“ನೀನು ನಕ್ಕರೆ ಹಾಲು ಸಕ್ಕರೆ!’

ಚಿತ್ರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕೀರ್ತಿಶ್ರೀ ನಾಯಕ

ಸುಸ್ಮಿತಾ ನಮ್ಮ ಮನೆಯಲ್ಲಿ ಇರಲು ಬಂದಾಗ ನಾನು ಆರನೆಯ ತರಗತಿಯಲ್ಲಿದ್ದೆ. ಸ್ವಲ್ಪ ಜಾಸ್ತಿಯೇ ಎನಿಸುವಂತೆ ಶಿಸ್ತಿನಲ್ಲಿ ಬೆಳೆದ ನನಗೆ ಸುಸ್ಮ ಯಾವ ಅಳುಕೂ ಇಲ್ಲದೆ ತನ್ನ ಮನೋಭಾವಗಳನ್ನು ಪ್ರಕಟಿಸುತ್ತಿದ್ದ ರೀತಿ ನೋಡಿ ನನಗೆ, ನಾನು ಕೈತೋಟದ ಗಿಡವಾದರೆ ಇವಳು ಕಾಡಿನ ಗಿಡದಂತೆ ಕಾಣುತ್ತಿದ್ದಳು.

ಸುಸ್ಮಿತಾ ನಮ್ಮ ಮನೆಗೆ ಬಂದ ಹೊಸದರಲ್ಲಿ ಯಾವುದೇ ಹಕ್ಕಿಯ ಕೂಗು ಕೇಳಿದರೂ ಸಾಕು, ‘ಏ ಕೀರ್ತಿ, ಇದು ಇಂಥಾ ಹಕ್ಕಿ’ ಎಂದು ಹಕ್ಕಿಯ ಹೆಸರು ಹೇಳುತ್ತಿದ್ದಳು. ಪಿಕರಾಳ, ಕಾಜಾಣ ಇತ್ಯಾದಿ ಹೆಸರುಗಳನ್ನು ಅವಳಿಂದಲೇ ಕೇಳಿ ಕಲಿತಿದ್ದೆ. ಅನಂತರ ತೇಜಸ್ವಿ ಮಾಮ ಮೈಸೂರಿಗೆ ಬಂದಾಗ ಇದು ಇಂಥದ್ದೇ ಹಕ್ಕಿ ಎಂದು ಹೇಗೆ ಗೊತ್ತುಮಾಡುವುದೆಂದು ಅವರಿಂದ ಕೇಳಿ ತಿಳಿಯುತ್ತಿದ್ದೆ. ಮೊದಮೊದಲು ಸುಸ್ಮಳಿಗೆ ಈ ಜ್ಞಾನ ಎಲ್ಲಿಂದ ಬಂತು ಎಂಬ ಕುತೂಹಲ ಆಗುತ್ತಿತ್ತು. ಕಾಡಿನಿಂದ ನಾಡಿಗೆ ಬಂದ ಇವಳು ಎಂತೆಂಥ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದಾಳೆಂದು ನನಗೆ ಆಗ ಅರ್ಥವಾಗಿರಲಿಲ್ಲ. ಇದೇ ರೀತಿ ೩-೪ ವರ್ಷದ ಪುಟಾಣಿಯಾಗಿದ್ದ ಈಶಾನ್ಯೆ ಕೂಡ ಗಿಡ-ಬಳ್ಳಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಳು. ಅವಳಿಗೆ ಗಿಡಗಳ ಬಗ್ಗೆ ಅಷ್ಟೇ ಅಲ್ಲದೆ, ಅವುಗಳ ಉಪಯೋಗಗಳ ಬಗ್ಗೆಯೂ ತಿಳಿದಿತ್ತು. ಈ ವಿಷಯದಲ್ಲಿ ‘ಮಾರ’ನೇ ಅವಳ ಗುರುವಿರಬೇಕು. ಸುಸ್ಮಿತಾ ಮೈಸೂರಿಗೆ ಓದಲು ಬಂದ ಮೇಲೆ ಸುಮಾರು ೮೫-೯೦ ವರ್ಷದ ಮಾರನೇ ಅವಳ ಸಹಪಾಠಿಯಾಗಿದ್ದ. ಅವನೊಂದಿಗೆ ಕಾಡು ಅಲೆಯುವಾಗ ಸಂಗ್ರಹಿಸಿದ ಮಾಹಿತಿ ಇದಾಗಿರಬಹುದು.

ತೇಜಸ್ವಿ ಮಾಮ, ರಾಜೇಶ್ವರಿ ಆಂಟಿ ತಿಂಗಳಿಗೊಮ್ಮೆಯಾದರೂ ಮೈಸೂರಿಗೆ ಬಂದು ಸುಸ್ಮಳನ್ನು ನೋಡಿಕೊಂಡು ಹೋಗುತ್ತಿದ್ದರು. ಆಗ ಅವರಿದ್ದಷ್ಟು ದಿನ ಇವಳು ಅವರಜ್ಜಿಯ ಮನೆಯಲ್ಲಿರುತ್ತಿದ್ದಳು. ಹೀಗಿದ್ದಾಗ ಒಂದು ಭಾನುವಾರ ಮಾಮ ಮನೆಗೆ ಬಂದವರು ಅವರ ಮಾತುಕತೆಯೆಲ್ಲ ಮುಗಿಸಿ ಹೊರಡುವಾಗ, ‘ಕೀರ್ತಿ ನಡಿಯೆ, ನಮ್ಮನೇಲಿ ಮೀನಿದೆ. ಅಲ್ಲೇ ಊಟಮಾಡೋಣ’ ಎಂದರು. ತೇಜಸ್ವಿ ಮಾಮ ಹೇಳಿದ ಅನಂತರ ಮತ್ತೊಮ್ಮೆ ಯೋಚಿಸುವ ರೂಢಿಯೇ ಇಲ್ಲದ ನಾನು ಅವರ ಹಿಂದೆ ಹೋದೆ.
ಬಾಗಿಲನ್ನು ತೆರೆದ ರಾಜೇಶ್ವರಿ ಆಂಟಿ ನಮ್ಮನ್ನು ನೇರವಾಗಿ ಊಟದ ಮನೆಗೆ ಕರೆದುಕೊಂಡುಹೋದರು. ಅಣ್ಣ(ಕುವೆಂಪು), ಸುಸ್ಮ, ಈಶ, ಪ್ರಾರ್ಥನೆ ಊಟಕ್ಕೆ ಕುಳಿತಿದ್ದರು. ಅಮ್ಮ(ಹೇಮಾವತಿ) ಬಿಸಿ ಬಿಸಿಯಾಗಿ ಮೀನು ಇತ್ಯಾದಿಗಳನ್ನು ಹುರಿದುಕೊಡುತ್ತಿದ್ದರು. ತಾರಿಣಕ್ಕ, ರಾಜೇಶ್ವರಿ ಆಂಟಿ ಬಡಿಸುತ್ತಿದ್ದರು. ಎಲ್ಲರೂ ಏನೊ ಮಾತಾಡಿಕೊಂಡು ಊಟಮಾಡುತ್ತಿದ್ದರು. ಅಣ್ಣ ಮುಂದೆ ಕೂತದ್ದರಿಂದ ನಾನು ಹೆಚ್ಚು ಮಾತಾಡದೆ ಮೀನು, ಕೋಳಿ ಇತ್ಯಾದಿಗಳಿದ್ದ ನನ್ನ ತಟ್ಟೆ ನೋಡಿಕೊಂಡು ಸುಮ್ಮನೆ ಊಟ ಮಾಡುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಅಣ್ಣ ಏನು ಊಟ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ತಲೆಗೆ ಬಂತು. ಅವರ ತಟ್ಟೆ ನೋಡಿ ನಾನು ಅವಾಕ್ಕಾದೆ. ಅವರೂ ನಮ್ಮಂತೆ ಮೀನು ಕೋಳಿಗಳನ್ನೇ ತಿನ್ನುತ್ತಿದ್ದರು. ಆ ವಯಸ್ಸಿನಲ್ಲಿ ನನಗೆ ಜಾತಿ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಆಗ ನನ್ನ ಪ್ರಕಾರ ಸಸ್ಯಾಹಾರಿಗಳೆಲ್ಲ ಬ್ರಾಹ್ಮಣರು, ಅಸಸ್ಯಾಹಾರಿಗಳೆಲ್ಲ ಗೌಡರು ಎಂಬ ಭಾವನೆ. ಆ ಪ್ರಕಾರ ನನ್ನ ಅಭಿಪ್ರಾಯದಲ್ಲಿ ಅಣ್ಣ ಬ್ರಾಹ್ಮಣರು, ತೇಜಸ್ವಿ ಮಾಮ, ನಾವು ಎಲ್ಲ ಗೌಡರು!
ಕುವೆಂಪು ಅವರು ಸಸ್ಯಾಹಾರಿಗಳು ಎಂದು ನಾನು ತಿಳಿದುಕೊಳ್ಳಲು ಹಲವು ಕಾರಣಗಳಿದ್ದವು. ಶಾಲೆಯಲ್ಲಿ ನಾವು ಕೇಳುತ್ತಿದ್ದ ಅಂಶಗಳು, ಅಣ್ಣ ಯಾವಾಗಲೂ ಧ್ಯಾನಾಸಕ್ತರಾಗಿರುತ್ತಾರೆಂಬ ವಿಷಯ ಮತ್ತು ಅವರಿಗೆ ಇಹದ ಅರಿವಿಲ್ಲವೆಂಬ ವಿಚಾರ ಕೇಳುತ್ತಲೇ ಬಂದಿದ್ದೆ. ಆದ್ದರಿಂದ ಕುವೆಂಪು=ತಪಸ್ವಿ=ಬಾಹ್ಮಣ ಎಂದಷ್ಟೇ ನನ್ನ ಪುಟ್ಟ ಮೆದುಳಿಗೆ ತಿಳಿದದ್ದು. ದೊಡ್ಡವಳಾಗುತ್ತಾ ಹೋದಂತೆ ತಪೋನಿರತ ಋಷಿಗಳಿಗಿಂತ ಅಣ್ಣನವರ ಜೀವನ ಹೊರತಾಗಿಲ್ಲ ಎಂಬುದು ತಿಳಿಯುತ್ತಾ ಹೋಯಿತು.

ತಾಳ್ಮೆ, ಸೌಜನ್ಯಗಳ ಮೂರ್ತಿಗಳಾಗಿದ್ದ ಅಣ್ಣ, ಅಮ್ಮ(ಕುವೆಂಪು. ಹೇಮಾವತಿ)ಯವರ ಆತ್ಮೀಯತೆಯನ್ನು, ಸುಸ್ಮಳನ್ನು ಶನಿವಾರ ಬಿಡಲು ಮತ್ತು ಭಾನುವಾರ ಕರೆತರಲು ಅವರ ಮನೆಗೆ ಹೋಗುತ್ತಿದ್ದಾಗ ಅನುಭವಿಸಿದ್ದೇನೆ. ಹಲವು ಬಾರಿ ಅಮ್ಮ, ತಾರಿಣಕ್ಕ, ನಾನು ವೆರಾಂಡದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಣ್ಣ ಬಿಡುವಾಗಿದ್ದರೆ ತಾವೂ ಬಂದು ನಮ್ಮೊಂದಿಗೆ ಕುಳಿತು ತೇಜಸ್ವಿ ಮಾಮನ ಲೀಲೆಗಳನ್ನು ಹೇಳಿ ತಾವೂ ನಕ್ಕು ನಮ್ಮನ್ನೂ ನಗಿಸುತ್ತಿದ್ದರು. ಹಾಗಾಗಿ ತಾರಿಣಕ್ಕನ ‘ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿನ ಹಲವು ವಿಷಯಗಳನ್ನು ಅಣ್ಣ, ಅಮ್ಮರ ಬಾಯಿಂದ ಕೇಳಿ ಬಲ್ಲೆ.

ಈ ಮೃದುಭಾಷಿಗಳ ನಡುವೆ ತೇಜಸ್ವಿ ಮಾಮ ಹೇಗೆ ಅವತರಿಸಿದರು ಎಂಬ ಬಗ್ಗೆ ಬಹಳ ಸೋಜಿಗವಾಗುತ್ತಿತ್ತು. ಅಣ್ಣ, ಅಮ್ಮ, ತಾರಿಣಕ್ಕ, ಕಲಕ್ಕ ಯಾವತ್ತೂ ಜೋರಾಗಿ ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ; ಮಾಮ ಸಣ್ಣಗೆ ಮಾತಾಡಿದ್ದನ್ನೂ ಕೇಳಿ ಇಲ್ಲ. ಇದರ ಜೊತೆಗೆ ಸಮಾಜದಲ್ಲಿ ಒಬ್ಬ ಮೇರು ವ್ಯಕ್ತಿ ಎನಿಸಿಕೊಂಡವರು ತಮ್ಮ ಮಗನ ಹುಡುಗಾಟ, ಹುಡುಕಾಟಕ್ಕೆ ಯಾವುದೇ ರೀತಿಯ ಬ್ರೇಕ್ ಹಾಕದೆ ಅವರ ದಾರಿಯನ್ನು ಅವರೇ ಅವರಿಗೆ ಬೇಕಾದಂತೆ ಹುಡುಕಿಕೊಳ್ಳಲು ಬಿಟ್ಟ ಬಗ್ಗೆ ಪರಮಾಶ್ಚರ್ಯವಾಗುತ್ತದೆ. ಇದರ ಜೊತೆ ಅಣ್ಣನವರಿಗೆ ತಮ್ಮ ಬಗ್ಗೆ ಮತ್ತು ತಮ್ಮ ಮಗನ ಬಗ್ಗೆ ಎಂಥ ವಿಶ್ವಾಸ ಇತ್ತೆಂದೂ ತಿಳಿಯುತ್ತದೆ. ಅಣ್ಣ ಯಾವ ನಿಮಿಷದಲ್ಲಿಯೂ ತಮ್ಮ ವ್ಯಕ್ತಿತ್ವಕ್ಕೆ ತೇಜಸ್ವಿ ಮಾಮನಿಂದ ತೊಂದರೆಯಾಗಬಹದೆಂದು ಯೋಚಿಸದೆ ತೇಜಸ್ವಿ ಮಾಮ ಸ್ವತಂತ್ರ ವ್ಯಕ್ತಿತ್ವವಾಗಿ ಬೆಳೆಯಲು ಸಹಾಯಮಾಡಿದ್ದು ವಿಶೇಷವಾಗಿ ಕಾಣುತ್ತದೆ. ಇದು ವಿಶಾಲವಾದ ಮರದ ನೆರಳಿನಲ್ಲಿ ಮತ್ತೊಂದು ಮರ ಬೆಳೆಯುವುದಿಲ್ಲ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿದಂತೆನಿಸುತ್ತದೆ. ಇಂತಹ ಅಮ್ಮ, ಅಪ್ಪರನ್ನು ಪಡೆದ ತೇಜಸ್ವಿ ಮಾಮ ಧನ್ಯರು. ಇಂತಹ ದೊಡ್ಡವರ ಒಡನಾಟದಲ್ಲಿ ನಾನೂ ಕೆಲಕಾಲ ಕಳೆದದ್ದಕ್ಕೆ ನನಗೂ ಬಹಳ ಸಂತೋಷವಿದೆ.

ಒಮ್ಮೆ ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಕುವೆಂಪು ಅವರ ಪ್ರತಿಮೆ ಮಾಡುವ ಸಲುವಾಗಿ ಶ್ರೀ ಪಿ.ಆರ್. ತಿಪ್ಪೇಸ್ವಾಮಿಯವರು ಕುವೆಂಪು ಅವರ ಮನೆಗೆ ಬಂದು ಅವರ ಚಿತ್ರಗಳನ್ನು ತೆಗೆಯುತ್ತಾ ಪ್ರತಿಮೆಯನ್ನು ಮಾಡಿಸುವುದರಲ್ಲಿ ನಿರತರಾಗಿದ್ದರು. ಅದು ರಜೆಯ ದಿನವಾಗಿದ್ದರಿಂದ ನಾನು ಸುಸ್ಮಳನ್ನು ಕರೆದುಕೊಳ್ಳಲೋ ಬಿಡಲೋ ಹೋಗಿದ್ದವಳು ಅವರು ಮಾಡುತ್ತಿದ್ದ ಪ್ರತಿಮೆಯನ್ನು ಕುತೂಹಲದಿಂದ ನೋಡುತ್ತಾ ಕುಳಿತಿದ್ದೆ. ತಿಪ್ಪೇಸ್ವಾಮಿಯವರು ಅಣ್ಣನವರಿಗೆ, ನಿಮ್ಮ ಮೊಮ್ಮಕ್ಕಳ ಜೊತೆ ಫೋಟೊ ತೊಗೋತೀನಿ ಅಂದರು. ಅಣ್ಣ ಸುಸ್ಮ ಪ್ರಾರ್ಥನೆಯರನ್ನು ಕರೆದರು.ಅನಂತರ ಅಲ್ಲೇ ಕುಳಿತಿದ್ದ ನನ್ನನ್ನೂ ‘ಬಾ ಅಕ್ಕ’ ಎಂದು ಕರೆದರು. ಆ ಕಾಲದ ಕನ್ನಡ ಅಧ್ಯಯನ ಸಂಸ್ಥೆಯ ರಾಜಕೀಯದ ಬಗ್ಗೆ ಅಲ್ಪ ಸ್ವಲ್ಪ ಅರಗಿಸಿಕೊಂಡಿದ್ದ ನನಗೆ ಏನು ಮಾಡಬೇಕೆಂದು ತಿಳಿಯದೆ ಬಹಳ ಮುಜುಗರವಾಯಿತು. ಆದರೆ ಅಣ್ಣನವರ ಮಾತನ್ನು ಮೀರುವಂತಿರಲಿಲ್ಲ. ಏನು ಮಾಡಬೇಕೆಂದೇ ತಿಳಿಯದೆ ತಿಪ್ಪೇಸ್ವಾಮಿಯವರ ಮುಖ ನೋಡಿದೆ. ಕುವೆಂಪು ಅವರು ಜಿ.ಎಚ್. ನಾಯಕರ ಮಗಳನ್ನು ತಮ್ಮೊಂದಿಗೆ ಫೋಟೋಗೆ ನಿಲ್ಲಲು ಕರೆಯುತ್ತಿರುವುದನ್ನು ನೋಡಿ ಅವರು ನನಗಿಂತ ಹೆಚ್ಚಿನ ಗೊಂದಲದಲ್ಲಿದ್ದಂತೆ ಕಂಡಿತು. ಅಣ್ಣನವರ ಮಾತನ್ನು ಮೀರಲಾರದೆ ನಾನೂ ಅವರೊಂದಿಗೆ ಫೋಟೋವನ್ನೇನೊ ತೆಗೆಸಿಕೊಂಡೆ. ಆದರೆ ಅದರ ಪ್ರತಿಯನ್ನು ತಿಪ್ಪೇಸ್ವಾಮಿಯವರೂ ಕೊಡಲಿಲ್ಲ, ನಾನೂ ಕೇಳಲಿಲ್ಲ. ಅಪ್ಪ, ಮೀರಕ್ಕರಿಗೆ ಈ ವಿಷಯವನ್ನು ನಾನು ಹೇಳಲೂ ಇಲ್ಲ.

ಶಿವಮೊಗ್ಗ ಸುಬ್ಬಣ್ಣನವರು ಕುವೆಂಪು ಭಾವಗೀತೆಗಳನ್ನು ಆಡಿಯೋ ಕ್ಯಾಸೆಟ್ ಮಾಡಿದ ಕಾಲವದು. ನಾನು, ಸುಸ್ಮ ಆ ಕ್ಯಾಸೆಟ್ಟನ್ನು ಪದೇಪದೇ ಕೇಳುತ್ತಿದ್ದೆವು. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ನಮ್ಮ ಮನೆಗೆ ಬಂದಿದ್ದರು. ಅವರು ಮೈಸೂರಿಗೆ ಬಂದಾಗಲೆಲ್ಲ ನಮ್ಮಲ್ಲಿ ಉಳಿದುಕೊಳ್ಳುತ್ತಿದ್ದರು. ಅಡಿಗರಿಗೆ ಕಾಫಿ, ಸಿಗರೇಟು ಎರಡು ಇದ್ದರೆ ಮತ್ತೇನೂ ಬೇಡವಾಗಿತ್ತು. ಆ ದಿನ ಕೂಡ ಮೀರಕ್ಕ ಶಾಲೆಯಿಂದ ಬರುತ್ತಿದ್ದಂತೆಯೇ ನೇರವಾಗಿ ಅಡಿಗೆ ಮನೆಗೆ ಅಡಿಗರಿಗೆ ಕಾಫಿ ಮಾಡಲು ಹೊರಟಿದ್ದನ್ನು ನೋಡಿದ ಅಡಿಗರು ಮೀರಕ್ಕನಿಗೆ ಹೇಳುತ್ತಿದ್ದ ಮಾತು ಆಗ ತಾನೇ ಶಾಲೆಯಿಂದ ಮರಳಿದ ನನ್ನ ಕಿವಿಗೂ ಬಿತ್ತು. ಅವರು ‘ಮೀರಾ, ಕಾಫಿ ಮಾಡಬೇಡಮ್ಮ. ನಾನು ಕುಡಿದಾಯಿತು’ ಎಂದರು. ನಾನೂ ಮನೆಯಲ್ಲಿಲ್ಲದ್ದರಿಂದ ಮೀರಕ್ಕ ಅವಾಕ್ಕಾಗಿ, ‘ಎಲ್ಲಿ ಸಾರ್’ ಎಂದರು. ಅದಕ್ಕೆ ಅಡಿಗರು ‘ಸುಸ್ಮಿತ ಮಾಡಿಕೊಟ್ಟಳು’ ಎಂದರು. ಸುಸ್ಮಿತಾ ಆಗ ೨-೩ ನೇ ತರಗತಿಯಲ್ಲಿ ಓದುತ್ತಿದ್ದ ಪುಟಾಣಿ. ಮೀರಕ್ಕ ಈ ಮಾತನ್ನು ನಂಬಲಾರದೆ ಅಲ್ಲೇ ಇದ್ದ ಸುಸ್ಮಳನ್ನು ಕಾಫಿ ಹೇಗೆ ಮಾಡಿದೆ? ಎಂದು ಕೇಳಿದರು. ಅವಳು ತಾನು ಮಾಡಿದ ರೀತಿಯನ್ನು ಮೀರಕ್ಕನಿಗೆ ವಿವರಿಸುತ್ತಿದ್ದಳು. ಅಲ್ಲೇ ನಿಂತು ಇವೆಲ್ಲವನ್ನೂ ಕೇಳುತ್ತಿದ್ದ ನಾನು ‘ಸುಸ್ಮ, ಕಾಫಿ ಮಾಡಕ್ಕೆ ನೀನು ಎಷ್ಟೆಲ್ಲಾ ಕಷ್ಟಪಟ್ಟೆ.. ಆದರೆ ನಿಮ್ಮ ಅಜ್ಜಯ್ಯನ ಮನೇಲಿ ಬಹಳ ಸುಲಭ ಕಣೆ’ ಎಂದೆ. ಚಿಕ್ಕವಳಾದ ಅವಳಿಗೆ ಅದೇನೂ ಅರ್ಥವಾಗಲಿಲ್ಲ. ‘ಅದ್ಹೇಗೇ?’ ಎಂದಳು. ನಾನು, ‘ನಿಮ್ಮ ಅಜ್ಜಿ ಕಾಫಿ ಡಿಕಾಕ್ಷನ್ ಲೋಟದಲ್ಲಿ ಹಾಕಿಕೊಂಡು ನಿಮ್ಮ ಅಜ್ಜನ ಮುಂದೆ ಬಂದು ನಿಂತು ನಕ್ಕರೆ ಹಾಲು ಸಕ್ಕರೆ ಮಿಕ್ಸ್ ಆಗುತ್ತೆ’ ಎಂದು ‘ನೀನು ನಕ್ಕರೆ ಹಾಲು ಸಕ್ಕರೆ’ ಎಂಬ ಕುವೆಂಪು ಅವರ ಭಾವಗೀತೆಯ ಸಾಲುಗಳನ್ನು ನೆನಪು ಮಾಡಿಕೊಂಡು ಹೇಳಿದೆ. ನಮ್ಮ ಈ ಸಂಭಾಷಣೆಗೆ ಮೀರಕ್ಕ, ಅಡಿಗರು ಜೋರಾಗಿ ನಕ್ಕರು. ಆದರೆ ಪಾಪ ಆ ಪುಟ್ಟ ಮನಸ್ಸಿಗೆ ಏನನಿಸಿತೋ ಏನೋ! ಮುಂದಿನ ಸಲ ನಾವು ಅವರ ಅಜ್ಜಯ್ಯನ ಮನೆಗೆ ಹೋದಾಗ ಅಜ್ಜಯ್ಯ, ಅಜ್ಜಿಯರಿಗೆ ಬಹಳ ಬೇಸರದಿಂದ ನನ್ನ ಮುಂದೇ ಈ ಸಂಗತಿಯನ್ನು ಹೇಳಿದಳು. ನಾನು ಇದನ್ನು ನಿರಿಕ್ಷಿಸಿಯೇ ಇರಲಿಲ್ಲ. ವಿಷಯವನ್ನು ಕೇಳಿ ಅಣ್ಣ, ಅಮ್ಮ ಮುಕ್ತವಾಗಿ ನಕ್ಕರು. ಅನಂತರ ಅಮ್ಮ ಸುಸ್ಮಿತಳಿಗೆ ಅರ್ಥವಾಗುವಂತೆ ‘ಅಕ್ಕಾ, ಕೀರ್ತಿ ಮಾಡಿದ್ದು ಹಾಸ್ಯ, ಅದಕ್ಕೆಲ್ಲ ಬೇಜಾರು ಮಾಡಿಕೊಳ್ಳಬಾರದಕ್ಕ’ ಎಂದು ಅವಳನ್ನು ಸಮಾಧಾನ ಮಾಡಿದರು.

ನಮ್ಮ ಮದುವೆಯಾದ ಹೊಸದರಲ್ಲಿ ಅಣ್ಣ, ತಾರಿಣಕ್ಕ ಅವರನ್ನು ಮಾತನಾಡಿಸಿಕೊಂಡು ಬರಲು ನಾನು, ಮದನ್ ಕುವೆಂಪು ಅವರ ಮನೆಗೆ ಹೋದೆವು. ಆಗ ಅಮ್ಮ ಇರಲಿಲ್ಲ. ಗೇಟಿನ ಹೊರಗೆ ಕುವೆಂಪು ವಿಶ್ವವಿದ್ಯಾನಿಲಯದ ಕಾರು, ಮತ್ತೂ ಒಂದೆರಡು ಕಾರುಗಳಿದ್ದದನ್ನು ನೋಡಿ ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬಂದರಾಯಿತೆಂದು ಮಾತನಾಡಿಕೊಂಡೆವು. ಈ ವಿಷಯವನ್ನು ತಾರಿಣಕ್ಕನವರಿಗೆ ಹೇಳಿಬರಲು ನಾನೊಬ್ಬಳೇ ಒಳಗೆ ಹೋದೆ. ಹಾಲಿನಲ್ಲಿ ಚದುರಂಗ ಮಾಮ, ಶಾಂತಿನಾಥ ದೇಸಾಯಿಯವರು, ಶಿವಮೊಗ್ಗೆಯ ಕೃಷ್ಣಮೂರ್ತಿ ಸಿರ್ಸಿ ಮತ್ತೆ ನಮಗೆ ಪರಿಚಯದ ಒಬ್ಬಿಬ್ಬರು ಇದ್ದರು. ಆಗ ಶಾಂತಿನಾಥ ದೇಸಾಯಿಯವರು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ನಾನು ಒಳಗೆ ಹೋಗುತ್ತಿದ್ದಂತೆಯೇ ಅಣ್ಣ, ‘ಅಕ್ಕಾ, ಬಂದ್ಯಾ’ ಎಂದು ಅತಿಥಿಗಳ ಕಡೆ ತಿರುಗಿ ‘ನಾವು ಕೀರ್ತಿ, ಅವಳ ಗಂಡನನ್ನು ಮನೆಗೆ ಬರಲು ಹೇಳಿದ್ದೆವು. ಆದರೆ ಅನಿರೀಕ್ಷಿತವಾಗಿ ನೀವು ಬಂದಿದ್ದೀರಿ’ ಅಂದರು. ಎಲ್ಲ ಹಿರಿಯರ ನಡುವೆ ನನಗೆ ಬಹಳ ಮುಜುಗರವಾಗುತ್ತಿತ್ತು. ನಮ್ಮ ಮಾತುಗಳನ್ನು ಕೇಳಿದ ತಾರಿಣಕ್ಕ ಹೊರಗೆ ಬಂದರು. ಆಗ ನಾನು ಅಕ್ಕನಿಗೆ ‘ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬರುತ್ತೇವೆ’ ಎಂದೆ. ಇದನ್ನು ಕೇಳಿಸಿಕೊಂಡ ಅಣ್ಣ ‘ಇಲ್ಲ ಇಲ್ಲ, ನಾವು ಈ ಹೊತ್ತಿಗೆ ನಿಮಗೆ ಬರಕ್ಕೆ ಹೇಳಿದ್ದು, ನೀನು ಹೋಗಿ ನಿನ್ನ ಗಂಡನನ್ನ ಕರ್ಕೊಂಬಾಕ್ಕ’ ಎಂದರು. ಅಣ್ಣನವರಿಗೆ ಎದುರಾಡಲಾಗದೆ ನಾನು ಮದನ್ ಅನ್ನು ಕರೆದುಕೊಂಡು ಬಂದೆ. ಆಗ ಅಣ್ಣ ಕುಳಿತಿದ್ದವರಿಗೆ ‘ಇವನು ಕಲ್ಲು ಮಣ್ಣುಗಳ ಜೊತೆ ಮಾತನಾಡುವವನು’ ಎಂದು ಪರಿಚಯಿಸಿದರು. ಒಂದು ನಿಮಿಷ ನಮಗ್ಯಾರಿಗೂ ಇವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಅನಂತರ ಅವರೇ ಇವನು ಇಂಜಿನಿಯರ್, ಇವನ ವ್ಯವಹಾರ ಏನಿದ್ದರೂ ಕಲ್ಲು ಮಣ್ಣುಗಳ ಜೊತೆ. ಅದಕ್ಕೇ ಹಾಗೆ ಹೇಳಿದೆ ಎಂದು ನಕ್ಕರು. ನಮ್ಮ ಮದುವೆಗೆ ಯಾರನ್ನೂ ಕರೆಯದೇ ಇದ್ದುದರಿಂದ ಮದನ್ ಗೆ ಚದುರಂಗ ಮಾಮ, ಸಿರ್ಸಿ, ದೇಸಾಯಿಯವರ ಪರಿಚಯವಾಗಿದ್ದು ಆಗಲೇ.
ಶಾಂತಿನಾಥ ದೇಸಾಯಿಯವರು ಕುವೆಂಪು ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯ ತೋರಿಸುವ ವ್ಯವಸ್ಥೆ ಮಾಡುವ ಸಲುವಾಗಿ ಬಂದಿದ್ದರೆಂಬುದು ಅವರ ಮಾತಿನ ಮೂಲಕ ನಮಗೆ ಅನಂತರ ತಿಳಿಯಿತು.

ಒಮ್ಮೊಮ್ಮೆ ಸುಸ್ಮಳನ್ನು ಕರೆಯಲು ನಾನು ಭಾನುವಾರ ಸಂಜೆ ಹೋದಾಗ ಬರಲು ನಿರಾಕರಿಸುತ್ತಿದ್ದಳು. ಆಗ ಸೋಮವಾರ ಬೆಳಗ್ಗೆ ಅಣ್ಣ, ಅಮ್ಮ ಅವರ ದೊಡ್ಡ ಕಾರಿನಲ್ಲಿ ಅವಳನ್ನು ಕರೆದುಕೊಂಡು ಬರುತ್ತಿದ್ದರು. ಅಣ್ಣನವರ ಆ ಕಾರು ಯೂನಿವರ್ಸಿಟಿಯ ಕ್ಯಾಂಪಸ್ಸಿನ ಸಣ್ಣ ರಸ್ತೆಯೊಳಗೆ ನುಗ್ಗದೇ ಇದ್ದುದರಿಂದ ಅಣ್ಣ ಮೇನ್ ರೊಡಿನಲ್ಲಿ ಕಾರು ನಿಲ್ಲಿಸಿಕೊಂಡಿರುತ್ತಿದ್ದರು. ಅಮ್ಮ ಒಂದು ಕೈಯಲ್ಲಿ ಸುಸ್ಮಿತಳ ಕೈಯನ್ನೂ ಮತ್ತೊಂದು ಕೈಯಲ್ಲಿ ಅವರ ತೋಟದಲ್ಲಿ ಬೆಳೆದ ಹಣ್ಣುಗಳ ಬುಟ್ಟಿಯನ್ನೂ ಹಿಡಿದುಕೊಂಡು ಬರುವ ದೃಶ್ಯವನ್ನು ನಾನೆಂದಿಗೂ ಮರೆಯಲಾರೆ. ಅಣ್ಣ, ಅಮ್ಮರ ನೆನಪಾದಾಗಲೆಲ್ಲ ನಾರು ಮಡಿಯುಟ್ಟು ಸಾತ್ವಿಕ ಜೀವನ ನಡೆಸುವ ತಪಸ್ವಿಗಳ ಬಗ್ಗೆ ಓದಿದ್ದು ಕಣ್ಣ ಮುಂದೆ ಬಂದು ಅವರು ಅದರ ಸಾಕಾರ ಮೂರ್ತಿಗಳಂತೆ ನನಗನಿಸುತ್ತಿದ್ದರು.


ನನ್ನ ಮಗಳು ಚಕಿತ ಡಿಸೆಂಬರ್ ೨೩.೧೯೮೯ರಂದು ಹುಟ್ಟಿದಳು. ನನ್ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಪದ್ಮಾ ಆಂಟಿಗೆ(ಪದ್ಮಾ ಶ್ರೀರಾಂ), ‘ಈ ಡಾಕ್ಟರುಗಳು ಗಡಿಬಿಡಿ ಮಾಡದಿದ್ದರೆ ಇವಳು ಅಣ್ಣನವರ ಹುಟ್ಟಿದ ದಿನದಂದೇ ಹುಟ್ಟುವ ಸಾಧ್ಯತೆ ಇತ್ತು’ ಎಂದಿದ್ದೆ. ಇದನ್ನು ಆಂಟಿ ತಾರಿಣಕ್ಕನಿಗೆ ಹೇಳಿರಬೇಕು. ತಾರಿಣಕ್ಕನ ಮೂಲಕ ವಿಷಯ ತಿಳಿದ ಅಣ್ಣ, ತಾರಿಣಕ್ಕ ನನ್ನನ್ನು ನೋಡಲು ಆಸ್ಪತ್ರೆಗೆ ಬರುವಾಗ ಅವರೊಂದಿಗೆ ಕಲ್ಲುಸಕ್ಕರೆ ಕೊಟ್ಟು ಕಳುಹಿಸಿ, ‘ಚಕಿತಾ ಕುವೆಂಪು ಅವರ ಅಧ್ಯಾತ್ಮ ಗುರು ಶ್ರೀ ಶಿವಾನಂದರು ಹುಟ್ಟಿದ ದಿನ ಹುಟ್ಟಿದ್ದಾಳೆಂದೂ ಈ ಸಂಗತಿ ಅವರಿಗೆ ಬಹಳ ಸಂತಸ ತಂದಿದೆ’ಯೆಂದೂ ಹೇಳಿ ಕಳುಹಿಸಿದ್ದರು.

ಹೀಗೇ ನಮಗೆ ವಯಸ್ಸಾದಂತೆ ನಾವು ನಮ್ಮ ಹಿರಿಯ ಚೇತನಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಆದರೆ ಎಂದೋ ಒಂದು ದಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗಿನ ಬೆಚ್ಚನೆ ನೆನಪುಗಳು ಮನಸ್ಸಿಗೆ ಹಿತವೆನಿಸುತ್ತವೆ, ಮುದ ನೀಡುತ್ತವೆ.

ಸೌಜನ್ಯ ಹಾಡು ಪಾಡು ಆಂದೋಲನ ದಿನ ಪತ್ರಿಕೆ ಮೈಸೂರು ೨೫-೧೨-೨೦೧೧

Post a comment or leave a trackback: Trackback URL.

ಟಿಪ್ಪಣಿಗಳು

  • ನರೇಂದ್ರ ನಾಯಕ್ ಮಂಗಳೂರು  On ಡಿಸೆಂಬರ್ 25, 2011 at 6:22 ಅಪರಾಹ್ನ

    ಓದಿ ಆನಂದಪಟ್ಟೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: