ? ಆ ಕಾಲಕ್ಕಾಗಲೇ ಚತುರ ರಾಜಕಾರಣಿಯಾಗಿ ಬೆಳೆದಿದ್ದ ಇಂದಿರಾಗಾಂಧಿ, ಪ್ರಧಾನಿಯಾಗಲು ತಮ್ಮನ್ನು ಹುರಿದುಂಬಿಸಿ ನೆರವಾಗಿದ್ದ ರಾಧಾಕೃಷ್ಣನ್ ಅವರನ್ನು ಆಸೆಹುಟ್ಟಿಸುತ್ತಲೇ ನಿವಾರಿಸಿಕೊಂಡರು(ಪು. ೩೪೫-೪೭). ‘ಭಾರತರತ್ನ’ ರಾಧಾಕೃಷ್ಣನ್ ಅವರ ‘ಕೆರಿಯರಿಸ್ಟ್’ ಬದುಕಿನ ಕಾಲ ಮುಗಿದದ್ದು ಹೀಗೆ. ಆ ಸಂದರ್ಭದ ಅವರ ನಡವಳಿಕೆಯಲ್ಲಿಯೂ, ಇಂದಿರಾ ಗಾಂಧಿ ಪ್ರಧಾನಿಯಾದಾಗ ‘now one could at least be sure of seeing a pretty face every morning in the news papers’ಎಂದ ಅವರ ಮಾತಿನಲ್ಲಿಯೂ ತತ್ತ್ವಜ್ಞಾನಿಯ ಘನತೆ, ಔನ್ನತ್ಯ ಕಾಣಿಸಲಿಲ್ಲ. ತನ್ನ ಬಗ್ಗೆ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಹೇಳಿದ ಆ ಮಾತು ಸ್ವತಃ ಇಂದಿರಾಗಾಂಧಿಯವರಿಗೇ ಇಷ್ಟವಾಗಿರಲಿಲ್ಲ ಎನ್ನಲಾಗಿದೆ(ಪು. ೩೪೭). ಪುಸ್ತಕದ ಮೊದಲ ಮಾತಿನಲ್ಲಿ ಗ್ರಂಥಕರ್ತ ಡಾ. ಸರ್ವಪಲ್ಲಿ ಗೋಪಾಲ್ ಹೇಳಿರುವ,
‘This is a son’s book. The relations between my father and me were closer and more continuous than is usual, in this age between parents and children…such close association enabled me to be witness to a great deal in the later years that has been recounted here. But I have tried not to be swayed by personal affection and have shirked nothing'(Preface, p.vii)ಎಂಬ ಮಾತು ಗಮನಾರ್ಹವಾಗಿದೆ.

ಮೂಢ ನಂಬಿಕೆಯ ಆಚರಣೆ, ಸಾಂಪ್ರದಾಯಿಕ ಉತ್ಸವದ ರೀತಿಯಲ್ಲಿ ಅಧ್ಯಾಪಕರ ದಿನವನ್ನು ಸೆಪ್ಟೆಂಬರ್ ೫ರಂದು ಆಚರಿಸುವುದನ್ನು ಈಗಿರುವಂತೆಯೇ ಮುಂದುವರೆಸಿಕೊಂಡು ಹೋಗುವುದು ಸರಿಯೆ, ಔಚಿತ್ಯಪೂರ್ಣವೆ ಎಂಬ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.

—-
* ೨೦೦೯ರಿಂದ ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು ಸೆಪ್ಟೆಂಬರ್ ೫ರ ಬದಲು ಯುನೆಸ್ಕೋ ಘೋಷಿಸಿರುವಂತೆ ಅಕ್ಟೋಬರ್ ೫ರಂದು ‘ವಿಶ್ವ ಶಿಕ್ಷಕರ ದಿನ’ವನ್ನು ಆಚರಿಸುತ್ತಿದೆ.

ಕನ್ನಡ ಮಾಧ್ಯಮದ ಅನಂತರ… ಒಂದು ಅನುಭವ

ಮಾಯಾ
ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು

ಕನ್ನಡ ಮಾಧ್ಯಮದಲ್ಲಿ ನಾನು ೧೦ನೇ ತರಗತಿ ಮುಗಿಸಿದ ೧೦ ವರ್ಷಗಳ ಬಳಿಕ, ಸರಕಾರವು ಪ್ರಾಥಮಿಕ ಶಿಕ್ಷಣ ಮಾಧ್ಯಮದ ಬಗ್ಗೆ ಚಿಂತಿಸುತ್ತಿರುವ ಸಂದರ್ಭದಲ್ಲಿ ಈ ೧೦ ವರ್ಷಗಳ ಅನುಭವವನ್ನು ಸಮಾಜದ ಮುಂದಿಡಲು ಬಯಸುತ್ತೇನೆ.

೧೦ ವರ್ಷಗಳ ಹಿಂದೆ ಶಿಕ್ಷಣ ಮಾಧ್ಯಮದ ಬಗ್ಗೆ ಅವಲೋಕಿಸುವ ಯೋಚನಾಶಕ್ತಿ ನನ್ನ ಒಳಗಿತ್ತೆಂದು ಹೇಳಲಾಗದು. ಪದವಿಪೂರ್ವ ಹಂತವನ್ನು ಪ್ರವೇಶಿಸುವಾಗ ಇದ್ದುದು ಛಲವೊಂದೇ. ಕನ್ನಡ ಮಾಧ್ಯಮ ತೊಡಕಾಗದೆಂಬ ಧೈರ್ಯವೊಂದೇ… ಆ ಧೈರ್ಯವು ಜಗತ್ತನ್ನು ನಡೆಸುವ ಶಕ್ತಿಯ ಧನಾತ್ಮಕ ಪ್ರತಿಕ್ರಿಯೆಯೊಂದಿಗೆ ನನ್ನನ್ನಿಂದು ಭಾರತದ ಪ್ರಮುಖ ವಿಜ್ಞಾನ ವಿದ್ಯಾಲಯವೊಂದರಲ್ಲಿ ನಿಲ್ಲಿಸಿದೆ. ಜೀವನದ ಗುರಿಯ ಬಗ್ಗೆ ಶಿಕ್ಷಣದ ಬಗ್ಗೆ ಚಿಂತಿಸುವ ಅವಕಾಶ ನೀಡಿದೆ. ಅಂದು ಪಡೆದ ಪ್ರಾಥಮಿಕ ಶಿಕ್ಷಣವನ್ನು ಅವಲೋಕಿಸಿದರೆ, ನಾವು ಕಲಿತ ಶಾಲೆಯಲ್ಲಿ ವಿಜ್ಞಾನ, ಗಣಿತಗಳನ್ನು ಅರ್ಥವಾಗುವಂತೆ ಹೇಳಿಕೊಡುವ ಶಿಕ್ಷಕಿಯರಿದ್ದರು. ಭಾಷೆಗಳನ್ನು ಅವುಗಳ ಸ್ವರೂಪ ತಿಳಿಯುವಂತೆ ಬೋಧಿಸುವ ಶಿಕ್ಷಕಿಯರೂ ಇದ್ದರು. ಅಂದು ನಮ್ಮ ಗುರಿ ಅಂಕಗಳಿಸುವುದೊಂದೇ ಆಗಿದ್ದರೂ ಅಲ್ಲಿ ಅರಿತ ಪ್ರಾಥಮಿಕ ಜ್ಞಾನವೂ(basics) ವಿಷಯವನ್ನು ತಿಳಿಯುವ, ಕಲಿಯುವ ಪ್ರವೃತ್ತಿಯೂ ಮುಂದಿನ ಹಂತಗಳಲ್ಲಿ ಸಹಕಾರಿಯಾಗಿತ್ತು. ಅದರಿಂದ ಪದವಿಪೂರ್ವಕ್ಕೆ ಕಾಲಿಟ್ಟಾಗ ಮಾಧ್ಯಮ ತೊಡಕೆನಿಸಲಿಲ್ಲ.

ಮುಂದಿನ ಹತ್ತು ವರ್ಷಗಳ ಜೀವನದ ಅವಲೋಕನ, ವೀಕ್ಷಣೆಗಳಿಂದ ಹೀಗೆ ಅನ್ನಿಸುತ್ತಿದೆ. ಪದವಿಪೂರ್ವಕ್ಕೆ ಕಾಲಿಡುವ ವಯಸ್ಸಿನಲ್ಲಿ, ವಿಷಯಾನೇಕಗಳನ್ನು ತಿಳಿದು ಬೆಳೆಯುವ ದಿನಗಳಲ್ಲಿ ಕೇವಲ ಭಾಷಾಮಾಧ್ಯಮದ ಬದಲಾವಣೆ ಅಷ್ಟೊಂದು ದೊಡ್ಡ ಅಡ್ಡಿಯಾಗಿ ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸಬಹುದೆಂಬ ವಾದ ಸರಿಯಲ್ಲ. ಪದವಿಪೂರ್ವ ಮತ್ತು ಮುಂದಿನ ಶಿಕ್ಷಣ ಹಂತಗಳಲ್ಲಿ ಅನೇಕರು ಕಷ್ಟಪಡುವುದು ಸರಿ. ಅದಕ್ಕೆ ಕಾರಣಗಳು ಹಲವಾರು. ವಿಜ್ಞಾನ ವಿದ್ಯಾರ್ಥಿನಿಯಾದ ನನಗೆ ಅನ್ನಿಸುವಂತೆ ಈ ಕಾರಣಗಳು ಮಾಧ್ಯಮದ ಬದಲಾವಣೆಗಳನ್ನು ಮೀರಿದವು. ನಮ್ಮ ಶಾಲಾ ದಿನಗಳಲ್ಲಿ ೧೦ನೆಯ ತರಗತಿಯವರೆಗೆ ಇದ್ದ ವಿಷಯಗಳ ಪ್ರಮಾಣ ಮತ್ತು ಆಳ ಪದವಿಪೂರ್ವದ ವಿಜ್ಞಾನಕ್ಕೆ ಹೋಲಿಸಿದರೆ ತುಂಬ ಕಡಿಮೆಯಾಗಿತ್ತು. ಪ್ರೌಢಶಾಲೆಯಲ್ಲಿ ಪಠ್ಯವೊಂದನ್ನೇ ಉರುಹೊಡೆದು ಅಂಕಗಳಿಸಲು ಸಾಧ್ಯವಿದ್ದರೆ ೧೨ನೇ ತರಗತಿಯಲ್ಲಿ, ಅದೂ ಪ್ರವೇಶ ಪರೀಕ್ಷೆಗಳಲ್ಲಿ, ಅರ್ಥೈಸದೆ ಬಾಯಿಪಾಠಮಾಡುವ, ಅಪೂರ್ಣವಾಗಿ ವಿಷಯಗಳನ್ನು ತಿಳಿಯುವ ಪ್ರವೃತ್ತಿ ಗೆಲುವನ್ನು ತರಲಾರದಾಗಿತ್ತು. ಅರ್ಥೈಸುವಿಕೆ (understanding) ಮತ್ತು ಸಮಸ್ಯೆಗಳಿಗೆ ವಿಷಯಗಳನ್ನು ಅನ್ವಯಿಸುವ ಕೌಶಲ(application to the problem) ಈ ಪರೀಕ್ಷೆಗಳನ್ನು ಎದುರಿಸಲು ಅನಿವಾರ್ಯವಾಗಿದ್ದವು. ಈ ಪ್ರವೃತ್ತಿಗಳು ಸ್ವಂತವಾಗಿ ಕಲಿಯುವುದು, ತಿಳಿದುಕೊಳ್ಳುವ ಹಂಬಲಗಳೊಂದಿಗೆ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೂ ಅನಿವಾರ್ಯ. ಶಿಕ್ಷಣ ನನಗೆಂದೂ ಹೊರೆಯಾಗದಿರಲು ಕಾರಣ ನನಗೆ ಅಂದಿನಿಂದಿಂದಿನವರೆಗೆ ಕಲಿಸಿದ ಶಿಕ್ಷಕರ ಉತ್ತಮ ಬೋಧನಾ ವಿಧಾನ. ನನಗನ್ನಿಸುವಂತೆ ನಮಗಿಂದು ಬೇಕಾಗಿರುವುದು ಶಿಕ್ಷಣ ಕ್ರಮದ ಬದಲಾವಣೆಯಲ್ಲದೆ ಮಾಧ್ಯಮದ ಬದಲಾವಣೆಯಲ್ಲ. ಆಂಗ್ಲಭಾಷೆಗೆ, ಇತರ ವಿಷಯಗಳಿಗೆ ಉತ್ತಮ ಶಿಕ್ಷಕರನ್ನು ಅಣಿಗೊಳಿಸುವ ಬದಲು ಕನ್ನಡ ಮಾಧ್ಯಮದ ಮೂಲೋತ್ಪಾಟನೆ ಹೇಗೆ ಸಹಕಾರಿಯಾದೀತೊ ತಿಳಿಯುತ್ತಿಲ್ಲ. ವಿಷಯಗಳನ್ನು ಕನ್ನಡದಲ್ಲಿ ಸರಿಯಾಗಿ ಅರ್ಥೈಸಿದಲ್ಲಿ ಆಂಗ್ಲಭಾಷೆಯನ್ನು ಪ್ರೌಢಶಾಲಾ ಹಂತದಲ್ಲಿ ಸರಿಯಾಗಿ ತಿಳಿದಲ್ಲಿ ವಿದ್ಯಾರ್ಥಿಗಳನ್ನು ಮಾಧ್ಯಮ ಬದಲಾವಣೆಯೊಂದೇ ಹೇಗೆ ಕಷ್ಟಪಡಿಸೀತು? ಕನ್ನಡದಲ್ಲೇ ಅರ್ಥವಾಗದ ಪ್ರಾಥಮಿಕ ಜ್ಞಾನವನ್ನು ಆಂಗ್ಲ ಭಾಷೆಯ ಸಂಪರ್ಕವೇ ಇಲ್ಲದ ಹಳ್ಳಿಗಳಲ್ಲಿ ಬೋಧಿಸತೊಡಗಿದರೆ, ಈ ಹಂತದಲ್ಲೇ ವಿದ್ಯಾರ್ಥಿಗಳಿಗೆ ಅರ್ಥವಾಗದಿದ್ದರೆ, ಅವರು ಮುಂದುವರೆಯುವುದಾದರೂ ಹೇಗೆ?

ಆಂಗ್ಲಮಾಧ್ಯಮದಲ್ಲಿ ಕಲಿತವರೆಲ್ಲ ಉತ್ತಮ ಹುದ್ದೆಗಳಿಗೇರುವರೆಂಬ ವಾದವೂ ಸರಿಯಲ್ಲ. ಈ ಉತ್ತಮ ಹುದ್ದೆಗಳೇ ದೇಶದ ಅಭಿವೃದ್ಧಿಗೆ ಕಾರಣವೆನ್ನುವ ವಾದವೂ ಸರಿಯಲ್ಲ. ಯಾವುದಾದರೊಂದು ಕಂಪನಿ ಸೇರಿ ಧನ, ಕೀರ್ತಿ ಗಳಿಸುವ ಹುಚ್ಚಿನಲ್ಲಿ ಉತ್ತಮ ವಿದ್ಯಾರ್ಥಿಗಳೆಲ್ಲರೂ ಶಿಕ್ಷಣ, ವೈದ್ಯಕೀಯಗಳಂಥ ಸೇವಾಧಾರಿತ ಕ್ಷೇತ್ರಗಳನ್ನು ಪ್ರವೇಶಿಸದಿರುವುದೂ ಶಿಕ್ಷಣ ಮೌಲ್ಯಗಳ ಅವನತಿಗೆ ಕಾರಣವಾಗಬಲ್ಲುದು. ಇಂದಿನ ಶೀಕ್ಷಣ ಕ್ಷೇತ್ರದ ಅನೇಕ ಘಟನೆಗಳನ್ನು ಕಂಡರೆ ಶಿಕ್ಷಣದ ಗುರಿ ಕೇವಲ ಗಳಿಕೆಯೇ, ಪರಸ್ಪರ ಸಹಕಾರ, ಸಮಾಜಕ್ಕೆ ಸೇವೆ, ದೇಶದ ಋಣ ತೀರಿಸುವ ಮನೋಭಾವಗಳೇ ಬೇಕಿಲ್ಲವೆ ಅನ್ನಿಸುವುದು. ಕೋಟ್ಯಂತರ ರೂಪಾಯಿಗಳನ್ನು ಪಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳೂ, ಆರ್ಥಿಕ ಬೆಳವಣಿಗೆ ತಮ್ಮದೇ ಸೊತ್ತೆನ್ನುವ ಕಂಪನಿಗಳೂ ತಮ್ಮ ವಿದ್ಯಾರ್ಥಿ/ಉದ್ಯೋಗಿಗಳನ್ನು ಪ್ರಾಥಮಿಕ ಶಿಕ್ಷಣದ ಉನ್ನತಿಗೆ ಸ್ವಲ್ಪವಾದರೂ ಬಳಸಿದರೆ(ಗಳಿಕೆಯನ್ನು ಮಾತ್ರವಲ್ಲ, ಸೇವೆಯನ್ನೂ) ಆರ್ಥಿಕತೆಯೊಂದಿಗೆ ಶಿಕ್ಷಣದ ಉದ್ದೇಶವೂ ಬೆಳೆಯುವುದು. ಇಂತಹ ಬದಲಾವಣೆಗಳಿಗೆ ಸರಕಾರದ ಪ್ರಯತ್ನ ಸಾಕೆ? ಜನಸಾಮಾನ್ಯರ, ಅದರಲ್ಲೂ ಆರ್ಥಿಕವಾಗಿ ಸಬಲರ ಸಹಕಾರ ಅಗತ್ಯವಲ್ಲವೆ?

ಮತ್ತೆ, ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳು. ಇಲ್ಲದವರಿಗೆ ಕನ್ನಡ ಮಾಧ್ಯಮವೆಂಬ ಮಿಥ್ಯಾಪವಾದವು ಯಾರಿಂದ ಸೃಷ್ಟಿಯಾಯಿತು ಮತ್ತು ಯಾಕಾಗಿ? ಇಲ್ಲವದರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದು ಅಸಾಧ್ಯವಾದಲ್ಲಿ ಉಳ್ಳವರಿಗೆ ಕನ್ನಡದಲ್ಲಿ ಕಲಿಯಲು ಏಕೆ ಸಾಧ್ಯವಾಗದು? ಕನ್ನಡ ಮಾಧ್ಯಮಕ್ಕೆ ಕಳುಹಿಸದಿದ್ದರೆ ಬೇಡ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುವುದನ್ನಾದರೂ ನಿಲ್ಲಿಸಲಿ. ನಾನು ಶಾಲೆಯಲ್ಲಿದ್ದ ವರ್ಷಗಳಲ್ಲಿ ನನ್ನೂರಿನಲ್ಲಿ ಬಹುತೇಕ ಕಾಲೇಜು ಶಿಕ್ಷಕರ ಮಕ್ಕಳು ಕನಿಷ್ಠ ಐದು ವರ್ಷವಾದರೂ ಕನ್ನಡದಲ್ಲಿ ಓದುತ್ತಿದ್ದರು. ನಾನು ಕಲಿತ ಶಾಲೆ ಕಾನ್ವೆಂಟ್ ಶಾಲೆಯಾಗಿದ್ದರೂ ಅಲ್ಲಿನ ಯಾವ ಶಿಕ್ಷಕಿಯರೂ, ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿಯರೂ ಕನ್ನಡ ಮಾಧ್ಯಮದವರೆಂದು ನಮ್ಮನ್ನು ಹೀನೈಸಿದುದು ನೆನಪಿಲ್ಲ. ನಾನು ಕಲಿತ ಪದವಿಪೂರ್ವ ಕಾಲೇಜಿನಶಿಕ್ಷಕರಿಗೂ ಇದು ಅನ್ವಯಿಸುತ್ತದೆ. ಕನಿಷ್ಠ ಈ ಮನೋಭಾವವನ್ನಾದರೂ ಬೆಳಸಿಕೊಳ್ಳಲಿ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೂ, ಅವರ ಹೆತ್ತವರೂ, ಇಂದು ಆಂಗ್ಲ ಮಾಧ್ಯಮದ ದುಬಾರಿ ಶಾಲೆಗಳಿಗೆ ಕಳುಹಿಸಲು ಸಂಪತ್ತಿನ ತೋರಿಕೆ, ಮುಂದೆ ಕಷ್ಟವಾಗುವುದೆನ್ನುವುದು ಮಾತ್ರ ಕಾರಣಗಳಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸವಲತ್ತು, ಉತ್ತಮ ಶಿಕ್ಷಣ ಕ್ರಮಗಳಿಲ್ಲದಿರುವುದೂ ಕಾರಣವೆಂಬುದು ನನಗೆ ಇತ್ತೀಚೆಗೆ ಕೇಳಿಸಿದ ಅಭಿಪ್ರಾಯ. ಈ ವಿಷಯದ ಬಗ್ಗೆ ಇದರ ಪರಿಹಾರದ ಬಗ್ಗೆ ಚಿಂತಿಸುವುದು ಇಂದು ಅಗತ್ಯವೆನ್ನುವುದು ನನ್ನ ಭಾವನೆ.

ಮಾನವ ಜೀವನಕ್ಕೆ ಅನೇಕ ಪರಿಕರಗಳನ್ನು ತಂತ್ರಜ್ಞಾನಗಳನ್ನು (ಐಟಿಯೊಂದೇ ಅಲ್ಲ) ಒದಗಿಸುವ, ನಮಗಿಂತ ಬಹಳ ಮುಂದುವರೆದಿರುವ ಫ್ರಾನ್ಸ್, ಜರ್ಮನಿ ಮತ್ತಿತರ ಯೂರೋಪಿಯನ್ ಸಮುದಾಯದ ದೇಶಗಳಲ್ಲಿ ಸ್ನಾತಕೋತ್ತರ ಹಂತಗಳಲ್ಲೂ ವಿಜ್ಞಾನವನ್ನು ಅವರವರ ಭಾಷೆಗಳಲ್ಲಿ ಕಲಿಯುವರು. ಬಹುತೇಕ ಜನರು ಆಂಗ್ಲ ಭಾಷೆಯನ್ನು ಕೇವಲ ಭಾಷೆಯಾಗಿ ಮಾತ್ರ ಚೊಕ್ಕವಾಗಿ ಕಲಿಯುವ ಜಪಾನ್, ಯೂರೋಪಿಯನ್ ರಾಷ್ಟ್ರಗಳು ಮುಂದುವರಿದಿಲ್ಲವೆ? ಇಂದು ಯೋರೋಪಿಗೆ ತೆರಳುವ ಅನೇಕ ಭಾರತೀಯ ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆಯೆಂದರೆ ಇಪ್ಪತ್ತಕ್ಕೂ ಮೀರಿದ ರಾಷ್ಟ್ರೀಯ ಭಾಷೆಗಳಿರುವ ನೀವು ಪರಸ್ಪರ ಸಂಭಾಷಿಸಲು ಇಂಗ್ಲಿಷನ್ನು ಏಕೆ ಬಳಸುತ್ತೀರಿ? ಈ ಪ್ರಶ್ನೆ ನನ್ನಲ್ಲಿನ ಇತರ ಎಲ್ಲ ಪ್ರಶ್ನೆಗಳ ಸ್ಥಾನವನ್ನಾಕ್ರಮಿಸಿ ನಮ್ಮಲ್ಲಿ ಸ್ವಾಭಿಮಾನ ಇನ್ನೂ ಬೆಳದಿಲ್ಲವೆ ಎಂಬ ದುಃಖದ ಛಾಯೆಯನ್ನು ಮೂಡಿಸುತ್ತದೆ.

ಕೊನೆಯದಾಗಿ, ಕಳೆದ ದಶಮಾನದಲ್ಲಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಓದಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯಗಳಲ್ಲಿ (ಬಹುರಾಷ್ಟ್ರೀಯ ಕಂಪನಿಗಳನ್ನೂ ಸೇರಿಸಿ) ಸೇವೆ ಸಲ್ಲಿಸಿ ಸಂತೃಪ್ತರಾಗಿರುವ ಅನೇಕರನ್ನು ನಾನು ಬಲ್ಲೆ. ನನ್ನ ಪ್ರಾಚಾರ್ಯರು (ಅವರು ಸಂಶೋಧನಾ ಕ್ಷೇತ್ರದಲ್ಲಿ ಇಲ್ಲೂ, ವಿದೇಶಗಳಲ್ಲೂ ಅನುಭವವಿರುವವರು) ಇಂದು ನನಗಂದ ಮಾತು, Your technical English is good as compared to many other students. ಈ many other students ಗಳಲ್ಲಿ ಆಂಗ್ಲ ಮಾಧ್ಯದಲ್ಲಿ CBSE ಯಂತಹ ಪಠ್ಯಕ್ರಮದಲ್ಲಿ ಓದಿದವರೂ ಇರುವರೆಂದು ಬೇರೆ ಹೇಳಬೇಕಾಗಿಲ್ಲ. ಹತ್ತು ವರ್ಷಗಳ ಹಿಂದೆ ಕಷ್ಟವಾದೀತು ಎಂದು ಕನಿಕರ ತೋರಿದ ಅನೇಕರು ಇಂದು ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾಗಿದ್ದೆನೆಂಬುದನ್ನು ಮರೆತಿರುವರು(?)! ಪದವಿಪೂರ್ವ ಮತ್ತು ಅನಂತರದ ಹಂತಗಳಲ್ಲಿ ದುಬಾರಿ ಕೋಚಿಂಗ್ ಗಳನ್ನು ಪಡೆದೂ ಅವರಲ್ಲಿ ಅನೇಕರು ತಮಗೆ ಬೇಕಿದ್ದಲ್ಲಿಗೆ ತಲುಪಲು ಸಫಲರಾಗಿಲ್ಲ. ಈ ಎಲ್ಲ ಉದಾಹರಣೆಗಳಿಂದ ಮಾಧ್ಯಮ ಮುಖ್ಯವಲ್ಲ ಉತ್ತಮ ಶಿಕ್ಷಣಕ್ರಮ ಮುಖ್ಯ ಎನ್ನುವುದು ನನಗಂತೂ ಸ್ಪಷ್ಟವಾಗಿದೆ. ಅದೇನೇ ಇರಲಿ, ಈ ಹತ್ತು ವರ್ಷಗಳ ಅನುಭವಗಳು ನನಗೆ ಬಹಳ ಧೈರ್ಯವನ್ನು ನೀಡಿವೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೆ ಸುಲಭದಲ್ಲಿ ಮುಗಿಯುತ್ತಿತ್ತು. ಹೆಚ್ಚು ತಿಳಿಯುತ್ತಿತ್ತು. ಐಟಿ ಕಂಪನಿ ಏಕೆ ಸೇರಲಿಲ್ಲ, ಮುಂದೆ ನಿನ್ನ ಊರಿನಲ್ಲಿ ನೆಲಸಿ ಶಿಕ್ಷಕಿಯಾದರೆ ಬಹಳ ಉತ್ತಮ ಅವಕಾಶಗಳು ತಪ್ಪಿಹೋಗುವುವು ಎಂಬೆಲ್ಲ ವಾದಗಳು ಇಂದು ನನ್ನ ಮನಸನ್ನೇ ನಾಟಲಾರವು!

ಏಕೆಂದರೆ ಇದೇ ರೀತಿಯ ಜನಗಳು ಅಂದಿದ್ದರು ಹತ್ತು ವರ್ಷಗಳ ಹಿಂದೆ-
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಷ್ಟವಾಗುವುದು ಮುಂದೆ!!

ಸೌಜನ್ಯ ಉದಯವಾಣಿ ಮಣಿಪಾಲ ೩೦-೭-೨೦೧೧

ಕಬ್ಬಿಣದ ಕಡಲೆಕಾಯಿಯಾದ ಇಂಗ್ಲಿಷ್ ಮಾಧ್ಯಮ: ವಿದ್ಯಾರ್ಥಿ ಆತ್ಮಹತ್ಯೆ

ಬಂಟ್ವಾಳ, ಜು ೨೦- ವಿದ್ಯಾಭ್ಯಾಸ ಕಠಿಣವಾಗುತ್ತಿದ್ದರಿಂದ ನೊಂದುಕೊಂಡ ಹದಿಹರಯದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬಿ. ಮೂಡ ಗ್ರಾಮದ ಪಣೋಳಿಬೈಲು ಸಮೀಪದ ಬೊಳ್ಳಾಯಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.

ಬೊಳ್ಳಾಯಿ ನಿವಾಸಿ ಕೃಷ್ಣಪ್ಪ ಕುಲಾಲ-ಹರಿಣಾಕ್ಷಿ ದಂಪತಿಗಳ ಪುತ್ರ ದೇವಿಪ್ರಸಾದ್(೧೪ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ದೇವಿಪ್ರಸಾದ್ ನನ್ನು ಪ್ರೌಢಶಾಲಾ ಶಿಕ್ಷಣಕ್ಕಾಗಿ ಆತನ ಹೆತ್ತವರು ಕುಕ್ಕಾಜೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಅವರ ಉದ್ದೇಶ ಒಳ್ಳೆಯದೇ ಇತ್ತಾದರೂ ಕನ್ನಡ ಮಾಧ್ಯಮದಿಂದ ದಿಢೀರ್ ಆಗಿ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಂಡಿದ್ದರಿಂದ ದೇವಿಪ್ರಸಾದ್ ಗೆ ಶಾಲೆಯಲ್ಲಿ ಕಲಿಸಿದ್ದು ತಲೆಗೆ ಹೋಗುತ್ತಿರಲಿಲ್ಲ. ಹೀಗಾಗಿ ತಾನು ಶಾಲೆಗೆ ಹೋಗುವುದಿಲ್ಲ ಎಂದು ಆಗಾಗ್ಗೆ ಹೇಳುತ್ತಿದ್ದ ಎನ್ನಲಾಗಿದೆ.

ನಿನ್ನೆ ಸಂಜೆ ೫.೩೦ರ ಸುಮಾರಿಗೆ ಶಾಲೆಯಿಂದ ಮರಳಿ ಬಂದಿದ್ದು, ಹರಿಣಾಕ್ಷಿ ಆತನಿಗೆ ಚಹಾ ನೀಡಿ ಸಮೀಪದಲ್ಲೇ ಇರುವ ತಮ್ಮ ಅಂಗಡಿಗೆ ತೆರಳಿದ್ದರು. ಕೃಷ್ಣಪ್ಪ ಕುಲಾಲ್ ಸಾಮಾನುಗಳನ್ನು ತರಲು ಪಾಣೆಮಂಗಳೂರಿಗೆ ಹೋಗಿದ್ದರು. ದೇವಿಪ್ರಸಾದ್ ನ ತಂಗಿ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭ ಸಾಧಿಸಿದ ದೇವಿಪ್ರಸಾದ್ ಕಿಟಕಿಯ ಸರಳಿಗೆ ತಂದೆಯ ಲುಂಗಿಯಿಂದ
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ ೬.೩೦ರ ಸುಮಾರಿಗೆ ಹರಿಣಾಕ್ಷಿ ಮರಳಿ ಬಂದಾಗ ಈ ದುರಂತ ಬೆಳಕಿಗೆ ಬಂದಿದೆ.

ಈ ಬಗ್ಗೆ ಕೃಷ್ಣಪ್ಪ ಕುಲಾಲ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ
ಬಂಟ್ವಾಳ ನಗರ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಜೆವಾಣಿ ಮಂಗಳೂರು ೨೦-೭-೨೦೧೧

ಪ್ರಿಯರೆ,
ಶಿಕ್ಷಣ ಮಾಧ್ಯಮವನ್ನು ಕುರಿತ ಮೇಲ್ಮನವಿ ಸರ್ವೋನ್ನತ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಬೇಕಿರುವಾಗಲೇ ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಚಿ ಶ್ರೀ ವಿಶ್ವೇಶ್ವರ ಕಾಗೇರಿಯವರು ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಆತುರದಲ್ಲಿರುವುದು ಆತಂಕದ ಸಂಗತಿ.

ಚೆನ್ನಾಗಿ ಕಲಿಯದ ಭಾಷೆಯನ್ನು ಮಾಧ್ಯಮವಾಗಿ ಬಳಸುವುದರ ಪರಿಣಾಮಕ್ಕೆ ಇತ್ತೀಚಿನ ನಿದರ್ಶನ ಮಂಗಳೂರು ಸಮೀಪದ ಬೊಳ್ಳಾಯಿಯಲ್ಲಿ ನಡೆದಿದೆ. ಮನೆ, ಶಾಲೆ ಎಲ್ಲಿಯೂ ಪರಿಸರದ ಭಾಷೆಯಲ್ಲದ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಒತ್ತಾಯಿಸಿದರೆ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಕ್ಕೆ ದೇವಿಪ್ರಸಾದ್ ಬಲಿಯಾಗಿದ್ದಾನೆ. ಎಲ್ಲ ಮಕ್ಕಳೂ ದೇವಿ ಪ್ರಸಾದನಂತೆ ಆತ್ಮಹತ್ಯೆ ಮಾಡಿಕೊಳ್ಳದಿರಬಹುದು. ಆದರೆ ಅವರಲ್ಲಿ ಹಲವರು ಮಧ್ಯದಲ್ಲಿಯೇ ಶಾಲೆ ತೊರೆಯುವ ಸಾಧ್ಯತೆ ಹೆಚ್ಚಿದೆ.

ಇಂಗ್ಲಿಷನ್ನು ಕಲಿಯುವುದಕ್ಕೂ ಅದನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದಕ್ಕೂ ತುಂಬ ವ್ಯತ್ಯಾಸವಿದೆ. ಮಕ್ಕಳನ್ನು ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರು ಅದನ್ನು ಅರ್ಥಮಾಡಿಕೊಂಡು ಇಂಗ್ಲಿಷಿನಲ್ಲಿಯೇ ಉತ್ತರಿಸುವಂತೆ ಒಂದು ಭಾಷೆಯಾಗಿ ಇಂಗ್ಲಿಷನ್ನು ಚೆನ್ನಾಗಿ ಕಲಿಸಬೇಕು. ಅನಂತರ ಮಾತ್ರವೇ ಇಂಗ್ಲಿಷಿನಲ್ಲಿ ಓದು, ಬರವಣಿಗೆಗಳನ್ನು ಕಲಿಸುವುದು ಉಪಯುಕ್ತವಾಗುತ್ತದೆ. ಅಲ್ಲಿಯವರೆಗೆ ಮಕ್ಕಳು ಎಲ್ಲ ವಿಷಯಗಳನ್ನು ತಮ್ಮ ಮಾತೃಭಾಷೆ, ಪರಿಸರ ಭಾಷೆಯಲ್ಲಿ ಕಲಿತು ನಿಜವಾದ ಅರ್ಥದ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ.

ಮಕ್ಕಳ ವಿದ್ಯೆ ಹಕ್ಕಿನ ರಕ್ಷಕನಾಗಿ ಪಾತ್ರವಹಿಸಬೇಕಾದ ಸರಕಾರವೇ ಮಕ್ಕಳು ಅಸಹಾಯಕರಾಗಿ ಸಾವಿಗೆ ಶರಣಾಗಲು ಕಾರಣವಾಗಿರುವುದು ಅತ್ಯಂತ ಆತಂಕದ ಸಂಗತಿ. ಮಕ್ಕಳ ಹಕ್ಕನ್ನು ಸರಕಾರವಾಗಲಿ, ತಂದೆತಾಯಿಗಳಾಗಲಿ , ಶಾಲಾವರ್ತಕರಾಗಲಿ ಕಸಿದುಕೊಳ್ಳದಂತೆ ಎಲ್ಲ ಪ್ರಜ್ಞಾವಂತರೂ ದನಿ ಎತ್ತಬೇಕಿದೆ. ಬಾಳಿ ಬದುಕಬೇಕಾದ ಬಾಲಕ ದೇವಿಪ್ರಸಾದ್ ನ ದುರಂತವೇ ಈ ನಿಟ್ಟಿನಲ್ಲಿ ಕೊನೆಯದಾಗಲಿ.

ನಿಮ್ಮ ಕ್ರಿಯಾತ್ಮಕ ಪ್ರತಿಕ್ರಿಯೆಗೆ ಸ್ವಾಗತವಿದೆ.

ಪ್ರೀತಿಯಿಂದ
ಪಂಡಿತಾರಾಧ್ಯ

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ

ಮಾನ್ಯರೆ,

ನಮಸ್ಕಾರ. ಕುಮಾರವ್ಯಾಸ ಭಾರತದ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ.

ಇದರ ಬೆಲೆ ರೂ ೮೦೦. ಕೋರಿಯರ್ ವೆಚ್ಚ ರೂ ೫೦ (ಒಟ್ಟು ರೂ ೮೫೦) ಈ ಮೊಬಲಗನ್ನು ಕನ್ನಡ
ಗಣಕ ಪರಿಷತ್ತಿಗೆ ಮನಿ ಆರ್ಡರ್, ಚೆಕ್, ಡಿಡಿ ಮೂಲಕ (ಕನ್ನಡ ಗಣಕ ಪರಿಷತ್ತು
ಬೆಂಗಳೂರು ಈ ಹೆಸರಲ್ಲಿ ತೆಗೆಯಬೇಕು) ಕಳುಹಿಸಿದರೆ. ಕೋರಿಯರ್ ಮೂಲಕ
ಕಳುಹಿಸಲಾಗುವುದು.

ಬ್ಯಾಂಕ್ ನಿಂದ ನೇರ ವರ್ಗಾಯಿಸುವವರಿಗೆ ಮಾಹಿತಿ: ಕನ್ನಡ ಗಣಕ ಪರಿಷತ್ತು, ಭಾರತೀಯ
ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ೧೦೩೦೯೧೧೨೭೦೨ ಐಎಫ್ ಎಸ್ ಕೋಡ್ ಎಸ್ ಬಿ ಐ
ಎನ್ ೭೪೮೪ ಇಲ್ಲಿಗೆ ವರ್ಗಾಯಿಸಿ, kagapa@gmail.com ಇಲ್ಲಿಗೆ ವಿಳಾಸ ಕಳುಹಿಸಿದರೆ
ಅಡಕಮುದ್ರಿಕೆಯನ್ನು ಕೋರಿಯರ್ ಮೂಲಕ ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಕೆ ಎಸ್ ನವೀನ್ ೯೪೪೮೯-೦೫೨೧೪ ಸಂಪರ್ಕಿಸಬಹುದು.

ದಯಮಾಡಿ ಮೇಲ್ಕಂಡ ಮಾಹಿತಿಯನ್ನೂ ಸಹ ತಮ್ಮ ಬ್ಲಾಗ್ ನಲ್ಲಿ ಹಾಕಿರಿ. ಕಗಪವನ್ನು
ಬೆಂಬಲಿಸುವ ಗೆಳೆಯರಿಗೂ ಹೇಳಿ ಇದು ಪರಿಷತ್ತಿನ ವಿನಂತಿ ಎಂದು ಹೇಳಿರಿ.

ಆದರಗಳೊಂದಿಗೆ

ಕೆ ಎಸ್ ನವೀನ್
ಕನ್ನಡ ಗಣಕ ಪರಿಷತ್ತು

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ

೬ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆ ದುಡುಕುವುದು ಬೇಡ

ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು, ನ್ಯಾಯಾಲಯಗಳ ಅಭಿಪ್ರಾಯಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರ ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ ಶಿಕ್ಷಣ ಮಾಧ್ಯಮ. ಒಂದು ಮತ್ತು ಎರಡನೆಯ ತರಗತಿಗಳಲ್ಲಿ ಮಾತೃಭಾಷೆ ಅಥವಾ ಪರಿಸರಭಾಷೆ/ರಾಜ್ಯಭಾಷೆಗಳಲ್ಲಿ ಒಂದು ಭಾಷೆ ಮಾತ್ರ ಕಲಿಕೆಯ ವಿಷಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ.

ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋಚ್ಚ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿದೆ(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ(೨೦೧೧). ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಫರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿ ‘ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ; ಇಲ್ಲದವರಿಗೆ ಮಾತೃಭಾಷಾ ಮಾಧ್ಯಮ ಸರಕಾರಿ ಶಾಲೆ’ ಎಂಬ ಸಾಮಾಜಿಕ ಭೇದಕ್ಕೆ ಬಲಿಯಾಗುವಂತಾಗಿದೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ಅನಂತರ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ಉತ್ಸಾಹ ತೋರಿಸುವುದು ಆತಂಕದ ಸಂಗತಿ.

ಸರ್ವೋಚ್ಚ ನ್ಯಾಯಾಲಯವು ಸರಕಾರದ ಭಾಷಾ ನೀತಿಯನ್ನು ಪುರಸ್ಕರಿಸಿದ ಮೇಲೆ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮ. ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲಾರಂಭಿಸುವ ಮಕ್ಕಳಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ , ಅನಿವಾರ್ಯತೆಯಾಗಲಿ ಇರುವುದಿಲ್ಲ. ಆದ್ದರಿಂದ ಮಕ್ಕಳು ಇಂಗ್ಲಿಷ್ಅನ್ನು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಅರಂಭದ ಹಂತದಲ್ಲಿ ಮಕ್ಕಳನ್ನು ಸರಳವಾದ ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರಿಗೆ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸಬಲ್ಲ ಇಂಗ್ಲಿಷ್ ಮಾತನಾಡುವ ಅಧ್ಯಾಪಕರನ್ನು ಸಿದ್ಧಗೊಳಿಸಬೇಕು. ಮಕ್ಕಳು ತಮ್ಮ ಮಾತೃಭಾಷೆಯಲ್ಲಿಯೇ ಎಲ್ಲ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಹೆಚ್ಚು ಮುಂದಿರುವುದನ್ನು ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ.

ಆದ್ದರಿಂದ ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವೂ ಸಂವಿಧಾನ ವಿರುದ್ಧವೂ ಆಗುತ್ತದೆ. ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಯ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬
panditaradhya@gmail.com

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
೦ ೧ ೨ ೩ ೪ ೫ ೬ ೭ ೮ ೯

ಓದುವ ಸುಖ

ಸುಖಗಳಲ್ಲಿ ಓದುವ ಸುಖಕ್ಕೆ ನಾನು ಮೊದಲನೆಯ ಸ್ಥಾನ ಕೊಡುತ್ತೇನೆ. ಅದರಲ್ಲಿಯೂ ಒಬ್ಬರೇ ಪ್ರಯಾಣ ಮಾಡುವಾಗ ನಮಗೆ ಆಪ್ತಸಂಗಾತಿಯಾಗುವುದು ಪತ್ರಿಕೆ ಅಥವಾ ಪುಸ್ತಕವೇ. ಪ್ರಯಾಣದಲ್ಲಿ ಕೈಯಲ್ಲಿರುವ ಪತ್ರಿಕೆ ನಿಮಗೆ ಅಪರಿಚಿತರನ್ನು ಪರಿಚಿತರನ್ನಾಗಿಸಬಹುದು. ಕೈಯಲ್ಲಿ ಪುಸ್ತಕವಿದ್ದರೆ ಯಾರೂ ನಿಮ್ಮ ಓದಿಗೆ ಅಡ್ಡಿಪಡಿಸದಿರಬಹುದು.

ಮೊದಲೇ ಯೋಚಿಸಿದ್ದರೆ ಪ್ರಯಾಣದಲ್ಲಿ ಓದಿಗೆ ಅಗತ್ಯವಾದ ಅನುಕೂಲಗಳನ್ನು ಹೊಂದಿಸಿಕೊಳ್ಳಬಹುದು.
ಓದುವ ಸುಖಕ್ಕೆ ಬಸ್ಸಿಗಿಂತ ರೈಲು ಉತ್ತಮ. ರೈಲು ಹೊರಡುವುದಕ್ಕೆ ಸ್ವಲ್ಪ ಮುಂಚಿತವಾಗಿ ನೀವು ಬೋಗಿಯನ್ನು ತಲುಪಲು ಸಾಧ್ಯವಾದರೆ ಗಾಳಿ ಬೆಳಕಿನ ಅನುಕೂಲವಿರುವ ಕಿಟಕಿಯ ಪಕ್ಕದ ಸ್ಥಾನ ನಿಮಗೆ ಸಿಗುತ್ತದೆ. ಅಲ್ಲಿ ನೀವು ಕುಳಿತಮೇಲೆ ಗಾಡಿ ಎಷ್ಟುಹೊತ್ತಿಗೆ ಬೇಕಾದರೂ ಹೊರಡಲಿ, ತಲುಪಬೇಕಾದ ಸ್ಥಳವನ್ನು ತಲುಪಲಿ ಆ ಬಗ್ಗೆ ನಿಮಗೆ ಯೋಚನೆ ಇರುವುದಿಲ್ಲ. ಕೈಯಲ್ಲಿ ನಿಮಗೆ ಪ್ರಿಯವಾದ ಪುಸ್ತಕವಿರುತ್ತದೆ.

ನೀವು ಪದೇ ಪದೇ ಪ್ರಯಾಣ ಮಾಡುವವರಾಗಿದ್ದರೆ ನಿಮಗೆ ಪ್ರಯಾಣದ ಅವಧಿಯಲ್ಲಿ ಕಿಟಕಿಯ ಆಚೆ ಹೊಸ ಸ್ಥಳವನ್ನು ನೋಡುವ ಕುತೂಹಲವಿರುವುದಿಲ್ಲ. ಪೂರ್ಣ ಅವಧಿ ನಿಮ್ಮ ಓದಿಗೆಂದೇ ಕಾಯ್ದಿರಿಸಿದ ಸಮಯವಾಗಿರುತ್ತದೆ. ಪ್ರಯಾಣಿಕರ ಅಗತ್ಯಗಳನ್ನೂ ಪೂರೈಸುವುದಕ್ಕಾಗಿ ಪ್ರಯಾಣದುದ್ದಕ್ಕೂ ತಿಂಡಿ ಕಾಫಿ ಮಾರುವ ಹುಡುಗರು ಇದ್ದೇ ಇರುತ್ತಾರೆ. ಪ್ರತಿ ಪ್ರಯಾಣದಲ್ಲಿಯೂ ಬದಲಾಗುವ ಪ್ರಯಾಣಿಕರ ಗುಂಪಿನಲ್ಲಿ ಅವರಿಗೆ ಎಲ್ಲರೂ ಅಪರಿಚಿತರೆ, ನಿಮ್ಮನ್ನು ಬಿಟ್ಟು. ನಿಮಗೂ ಅಷ್ಟೆ. ನೀವು ಏನನ್ನೂ ಕೊಳ್ಳದಿದ್ದಾಗಲೂ ತಿಂಡಿ ಕಾಫಿ ಮಾರುವ ಹುಡುಗರು ನಿಮ್ಮತ್ತ ಪರಿಚಯದ ಮುಗುಳ್ನಗೆ ಬೀರುವುದು ಇತರ ಪ್ರಯಾಣಿಕರ ಕುತೂಹಲಕ್ಕೆ ಕಾರಣವಾಗಬಹುದು. ಓದುತ್ತ ಕುಳಿತಿರುವಲ್ಲಿಗೇ ಅವರು ತಿಂಡಿ ಕಾಫಿಗಳನ್ನು ಪೂರೈಸುವುದು ನಿಮಗೆ ಪ್ರಿಯವಾಗುವ ಸಂಗತಿಯಾಗಬಹುದು.

ನಿಮ್ಮ ಕೈಯಲ್ಲಿರುವ ಪುಸ್ತಕ ನಿಮ್ಮನ್ನು ಸುತ್ತಲಿನ ಜಂಜಡಗಳಿಂದ ದೂರವಿರಿಸುತ್ತದೆ. ಸಹಪ್ರಯಾಣಿಕರ ಮಾತುಕತೆ, ಜಗಳ, ಸಂಚಾರಿ ದೂರವಾಣಿಯ ಅಬ್ಬರ ಎಲ್ಲಕ್ಕೂ ನೀವು ಹೊರಗಿನವರು. ‘ಕಿವುಡನ ಮಾಡಯ್ಯ ತಂದೆ’ ಎಂದು ನೀವು ಬೇಡದಿದ್ದರೂ ನಿಮಗೆ ಅದರ ಫಲ ದೊರೆತಿರುತ್ತದೆ. ಪುಸ್ತಕವನ್ನು ನೀವು ಕೆಳಗಿರಿಸಿದರೆ ಸಹಪ್ರಯಾಣಿಕರೊಬ್ಬರು ಅದನ್ನು ಕುತೂಹಲದಿಂದ ಕೈಗೆತ್ತಿಕೊಂಡು ನೋಡಬಹುದು. ಆ ಪುಸ್ತಕದ ವಿಷಯದ ಬಗ್ಗೆ ಅವರಿಗಿರುವ ಅಭಿಪ್ರಾಯ, ಪೂರ್ವಾಗ್ರಹಗಳನ್ನು ಆಧರಿಸಿ ಅವರು ನಿಮ್ಮ ಬಗ್ಗೆ ಮೆಚ್ಚುಗೆ, ತಿರಸ್ಕಾರಗಳನ್ನು ಪ್ರದರ್ಶಿಸಬಹುದು.

ಒಮ್ಮೆ ನಾನು ಪಾ.ವೆಂ.ಆಚಾರ್ಯರ ‘ಬ್ರಾಹ್ಮಣ,ಮುಸ್ಲಿಂ ಇತ್ಯಾದಿ ಮತ್ತು ಇತರ ಕತೆಗಳು’ ಎಂಬ ಕಥಾ ಸಂಕಲನವನ್ನು ಓದುತ್ತಿದ್ದೆ. ವಿಕಲಚಿತ್ತಳಂತೆ ತೋರುವ ಮಹಿಳೆಯೊಬ್ಬಳು ನನ್ನ ಕೈಯಲ್ಲಿ ಪುಸ್ತಕವಿದ್ದುದನ್ನು ನೋಡಿ ‘ಓ ಪುಸ್ತಕ!’ ಎಂದು ಕಿರುಚಿ ಅದನ್ನು ಕಿತ್ತುಕೊಂಡು ನೋಡಿದಳು. ‘ಬೆಳಗ್ಗೆ ಬೆಳಗ್ಗೆ ದೇವರಧ್ಯಾನ ಮಾಡುವ ಬದಲು ಇಂಥ ಪುಸ್ತಕವನ್ನು ಓದುತ್ತೀರಲ್ಲ!’ ಎಂದು ಕೂಗಿದಳು. ಅವಳ ಸ್ಥಿತಿಯನ್ನು ಗಮನಿಸಿದ ನಾನು ಉತ್ತರಿಸಲಿಲ್ಲ. ಸಹಪ್ರಯಾಣಿಕರು ಯಾರಿಗೂ ನಾನು ಗೊತ್ತಿಲ್ಲದಿದ್ದರೂ ನಾನು ಏನು ಓದುತ್ತಿದ್ದಿರಬಹುದು ಎಂದು ಅವರು ಕಲ್ಪಿಸಿಕೊಂಡಿರಬಹುದು ಎಂದು ಮುಜುಗರವಾಯಿತು.

ಇನ್ನೊಮ್ಮೆ ಸಹಪ್ರಯಾಣಿಕರ ಮಗುವನ್ನು ನಾನು ಎತ್ತಿಕೊಂಡು ಪ್ರೀತಿಯಿಂದ ಮಾತನಾಡಿಸಿದಾಗ ಮಗುವಿನ ತಂದೆ ತಾಯಿಗಳು ಸಂತೋಷಪಟ್ಟಿದ್ದರು. ಆಮೇಲೆ ನಾನು ಚೀಲದಿಂದ ಬೇರೆ ಭಾಷೆಯ ಪುಸ್ತಕವೊಂದನ್ನು ತೆಗೆದು ಓದುತ್ತಿದ್ದೆ. ಸ್ವಲ್ಪ ಸಮಯದ ಅನಂತರ ತಲೆ ಎತ್ತಿ ನೋಡಿದಾಗ ಸಹಪ್ರಯಾಣಿಕರು ಮಗುವನ್ನೆತ್ತಿಕೊಂಡು ಬೇರೆ ಸ್ಥಳಕ್ಕೆ ಹೋಗಿ ಕುಳಿತಿದ್ದರು! ಬೇರೆ ಭಾಷೆಯ ಪತ್ರಿಕೆಯನ್ನು ಓದುತ್ತಿರುವಾಗ ಆ ಭಾಷೆಯ ಸಹಪ್ರಯಾಣಿಕರು ಸಹಜವಾಗಿಯೇ ತಮ್ಮ ಕುತೂಹಲ, ಮೆಚ್ಚುಗೆಗಳನ್ನು ತೋರಿಸಿರುವುದೂ ಉಂಟು.

ಇಂದು ತಂತ್ರಜ್ಞಾನದ ಪ್ರಗತಿಯಿಂದ ಓದಿಗೆ ಹೊಸ ಹೊಸ ಅನುಕೂಲಗಳು ಲಭ್ಯವಾಗುತ್ತಿವೆ. ಪ್ರಯಾಣದಲ್ಲಿ ಓದುವ ಸುಖಕ್ಕೆ ಪತ್ರಿಕೆ, ಪುಸ್ತಕಗಳು ಅನಿವಾರ್ಯವಲ್ಲ. ನಿಮ್ಮ ಸಂಚಾರಿ ದೂರವಾಣಿಯಲ್ಲಿಯೇ ಅವು ಲಭ್ಯ. ನಿಮ್ಮ ಸಂಗ್ರಹದಲ್ಲಿರುವ ನೂರಾರು ವಿದ್ಯುನ್ಮಾನ ಪುಸ್ತಕಗಳನ್ನು ಅದರಲ್ಲಿ ತುಂಬಿಕೊಂಡು ಹೋಗಿ ಅವನ್ನು ಓದಬಹುದು. ವಿದ್ಯುನ್ಮಾನ ಪತ್ರಿಕೆಗಳು, ಪುಸ್ತಕಗಳನ್ನು ಅಂತರಜಾಲದಿಂದ ನೇರವಾಗಿ ಇಳಿಸಿಕೊಳ್ಳ ಬಹುದು. ಓದುವಾಗ ಮುದ್ರಿತ ಪುಸ್ತಕಗಳಲ್ಲಿ ಮಾಡುವಂತೆ ವಿದ್ಯುನ್ಮಾನ ಪುಸ್ತಕಗಳ ಪುಟಗಳಲ್ಲಿಯೂ ಕೆಳಗೆರೆ, ಗುರುತು, ಟಿಪ್ಪಣಿ ಮೊದಲಾದವನ್ನೂ ಮಾಡಬಹುದು. ಒಂದೇ ಕೊರತೆ ಎಂದರೆ ಪುಟ ತಿರುವಲು ಬೆರಳನ್ನು ಎಂಜಲಿಸಲಾಗುವುದಿಲ್ಲ! ವಿದ್ಯುನ್ಮಾನ ಪುಸ್ತಕಗಳನ್ನು ಓದುವ ಹಲವು ಸಾಧನಗಳು ಈಗ ಇವೆಯಾದರೂ ಅವುಗಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಆಭ್ಯಾಸ ಇನ್ನೂ ವ್ಯಾಪಕವಾಗಿಲ್ಲ. ವಿದ್ಯುನ್ಮಾನ ಓದುವ ಪುಸ್ತಕಗಳಿರುವಂತೆ ಕೇಳುವ ಪುಸ್ತಕಗಳೂ ಲಭ್ಯವಿವೆ. ಅಂದರೆ ಒಂದು ಪುಸ್ತಕವನ್ನು ವ್ಯಕ್ತಿ ಅಥವಾ ಗಣಕಯಂತ್ರ ಓದಿರುವ ಧ್ವನಿವಾಹಿನಿಗಳು ಸಿಗುತ್ತವೆ. ಎಂಪಿ೩ ರೂಪದಲ್ಲಿರುವ ಅವನ್ನು ನಿಮ್ಮ ಎಂಪಿ೩ ಚಾಲಕ, ಐಪಾಡ್ ಅಥವಾ ಸಂಚಾರಿ ದೂರವಾಣಿಗಳಲ್ಲಿ ಹಾಕಿಕೊಂಡು ಕೇಳಬಹುದು.

ಪ್ರಯಾಣದ ಬೇಸರವಾಗದಿರಲೆಂದು ದೂರ ಪ್ರಯಾಣದ ರೈಲುಗಳಲ್ಲಿ ವಿಡಿಯೊ ಪ್ರದರ್ಶನದ ವ್ಯವಸ್ಥೆ ಮಾಡಿದ್ದಾರೆ. ಆದರೆ ವಿಮಾನದಲ್ಲಿರುವಂತೆ ಬೇಕಾದವರು ಮಾತ್ರ ಅದರ ಧ್ವನಿವಾಹಿನಿಯನ್ನು ಕೇಳಿಸಿಕೊಳ್ಳುಲು ಅನುಕೂಲವಾಗುವ ಕಿವಿ-ಗೂಟಗಳನ್ನುಎಲ್ಲ ಪ್ರಯಾಣಿಕರಿಗೂ ಒದಗಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ ಇದು ಹೆಚ್ಚಿನ ಪ್ರಯಾಣಿಕರಿಗೆ ಬಲವಂತ ಮಾಘಸ್ನಾನವಾಗಿದೆ. ಅವರು ಶಾಂತವಾಗಿ ಏನನ್ನಾದರೂ ಯೋಚಿಸುತ್ತ, ಓದುತ್ತ ಅಥವಾ ನಿದ್ದೆಮಾಡುತ್ತ ನೆಮ್ಮದಿಯಿಂದ ಪ್ರಯಾಣ ಮಾಡಲು ಅಡ್ಡಿಯಾಗಿದೆ.

ಪ್ರಯಾಣದ ಸಮಯವನ್ನು ಓದುವುದಕ್ಕೆ ಬಳಸಿಕೊಳ್ಳುವುದರಿಂದ ನಿಮಗೆ ಪ್ರಯಾಣದಲ್ಲಿ ಆಯಾಸ ಬೇಸರಗಳು ಆಗುವುದಿಲ್ಲ. ಓದಿನಲ್ಲಿ ಮಗ್ನರಾಗಿರುವ ನಿಮಗೆ ಪ್ರಯಾಣ ಮುಗಿದುದು ಅರಿವಿಗೆ ಬರುವುದಿಲ್ಲ. ಓದುತ್ತಿರುವಾಗ ನೀವು ಸೂಕ್ಷ್ಮ ಚೇತನವೊಂದರೊಡನೆ ಒಡನಾಡುತ್ತಿರುತ್ತೀರಿ. ಪ್ರಯಾಣ ಮುಗಿದಾಗ ಹೊಸ ಅನುಭವವನ್ನೂ ಅರಿವನ್ನೂ ಪಡೆದ ಉಲ್ಲಾಸ ನಿಮ್ಮದಾಗಿರುತ್ತದೆ. ‘ಸತ್ತವರ ಸಂಗದಲಿ ಹೊತ್ತು ಹೋಗುವುದೆನಗೆ’ ಎಂದು ಕವಿಯೊಬ್ಬರು ಹೇಳಿದ್ದಾರೆ. ಆದರೆ ಓದುವ ಸುಖ ಹೊತ್ತು ಹೋಗುವುದರಿಂದ ಬರುವುದಲ್ಲ; ಸಾವಿಲ್ಲದ ಚೈತನ್ಯವೊಂದರ ಜೊತೆ ಒಡನಾಡಿ ಹೊಸ ಅನುಭವ, ಹೊಸ ಅರಿವು ಪಡೆದುದರಿಂದ ಬರುತ್ತದೆ.
ಸೌಜನ್ಯ: ಮೈಸೂರು ಆಕಾಶವಾಣಿ
_

ಸೈಕಲ್ ಯಾನ

ವೇಗ ಇಂದಿನ ಜನಜೀವನದ ಮುಖ್ಯ ಲಕ್ಷಣ. ಎಲ್ಲರೂ ಸ್ವಂತ ವಾಹನಗಳನ್ನು ಬಳಸಿ ಸಮಯಕ್ಕೆ ಸರಿಯಾಗಿ ತಾವು ತಲುಪಬೇಕಾದ ಸ್ಥಳದಲ್ಲಿರಲು ಬಯಸುತ್ತಾರೆ. ಇದರ ಪರಿಣಾಮವಾಗಿ ಇಂದಿನ ರಸ್ತೆಗಳು ವಾಹನಗಳಿಂದ ಗಿಜಿಗುಡುತ್ತಿವೆ. ಅದರಿಂದ ಎಷ್ಟೊ ವೇಳೆ ಸ್ವಂತ ವಾಹನದಲ್ಲಿ ಹೋಗುವ ಬದಲು ಸಾರ್ವಜನಿಕ ವಾಹನಗಳಲ್ಲಿ ಹೋಗಿದ್ದರೆ ಸಮಯಕ್ಕೆ ಸರಿಯಾಗಿ ತಲುಪಬಹುದಿತ್ತು ಎಂದೂ ಅನಿಸುವುದುಂಟು. ಆದರೂ ವೈಯಕ್ತಿಕ ಬಳಕೆಗೆ ಸೈಕಲ್ ಉಪಯುಕ್ತವಾದ ಎರಡು ಚಕ್ರಗಳ ವಾಹನ. ಅದಕ್ಕೆ ಎರಡು ಚಕ್ರಗಳಿರುವುದರಿಂದ ಆ ಹೆಸರು. ಎರಡು ಚಕ್ರಗಳ ವಾಹನವನ್ನು ಇಂಗ್ಲಿಷಿನಲ್ಲಿ ಬೈ-ಸೈಕಲ್ ಎನ್ನುತ್ತಾರೆ. ೧೯ನೇ ಶತಮಾನದ ಕೊನೆಯಲ್ಲಿ ಬೈಸಿಕಲ್ ಭಾರತಕ್ಕೆ ಬಂದ ಹೊಸದರಲ್ಲಿ ಅದನ್ನು ನಮ್ಮವರು ‘ಬೀಸೆಕಲ್ಲು’ ಎಂದುದನ್ನು ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ದಾಖಲಿಸಿದ್ದಾರೆ. ಅಂದಿಗೆ ಅದು ನವನಾಗರಿಕತೆಯ ಸಂಕೇತವಾಗಿತ್ತು. ಇತ್ತೀಚಿನವರೆಗೆ ಮದುವೆಯಲ್ಲಿ ವರನಿಗೆ ದಕ್ಷಿಣೆಯಾಗಿ ಸೈಕಲ್ಲನ್ನು ಕೊಡುವುದು, ತೆಗೆದುಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿತ್ತು.

ಬೈಸಿಕಲ್ ಮಕ್ಕಳ ಮೊದಲ ವಾಹನ. ಮಗು ಬೆಳೆದು ಸ್ವಲ್ಪ ದೊಡ್ಡದಾಗುತ್ತಿರುವಂತೆ ಅದರ ಶಕ್ತಿಗೆ ನಿಲುಕುವ ವಿವಿಧ ಬಗೆಯ ಸೈಕಲ್ಲುಗಳಿವೆ. ಮೊದಲಿಗೆ ಮೂರು ಚಕ್ರದ ಸೈಕಲ್ ತುಳಿದು ಮುಗಿಸಿದ ಮಗು ಎರಡು ಚಕ್ರದ ಸೈಕಲ್ಲಿಗೆ ತೇರ್ಗಡೆಯಾಗುತ್ತದೆ. ಆರಂಭದಲ್ಲಿ ಮಗುವಿನ ಸೈಕಲ್ಲಿನ ಹಿಂದಿನ ಚಕ್ರದ ಎರಡೂ ಬದಿಗಳಲ್ಲಿ ಆಧಾರವಾಗಿ ಎರಡು ಚಿಕ್ಕ ಚಕ್ರಗಳನ್ನು ಜೋಡಿಸಿರುತ್ತಾರೆ. ಇದರಿಂದ ಮಗುವಿಗೆ ಬೀಳುವ ಭಯವಿಲ್ಲ. ಮಗು ಎರಡು ಚಕ್ರದ ಸೈಕಲ್ಅನ್ನು ತುಳಿಯುವ ಕೌಶಲ ಕಲಿತಂತೆ ಆಧಾರದ ಚಕ್ರಗಳು ಕಾಣೆಯಾಗುತ್ತವೆ. ಮಗುವಿನ ಬೆಳವಣಿಗೆ, ಶಕ್ತಿ ಸಾಮರ್ಥ್ಯಗಳನ್ನು ಆಧರಿಸಿ ಸೈಕಲ್ಲಿನ ಎತ್ತರವೂ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳ ಹಂತದಿಂದಲೇ ಲಿಂಗಾಧಾರಿತ ವ್ಯತ್ಯಾಸಕ್ಕನುಗುಣವಾದ ಸೈಕಲ್ಲುಗಳಿವೆ. ಅವರವರ ಅಗತ್ಯಕ್ಕನುಗುಣವಾದ ಹಿಂಬದಿಯಲ್ಲಿ ಕ್ಯಾರಿಯರ್, ಮುಂದೆ ಹ್ಯಾಂಡಲ್ಲಿಗೆ ಬುಟ್ಟಿ ಇತ್ಯಾದಿ ಹೆಚ್ಚುವರಿ ಸೌಲಭ್ಯಗಳೂ ಇವೆ. ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸಿದ ಎಳೆಯರಿಗೆ ಸೈಕಲ್ಅನ್ನು ತೆಗೆಸಿಕೊಡುವ ಪ್ರೋತ್ಸಾಹ ಇಂದಿಗೂ ಎಲ್ಲ ಮನೆಗಳಲ್ಲಿ ಸಾಮಾನ್ಯವಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿ ಜೀವನ ಮುಗಿಯುವವರೆಗೆ ಸೈಕಲ್ ನಮ್ಮ ಮುಖ್ಯ ವಾಹನವಾಗಿರುತ್ತದೆ. ಆರೋಗ್ಯ, ಹುಮ್ಮಸ್ಸು ನಮ್ಮಲ್ಲಿರುವುದರಿಂದ ಸೈಕಲ್ ತುಳಿಯುವುದು ಕಷ್ಟವೆನಿಸುವುದಿಲ್ಲ. ಇದಕ್ಕೆ ಪೆಟ್ರೋಲ್ ಖರ್ಚು ಇರುವುದಿಲ್ಲ. ವಾಹನದ ಬದಲು ಸವಾರರ ಪೆಟ್ರೋಲಿಗೆ ಆ ಹಣವನ್ನು ಬಳಸಬಹುದು! ಉದ್ಯೋಗಕ್ಕೆ ಸೇರಿದ ಮೇಲೆ ಎಲ್ಲ ಬದಲಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳದಲ್ಲಿರಲು ಸೈಕಲ್ಲಿನ ವೇಗ ಸಾಲುವುದಿಲ್ಲ ಎನಿಸಬಹುದು. ಈಗ ನಾವು ಸಂಪಾದಿಸುತ್ತಿರುವುದರಿಂದ ಪೆಟ್ರೋಲಿನ ಖರ್ಚಿನ ಬಗ್ಗೆ ಚಿಂತಿಸುವುದಿಲ್ಲ. ಸೈಕಲ್ ಜಾಗದಲ್ಲಿ ಸ್ಕೂಟರ್, ಮೋಟರ್ ಸೈಕಲ್ ಬರುತ್ತವೆ. ಸವಾರರೂ ಸೈಕಲ್ ತುಳಿಯುವ ವ್ಯಾಯಾಮವಿಲ್ಲದೆ, ಸೈಕಲ್ಲಿನಂತೆ ಇದ್ದವರು ಸ್ಕೂಟರ್, ಮೋಟರ್ ಸೈಕಲ್ಲುಗಳಂತೆ ಆಗುತ್ತಾರೆ!

ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತವೆ. ಸಾರಿಗೆ ಬಿಕ್ಕಟ್ಟು, ಆರೋಗ್ಯದ ಸಮಸ್ಯೆಗಳೂ ಹೆಚ್ಚುತ್ತವೆ. ಸ್ವಂತವಾಹನವಿದ್ದರೂ ಸಮಯಕ್ಕೆ ಸರಿಯಾಗಿ ಸಂಚರಿಸಲು ಸಾಧ್ಯವಿಲ್ಲದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವ್ಯಾಯಾಮವಿಲ್ಲದೆ ನಮ್ಮ ದೇಹವೇ ನಮಗೆ ಭಾರವೆನಿಸತೊಡಗುತ್ತದೆ.

ನಗರ ಸಾರಿಗೆಯವರು ರಸ್ತೆಯಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆಮಾಡಲು, ಹೆಚ್ಚು ಶುದ್ಧಗಾಳಿಯನ್ನು ಉಸಿರಾಡಲು ತಿಂಗಳಿಗೆ ಒಂದು ದಿನವನ್ನು ‘ಬಸ್ ದಿನ’ವಾಗಿ ಆಚರಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಬಸ್ಸುಗಳಲ್ಲಿ ಸಂಚರಿಸುವಂತೆ ವಿವಿಧ ಪಾಸುಗಳನ್ನು ನೀಡುತ್ತಿದ್ದಾರೆ. ಇದರಿಂದ ರಸ್ತೆಯ ಮೇಲಿನ ವಾಹನಗಳ ದಟ್ಟಣೆ, ಒತ್ತಡಗಳು ಕಡಿಮೆಯಾಗುತ್ತವೆ. ಬಸ್ ಪ್ರಯಾಣಿಕರೂ ಸ್ವಂತ ವಾಹನ ಚಾಲನೆಯ ಹೊಣೆಯ ಆತಂಕವಿಲ್ಲದೆ ಸಂಚರಿಸಬಹುದು.

ಇಂದು ಸೈಕಲ್ಲುಗಳು ಬಹಳಷ್ಟು ಸುಧಾರಿಸಿವೆ. ಸೈಕಲ್ ಸವಾರಿ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಅದಕ್ಕಾಗಿಯೇ ವಿಶೇಷ ಸೈಕಲ್ಲುಗಳೂ ಇವೆ. ಜನರು ಸೈಕಲ್ಅನ್ನು ಬಳಸಿ ತಮ್ಮ ವ್ಯಾಯಾಮದ ಗತಿಯನ್ನು ಮರಳಿ ಕಂಡುಕೊಳ್ಳುತ್ತಿದ್ದಾರೆ. ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದಕ್ಕಲ್ಲವಾದರೂ ವ್ಯಾಯಾಮದ ದಿನಚರಿಯಾಗಿ ಸೈಕಲ್ ಮತ್ತೆ ಸ್ಥಾನವನ್ನು ಗಳಿಸುತ್ತಿದೆ. ಇದಕ್ಕೆ ಸೈಕಲ್ ಗಳ ತಾಂತ್ರಿಕತೆಯ ಸುಧಾರಣೆಯೂ ಕಾರಣವಾಗಿದೆ. ಹಿಂದೆ ಅಪರೂಪವಾಗಿದ್ದ, ಗೇರುಗಳಿರುವ ಸೈಕಲ್ ಗಳು ಇಂದು ಸಾಮಾನ್ಯವಾಗಿವೆ. ವಿದೇಶಗಳಲ್ಲಿ ತಯಾರಾಗುವ ಸೈಕಲ್ಲುಗಳು ಅತಿ ಹಗುರವಾಗಿವೆ. ನಮ್ಮ ದೇಶದಲ್ಲಿ ಗೇರುಗಳಿರುವ ಸೈಕಲ್ಲುಗಳು ತಯಾರಾಗುತಿದ್ದರೂ ಅವು ವಿಪರೀತ ಭಾರದವಾಗಿವೆ. ಈಗ ನಮ್ಮಲ್ಲೇ ಜೇಬಿಗೂ ಹಗುರವಾದ ಸೈಕಲ್ಲುಗಳು ಬಂದಿವೆ

ಹಲವು ಬಗೆಯ ಹಗುರವಾದ ಸೈಕಲ್ಲುಗಳಿವೆ. ಬೆಟ್ಟಗುಡ್ಡಗಳನ್ನು ಹತ್ತುವ ಒರಟು ಬಳಕೆಯ ಸೈಕಲ್ಲುಗಳು; ತುಳಿದು ಸಾಕೆನಿಸಿದರೆ ಮಡಿಸಿ ಕೈಯಲ್ಲಿ ಹಿಡಿದುಕೊಂಡು ಹೋಗಬಲ್ಲ ಅಥವಾ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಬಲ್ಲ ಸೈಕಲ್ಲುಗಳಿವೆ. ನಾನು ಸೈಕಲ್ ಬಳಸುವುದನ್ನು ನಿಲ್ಲಿಸಿದ ನಲವತ್ತು ವರ್ಷಗಳ ಅನಂತರ ಅಂಥದೊಂದು ಮಡಿಸುವ ಸೈಕಲ್ ತೆಗೆದುಕೊಂಡೆ. ಅದರ ಚಕ್ರಗಳು ಚಿಕ್ಕವು. ನಾನು ಅದರಲ್ಲಿ ಹೋಗುವಾಗ, ಅದು ರಸ್ತೆಯಲ್ಲಿ ಹೋಗುವವರ, ವಿಶೇಷವಾಗಿ ಮಕ್ಕಳ, ಗಮನ ಸೆಳೆಯುತ್ತದೆ. ಅವರು ಮೆಚ್ಚುಗೆಯಿಂದ ಅದನ್ನು ನೋಡಿ ಅದರ ಬಗ್ಗೆ ವಿಚಾರಿಸುತ್ತಾರೆ. ಸೈಕಲ್ ಬಗೆಗಿನ ಮಕ್ಕಳ ತಾದಾತ್ಮ್ಯ ಆ ಬಗೆಯದು. ಒಮ್ಮೆ ಕುರುಡು-ಮೂಕ ಮಕ್ಕಳ ಶಾಲೆಯ ಹೊರಗೆ ನನ್ನ ಸೈಕಲ್ ನಿಲ್ಲಿಸಿ ಒಳಗೆ ಹೋಗಿದ್ದೆ. ನಾನು ಹೊರಗೆ ಬಂದಾಗ ಆ ಶಾಲೆಯ ಮಕ್ಕಳು ಸೈಕಲ್ ಅನ್ನು ಮುತ್ತಿ ಮುಟ್ಟಿ, ಪರೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ಸನ್ನೆಗಳ ಮೂಲಕ ವ್ಯಕ್ತಪಡಿಸಿದರು.

ಚಕ್ರ ಒಂದು ಸುತ್ತು ಪೂರ್ಣಗೊಳಿಸಿ ಮತ್ತೆ ಮೊದಲಿನ ಸ್ಥಾನಕ್ಕೆ ಬಂದು ಸುತ್ತನ್ನು ಮುಂದುವರೆಸುವಂತೆ ಇಂದು ನಾವು ಸೈಕಲ್ ಅನ್ನು ಮತ್ತೆ ಬಳಸುವುದು ಹೆಚ್ಚಬೇಕಿದೆ. ಇದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲ್ಲದೆ ರಸ್ತೆಯ ಮೇಲಿನ ಒತ್ತಡ, ಪರಿಸರ ಮಾಲಿನ್ಯಗಳು ಕಡಿಮೆಯಾಗುತ್ತವೆ. ಪೆಟ್ರೋಲಿಗಾಗಿ ಮಾಡುವ ಖರ್ಚಿನಲ್ಲಿ ನಮಗೆ, ದೇಶಕ್ಕೆ ಗಣನೀಯ ಉಳಿತಾಯವಾಗುತ್ತದೆ.

ಇದಕ್ಕಾಗಿ ನಮ್ಮ ನಗರಗಳ ರಸ್ತೆಗಳಲ್ಲಿ ಸುರಕ್ಷಿತ ಸೈಕಲ್ ಸವಾರಿಗಾಗಿ ರಸ್ತೆಯ ಅಂಚಿನ ನಿರ್ದಿಷ್ಟ ಜಾಗವನ್ನು ಮೀಸಲಿರಿಸುವುದು ಕಡ್ಡಾಯವಾಗಬೇಕು. ನಮ್ಮಲ್ಲಿ ದೊಡ್ಡ ವಾಹನಗಳಿದ್ದರೂ ದಿನದಲ್ಲಿ ನಿರ್ದಿಷ್ಟ ಸಮಯವನ್ನು ಸೈಕಲ್ ಸವಾರಿಗೆ ಮೀಸಲಿಡಬೇಕು. ‘ಅವಸರವೂ ಸಾವಧಾನದ ಬೆನ್ನೇರಿ’ದಂತೆ ಸೈಕಲ್ ತುಳಿಯುತ್ತಾ ಚಿಂತನಶೀಲರಾಗಿ ವಿಹರಿಸುವುದು ಸಾಧ್ಯವಾಗಬೇಕು.
ಸೌಜನ್ಯ: ಮೈಸೂರು ಆಕಾಶವಾಣಿ

ಇದನ್ನು ೨೦೧೧ರ ಫಬ್ರುವರಿಯಲ್ಲಿ ಮೈಸೂರು ಆಕಾಶವಾಣಿಗಾಗಿ ಬರೆದಿದ್ದೆ. ಈಗ ಪೆಟ್ರೋಲಿನ ಬೆಲೆ ಜಿಗಿದಿರುವುದರಿಂದ ಹಲವರಾದರೂ ಸೈಕಲ್ ಬಳಸುವ ಕಡೆ ಮನಸ್ಸುಮಾಡಬಹುದು. ಅಮೆರಿಕದಲ್ಲಿ ಸೈಕಲ್ ಅನ್ನು ಬಾಡಿಗೆಗೆ ಕೊಡುವ ಪದ್ಧತಿ ಮತ್ತೆ ಆರಂಭವಾಗಿರುವುದಾಗಿ ಶ್ರೀವತ್ಸ ಜೋಶಿ ಅವರು ತಿಳಿಸಿರುವುದು ಸಂತೋಷದ ಸಂಗತಿ.ಕಾರಣ ಯಾವುದಾದರೂ ಸೈಕಲ್ ಬಳಕೆ ಹೆಚ್ಚುವುದು ಸ್ವಾಗತಾರ್ಹ.

ತೇಜಸ್ವಿ ಮಾಮನ ನೆನಪುಗಳು

ಚಿತ್ರ ಸೌಜನ್ಯ: ಅಂತರಜಾಲ

ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ
೮ ಸೆಪ್ಟೆಂಬರ್೧೯೩೮- ೫ ಏಪ್ರಿಲ್ ೨೦೦೭

ಕೀರ್ತಿಶ್ರೀ ನಾಯಕ

ಇಂದು ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿಯವರು ನಮ್ಮನ್ನು ಅಗಲಿದ ದಿನ.
ಅವರ ನೆನಪು ನಮ್ಮೊಂದಿಗೆ ಚಿರಂತನ.
ಅವರ ಆತ್ಮೀಯರಾದ ಪ್ರೊ ಜಿ ಎಚ್ ನಾಯಕರ ಮಗಳು ಕೀರ್ತಿಶ್ರೀ ನೆನಪಿನಲ್ಲಿ ತೇಜಸ್ವಿ ಹೀಗಿದ್ದಾರೆ.

ನಿಟ್ಟೆಯಿಂದ ಕಾರ್ಕಳ ಮಾರ್ಗವಾಗಿ ಮೈಸೂರಿಗೆ ಬರುವ ಎಲ್ಲ ಮಾರ್ಗಗಳೂ ಹಾಳಾಗಿ ಹೋಗಿರುವುದರಿಂದ ಚಕಿತಳನ್ನು ನಿಟ್ಟೆಯಲ್ಲಿ ಬಿಟ್ಟು ಬರಲು ಹೋದಾಗ ಪ್ರತಿಸಲ ಬೇರೆ ಬೇರೆ ರಸ್ತೆಗಳನ್ನು ಹುಡುಕುವುದು ಮದನ್‌ಗೆ ರೂಢಿಯಾಗಿ ಹೋಗಿದೆ. ಮದನ್ ನನಗಿಂತ ಹೆಚ್ಚು ಆಶಾವಾದಿ. ಈ ರಸ್ತೆ ಅಲ್ಲದಿದ್ದರೆ ಮತ್ತೊಂದು ರಸ್ತೆ ಸರಿ ಇರಬಹುದು ಅಥವಾ ಮುಂದೆ ರಸ್ತೆ ರಿಪೇರಿ ಮಾಡಿರಬಹುದು ಎಂಬ ಆಶಾವಾದದಿಂದಲೇ ಯಾವಾಗಲೂ ಹಾಳಾಗಿಹೋದ ರಸ್ತೆಯಲ್ಲಿ ಡ್ರೈವ್ ಮಾಡುವ ಸ್ಫೂರ್ತಿಯನ್ನು ಉಳಿಸಿಕೊಂಡು ಮುಂದುವರೆಯುವ ಪ್ರವೃತ್ತಿಯುಳ್ಳವರು. ಅಥವಾ ೧೫ ವರ್ಷ ಕಾಲ ತಾನು ದುಡಿದು ಬಿಟ್ಟ ಪಿಡಬ್ಲ್ಯೂಡಿ ವಿಷಯದಲ್ಲಿ ಮಾತನಾಡಲಿಚ್ಛಿಸದೆ ಈ ರೀತಿ ಮಾಡುತ್ತಿರಬಹುದು. ಅಂತೂ ನಮ್ಮ ಪ್ರಯಾಣದ ಅಂತ್ಯದಲ್ಲಿ ನಾವು ಗೊತ್ತಿದ್ದ ರಸ್ತೆಯಲ್ಲೇ ಮರ್ಯಾದೆಯಿಂದ ಬಂದಿದ್ದರೆ ಒಳ್ಳೆಯದಿತ್ತು ಎನ್ನುವ ತೀರ್ಮಾನಕ್ಕೆ ಬಂದರೂ ಮುಂದಿನ ಸಲ ಮದನ್ ಮತ್ತೊಂದು ರಸ್ತೆಯನ್ನು ಹುಡುಕಿಕೊಂಡು ಹೋಗುವುದು ಮಾಮೂಲು. ಇಷ್ಟೆಲ್ಲ ಆದರೂ ಸೋಲದೆ ತನ್ನ ಪ್ರಯತ್ನ ಮುಂದುವರೆಸುತ್ತಿದ್ದುದು ನನಗೆ ರೂಢಿಯಾಗಿ ಹೋಗಿದೆ. ಆದ್ದರಿಂದ ನಾವು ‘ಮೈಸೂರಿಗೆ’,’ಬೇಲೂರಿಗೆ’ ಎಂಬ ಬೋರ್ಡುಗಳನ್ನು ನೋಡುತ್ತಾ ಆಟೋ, ಟ್ಯಾಕ್ಸಿ ಡ್ರೈವರ್‌ಗಳನ್ನು ರಸ್ತೆಯ ಸ್ಥಿತಿಗತಿಯ ಬಗ್ಗೆ ವಿಚಾರಿಸುತ್ತಾ ಪ್ರಯಾಣ ಮುಂದುವರೆಸುತ್ತಿದ್ದಾಗ ಯಾರೊ ಒಬ್ಬ ಪುಣ್ಯಾತ್ಮರು ‘ಸಾರ್, ನೀವು ಕೊಟ್ಟಿಗೆ ಹಾರದವರೆಗೆ ಹೋಗಿ. ಅಲ್ಲಿಂದ ಒಂದೇ ರಸ್ತೆ. ಇದ್ದದ್ದರಲ್ಲಿ ಸ್ವಲ್ಪ ಚೆನ್ನಾಗಿದೆ’ ಎಂದರು. ಸರಿ, ಹಿಂದುಮುಂದು ನೋಡದೆ ನಾವು ಹೊರಟೆವು.
ಮಳೆಗಾಲ ಆಗತಾನೆ ಮುಗಿದಿತ್ತು. ಘಟ್ಟ ಪ್ರದೇಶ ಬೇರೆ. ಒಂದು ಬದಿಯಲ್ಲಿ ಹತ್ಹತ್ತು ಮಾರಿಗೂ ಝರಿಗಳು, ಇನ್ನೊಂದು ಬದಿಗೆ ಎದೆ ಝಲ್ ಎನಿಸುವ ಪ್ರಪಾತಗಳು, ಗುಡ್ಡಗಳು. ನಾವು ಎಲ್ಲಿದ್ದೇವೆಂದು ತಿಳಿಯದಿದ್ದರೂ ಅಷ್ಟಷ್ಟು ಹೊತ್ತಿಗೆ ಕಾರು ನಿಲ್ಲಿಸಿ ಮದನ್ ಫೋಟೊ ತೆಗೆಯುತ್ತಿದ್ದರು. ನಾನು ಆ ದೃಶ್ಯವನ್ನು ನೋಡುತ್ತಾ ನಮ್ಮನ್ನು ಈ ರಸ್ತೆಯಲ್ಲಿ ಕಳುಹಿಸಿದವರಿಗೆ ಮನಸ್ಸಿನಲ್ಲೇ ‘ಥ್ಯಾಂಕ್ಸ್’ ಹೇಳುತ್ತಿದ್ದೆ. ಹೀಗೇ ಬರುತ್ತಿದ್ದಾಗ ಇದ್ದಕ್ಕಿದಂತೆ ರಸ್ತೆಯ ಬದಿಯಲ್ಲಿ ಅಗಲವಾದ ಝರಿಯೊಂದು ಕಣ್ಣಿಗೆ ಬಿತ್ತು. ಅದು ಬಹಳ ಪರಿಚಿತ ಜಾಗ ಎಂದು ಅನಿಸತೊಡಗಿತು. ತಕ್ಷಣ ನನಗೆ ಮತ್ತು ಮದನ್ ಗೆ ಆ ಜಾಗದ ನೆನಪಾಯಿತು. ಚಕಿತ ೫-೬ ತಿಂಗಳ ಮಗುವಾಗಿದ್ದಾಗ ನಾವು ನಮ್ಮ ಊರಾದ ಅಂಕೋಲೆಗೆ ಹೋಗುವಾಗ ತೇಜಸ್ವಿ ಮಾಮನ ಮನೆಗೆ ಹೋಗಿ, ಅಲ್ಲಿಂದ ಚಾರ್ಮಾಡಿಯ ಮೂಲಕ ಡ್ರೈವ್ ಮಾಡುವಾಗ ಚಕಿತ, ಮದನ್‌ರ ಫೋಟೊವನ್ನು ನಾನು ಈ ಜಾಗದಲ್ಲಿ ಕ್ಲಿಕ್ಕಿಸಿದ್ದೆ. ರಸ್ತೆಜ್ಞಾನ ಮತ್ತು ನೆನಪಿನ ಶಕ್ತಿ ವಿಷಯದಲ್ಲಿ ಬಹಳ ದುರ್ಬಲಳಾಗಿರುವ ನನಗೆ ಈ ವಿಷಯ ಹೊಳೆದದ್ದು ನನಗೇ ಬಹಳ ಸೋಜಿಗವಾಯಿತು! ನೆನಪಿನ ಶಕ್ತಿ ಮತ್ತು ರಸ್ತೆ ಜ್ಞಾನ ಜಾಸ್ತಿಯಿದ್ದ ಮದನ್‌ಗೂ ನಾವು ಚಾರ್ಮಾಡಿ ಘಾಟಿಯ ರಸ್ತೆಯಲ್ಲಿದ್ದೇವೆಂದು ಆಗಲೇ ಗೊತ್ತಾಗಿದ್ದು. ಇವೆಲ್ಲ ಗೊಂದಲಗಳಿಂದ ನಾವು ಹೊರಬರುವುದರೊಳಗೆ ‘ಮೂಡಿಗೆರೆ ೧೭ ಕಿಮೀ’ ಎಂಬ ಕಲ್ಲನ್ನು ನೋಡಿದೆವು. ಮೂಡಿಗೆರೆ ಎಂದಾಕ್ಷಣ ನಮಗೆ ತೇಜಸ್ವಿ ಮಾಮ, ರಾಜೇಶ್ವರಿ ಆಂಟಿ ಬಿಟ್ಟು ಬೇರೇನೂ ನೆನಪಾಗುವುದಿಲ್ಲ.
ಆ ಸಂದರ್ಭದಲ್ಲಿ ಆಂಟಿ ಊರಲ್ಲಿಲ್ಲದ್ದರಿಂದ ಅವರ ತೋಟಕ್ಕೆ ಹೋಗದೆ ಬೇಲೂರು ರಸ್ತೆ ಹಿಡಿದೆವು. ದಾರಿಯಲ್ಲಿ ಜನ್ನಾಪುರ, ಗೋಣಿಬೀಡು ಇತ್ಯಾದಿ ಊರುಗಳನ್ನು ನೋಡುತ್ತಿದ್ದಂತೆ ಚಿಕ್ಕವರಿದ್ದದಾಗ ಮಾಮನ ಎರಡನೇ ಮಹಾಯುದ್ಧದ ಕಾಲದ ಜೀಪಿನಲ್ಲಿ ಸುತ್ತಾಡಿದ ನೆನಪುಗಳು. ಜನ್ನಾಪುರದಿಂದ ಹಳೇತೋಟ ‘ಚಿತ್ರಕೂಟ’ಕ್ಕೆ ಮುಖ್ಯರಸ್ತೆ ಬಿಟ್ಟು ರಸ್ತೆಯೇ ಇಲ್ಲದಲ್ಲಿ ರಸ್ತೆ ಮಾಡಿಕೊಂಡು ‘ಕ್ರಾಸ್‌ಕಂಟ್ರಿ ರೇಸ್’ ಥರ ಗುಂಡಿಯಲ್ಲಿ ಇಳಿಯುತ್ತಾ ದಿನ್ನೆ ಹತ್ತುತ್ತಾ ಜೀಪು ಹೋಗುತ್ತಿತ್ತು. ಇದು ೩೦ ವರ್ಷಗಳ ಹಿಂದಿನ ಕತೆ. ವಿಪರ್ಯಾಸ ಅಂದರೆ ೨೧ನೇ ಶತಮಾನದ ಕಂಪ್ಯೂಟರ್ ಯುಗದಲ್ಲೂ ನಮ್ಮ ರಸ್ತೆಗಳು ಅದಕ್ಕಿಂತ ಹಾಳಾಗಿ ಜನ ಅಡ್ಡಾಡುವುದನ್ನು ಕಷ್ಟಕ್ಕೀಡುಮಾಡಿದೆ.
ನಾವು ಚಿತ್ರಕೂಟಕ್ಕೆ ಹೋಗುವ ರಸ್ತೆಯಲ್ಲಿ ಒಂದು ಕಲ್ಲು ಮಂಟಪ ನೋಡಿದ ನೆನಪು. ನಾನಾಗ ೬-೭ನೇ ಕ್ಲಾಸಿನಲ್ಲಿದ್ದುದರಿಂದ ಹೊಯ್ಸಳರ ಬಗ್ಗೆ ಸ್ವಲ್ಪ ತಿಳಿದಿತ್ತು. ಹಾಗಾಗಿ ಆ ಕಲ್ಲಿನ ಮಂಟಪದಲ್ಲೇ ಸಳ ಹುಲಿಯನ್ನು ಹೊಡೆದದ್ದೆಂದು ನನ್ನ ಮನಸ್ಸಿಗೆ ಬಂದಿತ್ತು. ಇದರ ಜೊತೆ ಮಾಮ ನನಗೆ ಒಂದು ತುಕ್ಕುಹಿಡಿದ ಕತ್ತಿಯನ್ನು ತೋರಿಸಿ ಈ ಮನೆಯ ಪಾಯ ತೆಗೆಯುವಾಗ ಸಿಕ್ಕಿದ್ದು ಎಂದು ಹೇಳಿದ್ದರು. ಹಾಗಾಗಿ ‘ಚಿತ್ರಕೂಟ’ ನನಗೆ ಹೊಯ್ಸಳರ ಸಾಮ್ರಾಜ್ಯವಾಗಿಯೂ ಅದರಲ್ಲಿ ನಾವೆಲ್ಲ ಒಂದೊಂದು ಪಾತ್ರಗಳಾಗಿಯೂ ನನ್ನ ಮನದಲ್ಲಿ ತರಹಾವರಿ ಕತೆಗಳು ಹೆಣೆದುಕೊಳ್ಳುತ್ತಿದ್ದವು!
‘ಚಿತ್ರಕೂಟ’ದ ಮನೆ, ತೋಟ ‘ನಿರುತ್ತರ’ಕ್ಕಿಂತ ಬಹಳ ಚೆನ್ನಾಗಿತ್ತು. ಜನಸಂಪರ್ಕವೇ ಇಲ್ಲದ ಕಾರಣ ಅಲ್ಲಿ ಎಲ್ಲರೂ ಅವರವರ ಪ್ರಪಂಚದಲ್ಲಿ ವಿಹರಿಸುತ್ತಿದ್ದೆವು. ಬೆಳಗ್ಗೆ ತೆಗೆದ ಫೋಟೊಗಳನ್ನು ಮಾಮ ಡೆವೆಲಪ್ ಮಾಡಲು ಡಾರ್ಕ್ ರೂಂ ಒಳಗೆ ಸೇರಿದರೆ ನಾನು, ಸುಸ್ಮ, ಈಶ ಏನಾದರೂ ಮಾಡುತ್ತಾ ಅಂಗಳದಲ್ಲಿರುತ್ತಿದ್ದೆವು. ಆಂಟಿ ಅಡಿಗೆ ಮತ್ತು ಬೇರೆ ಕೆಲಸಗಳಲ್ಲಿ ತೊಡಗಿರುತ್ತಿದ್ದರು. ಹೀಗಿರುವಾಗ ಒಮ್ಮೆ ಸುಸ್ಮಿತ ಮೈಸೂರಿನ ನಮ್ಮ ಯೂನಿವರ್ಸಿಟಿ ಕ್ವಾರ್ಟರ್ಸ್ ಗೆ ಕಳ್ಳ ಬಂದ ಪ್ರಕರಣವನ್ನು ಈಶಳಿಗೆ ವಿವರಿಸುತ್ತಿದ್ದಳು. ಈಶ ಆಗಿನ್ನೂ ೪-೫ ವರ್ಷದವಳಿರಬಹುದು. ಸುಸ್ಮಿತ ಹೇಳಿದ್ದೆಲ್ಲವನ್ನೂ ತದೇಕಚಿತ್ತದಿಂದ ಕೇಳಿದ ಈಶ ಸುಸ್ಮಿತಳ ಕತೆ ಮುಗಿದನಂತರ ಅಳಲು ಪ್ರಾರಂಭಿಸಿದಳು. ನನಗೆ ಏಕೆ ಎಂದು ತಿಳಿಯಲೇ ಇಲ್ಲ. ನಾನು ಈಶಳನ್ನು ಸಮಾಧಾನ ಮಾಡುತ್ತಾ ಯಾಕೆ ಈಶ ಅಳ್ತಿದ್ದೀಯಾ?’ ಅಂತ ಕೇಳಿದ್ದೇ ಶುರು ಮಾಡಿದಳು, ‘ನೀವೆಲ್ಲಾ ಪೇಟೆಲ್ಲಿದ್ದಿರ, ನಿಮಗೆ ಎಷ್ಟು ಮಜಾ, ಕಳ್ಳರೆಲ್ಲ ನೋಡೋಕೆ ಸಿಕ್ತಾರೆ! ನಮಗೆ ಈ ತೋಟದ ಯಾರೂ ಸಿಗಲ್ಲ!’ ಅವಳ ಮಾತು ಕೇಳಿ ನನಗೊ ನಗು ಎಂದರೆ ನಗು. ಸುಸ್ಮಾ ಅವಳಿಗಿಂತ ೨-೩ ವರ್ಷ ದೊಡ್ಡವಳಾದ್ದರಿಂದ ಅವಳಿಗೆ ತಾನೇನೋ ಹೊಸ ವಿಷಯ ಹೇಳಿದೆ ಎಂಬ ಹೆಮ್ಮೆ. ಮಾರನ ಹತ್ತಿರ ದೆವ್ವಚೂಡಿಗಳ ಕತೆ ಕೇಳುವುದು ಸಾಮಾನ್ಯವಾಗಿದ್ದರಿಂದ ಈಶ ಕಳ್ಳನನ್ನು ಸೂಪರ್ ಮ್ಯಾನ್ ಥರ ಕಲ್ಪಿಸಿಕೊಂಡಿದ್ದಳು.
ನಾವು ಇಂಥವೇ ಏನೋ ಪ್ರಕರಣಗಳಲ್ಲಿ ಮುಳುಗಿರುವಾಗ ಮಾರ ನಮ್ಮ ಸಂಗಾತಿಯಾಗಿರುತ್ತಿದ್ದ. ಆತ ೮೦-೯೦- ವರ್ಷದ ಮುದುಕ. ಕಲ್ಪನೆಯ ಕತೆ ಹೇಳುವುದರಲ್ಲಿ ಮಕ್ಕಳಾದ ನಮಗಿಂತ ಅವನೇ ಬಲವಾಗಿದ್ದ. ಒಮ್ಮೆ ದೊಡ್ಡದಾಗಿ ಉಸಿರು ಬಿಡುತ್ತಾ ದುಡುದುಡು ಬರುತ್ತಿದ್ದ ಮಾರನನ್ನು ನೋಡಿ ಸುಸ್ಮ, ಈಶ ‘ಏನಾಯಿತೋ ಮಾರ?’ ಎಂದದ್ದೇ ತಡ ಅವನ ಮೋಹಿನಿಯ ಹೊಸ ಕತೆ ಬಿಚ್ಚಿಕೊಂಡಿತ್ತು. ಅವನ ಕತೆ ಕೇಳಲು ನಮಗೂ ಬಹಳ ಇಷ್ಟವಾದ್ದರಿಂದ ನಾವು ಮೂವರೂ ಅವನ ಸುತ್ತ ನಿಂತು ಅವನ ‘ದೃಶ್ಯಕಾವ್ಯ’ವನ್ನು ಕೇಳಿ, ನೋಡಿ ನಲಿಯುತ್ತಿದ್ದೆವು. ಹೊಸ ಕತೆಯ ವಸ್ತು ‘ಎಲೆಕ್ಟ್ರಿಕ್ ವೈರ್ ರಸ್ತೆ ಬದಿಗೆ ಬಿದ್ದಿದ್ದು’. ಪಾಪ ಶನಿವಾರ ಬಟವಾಡೆ ತೆಗೆದುಕೊಂಡು ಗೋಣಿಬೀಡಿನ ಸಂತೆಗೋ ಎಲ್ಲಿಗೋ ಮಾರ ಹೋಗಿದ್ದ. ವಾಪಸ್ ತೋಟಕ್ಕೆ ಬರುವಾಗ ಕರೆಂಟ್ ವೈರೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಮಾರನಿಗೆ ಅದನ್ನು ದಾಟಿ ಬರುವುದೇ ಒಂದು ದೊಡ್ಡ ಸವಾಲಾಗಿತ್ತಂತೆ. ಅವನನ್ನು ಕರೆಂಟ್ ಎಳೆದುಕೊಳ್ಳುತ್ತಿದ್ದರೂ ಅದನ್ನು ಲೆಕ್ಕಿಸದೆ ಸಾವಿನೊಂದಿಗೆ ಸೆಣೆಸಿ ಗೆದ್ದು ಮಾರ ನಮ್ಮ ಮುಂದೆ ಪ್ರತ್ಯಕ್ಷನಾಗಿದ್ದ. ಅವನ ಪ್ರಕಾರ ಕರೆಂಟ್ ಕೂಡ ಒಂದು ದೆವ್ವ ಇದ್ದಂತೆ. ನಾವೆಲ್ಲ ಮಾರನ ಸಾಹಸಗಾಥೆಯನ್ನು ತನ್ಮಯತೆಯಿಂದ ಕೇಳುತ್ತಿದ್ದರೆ ಅಲ್ಲೆ ಇದ್ದ ಮಾಮ ಕತೆಯ ಕೊನೆಯಲ್ಲಿ, ‘ಅವನನ್ನು ದೂಡಿದ್ದು, ಎಳೆದದ್ದು ಕರೆಂಟ್ ಅಲ್ಲ ಕಣ್ರಿ ಅವನ ಹೊಟ್ಟೆಯೊಳಗಿರೋ ಸೇಂದಿ’ ಎಂದು ನಮ್ಮನ್ನು ಈ ಲೋಕಕ್ಕೆ ತಂದಿದ್ದರು.
ನಾನು ೫-೬ನೇ ಕ್ಲಾಸಿನಲ್ಲಿದ್ದಾಗ ಮಾಮನ ‘ಪಕ್ಷಿ ವೀಕ್ಷಣೆ'(ಬರ್ಡ್ ವಾಚಿಂಗ್)ಶಿಖರದಲ್ಲಿತ್ತು. ಒಮ್ಮೆ ಕ್ವಾರ್ಟರ್ಸ್ ನ ನಮ್ಮ ಮನೆಯ ಕಿಟಕಿಯಲ್ಲಿ ಚಂದದ ಹಕ್ಕಿಯೊಂದು ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು.

ಆ ಸಂದರ್ಭದಲ್ಲಿ ನಾವೆಲ್ಲ ಶಾಲೆಗೆ ಹೋಗುವ ಮುಂಚೆ ಮಾಮ ನಮ್ಮ ಮನೆಗೆ ಬಂದು ಆ ಹಕ್ಕಿಯ ಚಲನವಲನ ಅಭ್ಯಸಿಸಲು ಪ್ರಾರಂಭಿಸಿದರೆ ನಾವು ಮನೆಸೇರಿ ಎಷ್ಟೋ ಹೊತ್ತಿನ ಮೇಲೆ, ಹಕ್ಕಿ ಗೂಡು ಸೇರಿದ ಮೇಲೆ, ಅಲ್ಲಿಂದ ಹೊರಬರುತ್ತಿದ್ದರು. ಎಷ್ಟೋ ಸಲ ಮೀರಕ್ಕ ಅವರಿಗೆ ತಿನ್ನಲು ಇಟ್ಟುಹೋಗಿರುತ್ತಿದ್ದ ತಿಂಡಿ, ಊಟ ಹಾಗೇ ಇರುತ್ತಿತ್ತು. ಎಷ್ಟೋ ದಿನಗಳಾದ ಮೇಲೆ ಒಂದು ರಜಾ ದಿನದಂದು ನನಗೆ, ಸುಸ್ಮಾಗೆ ‘ಏನೋ ತೋರಿಸುತ್ತೇನೆ ಬನ್ರೆ’ ಎಂದರು. ನಾವು ಓಡಿಬಂದು ಡೈನಿಂಗ್ ಟೇಬಲ್ ನ ಕುರ್ಚಿ ಎಳೆದುಕೊಂಡು ಕೂತೆವು. ನೋಡ್ತಿವಿ, ಮಾಮನ ಕೈನಲ್ಲಿ ಆ ಹಕ್ಕಿಯ ಮೊಟ್ಟೆಗಳು! ಅವನ್ನು ನೋಡಿ ನಾನು ‘ಮಾಮ ಮನುಷ್ಯರು ಮೊಟ್ಟೆನ ಮುಟ್ಟಿದರೆ ಆ ಹಕ್ಕಿ ಮೊಟ್ಟೆ ಮರಿ ಎಲ್ಲ ಬಿಟ್ಟು ಹಾರಿಹೋಗುತ್ತೆ, ಆಮೇಲೆ ಅವೆಲ್ಲ ಸತ್ತುಹೋಗುತ್ತವೆ. ನೀವ್ಯಾಕೆ ಅವನ್ನ ತೆಗೆಯೋಕೆ ಹೋದ್ರಿ’ ಎಂದೆ. ಅದಕ್ಕೆ ಮಾಮ, ಅದೇನೂ ಆಗಲ್ಲ ತಡಿ ಎಂದು ಒಂದು ಗುಂಡು ಸೂಜಿಯಿಂದ ಮೊಟ್ಟೆಯ ಓಡನ್ನು ನಿಧಾನವಾಗಿ ಬಹಳ ಸೂಕ್ಷ್ಮವಾಗಿ ಬಿಡಿಸಿದರು. ಎಷ್ಟೋ ಹೊತ್ತು ನಾವು ಕಾದ ಮೇಲೆ ಜೀವವಿರುವ ಪುಟ್ಟ ಮರಿಗಳು ಮೊಟ್ಟೆಗಳಿಂದ ಹೊರಬಂದವು. ತೇಜಸ್ವಿ ಮಾಮನಿಗೆ ಇಷ್ಟೊಂದುತಾಳ್ಮೆ ಇದೆ ಎಂದು ನನಗೆ ಅಲ್ಲಿಯವರೆಗೂ ಗೊತ್ತೇ ಇರಲಿಲ್ಲ. ಅನಂತರ ಆ ಮರಿಗಳನ್ನು ಅದರ ಗೂಡಿಗೆ ವಾಪಸ್ಸು ಹಾಕಿದೆವು. ಮರಿಗಳು ದೊಡ್ಡವಾಗುವವರೆಗೆ ಆ ಗೂಡಿನಲ್ಲಿದ್ದು ಆಮೇಲೆ ಹಾರಿಹೋದವು.
ಈ ನಡುವೆ ಮಾಮ ತಾವು ತೆಗೆದ ಆ ಹಕ್ಕಿಗಳ ಒಂದು ರಾಶಿ ಫೋಟೊಗಳನ್ನು ನಮ್ಮ ಮುಂದೆ ತಂದು ಹಾಕಿದರು. ಓದು ಬರಹ ಮಾತ್ರ ನಮ್ಮ ಜ್ಞಾನವನ್ನು ವಿಸ್ತರಿಸುವುದಿಲ್ಲ ಚಿಕ್ಕಚಿಕ್ಕ ವಿಷಯಗಳಲ್ಲಿನ ನಮ್ಮ ಆಸಕ್ತಿ ನಮ್ಮ ಜ್ಷಾನ ಭಂಡಾರವನ್ನು ವಿಸ್ತರಿಸುತ್ತದೆ ಎನ್ನುವುದನ್ನು ತೇಜಸ್ವಿ ಮಾಮನನ್ನು ನೋಡಿ ಕಲಿತೆ.
ನಾನು ದೊಡ್ಡವಳಾದಂತೆ ಮಾಮನಿಗಿರುವ ಅಪಾರ ತಾಳ್ಮೆಯ ಅರಿವಾಗುತ್ತಾ ಹೋಯಿತು. ಒಮ್ಮೆ ಚಿತ್ರಕೂಟದಲ್ಲಿ ಮಾಮ ನನ್ನ ಫೋಟೊ ತೆಗೆದರು. ಅನಂತರ ಅದನ್ನು ಡೆವೆಲಪ್ ಮಾಡಲು ಡಾರ್ಕ್ ರೂಮ್ ಗೆ ಹೋಗುವಾಗ ‘ನೀನೂ ಬಾರೆ’ ಎಂದರು. ನನಗೂ ಅವರು ಅಲ್ಲಿ ಏನು ಮಾಡುತ್ತಾರೆ ಎಂಬ ಕುತೂಹಲವಿದ್ದುದರಿಂದ ಮೆತ್ತಗೆ ಡಾರ್ಕ್ ರೂಮಿನೊಳಗೆ ನುಸುಳಿದೆ. ಅಲ್ಲಿ ಮಾಮ ಮೌನವಾಗಿ ಕೆಲಸಮಾಡುತ್ತಿದ್ದರೆ ನೋಡುತ್ತಾ ನಿಂತ ನಾನೂ ತುಟಿಪಿಟಕ್ ಅನ್ನಲಿಲ್ಲ. ನನ್ನ ಪ್ರಕಾರ ಡಾರ್ಕ್ ರೂಮಿನಲ್ಲಿ ಮಾತಾಡಬಾರದು, ಇದೂ ಒಂದು ಕ್ರಿಯೇಟೀವ್ ವರ್ಕ್ ಆದ್ದರಿಂದ ಮಾಮನ ಏಕಾಗ್ರತೆಗೆ ಭಂಗತರಬಾರದು ಎಂಬ ಭಾವನೆ. ಪೂರ್ತಿ ಚಿತ್ರ ಪ್ರಿಂಟ್ ಆದ ಮೇಲೆ ಮಾಮನಿಗೆ ಆ ಫೋಟೊ ಬಹಳ ಖುಷಿಕೊಟ್ಟಿತು. ‘ಏ ಕೀರ್ತಿ, ನೋಡೆ ಇಲ್ಲಿ. ಎಷ್ಟು ಟ್ರಿಮ್ ಆಗಿದೆ’ ಎಂದರು. ಆ ಫೋಟೊ ನೋಡಿ ನನಗೆ ಪಿಚ್ಚೆನಿಸಿತು.
ನಾನು ತಲೆಸ್ನಾನಮಾಡಿ ಕೂದಲು ಒಣಗಿಸಲೆಂದು ಬಿಸಿಲಿಗೆ ಬಂದು ನಿಂತಾಗ ಮಾಮ, ಬಾಳ ಚೆನ್ನಾಗಿದೆ ಎಂದು ತೆಗೆದ ಫೋಟೊ ಅದು. ನಮಗೆ ಫೋಟೊ ಎಂದರೆ ಅಪರೂಪ. ಆದ್ದರಿಂದ ಹೊಸ ಬಟ್ಟೆ ಹಾಕಿಕೊಂಡು ಅಟೆನ್ ಷನ್ ಪೊಸಿಷನ್ ನಲ್ಲಿ ನಿಂತು ಫೋಟೊ ತೆಗೆಸಬೇಕು. ಇದರ ಜೊತೆ ನನ್ನ ಕೂದಲು ಸ್ವಲ್ಪ ಭಾಗ ಬಿಳಿ, ಸ್ವಲ್ಪ ಕಪ್ಪಗಿತ್ತು. ಇದು ಯಾಕೆಂದು ತಿಳಿಯದೆ ನಾನು ತಬ್ಬಿಬ್ಬಾಗಿದ್ದೆ. ಅನಂತರ ಮಾಮ ಬೆಳಕಿನ ವೇರಿಯೇಷನ್ ನಿಂದಾಗಿ ಈ ಕಪ್ಪು-ಬಿಳುಪು ಚಿತ್ರ ಎಷ್ಟು ಚೆನ್ನಾಗಿ ಬಂದಿದೆ ಎಂದು ವಿವರಿಸಿದರು. ಆದರೆ ಆಗ ನನಗೇನೂ ಅದು ಅರ್ಥವಾಗಲಿಲ್ಲ.
ನನ್ನ ಫೋಟೊ ಡೆವೆಲಪ್ ಮಾಡುವಾಗಲೇ ಟೇಲರ್ ಬರ್ಡ್ ನ ಗೂಡಿನ ಒಂದೆರಡು ಫೋಟೊಗಳನ್ನು ಮಾಮ ಡೆವೆಲಪ್ ಮಾಡುತ್ತಿದ್ದುದನ್ನು ನೋಡಿ ನಾನು ‘ಮಾಮ ಇದು ಎಲ್ಲೀ ಫೋಟೊ?’ ಎಂದೆ. ಮಾಮ ಆ ಸಂದರ್ಭದಲ್ಲಿ ಟೇಲರ್ ಬರ್ಡ್ ನ ಚಿತ್ರ ತೆಗೆಯುವ ಸಲುವಾಗಿ ಒಂದು ಹೈಡ್ ಔಟನ್ನು ತಯಾರಿಮಾಡಕೊಂಡು ಫೋಟೊ ತೆಗೆಯಲು ಪ್ರಾರಂಭಿಸಿಕೊಂಡಿದ್ದ ಸುದ್ದಿ ಹೇಳಿದರು. ಅವರು ಹೇಳಿದ ಈ ‘ಹೈಡ್ ಔಟ್’ ಸುದ್ದಿ ಏನೆಂದು ತಿಳಿಯದಿದ್ದರೂ ಬಹಳ ಕುತೂಹಲಕಾರಿಯಾಗಿತ್ತು. ಆದರೂ ಯಾರನ್ನೇ ಆಗಲಿ ‘ನಾನೂ ಮಾಡಲಾ’ ‘ನಾನೂ ಬರ್ಲಾ’ ಎಂದು ಕೇಳಿ ಗೊತ್ತೇ ಇರದ ನಾನು ಮಾಮ ಹೇಳಿದ್ದನ್ನು ಸುಮ್ಮನೆ ಕೇಳಿಸಿಕೊಂಡೆ. ಅನಂತರ ಮಾಮನೆ ‘ನಾಳೆ ಬೆಳಗ್ಗೆ ನಾನು ಆ ಜಾಗಕ್ಕೆ ಹೋಗುವಾಗ ನಿನ್ನನ್ನು ಕರಕೊಂಡು ಹೋಗ್ತೀನಿ, ಆದರೆ ಈ ವಿಷಯ ಸುಸ್ಮ, ಈಶಂಗೆ ಹೇಳ್ಬೇಡ’ ಎಂದರು. ನನಗೆ ಇದೇನೊ ದೊಡ್ಡ ‘ಸೀಕ್ರೆಟ್ ಮಿಷನ್’ ತರಹ ಅನ್ನಿಸಿತು. ಮಾರನೇ ದಿನ ಬೆಳಗ್ಗೆ ಮಾಮನ ಜೊತೆ ಸುಸ್ಮ, ಈಶ ಏಳುವ ಮೊದಲೇ ಆ ಜಾಗಕ್ಕೆ ಹೋಗಿ ನೋಡ್ತೀನಿ, ಒಂದು ತಾಳೆ ಚಾಪೆಯನ್ನು ಗೋಲಕ್ಕೆ ಸಿಲಿಂಡರಿನಾಕಾರದಲ್ಲಿ ನಿಲ್ಲಿಸಿತ್ತು. ಅದರೊಳಗೆ ಒಬ್ಬರೇ ನುಸುಳಬಹುದಿತ್ತು. ಮೆಲ್ಲಗೆ ಶಬ್ದ ಮಾಡದೇ ಮಾಮ ನುಸುಳಿದರು. ಅವೆ ಹಿಂದೆ ನಾನು ಮುದುರಿಕೊಂಡು ನಿಂತೆ. ಆ ಚಾಪೆಯ ಮಧ್ಯೆ ಕ್ಯಾಮೆರಾಲೆನ್ಸ್ ಹೋಗುವಷ್ಟು ಜಾಗವನ್ನು ಚೌಕಾಕಾರವಾಗಿ ಕತ್ತರಿಸಲಾಗಿತ್ತು. ಕ್ಯಾಮೆರಾವನ್ನು ಆ ಚೌಕದಲ್ಲಿ ತೂರಿಸಿ ಮಾಮ ಸ್ವಲ್ಪ ಹೊತ್ತು ಮಾತುಕತೆ ಇಲ್ಲದೆ ಲೆನ್ಸಿನ ಮೂಲಕ ನೋಡಿದರು. ನನಗೋ ಜೋರಾಗಿ ಉಸಿರಾಡಲೂ ಭಯ. ಸುಸ್ಮ ಈಶರನ್ನು ಇಲ್ಲಿಗೆ ಏಕೆ ಕರೆದುಕೊಂಡು ಬರಲಿಲ್ಲ ಎಂಬುದು ಈಗ ಅರ್ಥವಾಯಿತು.
ಸ್ವಲ್ಪ ಹೊತ್ತಿನ ಅನಂತರ ಮಾಮ ಮೆಲುದನಿಯಲ್ಲಿ ಹಕ್ಕಿ ಆಹಾರ ತರಲು ಹೊರಹೋಗಿರುವ ವಿಷಯ ಹೇಳಿ ನನಗೆ ಲೆನ್ಸ್ ಮೂಲಕ ಅದರ ಗೂಡನ್ನು ತೋರಿಸಿದರು. ಹಕ್ಕಿ ವಾಪಸ್ ಬಂದಾಗ ನಾವು ಯಾವುದೇ ತರಹದ ಸದ್ದು ಮಾಡಿದರೂ ಹಕ್ಕಿ ಹಾರಿಹೋಗಿ ಮತ್ತೆ ಈ ಗೂಡಿಗೆ ವಾಪಸ್ ಬರುವುದಿಲ್ಲವೆಂಬ ವಿಷಯವನ್ನೂ ಹೇಳಿದರು. ಆಗ ಉಸಿರು ಬಿಗಿ ಹಿಡಿದು ನಿಂತ ನಾನು ಮಧ್ಯಾಹ್ನ ಮಾಮನ ಕೆಲಸ ಮುಗಿಯುವವರೆಗೂ ಅಲ್ಲಾಡಲೂ ಹೆದರಿ ಹಾಗೇ ನಿಂತಿದ್ದೆ. ಕೆಲಸ ಮುಗಿಸಿ ವಾಪಸ್ ಹೋಗುವಾಗ ಹೈಡ್ ಔಟನ್ನುಹೇಗೆ ಹಕ್ಕಿಗೆ ರೂಢಿಮಾಡಿಸಬೇಕು, ಇಲ್ಲದಿದ್ದರೆ ಹಕ್ಕಿ ಹೆದರಿ ಹೇಗೆ ಹಾರಿ ಹೋಗುತ್ತದೆ ಎಂಬ ಬಗ್ಗೆ ಹೇಳುತ್ತಿದ್ದಾಗ ಋಷಿ ಮುನಿಗಳು ಕಣ್ಣುಮುಚ್ಚಿ ಒಂದೆಡೆ ಕುಳಿತು ಮಾಡುವುದಷ್ಟೇ ತಪಸ್ಸಲ್ಲ, ಮಾಮ, ಅಪ್ಪ ಎಲ್ಲಾ ಒಂದೊಂದು ಬಗೆಯ ತಪದಲ್ಲಿರುತ್ತಾರೆ ಎನಿಸಿತು.
‘ಚಿತ್ರಕೂಟ’, ‘ನಿರುತ್ತರ’ಗಳಲ್ಲಿ ಐದೂವರೆ-ಆರಕ್ಕೆಲ್ಲಾ ಕತ್ತಲಾಗಿ ಹೋಗುತ್ತಿತ್ತು. ಆಗ ನಾವೆಲ್ಲ ಮನೆಯೊಳಗೆ ಸೇರಿಕೊಂಡು ಆಂಟಿ ಏನಾದರೂ ಕೆಲಸ ಮಾಡುತ್ತಿದ್ದರೆ ಅದನ್ನು ನೋಡುತ್ತಾ ಇಲ್ಲ ಮಾಮನ ರೂಂನಲ್ಲಿ ಹಕ್ಕಿ ಚಿತ್ರ ನೋಡುತ್ತಲೊ ಕಾಲ ಕಳೆಯುತ್ತಿದ್ದೆವು. ಒಮ್ಮೊಮ್ಮೆ ಮಾಮನಿಗೆ ಮೂಡ್ ಬಂದರೆ ಸಿತಾರ್ ಹಿಡಿದುಕೊಂಡು ನಾವಿದ್ದಲ್ಲಿಗೆ ಬಂದು ಕುವೆಂಪು ಭಾವಗೀತೆಗಳನ್ನು ಅವರು ನುಡಿಸಿದಂತೆ ಹಾಡಲು ನನಗೆ ಹೇಳುತ್ತಿದ್ದರು. ಅನಂತರ ಬೇರೆ ಬೇರೆ ಸ್ವರಗಳನ್ನು ಪ್ರಯೋಗಿಸಿ ನೋಡಿ ಅವರಿಗೆ ಖುಷಿಕೊಟ್ಟ ಟ್ಯೂನ್ ಗಳನ್ನು ನಾನು, ಸುಸ್ಮ, ಈಶ ಹಾಡುತ್ತಿದ್ದೆವು. ಹೀಗೆ ಕುವೆಂಪು ಅವರ ೨-೩ ಭಾವಗೀತೆಗಳಿಗೆ ಮಾಮ ಟ್ಯೂನ್ ಹಾಕಿಕೊಟ್ಟಿದ್ದರು.
ನಾನು ೭-೮ನೇ ಕ್ಲಾಸಿನಲ್ಲಿದ್ದಾಗೊಮ್ಮೆ ಮಾಮ ಬೆಳಗ್ಗೆ ನಮ್ಮ ಮನೆಗೆ ಬಂದವರು ‘ಏ ಕೀರ್ತಿ ನಡಿಯೆ’ ಎಂದರು. ನನ್ನ ಪ್ರತಿಯೊಂದು ನಡೆಗೂ ಆ ಕಾಲದಲ್ಲಿ ಮೀರಕ್ಕನ ಪರ್ಮಿಷನ್ ಬೇಕಿರುತ್ತಿತ್ತು. ಆದರೆ ಮಾಮ ಕರೆದರೆ ಮೀರಕ್ಕ ಏನೂ ಮಾತಾಡುವಂತಿರಲಿಲ್ಲ ಅನ್ನೋದು ನನಗೆ ಗೊತ್ತಿತ್ತು. ಆದ್ದರಿಂದ ಮೀರಕ್ಕನಿಗೆ ನಾನು ತೇಜಸ್ವಿ ಮಾಮನ ಜೊತೆ ಹೋಗ್ತಿರೋ ವಿಷಯನ ತಿಳಿಸಿ ಪರ್ಮಿಷನ್ ಗೆ ಕಾಯದೆ ಓಡಿಹೋಗಿ ಜೀಪ್ ಹತ್ತಿದೆ. ಯಾವಾಗಲೂ ಮಾಮನಿಗೆ ಎಲ್ಲಿಗೆ, ಏನು ಎಂಬ ಪ್ರಶ್ನೆಗಳು ಬಹಳ ಕಿರಿಕಿರಿಯನ್ನುಂಟು ಮಾಡುತ್ತಿದ್ದವು. ಅದಕ್ಕಾಗಿ ನಾನು ಯಾವತ್ತೂ ಆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ.
ನಾವು ನೇರವಾಗಿ ಕೃಷ್ಣಾ ಬೇಕರಿಗೆ ಹೋದೆವು. ಅಲ್ಲಿ ಒಂದು ರಾಶಿ ತಿಂಡಿ ತೆಗೆದುಕೊಂಡು ಮುಂದೆ ಹೋದೆವು. ಅದೆಲ್ಲಿ ಅಂತ ನನಗೆ ಈವತ್ತಿಗೂ ಗೊತ್ತಿಲ್ಲ. ಸ್ವಲ್ಪ ದೂರ ಮುಖ್ಯ ರಸ್ತೆಯಲ್ಲಿ ಹೋಗಿ ಅನಂತರ ಮಣ್ಣು ರಸ್ತೆಗೆ ಹೋದೆವು. ಮಳೆ ಬಂದು ನಿಂತಿದ್ದರಿಂದ ನಮ್ಮ ಜೀಪ್ ಟೈರ್ ಜಾರುತ್ತಿತ್ತು. ನಮ್ಮ ಜೀಪ್, ಮಾರ ಕುಡಿದಾಗ ತೂರಾಡಿದಂತೆ ತೂರಾಡುತ್ತಾ ಮುಂದೆ ಹೋಗುತ್ತಿತ್ತು. ಅಲ್ಲೆಲ್ಲೋ ಒಂದು ಆಲದ ಮರದ ಹತ್ತಿರ ಪಾಳುಬಿದ್ದ ದೇವಸ್ಥಾನ, ಕೆರೆ ಇತ್ತು. ಮಾಮ ಅಲ್ಲಿ ಜಾಗ ಮಾಡಿಕೊಂಡು ಗಾಳ ಹಾಕಿಕೊಂಡು ಕುಳಿತೇ ಬಿಟ್ಟರು. ನಾನೂ ಅವರ ಪಕ್ಕ ಮಾತಾಡದೇ ಕುಳಿತೆ. ಹೀಗೆ ಒಂದೆರಡು ಗಂಟೆ ಕಳೆದಿರಬಹುದು. ಅತ್ಲಾಗೆ ಇತ್ಲಾಗೆ ನೋಡಿ ನನಗೆ ಬೇಜಾರಾಯಿತು. ಮೆಲ್ಲಗೆ ಎದ್ದು ಜೀಪಿನೊಳಗೆ ಹೋಗಿ ಒಂದೊಂದೇ ತಿಂಡಿ ತಿನ್ನುತ್ತಾ ಕುಳಿತಿದ್ದಾಗ ಧೋ ಎಂದು ಮಳೆ ಶುರುವಾಯಿತು. ಹಾಂ. ಈಗ ಮಾಮ ಜೀಪಿಗೆ ಓಡಿಬರಬಹುದೆಂದು ಕಾದೆ. ಆದರೆ ಮಾಮ ಅಲ್ಲಾಡಲಿಲ್ಲ. ನನಗೆ ಮಳೆಯಿಂದ ರಕ್ಷಣೆಗೆ ಟಾಪ್ ಮೇಲಿನ ಟಾರ್ಪಾಲ್ ಬಿಟ್ಟರೆ ಪಕ್ಕದಲ್ಲಿ ಏನೂ ಇಲ್ಲದ್ದರಿಂದ ನಾನು ನೆನೆದು ನಡುಗುತ್ತಿದ್ದೆ. ಇಷ್ಟು ಹೊತ್ತಿಗಾಗಲೇ ಕತ್ತಲಾಗುತ್ತಾ ಬಂದಿತ್ತು. ಆ ದಿನ ಮಾಮನಿಗೆ ಒಂದೂ ಮೀನು ಸಿಕ್ಕಿರಲಿಲ್ಲ. ಬಹಳ ಬೇಸರದಿಂದ ಮೀನನ್ನೂ ತನ್ನನ್ನೂ ಮಳೆಯನ್ನೂ ಬೈದುಕೊಳ್ಳುತ್ತಾ ಎದ್ದು ಬಂದರು. ಅನಂತರ ನಾವು ಮನೆದಿಕ್ಕಿಗೆ ಹೋಗುವಾಗ ಕುಕ್ಕರಹಳ್ಳಿ ಕೆರೆಯ ಹತ್ತಿರ ನಮ್ಮ ಜೀಪು ಫಕ್ಕನೆ ನಿಂತಿತು. ‘ಏ ಕೀರ್ತಿ ಇಲ್ಲೊಂದೈದು ನಿಮಿಷ ಗಾಳ ಹಾಕಿ ನೋಡೋಣ’ ಎಂದರು ಮಾಮ. ನಾನು ಜೀಪಿನಿಂದ ಇಳಿದು ಅವರ ಜೊತೆ ಹೋದೆ. ನಾವು ಕೂತ ೩-೪ ನಿಮಿಷದೊಳಗೇ ಒಂದು ದೊಡ್ಡ ಮೀನು ಗಾಳಕ್ಕೆ ಸಿಕ್ಕಿಹಾಕಿಕೊಂಡಿತು. ಅದನ್ನು ನೋಡಿ ಬೆಳಗಿನಿಂದ ಆಗಿದ್ದ ಬೇಸರವೆಲ್ಲ ಮಾಯವಾಗಿ ನಾವಿಬ್ಬರೂ ಕೂಗಾಡುತ್ತ ಆ ಮೀನನ್ನು ಹೊರತೆಗೆದೆವು. ಮಾಮ ಆ ಮೀನನ್ನು ಗಾಳದಿಂದ ಬೇರ್ಪಡಿಸಿ ಮತ್ತೆ ಕೆರೆಗೆ ಬಿಟ್ಟರು. ಇದನ್ನು ನೋಡಿದ ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಹೀಗೆ ೨-೩ ಮೀನು ಹಿಡಿದು ಅವುಗಳನ್ನು ಕೆರೆಯಲ್ಲಿಯೇ ವಾಪಸ್ ಬಿಟ್ಟು ಮನೆಕಡೆ ಹೋದೆವು. ಸಾಮಾನ್ಯವಾಗಿ ಯಾವಾಗಲೂ ತೇಜಸ್ವಿ ಮಾಮನ ಜೊತೆ ಮೀನು ಹಿಡಿಯಲು ರಾಮದಾಸ್ ಮಾಮ, ಶ್ರೀರಾಮ ಮಾಮ ಹೋಗುತ್ತಿದ್ದರು. ಆ ದಿನ ಅವರೇಕೆ ಇರಲಿಲ್ಲ ನನಗೆ ಗೊತ್ತಿಲ್ಲ. ಮಾಮನ ಮೀನು ಹಿಡಿಯುವ ಖಯಾಲಿ ಒಂದಷ್ಟು ವರ್ಷ ಮುಂದುವರೆದಿತ್ತು.
ನಾವು ಮೈಸೂರಿನಿಂದ ಮೂಡಿಗೆರೆಗೆ ಬೆಳಗ್ಗೆ ಹೊರಟರೆ ಸಂಜೆ ೩-೪ ಗಂಟೆಗೆ ತಲುಪುತ್ತಿದ್ದೆವು. ದಾರಿಯಲ್ಲಿ ಎಲ್ಲಾದರೂ ಒಂದು ಹಕ್ಕಿಯೋ ಏನೋ ಮಾಮನ ಕಣ್ಣಿಗೆ ಬಿದ್ದರೆ ಜೀಪ್ ರಿವರ್ಸ್ ತೆಗೆದುಕೊಂಡು ಹೋಗಿ ಅದನ್ನು ನಮಗೆಲ್ಲಾ ತೋರಿಸಿ ಅದರ ಕುಲ, ಗೋತ್ರದ ಬಗ್ಗೆ ಹೇಳಿ ಜೀಪನ್ನು ನಿಲ್ಲಿಸಿ ಕಾಡಲ್ಲಿ ಮಾಮ ಮಾಯವಾಗುತ್ತಿದ್ದರು. ಇಲ್ಲ, ಹೇಮಾವತಿ ನದಿ ಕಣಿವೆ ಕೆಲಸ ನಡೆಯುತ್ತಿದ್ದ ಜಾಗದಲ್ಲಿ ಜೀಪ್ ನಿಲ್ಲಿಸಿ ನಮಗೆ ಕಾಗೆ ಬಂಗಾರದ ದೊಡ್ಡ ಭಂಡಾರವನ್ನೇ ತೋರಿಸುತ್ತಿದ್ದರು. ನಾವು ಮೂವರೂ ನಮ್ಮ ಅಂಗಿಗಳ ತುಂಬ ಕಾಗೆ ಬಂಗಾರ ಹೊತ್ತು ಮುಖ ಮೈಯೆಲ್ಲ ಫಳ ಫಳ ಹೊಳೆಯಿಸಿಕೊಳ್ಳುತ್ತಾ ಜೀಪಿನೊಳಗೆ ಸುರುವಿಕೊಳ್ಳುತ್ತಿದ್ದೆವು. ಈಗ ಯೋಚಿಸಿದರೆ, ರಾಜೇಶ್ವರಿ ಆಂಟಿ ಯಾವ ಕಾಲದಲ್ಲಿಯೂ ನಮ್ಮ ಹುಚ್ಚಾಟಗಳಿಗೆ ಒಂದು ಮಾತನ್ನೂ ಆಡದೆ ಅದು ಹೇಗೆ ಅಷ್ಟು ತಾಳ್ಮೆಯಿಂದ ಇರುತ್ತಿದ್ದರು ಅನ್ನಿಸುತ್ತದೆ.
ತೇಜಸ್ವಿ ಮಾಮನ ಕತೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳಲ್ಲಿ ಹೆಚ್ಚುಕಮ್ಮಿ ಹಲವರನ್ನು ನಾನು ನೋಡಿದ್ದೇನೆ. ಮೂಡಿಗೆರೆಯಲ್ಲಿ ಮಾಮ ಲೇಖಕನಾಗಿ ಸುಮಾರು ಜನಕ್ಕೆ ಗೊತ್ತಿರದೇ ಇದ್ದರೂ ಅವರನ್ನು ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಪ್ರತಿಯೊಬ್ಬರೂ ಗುರುತಿಸುತ್ತಿದ್ದರು. ನಾನು, ಚಕಿತ, ಮದನ್ ಸುಮಾರು ೧೦-೧೨ ವರ್ಷಗಳ ಅನಂತರ ‘ನಿರುತ್ತರ’ಕ್ಕೆ ಹೋಗಿದ್ದೆವು. ಅವರ ತೋಟ ಯಾವುದೆಂದು ನಮಗೆ ಸ್ವಲ್ಪ ಗೊಂದಲವಾಯಿತು. ಆ ರಸ್ತೆಯಲ್ಲಿ ಸಂಜೆ ಹೊತ್ತಾದ್ದರಿಂದ ಜನ ಯಾರೂ ಇರಲಿಲ್ಲ. ಸ್ವಲ್ಪ ಹೊತ್ತಿನ ಅನಂತರ ಸೌದೆ ಹೊರೆಯನ್ನು ಹೊತ್ತ ಒಬ್ಬ ಹೆಂಗಸು ಬಂದರು. ಅನುಮಾನಿಸುತ್ತಲೆ ಬೇರೆ ಗತಿಯಿಲ್ಲದೆ ಆಕೆಯನ್ನು ತೇಜಸ್ವಿಯವರ ಮನೆಯಾವುದು ಎಂದು ಪ್ರಶ್ನಿಸಿದೆ. ಆಕೆ ಥಟ್ಟನೆ ಇದೇ ಗೇಟು ಒಳಗೆ ಹೋಗಿ ಅಂದರು. ನಾನು ದಂಗಾದೆ. ಮಾರನೇ ದಿನ ನಮಗೆ ಚಿಕನ್ ಕಬಾಬ್ ಕೊಡಿಸಲು ಮಾಮ ನಮ್ಮನ್ನು ಪೇಟೆಗೆ ಕರೆದುಕೊಂಡು ಹೋದರು. ಅಲ್ಲಿ ಕಬಾಬ್ ಕರಿಯುತ್ತಿದ್ದ ಸಾಬರು ಮಾಮನನ್ನು ನೋಡಿದ್ದೆ ತಡ ಅದೇನೊ ಹುಡುಕಿ ತೆಗೆದು ಮಾಮನಿಗೆ ತೋರಿಸಿದರು. ಅದೇನೆಂದು ನಾವೂ ಕುತೂಹಲದಿಂದ ಬಗ್ಗಿ ನೋಡಿದರೆ ಒಂದು ಹಳೆಯ ‘ಸುಧಾ’ ಪತ್ರಿಕೆ. ಮಾಮನಿಗೆ ಪಂಪ ಪ್ರಶಸ್ತಿ ಬಂದ ಕಾಲದಲ್ಲಿ ಮುಖಪುಟದಲ್ಲಿ ಅವರ ಫೋಟೊ ಹಾಕಿದ್ದರು. ‘ಸಾರ್, ನಿಮ್ಮನ್ನು ನಮ್ಮ ಸಾರ್ ಅಂದುಕೊಂಡಿದ್ದೆ. ನೀವು ಇಷ್ಟು ದೊಡ್ಡೋರು ಅಂತ ಗೊತ್ತಿರಲಿಲ್ಲ’ ಎಂದರು. ನಾವೆಲ್ಲ ನಕ್ಕೆವು. ಆ ‘ಸುಧಾ’ ಪತ್ರಿಕೆ ಕಬಾಬ್ ಕಟ್ಟಲು ತೆಗೆದುಕೊಂಡುಬಂದ ಹಳೆ ಪತ್ರಿಕೆಗಳ ಮಧ್ಯೆ ಅವರಿಗೆ ಸಿಕ್ಕಿತ್ತು. ಪಾಪ, ಅದನ್ನು ಅವರು ಜೋಪಾನಮಾಡಿ ಇಟ್ಟುಕೊಂಡಿದ್ದರು.
ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ಇಂಥವೇ ಎಷ್ಟೊ ನೆನಪುಗಳು ಗರಿಗೆದರುತ್ತಾ ಹೋಗುತ್ತವೆ.ಹಾಗಾಗಿ ಮಾಮ ಈಗ ನಮ್ಮ ಮಧ್ಯದಲ್ಲಿಇಲ್ಲದಿದ್ದರೂ ಯಾವ ಯಾವುದೋ ಸಂದರ್ಭಗಳಲ್ಲಿ ಮಾಮನ ನೆನಪಾಗಿ ಅವರು ಅವರ ತೋಟದಲ್ಲಿದ್ದಾರೆ ಎಂಬ ಭಾವನೆ ನಮ್ಮನ್ನು ಸಂತೈಸಲು ಪ್ರಯತ್ನಿಸುತ್ತದೆ.