೬ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆ ದುಡುಕುವುದು ಬೇಡ

ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು, ನ್ಯಾಯಾಲಯಗಳ ಅಭಿಪ್ರಾಯಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರ ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ ಶಿಕ್ಷಣ ಮಾಧ್ಯಮ. ಒಂದು ಮತ್ತು ಎರಡನೆಯ ತರಗತಿಗಳಲ್ಲಿ ಮಾತೃಭಾಷೆ ಅಥವಾ ಪರಿಸರಭಾಷೆ/ರಾಜ್ಯಭಾಷೆಗಳಲ್ಲಿ ಒಂದು ಭಾಷೆ ಮಾತ್ರ ಕಲಿಕೆಯ ವಿಷಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ.

ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋಚ್ಚ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿದೆ(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ(೨೦೧೧). ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಫರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿ ‘ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ; ಇಲ್ಲದವರಿಗೆ ಮಾತೃಭಾಷಾ ಮಾಧ್ಯಮ ಸರಕಾರಿ ಶಾಲೆ’ ಎಂಬ ಸಾಮಾಜಿಕ ಭೇದಕ್ಕೆ ಬಲಿಯಾಗುವಂತಾಗಿದೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ಅನಂತರ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ಉತ್ಸಾಹ ತೋರಿಸುವುದು ಆತಂಕದ ಸಂಗತಿ.

ಸರ್ವೋಚ್ಚ ನ್ಯಾಯಾಲಯವು ಸರಕಾರದ ಭಾಷಾ ನೀತಿಯನ್ನು ಪುರಸ್ಕರಿಸಿದ ಮೇಲೆ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮ. ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲಾರಂಭಿಸುವ ಮಕ್ಕಳಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ , ಅನಿವಾರ್ಯತೆಯಾಗಲಿ ಇರುವುದಿಲ್ಲ. ಆದ್ದರಿಂದ ಮಕ್ಕಳು ಇಂಗ್ಲಿಷ್ಅನ್ನು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಅರಂಭದ ಹಂತದಲ್ಲಿ ಮಕ್ಕಳನ್ನು ಸರಳವಾದ ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರಿಗೆ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸಬಲ್ಲ ಇಂಗ್ಲಿಷ್ ಮಾತನಾಡುವ ಅಧ್ಯಾಪಕರನ್ನು ಸಿದ್ಧಗೊಳಿಸಬೇಕು. ಮಕ್ಕಳು ತಮ್ಮ ಮಾತೃಭಾಷೆಯಲ್ಲಿಯೇ ಎಲ್ಲ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಹೆಚ್ಚು ಮುಂದಿರುವುದನ್ನು ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ.

ಆದ್ದರಿಂದ ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವೂ ಸಂವಿಧಾನ ವಿರುದ್ಧವೂ ಆಗುತ್ತದೆ. ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಯ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬
panditaradhya@gmail.com

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
೦ ೧ ೨ ೩ ೪ ೫ ೬ ೭ ೮ ೯

Post a comment or leave a trackback: Trackback URL.

ಟಿಪ್ಪಣಿಗಳು

 • ಭರತ್  On ಜುಲೈ 8, 2011 at 10:08 ಅಪರಾಹ್ನ

  ನಿಮ್ಮ ಈ ಬರಹ ಸರಿಯಾಗಿದೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಗೊಂದಲ ಇರುವವರಿಗೆ/ಉಂಟುಮಾಡುವವರಿಗೆ ದಾರಿದೀವಿಗೆಯಾಗಿದೆ. ಇದೇ ವಿಷಯವಾಗಿ ನಾನು ಪ್ರಜಾವಾಣಿಗೆ ಬರೆದಿದ್ದ ಓಲೆಯು ಇಲ್ಲಿದೆ
  -ನಂಬುಗೆಯ
  ಭರತ್ (ವಿ-ಅಂಚೆಯಲ್ಲಿ)

 • ಮಹೇಶ್  On ಜುಲೈ 9, 2011 at 1:07 ಅಪರಾಹ್ನ

  ಜಗತ್ತಿನಲ್ಲಿ ತಮ್ಮ ಸ್ವಂತ ಭಾಷೆಯಲ್ಲಿ ಪದವಿಯಲ್ಲೂ ಕಲಿತವರು ಮಾತ್ರ ಆರ್ಥಿಕವಾಗಿ ಬಲಿಷ್ಠರಾಗಿರುವದು ಸುಸ್ಪಷ್ಟವಾಗಿರುವಾಗ ನಮಗೇಕೆ ಇಂಗ್ಲಿಷ್ ನಲ್ಲೇ ಕಲಿಯಬೇಕೆಂಬ ಹಟ. ಬಹುಶಃ ಕಡೆಯವರೆಗೂ ದಾಸ್ಯದಲ್ಲೇ ಇರಬೇಕೆಂಬ ಅತ್ಯಂತ ಖುಶಿಯ ವಿಚಾರವಿರಬೇಕು.

 • ಉದಯವಾಣಿ ಸಂಪಾದಕೀಯ ೧೪-೭-೨೦೧೧  On ಜುಲೈ 14, 2011 at 9:48 ಅಪರಾಹ್ನ

  ಕನ್ನಡ – ಇಂಗ್ಲಿಷ್‌ ಎರಡೂ ಬೇಕು

  ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಕಲಿಕೆಯ ಪರ -ವಿರೋಧದ ಹಗ್ಗ ಜಗ್ಗಾಟದ ನಡುವೆಯೇ ಈ ವರ್ಷದಿಂದಲೇ ಆಯ್ದ ಶಾಲೆಗಳಲ್ಲಿ ೬ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆಯ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಾಯೋಗಿಕವಾಗಿ ೩೯ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆ ಆರಂಭವಾಗಲಿದೆ. ಇಲ್ಲಿ ಪರ- ವಿರೋಧಕ್ಕಿಂತ ಹೆಚ್ಚಾಗಿ ವಾಸ್ತವಿಕ ಸಂಗತಿಗಳ ಕಡೆಗೆ ಸರ್ಕಾರ ಮತ್ತು ಭಾಷಾ ತಜ್ಞರು ಚಿಂತನೆ ನಡೆಸುವುದು ಸೂಕ್ತ. ಅಭಿಮಾನದ ಜೊತೆಗೆ ವ್ಯಾವಹಾರಿಕ ಲಾಭ ಹಾನಿಯ ಅಂಶಗಳ ಕಡೆಗೂ ಗಮನ ಹರಿಸಬೇಕಿದೆ. ಹೀಗಾಗಿ ಜಗತ್ತಿನ ಪ್ರಮುಖ ಶಿಕ್ಷಣ ತಜ್ಞರು ಪ್ರತಿಪಾದಿಸುವಂತೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ, ಬದಲಾಗುತ್ತಿರುವ ಜಗತ್ತಿನ ಜೊತೆಗೆ ನಮ್ಮ ಮಕ್ಕಳೂ ಹೆಜ್ಜೆ ಹಾಕಲು ಅಗತ್ಯವಿರುವ ಇಂಗ್ಲಿಷ್‌ನಂತಹ ವ್ಯಾವಹಾರಿಕ ಮಹತ್ವದ ಭಾಷೆಯನ್ನೂ ಕರಗತ ಮಾಡಿಕೊಳ್ಳುವುದರತ್ತ ಗಮನ ಹರಿಸಬೇಕಿದೆ. ಬಹುಶಃ ೧೯೯೪ರಲ್ಲಿ ಕರ್ನಾಟಕ ಸರ್ಕಾರ ರೂಪಿಸಿದ ಭಾಷಾ ನೀತಿ ಈ ಚಿಂತನೆಗೆ ಪೂರಕವಾಗಿತ್ತು. ಆ ಭಾಷಾ ನೀತಿಯ ಅನುಸಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ ಅಥವಾ ರಾಜ್ಯ ಭಾಷೆಗಳಲ್ಲಿ ಒಂದು ಕಡ್ಡಾಯ ಶಿಕ್ಷಣ ಮಾಧ್ಯಮ. ಒಂದು ಮತ್ತು ಎರಡನೇ ತರಗತಿಗಳಲ್ಲಿ ಮಾತೃ ಭಾಷೆ ಅಥವಾ ಪರಿಸರ ಭಾಷೆ ಅಥವಾ ರಾಜ್ಯ ಭಾಷೆಗಳಲ್ಲಿ ಒಂದು ಮಾತ್ರ ಕಲಿಕೆಯ ವಿಷಯ. ಕನ್ನಡ ಮಾತೃ ಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರ ಅಥವಾ ರಾಜ್ಯ ಭಾಷೆಯಾದ ಕನ್ನಡವೂ ಕಲಿಕೆಯ ವಿಷಯವಲ್ಲ. ಎರಡನೇ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೇ ತರಗತಿಯಿಂದ ಅಂಥವರಿಗೆ ಕನ್ನಡ ಐಚ್ಛಿಕ ಕಲಿಕಾ ವಿಷಯ ಮಾತ್ರ, ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿರಲಿಲ್ಲ. ಆದರೆ ಐದನೇ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕನ್ನಡ ಮಾತೃ ಭಾಷೆಯಲ್ಲದವರಿಗೂ ಕಡ್ಡಾಯ. ಅದೇ ವೇಳೆ ಕನ್ನಡದ ಮಕ್ಕಳಿಗೆ ಇಂಗ್ಲಿಷ್‌ ಐಚ್ಛಿಕ ಕಲಿಕಾ ವಿಷಯ. ಅಂಥವರಿಗೆ ಇಂಗ್ಲಿಷ್‌ ಕಡ್ಡಾಯವಾಗಿರಲಿಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್‌ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ.
  ಕರ್ನಾಟಕ ಸರ್ಕಾರದ ಈ ಭಾಷಾ ನೀತಿಯನ್ನು ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿದ್ದು ಮಾತ್ರವಲ್ಲ, ಪ್ರಶಂಸೆಯನ್ನೂ ವ್ಯಕ್ತಪಡಿಸಿತ್ತು. ಆದರೆ ಈ ಭಾಷಾ ನೀತಿಗೆ ವ್ಯತಿರಿಕ್ತವಾಗಿ ಕಳೆದ ೨೦೦೮ರಲ್ಲಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಕಲಿಕೆ ಕಡ್ಡಾಯಕ್ಕೆ ಅವಕಾಶ ಮಾಡಿಕೊಟ್ಟಿತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ ನಲ್ಲಿರುವ ಪ್ರಕರಣ ಇತ್ಯರ್ಥವಾಗಲು ಅಗತ್ಯ ಕ್ರಮ ಕೈಗೊಂಡಿದ್ದರೆ ಸುಪ್ರೀಂ ಕೋರ್ಟ್‌ ತೀರ್ಮಾನದ ಅನಂತರ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಏಕರೂಪದ ಕಲಿಕಾಪದ್ಧತಿ ಜಾರಿಗೆ ಬರುವುದು ಸಾಧ್ಯವಿತ್ತು. ಆದರೆ ಅದರ ಬದಲಾಗಿ ತರಾತುರಿಯಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಕಲಿಕೆ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗುತ್ತಿದೆ.

  ನಿಜ, ಎಲ್ಲ ಮಕ್ಕಳೂ ಇಂಗ್ಲಿಷ್‌ ಕಲಿಯುವಂತಾಗಲು ವಾತಾವರಣ ಕಲ್ಪಸುವುದು ಅಗತ್ಯ ಮತ್ತು ಅನಿವಾರ್ಯ. ಆದರೆ ಐದನೇ ತರಗತಿಯಲ್ಲಿ ಇಂಗ್ಲಿಷ್‌ ಕಲಿಕೆ ಆರಂಭಿಸಿದ ಮಕ್ಕಳು ಒಂದು ವರ್ಷದ ಅಂತರದಲ್ಲಿ ಸಂಪೂರ್ಣ ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತನೆ ಹೊಂದಲು ಸಮರ್ಥರಾಗುವರೇ ಎಂಬುದು ಪ್ರಶ್ನೆ. ಹಾಗೆ ಮಾಡುವುದರಿಂದ ಅನುಕೂಲ ಇರುವವರು ಮತ್ತು ಅನುಕೂಲ ಇಲ್ಲದವರ ಮಕ್ಕಳ ನಡುವಿನ ಭಾಷಾ ಕಂದಕವನ್ನು ಪರಿಣಾಮಕಾರಿಯಾಗಿ ದೂರ ಮಾಡಲು ಸಾಧ್ಯವಾಗುವುದೂ ಅನುಮಾನ. ಆ ಕಾರಣದಿಂದ ಸರ್ಕಾರ ಕೆಲವೊಂದು ಸಂಗತಿಗಳ ಕಡೆಗೆ ಗಮನ ಹರಿಸುವುದು ಸೂಕ್ತವಾಗಬಹುದು.
  ಮೊದಲನೆಯದಾಗಿ ಮಕ್ಕಳು ಸುಲಲಿತವಾಗಿ ಇಂಗ್ಲಿಷ್‌ ಬರೆಯಲು ಮತ್ತು ಮಾತನಾಡಲು ಕಲಿಸಬಲ್ಲಂತಹ ಸಮರ್ಥ ಶಿಕ್ಷಕರನ್ನು ತರಬೇತು ಮಾಡಬೇಕು. ಈಗಿರುವ ಬಹುಪಾಲು ನಾಮ್‌ಕೇವಾಸ್ತೆ ಇಂಗ್ಲಿಷ್‌ ಶಿಕ್ಷಕರಿಂದ ಅದು ಸಾಧ್ಯವಾಗದ ಮಾತು. ಇಂಗ್ಲಿಷ್‌ಗಾಗಿ ಪ್ರತ್ಯೇಕ ಶಾಲೆ ತೆರೆಯವ ಬದಲು ಈಗಿರುವ ಶಾಲೆಯಲ್ಲಿ, ಪಠ್ಯಕ್ರಮದ ಮೂಲಕವೇ ಸರಿಯಾದ ಇಂಗ್ಲಿಷ್‌ ಕಲಿಕೆಗೆ ವಾತಾವಣ ಸೃಷ್ಟಿಸಬೇಕು.
  ಮೂಲಭೂತವಾಗಿ ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆಯ ಬಗೆಗಿನ ಭಯ ಮತ್ತು ಮಾತೃ ಭಾಷೆಯೆಡೆಗಿನ ಕೀಳರಿಮೆಯನ್ನು ದೂರ ಮಾಡಬೇಕು. ಆಗ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಗಳೆರಡರ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಬಹುದು.

  ಉದಯವಾಣಿ ಸಂಪಾದಕೀಯ ೧೪-೭-೨೦೧೧

 • ಬೇಳೂರು ಸುದರ್ಶನ  On ಜುಲೈ 19, 2011 at 11:40 ಫೂರ್ವಾಹ್ನ

  ಪ್ರಿಯ ಬ್ಲಾಗಿಗರೆ,
  ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
  ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

  ತಮ್ಮ ವಿಶ್ವಾಸಿ
  ಬೇಳೂರು ಸುದರ್ಶನ
  ಸಲಹಾ ಸಮನ್ವಯಕಾರ, ಕಣಜ ಯೋಜನೆ
  (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
  ಈ ಮೈಲ್: projectmanager@kanaja.net
  http://www.kanaja.in
  ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
  ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
  ಬೆಂಗಳೂರು – 560100
  ದೂರವಾಣಿ: ೯೭೪೧೯೭೬೭೮೯

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s