ರಾಷ್ಟ್ರೀಯ ಕನ್ನಡ ದಿನಸೂಚಿ

ರಾಷ್ಟ್ರೀಯ ಶಕ ೧೯೩೭ರ ಉತ್ತರಾರ್ಧ

ಪ್ರಿಯ ಓದುಗರಲ್ಲಿ ವಿಜ್ಞಾಪನೆಗಳು.

ರಾಷ್ಟ್ರೀಯ ಪಂಚಾಂಗದ ೧೯೩೭ನೇ ಶಕದ ದಿನಸೂಚಿಯನ್ನು  ಪವರ್ ಪಾಯಿಂಟ್ ರೂಪದಲ್ಲಿ ಇಡಿಯಾಗಿ ಇಲ್ಲಿ ಕೊಟ್ಟಿದ್ದೆ.

ಅದನ್ನು ಇಳಿಸಿಕೊಳ್ಳುವ ಕೊಂಡಿಯ ಹ್ರಸ್ವ ರೂಪವನ್ನು ಒದಗಿಸಿದ್ದ ಸಂಸ್ಥೆ ಅದನ್ನು ರದ್ದುಗೊಳಿಸಿರುವುದರಿಂದ

ಕೊನೆಯ ಆರು ತಿಂಗಳುಗಳ ದಿನಸೂಚಿಯನ್ನು ಮತ್ತೆ ಇಲ್ಲಿ ಒದಗಿಸುತ್ತಿದ್ದೇನೆ.

ಕರಡಿನ ಚಿಕ್ಕಪುಟ್ಟ ತಪ್ಪುಗಳನ್ನು ಸರಿಪಡಿಸಿದ್ದೇನೆ.

ನಿಮ್ಮ ಪ್ರತಿ ಪಡೆಯಲು ಇಲ್ಲಿ ಗುಂಡಿ ಒತ್ತಿ

https://panditaputa.files.wordpress.com/2015/10/1937-uttarardha.ppsx

ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.

ಪ್ರೀತಿಯಿಂದ

ಪಂಡಿತಾರಾಧ್ಯ

ರಾಷ್ಟ್ರೀಯ ಕನ್ನಡ ದಿನಸೂಚಿ ಪವರ್ ಪಾಯಿಂಟ್ ಪ್ರದರ್ಶನ

ಮಾನ್ಯರೆ,

ಸಾಮಾನ್ಯ ಶಕ ೨೦೧೫-೧೬ರ ರಾಷ್ಟ್ರೀಯ ಕನ್ನಡ ದಿನಸೂಚಿ ೧೯೩೭ ಇಲ್ಲಿದೆ.

ಅದನ್ನು ಇಳಿಸಿಕೊಳ್ಳಲು ಈ ಕೊಂಡಿಯ ಮೇಲೆ ಗುಂಡಿ ಒತ್ತಿ:

https://panditaputa.wordpress.com/2015/03/26/571/

ನೀವು ಉಪಯೋಗಿಸಿ. ನಿಮ್ಮ ಮಿತ್ರರಿಗೂ ಕೊಡಿ.

ನಿಮಗೆ ಹೊಸ ರಾಷ್ಟ್ರೀಯ ವರ್ಷದ ಶುಭಾಶಯಗಳು

ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ.

ಪ್ರೀತಿಯಿಂದ

ಪಂಡಿತಾರಾಧ್ಯ

ಈ ತಿಂಗಳ ಆಕಾಶ : ಮಾರ್ಚಿ ೨೦೧೫

ಈ ತಿಂಗಳ ಆಕಾಶ : ಮಾರ್ಚಿ ೨೦೧೫

ಯುಗಾದಿ ಮರಳಿ ಬಂದಿದೆ!

ಮೈಸೂರಿನಲ್ಲಿ ಈ ತಿಂಗಳ ಆಕಾಶದ ನೆತ್ತಿಯಲ್ಲಿ ರಾತ್ರಿ ೭.೩೦ರ ಸಮಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಮೀನ, ಮೇಷ, ವೃಷಭ, ಮಿಥುನ, ಕಟಕ, ಸಿಂಹ ರಾಶಿಗಳನ್ನೂ ನಕುಲ(ಪೆಗಸಸ್), ದ್ರೌಪದಿ(ಆಂಡ್ರೋಮೀಡಾ), ಕುಂತಿ(ಕೆಸಿಯೊಪಿಯಾ), ಯುಧಿಷ್ಠಿರ(ಸೀಫಸ್), ಪಾರ್ಥ (ಪರ್ಸಿಯಸ್), ವಿಜಯಸಾರಥಿ(ಆರಿಗಾ), ಮಹಾವ್ಯಾಧ(ಓರಿಯನ್), ಮಹಾಶ್ವಾನ(ಕ್ಯಾನಿಸ್ ಮೇಜರ್), ಅಜಗರ(ಹೈಡ್ರಾ) ನಕ್ಷತ್ರವಿನ್ಯಾಸ, ಪುಂಜಗಳನ್ನೂ ರೋಹಿಣಿ(ಆಲ್ಡೆಬರಾನ್), ಆರ್ದ್ರಾ(ಬಿಟಲ್ಗೂಸ್), ಲುಬ್ಧಕ(ಸಿರಿಯಸ್) ಅಗಸ್ತ್ಯ (ಕ್ಯಾನೊಪಸ್) ನಕ್ಷತ್ರಗಳು ಹೊಳೆಯುವುದನ್ನು ಬರಿಗಣ್ಣಿನಲ್ಲಿಯೇ ಕಾಣಬಹುದು. ಮೀನ, ಮೇಷ, ವೃಷಭ ಮಿಥುನ, ಕಟಕ, ಸಿಂಹ ರಾಶಿಗಳನ್ನು ಗುರುತಿಸಬಹುದು. ಹೆವೆನ್-ಅಬೌನಂಥ ಜಾಲತಾಣಗಳಲ್ಲಿ ಅಕ್ಷಾಂಶ ರೇಖಾಂಶ, ಸಮಯಗಳನ್ನು ಸೂಚಿಸಿ ಸ್ಥಳೀಯ ಆಕಾಶವನ್ನು ಕಾಣಬಹುದು.

ಈ ತಿಂಗಳ ೫ರ ಹುಣ್ಣಿಮೆಯಂದು ಭೂಮಿ-ಚಂದ್ರ ನಡುವೆ ಗರಿಷ್ಠ ದೂರವಿರುತ್ತದೆ. ಅಂದರೆ ಉಳಿದ ಹುಣ್ಣಿಮೆಗಳಿಗಿಂತ ಈ ಹುಣ್ಣಿಮೆಯ ಚಂದ್ರ ಚಿಕ್ಕದಾಗಿ ಕಾಣುತ್ತದೆ. ಅದನ್ನು ಗುರುತಿಸಲು ಪ್ರಯತ್ನಿಸಿ. ಬರಿಗಣ್ಣಿಗೆ ಸುಲಭವಾಗಿ ಗೋಚರಿಸುವ ಗ್ರಹಗಳು ಬುಧ(ಸೂರ್ಯನಿಂದ ಗರಿಷ್ಠ ದೂರದಲ್ಲಿರುವಾಗ), ಶುಕ್ರ, ಮಂಗಳ, ಗುರು, ಮತ್ತು ಶನಿ. ಯುರೇನಸ್ ಮತ್ತು ನೆಪ್ಚೂನ್ಗಳು ದೂರದರ್ಶಕಗಳಿಲ್ಲಿ ಚುಕ್ಕೆಯಂತೆ ಕಾಣುತ್ತವೆ.

ಸಂಜೆ ಪಶ್ಚಿಮ ಆಕಾಶದಲ್ಲಿ ಪ್ರಕಾಶಮಾನವಾಗಿ ಶುಕ್ರ ಕಾಣಿಸುತ್ತದೆ. ೪ರಂದು ದೂರದರ್ಶಕದ ಮೂಲಕ ನೋಡಿದಾಗ ಶುಕ್ರದ ಸಮೀಪ ಯುರೇನಸ್ ಕೇವಲ ೦.೧ ಡಿಗ್ರಿಯಷ್ಟು ಅಂತರದಲ್ಲಿ ಕ್ಷೀಣವಾದ ಚುಕ್ಕೆಯಾಗಿ ಕಾಣುತ್ತದೆ. ಅದು ಶುಕ್ರದಿಂದ ದೂರಸರಿಯುತ್ತ ೧೧ರಂದು ಮಂಗಳಗ್ರಹದ ಹತ್ತಿರ ೧/೪ ಡಿಗ್ರಿ ದೂರದಲ್ಲಿ ಕಾಣುತ್ತದೆ. ಯುರೇನಸ್, ಮಂಗಳದಿಂದಲೂ ದೂರ ಸರಿಯುವುದನ್ನು -ದೂರದರ್ಶಕವಿಲ್ಲದಿದ್ದರೂ ಟ್ಯಾಬ್ಲೆಟ್, ಮೊಬೈಲ್ಗಳಲ್ಲಿ ಹೆವನ್-ಅಬೌ ಮೊದಲಾದ ಅಂತರಜಾಲ ತಾಣಗಳಲ್ಲಿ- ನೋಡಬಹುದು. ದೂರದರ್ಶಕದ ನೆರವಿನಿಂದ ನೆಪ್ಚೂನ್ ಅನ್ನೂ ಗುರುತಿಸಬಹುದು. ೧೯ರ ಮುಂಜಾನೆ ಬಾಲಚಂದ್ರನ ಹತ್ತಿರ ಬುಧ ಗ್ರಹವಿರುತ್ತದೆ. ಚಂದ್ರ ಬುಧಗಳ ನಡುವೆ ಕ್ಷೀಣವಾದ ಚುಕ್ಕೆಯಂತೆ ನೆಪ್ಚೂನ್ ಕಾಣಿಸುತ್ತದೆ. ಕ್ಯಾಮೆರಾವನ್ನು ಹೆಚ್ಚು ಸಮಯ ತೆರೆದಿಟ್ಟು ಚಿತ್ರಗಳನ್ನು ತೆಗೆಯಬಹುದು. ಕಳೆದ ತಿಂಗಳು ನೋಡಿದ ಲವ್ ಜಾಯ್ ಧೂಮಕೇತು ಕುಂತಿ ಪುಂಜ ದಾಟಿ ಉತ್ತರದಿಕ್ಕಿಗೆ ಚಲಿಸುತ್ತಿದ್ದರೂ ತುಂಬ ಕ್ಷೀಣ ಪ್ರಕಾಶವಿರುವ ಅದನ್ನು ದೂರದರ್ಶಕದಲ್ಲಿಯೂ ಕಾಣಲಾಗುವುದಿಲ್ಲ.

ಸಂಜೆ ಪೂರ್ವದಲ್ಲಿ ಗುರುಗ್ರಹ ಕಾಣುತ್ತದೆ. ಮಧ್ಯ ರಾತ್ರಿಯಿಂದ ಶನಿಗ್ರಹ ಕಾಣುತ್ತದೆ. ೧೨ ಮತ್ತು ೧೩ರಂದು ಶನಿಗ್ರಹದ ಸಮೀಪದಲ್ಲಿ ಚಂದ್ರ ಆಕರ್ಷಕವಾಗಿ ಕಾಣುತ್ತದೆ. ಮಾರ್ಚಿ ೨೦ರಂದು ಅಮಾವಾಸ್ಯೆ. ಅಂದು ಸೂರ್ಯಗ್ರಹಣವೂ ಇದೆ; ಆದರೆ ಅದು ಭಾರತದಲ್ಲಿ ಕಾಣುವುದಿಲ್ಲ. ಆಕಾಶವೀಕ್ಷಕರ ಕಣ್ಣುಗಳಿಗೆ ಮಾರ್ಚಿ ತಿಂಗಳು ಕಂಡಷ್ಟೂ ಉಗಾದಿ!

ಈ ತಿಂಗಳ ೨೧ರಂದು ವಸಂತ ವಿಷುವ; ಡಿಸೆಂಬರ್ ೨೨ರಿಂದ ಆರಂಭವಾದ ಸೂರ್ಯನ ಉತ್ತರದಿಕ್ಕಿನ ಪ್ರಯಾಣ ಅಂದು ಮಧ್ಯದೂರವನ್ನು ತಲುಪಲಿದೆ. ಅಂದು ಸೂರ್ಯ ಭೂಮಧ್ಯರೇಖೆಯ ಮೇಲೆ ಇರುವುದರಿಂದ ಹಗಲು ರಾತ್ರಿಗಳ ಅವಧಿ ಸುಮಾರಾಗಿ ಸಮವಾಗಿರುತ್ತದೆ. ಇದಕ್ಕೆ ವಸಂತ(ವೆರ್ನಲ್) ಸಮ(ಈಕ್ವಿ) ರಾತ್ರಿ(ನಾಕ್ಸ್) ಎಂದು ಹೆಸರು. ೨೧ ಚಾಂದ್ರಮಾನ ಯುಗಾದಿ.

ವಸಂತ ವಿಷುವದ ಮರುದಿನದಿಂದ ಅಂದರೆ ೨೨ರಿಂದ ರಾಷ್ಟ್ರೀಯ ಶಕ ಆರಂಭವಾಗುತ್ತದೆ. ರಾಷ್ಟ್ರೀಯ ಕಾಲಗಣನೆಯಲ್ಲಿ ಸಾಮಾನ್ಯ ವರ್ಷಗಳಲ್ಲಿ ಚೈತ್ರ ಮಾಸದಲ್ಲಿ ೩೦ ದಿನಗಳು, ಅಧಿಕವರ್ಷದಲ್ಲಿ ಮಾತ್ರ ೩೧ ದಿನಗಳು ಇರುತ್ತವೆ. ವೈಶಾಖದಿಂದ ಭಾದ್ರಪದದವರೆಗೆ ಐದು ತಿಂಗಳು ೩೧ ದಿನಗಳು, ಆಶ್ವೀಜದಿಂದ ಫಾಲ್ಗುಣದವರೆಗೆ ಆರು ತಿಂಗಳು ೩೦ ದಿನಗಳಿರುತ್ತವೆ. ಮಾರ್ಚಿ ೨೧ ವಸಂತ ವಿಷುವ. ೨೨ರಿಂದ ರಾಷ್ಟ್ರೀಯ ಶಕ ವರ್ಷ ೧೯೩೭ ಆರಂಭವಾಗುತ್ತದೆ.

೨೦೧೬ರ ಫೆಬ್ರುವರಿ, ೨೯ ದಿನಗಳ ಅಧಿಕ ವರ್ಷ. ಆ ವರ್ಷ ಮಾರ್ಚಿ ೨೦ ರಾಷ್ಟ್ರೀಯ ಮಾಸ ಫಾಲ್ಗುಣದ ೩೦ನೇ ದಿನ. ಮಾರ್ಚಿ ೨೧ ವಸಂತ ವಿಷುವ. ಆ ವರ್ಷ ಅಂದಿನಿಂದಲೇ ರಾಷ್ಟ್ರೀಯ ಶಕವರ್ಷ ೧೯೩೮ರ ಚೈತ್ರ ೧ ಆರಂಭವಾಗುತ್ತದೆ.

ನೆನಪಿಟ್ಟುಕೊಳ್ಳಲು ಬಳಸಲು ರಾಷ್ಟ್ರೀಯ ದಿನಸೂಚಿಯೇ ಸುಲಭವಲ್ಲವೆ!

ನಿಶೆಚರಿ ಮಾರ್ಚಿ ೨೦೧೫

೩ ಗುರು-ಚಂದ್ರ ನಡುವೆ ೭ ಡಿಗ್ರಿ ಅಂತರ *

೪ ಶುಕ್ರ-ಯುರೇನಸ್ ೦.೧ ಡಿಗ್ರಿ ಅಂತರದಲ್ಲಿ*

೫ ಚಂದ್ರ-ಭೂಮಿ ನಡುವೆ ಗರಿಷ್ಠ ದೂರ; ಹುಣ್ಣಿಮೆ ೨೩:೫೫ಕ್ಕೆ

೧೧ ಮಂಗಳ-ಯುರೇನಸ್ ನಡುವೆ ೦.೨೫ ಡಿಗ್ರಿ ಅಂತರ*

೧೨ ಮತ್ತು ೧೩ ಶನಿ-ಚಂದ್ರ ನಡುವೆ ೬ ಡಿಗ್ರಿ ಅಂತರ (ಮುಂಜಾವು)

೧೩ ಚಾಂದ್ರಮಾಸದ ಕೊನೆಯ ಪಾದ

೧೪ ಶನಿಗ್ರಹದ ಹಿನ್ನಡೆ ಆರಂಭ

೧೯ ಬುಧ-ಚಂದ್ರ ನಡುವೆ ೨ ಡಿಗ್ರಿ ಅಂತರ (ಮುಂಜಾವು)*

ಚಂದ್ರ-ಬುಧ-ನೆಪ್ಚೂನ್(ದೂರದರ್ಶಕ)

೨೦ ಅಮಾವಾಸ್ಯೆ ೧೫.೦೬ಕ್ಕೆ; ಸೂರ್ಯಗ್ರಹಣ: ಭಾರತಕ್ಕೆ ಕಾಣುವುದಿಲ್ಲ.

೨೧ ವಸಂತ ವಿಷುವ ೦೪.೧೫ಕ್ಕೆ; ಮಂಗಳ-ಚಂದ್ರ ೪ ಡಿಗ್ರಿ ಅಂತರದಲ್ಲಿ*

೨೨ ಸಂಜೆ ಶುಕ್ರ-ಚಂದ್ರಗಮಂಗಳ ನಡುವೆ ೪ ಡಿಗ್ರಿ ಅಂತರ*

೨೭ ಚಾಂದ್ರಮಾಸದ ಮೊದಲಪಾದ

೩೦ ಗುರು-ಚಂದ್ರ ನಡುವೆ ೫ ಡಿಗ್ರಿ ಅಂತರ

*ಛಾಯಾಗ್ರಹಣಕ್ಕೆ ಸದವಕಾಶ

ಆಕರ: http://www.taralaya.org1mach2015 7.30pm maisurusky (2) 5march2015 shukra yurenas mangala 19 neptune 22nddusk

ಆಕರ http://www.taralaya.org

ರಾಷ್ಟ್ರಗೀತೆ : ನಾಡಗೀತೆ

೧೯೧೧ರ ಡಿಸೆಂಬರ್ ೨೭ ಭಾರತದ ಇತಿಹಾಸದಲ್ಲಿ ನೆನಪಿನಲ್ಲಿಡಬೇಕಾದ ದಿನ. ಅಂದು ಕಲ್ಕತ್ತಾದಲ್ಲಿ ೨೬-೨೮ರವರೆಗೆ ನಡೆದ ಕಾಂಗ್ರೆಸಿನ ೨೬ನೆಯ ವಾರ್ಷಿಕ ಮಹಾಧಿವೇಶನದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಿದ ಅನಂತರ ರವೀಂದ್ರನಾಥ ಠಾಕೂರರು ತಾವು ಹೊಸದಾಗಿ ರಚಿಸಿ, ಸಂಗೀತ ಸಂಯೋಜಿಸಿದ ‘ಜನಗಣಮನ’ವನ್ನು ಹಾಡಿದರು. ಅವರ ಜೊತೆ ಅವರ ಅಕ್ಕನ ಮಗಳು ಸರಳಾದೇವಿ ಚೌಧುರಾಣಿ ದನಿಗೂಡಿಸಿದ್ದರು. (ಇವರು ಈಗಿನ ಮೈಸೂರು ಮಹಾರಾಣಿ (ಪ್ರೌಢ)ಶಾಲೆಯಲ್ಲಿ ಮುಖ್ಯ ಅಧ್ಯಾಪಕಿಯಾಗಿದ್ದರು. ಹಾಗೂ ಮೈಸೂರು ಸಂಸ್ಥಾನದ ರೀಜೆಂಟರಾಗಿದ್ದ, ವಾಣೀವಿಲಾಸ ಸನ್ನಿಧಾನ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ, ದಿವಂಗತ ಚಾಮರಾಜ ಒಡೆಯರ ಪತ್ನಿ ಕೆಂಪುಚಲುವಾಜಮ್ಮಣ್ಣಿಯವರ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು). ಅನಂತರ ಸರಳಾದೇವಿಯವರು ತಮ್ಮ ಪತಿ ರಾಮ್ಭುಜ್ ಚೌಧುರಿಯವರು ವೈಸ್ ರಾಯ್ ಕುರಿತು ಬರೆದ ‘ಬಾದ್ ಶಾ ಹಮಾರಾ’ ಗೀತೆಯನ್ನೂ ಹಾಡಿದರು.

೧೯೧೧ರ ಡಿಸೆಂಬರ್ ೧೧ರಂದು ಭಾರತದ ಹೊಸ ರಾಜಧಾನಿಯಾಗಿ ಘೋಷಿತವಾಗಿದ್ದ ದೆಹಲಿಯಲ್ಲಿ ಬ್ರಿಟಿಷ್ ಚಕ್ರವರ್ತಿಯ ದರ್ಬಾರ್ ಏರ್ಪಡಿಸಲಾಗಿತ್ತು. ರವಿಂದ್ರನಾಥ ಠಾಕೂರರ ಮಿತ್ರನಾಗಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ಚಕ್ರವರ್ತಿಯನ್ನು ಸ್ವಾಗತಿಸುವ ಗೀತೆಯನ್ನು ಬರೆಯುವಂತೆ ಅವರನ್ನು ಪತ್ರ ಬರೆದು ಕೋರಿದ್ದ. ಸ್ವಾತಂತ್ರ್ಯ ಹೋರಾಟ ಮತ್ತು ಬಂಗಾಳ ವಿಭಜನೆಯ ವಿರುದ್ಧದ ಹೋರಾಟಗಳಲ್ಲಿ ತೊಡಗಿದ್ದ ರವೀಂದ್ರರಿಗೆ ಅದು ಅಪಮಾನವೆನಿಸಿತು. ರವೀಂದ್ರರು ಅದನ್ನು ನಿರಾಕರಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಚೈತನ್ಯ ತುಂಬುವ ಹೊಸಗೀತೆಯನ್ನು ಬರೆಯಲು ನಿರ್ಧರಿಸಿದರು. ಅದರ ಪರಿಣಾಮವೇ ‘ಜನಗಣಮನ’ ಗೀತೆ.

ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಟಿಸಲು ಬ್ರಿಟಿಷ್ ಸರಕಾರ ಅಡ್ಡಿಮಾಡಿದಾಗ ಮುಂಬೈ ಪ್ರಾಂತ್ಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣಾಧಿನಾಯಕನ ಪೂಜೆಯನ್ನು ಪ್ರಾರಂಭಿಸಿದ್ದರು. ೧೮೯೮ರಲ್ಲಿ ಬ್ರಿಟಿಷ್ ಸರಕಾರ ತಿಲಕರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿ ಬಂಧಿಸಿತು. ರವೀಂದ್ರರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ತಿಲಕರ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದರು. ಆಗ ರವೀಂದ್ರರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(೧೯೦೧). ಇದನ್ನು ಶ್ರೀ ಎಂ.ಆರ್.ಸಿ. ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ (ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಬೆಂಗಳೂರು ೨೦೦೭). ಇದರಲ್ಲಿರುವ ನೂರು ದೇಶಭಕ್ತಿಗೀತೆಗಳು ರವೀಂದ್ರರ ಉಜ್ವಲ ಸ್ವಾಭಿಮಾನ, ದೇಶಾಭಿಮಾನಗಳಿಗೆ ನಿದರ್ಶನಗಳಾಗಿವೆ.

ರವೀಂದ್ರರು ತಿಲಕರ ಗಣಾಧಿನಾಯಕನನ್ನು ಜನಗಣದ ಮನದ ಅಧಿನಾಯಕನಾಗಿಸಿದರು. ‘ಭಾರತದ ಉದಯದ ಹಾಡು’ ಎಂಬ ಹೆಸರಿನ ಈ ಕವಿತೆ ಐದು ಭಾಗಗಳಲ್ಲಿದ್ದು ಮೊದಲನೆಯ ಭಾಗ ಮಾತ್ರ ರಾಷ್ಟ್ರಗೀತೆಯಾಗಿ ಬಳಕೆಯಾಗುತ್ತಿದೆ. ಇಡೀ ಪದ್ಯವನ್ನು ರಾಷ್ಟ್ರಗೀತೆಯಾಗಿ ಹಾಡಲು ಸಾಧ್ಯವಿಲ್ಲದಿದ್ದರೂ ಅದನ್ನು ಎಲ್ಲ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೊರಕಿಸು ಅಗತ್ಯವಿದೆ. ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಸುಮಾರು ಐವತ್ತು ವರ್ಷಗಳಷ್ಟು ಹಿಂದೆಯೇ ರವೀಂದ್ರರು ಆಧುನಿಕ, ಮತಧರ್ಮ ನಿರಪೇಕ್ಷ, ಸ್ವತಂತ್ರ ಭಾರತದ ಕಲ್ಪನೆಯನ್ನು ಈ ಗೀತೆಯಲ್ಲಿ ಸೂಚಿಸಿದ್ದಾರೆ. ಈ ಗೀತೆಯನ್ನೂ ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ರವೀಂದ್ರರ ಕಾವ್ಯಕೃತಿಗಳನ್ನು ಸಮಗ್ರವಾಗಿ ಇಂಗ್ಲಿಷಿನಿಂದ ಅನುವಾದಿಸಿರುವ ಶ್ರೀ ಬಿ. ರಾಮನಾಥ ಭಟ್ ಅವರ ‘ರವೀಂದ್ರ ಕಾವ್ಯ ಸಂಚಯ’ (ಗೀತಾ ಬುಕ್ ಹೌಸ್ ಮೈಸೂರು ೨೦೧೪)ದಲ್ಲಿಯೂ ಇದರ ಪೂರ್ಣರೂಪ ಲಭ್ಯವಿದೆ. ರಾಮನಾಥಭಟ್ ಅವರ ಅನುವಾದ ಕಾವ್ಯಾತ್ಮಕವಾಗಿದೆ. ಈ ಕೃತಿಯಲ್ಲಿ ಅಮೂಲ್ಯವಾದ ಪ್ರಸ್ತಾವನೆ ಮತ್ತು ‘ಜನಗಣಮನ- ಒಂದು ಅವಲೋಕನ’ ಎಂಬ ಲೇಖನ ಸೇರಿ ಒಟ್ಟು ಐದು ಅನುಬಂಧಗಳಿವೆ. ಇಲ್ಲಿ ನಾಗರಾಜನ್ ಅವರ ಬಂಗಾಳಿ ಮೂಲದ ಅನುವಾದವನ್ನು ಓದುವ ಸೌಲಭ್ಯಕ್ಕಾಗಿ ಅಲ್ಲಲ್ಲಿ ಮಾರ್ಪಡಿಸಿ ಕೊಡಲಾಗಿದೆ:


ಜನಗಣಗಳ ಮನದ ಅಧಿನಾಯಕ ಭಾರತ ಭಾಗ್ಯ ವಿಧಾತನೆ, ನಿನಗೆ ಜಯವಾಗಲಿ.
ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಚಲ ಜಲಧಿ ತರಂಗ
ನಿನ್ನ ನೆನೆಯುತ ಎಚ್ಚೆತ್ತು, ನಿನ್ನ ಹರಕೆಯ ಬಯಸಿ, ಹಾಡುತಿವೆ ನಿನ್ನ ಜಯಕಥನ.
ಜನಗಣಗಳಿಗೆ ಮಂಗಳ ನೀಡುವ ಭಾರತ ಭಾಗ್ಯವಿಧಾತನೆ, ನಿನಗೆ ಜಯವಾಗಲಿ.
ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.


ನಿನ್ನ ಪ್ರೇಮದ ಕರೆಯ ಆಹ್ವಾನ ಕೇಳಿ ಪ್ರತಿದಿನ
ಹಿಂದು ಬೌದ್ಧ ಸಿಖ ಜೈನ ಪಾರಸಿಕ ಮುಸಲ್ಮಾನ ಕ್ರೈಸ್ತರು
ಪೂರ್ವ ಪಶ್ಚಿಮಗಳಿಂದ ಬಂದು ನಿನ್ನಾಸನದ ಬಳಿ ನಿಂದು ಪ್ರೇಮಮಾಲೆ ಹೆಣೆದಿದ್ದಾರೆ.
ಜನಗಣಗಳ ಐಕ್ಯ ವಿಧಾಯಕನಾದ ಭಾರತ ಭಾಗ್ಯವಿಧಾತನೆ, ನಿನಗೆ ಜಯವಾಗಲಿ.
ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.


ಏಳುಬೀಳುಗಳ ಕಠಿಣ ದಾರಿಯಲಿ ಯುಗ ಯುಗ ಚಲಿಸಿದೆ ಯಾತ್ರೆ.
ಹೇ ಚಿರಸಾರಥಿ, ನಿನ್ನ ರಥಚಕ್ರವೇ ತೋರಿದೆ ದಾರಿ ದಿನ ರಾತ್ರಿ.
ಘೊರ ಹಿಂಸೆ ನಡೆದಿರುವಾಗ ನಿನ್ನ ಶಂಖಧ್ವನಿ ಮೊಳಗಿ ದುಃಖ ಸಂಕಟಗಳ ಕಳೆದು
ಜನಗಣಕೆಲ್ಲ ದಾರಿ ತೋರಿದೆ. ಭಾರತ ಭಾಗ್ಯವಿಧಾತ, ನಿನಗೆ ಜಯವಾಗಲಿ.
ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.


ಘನ ಘೋರ ಕವಿದ ಕತ್ತಲಿನಲ್ಲಿ ಪೀಡಿತ ದೇಶ ಮೂರ್ಛೆಹೋಗಿರುವಾಗ
ನಿನ್ನ ಸಂತತ ಮಂಗಳಕರವಾದ ನೋಟ ಎವೆಯಿಕ್ಕದೆ ಜಾಗ್ರತವಾಗಿದೆ.
ದುಃಸ್ವಪ್ನ, ಆತಂಕಗಳಿಂದ ನಮ್ಮನ್ನು ನಿನ್ನ ತೊಡೆಯಲಿಟ್ಟು ರಕ್ಷಿಸಿದ ನೀನೆ ಸ್ನೇಹಮಯಿ ಮಾತೆ
ಜನಗಣಗಳ ದುಃಖ ಪರಿಹರಿಸುವ ಭಾರತ ಭಾಗ್ಯವಿಧಾತ, ನಿನಗೆ ಜಯವಾಗಲಿ.
ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.


ರಾತ್ರಿ ಕಳೆದಿದೆ, ಪೂರ್ವದ ಉದಯಗಿರಿ ಹಣೆಯಲ್ಲಿ ಇದೊ ಉದಯಿಸಿದ್ದಾನೆ.
ಹಕ್ಕಿಗಳು ಹಾಡುತ್ತಿವೆ, ಪುಣ್ಯ ಮಾರುತ ಸುರಿಸುತಿದೆ ನವ ಜೀವನ ರಸ.
ನಿನ್ನ ಕರುಣೆಯ ಅರುಣರಾಗದಿಂದ ಮಲಗಿರುವ ಭಾರತ ಎಚ್ಚರಗೊಳ್ಳಲಿ. ನಿನ್ನ ಪಾದದಲ್ಲಿ ಹಣೆಯಿರಿಸಿದ್ದೇವೆ.
ಜಯ ಜಯ ಜಯ ಭಾರತ ಭಾಗ್ಯವಿಧಾತ, ರಾಜೇಶ್ವರ, ನಿನಗೆ ಜಯವಾಗಲಿ.
ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.

ರವೀಂದ್ರರು ತಮ್ಮ ದೇಶಭಕ್ತಿ ಗೀತೆಗಳಲ್ಲಿ ಜನಗಣಮನದ ಈ ಅಧಿನಾಯಕನನ್ನು ‘ಜೀವನಸ್ವಾಮಿ’, ‘ಪ್ರಭು’, ‘ರಾಜೇಂದ್ರ’, ‘ರಾಜೇಶ್ವರ’ ಮೊದಲಾಗಿ ಕಲ್ಪಿಸಿಕೊಂಡಿರುವುದನ್ನು ‘ನೈವೇದ್ಯ’ ಸಂಕಲನದಲ್ಲಿ ನೋಡಬಹುದು. ಸ್ವಾತಂತ್ರ್ಯ ಹೋರಾಟ ಇನ್ನೂ ನಡೆಯುತ್ತಿರುವಾಗಲೇ ಗೆಲುವಿನ ಆಶಯವನ್ನೂ ಹೊಸ ಭಾರತದ ಉದಯದ ವಿಶ್ವಾಸವನ್ನೂ ರವಿಂದ್ರರು ಈ ಗೀತೆಯಲ್ಲಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬ್ರಿಟಿಷ್ ಸರಕಾರ ಎರಡೇ ವಾರಗಳಲ್ಲಿ ಪ್ರತಿಕ್ರಿಯಿಸಿತು. ಅಸ್ಸಾಂ ಸೇರಿದಂತೆ ಅಂದಿನ ಪೂರ್ವ ಬಂಗಾಳ ಸರಕಾರವು ತನ್ನ ಅಧಿಕಾರಿಗಳು ಹಾಗೂ ಬ್ರಿಟಿಷ್ ಸರಕಾರಕ್ಕೆ ವಿಧೇಯರಾಗಿರುವ ಪ್ರಜೆಗಳು ತಮ್ಮ ಮಕ್ಕಳನ್ನು ರವೀಂದ್ರರ ಶಾಂತಿನಿಕೇತನದಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ಸುತ್ತೋಲೆ ಹೊರಡಿಸಿತು! ಆಗ ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದ ಅಮೆರಿಕದ ಪ್ರಸಿದ್ಧ ವಕೀಲರು ಅಲ್ಲಿನ ಶಿಕ್ಷಣಕ್ರಮವನ್ನು ಹೊಗಳಿ ಅಮೆರಿಕದ ಪತ್ರಿಕೆಗಳಲ್ಲಿ ಬರೆದಾಗ ಬ್ರಿಟಿಷ್ ಸರಕಾರ ತನ್ನ ಸುತ್ತೋಲೆಯನ್ನು ರದ್ದುಪಡಿಸಿ ಮುಖವನ್ನುಳಿಸಿಕೊಂಡಿತು.

‘ಜನಗಣಮನ’ದ ಬಗ್ಗೆ ಅಪಪ್ರಚಾರಗಳೂ ಇದ್ದುವು. ಅದನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೆಂದೂ ಅದರಿಂದ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತೆಂದೂ ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ರವೀಂದ್ರರು ಬೆಲೆಕೊಡಲಿಲ್ಲ. ಅವರ ಆತ್ಮೀಯರೊಬ್ಬರಿಗೆ ಬರೆದ ಪತ್ರದಲ್ಲಿ “ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ” ಎಂದು ಹೇಳಿದ್ದಾರೆ. ಪ್ರೊ. ಹುಮಾಯೂನ್ ಕಬೀರ್ ಅವರು ‘ಜನಗಣಮನ’ದಲ್ಲಿರುವ ‘ಭಾರತ’ ಪದವನ್ನು ಬದಲಿಸಿದರೆ ಜಗತ್ತಿನ ಯಾವುದೇ ದೇಶಕ್ಕೆ ಸಲ್ಲುವ ಗೀತೆ ಇದಾಗಿದೆ ಎಂದಿದ್ದಾರೆ.

ಬಂಗಾಳಿ ಭಾಷೆಯಲ್ಲಿರುವ ‘ಜನಗಣಮನ’ವನ್ನು ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಸೇನೆಯ ಸರಕಾರ ‘ಶುಭ್ ಸುಖ್ ಚೈನ್’ ಎಂಬ ಹಿಂದೂಸ್ತಾನಿ ಭಾಷೆಗೆ ಅನುವಾದಿಸಿ ರಾಷ್ಟ್ರಗೀತೆಯಾಗಿ ಅಂಗೀಕರಿಸಿತು. ಅದನ್ನು ಮಮ್ತಾಜ್ ಹುಸೇನ್ ಮತ್ತು ಕರ್ನಲ್ ಅಬಿದ್ ಹುಸೇನ್ ಸರ್ಫರಾನಿ ಅನುವಾದಿಸಿದ್ದಾರೆ. ಅದಕ್ಕೆ ಕ್ಯಾಪ್ಟನ್ ರಾಮಸಿಂಗ್ ಠಾಕೂರ್ ಸಂಗೀತವನ್ನು ಒದಗಿಸಿದ್ದಾರೆ. ‘ಶುಭ್ ಸುಖ್ ಚೈನ್ ಬರಖಾ ಬರಸೇ, ಭಾರತ್ ಭಾಗ್ ಹೈ ಜಾಗ’ ಎಂದು ಆರಂಭವಾಗುವ ಗೀತೆ ‘ಜನಗಣಮನ’ವನ್ನು ನಿಕಟವಾಗಿ ಅನುಸರಿಸಿದೆ. ಜಗತ್ತಿನ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಐಎನ್ಎ ಕಾರ್ಯಕ್ರಮಗಳಲ್ಲಿ ಇದನ್ನು ‘ವಂದೇ ಮಾತರಂ’ಗೆ ಬದಲಾಗಿ ಹಾಡುತ್ತಿದ್ದರು.


ಶುಭ ಸುಖ ಸಂತೋಷಗಳ ಮಳೆ ಸುರಿದಿದೆ, ಭಾರತದ ಭಾಗ್ಯ ಉದಯಿಸಿದೆ.
ಪಂಜಾಬ್ ಸಿಂಧ್ ಗುಜರಾತ್ ಮರಾಠಾ ದ್ರಾವಿಡ ಉತ್ಕಲ್ ಬಂಗಾ.
ಚಂಚಲ್ ಸಾಗರ್ ವಿಂಧ್ಯ ಹಿಮಾಚಲ್ ನೀಲಾ ಜಮುನಾ ಗಂಗಾ.
ನಿನ್ನ ಗುಣವನ್ನು ಹಾಡುವೆವು, ನಿನ್ನಿಂದಲೇ ಬದುಕನ್ನು ಪಡೆದೆವು, ಪ್ರತಿಯೊಬ್ಬರ ಆಸೆ ಈಡೇರಿತು.
ಭಾರತದ ಭಾಗ್ಯ ಸೂರ್ಯನಾಗಿ ಜಗದಲ್ಲಿ ಹೊಳೆಯಲಿ,
ಜಯವಾಗಲಿ ಜಯವಾಗಲಿ ಜಯವಾಗಲಿ, ಜಯ ಜಯ ಜಯವಾಗಲಿ.


ನಿನ್ನ ಮಧುರ ಮಾತು ಎಲ್ಲರ ಹೃದಯಗಳಲ್ಲಿ ಪ್ರೀತಿ ನೆಲೆಸುವಂತೆ ಮಾಡಲಿ,
ನಿನ್ನ ತೊಡೆ ಏರಿದ ಎಲ್ಲ ಪ್ರಾಂತಗಳ ನಿವಾಸಿಗಳು, ಎಲ್ಲ ಮತಧರ್ಮಗಳವರ
ಎಲ್ಲ ಭೇದ ವ್ಯತ್ಯಾಸಗಳು ಅಳಿಸಿಹೋಗಲಿ. ಪ್ರೇಮಮಾಲೆಯಲ್ಲಿ ಸೇರಿಹೋಗಲಿ.
ಭಾರತದ ಭಾಗ್ಯ ಸೂರ್ಯನಾಗಿ ಜಗದಲ್ಲಿ ಹೊಳೆಯಲಿ,
ಜಯವಾಗಲಿ ಜಯವಾಗಲಿ ಜಯವಾಗಲಿ, ಜಯ ಜಯ ಜಯವಾಗಲಿ.


ಬೆಳಗಿನಲ್ಲಿ ಪಕ್ಷಿಗಳು ನಿನ್ನ ಗುಣಗಾನಮಾಡಲಿ.
ಬೀಸುವ ಗಾಳಿ ಬದುಕಿನಲ್ಲಿ ಋತುಗಳನ್ನು ತರಲಿ.
ಎಲ್ಲರೂ ಸೇರಿ ಹಿಂದ್ ಎನ್ನೋಣ,
ಜಯ ಆಜಾದ್ ಹಿಂದ್ ಘೋಷಣೆ ಕೂಗೋಣ.
ಭಾರತದ ಭಾಗ್ಯ ಸೂರ್ಯನಾಗಿ ಜಗದಲ್ಲಿ ಹೊಳೆಯಲಿ,
ಜಯವಾಗಲಿ ಜಯವಾಗಲಿ ಜಯವಾಗಲಿ, ಜಯ ಜಯ ಜಯವಾಗಲಿ.

೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಬಂದಾಗ ಜವಾಹರಲಾಲ್ ನೆಹರೂ ಅವರು ಕ್ಯಾಪ್ಟನ್ ರಾಮಸಿಂಗ್ ಠಾಕೂರ್ ಅವರನ್ನು ಅವರ ವಾದ್ಯ ಸಂಗೀತದ ತಂಡದೊಂದಿಗೆ ಕೆಂಪು ಕೋಟೆಯ ಮೇಲೆ ಆಹ್ವಾನಿಸಿ ‘ಶುಭ್ ಸುಖ್ ಚೈನ್’ ಐಎನ್ಎ ರಾಷ್ಟ್ರಗೀತೆಯನ್ನು ನುಡಿಸುವಂತೆ ಹೇಳಿದರು.

ಈ ಎಲ್ಲ ಗೀತೆಗಳಲ್ಲಿ ದೇಶದ ಬಗ್ಗೆ ಭಕ್ತಿ, ಪ್ರೀತಿ, ಅಭಿಮಾನಗಳಿವೆ. ಯಾವುದೇ ಮತಧರ್ಮದ ಮೇಲಾಟವಿಲ್ಲ. ‘ವಂದೇ ಮಾತರಂ’ ಮುಸ್ಲಿಮ್ ಆಡಳಿತದ ದೌರ್ಜನ್ಯದ ವಿರುದ್ಧ ಹೋರಾಡುವ ಹಿಂದೂ ಸನ್ಯಾಸಿಗಳ ಸ್ಪೂರ್ತಿಗೀತೆ. ‘ವಂದೇ ಮಾತರಂ’ ವಿರುದ್ಧದ ಭಾವನೆಗಳನ್ನು ಒಪ್ಪದಿದ್ದರೂ ಅರ್ಥಮಾಡಿಕೊಳ್ಳಬಹುದು. (ಈ ಎಲ್ಲ ಹಾಡುಗಳನ್ನೂ ಯುಟ್ಯೂಬಿನಲ್ಲಿ ನೋಡಬಹುದು, ಕೇಳಬಹುದು).

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ‘ಆನಂದಮಠ’ ಮುಸ್ಲಿಂ ದೊರೆಯ ದಬ್ಬಾಳಿಕೆಯ ವಿರುದ್ಧ ವಿರುದ್ಧ ಹಿಂದೂ ಸನ್ಯಾಸಿಗಳು ನಡೆಸುವ ಸ್ವಾತಂತ್ರ್ಯ ಹೋರಾಟದ ವಸ್ತುವುಳ್ಳ ಕಾದಂಬರಿ. ಆದರಲ್ಲಿರುವ ‘ವಂದೇ ಮಾತರಂ’ ಗೀತೆಯನ್ನು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬ್ರಿಟಿಷರ ವಿರುದ್ದ ಹಿಂದುಗಳು ಮುಸ್ಲಿಮರು ಭೇದವಿಲ್ಲದೆ ಹಾಡುತ್ತಿದ್ದರು. ಅದು ಬಂಗಾಳ ವಿಭಜನೆ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಗೀತೆಯ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ವಹಿಸಿತ್ತು. ೧೮೯೬ರಲ್ಲಿ ರವೀಂದ್ರರು ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿ ಕಲ್ಕತ್ತೆಯ ಕಾಂಗ್ರೆಸ್ ಮಹಾಧಿವೇಶನದಲ್ಲಿ ಹಾಡಿದ್ದರು. ಮತಧರ್ಮದ ಆಧಾರದ ಮೇಲೆ ನಡೆದ ದೇಶದ ವಿಭಜನೆಗೆ ಮುನ್ನುಡಿಯಾಗಿ ಬಂಗಾಳ ವಿಭಜನೆಯಾದಾಗಲೂ ‘ವಂದೇ ಮಾತರಂ’ ಗೀತೆಯನ್ನು ಎಲ್ಲರೂ ಹಾಡುತ್ತಿದ್ದರು. ೧೯೩೦ರ ಅನಂತರ ಅದರಲ್ಲಿ ಮೂರ್ತಿಪೂಜೆಯ ಪ್ರಸ್ತಾಪವಿರುವುದರಿಂದ ಮುಸ್ಲಿಮರು ಹಾಡಲು ನಿರಾಕರಿಸಿದರು. ಅದನ್ನು ಪರಿಶೀಲಿಸಿದ ರವೀಂದ್ರರು ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಸ್ಪೂರ್ತಿಯುತವಾಗಿ ಪ್ರಭಾವ ಬೀರಿದ ‘ವಂದೇಮಾತರಂ’ ಗೀತೆಯಿಂದ ಹಾಡುವುದಕ್ಕೆ ಅಯ್ದು ಭಾಗದಲ್ಲಿ ಯಾವುದೇ ಮತಧರ್ಮಕ್ಕೆ ನೋವುಂಟುಮಾಡುವ ಅಂಶವಿಲ್ಲವೆಂದು ಸ್ಪಷ್ಟಪಡಿಸಿದರು.

೧೯೪೧ರಲ್ಲಿ ರವೀಂದ್ರರ ಮರಣದ ಅನಂತರ ‘ವಂದೇ ಮಾತರಂ’ ಗೀತೆಗೆ ವಿರೋಧ ಹೆಚ್ಚಾಯಿತು. ‘ಜನಗಣಮನ’ಲ್ಲಿ ಯಾವುದೇ ಮತಧರ್ಮದ ಪ್ರಾಮುಖ್ಯದ ಪ್ರಸ್ತಾಪವಿಲ್ಲದಿರುವುದರಿಂದ ಸ್ವಾತಂತ್ರ್ಯಾನಂತರ ‘ಜನಗಣಮನ’ವನ್ನು ‘ರಾಷ್ಟ್ರಗೀತೆ’ಯಾಗಿಯೂ ‘ವಂದೇ ಮಾತರಂ’ಅನ್ನು ‘ರಾಷ್ಟ್ರೀಯ ಹಾಡಾ’ಗಿಯೂ ಅಂಗೀಕರಿಸಲಾಗಿದೆ. ಬಂಗಾಳ ವಿಭಜನೆಯ ಸಮಯದಲ್ಲಿ ರಚಿತವಾದ ರವಿಂದ್ರರ ‘ಅಮಾರ್ ಸೊನಾರ್ ಬಾಂಗ್ಲಾ’ ಅತ್ಯಂತ ಜನಪ್ರಿಯವಾಗಿದ್ದ ಮತ್ತೊಂದು ಗೀತೆ. ಇದರಲ್ಲಿ ಯಾವುದೇ ಮತಧರ್ಮದ ದೇವತೆಯ ಪ್ರಸ್ತಾಪವಿಲ್ಲ. ಇದು ದೇಶವನ್ನು ತಾಯಿಯಂತೆ ಪ್ರೀತಿಸಿ ವರ್ಣಿಸುವ ಅತ್ಯಂತ ಸುಂದರವಾದ ಹಾಡು. ಆದ್ದರಿಂದ ೧೯೭೧ರಲ್ಲಿ ಬಂಗ್ಲಾದೇಶ ಸ್ವತಂತ್ರವಾದಾಗ ಅದು ಈ ಹಾಡನ್ನು ತನ್ನ ರಾಷ್ಟ್ರಗೀತೆಯಾಗಿ ಸ್ವೀಕರಿಸಿತು.

ಒಬ್ಬನೇ ಕವಿಯ ಹಾಡು ಎರಡು ದೇಶಗಳ ರಾಷ್ಟ್ರಗೀತೆಯಾಗಿರುವುದು ವಿಶೇಷ. ಇದರ ಜೊತೆಗೆ ಶ್ರೀಲಂಕಾದ ರಾಷ್ಟ್ರಗೀತೆ ‘ಶ್ರೀ ಲಂಕಾ ಮಾತಾ’ ಮೇಲೆಯೂ ರವೀಂದ್ರರ ಪ್ರಭಾವವಿದೆ. ೧೯೪೦ರಲ್ಲಿ ರವೀಂದ್ರರೇ ಈ ಗೀತೆಯನ್ನು ಬಂಗಾಳಿಯಲ್ಲಿ ಬರೆದು ಸಂಗೀತ ಸಂಯೋಜಿಸಿದರೆಂದೂ ರವೀಂದ್ರರ ವಿದ್ಯಾರ್ಥಿಯಾಗಿದ್ದ ಶ್ರೀಲಂಕಾದ ಆನಂದ ಸಮರಕೂನ್ ಅದನ್ನು ಸಿಂಹಳೀ ಭಾಷೆಗೆ ಅನುವಾದಿಸಿದರೆಂದೂ ೧೯೫೧ರಲ್ಲಿ ಅದನ್ನು ಶ್ರೀಲಂಕಾದ ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಯಿತೆಂದೂ ಒಂದು ವಾದವಿದೆ. ಇದೂ ದೇಶವನ್ನು ತಾಯಿಯಾಗಿ ಕಂಡು ಪ್ರೀತಿ ಗೌರವಗಳಿಂದ ಕೊಂಡಾಡುವ ಸುಂದರವಾದ ಗೀತೆ.
‘ಶ್ರೀ ಲಂಕಾ ಮಾತಾ’ವನ್ನು ತಮಿಳು ಭಾಷೆಗೆ ಅನುವಾದಿಸಲಾಗಿದೆ. ತಮಿಳರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ತಮಿಳಿನಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಇನ್ನೂ ಹಲವು ಭಾಷೆಗಳಲ್ಲಿ ಹಾಡುವುದು ಶ್ರೀಲಂಕಾದ ರಾಷ್ಟ್ರಗೀತೆಯ ವಿಶೇಷ. ಇದರಿಂದ ಭಾರತಕ್ಕೆ ಒಂದು ಪಾಠವಿದೆ. ಬಹುಭಾಷೆಗಳ ರಾಷ್ಟ್ರವಾದ ಭಾರತದ ರಾಷ್ಟ್ರಗೀತೆಯನ್ನು ಎಲ್ಲರೂ ಬಂಗಾಳಿಯಲ್ಲಿಯೇ ಹಾಡಬೇಕಾದ ಅನಿವಾರ್ಯತೆ ಇಲ್ಲ. ‘ಜನಗಣಮನ’ದ ಇಡೀ ಹಾಡು, ಸಂಗೀತಗಳು ಯಾವುದೇ ಭಾರತೀಯ ಭಾಷೆಗೆ ಸುಲಭವಾಗಿ ಅನುವಾದಿಸಿ ಹಾಡಬಹುದಾದ ರೂಪದಲ್ಲಿವೆ. ಬಂಗಾಳಿ ಅರ್ಥವಾಗದಿದ್ದರೂ ಭಕ್ತಿಯಿಂದ ಹಾಡುವುದಕ್ಕಿಂತ ನಮ್ಮ ಭಾಷೆಯಲ್ಲಿ ಅರ್ಥ ಮಾಡಿಕೊಂಡು ಹಾಡುವುದು ಹೆಚ್ಚು ಪ್ರಯೋಜನಕರ. ಗೀತೆಯಲ್ಲಿಲ್ಲದ ರಾಜ್ಯಗಳ ಹೆಸರುಗಳನ್ನು ಅವುಗಳಿಗೆ ಸಮೀಪದ ಪ್ರದೇಶದ ಹೆಸರಿನ ಜಾಗದಲ್ಲಿ ಹಾಡಬಹುದು. ಉದಾ: ‘ದ್ರಾವಿಡ’ದ ಜಾಗದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತಮಿಳು ಎಂದು ಆಯಾ ರಾಜ್ಯಗಳವರು ಹಾಡಿ ಭಾರತದ ಒಕ್ಕೂಟ ಗಣರಾಜ್ಯವನ್ನು ಅರ್ಥಪೂರ್ಣವಾಗಿಸಹುದು.
ವಿವಿಧ ರಾಜ್ಯಗಳ ನಾಡಗೀತೆಗಳನ್ನೂ ಇದೇ ರೀತಿ ಮರು ಸಂಪಾದಿಸಿ ಪರಿಷ್ಕರಿಸಬೇಕಾಗಿದೆ. ಕನ್ನಡದ ‘ಜಯ ಭಾರತ ಜನನಿಯ ತನುಜಾತೆ’ಯನ್ನು ರಾಷ್ಟ್ರಗೀತೆಗಿಂತ ದೀರ್ಘವಾಗದಂತೆ, ಅದರಲ್ಲಿ ಯಾವುದೇ ಮತಧರ್ಮದ ಹೆಸರಿಲ್ಲದಂತೆ ದೇಶದ ಪ್ರಕೃತಿ ಸೌಂದರ್ಯ, ಭಾಷೆ, ಕಲೆಗಳ ಸಮೃದ್ಧಿಗಳನ್ನು ಪ್ರೀತಿ ಅಭಿಮಾನಗಳಿಂದ ಹಾಡಬೇಕಾದುದು ಮುಖ್ಯ. ಆದ್ದರಿಮದ ‘ನಾಡಗೀತೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಕೂಡದು’ ಎನ್ನುವುದು ಸರಿಯಲ್ಲ. ಅದನ್ನು ಬರೆದಂದಿನಿಂದ ಈಗಿನ ರೂಪದವರೆಗೆ ಕವಿಯೇ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ನಾಡಗೀತೆಯ ದೀರ್ಘತೆಯೂ ರಾಷ್ಟ್ರಗೀತೆಗಿಂತ ಹೆಚ್ಚಿರಕೂಡದು. ‘ನಾಡಗೀತೆಯನ್ನು ಪೂರ್ತಿ ಹಾಡಿ ಮುಗಿಸುವವರೆಗೆ ಎದ್ದು ನಿಲ್ಲಲು ಆಗದವರು ಹೊರಗೆ ಹೋಗಲಿ’ ಎನ್ನುವುದು ವಿವೇಕದ ಮಾತಾಗುವುದಿಲ್ಲ.

ಕುವೆಂಪು ಅವರೇ ತಮ್ಮ ಆತ್ಮಕಥನ ‘ನೆನಪಿನ ದೋಣಿಯಲ್ಲಿ’(೧೯೮೦) ‘ಜಯ ಭಾರತ ಜನನಿಯ ತನುಜಾತೆ’ಯನ್ನು ಬರೆದ ಸಂದರ್ಭವನ್ನು ಹೀಗೆ ವಿವರಿಸಿದ್ದಾರೆ:
“…೧೯೨೪-೨೫ರ ನನ್ನೊಂದು ಹಸ್ತಪ್ರತಿಯಲ್ಲಿ ‘ಕರ್ಣಾಟ ರಾಷ್ಟ್ರಗೀತೆ’ ಎಂಬ ಕವನವಿದೆ. ಅದು ನನ್ನ ‘ಜಯ ಹೇ ಕರ್ಣಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಮಹನೊ ಪ್ರಪ್ರಪಿತಾಮಹನೊ ಆಗಿರಬೇಕು. ಠಾಕೂರರ ‘ಜನಗಣಮನ’ದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣಸ್ಥಿತಿಯಂತಿದೆ ಅದು. [ಬಂಕಿಮಚಂದ್ರರಾಗಲಿ ಠಾಕೂರರಾಗಲಿ ದೇಶಕ್ಕೊಂದು ರಾಷ್ಟ್ರಗೀತೆಯನ್ನು ‘ನೀಡುವ ಪ್ರಯತ್ನ’ದ ಯೋಚನೆಯೂ ಮಾಡಿರಲಿಲ್ಲ. ಅವರ ಗೀತೆಗಳು ಜನಪ್ರಿಯವಾದ ಮೇಲೆ ಅವನ್ನು ರಾಷ್ಟ್ರೀಯ ಹಾಡು, ರಾಷ್ಟ್ರಗೀತೆಗಳನ್ನಾಗಿ ಇತರರು ಮಾಡಿದರು]. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ [೧೯೩೦] ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತು [೭.೧೨.೧೯೨೮]. ಮತ್ತೆ ೧೯೭೦-೭೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ನಾಡಗೀತೆಯಾಗಿ ಅಧಿಕೃತವಾಗಿ ಸ್ವೀಕರಿಸಿದಾಗ ಮೂರು ನಿಮಿಷಗಳಲ್ಲಿ ಅದನ್ನು ಹಾಡಿ ಮುಗಿಸುವಂತೆ ಸಂಗ್ರಹಿಸಿಕೊಳ್ಳಲಾಯಿತು. ೪೭ ವರ್ಷಗಳ ಅನಂತರ ೧೯೭೨ನೆಯ ಜುಲೈ ತಿಂಗಳಲ್ಲಿ ಇಂದು (ನಾನೀಗ ಇದನ್ನು ಬರೆಯುತ್ತಿರುವುದು ೨೭-೭-೧೯೭೨) ನಾಡಿಗೆ ‘ಕರ್ಣಾಟಕ’ ಎಂಬ ಹೆಸರಿಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಬಹುಶಃ ಪರಿಷತ್ತು ಅಂಗೀಕರಿಸಿರುವ ನಾಡಗೀತೆಯನ್ನು ಸರಕಾರವೂ ಒಪ್ಪುತ್ತದೆಂದು ಹಾರೈಸುತ್ತೇನೆ. ಭಾವ ಮತ್ತು ಭಾಷೆ ಎರಡರ ದೃಷ್ಟಿಯಿಂದಲೂ ಕವಿಯ ವಿಕಾಸವನ್ನು ಗುರುತಿಸಲು ನೆರವಾಗುತ್ತದೆಂದು ಅದರ ಪೂರ್ತಿ ಪಾಠವನ್ನು, ಯಾವುದನ್ನೂ ತಿದ್ದಲು ಹೋಗದೆ, ಅದರ ಎಲ್ಲ ನ್ಯೂನತೆ ದೋಷಗಳೊಂದಿಗೆ ಇಲ್ಲಿ ಕೊಡುತ್ತೇನೆ. ಹೈದರ, ಟೀಪು, ಶಿವಾಜಿ, ತುಕಾರಾಮ, ಪಂಪ, ಪುಲಿಕೇಶಿ, ಕೆಂಪೇಗೌಡ, ಅರ್ಥವಾಗದ ‘ಮಾ ರಾಮ’ -ಈ ಎಲ್ಲ ಹೆಸರುಗಳ ಕಲಬೆರಕೆಯ ವಿಚಿತ್ರ ಪಾಕವಿರುವುದನ್ನು ಓದುಗರು ದರಸ್ಮಿತರಾಗಿ ಗಮನಿಸಬಹುದು!

ಕರ್ಣಾಟ ರಾಷ್ಟ್ರಗೀತೆ
ಭುವನ ವಿನುತ ವರ ಪಾವನತರ ಭಾರತ ಜನನಿಯ ತನುಜಾತೆ,
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಪ್ರಕೃತಿ ವಿರಾಜಿತೆ, ರಮ್ಯ ತರಂಗಿಣಿ ವನ ಪರಿಶೋಭಿತ ಕಾಯೆ,
ಸುಕೃತ ಮನಸ್ಕರ ಹರುಷ ಪ್ರದಾಯಕಿ, ಮೇಘ ವಿಭೂಷಿತೆ, ತಾಯೆ,
ಭಾರತೀಯ ತೊಡೆಯೆ ತವ ಪೀಠ;
ಆರಾಜಿಪ ನಭವೆ ಕಿರೀಟ;
ಧಾರಿಣಿದೇವಿಯ ಕರೆವ ಅರಣ್ಯಗಳಾಲಾಪವೆ ತವ ಪಾಠ!
ದಿವಿಜರ ಕರೆವ ಮಹಾ ಶುಭಕರ ಭಾರತ ಜನನಿಯ ತನುಜಾತೆ,
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಜನನಿಯ ಜೋಗುಳ ವೇದ ಪುರಾಣಾಗಮ ಸ್ಮೃತಿಶ್ರುತಿಗಳ ಘೋಷ;
ಹೇ ಕರ್ಣಾಟಕ, ತವ ಜಯೋಷವೆ ಮಾತೆಯ ಚಿರ ಆವೇಶ;
ಹಚ್ಚನೆ ಶೈಲನಿಕರ ಸಾಲೇ
ಪಚ್ಚೆಯ ನವ ಕಂಠೀಮಾಲೆ;
ಅಚ್ಚರಿಯೀಯುವ ಅನಿಲಾಂದೋಳಿತ ನವ ವನ ನರ್ತನ ಲೀಲೆ!
ಕಪಿಲ ಪತಂಜಲ ಗೌತಮನುತ ಭಾರತ ಜನನಿಯ ತನುಜಾತೆ
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಶಂಕರ ರಾಮಾನುಜ ಮಾಧವ ಮಾ ತತ್ವಜ್ಞರ ವರ ಮಾತೆ,
ಹೈದರ ಟೀಪು ಶಿವಾಜಿ ಸುಭಟರ ಪಡೆದ ರಣರಾಮನ ಸೀತೆ,
ವಿನುತ ವಿರಕ್ತ ತುಕರಾಮ
ಕನಕ ಪುರಂದರ ಮಾರಾಮ
ರನ್ನ ಷಡಕ್ಷರಿ ಪೊನ್ನ ಲಕುಮಿಪತಿ ಕವಿಕೋಕಿಲರಾರಾಮ!
ಕವಿಗಳ ಮನವನ ಕೋಲಿಲ ವರ ಭಾರತ ಜನನಿಯ ತನುಜಾತೆ,
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಪುಲಿಕೇಶೀ ಯದು ಕಂಠೀರವ ಕೆಂಪೇನೃಪಶೇಖರ ಭೂಮಿ;
ಸಂಪದ ಅಭ್ಯದಯಂಗಳ ಪಾಲಿಪ ದಿವ್ಯ ವಿಹಾರದ ಭೂಮಿ!
ಕೃಷ್ಣ ಶರಾವತಿ ವರ ತುಂಗಾ
ಕಪಿನಿ ಕಾವೇರಿಗಳ ತರಂಗ
ಶುಭ್ರಪ್ರಕೃತಿ ವಿರಾಜಿತ ನೀಲಾದ್ರಿಯ ದಿವಿಜ ನಿವಾಸಿತ ರಂಗ!
ಜನರ ನಯನಗಳ ಮೋಹಿಪ ವರ ಭಾರತ ಜನನಿಯ ತನುಜಾತೆ,
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಸರ್ವ ಜನಾಂಗದ ಶಾಂತಿನಿಕೇತನ, ಸರ್ವ ಮತಗಳಾರಾಮ,
ಅಂಬರ ಚುಂಬಿತ ಶೈಲಾರಾಜಿತ ಪರಮ ಋಷಿಗಳಾರಾಮ!
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಬೌದ್ಧರುದ್ಯಾನ
ಹಿಂದೂಸ್ಥಾನದ ಗಾಯಕ ವೈಣಿಕ ಕೋವಿದರ ಮಹಾಸ್ಥಾನ!
ಭುವನ ವಿನುತ ವರ ಪಾವನತರ ಭಾರತ ಜನನಿಯ ತನುಜಾತೆ,
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!”

ಬಂಕಿಂಚಂದ್ರರ ಮತ್ತು ರವೀಂದ್ರರ ಯಾವ ಗೀತೆಯನ್ನೂ ತುಂಡರಿಸಿಲ್ಲ. ಅವು ಮೂಲದಲ್ಲಿ ಹಾಗೆಯೇ ಇವೆ. ಆದರೆ ಹಾಡುವ ಅನುಕೂಲಕ್ಕಾಗಿ ಚಿಕ್ಕದನ್ನಾಗಿ ಮಾಡಲಾಗಿದೆ. ಇದರಿಂದ ಅವರಿಗೆ ಅವಮಾನವಾಯಿತೆಂದು ಯಾರೇ ಬಂಗಾಳಿಗಳಾಗಲಿ, ಇತರರಾಗಲಿ ಹುಯಿಲೆಬ್ಬಿಸಿಲ್ಲ. ಕನ್ನಡ ನಾಡಗೀತೆಯನ್ನೂ ರಾಷ್ಟ್ರಗೀತೆಗಿಂತ ಚಿಕ್ಕದಾಗಿ ಹಾಡಿದರೆ ನೆನಪಿಟ್ಟುಕೊಳ್ಳುವುದಕ್ಕೂ ಆನುಕೂಲವಾಗುತ್ತದೆ. ಕರ್ನಾಟಕ ಸರಕಾರ ತನ್ನ ವಿವೇಚನೆಯನ್ನು ಬಳಸಿ ರಾಷ್ಟ್ರಗೀತೆಯಂತೆ ಹಾಡುವ ನಾಡಗೀತೆಯನ್ನೂ ೪೫ ಸೆಕೆಂಡುಗಳಿಗೆ ಮಿತಗೊಳಿಸಲಿ.

ರಾಷ್ಟ್ರೀಯ ಶಕ ೧೯೩೫-೧೯೩೬ ವಸಂತ : ಫಾಲ್ಗುಣ -ಚೈತ್ರ ಮಾರ್ಚಿ ೨೦೧೪

1935 marchuni

ಫ಼ೆಬ್ರುವರಿ ೨೦೧೪ ಹಾರ್ದಿಕ ಶುಭಾಶಯಗಳು.

ಪಂಡಿತ ಪುಟ

ಫ಼ೆಬ್ರುವರಿ ೨೦೧೪  ಹಾರ್ದಿಕ ಶುಭಾಶಯಗಳು.

೧೯೩೫ ಶಿಶಿರ : ಮಾಘ – ಫಾಲ್ಗುಣ ಫ಼ೆಬ್ರುವರಿ ೨೦೧೪

View original post

ಕಾಲುದಾರಿ

ಪ್ರಿಯರೆ,

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿಗಳು

೨೦೧೪ರ ಫೆಬ್ರುವರಿ ೧೮ರಂದು ತಮ್ಮ ಜಾಲಚರಿ ಸಂಶೋಧನ ವಿದ್ಯಾರ್ಥಿಯನ್ನು ಆರಂಭಿಸಲಿದ್ದಾರೆ. ಸಂಶೋಧನೆಯಲ್ಲಿ ತಾವು ಕಂಡ ಹೊಸ ಹೊಳಹುಗಳ ಬಗ್ಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಲಲಿದ್ದಾರೆ. ನೀವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಕೋರುತ್ತೇವೆ.

ಸಂಶೋಧನ ವಿದ್ಯಾರ್ಥಿಗಳು

ಫ಼ೆಬ್ರುವರಿ ೨೦೧೪ ಹಾರ್ದಿಕ ಶುಭಾಶಯಗಳು.

ಫ಼ೆಬ್ರುವರಿ ೨೦೧೪  ಹಾರ್ದಿಕ ಶುಭಾಶಯಗಳು.

೧೯೩೫ ಶಿಶಿರ : ಮಾಘ – ಫಾಲ್ಗುಣ ಫ಼ೆಬ್ರುವರಿ ೨೦೧೪

ಗಣರಾಜ್ಯೋತ್ಸವದ ಶುಭಾಶಯಗಳು

ಎಲ್ಲರಿಗೂ ೬೫ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು